Tag: youth

  • ಬೈಕ್ ವೀಲಿಂಗ್ ಮಾಡುತ್ತಾ ಬಂದ ಪುಂಡರ ಚಳಿ ಬಿಡಿಸಿದ ಎಸ್‍ಪಿ

    ಬೈಕ್ ವೀಲಿಂಗ್ ಮಾಡುತ್ತಾ ಬಂದ ಪುಂಡರ ಚಳಿ ಬಿಡಿಸಿದ ಎಸ್‍ಪಿ

    ಶಿವಮೊಗ್ಗ: ನಗರದಲ್ಲಿ ಗಾಂಜಾ ಮತ್ತರಾಗಿ ಡ್ಯೂಕ್ ಬೈಕ್ ಗಳಲ್ಲಿ ವೀಲಿಂಗ್ ಮಾಡುತ್ತಾ ಬಂದ ಪುಂಡರಿಗೆ ಶಿವಮೊಗ್ಗ ಎಸ್ಪಿ ಅಭಿನವ್ ಖರೆ ರಸ್ತೆ ಮಧ್ಯದಲ್ಲೇ ಚಳಿಜ್ವರ ಬಿಡಿಸಿದ್ದಾರೆ.

    ಭದ್ರಾವತಿ ಮಾರ್ಗದಲ್ಲಿ ವೀಲಿಂಗ್ ಮಾಡುತ್ತಾ ಎರಡು ಬೈಕ್ ಗಳಲ್ಲಿ ಬಂದಿದ್ದಾರೆ. ಹೀಗೆ ಬರುವಾಗ ಈ ಪುಂಡರು ಈ ಮಾರ್ಗದಲ್ಲಿ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಿಗೆ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದರು. ಅಷ್ಟೇ ಅಲ್ಲದೇ ಮಲವಗೊಪ್ಪ ಬಳಿ ಒಂದು ಬಸ್ ಗೆ ಅಡ್ಡ ಹಾಕಿ ಪ್ರಯಾಣಿಕರ ಎದುರೇ ಚಾಲಕನನ್ನು ಥಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಹಾಗೂ ಇನ್ನಿತರ ಬಸ್ ಗಳ ಚಾಲಕರು ಹರಿಗೆ ಬಸ್ ನಿಲ್ದಾಣದ ಬಳಿ ಯುವಕರನ್ನು ಹಿಡಿದಿದ್ದಾರೆ. ಈ ವೇಳೆಯೂ ಚಾಲಕರ ಮೇಲೆ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಡ್ರೈವರ್ ಗಳು ಹಾಗೂ ಚಾಲಕರು ಯುವಕರನ್ನು ಥಳಿಸಿದ್ದಾರೆ. ಅಷ್ಟರಲ್ಲೇ ಅದೇ ಮಾರ್ಗದಲ್ಲಿ ಬಂದ ಎಸ್ಪಿ ಅಭಿನವ್ ಖರೆ, ಈ ಪುಂಡರನ್ನು ಹಿಡಿದು ಹೊಡೆದಿದ್ದಾರೆ.

    ಈ ವೇಳೆ ಯುವಕರು ತಕ್ಷಣ ಪರಾರಿ ಆಗಲು ಯತ್ನಿಸಿದ್ದು, ಒಬ್ಬ ಯುವಕನ್ನು ಎಸ್ಪಿ ಅವರೇ ಹಿಡಿದಿದ್ದಾರೆ. ಬಳಿಕ ಕೂಡಲೇ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ಪುಂಡರನ್ನು ಠಾಣೆಗೆ ಕಳುಹಿಸಿದ್ದಾರೆ. ಈ ಬಗ್ಗೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೆಲ್ಫಿ ತಗೆದುಕೊಳ್ಳಲು ಹೋಗಿ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಜೀವ ಕಳೆದುಕೊಂಡ!

    ಸೆಲ್ಫಿ ತಗೆದುಕೊಳ್ಳಲು ಹೋಗಿ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಜೀವ ಕಳೆದುಕೊಂಡ!

    ಮಡಿಕೇರಿ: ಮೊಬೈಲ್‍ನಲ್ಲಿ ಸೆಲ್ಫಿ ಮೂಲಕ ನೀರಿನ ತೀವ್ರತೆ ಫೋಟೋ ತಗೆಯಲು ಹೋಗಿ ಯುವಕನೊಬ್ಬ ಜಲಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಸೋಮವಾರಪೇಟೆ ಸಮೀಪದ ಮಲ್ಲಳ್ಳಿ ಫಾಲ್ಸ್ ನಲ್ಲಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದ ಮನೋಜ್ (24) ಮೃತ ಯುವಕ. ಶುಕ್ರವಾರ ಮನೋಜ್ ತನ್ನ 6 ಜನ ಸ್ನೇಹಿತರೊಂದಿಗೆ ಸೋಮವಾರಪೇಟೆ ಸಮೀಪದ ಶಾಂತಳ್ಳಿಗೆ ಮದುವೆ ರಿಸಪ್ಷನ್ ಗೆಂದು ಹೋಗಿ, ಮರಳುತ್ತಿರುವಾಗ ಘಟನೆ ಸಂಭವಿಸಿದೆ.

