Tag: Young Men

  • ಯುವತಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್‍ನಲ್ಲೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

    ಯುವತಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್‍ನಲ್ಲೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

    ಕೋಲಾರ: ಯುವತಿಯರನ್ನು ಚುಡಾಯಿಸಿದ್ದಕ್ಕೆ ಸಾರಿಗೆ ಬಸ್ ನಲ್ಲಿ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಗ್ರಾಮದ ಬಳಿ ನಡೆದಿದೆ.

    ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಯುವಕರ ಗುಂಪು ಬಾಬುಗೆ ಮನಬಂದಂತೆ ಥಳಿಸಿದೆ. ಯುವಕರಾದ ಅಭಿ, ನಾಗೇಂದ್ರ, ಗಂಗಾಧರ್, ನರೇಷ್ ಗುಂಪಿಂದ ಹಲ್ಲೆಯಾಗಿದೆ. ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್ – ಶೂಟಿಂಗ್‍ನಲ್ಲಿ ಮನೀಷ್‍ಗೆ ಚಿನ್ನ, ಸಿಂಗ್‍ರಾಜ್‍ಗೆ ಬೆಳ್ಳಿ

    ಬಾಬು ಹಾಗೂ ಮತ್ತೊಬ್ಬ ಯುವಕ ತಾಡಿಗೋಳ್ ಗ್ರಾಮದ ಯುವತಿಯರನ್ನು ಚುಡಾಯಿಸುತ್ತಿದ್ದರು. ಚುಡಾಯಿಸಬೇಡ ಎಂದು ಎಚ್ಚರಿಕೆ ನೀಡಿದ್ದರು, ಮತ್ತೊಮ್ಮೆ ಚುಡಾಯಿಸಿದ್ದಕ್ಕೆ ಯುವಕರು ಧರ್ಮದೇಟು ನೀಡಿದ್ದಾರೆ. ಬಾಬು ಹಿಂಬದಿಯ ಸೀಟ್ ನಲ್ಲಿದ್ದ ಓರ್ವ ಯುವತಿ ಹಾಗೂ ಯುವಕನಿಗೂ ಏಟು ಬಿದ್ದಿವೆ. ಗೌನಿಪಲ್ಲಿ ಗ್ರಾಮದಿಂದ ಶ್ರೀನಿವಾಸಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ನಲ್ಲಿ, ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಪ್ರಿಯತಮನಿಂದ ಮೋಸ – ಯುವತಿ ಆತ್ಮಹತ್ಯೆ

    ಪ್ರಿಯತಮನಿಂದ ಮೋಸ – ಯುವತಿ ಆತ್ಮಹತ್ಯೆ

    ದಾವಣಗೆರೆ: ಪ್ರೀತಿಸಿದ ಯುವಕ ಮೋಸ ಮಾಡಿದ ಎಂದು ಯುವತಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

    ಹಲವು ವರ್ಷಗಳಿಂದ ಯುವಕ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಆದರೆ ಇದೀಗ ಆತನಿಗೆ ಮದುವೆಯಾಗಿದೆ ಎಂಬ ವಿಚಾರ ತಿಳಿದು ಯುವತಿ ಆತ್ಮಹತ್ಯೆ ಸೆಲ್ಫಿ ವೀಡಿಯೋ ಮಾಡುತ್ತಾ ಕಣ್ಣೀರು ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ದಾವಣಗೆರೆ ನಗರದ ಭರತ್ ಕಾಲೋನಿಯ ನಿವಾಸಿ ಆಶಾ(26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಬ್ಯೂಟಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಶಾ, ಅದೇ ಏರಿಯಾಗೆ ಆಗಾಗಾ ಬರುತ್ತಿದ್ದ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಈರಣ್ಣ ಇಬ್ಬರು ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇದನ್ನು ಓದಿ: ಚಾಮರಾಜನಗರ ಆಮ್ಲಜನಕ ದುರಂತಕ್ಕೆ ರೋಹಿಣಿ ಸಿಂಧೂರಿ ಕಾರಣನಾ?

    ಯುವಕ ಹೇಳಿದಂತೆಲ್ಲ ಆಶಾ ಕೇಳುತ್ತಿದ್ದಳು, ಮುಂದಿನ ಜೀವನದ ಬಗ್ಗೆ ಅಪಾರವಾದ ಕನಸನ್ನು ಕಂಡಿದ್ದಳು. ಆದರೆ ಈರಣ್ಣ ಮೊದಲೇ ಬೇರೆ ಯುವತಿಯ ಜೊತೆ ಮದುವೆಯಾಗಿದ್ದ ಎನ್ನಲಾಗುತ್ತಿದೆ. ಈ ವಿಷಯ ತಿಳಿದ ಬಳಿಕ ಆಶಾ ಆಘಾತಕ್ಕೆ ಒಳಗಾಗಿದ್ದಾಳೆ.

    ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಈಗ ಬೇರೆ ಹುಡುಗಿಯನ್ನು ಮದುವೆಯಾಗಿದ್ದಾನೆ. ಮದುವೆಯಾಗಿದ್ದರು ಮದುವೆಯಾಗಿಲ್ಲ ಎಂದು ತನಗೆ ಮೋಸ ಮಾಡಿದ್ದಾನೆ. ನನಗಾದ ಮೋಸ ಬೇರೆ ಯಾರಿಗೂ ಆಗಬಾರದು, ನನಗೆ ಮೋಸ ಮಾಡಿದ್ದಾನೆ. ನನ್ನ ಸಾವಿಗೆ ಈರಣ್ಣನೇ ಕಾರಣ, ಈರಣ್ಣನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ವೀಡಿಯೋದಲ್ಲಿ ದುಃಖವನ್ನು ಹೊರ ಹಾಕಿದ್ದಾಳೆ. ಸೆಲ್ಫಿ ವೀಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ಓದಿ: ಶಿಕಾರಿಗೆ ತೆರಳಿದ್ದ ಗೆಳೆಯರ ನಡುವೆ ಗಲಾಟೆ- ಕಾಲಿಗೆ ಗುಂಡು ಹೊಡೆದ ಸ್ನೇಹಿತ

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಎಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಸ್-ಬೈಕ್ ಮುಖಾಮುಖಿ ಡಿಕ್ಕಿ- ಚೆಲ್ಲಾಪಿಲ್ಲಿಯಾದ ದೇಹಗಳು

    ಬಸ್-ಬೈಕ್ ಮುಖಾಮುಖಿ ಡಿಕ್ಕಿ- ಚೆಲ್ಲಾಪಿಲ್ಲಿಯಾದ ದೇಹಗಳು

    ಕೊಪ್ಪಳ: ಸರ್ಕಾರಿ ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಬಳಿ ನಡೆದಿದೆ.

    ಗಂಗಾವತಿ ತಾಲೂಕಿನ ಸತೀಶ್ (28) ಹಾಗೂ ಜಾಫರ್ (30) ಮೃತಪಟ್ಟಿದ್ದಾರೆ. ಇಬ್ಬರೂ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದರು. ಅದೃಷ್ಟವಶಾತ್ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ಸತೀಶ್ ಹಾಗೂ ಜಾಫರ್ ಇಂದು ಗಂಗಾವತಿಯಿಂದ ಕಾರಟಗಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಾರಟಗಿಯಿಂದ ಗಂಗಾವತಿ ಕಡೆಗೆ ಹೋಗುತ್ತಿದ್ದ ಬಸ್‍ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಇಬ್ಬರು ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಾಂಜಾ ವ್ಯಸನಿಗಳು

    ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಾಂಜಾ ವ್ಯಸನಿಗಳು

    – ಮಂಗಳೂರಿನಲ್ಲಿ ನಿಲ್ಲದ ಗಾಂಜಾ ಜಾಲ

    ಮಂಗಳೂರು: ಗಾಂಜಾ ವ್ಯಸನಿಗಳು ರೆಡ್‍ ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಪಣಂಬೂರು ಸಮೀಪ ಬೈಕಂಪಾಡಿ ಬಳಿ ನಡೆದಿದೆ.

    ಸುರತ್ಕಲ್ ಜೆ.ಎಂ ರಸ್ತೆಯ ನಿವಾಸಿ ಮೊಹಮ್ಮದ್ ರಾಜಿಕ್ (32) ಹಾಗೂ ಚೇಳ್ಯಾರು ನಿವಾಸಿ ನಿಖಿಲ್(19) ಬಂಧಿತ ಆರೋಪಿಗಳು. ರಾಜ್ಯದ ಕರಾವಳಿಯ ಗಾಂಜಾ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಗಾಂಜಾ ಮಾರಾಟ, ಸೇವನೆ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕರು ಈ ಚಟಕ್ಕೆ ಬೀಳುತ್ತಿದ್ದಾರೆ.

