Tag: Young boys

  • ಮೂತ್ರ ವಿಸರ್ಜನೆ ಜಾಗದಲ್ಲಿ ಹಿಂದೂ ದೇವರ ಪೋಸ್ಟರ್- ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟಕರಿಂದ ದಾಂಧಲೆ

    ಮೂತ್ರ ವಿಸರ್ಜನೆ ಜಾಗದಲ್ಲಿ ಹಿಂದೂ ದೇವರ ಪೋಸ್ಟರ್- ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟಕರಿಂದ ದಾಂಧಲೆ

    ಬಾಗಲಕೋಟೆ: ಮೂತ್ರ ವಿಸರ್ಜನೆ ಜಾಗದಲ್ಲಿ ಹಿಂದೂ ದೇವರ ಪೋಸ್ಟರ್ ಗಳನ್ನು ಹಚ್ಚಿದ್ದ ಸಂಬಂಧ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಅಂಗಡಿಯೊಂದರ ಸಾಮಾನುಗಳನ್ನ ಧ್ವಂಸಗೊಳಿಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದಲ್ಲಿ ನಡೆದಿದೆ.

    ಪಟ್ಟಣದ ಹಳೇ ಮಾರ್ಕೆಟ್ ಬಳಿ ಇದ್ದ ರೋಷನ್ ಹೋಟೆಲ್‍ನಲ್ಲಿ ಈ ಘಟನೆ ನಡೆದಿದ್ದು, ಬೆಳಗಿನ ಜಾವ ಕೆಲವು ಹಿಂದೂ ಪರ ಯುವಕರು ಮೂತ್ರ ವಿಸರ್ಜನೆಗೆ ತೆರಳಿದ ವೇಳೆ, ಮೂತ್ರ ವಿಸರ್ಜನೆ ಜಾಗದಲ್ಲಿ ಹೋಟೆಲ್ ಮಾಲೀಕ ಹಿಂದೂ ದೇವರ ಫೋಟೋಗಳನ್ನು ಹಚ್ಚಿದ್ದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಮಾಲೀಕ ಸಮರ್ಥಿಸಿಕೊಳ್ಳಲು ಮುಂದಾಗಿದ್ದು, ಪರಿಣಾಮ ಸ್ಥಳದಲ್ಲೇ ಮಾತಿಗೆ ಮಾತು ಬೆಳೆದು ಹೋಟೆಲ್ ನಲ್ಲಿಯೇ ಗಲಾಟೆ ನಡೆದಿದೆ. ಘಟನೆಯಿಂದಾಗಿ ಹೋಟೆಲ್ ನಲ್ಲಿದ್ದ ಕುರ್ಚಿ, ಟೇಬಲ್ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

    ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರೋ ಪೊಲೀಸರು ಹೋಟೆಲ್ ಮಾಲೀಕನನ್ನ ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನ ನಿಯೋಜಿಸಿದ್ದಾರೆ.

  • ಮದುವೆ ಸಮಾರಂಭದಲ್ಲಿ ಯುವಕರ ಗಲಾಟೆ- ಧಾರವಾಡದಲ್ಲಿ ಮೊಳಗಿದ ಗುಂಡಿನ ಸದ್ದು

    ಮದುವೆ ಸಮಾರಂಭದಲ್ಲಿ ಯುವಕರ ಗಲಾಟೆ- ಧಾರವಾಡದಲ್ಲಿ ಮೊಳಗಿದ ಗುಂಡಿನ ಸದ್ದು

    ಧಾರವಾಡ: ಕುಡಿದ ಮತ್ತಿನಲ್ಲಿ ಯುವಕರಿಬ್ಬರ ಮಧ್ಯೆ ನಡೆದ ವಾಗ್ವಾದದ ವೇಳೆ ಒರ್ವ ಗಾಳಿಯಲ್ಲಿ ಗುಂಡು ಹಾರಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ವಿದ್ಯಾಗಿರಿ ಪೊಲೀಸರು ಹನುಮಂತಗೌಡ ಹಾಗೂ ರಾಘವೇಂದ್ರ ಎಂಬವರನ್ನ ಬಂಧಿಸಿದ್ದಾರೆ. ರಾತ್ರಿ ಈ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ಸಮಾರಂಭವೊಂದು ನಡೆದಿತ್ತು.

