Tag: Young

  • ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಯುವಕನಿಗೆ ಹೋರಿ ತಿವಿದು ಸಾವು

    ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಯುವಕನಿಗೆ ಹೋರಿ ತಿವಿದು ಸಾವು

    ಕಾರವಾರ: ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಯುವಕನಿಗೆ ಹೋರಿ ತಿವಿದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

    ಚಿಗಳ್ಳಿಯ ಪರಮೇಶ್ ಸಿದ್ದಪ್ಪ ಹರಿಜನ್ ಹೋರಿ ತಿವಿತಕ್ಕೆ ಸಾವು ಕಂಡ ಯುವಕ. ಮುಂಡಗೋಡಿನ ಚಿಗಳ್ಳಿಯ ಕಲ್ಮೇಶ್ವರ ಮಠದ ಬಳಿ ಹೋರಿ ಹಬ್ಬ ನೋಡಲು ಹೋಗಿದ್ದ ಯುವಕನಿಗೆ ಹೋರಿಯೊಂದು ಏಕಾಏಕಿ ದಾಳಿ ಮಾಡಿ ಬಲಭಾಗದ ಎದೆಗೆ ತಿವಿದಿತ್ತು.

    ತಕ್ಷಣ ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ರಕ್ತಸ್ರಾವದಿಂದ ಸಾವು ಕಂಡಿದ್ದಾನೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಬೆಂಗಳೂರು: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು ಎಂದು ಆಸಿಡ್ ದಾಳಿಗೆ ಒಳಗಾದ ಯುವತಿ ಪೊಲೀಸರಲ್ಲಿ ಮನವಿ ಮಾಡಿದ್ದಾಳೆ.

    ಯುವತಿ ಮೇಲೆ ನಾಗೇಶ್ ಆಸಿಡ್ ದಾಳಿ ಮಾಡಿದ್ದು, ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ವೇಳೆ ಪೊಲೀಸರು ಯುವತಿಯನ್ನು ವಿಚಾರಣೆ ಮಾಡಿದ್ದು, ಅವನನ್ನ ಮಾತ್ರ ಬಿಡಬೇಡಿ ಸರ್, ಅವನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾಳೆ. ಯುವತಿಯ ಸ್ಟೇಟ್ ಮೆಂಟ್ ಪಡೆದ ಪೊಲೀಸರು ನಾಗೇಶ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿ ಮೇಲೆ ಪಾಗಲ್ ಪ್ರೇಮಿಯಿಂದ ಆ್ಯಸಿಡ್ ಅಟ್ಯಾಕ್!

    ಆರೋಪಿ ನಾಗೇಶ್ ಯುವತಿ ಮೇಲೆ ಆಸಿಡ್ ಹಾಕಿದ ಬಳಿಕ ಕೋರ್ಟ್ ಬಳಿ ಹೋಗಿದ್ದಾನೆ. ವಕೀಲರನ್ನ ಭೇಟಿ ಮಾಡುವ ಉದ್ದೇಶದಿಂದ ನಾಗೇಶ್ ಸಿಸಿಟ ಸಿವಿಲ್ ಕೋರ್ಟ್ ಬಳಿ ಹೋಗಿದ್ದಾನೆ. ಬಳಿಕ ನಾಗೇಶ್ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಪ್ರಸ್ತುತ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಖಾಸಗಿ ಕಂಪನಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದೇನೆ. ಈ ದಿನ ಬೆಳಗ್ಗೆ 8:30ರ ಸುಮಾರಿಗೆ ಕಂಪನಿಯ ಮೊದಲ ಮಹಡಿಯಲ್ಲಿದ್ದ ಕಚೇರಿಗೆ ನಾನು ಹೋಗಿದ್ದೆ. ಈ ವೇಳೆ ಕಚೇರಿಗೆ ಇನ್ನೂ ಯಾರು ಬಾರದೇ ಇರುವ ಹಿನ್ನೆಲೆಯಲ್ಲಿ ಕಚೇರಿಯ ಬಾಗಿಲ ಬಳಿ ನಿಂತಿದ್ದಾಗ ನಾಗೇಶ್ ಸ್ಥಳಕ್ಕೆ ಬಂದಿದ್ದ. ನಾನು ಆತನ ಕೈಯಲ್ಲಿ ಕವರ್‍ವೊಂದರಲ್ಲಿ ಏನೋ ವಸ್ತು ಇರುವುದನ್ನು ನೋಡಿದೆ.

    ತಕ್ಷಣ ನಾನು ಕೆಳಗೆ ಹೋಗಲು ಪ್ರಯತ್ನಿಸಿದ ವೇಳೆ ಹಿಂಬಾಲಿಸಿ ಬಂದ ಆತ ಕೈಯಲ್ಲಿದ್ದ ಆಸಿಡ್ ನನ್ನ ಎದೆ, ಬೆನ್ನು, ತಲೆ ಮೇಲೆ ಹಾಕಿದ್ದಾನೆ. ನಾನು ನಮ್ಮ ತಂದೆಯನ್ನು ಸ್ಥಳಕ್ಕೆ ಕರೆಸಿಕೊಂಡು ಲಕ್ಷ್ಮಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ನಾಗೇಶ್‍ನು ಏಳು ವರ್ಷಗಳಿಂದ ನನ್ನನ್ನು ಪ್ರೀತಿಸುವಂತೆ ಹಿಂಸೆ ಕೊಡುತ್ತಿದ್ದು, ನಾನು ಒಪ್ಪಿರಲಿಲ್ಲ. ಏಪ್ರಿಲ್ 27 ರಂದು ನನ್ನನ್ನು ಹಿಂಬಾಲಿಸಿಕೊಂಡು ನಮ್ಮ ಆಫೀಸ್ ಬಳಿ ಬಂದು, ನೀನು ನನ್ನನ್ನೇ ಮದುವೆ ಆಗಬೇಕು, ಇಲ್ಲವಾದರೆ ಬೇರೆ ಯಾರು ಮದುವೆ ಆಗದಂತೆ ಮಾಡಿಬಿಡುತ್ತೇವೆ ಅಂತಾ ಬೆದರಿಕೆ ಹಾಕಿದ್ದನು. ಇದನ್ನೂ ಓದಿ: ಹಾಡಹಗಲೇ ಅತ್ಯಾಚಾರ – ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದ್ರೂ ಬಿಡದ ಪಾಪಿಗಳು

    ಈ ವಿಚಾರವನ್ನು ನಾನು ನಮ್ಮ ದೊಡ್ಡಮ್ಮನಿಗೆ ತಿಳಿಸಿದ್ದು, ನಾಗೇಶ್ ಅಣ್ಣನ ಬಳಿ ಈ ವಿಚಾರ ತಿಳಿಸಿದ್ದೆ. ಅದಕ್ಕೆ ಅವರು ಬುದ್ದಿ ಹೇಳುವುದಾಗಿ ಹೇಳಿದ್ದರು. ಈ ದಿನ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಆಸಿಡ್ ಹಾಕಿ ಗಾಯಗೊಳಿಸಿದ್ದಾನೆ. ಆತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

  • ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಕೊಳ್ಳೇಗಾಲದ ಯುವತಿ

    ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಕೊಳ್ಳೇಗಾಲದ ಯುವತಿ

    ಚಾಮರಾಜನಗರ: ಕೊಳ್ಳೇಗಾಲ ಮೂಲದ ಆಶ್ರಿತಾ ವಿ ಒಲೆಟಿ ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನಿಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಆಶ್ರಿತಾ ವಿ ಒಲೆಟಿ ಅವರು ಇಡೀ ಪ್ರಪಂಚದಲ್ಲಿರುವ ಏಳು ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಪ್ರತಿಷ್ಠಿತ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‍ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ ಕೇವಲ 275 ಪದವೀದರರು ಮಾತ್ರ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದು, ಆಶ್ರಿತಾ ಒಲೆಟಿ ಅತ್ಯಂತ ಕಠಿಣ ತರಬೇತಿಗಳನ್ನು ಒಳಗೊಂಡಿರುವ ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಭಾರತೀಯ ವಾಯುದಳದ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಕ್ವಾಡ್ರಲ್ ಲೀಡರ್ ಆಗಿದ್ದಾರೆ.

    ಫ್ಲೈಟ್ ಟೆಸ್ಟ್ ಇಂಜಿನಿಯರ್‌ಗಳು ಹೊಸ ವಿಮಾನಗಳ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲಿದ್ದು, ವಿಮಾನಗಳ ಸೇವೆಗೆ ಮುಕ್ತ ಮಾಡಲು ಇವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಪದವಿ ಪ್ರಧಾನ ಸಮಾರಂಭ ಮುಗಿದಿದ್ದು, ವಾಯುಸೇನೆ ಅಧಿಕೃತವಾಗಿ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್‌ ಆಗಿದ್ದು,ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಸೋದರನ ಕೊಲೆಯ ಸೇಡು – ಯುವತಿಯ ಸಂಚು ಯಾವ ಸಿನ್ಮಾಗೂ ಕಡಿಮೆ ಇಲ್ಲ

    ಸೋದರನ ಕೊಲೆಯ ಸೇಡು – ಯುವತಿಯ ಸಂಚು ಯಾವ ಸಿನ್ಮಾಗೂ ಕಡಿಮೆ ಇಲ್ಲ

    – ಎಲ್ಲ ಪ್ಲಾನ್ ಮಾಡಿದ್ರೂ ಜೈಲು ಸೇರಿದ್ದೇಗೆ ಲೇಡಿ ಆ್ಯಂಡ್ ಟೀಂ?
    – ಕೊಲೆಗೆ ಕೊಲೆ ಅಂತ ಹಠ ಹಿಡಿದಿದ್ದ ಲೇಡಿ

    ಮುಂಬೈ: ಸೋದರನನ್ನ ಕೊಂದಿದ್ದ ಹಂತಕನನ್ನ ಕೊಲೆ ಮಾಡಲು ಪಣ ತೊಟ್ಟಿದ್ದ ಯುವತಿ ಮತ್ತು ಆಕೆಯ ಗ್ಯಾಂಗ್ ಜೈಲು ಸೇರಿದೆ. ಸತತ ಒಂದು ವರ್ಷದಿಂದ ಕೊಲೆಗೆ ಯುವತಿಪ್ಲಾನ್ ಮಾಡಿಕೊಂಡಿದ್ದರೂ, ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಆರೋಪಿ ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಸೇರಿದಂತೆ ಆರು ಜನರನ್ನ ಬಂಧಿಸಿದ್ದಾರೆ.