    ಮನೋಜ್ ತನ್ನ 6 ಜನ ಸ್ನೇಹಿತರೊಂದಿಗೆ ಬೈಕಿನಲ್ಲಿ ಶಾಂತವಳ್ಳಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ. ಅಲ್ಲಿಂದ ಮರಳುತ್ತಿರುವಾಗ ಮಲ್ಲಳ್ಳಿ ಫಾಲ್ಸ್ ನೋಡಿಕೊಂಡು ಬರುವುದಾಗಿ ಸ್ನೇಹಿತರು ನಿರ್ಧರಿಸಿದ್ದರು. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಜಲಪಾತ ಮನಮೋಹಕವಾಗಿ ಕಂಡಿದ್ದು, ಆ ದೃಶ್ಯವನ್ನು ಸೆಲ್ಫಿ ಮೂಲಕ ಸೆರೆ ಹಿಡಿಯಲು ಮನೋಜ್ ಮುಂದಾಗಿದ್ದನು. ಉಳಿದ ಸ್ನೇಹಿತರು ಅಲ್ಲಿಗೆ ಹೋಗದಂತೆ ಹೇಳಿದ್ದರೂ ಅದನ್ನು ಲೆಕ್ಕಿಸದೆ ಮನೋಜ್ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದನು. ಪರಿಣಾಮ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದನು. ಜಲಪಾತಕ್ಕೆ ಬಿಳ್ಳುತ್ತಿದ್ದಂತೆ ಮನೋಜ್ ದೇಹ ಕಾಣದಂತಾಗಿತ್ತು.

    ಮನೋಜ್ ಪೋಷಕರು ಘಟನಾ ಸ್ಥಳಕ್ಕೆ ಬಂದಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು, ದೇಹವನ್ನು ಹುಡುಕಲು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮಳೆ ಹಾಗೂ ನೀರಿನ ರಭಸ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಲ್ಲೇ ಇವೆ. ಅಪಾಯವಿರುವ ಜಾಗಕ್ಕೆ ತೆರಳದಂತೆ ಸೂಚನ ಫಲಕ ಹಾಕಿದ್ದರೂ ಪ್ರವಾಸಿಗರು ಅನುಸರಿಸದೆ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ.

     

  • ಐವರು ಯುವಕರ ಜೊತೆ ಮೈಸೂರು ಪ್ರವಾಸಕ್ಕೆ ತೆರಳಿದ್ದ 10ನೇ ಕ್ಲಾಸ್ ವಿದ್ಯಾರ್ಥಿನಿ ಮಿಸ್ಸಿಂಗ್!

    ಐವರು ಯುವಕರ ಜೊತೆ ಮೈಸೂರು ಪ್ರವಾಸಕ್ಕೆ ತೆರಳಿದ್ದ 10ನೇ ಕ್ಲಾಸ್ ವಿದ್ಯಾರ್ಥಿನಿ ಮಿಸ್ಸಿಂಗ್!

    ಹಾಸನ: ಪ್ರವಾಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯನ್ನ ಕರೆದುಕೊಂಡು ಹೋಗಿದ್ದ ಐವರು ಯುವಕರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

    ಅರುಣ್, ಮಹೇಶ್, ಶರತ್ ರಾಜ್ ಹಾಗೂ ರಾಜೇಶ್ ಬಂಧಿತ ಆರೋಪಿಗಳು. ಓರ್ವನ ಹೆಸರು ತಿಳಿದು ಬಂದಿಲ್ಲ. ನಾಪತ್ತೆಯಾದ ಬಾಲಕಿ ಹಾಸನ ಪದವಿ ಪೂರ್ವ ಹಾಸ್ಟೆಲ್‍ನಲ್ಲಿದ್ದು, ಎಸ್‍ಎಸ್‍ಎಲ್‍ಸಿ ಓದುತ್ತಿದ್ದಳು.

    ಜೂನ್ 19 ರಂದು ಅರುಣ್, ಮಹೇಶ್, ಶರತ್ ರಾಜ್ ಹಾಗೂ ರಾಜೇಶ್ ಎಂಬವರು ಬಾಲಕಿಯನ್ನು ಪ್ರವಾಸಕ್ಕೆಂದು ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಪ್ರವಾಸದ ವೇಳೆ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಯುವಕರು ಹೇಳಿದ್ದರು. ಆದರೆ ಇತ್ತ ಬಾಲಕಿಯ ಪೋಷಕರು ಯುವಕರೇ ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಮಹಿಳಾ ಠಾಣೆ ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ.

