Tag: young man

  • 2 ಗಂಟೆ ವಿಡಿಯೋ ಕಾಲ್ ನಲ್ಲಿ ಪ್ರೇಯಸಿ ಜೊತೆ ಮಾತಾಡಿ ತನ್ನ ತಲೆಗೆ ಶೂಟೌಟ್ ಮಾಡ್ಕೊಂಡ!

    2 ಗಂಟೆ ವಿಡಿಯೋ ಕಾಲ್ ನಲ್ಲಿ ಪ್ರೇಯಸಿ ಜೊತೆ ಮಾತಾಡಿ ತನ್ನ ತಲೆಗೆ ಶೂಟೌಟ್ ಮಾಡ್ಕೊಂಡ!

    ಪಾಟ್ನಾ: ಯುವಕನೊಬ್ಬ ತನ್ನ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ 2 ಗಂಟೆ ಮಾತನಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಆಕಾಶ್ (19) ಆತ್ಮಹತ್ಯೆಗೆ ಶರಣಾದ ಯುವಕ. ಆಕಾಶ್ ತನ್ನ ರೂಮಿನಲ್ಲಿದ್ದಾಗ ಪ್ರೇಯಸಿಯನ್ನು ವಿಡಿಯೋ ಕಾಲ್ ಮಾಡಿ ಬಳಿಕ ಅಲ್ಲೇ ಇದ್ದ ಪಿಸ್ತೂಲಿನಿಂದ ತನ್ನ ತಲೆಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ವರದಿಗಳ ಪ್ರಕಾರ ಆಕಾಶ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದನು. ಪರೀಕ್ಷೆಯಲ್ಲಿ ಫೇಲ್ ಆಗಿದ್ದನೆಂದು ಆತನ ಕುಟುಂಬದವರು ಯುವತಿಯ ಜೊತೆ ಇರುವ ಪ್ರೀತಿಯನ್ನು ನಿಲ್ಲಿಸು ಎಂದು ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಆಕಾಶ್ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನಂತರ ರೂಮಿಗೆ ಹೋಗಿದ್ದಾನೆ. ಬಳಿಕ ಗುಂಡುಗಳನ್ನು ಲೋಡ್ ಮಾಡಿದ್ದಾನೆ. ಈ ದೃಶ್ಯವನ್ನು ನೋಡಿ ಪ್ರೇಯಸಿ ಗುಂಡುಗಳನ್ನು ಹೊರತೆಗೆ ಶೂಟ್ ಮಾಡಿಕೊಳ್ಳಬೇಡ ಎಂದು ಹೇಳಿದ್ದಾಳೆ. ಈಕೆಯ ಮಾತು ಕೇಳಿ ಬುಲೆಟ್ ತೆಗೆದು ಕಾಲ್ ಕಟ್ ಮಾಡಿದ್ದಾನೆ. ಇದಾದ ನಂತರ ಪಿಸ್ತೂಲ್ ಗೆ ಬುಲೆಟ್ ಲೋಡ್ ಮಾಡಿ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪಿಸ್ತೂಲ್ ಶೂಟ್ ಶಬ್ಧ ಕೇಳುತ್ತಿದ್ದಂತೆ ಆಕಾಶ್ ಕುಟುಂಬದವರು ರೂಮಿಗೆ ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಮೊಬೈಲ್, ಪಿಸ್ತೂಲ್ ಹಾಗೂ ಬುಲೆಟ್ಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವರದಿಗಳ ಪ್ರಕಾರ ಆಕಾಶ್ ತಂದೆ ಸಂಜಯ್ ಸಿಂಗ್ ಪ್ರಾಪರ್ಟಿ ಡೀಲರ್ ಆಗಿದ್ದು, ಆಕಾಶ್‍ ನನ್ನು ಬೇರೆ ಹುಡುಗಿಯ ಜೊತೆ ಮದುವೆ ಮಾಡಲು ಮುಂದಾಗಿದ್ದರು. ಆದರೆ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣ ಆಕಾಶ್‍ಗೆ ಈ ಮದುವೆ ಇಷ್ಟವಿರಲಿಲ್ಲ. ತನ್ನ ಪ್ರೇಯಸಿಯನ್ನು ಮದುವೆಯಾಗಲು ಆತ ಬಯಸುತ್ತಿದ್ದ.

    ಆಕಾಶ್ ಯುವತಿಯನ್ನು ಪ್ರೀತಿಸುತ್ತಿರುವುದನ್ನು ಕೆಲವು ದಿನಗಳ ಹಿಂದೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದ. ಅಷ್ಟೇ ಅಲ್ಲದೇ ನಾನು ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದನು. ಆದರೆ ಆ ಹುಡುಗಿಯ ಕುಟುಂಬದವರು ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಲು ನಿರ್ಧರಿಸಿದ್ದರು. ಇದ್ದರಿಂದ ಆಕಾಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ದನು ಎಂದು ಹೇಳಲಾಗಿದೆ.

    ಆಕಾಶ್ ಆತ್ಮಹತ್ಯೆಗೆ ಶರಣಾಗುವಾಗ ಯುವತಿ ವಿಡಿಯೋ ಕಾಲ್‍ನಲ್ಲಿಯೇ ಇದ್ದಳು. ಗುಂಡೇಟಿನ ಸದ್ದು ಕೇಳಿದ ನಂತರ ಆಕಾಶ್ ಗೆ ಮುಂಜಾನೆ 3.00 ಗಂಟೆವರೆಗೂ ಕರೆ ಮಾಡುತ್ತಿದ್ದಳು. ಆಕಾಶ್ ಫೋನಿನಲ್ಲಿ 80ಕ್ಕೂ ಹೆಚ್ಚು ಮಿಸ್ ಕಾಲ್ ಬಂದಿತ್ತು. ಆಕಾಶ್ ಫೋನ್ ರಿಸೀವ್ ಮಾಡದೇ ಇದ್ದಾಗ ಸ್ನೇಹಿತರಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಳು.

    ಯುವತಿಯ ಜೊತೆಗೆ ಇರುವ ಸಂಬಂಧವನ್ನು ತಿಳಿದು ಸಂಬಂಧಿಕರು ಆಕಾಶ್ ನನ್ನು ಬೈಯುತ್ತಿದ್ದರು. ಇದರಿಂದಾಗಿ ಆತ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎಂದು ವರದಿಯಾಗಿದೆ.

  • ಅರ್ಧ ಕೋಟಿ ಕೊಟ್ಟು ತನಗಿಂತ 15 ವರ್ಷ ಕಡಿಮೆ ವಯಸ್ಸಿನ ಯುವಕನನ್ನು ಮದ್ವೆಯಾದ 38ರ ಮಹಿಳೆ

    ಅರ್ಧ ಕೋಟಿ ಕೊಟ್ಟು ತನಗಿಂತ 15 ವರ್ಷ ಕಡಿಮೆ ವಯಸ್ಸಿನ ಯುವಕನನ್ನು ಮದ್ವೆಯಾದ 38ರ ಮಹಿಳೆ

    ತೈವಾನ್: ಚೀನಾದ ಮಹಿಳೆಯೊಬ್ಬರು ತನ್ನ ವಯಸ್ಸಿಗಿಂತ 15 ವರ್ಷ ಕಡಿಮೆ ವಯಸ್ಸಿನ ಯುವಕನ ಜೊತೆ ಮದುವೆ ಆಗಲು ಬರೋಬ್ಬರಿ ಅರ್ಧ ಕೋಟಿ ರೂ. ಖರ್ಚು ಮಾಡಿದ್ದಾರೆ.

    38 ವರ್ಷದ ಮಹಿಳೆಯೊಬ್ಬರು ಬರೋಬ್ಬರು 50 ಲಕ್ಷ ರೂ. ವರದಕ್ಷಿಣೆ ನೀಡಿ 23 ವರ್ಷದ ಯುವಕನೊಬ್ಬನನ್ನು ಜನವರಿ 10 ರಂದು ಮದುವೆಯಾಗಿದ್ದಾರೆ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, 14 ವರ್ಷದ ಮಗನಿದ್ದಾನೆ. ಆದರೆ ಈಕೆಗೆ ತನಗಿಂತ ಸಣ್ಣ ವಯಸ್ಸಿನವನ ಜೊತೆಗೆ ಮದುವೆಯಾಗಬೇಕು ಎಂದು ಇಷ್ಟಪಟ್ಟಿದ್ದರು. ಆದ್ದರಿಂದ ತನಗಿಂತ 15 ವರ್ಷ ಕಡಿಮೆ ವಯಸ್ಸಿನ ಯುವಕನಿಗೆ ಮದುವೆಯ ಪ್ರಸ್ತಾಪ ಇಟ್ಟಿದ್ದಾರೆ.

    ಯುವಕ ಕೂಡ 38 ವರ್ಷದ ಆಕೆಯನ್ನು ಮದುವೆಯಾಗಲು ಒಪ್ಪಿದ್ದನು. ಆದರೆ ಮೊದಲಿಗೆ ಯುವಕನ ಪೋಷಕರು ಒಪ್ಪಿರಲಿಲ್ಲ. ಬಳಿಕ ಮಹಿಳೆ 50 ಲಕ್ಷ ರೂ. ಮೌಲ್ಯದ ಆಸ್ತಿ ಕೊಡುವುದಾಗಿ ಹೇಳಿದ್ದಾರೆ. ಆ ನಂತರ ಯುವಕನ ಪೋಷಕರು ಮದುವೆಗೆ ಒಪ್ಪಿದ್ದಾರೆ. ಇಬ್ಬರು ಪರಸ್ಪರ ಒಪ್ಪಿ ಜನವರಿ 10ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ.

    ಈ ಜೋಡಿಯ ಮದುವೆಯ ವಿಡಿಯೋವನ್ನು ಆಪಲ್ ಡೈಲ್ ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದು, ವಧು ಬಿಳಿ ಬಣ್ಣದ ಗೌನ ಧರಿಸಿದ್ದಾರೆ. ಜೊತೆಗೆ ಚಿನ್ನದ ಬಳೆಗಳು, ನೆಕ್ಲೇಸ್ ಮತ್ತು ಓಲೆಯನ್ನು ಧರಿಸಿದ್ದಾರೆ. ಇವರಿಬ್ಬರು ಕೆಂಪು ಸ್ಪೋರ್ಟ್ಸ್ ಕಾರಿನಲ್ಲಿ ಕುಳಿತು ಮೆರವಣೆಗೆ ಹೊರಟಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

  • ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಯುವಕ ಸಾವು

    ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಯುವಕ ಸಾವು

    ಹೈದರಾಬಾದ್: ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಆಟಗಾರನೊಬ್ಬ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.

    ಮೃತ ಯುವಕನನ್ನು ನಗರದ ನಿವಾಸಿ 23 ವರ್ಷದ ಲಾಯ್ಡ್ ಅಂಥೋನಿ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಸ್ಥಳೀಯ ತಂಡಗಳ ನಡುವೆ ಏರ್ಪಡಿಸಲಾಗಿದ್ದ ಕ್ರಿಕೆಟ್ ಪಂದ್ಯ ವೇಳೆ ಈ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಿದ್ದ ಅಂಥೋನಿ ಇದ್ದಕ್ಕಿದ್ದ ಹಾಗೆ ಕುಸಿದು ಬೀಳುತ್ತಾನೆ. ಈ ವೇಳೆ ಸ್ಥಳದಲ್ಲಿದ್ದ ಇತರ ಆಟಗಾರರು ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನಿಸಿದ್ರು. ಆದ್ರೆ ಅಂಥೋನಿ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾನೆ. ಹೃದಯಘಾತದಿಂದ ಆಂಥೋನಿ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಮೃತ ಯುವಕ ಅಂಥೋನಿ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಇಂಥದ್ದೇ ಘಟನೆಯೊಂದು ಮಂಗಳೂರಿನಲ್ಲಿ ನಡೆದಿತ್ತು. ನಗರದ ಜೋಡುಕಲ್ಲು ಕಯ್ಯೂರು ನಿವಾಸಿ ಪದ್ಮನಾಭ ಎಂಬ ಯುವಕ ಮೀಯಪದವು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದನು.

    https://www.youtube.com/watch?v=1PNStK6WaYU

  • ಬೈಕಿಗೆ ಡಿಕ್ಕಿ ಹೊಡೆದ ವಾಹನ: 1 ಗಂಟೆ ಕಾಲ ಸಹಾಯಕ್ಕಾಗಿ ನರಳಾಡಿದ ಯುವಕ

    ಬೈಕಿಗೆ ಡಿಕ್ಕಿ ಹೊಡೆದ ವಾಹನ: 1 ಗಂಟೆ ಕಾಲ ಸಹಾಯಕ್ಕಾಗಿ ನರಳಾಡಿದ ಯುವಕ

    ಬಳ್ಳಾರಿ: ಬೈಕ್ ಸವಾರನಿಗೆ ಹಿಂದಿಯಿಂದ ವಾಹನವೊಂದು ಡಿಕ್ಕಿಯಾದ ಪರಿಣಾಮ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಒಂದು ಗಂಟೆ ಕಾಲ ನಡು ರಸ್ತೆಯಲ್ಲೇ ಸಹಾಯಕ್ಕಾಗಿ ನರಳಾಡಿದ ದಾರುಣ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಿಮ್ಮಾಪುರ ಬಳಿಯ ತೋರಣಗಲ್ ಮೈಲಾರ ರಸ್ತೆಯಲ್ಲಿ ನಡೆದಿದೆ.

    ಮೂಲತಃ ಹಡಗಲಿ ತಾಲೂಕು ಹಗರನೂರು ಗ್ರಾಮದ ನಿವಾಸಿ ಟಿ.ಎಂ.ನಾಗರಾಜ್(28) ಅಪಘಾತದಲ್ಲಿ ಗಾಯಗೊಂಡ ಯುವಕ. ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

    ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ನಾಗರಾಜ್ ಸ್ಥಳೀಯರನ್ನು ಸಹಾಯಕ್ಕಾಗಿ ಬೇಡಿಕೊಂಡಿದ್ದಾರೆ. ಯಾರು ನಾಗರಾಜ್ ಸಹಾಯಕ್ಕೆ ತೆರಳದೆ ತಮ್ಮ ಮೊಬೈಲ್‍ನಲ್ಲಿ ಘಟನೆಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಬೈಕ್‍ಗೆ ಡಿಕ್ಕಿ ಹೊಡೆದ ವಾಹನ ಚಾಲಕ ಸಹ ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

    ಒಂದು ಗಂಟೆ ಕಾಲ ನಡುರಸ್ತೆಯಲ್ಲಿ ನಾಗರಾಜ್ ಸಹಾಯಕ್ಕಾಗಿ ನರಳಾಡಿದ ನಂತರ ಸ್ವತಃ ನಾಗರಾಜ್ ಮೊಬೈಲ್ ಮೂಲಕ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೋಷಕರು ಸ್ಥಳಕ್ಕೆ ಆಗಮಿಸಿ ಅಂಬುಲೈನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕತಾರ್ ಟು ಕುವೈತ್ ಇದೊಂದು ರಕ್ತದ ಕಥೆ: ಕನ್ನಡಿಗ ದಂಪತಿಯ ಮನಗೆದ್ದ ಕೇರಳಿಗ!

    ಕತಾರ್ ಟು ಕುವೈತ್ ಇದೊಂದು ರಕ್ತದ ಕಥೆ: ಕನ್ನಡಿಗ ದಂಪತಿಯ ಮನಗೆದ್ದ ಕೇರಳಿಗ!

    ಬೆಂಗಳೂರು: “ಪತ್ನಿಗೆ ಬಾಂಬೆ ಬ್ಲಡ್ ಗ್ರೂಪಿನ ರಕ್ತ ಬೇಕು ಎಂದು ಕೇಳಿದಾಗ ನನಗೆ ಏನು ಮಾಡಬೇಕು ಎನ್ನುವುದು ತಿಳಿಯಲಿಲ್ಲ. ಎಷ್ಟು ಹುಡುಕಿದರೂ ರಕ್ತ ಸಿಗದೇ ಇದ್ದಾಗ ಚಿಂತೆಯಾಗಿತ್ತು. ಆದರೆ ಕೊನೆಗೆ ಎಲ್ಲರ ಸಹಕಾರದಿಂದಾಗಿ ರಕ್ತ ಸಿಕ್ಕಿತು” ಇದು ವಿನುತಾ ಗೌಡ ಅವರ ಪತಿ ದಯಾನಂದ ಗೌಡ ಅವರ ಸಂತೋಷದ ಮಾತುಗಳು.

    ಮೂಲತಃ ಉಡುಪಿ ಮೂಲದ ಗರ್ಭಿಣಿ ವಿನುತಾ ಕುವೈತ್‍ನ ಅದಾನ್ ಆಸ್ಪತ್ರೆ ದಾಖಲಾಗಿದ್ದರು. ಬಾಂಬೆ ಗ್ರೂಪ್ ರಕ್ತ ಹೊಂದಿದ್ದ ಅವರಿಗೆ ಸಿಸೇರಿಯನ್ ಆಪರೇಷನ್ ಮಾಡಬೇಕಾಗಿತ್ತು. ಭಾರತದಲ್ಲಿ 7,600 ಜನರಲ್ಲಿ ಒಬ್ಬರಲ್ಲಿ ಮಾತ್ರ ಈ ರಕ್ತ ಇರುವ ಕಾರಣ ಬಾಂಬೆ ಗ್ರೂಪ್ ರಕ್ತಕ್ಕೆ ಹುಡುಕಾಟ ಆರಂಭವಾಯಿತು. ಆಸ್ಪತ್ರೆಗೆ ದಾಖಲಾಗಿ ದಿನ ಕಳೆದರೂ ರಕ್ತ ದಾನಿಗಳು ಸಿಗಲೇ ಇಲ್ಲ. ಕೊನೆಗೆ ಕತಾರ್‍ನಲ್ಲಿ ಒಂದು ಹೈಪರ್ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದ ನಿಧೀಶ್ ರಘುನಾಥ್ ಕುವೈತ್‍ಗೆ ಆಗಮಿಸಿ ರಕ್ತ ನೀಡಿ ಸಮಸ್ಯೆಯನ್ನು ನಿವಾರಿಸಿದರು.

    ಪತ್ನಿಯ ರಕ್ತಕ್ಕಾಗಿ ಏನೆಲ್ಲ ಕಷ್ಟ ಆಗಿತ್ತು? ಬಳಿಕ ಸಿಕ್ಕಿದ್ದು ಹೇಗೆ ಎನ್ನುವುದನ್ನು ದಯಾನಂದ ಗೌಡ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪತಿ ವಿವರಿಸಿದ್ದು ಹೀಗೆ:
    ನವೆಂಬರ್ 25 ರಂದು ಪತ್ನಿ ಕುವೈತ್ ಆಸ್ಪತ್ರೆಗೆ ದಾಖಲಾಗಿದ್ದಳು. ಮೆಡಿಕಲ್ ಚೆಕಪ್ ವೇಳೆ ನಾರ್ಮಲ್ ಡೆಲಿವರಿ ಕಷ್ಟ ಸಿಸೇರಿಯನ್ ಮಾಡಬೇಕು ಎಂದು ವೈದ್ಯರು ತಿಳಿಸಿದರು. ಈ ವೇಳೆ ಬಾಂಬೆ ಬ್ಲಡ್ ಬೇಕು ಎಂದು ಹೇಳಿದರು. ರಕ್ತದ ಗುಂಪುಗಳ ಬಗ್ಗೆ ತಿಳಿದಿದ್ದರೂ ಈ ರಕ್ತದ ಗುಂಪು ನನಗೆ ಗೊತ್ತಿರಲಿಲ್ಲ. ಬ್ಲಡ್ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ಅಲ್ಲೂ ಸಿಗಲಿಲ್ಲ. ಪರಿಚಯಸ್ಥರಿಗೆ ತಿಳಿಸಿ, ಫೇಸ್‍ಬುಕ್, ವಾಟ್ಸಪ್ ನಲ್ಲಿ ಈ ವಿಚಾರವನ್ನು ಶೇರ್ ಮಾಡಲಾಯಿತು. ಆದರೂ ಈ ರಕ್ತ ಇರುವ ವ್ಯಕ್ತಿಗಳು ಸಿಗಲೇ ಇಲ್ಲ.

    ನಾವು ಬಹಳ ಬೇಸರದಲ್ಲಿದ್ದಾಗ ಪಾಸ್ಟರ್ ಒಬ್ಬರಿಗೆ ವಿಚಾರ ತಿಳಿದು ನಾನು ರಕ್ತದಾನಿಗಳನ್ನು ಸಂಪರ್ಕಿಸುತ್ತೇನೆ. ನೀವು ಚಿಂತೆ ಮಾಡಬೇಡಿ ಎಂದು ಹೇಳಿದರು. ಬಳಿಕ ಈ ವಿಚಾರವನ್ನು ‘ಬ್ಲಡ್ ಡೋನರ್ಸ್ ಫೋರಮ್, ಕೇರಳ-ಕುವೈತ್ ಚಾಪ್ಟರ್’ ಆನ್‍ಲೈನ್ ಗ್ರೂಪಿಗೆ ತಿಳಿಸಿದರು. ಈ ಗ್ರೂಪಿನಲ್ಲಿ ಮೆಸೇಜ್ ಶೇರ್ ಆಗಿ ನಿಧೀಶ್ ಅವರಿಗೆ ಗುರುವಾರ ಈ ವಿಚಾರ ತಿಳಿಯಿತು. ಕೂಡಲೇ ನಿಧೀಶ್ ಕತಾರ್‍ನಿಂದ ಬರುವುದಾಗಿ ತಿಳಿಸಿದರು. ಈ ವೇಳೆ ಅಲ್ಲೇ ಒಂದು ವೈದ್ಯಕೀಯ ರಕ್ತ ಪರೀಕ್ಷೆ ನಡೆಯಿತು. ಈ ವೇಳೆ ಮೆಡಿಕಲ್ ಅಗತ್ಯಕ್ಕಾಗಿ ತುರ್ತು ವೀಸಾ ಬೇಕೆಂದು ಮನವಿ ಮಾಡಲಾಯಿತು. ಮರುದಿನ ಅಂದರೆ ಶುಕ್ರವಾರ ಕಚೇರಿಗೆ ರಜೆ ಪಡೆದು ತುರ್ತು ವಿಮಾನದ ಮೂಲಕ ನಿಧೀಶ್ ಕುವೈತ್‍ಗೆ ಆಗಮಿಸಿದರು.

    ನಿಧೀಶ್ ಬಂದವರೇ ಜಾಬಿರಿಯಾ ಬ್ಲಡ್ ಬ್ಯಾಂಕಿನಲ್ಲಿ ಪರೀಕ್ಷೆ ಮಾಡಿ ಬಳಿಕ ರಕ್ತದಾನ ಮಾಡಿದರು. ಇಲ್ಲಿ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿ ಒಂದು ದಿನ ಬಳಿಕ ವೈದ್ಯರು ಸಿಸೇರಿಯನ್ ಮಾಡಿ ಡೆಲಿವರಿ ಮಾಡಿದರು. ಗಂಡು ಮಗುವಿಗೆ ಜನ್ಮ ನೀಡಿದ್ದು, ಪತ್ನಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

    ನಿಧೀಶ್ ಅವರು ವಿನುತಾಗೆ ರಕ್ತ ಕೊಟ್ಟ ಬಳಿಕ ನನ್ನ ಕಣ್ಣಲ್ಲಿ ನೀರು ಬಂತು. ಕಷ್ಟ ಕಾಲದಲ್ಲಿ ಸುಮಾರು ಒಂದೂವರೆ ಗಂಟೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಇಲ್ಲಿಗೆ ಬಂದು ರಕ್ತ ಕೊಟ್ಟದ್ದಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ತಿಳಿಸಿದರು.

    ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ಕೇರಳದ ಕಣ್ಣೂರಿನ ಇರಿಟ್ಟಿ ಮೂಲದ ನಿಧೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕುವೈತ್‍ನ ಆರೋಗ್ಯ ವಿಭಾಗವೂ ಅವರನ್ನು ಸನ್ಮಾನಿಸಿದೆ. ಕೇರಳ ಕುವೈತ್ ನಲ್ಲಿರುವ ರಕ್ತದಾನಿಗಳ ಸಂಘ ಸಹ ನಿಧೀಶ್ ಅವರನ್ನು ಸನ್ಮಾನಿಸಿದೆ.

    ಮಂಗಳೂರು ದೇರಳಕಟ್ಟೆ ದಯಾನಂದ ಗೌಡ ಅವರು ಕಳೆದ 10 ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದಾರೆ.

    ರಸ್ತೆ ಅಪಘಾತವಾದಾಗ ಗಾಯಾಳುಗಳು ರಕ್ಷಿಸಿ ಎಂದು ಕಣ್ಣೀರಿಟ್ಟರೂ ಜನ ನರಳುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಅಲ್ಲಿಂದ ತೆರಳುವುದನ್ನು ನಾವು ನೋಡಿದ್ದೇನೆ. ಈ ಪ್ರಕರಣಗಳು ನಮ್ಮ ಕಣ್ಣಿನ ಮುಂದೆ ಇರುವಾರಗ ಆಸ್ಪತ್ರೆಗೆ ದಾಖಲಾಗಿದ್ದ ವಿನುತಾ ಅವರಿಗೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತುರ್ತಾಗಿ ವಿಮಾನದಲ್ಲಿ ಆಗಮಿಸಿ ರಕ್ತ ನೀಡುವ ಮೂಲಕ ವಿನೀಶ್ ಈಗ ಭಾರತೀಯರ ಮನಗೆದ್ದಿದ್ದಾರೆ.

    ಏನಿದು ‘ಬಾಂಬೆ ಗ್ರೂಪ್’ ರಕ್ತ?
    ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಟಿಜನ್, ಬಿ ಗುಂಪಿನಲ್ಲಿ ಬಿ-ಆ್ಯಂಟಿಜನ್, ಎಬಿಯಲ್ಲಿ ಎಬಿ-ಆ್ಯಂಟಿಜನ್ ಮತ್ತು ಒ ಗುಂಪಿನಲ್ಲಿ ಎಚ್ ಆ್ಯಂಟಿಜನ್ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್-ಆ್ಯಂಟಿಜನ್ ಅಂಶ ಇರುವುದಿಲ್ಲವೋ ಅಂತಹವರನ್ನು ಬಾಂಬೆ ಗುಂಪಿನ ರಕ್ತದವರು ಎಂದು ಗುರುತಿಸಲಾಗುತ್ತದೆ.

    ಈ ರಕ್ತದ ಮಾದರಿ ಮೊದಲು ಮುಂಬೈನಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮುಂಬಯಿನ ಹಳೆಯ ಹೆಸರಾದ ಬಾಂಬೆ ಹೆಸರಿನೊಂದಿಗೆ ‘ಬಾಂಬೆ ಬ್ಲಡ್’ ಎಂದು ಕರೆಯಲಾಗುತ್ತದೆ.

  • ಹುಡುಗಿಯರನ್ನ ಚುಡಾಯಿಸ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಸಖತ್ ಗೂಸಾ!

    ಹುಡುಗಿಯರನ್ನ ಚುಡಾಯಿಸ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಸಖತ್ ಗೂಸಾ!

    ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಮಾಧವಪುರ ಬಡಾವಣೆಯಲ್ಲಿ ನಡೆದಿದೆ.

    ದಿನ ಸಂಜೆ ಸಮಯದಲ್ಲಿ ಮಾಧವಪುರ ಓಣಿಯಲ್ಲಿ ಓಡಾಡುವ ಮಹಿಳೆಯರು ಹಾಗೂ ಯುವತಿಯರಿಗೆ ಈತ ಚುಡಾಯಿಸುತ್ತಿದ್ದ. ಈತನ ಬಗ್ಗೆ ಕೆಲ ಯುವತಿಯರು ತಮ್ಮ ಪೋಷಕರಿಗೆ ತಿಳಿಸಿದ್ದರು. ಶುಕ್ರವಾರ ಸಂಜೆ ಮತ್ತೆ ಯುವತಿಯರನ್ನು ಚುಡಾಯಿಸುವಾಗ ರೆಡ್ ಹ್ಯಾಂಡ್ ಆಗಿ ಸಾರ್ವಜನಿಕರು ಹಿಡಿದಿದ್ದಾರೆ.

    ಕಾಮುಕನನ್ನು ಹಿಡಿದ ಮಾಧವಪುರ ಬಡವಾಣೆಯ ನಿವಾಸಿಗಳು ಹಾಗೂ ಯುವತಿಯರ ಪೋಷಕರು, ರಸ್ತೆಯಲ್ಲಿಯೇ ಧರ್ಮದೇಟು ನೀಡಿದ್ದಾರೆ. ಆದರೆ ಹಲ್ಲೆಗೊಳಗಾದ ಯುವಕನ ಹೆಸರು ತಿಳಿದುಬಂದಿಲ್ಲ. ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಮುಂದೆ ಈ ಕಡೆ ಸುಳಿಯದಂಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ಈ ಘಟನೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯುವಕನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.

     

  • 7 ವರ್ಷ ಪ್ರೀತಿಸಿ ಬೇರೆ ಮದ್ವೆಯಾದ ಪ್ರಿಯಕರ-ಕಲ್ಯಾಣ ಮಂಟಪದ ಮುಂದೆ ವರನ ಲವರ್ ಗಲಾಟೆ

    7 ವರ್ಷ ಪ್ರೀತಿಸಿ ಬೇರೆ ಮದ್ವೆಯಾದ ಪ್ರಿಯಕರ-ಕಲ್ಯಾಣ ಮಂಟಪದ ಮುಂದೆ ವರನ ಲವರ್ ಗಲಾಟೆ

    ಹುಬ್ಬಳ್ಳಿ: ಕುಟುಂಬ ಸದಸ್ಯರು ಸಂಭ್ರಮದಿಂದ ಮದುವೆ ಮಾಡಿ ಸೊಸೆಯನ್ನ ಮನೆ ತುಂಬಿಸಿಕೊಳ್ಳಬೇಕು ಎನ್ನುವ ಹೊತ್ತಿಗೆ ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಸುನೀಲ ಬಡಿಗೇರ ಎಂಬ ಯುವಕ ತುಮಕೂರು ಮೂಲದ ಲಕ್ಷ್ಮೀ ಎಂಬ ಯುವತಿಯನ್ನ ಏಳು ವರ್ಷದಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದ. ಆದರೆ ಕಳೆದ ಆರು ತಿಂಗಳಿಂದ ಆಕೆಗೆ ಕೈಕೊಟ್ಟಿದ್ದ ಈತ ಶುಕ್ರವಾರ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಿದ್ದಾನೆ.

    ಸುನೀಲ ಮದುವೆಯಾಗುತ್ತಿರುವ ಮಾಹಿತಿ ತಿಳಿದ ಲಕ್ಷ್ಮೀ ನೇರವಾಗಿ ಮದುವೆ ಮಂಟಪಕ್ಕೆ ಆಗಮಿಸಿ ತನಗೆ ನ್ಯಾಯ ಕೊಡಿಸುವಂತೆ ಗೋಳಾಡಿದ್ದಾರೆ. ಇನ್ನು ಲಕ್ಷ್ಮೀ ಆರೋಪವನ್ನು ಕೇಳಿ ಕೋಪಗೊಂಡ ಪೋಷಕರು ಸುನೀಲನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

    ನಡೆದಿದ್ದು ಏನು?: ಲಕ್ಷ್ಮೀ ಕೆಲಸ ಮಾಡುವ ಶಾಲೆಯಲ್ಲಿ ಸುನೀಲನ ಅಕ್ಕ ಕೆಲಸ ಮಾಡುತ್ತಿದ್ದು, ಇಬ್ಬರು ಸ್ನೇಹಿತರಾಗಿದ್ದರು. ಇದರಿಂದ ಲಕ್ಷ್ಮೀಗೆ ಸುನೀಲನ ಪರಿಚಯವಾಗಿದ್ದು, ಆಗಾಗ ಅಕ್ಕನ ಮನೆಗೆ ಬಂದು ಹೋಗುತ್ತಿದ್ದರಿಂದ ಇವರಿಬ್ಬರ ನಡುವೆ ಸಲಿಗೆ ಬೆಳೆದು ಪ್ರೇಮಕ್ಕೆ ತಿರುಗಿದೆ. ಏಳು ವರ್ಷಗಳ ಕಾಲ ಇಬ್ಬರು ಪರಸ್ಪರ ಪ್ರೀತಿ ಮಾಡಿದ್ದು, ಈ ನಡುವೆ ಲಕ್ಷ್ಮೀ ಯನ್ನು ದೈಹಿಕವಾಗಿ ಬಳಸಿಕೊಂಡು ನಂತರ ತನಗೂ ಆಕೆಗೂ ಸಂಬಂಧವೇ ಇಲ್ಲ ಅಂತ ಜಾರಿಕೊಂಡು ಬೇರೆ ಯುವತಿಯೊಂದಿಗೆ ಮದುವೆ ಮಾಡಿಕೊಂಡಿದ್ದಾನೆ.

    ಸುನೀಲ ವಿವಾಹವಾಗುವ ಸುದ್ದಿ ತಿಳಿದ ಲಕ್ಷ್ಮೀ ತನಗೆ ನ್ಯಾಯ ಕೊಡಿಸಿ ಎಂದು ಮದುವೆ ಮಂಟಪದ ಬಳಿ ಗಲಾಟೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಲಿಸರು ಸುನೀಲನನ್ನ ಠಾಣೆ ಗೆ ಕರೆಸಿ ವಿಚಾರಣೆಗೆ ಒಳಪಡಿಸಿದಾಗ ಆತ, ನನಗೂ ಲಕ್ಷ್ಮೀಗೂ ಸಂಬಂಧವೇ ಇಲ್ಲ ಅಂತ ಹೇಳಿದ್ದಾನೆ.

    ಇನ್ನು ಮದುವೆ ಸಂಭ್ರಮದಲ್ಲಿದ್ದ ಸುನೀಲನ ಕಡೆಯವರು ಲಕ್ಷ್ಮೀ ಆರೋಪವನ್ನು ಕೇಳಿ ಕೋಪಗೊಂಡು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ಲಕ್ಷ್ಮೀಯನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರ ಪ್ರೇಮ ಕಹಾನಿಯ ನಡುವೆ ಮತ್ತೊಬ್ಬ ಯುವತಿ ಜೀವನ ಹಾಳಾದಂತಾಗಿದ್ದು, ಮದುವೆಯಾದ ಸಂಭ್ರಮದಲ್ಲಿ ರಾತ್ರಿ ಕಳೆಯಬೇಕಿದ್ದ ಆಕೆ ತನ್ನ ಮುಂದಿನ ಜೀವನದ ಬಗ್ಗೆ ಚಿಂತಿಸುವಂತಾಗಿದೆ.

  • ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವು – ಬಾಗಲಕೋಟೆ ಆಸ್ಪತ್ರೆಯ ಮುಂದೆ ಶವವಿಟ್ಟು ಪ್ರತಿಭಟನೆ

    ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವು – ಬಾಗಲಕೋಟೆ ಆಸ್ಪತ್ರೆಯ ಮುಂದೆ ಶವವಿಟ್ಟು ಪ್ರತಿಭಟನೆ

    ಬಾಗಲಕೋಟೆ: ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬಸ್ಥರು ಶವವನ್ನು ಆಸ್ಪತ್ರೆಯ ಮುಂದೆ ಇಟ್ಟು ಪತ್ರಿಭಟನೆ ಮಾಡುತ್ತಿರುವ ಘಟನೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ.