    ಕೊಲೆ ಪ್ರತೀಕಾರಕ್ಕೆ ತಂಗಿಯ ಶಪಥ: ಜೂನ್ 2020ರಲ್ಲಿ ಮುಂಬೈನ ಮಲಾಡ್ ನಲ್ಲಿ ಪಾರ್ಕಿಂಗ್ ವಿಚಾರವಾಗಿ ಮೊಹ್ಮದ್ ಸಾದಿಕ್ ಮತ್ತು ಅಲ್ತಾಫ್ ಶೇಖ್ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಅಲ್ತಾಫ್ ಶೇಖ್ ನನ್ನು ಕೊಲೆಗೈದ ಸಿದ್ದಿಕಿ ಪರಾರಿಯಾಗಿ ದೆಹಲಿ ಸೇರಿಕೊಂಡಿದ್ದನು. ಸೋದರನ ಕೊಲೆಗೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ ಅಲ್ತಾಫ್ ಸೋದರಿ ಯಾಸ್ಮಿನ್ ಶೇಖ್ ಸಂಚು ರೂಪಿಸಿದ್ದಳು.

    ಸಿದ್ದಿಕಿಯ ಕೊಲೆಗಾಗಿ ಸೋದರನ ಗೆಳೆಯರಾದ ಫಾರೂಖ್ ಶೇಖ್ (20), ಓವೈಸ್ ಶೇಖ್ (18), ಮನೀಸ್ ಸೈಯದ್ (20), ಜಾಕೀರ್ ಖಾನ್ (32) ಮತ್ತು ಸತ್ಯಂ ಪಾಂಡೆ (23) ಎಲ್ಲರನ್ನ ಭೇಟಿಯಾಗಿ ಸೇಡು ತೀರಿಸಿಕೊಳ್ಳಲು ಸಹಾಯ ಕೇಳಿದ್ದಾಳೆ. ಎಲ್ಲರೂ ಸಹ ಯಾಸ್ಮೀನ್ ಪ್ಲಾನ್‍ಗೆ ಕೈ ಜೋಡಿಸಿದ್ದಾರೆ.

    ದೆಹಲಿಯಿಂದ ಬರುವಂತೆ ಮಾಡಿದ್ಳು: ಯೆಸ್, ಕೊಲೆಯ ಬಳಿಕ ದೆಹಲಿ ಸೇರಿಕೊಂಡಿದ್ದ ಸಿದ್ದಿಕಿಯನ್ನ ಮುಂಬೈಗೆ ಬರುವಂತೆ ಮಾಡಲು ನಕಲಿ ಇನ್‍ಸ್ಟಾಗ್ರಾಂ ಖಾತೆಯನ್ನ ಯಾಸ್ಮಿನ್ ತೆರೆದಿದ್ದಳು. ಇನ್‍ಸ್ಟಾಗ್ರಾಂ ಮೂಲಕ ಸಿದ್ದಿಕಿ ಜೊತೆ ಸ್ನೇಹ ಬೆಳೆಸಿದ ಯಾಸ್ಮಿನ್ ಪ್ರೀತಿಯ ನಾಟಕ ಆಡಿದ್ದಾಳೆ. ತನ್ನನ್ನು ಭೇಟಿಯಾಗಲು ಮುಂಬೈಗೆ ಬರುವಂತೆ ಸಿದ್ದಿಕಿಯನ್ನ ಆಹ್ವಾನಿಸಿದ್ದಾಳೆ. ಯಾಸ್ಮಿನ್ ಸೌಂದರ್ಯಕ್ಕೆ ಮಾರು ಹೋಗಿದ್ದ ಸಿದ್ದಿಕಿ ದೆಹಲಿಯಿಂದ ಮುಂಬೈಗೆ ಓಡೋಡಿ ಬಂದಿದ್ದನು. ಶನಿವಾರ ಸಿದ್ದಿಕಿ ಮುಂಬೈಗೆ ಬರೋದು ಖಚಿತವಾಗ್ತಿದ್ದಂತೆ ಮತ್ತೆ ತನ್ನ ಟೀಂ ಜೊತೆ ಯಾಸ್ಮಿನ್ ಕೊಲೆಯ ಪ್ಲಾನ್ ಮಾಡಿದ್ದಳು.

    ಬಾ ಅಂದವ್ಳು ಬರಲೇ ಇಲ್ಲ: ಸಿದ್ದಿಕಿಗೆ ಮುಂಬೈನಲ್ಲಿರುವ ಚೋಟಾ ಕಾಶ್ಮೀರದಲ್ಲಿ ಭೇಟಿಯಾಗೋದಾಗಿ ಯಾಸ್ಮಿನ್ ಹೇಳಿದ್ದಳು. ಆದ್ರೆ ಸಿದ್ದಿಕಿ ಬಂದಾಗ ಯಾಸ್ಮಿನ್ ಬದಲಾಗಿ ಆಕೆ ತಂಡದ ಐವರು ಅಂಬುಲೆನ್ಸ್ ಜೊತೆ ಬಂದಿದ್ದರು. ಸಿದ್ದಿಕಿಯನ್ನ ನೋಡಿದ ಐವರು ಆತನನ್ನ ಬಲವಂತವಾಗಿ ಅಂಬುಲೆನ್ಸ್ ಹತ್ತಿಸಿಕೊಂಡಿದ್ದಾರೆ. ಸಿದ್ದಿಕಿಯನ್ನ ವಸಾಯಿ ನಯಾಗಾಂವ್ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರು.