  • ಬೈಕ್ ವೀಲಿಂಗ್ ವಿಡಿಯೋ ಪೋಸ್ಟ್ ಮಾಡಿ ಜೈಲು ಸೇರಿದ ಯುವಕರು!

    ಬೈಕ್ ವೀಲಿಂಗ್ ವಿಡಿಯೋ ಪೋಸ್ಟ್ ಮಾಡಿ ಜೈಲು ಸೇರಿದ ಯುವಕರು!

    ವಿಜಯವಾಡ: ಆಂಧ್ರಪ್ರದೇಶ ವಿಜಯವಾಡ ಜಿಲ್ಲೆಯ ಕೃಷ್ಣಲಂಕಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡಿ ವಿಡಿಯೋವನ್ನು ಪ್ರದರ್ಶಿಸಿದ ಬಳಿಕ ಪೊಲೀಸರು ಈ ಆರು ಯುವಕರನ್ನು ಬಂಧಿಸಿದ್ದಾರೆ.

    ಎ ನಿಖಿಲ್(23), ಎಂ.ಮಹೇಶ್(19), ಎ ಶಿವ(20), ಎನ್ ರಘುರಾಮ್(22), ಶ್ರೀನಿವಾಸ್ ಪ್ರವೀಣ್(19) ಮತ್ತು ಎಸ್ ರಂಜೀತ್ ಬಂಧಿತ ಯುವಕರು. ಆರು ಮಂದಿ ಯುವಕರು ಸಹ ಹೈದರಾಬಾದ್ ಮೂಲದವರಾಗಿದ್ದಾರೆ. ಜೂನ್ 10 ರಂದು ಕೆಟಿಎಮ್ ಕಂಪೆನಿ ಆಯೋಜಿಸಿದ್ದ “ಆರೆಂಜ್ ಡೇ” ಕಾರ್ಯಕ್ರಮಕ್ಕಾಗಿ ವಿಜಯವಾಡಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಿಂದ ಹಿಂದಿರುಗುವ ವೇಳೆ ಈ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಯುವಕರು ತಮ್ಮನ್ನು ತಾವು ಅಪಾಯಕ್ಕೆ ತಳ್ಳಿಕೊಂಡಿದ್ದಲ್ಲದೇ ಇತರೆ ಜನರನ್ನು ಸಹ ಅಪಾಯಕ್ಕೆ ತಳ್ಳುತ್ತಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 336 ಮತ್ತು ಮೋಟಾರ್ ವೆಹಿಕಲ್ಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಸಿಕ್ಕಿ ಬಿದ್ದಿದ್ದು ಹೇಗೆ: ಬೈಕ್ ವೀಲಿಂಗ್ ಮಾಡಿದ್ದ ದೃಶ್ಯಗಳನ್ನು ಸೆರೆ ಹಿಡಿದಿದ್ದ ಯುವಕರ ಗುಂಪು ತಮ್ಮ ಸಾಹಸವನ್ನು ಕೆಲ ಸಾಮಾಜಿಕ ಜಾಲತಾಣ ಹಾಗೂ ವಾಟ್ಸಪ್ ಗ್ರೂಪ್ ಗಳ್ಲಿ ಹಂಚಿಕೊಂಡಿದ್ದರು.

    ಈ ವಿಡಿಯೋದಲ್ಲಿ ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸದ ಯುವಕರು ಬೈಕನ್ನು ವೇಗವಾಗಿ ಚಾಲನೆ ಮಾಡಿ ವೀಲಿಂಗ್ ಮಾಡಿದ್ದಾರೆ. ಅಲ್ಲದೇ ತ್ರಿಬಲ್ ರೈಡಿಂಗ್ ಸಹ ಮಾಡಿರುವ ಯುವಕರು ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಇತರೇ ವಾಹನ ಸವಾರರಿಗೂ ಕಿರಿ ಕಿರಿ ಉಂಟುಮಾಡಿದ್ದಾರೆ.

    ಸದ್ಯ ಆರೋಪಿಗಳ ವಿರುದ್ಧ ವಿಜಯವಾಡದ ಕೃಷ್ಣ ಲಂಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ದಕ್ಷಿಣ ವಲಯದ ಎಸಿಪಿ ಕೆ ಶ್ರೀನಿವಾಸ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

    ಆಂಧ್ರಪ್ರದೇಶದ ಟ್ರಾಫಿಕ್ ಪೊಲೀಸರು ಕೆಲ ತಿಂಗಳ ಹಿಂದೆ ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಂಡಿದ್ದು, ಹಲವರನ್ನು ವಶಕ್ಕೆ ಪಡೆದು ದೂರು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಘಟನೆಯನ್ನು ಸ್ಮರಿಸಬಹುದಾಗಿದೆ. ಅಲ್ಲದೇ ಕಳೆದ ನಾಲ್ಕು ದಿನಗಳಿಂದ ವಿಜಯವಾಡ ಪೊಲೀಸರು 1,802 ಮಂದಿ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಕೇಸು ದಾಖಲಿಸಿದ್ದಾರೆ. ಇದರಲ್ಲಿ 91 ಜನರಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಪ್ರಸ್ತುತ ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಕಠಿಣ ಕ್ರಮವನ್ನು ಕೈಗೊಂಡಿದ್ದಾರೆ.

  • ಪ್ರೀತಿಸಿ ಮದ್ವೆಯಾಗಿದ್ದಕ್ಕೆ ವರ್ಷದ ನಂತ್ರ ಯುವತಿ ಸಹೋದರರಿಂದ ಯುವಕನ ಮೇಲೆ ಹಲ್ಲೆ!

    ಪ್ರೀತಿಸಿ ಮದ್ವೆಯಾಗಿದ್ದಕ್ಕೆ ವರ್ಷದ ನಂತ್ರ ಯುವತಿ ಸಹೋದರರಿಂದ ಯುವಕನ ಮೇಲೆ ಹಲ್ಲೆ!

    ಕಲಬುರಗಿ: ಪ್ರೀತಿಸಿ ಮದುವೆ ಆಗಿದ್ದಕ್ಕೆ ಯುವತಿ ಮನೆಯವರು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದಿದೆ.

    ಮಂಜುನಾಥ ಗಾಯಕವಾಡ್ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಯುವಕ. ಮಂಜುನಾಥ್ ಜೇವರ್ಗಿ ಪಟ್ಟಣದ ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೇ ಪ್ರೀತಿಸಿ ಮದುವೆಯಾಗಿ ಇಬ್ಬರು ಬೇರೆ ಕಡೆ ವಾಸವಾಗಿದ್ದರು.

    ಮದುವೆಯಾಗಿ ಒಂದು ವರ್ಷದ ನಂತರ ಈಗ ಯುವತಿ ಸಹೋದರರು ಸೇಡು ತೀರಿಸಿಕೊಂಡಿದ್ದಾರೆ. ಮಂಜುನಾಥ್ ಅವರು ಕೆಲಸಕ್ಕೆಂದು ಜೇವರ್ಗಿಗೆ ಹೋಗಿದ್ದರು. ಈ ವೇಳೆ ಯುವತಿಯ ಸಹೋದರರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಅಂತರ್ ಧರ್ಮಿಯ ಮದುವೆ ಆಗಿದ್ದಾರೆ ಎಂಬ ಕಾರಣಕ್ಕೆ ಯುವತಿಯ ಸಹೋದರರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಸೆಲ್ಫಿ ತೆಗೆದುಕೊಳ್ಳಬೇಡಿ ಎಂದಿದ್ದಕ್ಕೆ  ಜಮೀನು ಮಾಲೀಕನ ಮೇಲೆಯೇ ಪ್ರವಾಸಿಗರಿಂದ ಹಲ್ಲೆ!

    ಸೆಲ್ಫಿ ತೆಗೆದುಕೊಳ್ಳಬೇಡಿ ಎಂದಿದ್ದಕ್ಕೆ ಜಮೀನು ಮಾಲೀಕನ ಮೇಲೆಯೇ ಪ್ರವಾಸಿಗರಿಂದ ಹಲ್ಲೆ!

    ಚಾಮರಾಜನಗರ: ಸೆಲ್ಫಿ ಹುಚ್ಚಿಗೆ ಜನ ಏನು ಬೇಕಾದರೂ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ನಡೆದಿದೆ.

    ಪ್ರಯಾಣದ ವೇಳೆ ರಸ್ತೆ ಬದಿ ಬೆಳೆದಿರುವ ಬೆಳೆಗಳ ನಡುವೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಆದರೆ ಜಮೀನಿನಲ್ಲಿ ಬೆಳೆ ಹಾಳಾಗುತ್ತದೆ ಇಲ್ಲಿ ಸೆಲ್ಫಿ ತೆಗೆಯಬೇಡಿ ಎಂದಿದ್ದಕ್ಕೆ ಯುವಕರ ಗುಂಪೊಂದು ಜಮೀನು ಮಾಲೀಕನ ಮೇಲೆಯೇ ಹಲ್ಲೆ ನಡೆಸಿದೆ.

    ಬಸವಣ್ಣ ಹಲ್ಲೆಗೊಳಗಾದ ಜಮೀನಿನ ಮಾಲೀಕ. ಇವರ ಜಮೀನು ರಾಷ್ಟ್ರೀಯ ಹೆದ್ದಾರಿ 212 ಪಕ್ಕ ಇದೆ. ಇಂದು ಕೇರಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಯುವಕರ ಗುಂಪೊಂದು ಸೂರ್ಯಕಾಂತಿ ಬೆಳೆಯ ನಡುವೆ ಸೆಲ್ಫಿ ತೆಗೆದುಕೊಳ್ಳಲು ಜಮೀನಿಗೆ ನುಗ್ಗಿದ್ದಾರೆ. ಈ ವೇಳೆ ಸೂರ್ಯಕಾಂತಿ ಬೆಳೆಯನ್ನು ತುಳಿದು ಹಾಳು ಮಾಡಿದ್ದಾರೆ.

    ಇದನ್ನು ನೋಡಿದ ರೈತ ಬಸವಣ್ಣ ಬೆಳೆ ಹಾಳಾಗುತ್ತದೆ ಇಲ್ಲಿ ಫೋಟೋ ತೆಗೆದುಕೊಳ್ಳಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಯುವಕರು ಬಸವಣ್ಣ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕೂಡಲೇ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಬಂದು ಹಲ್ಲೆ ಮಾಡಿದ ಯುವಕರನ್ನು ಹಿಡಿದು ಥಳಿಸಿದ್ದಾರೆ.

    ಈ ವೇಳೆ ಮೂವರು ಯುವಕರು ಸಿಕ್ಕಿಹಾಕಿಕೊಂಡಿದ್ದು, ಉಳಿದ 7 ಮಂದಿ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಅಕ್ರಮವಾಗಿ ಜಮೀನಿಗೆ ನುಗ್ಗಿ ಬೆಳೆ ಹಾಳುಮಾಡಿದ್ದಲ್ಲದೆ ವಿರೋಧ ವ್ಯಕ್ತಪಡಿಸಿದ ಮಾಲೀಕನ ಮೇಲೆಯೇ ಹಲ್ಲೆ ನಡೆಸಿದ ಕಾರಣ ಮೂವರು ಯುವಕರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

  • ರೊಟ್ಟಿ ಬಿಸಾಕಿದ್ದಕ್ಕೆ ಜಗಳ- ಚಲಿಸುತ್ತಿದ್ದ ರೈಲಿನಿಂದ್ಲೇ ದಂಪತಿಯನ್ನು ತಳ್ಳಿದ ಯುವಕ!

    ರೊಟ್ಟಿ ಬಿಸಾಕಿದ್ದಕ್ಕೆ ಜಗಳ- ಚಲಿಸುತ್ತಿದ್ದ ರೈಲಿನಿಂದ್ಲೇ ದಂಪತಿಯನ್ನು ತಳ್ಳಿದ ಯುವಕ!

    ಜೈಪುರ: ಚಲಿಸುತ್ತಿದ್ದ ರೈಲಿನಿಂದಲೇ ಯುವಕನೊಬ್ಬ ದಂಪತಿಯನ್ನು ತಳ್ಳಿ ಕೊಲೆ ಮಾಡಿರುವ ಅಘಾತಕಾರಿ ಘಟನೆಯೊಂದು ರಾಜಸ್ಥಾನದ ಜೈಪುರದ ಭರತ್ ಪುರ ಬಳಿ ನಡೆದಿದೆ.

    ಜಗ್ಗು ಮತ್ತು ಶಕುಂತಲಾ ದಂಪತಿಯನ್ನು ಗೌರವ್ ಎಂಬಾತ ಚಲಿಸುತ್ತಿದ್ದ ರೈಲಿನಿಂದಲೇ ತಳ್ಳಿ ಹತ್ಯೆ ಮಾಡಿದ್ದಾನೆ. ಈ ಘಟನೆ ಭಾನುವಾರ ನಡೆದಿದೆ.

    ಘಟನೆ ವಿವರ:
    ಅಲ್ವಾರ್ ನಿಂದ ಮಥುರಾ ಕಡೆಗೆ ಹೋಗುತ್ತಿದ್ದ ರೈಲಿನಿಂದ ಗೌರವ್ ಎಂಬಾತ ಈ ಕೊಲೆ ಮಾಡಿರುವುದಾಗಿ ಪ್ರತ್ಯಕ್ಷದರ್ಶಿ ಪ್ರಯಾಣಿಕರೊಬ್ಬರು ರೈಲ್ವೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ಆರೋಪಿ ಗೌರವ್ ಅಲಿಯಾಸ್ ಸಾತೋ ಬಘೇಲ್, ಉತ್ತರ ಪ್ರದೇಶ ಕಸ್ಗಂಜಿಯ ಲಾವಾದ್ರನಾಗಿದ್ದಾನೆ. ಈತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾನೆ. ಕೆಲಸ ಹುಡುಕಲು ಮಥುರಾದಿಂದ ಅಲ್ವಾರ್ ಕಡೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಇದೇ ರೈಲಿಗೆ ಭರತ್‍ಪುರ ನಿವಾಸಿಗಳಾದ ಜಗ್ಗು ಮತ್ತು ಶಕುಂತಲಾ ದಂಪತಿ ದೀಗ್ ಎಂಬಲ್ಲಿ ರೈಲು ಹತ್ತಿದ್ದಾರೆ. ದಂಪತಿಯಿದ್ದ ರೈಲಿನ ಬೋಗಿಯಲ್ಲಿ ಆರೋಪಿ ಹಾಗೂ ಇನ್ನೋರ್ವ ಸೇರಿ ಒಟ್ಟು ನಾಲ್ವರೇ ಇದ್ದರು.