    ಜಮಖಂಡಿ ತಾಲೂಕಿನ ಚಿಕ್ಕ ಪಡಸಲಗಿ ಗ್ರಾಮದ ನಿವಾಸಿಯಾದ ಪರಮಾನಂದ ಐಗಳಿ (25) ಎಂಬ ಯುವಕನೇ ಮೃತಪಟ್ಟ ದುರ್ದೈವಿ. ನವೆಂಬರ್ 03 ನಡೆದ ವೈದ್ಯರ ಮುಷ್ಕರದ ದಿನ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಪರಮಾನಂದರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ.

    ಪರಮಾನಂದ ಅವರಿಗೆ ತೀವ್ರ ವಾಂತಿ ಬೇದಿಯಿಂದ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮೂರು ದಿನಗಳಿಂದ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಶನಿವಾರ ತಡರಾತ್ರಿ ಪರಮಾನಂದ ಅವರಿಗೆ ವೈದ್ಯರು ಇಂಜೆಕ್ಷನ್ ನೀಡಿದ ನಂತರ ಮೃತಪಟ್ಟಿದ್ದಾರೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಇರುವ ಕಾರಣದಿಂದಲೇ ಮೃತ ಪಟ್ಟಿದ್ದಾರೆ ಎಂದು ತಾಯಿ ಹಾಗೂ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೇ ಆಸ್ಪತ್ರೆಯ ಮುಂದೇ ಶವವಿಟ್ಟು ಪ್ರತಿಭಟನೆ ನಡೆಸಿ ನ್ಯಾಯಕೊಡಿಸಬೇಕೆಂದು ಕಣ್ಣೀರಿಟ್ಟಿದ್ದಾರೆ.

  • ಮೊಬೈಲ್ ಕಸಿದು ಪರಾರಿಯಾಗ್ತಿದ್ದ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

    ಮೊಬೈಲ್ ಕಸಿದು ಪರಾರಿಯಾಗ್ತಿದ್ದ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

    ತುಮಕೂರು: ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಯುವಕನೋರ್ವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ತಡರಾತ್ರಿ ತುಮಕೂರು ನಗರದ ಸರಸ್ವತಿಪುರಂನ ನಾಲ್ಕನೇ ಕ್ರಾಸ್ ನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಾಲಿಂಗಯ್ಯ ಎನ್ನುವರ ಕೈಯಿಂದ ಮೊಬೈಲ್ ಕಸಿದುಕೊಂಡ ಯುವನೋರ್ವ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಮಹಾಲಿಂಗಯ್ಯ ಕಳ್ಳನನ್ನು ಹಿಡಿದು ಥಳಿಸಿದ್ದಾರೆ.

    ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಯುವಕ ಮಾದಕ ಸಲ್ಯೂಶನ್ ಸೇವನೆ ಮಾಡಿದ್ದ ಎಂದು ತಿಳಿದುಬಂದಿದೆ. ಈ ಹಿಂದೆಯೂ ಅನೇಕ ಬಾರಿ ಸರಸ್ವತಿಪುರಂನಲ್ಲಿ ಈ ರೀತಿಯ ಘಟನೆ ನಡೆದಿದೆ. ಸ್ಥಳಕ್ಕೆ ಜಯನಗರ ಪೊಲೀಸರು ಆಗಮಿಸಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಯುವತಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ಯುವನಿಗೆ ಹಾಸನದಲ್ಲಿ ಬಿತ್ತು ಗೂಸಾ

    ಯುವತಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ಯುವನಿಗೆ ಹಾಸನದಲ್ಲಿ ಬಿತ್ತು ಗೂಸಾ

    ಹಾಸನ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯರ ಫೋಟೋ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನೊಬ್ಬನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಹಾಸನದಲ್ಲಿ ನಡೆದಿದೆ.

    ನಗರದ ಎನ್.ಆರ್.ವೃತ್ತದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸುರೇಶ್ ಥಳಿತಕ್ಕೊಳಗಾದ ಯುವಕ. ಬಸ್ ನಿಲ್ದಾಣದಲ್ಲಿ ಬಸ್ ಗೆ ಕಾಯುತ್ತಾ ನಿಂತಿದ್ದ ಮಹಿಳೆಯರನ್ನು ನೋಡಿದ ಯುವಕ ತನ್ನ ಮೊಬೈಲ್‍ನಿಂದ ಯುವತಿಯರ ಹಾಗೂ ಮಹಿಳೆಯರ ಫೋಟೋ ತೆಗೆಯುತ್ತಿದ್ದ.

    ಫೋಟೋಗಳನ್ಜು ತೆಗೆಯುವುದರ ಜೊತೆಗೆ ಅಕ್ಕಪಕ್ಕದಲ್ಲಿ ನಿಂತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ. ಯುವಕನ ವರ್ತನೆ ಗಮನಿಸಿದ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ನಂತರ ರೊಚ್ಚಿಗೆದ್ದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೂಡಲೇ ವ್ಯಾಪ್ತಿಯ ಠಾಣೆಗೆ ಕರೆ ಮಾಡಿ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.