    ಈ ಸ್ಥಳಕ್ಕೆ ಆಗಮಿಸಿದ ಹನುಮಂತಗೌಡ ಹಾಗೂ ರಾಘವೇಂದ್ರನ ನಡುವೆ ಗಲಾಟೆ ಆರಂಭವಾಗಿದೆ. ಈ ವೇಳೆ ಹನುಮಂತಗೌಡ ತನ್ನ ಬಳಿ ಇದ್ದ ರಿವಾಲ್ವರ್ ನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ವೇಳೆ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.

    ಇನ್ನು ಹನುಮಂತಗೌಡ ಕೊಲೆಯಾದ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೆಶ್ ಗೌಡ ಆಪ್ತ ಎಂದು ತಿಳಿದು ಬಂದಿದೆ. ರೆಸಾರ್ಟ್ ನಲ್ಲಿ ನಡೆದಿದ್ದ ಮದುವೆ ಸಮಾರಂಭಕ್ಕೆ ಯೊಗೇಶ್ ಗೌಡ ಕೊಲೆ ಆರೋಪಿ ಬಸವರಾಜ್ ಮುತ್ತಗಿ ಕೂಡಾ ಬಂದಿದ್ದ ಎಂದು ಮಾಹಿತಿ ಇದ್ದು, ಗುಂಡು ಹಾರಿದ್ದಕ್ಕೂ ಈ ಪ್ರಕರಣಕ್ಕೂ ಸಂಬಂಧ ಇದೆಯೇ ಎಂದು ಅನುಮಾನಗಳು ಕೂಡಾ ಆರಂಭವಾಗಿವೆ.

    ಸದ್ಯ ವಿದ್ಯಾಗಿರಿ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

  • ಸಿಎಂ ಭೇಟಿ ವೇಳೆಯೇ ಹೊನ್ನಾವರದಲ್ಲಿ ಕೋಮು ಗಲಭೆ – ಇಬ್ಬರಿಗೆ ಗಾಯ, ಟೆಂಪೋ ಜಖಂ

    ಸಿಎಂ ಭೇಟಿ ವೇಳೆಯೇ ಹೊನ್ನಾವರದಲ್ಲಿ ಕೋಮು ಗಲಭೆ – ಇಬ್ಬರಿಗೆ ಗಾಯ, ಟೆಂಪೋ ಜಖಂ

    ಕಾರವಾರ: ಸಿಎಂ ಸಿದ್ದರಾಮಯ್ಯ ಕಾರವಾರ ಭೇಟಿ ಸಂದರ್ಭದಲ್ಲೇ ಕೋಮು ಘರ್ಷಣೆ ಸಂಭವಿಸಿದೆ. ಒಂದು ಕೋಮಿನ ಯುವಕನ ದ್ವಿಚಕ್ರ ವಾಹನಕ್ಕೆ ಇನ್ನೊಂದು ಕೋಮಿನ ಆಟೋ ಚಾಲಕ ಆಟೋ ಡಿಕ್ಕಿ ಹೊಡೆಸಿದ ಸಂಬಂಧ ಎರಡು ಕೋಮುಗಳ ಯುವಕರು ಕಲ್ಲುತೂರಾಟ ನಡೆಸಿ ದೊಣ್ಣೆಗಳನ್ನ ಹಿಡಿದು ಹೊಡೆದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಸ್ ಸ್ಟಾಂಡ್ ನಲ್ಲಿ ನಡೆದಿದೆ.

    ಕಲ್ಲು ತೂರಾಟದಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಲಭೆಯಲ್ಲಿ ಗಾಯಗೊಂಡ ನಗರದ ಶರತ್ ಮಹಾಲೆ ಮತ್ತು ನರಸಿಂಹ ಮೇಸ್ತರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಟೆಂಪೋಗಳ ಗಾಜುಗಳು ಜಖಂ ಆಗಿವೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗಲಭೆ ನಿರತ ಹತ್ತಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ.