    ದೀಗ್ ನಿಲ್ದಾಣದಲ್ಲಿ ರೈಲು ಹತ್ತಿದ ದಂಪತಿಗಳು, ಸ್ವಲ್ಪ ಸಮಯದ ನಂತರ ಊಟ ಮಾಡಲು ತಾವು ತಂದಿದ್ದ ಆಹಾರವನ್ನು ತೆರೆದಿಟ್ಟರು. ಈ ವೇಳೆ ಸಹಪ್ರಯಾಣಿಕನಾಗಿದ್ದ ಗೌರವ್ ತನಗೂ ನೀಡುವಂತೆ ಕೇಳಿದ್ದಾನೆ. ಹೀಗಾಗಿ ದಂಪತಿ ಆತನಿಗೆ ಎರಡು ರೊಟ್ಟಿಗಳನ್ನು ನೀಡಿದ್ದಾರೆ.  ಎರಡಲ್ಲಿ ಒಂದು ರೊಟ್ಟಿಯನ್ನು ತಿಂದ ಗೌರವ್ ಇನ್ನೊಂದನ್ನು ಹೊರಗಡೆ ಎಸೆದಿದ್ದಾನೆ.

    ಗೌರವ್ ನ ಈ ವರ್ತನೆ ದಂಪತಿಗೆ ಕೋಪ ತರಿಸಿತ್ತು. ಅಲ್ಲದೇ ಯಾಕೆ ಬಿಸಾಕಿದ್ದಿ, ನಾವು ವಾಪಸ್ ಬರೋವಾಗ ತಿನ್ನುತ್ತಿದ್ದೆವು ಅಲ್ವ ಅಂತ ಹೇಳಿದ್ದಾರೆ. ಈ ವೇಳೆ ದಂಪತಿ ಹಾಗೂ ಗೌರವ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತಾರಕಕ್ಕೇರಿದ್ದು, ಗೌರವ್ ಪತಿ ಜಗ್ಗುವನ್ನು ಚಲಿಸುತ್ತಿದ್ದ ರೈಲಿನಿಂದಲೇ ಹೊರದಬ್ಬಿದ್ದಾನೆ. ಘಟನೆಯನ್ನರಿತ ಪತ್ನಿ ಕಿರುಚಾಡಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಗೌರವ್, ಪತ್ನಿ ಶಕುಂತಲಾ ಅವರನ್ನು ಕೂಡ ರೈಲಿನಿಂದ ನೂಕಿದ್ದಾನೆ.

    ಈ ಎಲ್ಲಾ ಘಟನೆಗಳನ್ನು ಕಣ್ಣಾರೆ ನೋಡಿದ ಮತ್ತೋರ್ವ ಪ್ರಯಾಣಿಕ ಇವರ ಮಧ್ಯೆ ಬಂದು ಜಗಳ ಬಿಡಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಗೌರವ್ ತನ್ನ ಮೇಲೆಯೂ ಹಲ್ಲೆ ನಡೆಸಬಹುದು ಎಂದು ಭಯಭೀತನಾಗಿ, ಮುಂದಿನ ನಗರ್ ನಿಲ್ದಾಣದಲ್ಲಿ ಇಳಿದು ರೈಲ್ವೆ ಸಿಬ್ಬಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾನೆ.

    ಕೂಡಲೇ ಎಚ್ಚೆತ್ತ ರೈಲ್ವೇ ಸಿಬ್ಬಂದಿ ಆರೋಪಿ ಗೌರವ್ ನನ್ನು ಬಂಧಿಸಿದ್ದಾರೆ. ಮೊದಲು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ ಬಳಿಕ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

  • ಪ್ರೇಯಸಿಯಿಂದ ಮೋಸ – ವಿಷ ಸೇವಿಸಿ ಮನೆಯಲ್ಲೇ ನೇಣಿಗೆ ಶರಣಾದ!

    ಪ್ರೇಯಸಿಯಿಂದ ಮೋಸ – ವಿಷ ಸೇವಿಸಿ ಮನೆಯಲ್ಲೇ ನೇಣಿಗೆ ಶರಣಾದ!