    ತಗ್ಲಾಕೊಂಡಿದ್ದು ಎಲ್ಲಿ?: ಜನನಿಬಿಡ ಪ್ರದೇಶದಲ್ಲಿಯೇ ಐವರು ಸಿದ್ದಿಕಿಯನ್ ಎತ್ತಾಕೊಂಡು ಹೋಗುವುದನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.

    ಸಿದ್ದಿಕಿಯನ್ನ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅಂಬುಲೆನ್ಸ್ ಇಂಧನ ಖಾಲಿಯಾಗಿ ನಿಂತಿದೆ. ಹಾಗಾಗಿ ಅಲ್ಲಿಯೇ ಇನ್ನೋವಾ ಕಾರ್ ಪಡೆದುಕೊಂಡಿದ್ದರು. ಅಲರ್ಟ್ ಆಗಿದ್ದ ಪೊಲೀಸರು ಪಶ್ಚಿಮ ಎಕ್ಸಪ್ರೆಸ್ ಹೆದ್ದಾರಿಯಲ್ಲಿ ವಾಹನ ಪರಿಶೀಲನೆ ನಡೆಸುವಾಗ ಎಲ್ಲರನ್ನ ಬಂಧಿಸಿದ್ದಾರೆ. ಐವರ ಬಂಧನದ ಬಳಿಕ ಪ್ರಕರಣದ ಮೂಲ ಸೂತ್ರಧಾರಿ ಯಾಸ್ಮಿಳನ್ನ ಸಹ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

  • ಹುಟ್ಟುಹಬ್ಬದ ಪಾರ್ಟಿ, ಏರಿಯಾ ವಿಚಾರವಾಗಿ ಗಲಾಟೆ- ಸಿನಿಮಾ ಶೈಲಿಯಲ್ಲಿ ಯುವಕನ ಕೊಚ್ಚಿ ಕೊಲೆ

    ಹುಟ್ಟುಹಬ್ಬದ ಪಾರ್ಟಿ, ಏರಿಯಾ ವಿಚಾರವಾಗಿ ಗಲಾಟೆ- ಸಿನಿಮಾ ಶೈಲಿಯಲ್ಲಿ ಯುವಕನ ಕೊಚ್ಚಿ ಕೊಲೆ

    – ಅರೋಪಿಗಳು ಅಂದರ್, ಬೆಚ್ಚಿ ಬಿದ್ದ ಕೆಜಿಎಫ್ ಜನ

    ಕೋಲಾರ: ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಸಿನಿಮಾದಲ್ಲಿ ಹೊಡೆಯುವ ರೀತಿಯಲ್ಲೇ ಯುವಕನ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಲಾಗಿದೆ.

    ಕೋಲಾರದ ಕೆಜಿಎಫ್ ನಗರದ ಚಾಮರಾಜಪೇಟೆ ವೃತ್ತದಲ್ಲಿ ಘಟನೆ ನಡೆದಿದ್ದು, ಹುಟ್ಟುಹಬ್ಬದ ಶೋಕಿ ಹಾಗೂ ಏರಿಯಾಗಳ ನಡುವಿನ ಗ್ಯಾಂಗ್ ವಾರ್ ಟ್ರೆಂಡ್ ಕ್ರಿಯೇಟ್ ಮಾಡಿ, ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಯುವಕ ಸ್ಟಾಲಿನ್ ಮೃತ ಪಟ್ಟಿದ್ದಾನೆ. ಯುವಕನನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಎರಡು ದಿನದ ಹಿಂದೆ ದೊರೆ ಎಂಬುವವನ ಹುಟ್ಟುಹಬ್ಬದ ಪಾರ್ಟಿ ವಿಚಾರದಲ್ಲಿ ಎಸ್.ಟಿ ಬ್ಲಾಕ್ ಹಾಗೂ ಸುಸೈಪಾಳ್ಯಂನ ಸ್ಟಾಲಿನ್ ಮತ್ತು ಆತನ ಸ್ನೇಹಿತರ ನಡುವೆ ಏರಿಯಾ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ನಡುವೆ ನಿನ್ನೆ ರಾತ್ರಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳ ಮಾಡಿಕೊಂಡಿದ್ದ ಸುಸೈ ಪಾಳ್ಯಂನ ಸ್ಟಾಲಿನ್ ಹಾಗೂ ಎಸ್.ಟಿ.ಬ್ಲಾಕ್‍ನ ಸುರೇನ್ ಕೆಜಿಎಫ್ ನಗರದ ಕೆಎಸ್‍ಆರ್ ಟಿಸಿ ಡಿಪೋ ಬಳಿ ಎದುರಾಗಿದ್ದಾರೆ. ಈ ವೇಳೆ ಲಾಂಗು ಮಚ್ಚುಗಳೊಂದಿಗೆ ಸುರೇನ್ ಹಾಗೂ ಆತನ ಬೆಂಬಲಿಗರು ಸ್ಟಾಲಿನ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಜೊತೆಗಿದ್ದ ಅರ್ನಾಡ್ ತಪ್ಪಿಸಿಕೊಂಡಿದ್ದ. ಆದರೆ ಸ್ಟಾಲಿನ್ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ, ನಂತರ ಆತನನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸ್ಟಾಲಿನ್ ಮೃತ ಪಟ್ಟಿದ್ದಾನೆ.

    ಮೃತ ಸ್ಟಾಲಿನ್‍ಗೆ 2017ರ ಆಂಥೋನಿ ಎಂಬುವನ ಕೊಲೆ ಪ್ರಕರಣದ ಹಿನ್ನೆಲೆ ಕೂಡ ಇದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ನಾಲ್ಕನೇ ಆರೋಪಿಯಾಗಿದ್ದ. ಜೊತಗೆ ಸ್ಟಾಲಿನ್ ತಂದೆ ಜಾನ್ಸನ್ ಕೂಡಾ ರೌಡಿಶೀಟರ್ ಆಗಿದ್ದು, ಈತನ ಕುಟುಂಬ ಅಪರಾಧ ಹಿನ್ನೆಲೆ ಹೊಂದಿದೆ. ಆದರೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಗಿದ್ದ ಸಣ್ಣ ಗಲಾಟೆಯನ್ನ ಗಂಭೀರವಾಗಿ ಪರಿಗಣಿಸಿದ್ದ ಸುರೇನ್ ಮತ್ತು ಆತನ ಗ್ಯಾಂಗ್ ಸ್ಟಾಲಿನ್‍ಗೆ ಮುಹೂರ್ತ ಇಟ್ಟಿತ್ತು. ಕೆಜಿಎಫ್ ಪೊಲೀಸರು ಗ್ಯಾಂಗ್ ವಾರ್ ಆರೋಪಿಗಳನ್ನು ಬಂಧಿಸಿದ್ದು, ಜೈಲಿಗಟ್ಟಿದ್ದಾರೆ.

  • 4 ಮಂದಿಯನ್ನು ವಿವಾಹವಾಗಿ ಲಕ್ಷಾಂತರ ರೂ. ಹಣ ದೋಚಿದ್ದ ಯುವತಿ ಅರೆಸ್ಟ್

    4 ಮಂದಿಯನ್ನು ವಿವಾಹವಾಗಿ ಲಕ್ಷಾಂತರ ರೂ. ಹಣ ದೋಚಿದ್ದ ಯುವತಿ ಅರೆಸ್ಟ್

    – ಮೊದಲು ತನ್ನ ಚಿಕ್ಕಪ್ಪನನ್ನೇ ಮದುವೆಯಾಗಿದ್ದ ಯುವತಿ
    – ತಾನೇ ದೂರು ಕೊಟ್ಟು, ಪೊಲೀಸ್ ಠಾಣೆ ಸೇರಿದ ಸ್ವಪ್ನ

    ಹೈದರಾಬಾದ್: ನಾಲ್ಕು ಜನ ಪುರುಷರನ್ನು ವಿವಾಹವಾಗಿ ಲಕ್ಷಾಂತರ ರೂ. ಹಣ ದೋಚಿದ್ದ ಕಿಲಾಡಿ ಯುವತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಯುವತಿಯನ್ನು ಸ್ವಪ್ನ ಎಂದು ಗುರುತಿಸಲಾಗಿದೆ. ಈಕೆ ಮೊದಲಿಗೆ ಆಕೆಯ ಚಿಕ್ಕಪ್ಪನನ್ನೇ ಮದುವೆಯಾಗಿದ್ದಾಳೆ. ನಂತರ ಆತ ದೈಹಿಕವಾಗಿ ಬಲವಾಗಿಲ್ಲ ಮತ್ತು ಆತನ ಬಳಿ ಹಣವಿಲ್ಲ ಎಂದು ಹೇಳಿ ಮದುವೆಯಾದ ಕೆಲವೇ ದಿನಗಳಲ್ಲಿ ಆತನನ್ನು ಬಿಟ್ಟು ಬಂದಿದ್ದಾಳೆ.

    ನಂತರ ನನಗೆ ಮದುವೆಯೇ ಆಗಿಲ್ಲ ಎಂದು ಹೇಳಿಕೊಂಡು ಮೊದಲ ಮದುವೆಯನ್ನು ಮುಚ್ಚಿಟ್ಟು ಪೃಥ್ವಿರಾಜ್ ಎಂಬವವರ ಜೊತೆ ಎರಡನೇ ಮದುವೆಯಾಗಿದ್ದಾಳೆ. ಆದರೆ ಈ ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ ಸ್ವಪ್ನ, ಈತ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಪೃಥ್ವಿರಾಜ್‍ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಜೊತೆಗೆ ಕೇಸ್ ಅನ್ನು ವಾಪಸ್ ಪಡೆಯಲು 25 ಲಕ್ಷ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಟ್ಟ ನಂತರ ಕೇಸ್ ವಾಪಸ್ ತೆಗೆದುಕೊಂಡಿದ್ದಾಳೆ.