    ಪೊಲೀಸರು ಅಲ್ಲೊಂದು ಇಲ್ಲೊಂದು ಪ್ರಕರಣಗಳನ್ನು ಪತ್ತೆ ಹಚ್ಚುತ್ತಾರೆ ಬಿಟ್ಟರೆ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದೀಗ ಮೊಹಮ್ಮದ್ ರಾಜಿಕ್ ಹಾಗೂ ನಿಖಿಲ್ ಬೈಕಂಪಾಡಿ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಮಂಗಳೂರು ಉತ್ತರ ಉಪವಿಭಾಗ ವಿಶೇಷ ಅಪರಾಧ ಪತ್ತೆದಳದ ಕೈಗೆ ಸಿಕ್ಕಿಬಿದ್ದಿದ್ದಾರೆ.

    ನಗರ ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ ನೇತೃತ್ವದ ಅಪರಾಧ ಪತ್ತೆದಳಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು, ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

  • ಏಕಾಂತದ ವಿಡಿಯೋ ಸೆರೆ ಹಿಡಿದು ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್ ಮೇಲ್

    ಏಕಾಂತದ ವಿಡಿಯೋ ಸೆರೆ ಹಿಡಿದು ಸಿದ್ಧಾರೂಢ ಮಠದ ಟ್ರಸ್ಟಿಗಳಿಗೆ ಬ್ಲ್ಯಾಕ್ ಮೇಲ್

    – 10 ಲಕ್ಷ ರೂ. ವಸೂಲಿ ಬಳಿಕ ಮತ್ತೆ ಬೇಡಿಕೆ

    ಹುಬ್ಬಳ್ಳಿ: ನಗರದ ಐತಿಹಾಸಿಕ ಸಿದ್ಧಾರೂಢ ಮಠದ ಟ್ರಸ್ಟಿಗಳನ್ನು ಬ್ಲ್ಯಾಕ್‍ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

    ಹುಬ್ಬಳ್ಳಿ ನಿವಾಸಿಗಳಾದ ಸಂತೋಷ್ ಪೂಜಾರಿ, ಸಂಜು, ಗಣೇಶ್ ಹಾಗೂ ಸುನೀಲ್ ಬಂಧಿತ ಆರೋಪಿಗಳು. ಸಿದ್ಧಾರೂಢ ಮಠದ ಟ್ರಸ್ಟಿ ಡಾ. ಬಸನಗೌಡ ಸಂಕನಗೌಡರ್ ಹಾಗೂ ಅಮರಗೋಳದ ವಿಜಯಲಕ್ಷ್ಮಿ ಹನಿಟ್ರ್ಯಾಪ್‍ಗೆ ಒಳಗಾದವರು. ಘಟನೆಯು ಕಳೆದ ತಿಂಗಳು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಡಾ. ಬಸನಗೌಡ ಸಂಕನಗೌಡರ್ ಅಮರಗೋಳದ ನಿವಾಸಿ ವಿಜಯಲಕ್ಷ್ಮಿ ಅವರ ಮನೆಗೆ ಸೆಪ್ಟೆಂಬರ್ 25ರಂದು ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದರು. ಈ ದೃಶ್ಯವನ್ನು ಆರೋಪಿಗಳು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ಮಾಡಿ, 10 ಲಕ್ಷ ರೂ. ಕೊಡಿ ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಹಣ ಕೊಡಿದಿದ್ದರೆ ನಿಮ್ಮ ಏಕಾಂತದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ. ಇಲ್ಲವೇ ಮಾಧ್ಯಮಗಳಿಗೆ ವಿಡಿಯೋ ನೀಡುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

    ಸಮಾಜದಲ್ಲಿ ತಮ್ಮ ಗೌರವ ಹಾಳಾಗುತ್ತದೆ ಎಂದು ಹೆದರಿದ ಟ್ರಸ್ಟಿಗಳು ಹಣ ನೀಡಲು ಒಪ್ಪಿಕೊಂಡಿದ್ದರು. ಅದರಂತೆ 9.50 ಲಕ್ಷ ರೂ.ವನ್ನು ಕೊಟ್ಟು ವಿಡಿಯೋ ನಾಶ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಆರೋಪಿಗಳು ಹೆಚ್ಚಿನ ಹಣದ ಆಸೆಗೆ ಬಿದ್ದು, ಮತ್ತೆ 10 ಸಾವಿರ ರೂ. ಪಡೆದಿದ್ದರು. ಇದರಿಂದ ಕಿರಿಕಿರಿಗೆ ಒಳಗಾದ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದರು.