    ಚಿಕ್ಕಬಳ್ಳಾಪುರ: 4 ವರ್ಷದಿಂದ ಪ್ರೀತಿಸುತ್ತಿದ್ದ ಪ್ರಿಯತಮೆ ಈಗ ಮತ್ತೊಬ್ಬ ಯುವಕನ ಜೊತೆ ಪ್ರೀತಿಗೆ ಬಿದ್ದು ತನಗೆ ಮೋಸ ಮಾಡಿದ್ದಾಳೆ ಎಂದು ಅರಿತ ಪ್ರಿಯಕರ ಸೆಲ್ಪಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.

    ರಂಜಿತ್ ಕುಮಾರ್(25) ಆತ್ಮಹತ್ಯೆ ಗೆ ಶರಣಾದ ಯುವಕ. ರಂಜಿತ್ ಕುಮಾರ್ ತಮ್ಮ ದೂರದ ಸಂಬಂಧಿ ಆಂಧ್ರದ ಹಿಂದೂಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಇತ್ತೀಚೆಗೆ ಬೇರೋಬ್ಬ ಯುವಕನ ಜೊತೆ ಪ್ರೀತಿಗೆ ಬಿದ್ದಿದ್ದು, ಆ ಯುವಕನ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಮೃತ ರಂಜಿತ್ ಕುಮಾರ್ ಗೆ ಸಿಕ್ಕಿವೆ.

    ಹೀಗಾಗಿ ಮನನೊಂದ ರಂಜಿತ್ ಕುಮಾರ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊದಲು ವಿಷ ಸೇವಿಸಿ ತದನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಗೂ ಮುನ್ನ ತನಗೆ ಮೋಸ ಮಾಡಿದ ಪ್ರಿಯತಮೆಗೆ ತಕ್ಕ ಶಿಕ್ಷೆ ಕೊಡಿಸುವಂತೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

    ಸದ್ಯ ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಿಯತಮೆ ಹಾಗೂ ಆಕೆಯ ತಂದೆ, ಅಣ್ಣನ ವಿರುದ್ಧ ಪ್ರಕರಣ ದಾಖಲಾಗಿದೆ.

  • ಬೈಕಿಗೆ ಐರಾವತ ಬಸ್ ಡಿಕ್ಕಿ- ತಲೆ ಜಜ್ಜಿಹೋಗಿದ್ದರಿಂದ ಪತ್ತೆಯಾಗಿಲ್ಲ ಯುವಕನ ಗುರುತು

    ಬೈಕಿಗೆ ಐರಾವತ ಬಸ್ ಡಿಕ್ಕಿ- ತಲೆ ಜಜ್ಜಿಹೋಗಿದ್ದರಿಂದ ಪತ್ತೆಯಾಗಿಲ್ಲ ಯುವಕನ ಗುರುತು

    ದಾವಣಗೆರೆ: ಬೈಕಿಗೆ ಹಿಂಬದಿಯಿಂದ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತ ಪಟ್ಟಿ ಘಟನೆ ದಾವಣಗೆರೆ ಸಮೀಪದ ಹೊನ್ನೂರು ಗ್ರಾಮ ಬಳಿ ಈ ಘಟನೆ ಸಂಭವಿಸಿದೆ.

    ಅಪಘಾತ ದಲ್ಲಿ ಸಾವನ್ನಪ್ಪಿದ ಯುವಕನ ತಲೆ ಸಂಪೂರ್ಣ ಜಜ್ಜಿದ್ದರಿಂದ ಗುರುತು ಪತ್ತೆಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ದಾವಣಗೆರೆ ಕಡೆ ಬರುತ್ತಿದ್ದ ಬೈಕ್ ಸವಾರನಿಗೆ ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ಐರಾವತ ಬಸ್ಸು ಡಿಕ್ಕಿ ಹೊಡೆದಿದೆ.

    ಡಿಕ್ಕಿ ಹೊಡೆದ ಪರಿಣಾಮ ಯುವಕನ ತಲೆ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು, ಇನ್ನು ಗುರುತು ಪತ್ತೆಯಾಗಿಲ್ಲ. ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

  • ಕೊಟ್ಟ ಭರವಸೆ ನೆನಪಿಸಲು ಮೋದಿ ಭೇಟಿಗಾಗಿ 1,350 ಕಿ.ಮೀ ನಡೆದ ಯುವಕ!

    ಕೊಟ್ಟ ಭರವಸೆ ನೆನಪಿಸಲು ಮೋದಿ ಭೇಟಿಗಾಗಿ 1,350 ಕಿ.ಮೀ ನಡೆದ ಯುವಕ!

    ಲಕ್ನೋ: ಮೋದಿ ಕೊಟ್ಟ ಮಾತನ್ನು ನೆನಪಿಸುವುದಕ್ಕೆ ಒಡಿಶಾ ಮೂಲದ ಯುವಕ ಸುಮಾರು 1,350 ಕಿ.ಮೀ ಪಾದಯಾತ್ರೆ ಕ್ರಮಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಆಗ್ರಾದಲ್ಲಿ ನಡೆದಿದೆ.