    ಪೃಥ್ವಿರಾಜ್‍ನ ನಂತರ ಸ್ವಪ್ನ ಆತ್ಮಕೂರ್ ನಿವಾಸಿ ಸುಧಾಕರ್ ನನ್ನು ಬಲೆಗೆ ಬೀಳಿಸಿಕೊಂಡಿದ್ದಾಳೆ. ಸುಧಾಕರ್ ಜರ್ಮನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಆತನನ್ನು ಮದುವೆ ವೆಬ್‍ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಆತನ ಜೊತೆ ಚಾಟ್ ಮಾಡಿ ಮಸೇಜ್‍ಗಳನ್ನು ಇಟ್ಟುಕೊಂಡು ಪೊಲೀಸ್‍ಗೆ ದೂರ ಕೊಡುತ್ತೇನೆ ಎಂದು ಬೆದಕರಿಗೆ ಹಾಕಿದ್ದಾಳೆ. ಜೊತೆಗೆ ಆತನ ಬಳಿಯೂ 5 ಲಕ್ಷ ಹಣವನ್ನು ಕಿತ್ತುಕೊಂಡಿದ್ದಾಳೆ.

    ಸುಧಾಕರ್ ನಂತರ ಡೆನ್ಮಾರ್ಕ್‍ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ರಾಮಂಜನೇಯುಲು ಅವರನ್ನು ಪರಿಚಯ ಮಾಡಿಕೊಂಡಿದ್ದಾಳೆ. ಈತನಿಗೂ ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಆದರೆ ಈ ನಡುವೆ ಈಕೆ ನಡುವಳಿಕೆ ನೋಡಿ ಅನುಮಾನ ಪಟ್ಟ ರಾಮಂಜನೇಯುಲು ಆಕೆಗೆ ಗೊತ್ತಾಗದ ರೀತಿಯಲ್ಲಿ ಆಕೆಯನ್ನು ಬಿಟ್ಟು ಡೆನ್ಮಾರ್ಕ್‍ಗೆ ಎಸ್ಕೇಪ್ ಆಗಿದ್ದಾನೆ. ಇದರಿಂದ ಕೋಪಗೊಂಡ ಸ್ವಪ್ನ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಆಗ ತನಿಖೆ ವೇಳೆ ಆಕೆಯ ಬಣ್ಣ ಬಯಲಾಗಿದೆ.

    ತನಿಖೆ ವೇಳೆ ಪೊಲೀಸರಿಗೆ ಸ್ವಪ್ನಗೆ ನಾಲ್ಕು ಜನ ಗಂಡಂದಿರಿರುವುದು ಮತ್ತು ಆಕೆ ಅವರಗೆ ಬ್ಲಾಕ್‍ಮೇಲ್ ಮಾಡಿ ಹಣ ಕಿತ್ತುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸ್ವಪ್ನ ಹೆಸರು ಮತ್ತು ಫೋಟೋಗಳನ್ನು ಚೇಂಚ್ ಮಾಡಿಕೊಂಡು ನಂಬಿಸಿ ಯುವಕರಿಗೆ ಮೋಸ ಮಾಡಿದ್ದಾಳೆ. ಮದುವೆಯಾಗಿ ನಂತರ ಪೊಲೀಸ್ ಠಾಣೆಗೆ ಕಿರುಕುಳದ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿ ಹಣ ಮಾಡಿದ್ದಾಳೆ ಎಂದು ಹೇಳಿದ್ದಾರೆ.

  • ನಡು ರಸ್ತೆಯಲ್ಲೇ ಯುವಕನಿಂದ ಪ್ರಿಯತಮೆ ಮೇಲೆ ಹಲ್ಲೆ!

    ನಡು ರಸ್ತೆಯಲ್ಲೇ ಯುವಕನಿಂದ ಪ್ರಿಯತಮೆ ಮೇಲೆ ಹಲ್ಲೆ!

    ಬೆಂಗಳೂರು: ನಡು ರಸ್ತೆಯಲ್ಲಿ ಯುವಕನೊಬ್ಬ ಪ್ರಿಯತಮೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.

    ಯುವಕ ಮತ್ತು ಯುವತಿ ಸ್ಕೂಟರಿನಲ್ಲಿ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಯುವತಿಯನ್ನು ಬೈಯುತ್ತಾ ಆಕೆಯ ಮೇಲೆ ಪ್ರಿಯಕರ ಹಲ್ಲೆ ನಡೆಸಿದ್ದಾನೆ. ನಡುರಸ್ತೆಯಲ್ಲೇ ಕೆಲ ಸಮಯ ಮಾತನಾಡುತ್ತಾ ನಿಂತಿದ್ದ ಯುವಕ ಏಕಾಏಕಿ ಮುನ್ನುಗ್ಗಿ ಹಲ್ಲೆ ನಡೆಸಿದ್ದಾನೆ. ಈ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ಸ್ಥಳೀಯರು ಕೂಡ ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಥಳೀಯ ಯುವಕ, ಇಬ್ಬರನ್ನು ಅಡ್ಡಹಾಕಿ ಪ್ರಶ್ನಿಸಿದ್ದಾನೆ. ನಡುರಸ್ತೆಯಲ್ಲಿ ಯುವತಿಯ ಮೇಲೆ ಹೇಗೆ ಹಲ್ಲೆ ನಡೆಸಿದೆ ಎಂದು ಪ್ರಶ್ನೆ ಮಾಡಿದ್ದಾನೆ. ಕೊನೆಗೆ ಯುವತಿಯೇ ಸ್ಥಳೀಯ ಯುವಕನಿಂದ ಪ್ರಿಯಕರನನ್ನ ಬಿಡಿಸಿದ್ದಾಳೆ. ಈ ವೇಳೆ ಕುಟುಂಬ ವಿಚಾರದಲ್ಲಿ ಮನಸ್ತಾಪವಾಗಿ ಹಲ್ಲೆ ನಡೆಸಿದೆ ತಪ್ಪಾಯ್ತು ಬಿಟ್ಟು ಬಿಡಿ ಎಂದು ಪ್ರಿಯಕರ ಕೇಳಿಕೊಂಡಿದ್ದಾನೆ.

    ಇಬ್ಬರ ಗಲಾಟೆಯ ವಿಚಾರವನ್ನು ಸ್ಥಳೀಯ ಯುವಕ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೀಟ್ ಪೊಲೀಸ್ರು ಪ್ರೇಮಿಗಳಿಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಈ ಬಗ್ಗೆ ಯಾರೂ ದೂರು ಕೊಡದ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ. ಅಲ್ಲದೇ ಯುವತಿ ಮೇಲೆ ಹಲ್ಲೆ ಮಾಡಿದ್ದನ್ನು,  ಅದೂ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ ಸ್ಥಳೀಯ ಯುವಕನ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

  • ಕುಡಿದು ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಒದೆ ಕೊಟ್ಟ ಮಂಗಳಮುಖಿಯರು

    ಕುಡಿದು ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಒದೆ ಕೊಟ್ಟ ಮಂಗಳಮುಖಿಯರು

    ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಹುಬ್ಬಳ್ಳಿಯಲ್ಲಿ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

    ಚೆನ್ನಮ್ಮ ಸರ್ಕಲ್ ಬಳಿಯ ಹಳೆ ಬಸ್ ನಿಲ್ದಾಣದ ಬಳಿ ಕುಡಿದು ಮಂಗಳಮುಖಿಯರು ಹಾಗೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಯುವಕ ಮಂಗಳಮುಖಿಯರು ಹಾಗೂ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದ. ಹೀಗಾಗಿ ಮಹಿಳೆಯರು ಹಾಗೂ ಮಂಗಳಮುಖಿಯರ ಜೊತೆ ವಾಗ್ವಾದ ನಡೆಸಿದ ಯುವಕನಿಗೆ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಬಳಿಯ ಕೆಲ ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಯುವಕ ಮಹಿಳೆಯನ್ನು ಹಿಡಿಯಲು ಹೋಗಿಯೇ ಒದೆ ತಿಂದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲವಾದರೂ ಜನನಿಬಿಡ ಹಳೆ ಬಸ್ ನಿಲ್ದಾಣ ಹಾಗೂ ಚನ್ನಮ್ಮ ಸರ್ಕಲ್ ಬಳಿ ಮಹಿಳೆಯರು ಓಡಾಡಲು ಕಷ್ಟವಾಗುತ್ತಿದೆ. ಕುಡುಕರು ಹಾಗೂ ವಿಟಪುರುಷರ ಕಾಟ ಹೆಚ್ಚಳವಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ಮೂಲಕ ಮರ್ಯಾದೆಯಿಂದ ಓಡಾಡುವಂತೆ ಅನುಕೂಲ ಮಾಡಿಕೊಡಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.

  • ಮದ್ವೆಯಾಗದ ಯುವಕರೇ ಟಾರ್ಗೆಟ್- ಬರೋಬ್ಬರಿ 14 ಮಂದಿಯೊಂದಿಗೆ ವಕೀಲೆಯ ಪ್ರೇಮ ಪುರಾಣ

    ಮದ್ವೆಯಾಗದ ಯುವಕರೇ ಟಾರ್ಗೆಟ್- ಬರೋಬ್ಬರಿ 14 ಮಂದಿಯೊಂದಿಗೆ ವಕೀಲೆಯ ಪ್ರೇಮ ಪುರಾಣ

    ಹೈದರಾಬಾದ್: ಮದುವೆಯಾಗದ ಯುವಕರನ್ನೇ ಟಾರ್ಗೆಟ್ ಮಾಡಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಅವರೊಂದಿಗೆ ಸಲಿಗೆ ಬೆಳೆಸಿಕೊಂಡು, ಆ ಬಳಿಕ ಹಣಕ್ಕಾಗಿ ಕಿರುಕುಳ ನೀಡಿ ಮೋಸ ಮಾಡುತ್ತಿದ್ದ ಯುವತಿಯನ್ನು ಹೈದರಾಬಾದ್‍ನ ಅಂಬಿಟ್ಸ್ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಹೈದರಾಬಾದ್‍ನ ಮಲಕಪೇಟ್ ಪ್ರದೇಶಕ್ಕೆ ಸೇರಿದ ಷಾದನ್ ಸುಲ್ತಾನ (27) ಬಂಧಿತ ಯುವತಿಯಾಗಿದ್ದು, ಪ್ರಕರಣದ ಕುರಿತು ಸಿಐ ರವಿಕುಮಾರ್ ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ.