    ಪ್ರಕರಣ ದಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

  • ಮುಂದುವರಿದ ಹುಚ್ಚಾ ವೆಂಕಟ್ ಹುಚ್ಚಾಟ: ನಡುರಸ್ತೆಯಲ್ಲೇ ಜನರ ಮೇಲೆ ಏಕಾಏಕಿ ಹಲ್ಲೆ-ವಿಡಿಯೋ ನೋಡಿ!

    ಮುಂದುವರಿದ ಹುಚ್ಚಾ ವೆಂಕಟ್ ಹುಚ್ಚಾಟ: ನಡುರಸ್ತೆಯಲ್ಲೇ ಜನರ ಮೇಲೆ ಏಕಾಏಕಿ ಹಲ್ಲೆ-ವಿಡಿಯೋ ನೋಡಿ!

    ಬೆಂಗಳೂರು: ನಗರದ ಉಲ್ಲಾಳದ ಅಂಗಡಿ ಬಳಿ ನಿಂತಿದ್ದ ಜನರ ಮೇಲೆ ಗುರುವಾರ ಬೆಳಗ್ಗೆ ಏಕಾಏಕಿ ಹುಚ್ಚಾ ವೆಂಕಟ್ ಹಲ್ಲೆ ನಡೆಸಿದ್ದಾನೆ.

    ಬುಧವಾರ ರಸ್ತೆಯಲ್ಲಿ ಕುಡಿದು ತೂರಾಡುವ ಮೂಲಕ ಸುದ್ದಿಯಾಗಿದ್ದ ಹುಚ್ಚಾ ವೆಂಕಟ್ ಇಂದು ಅಂಗಡಿ ಬಳಿ ನಿಂತಿದ್ದವರ ಮೇಲೆ ಹಲ್ಲೆ ನಡೆಸಿ ಮತ್ತೊಮ್ಮೆ ತನ್ನ ಹುಚ್ಚಾಟ ಮುಂದುವರಿಸಿದ್ದಾನೆ.

    ಇಂದು ಬೆಳಗ್ಗೆ 8.30ರ ಸುಮಾರಿಗೆ ಉಲ್ಲಾಳದ ಬೇಕರಿ ಬಳಿ ಬಂದು, ಟೀ ಕೊಡುವ ಯುವಕನ ಮುಖಕ್ಕೆ ಬಿಸಿ ಟೀ ಎರಚಿದ್ದು ಅಲ್ಲದೇ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಡೆಯಲು ಬಂದ ಇಬ್ಬರು ಯುವಕರ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಕುಡಿದು, ತೂರಾಡಿದ ಹುಚ್ಚಾ ವೆಂಕಟ್!

    ಕೂಡಲೇ ಸ್ಥಳಕ್ಕೆ ಆಗಮಿಸಿದ ಬ್ಯಾಡರಹಳ್ಳಿ ಪೊಲೀಸರು ಹುಚ್ಚಾ ವೆಂಕಟನನ್ನು ವಶಕ್ಕೆ ಪಡೆದುಕೊಂಡು, ಬಳಿಕ ಜ್ಞಾನ ಭಾರತಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಿದ ಬಳಿಕ ಹುಚ್ಚಾ ವೆಂಕಟ್‍ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಹಿಂದೆಯೂ ಸಹ ಸಾರ್ವಜನಿಕರ ಮೇಲೆ ಸುಖಾ ಸುಮ್ಮನೆ ಹಲ್ಲೆ ನಡೆಸಿದ್ದರ ಸಂಬಂಧ ಯಶವಂತಪುರದ ಪೊಲೀಸರು ಸಹ ಎಚ್ಚರಿಕೆಯನ್ನು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=8Ngjmqu7Zw0