    ಒಡಿಶಾ ರಾಜ್ಯದ ರೂರ್ಕೆಲಾ ಜಿಲ್ಲೆಯ ಗ್ರಾಮದ 30 ವರ್ಷದ ಮುಕ್ತಿಕಾಂತ್ ಬಿಸ್ವಾಲ್ ಅಸ್ವಸ್ಥಗೊಂಡ ಯುವಕ. 2015ರಲ್ಲಿ ಪ್ರಧಾನಿ ಮೋದಿಯವರು ರೂರ್ಕೆಲಾ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಇಸ್ಫಾತ್ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವ ಹಾಗೂ ಬ್ರಹ್ಮಣಿ ಸೇತುವೆಯನ್ನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈ ಭರವಸೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕೊಟ್ಟ ಮಾತನ್ನು ನೆನಪಿಸಲು ಪ್ರಧಾನಿಯವರನ್ನು ಭೇಟಿ ಮಾಡುವ ನಿರ್ಧಾರ ತೆಗೆದುಕೊಂಡು ಪಾದಯಾತ್ರೆ ಆರಂಭಿಸಿದ್ದಾರೆ.

    ಪಾದಯಾತ್ರೆ ವೇಳೆ ಸುಮಾರು 1,350 ಕಿ.ಮೀಗಳನ್ನು ಕ್ರಮಿಸಿ, ಆಗ್ರಾ ಮಾರ್ಗವಾಗಿ ಹೋಗುವಾಗ ಬಿಸಿಲಿನ ಝಳಕ್ಕೆ ತೀವ್ರ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಈತನನ್ನು ಆಗ್ರಾದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಕ್ತಿಕಾಂತ್ ಬಿಸ್ವಾಲ್, ಮೋದಿಯವರು ಒಡಿಶಾಗೆ ಭೇಟಿ ನೀಡಿದ್ದಾಗ ರೂರ್ಕೆಲಾ ಆಸ್ಪತ್ರೆ ಅಭಿವೃದ್ಧಿ ಹಾಗೂ ಬ್ರಹ್ಮಣಿ ಸೇತುವೆ ಪೂರ್ಣಗೊಳಿಸುವ ಮಾತನ್ನು ನೀಡಿದ್ದರು. ಇಲ್ಲಿಯವರೆಗೂ ಮೋದಿಯವರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಹೀಗಾಗಿ ಅವರು ಕೊಟ್ಟ ಮಾತನ್ನು ನೆನಪಿಸುವುದಕ್ಕಾಗಿ ನಾನು ಪಾದಯಾತ್ರೆ ಕೈಗೊಂಡಿದ್ದೇನೆ ಎಂದು ತಿಳಿಸಿದರು.

    ನಮ್ಮ ಗ್ರಾಮದಲ್ಲಿ ಜನರು ವೈದ್ಯಕೀಯ ಸೇವೆಗಳಿಂದ ವಂಚಿತರಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಅನೇಕ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಜನ ನರಳುತ್ತಿರುವ ವಿಚಾರ ನನಗೆ ಸಾವಿರಾರು ಕಿ.ಮೀ. ಕ್ರಮಿಸಲು ಪ್ರೇರೆಪಿಸಿದೆ. ನಮ್ಮ ರಾಷ್ಟ್ರ ಧ್ವಜವು ನನಗೆ ಸ್ಫೂರ್ತಿ ನೀಡಿದ್ದು, ನನ್ನ ಪಾದಯಾತ್ರೆಯಲ್ಲಿ ಧ್ವಜವನ್ನು ಹಿಡಿದೇ ಕ್ರಮಿಸಿದ್ದೇನೆ ಎಂದು ಈ ವೇಳೆ ತಿಳಿಸಿದ್ದಾರೆ.

    ಶೀಘ್ರವೇ ಗುಣಮುಖನಾಗಿ ದೆಹಲಿಗೆ ಪ್ರಯಾಣ ಬೆಳೆಸುತ್ತೇನೆ. ಮೋದಿಯವರನ್ನು ಭೇಟಿ ಮಾಡಿ ಆಸ್ಪತ್ರೆಯ ಅಭಿವೃದ್ಧಿ ಹಾಗೂ ಬ್ರಹ್ಮಣಿ ಸೇತುವೆಯನ್ನು ಪೂರ್ಣಗೊಳಿಸುವಂತೆ ಮನವಿ ಸಲ್ಲಿಸುತ್ತೇನೆ ಎಂದು ಮುಕ್ತಿಕಾಂತ್ ಬಿಸ್ವಾಲ್ ಹೇಳಿದ್ದಾರೆ.