    ಸದ್ಯ ಗಲಭೆ ನಿಯಂತ್ರಣಕ್ಕೆ ಬಂದಿದ್ದು ಬಸ್ ಸ್ಟಾಂಡ್ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಾಕಾಬಂಧಿ ಹಾಕಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಮೂರು ದಿನಗಳ ಹಿಂದೆ ಚಂದಾವರದಲ್ಲಿ ಧ್ವಜ ನೆಡುವ ವಿಷಯದಲ್ಲಿ ಎರಡು ಕೋಮುಗಳ ನಡುವೆ ಗಲಭೆಯಾಗಿ 27 ಜನ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

  • ಮೆಟ್ರೋದಲ್ಲಿ ಪ್ರಯಾಣಿಸೋ ಹುಡುಗಿಯರೇ ಎಚ್ಚರ- ಕಾಲೇಜು ಹೆಣ್ಮಕ್ಕಳ ಹಿಂದೆ ಬಿದ್ದಿದೆ ಪುಂಡ ಪೋಕರಿಗಳ ಗುಂಪು!

    ಮೆಟ್ರೋದಲ್ಲಿ ಪ್ರಯಾಣಿಸೋ ಹುಡುಗಿಯರೇ ಎಚ್ಚರ- ಕಾಲೇಜು ಹೆಣ್ಮಕ್ಕಳ ಹಿಂದೆ ಬಿದ್ದಿದೆ ಪುಂಡ ಪೋಕರಿಗಳ ಗುಂಪು!

    ಬೆಂಗಳೂರು: ಯುವಕರ ಗುಂಪೊಂದು ಮೆಟ್ರೋ ರೈಲಿನಲ್ಲಿ ವಿದ್ಯಾರ್ಥಿನಿಯ ಬಳಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಎಮ್‍ಜಿ ರೋಡ್ ನಿಂದ ವಿಜಯನಗರಕ್ಕೆ ಬರುವ ವೇಳೆ ನಡೆದಿದೆ.

    ಮಂಗಳವಾರ ರಾತ್ರಿ 8.15ಕ್ಕೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಮೆಟ್ರೋ ರೈಲಿನಲ್ಲಿ ಬರುವಾಗ ಯುವಕರ ಗುಂಪೊಂದು ರೈಲಿನಲ್ಲಿ ಯುವತಿಯನ್ನು ಚುಡಾಯಿಸಿದ್ದಲ್ಲದೇ, ಕೆಟ್ಟ ಪದಗಳಿಂದ ರೇಗಿಸಿದ್ದಾರೆ. ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಕೆಳಗಿಳಿದ ವೇಳೆ ಫಾಲೋ ಕೂಡ ಮಾಡಿದ್ದಾರೆ.

    ಈ ವೇಳೆ ವಿದ್ಯಾರ್ಥಿನಿ ಅಲ್ಲೇ ಇದ್ದ ಮಹಿಳಾ ಸೆಕ್ಯೂರಿಟಿ ಗಾರ್ಡ್‍ಗೆ ವಿಚಾರ ತಿಳಿಸಿದ್ದಾರೆ. ಮಹಿಳಾ ಸಿಬ್ಬಂದಿ ಆ ಗುಂಪನ್ನು ಹಿಡಿಯಲು ಯತ್ನಿಸಿದಾಗ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದ ಹೊಯ್ಸಳ ಪೊಲೀಸರು ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದಿದ್ದಾರೆ. ಆದರೆ ವಿದ್ಯಾರ್ಥಿನಿ ದೂರು ನೀಡಲು ನಿರಾಕರಿಸಿದ್ದಾರೆ.

    ಚಲಿಸುವ ರೈಲಿನಲ್ಲಿ ಕಿರುಕುಳ ನೀಡಲಾಗಿದ್ದು, ಮೆಟ್ರೋ ಸಿಬ್ಬಂದಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಯಾವ ಜಾಗದಲ್ಲಿ ಘಟನೆ ನಡೆದಿದೆ ಅನ್ನೋದನ್ನು ತಿಳಿದು ಆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ.

    ಸಿಸಿಟಿವಿ ಮಾಹಿತಿ ಆಧಾರದ ಮೇಲೆ ಪುಂಡರ ಗುಂಪಿಗಾಗಿ ಶೋಧ ನಡೆಸಲಾಗುತ್ತಿದೆ.