    ಬಂಧಿತ ಷಾದನ್ ಸುಲ್ತಾನ ಎಲ್‍ಎಲ್‍ಬಿ ಪದವಿ ಪಡೆದಿದ್ದು, ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಳು. 2015ರಲ್ಲಿ ಆಕೆಗೆ ಅಂಬಿಡ್ಸ್ ನ ಅಲ್ಪ ಸಂಖ್ಯಾತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಹೀಂ ಎಂಬಾತನೊಂದಿಗೆ ಪರಿಚಯವಾಗಿತ್ತು. ಆ ಬಳಿಕ ಇಬ್ಬರು ಫೋನ್ ಮೂಲಕ ಮಾತನಾಡಲು ಆರಂಭಿಸಿದ್ದರು. ಅಲ್ಲದೇ ಇಬ್ಬರು ಸುತ್ತಾಟ ಕೂಡ ನಡೆಸಿದ್ದರು. ಪೂರ್ತಿಯಾಗಿ ರಹೀಂನನ್ನು ನಿಯಂತ್ರಿಸಲು ಆರಂಭಿಸಿದ್ದ ಷಾದನ್ ಸುಲ್ತಾನ 6 ತಿಂಗಳ ಹಿಂದೆ 3 ಲಕ್ಷ ರೂ.ಗಳನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಳು. ಅಲ್ಲದೇ ಮತ್ತೆ 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ, ನಿರಾಕರಿಸಿದರೆ ಇಬ್ಬರು ಸಲಿಗೆಯಿಂದಿರುವ ವಿಚಾರವನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದಳು.

    ಸುಲ್ತಾನ ಬೆದರಿಕೆಗಳಿಂದ ನೊಂದ ರಹೀಂ ಕಳೆದ ತಿಂಗಳ 19 ರಂದು ತನ್ನ ಕಚೇರಿಯ ಸಮೀಪ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಪೊಲೀಸರಿಗೆ ರಹೀಂ, ಷಾದನ್ ಸುಲ್ತಾನ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಷಾದನ್‍ನನ್ನು ಬಂಧಿಸಿದ್ದರು.

    ಪ್ರಕರಣದ ವಿಚಾರಣೆ ವೇಳೆ ಷಾದನ್ ಸುಲ್ತಾನ ನಿಜಾಮಿಯಾ 2014ರಿಂದಲೇ ಪ್ರೇಮ ನಾಟಕ ಮಾಡುತ್ತಿದ್ದ ಸಂಗತಿ ತಿಳಿದು ಬಂದಿದೆ. 2014 ರಲ್ಲೇ ಪ್ರೇಮ ಹೆಸರಿನಲ್ಲಿ ಮೋಸ ಮಾಡುವ ಕೃತ್ಯವನ್ನು ಷಾದನ್ ಆರಂಭಿಸಿದ್ದಳು. 2014-18ರ ಅವಧಿಯಲ್ಲಿ ಸುಲ್ತಾನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ಸೈಫಾಬಾದ್‍ನ ಪಿಎಸ್ ಠಾಣೆಯಲ್ಲಿ 3, ಚದರ್ ಛದೇರಿಘಾಟ್ 5, ಎಲ್‍ಬಿ ನಗರ 3, ಅಂಬರ್ ಪೇಟ್ 2, ಅಂಬಿಟ್ಸ್ 2, ಮೀರ್ ಚೌಕ್ 4, ನಾರಾಯಣ ಗೂಡ, ಮಲಕ್ ಪೇಟ್, ನಲ್ಲಕುಂಟ, ಉಪ್ಪಲ್ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ವಿಶೇಷ ಎಂದರೆ ಷಾದನ್ ಸುಲ್ತಾನ ಮೋಸ ಮಾಡಿದ ಯುವಕರಲ್ಲಿ ವಕೀಲರೊಬ್ಬರು ಇರುವುದು ಗಮನರ್ಹವಾಗಿದೆ.

  • ಚಿತ್ರ ನಟಿ ಖುಷ್ಬೂರಿಂದ ಯುವಕನಿಗೆ ಕಪಾಳ ಮೋಕ್ಷ

    ಚಿತ್ರ ನಟಿ ಖುಷ್ಬೂರಿಂದ ಯುವಕನಿಗೆ ಕಪಾಳ ಮೋಕ್ಷ

    ಬೆಂಗಳೂರು: ನಗರದಲ್ಲಿ ಪ್ರಚಾರದ ವೇಳೆ ನಟಿ, ಎಐಸಿಸಿ ವಕ್ತಾರೆ ಖುಷ್ಬೂ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

    ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಖುಷ್ಬೂ ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಯ್ಸಳನಗರದಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಯುವಕನೊಬ್ಬ ಖುಷ್ಬೂ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಖುಷ್ಬೂ, ತಕ್ಷಣ ತಿರುಗಿ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಕೂಡಲೇ ಮಧ್ಯೆ ಬಂದ ಪೊಲೀಸರು ಕೂಡಾ ಯುವಕನಿಗೆ ಹೊಡೆದು ವಶಕ್ಕೆ ಪಡೆದಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಈ ಕುರಿತು ನಾನು ಖುಷ್ಬೂ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಆಗ ಅವರು ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ಕಪಾಳಕ್ಕೆ ಹೊಡೆದೆ ಎಂದು ಹೇಳಿದ್ದಾರೆ. ಸಾವಿರಾರು ಜನ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಇಂತಹ ಕಿಡಿಗೇಡಿ ಕೃತ್ಯಗಳು ಸಾಮಾನ್ಯವಾಗಿರುತ್ತದೆ. ಆ ಯುವಕ ಯಾರು ಎಂದು ನಮಗೆ ತಿಳಿದಿಲ್ಲ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರು ಸೆಂಟ್ರಲ್‍ನಿಂದ ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ ಮೋಹನ್ ಕಣಕ್ಕಿಳಿದಿದ್ದಾರೆ.