ನವದೆಹಲಿ: ಕರ್ತವ್ಯದ ವೇಳೆ ರಕ್ಷಣಾ ಪಡೆಗಳ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆ ಕುರಿತು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಸೋಮವಾರ ಸಮ್ಮತಿ ಸೂಚಿಸಿದೆ.
ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ವಿರುದ್ಧ ನಡೆಯುತ್ತಿರುವ ಕಲ್ಲು ತೂರಾಟ ಹಾಗೂ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗುವ ಗುಂಪುಗಳಿಂದ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ವಿವರಿಸಿ ಇಬ್ಬರು ಯುವತಿಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಪ್ರಸ್ತಾಪಿಸಿ ಅರ್ಜಿ ಸಲ್ಲಿಸಿದ್ದಾರೆ.

19 ವರ್ಷದ ಪ್ರೀತಿ ಕೇದಾರ್ ಗೋಖಲೆ ಹಾಗೂ 20 ವರ್ಷದ ಕಾಜಲ್ ಮಿಶ್ರಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಭದ್ರತಾ ಪಡೆಗಳ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಹತ್ತಿಕ್ಕಲು ಸರಿಯಾದ ನೀತಿ ರೂಪಿಸಿ ಎಂದು ಅರ್ಜಿಯಲ್ಲಿ ಮನವಿ ಸಲ್ಲಿಸಿದ್ದಾರೆ.
ಕರ್ತವ್ಯದಲ್ಲಿದ್ದಾಗ ಕಲ್ಲುತೂರಾಟ ನಡೆದಾಗ ಭದ್ರತಾ ಪಡೆಗಳು ತಮ್ಮ ಆತ್ಮ ರಕ್ಷಣೆಗಾಗಿ ಬಲ ಪ್ರಯೋಗ ಮಾಡುತ್ತಾರೆ. ಆದರೆ ಯೋಧರ ವಿರುದ್ಧವೇ ಕೇಸ್ ದಾಖಲಾಗುತ್ತದೆ. ಆದರೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದರ ಜೊತೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಮೊದಲ ಬಾರಿಗೆ ಕಲ್ಲು ತುರಾಟ ನಡೆಸಿದವರ ವಿರುದ್ಧ ದಾಖಲಾದ 9,760 ಎಫ್‍ಐಆರ್ ರದ್ದುಗೊಳಿಸಲಾಗುವುದು ಎಂದು ವಿಧಾನಸಭೆಯಲ್ಲಿ ಘೋಷಿಸುತ್ತಿದ್ದಾರೆ. ನಿಜವಾಗಿಯೂ ಇದು ಶಾಕಿಂಗ್ ಅಂಶ ಎಂದು ಅರ್ಜಿಯಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರ ಪೀಠ ಅರ್ಜಿ ವಿಚಾರಣೆಗೆ ಸಮ್ಮತಿ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆ, ಜಮ್ಮು ಕಾಶ್ಮೀರ ಸರ್ಕಾರ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಯುವತಿಯರು ಭಾರತ ಸೇನಾಧಿಕಾರಿಗಳ ಪುತ್ರಿಯಾರಾಗಿದ್ದು, ಅವರ ಪೈಕಿ ಒಬ್ಬರು ನಿವೃತ್ತರಾಗಿದ್ದರೆ ಮತ್ತೊಬ್ಬರು ಸೇವೆಯಲ್ಲಿದ್ದಾರೆ. ಭದ್ರತಾ ಪಡೆಯ ಯೋಧರ ಮೇಲೆ ನಡೆಯುತ್ತಿರುವ ದಾಳಿಗಳು ತಮಗೆ ಅಘಾತ ತಂದಿದೆ ಎಂದು ಯುವತಿಯರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇಬ್ಬರೂ ಈ ಹಿಂದೆ 2018ರ ಫೆಬ್ರವರಿಯಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ರಾಜ್ಯದಲ್ಲಿರುವ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾಯಿಸಿತ್ತು.
https://www.youtube.com/watch?v=HBx6e6LMK9k
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv