ಚಿಕ್ಕಬಳ್ಳಾಪುರ: ಮನಸ್ಸಿದ್ದರೆ ಮಾರ್ಗ. ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ, ಅಂತೆಯೇ ಇಲ್ಲೊಬ್ಬ ಬಾಲಕ ಮನಸ್ಸು ಮಾಡಿ ಕಠಿಣ ದುರ್ವಾಸ್ ಆಸನ ಕಲಿತು ಒಂದು ಕಾಲನ್ನು ಬೆನ್ನಿಗೆ ತಾಗಿಸಿಕೊಂಡು ಮತ್ತೊಂದು ಕಾಲಲ್ಲಿ ಕೇವಲ ಒಂದು ನಿಮಿಷದಲ್ಲಿ 60 ಮೀಟರ್ ದೂರ ಓಡುವುದರ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸೇರಿದ್ದಾನೆ.
ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಎನ್.ಆರ್ ಎಕ್ಸಟೇನ್ಷನ್ ನಿವಾಸಿ ಸಂದೀಪ್ ಕೃಷ್ಣಮೂರ್ತಿ ಹಾಗೂ ಅರುಣಾ ದಂಪತಿಯ ಮಗ ಶ್ರೀ ಶೈಲ್ ಈ ಸಾಧನೆ ಮಾಡಿದ ಬಾಲಕ. 10 ವರ್ಷದ ಬಾಲಕ ಶ್ರೀ ಶೈಲ್ ಕಠಿಣ ದುರ್ವಾಸ್ ಆಸನ ಯೋಗ ಕಲಿತು ಪ್ರದರ್ಶನ ಮಾಡುತ್ತಾನೆ. ನಗರದ ಜೈನ್ ಪಬ್ಲಿಕ್ ಶಾಲೆಯಲ್ಲಿ 5 ನೆ ತರಗತಿ ಓದುತ್ತಿದ್ದು, ಮತ್ತೊಂದು ಖಾಸಗಿ ಶಾಲೆಯ ಯೋಗ ಶಿಕ್ಷಕ ಗೋವಿಂದ ಬಳಿ ಯೋಗಾಭ್ಯಾಸ ಮಾಡುತ್ತಿದ್ದಾನೆ.

ಯೋಗಾಸನದಲ್ಲಿರುವ ಕಠಿಣ ಆಸನಗಳನ್ನು ಕಲಿತಿರುವ ಶ್ರೀ ಶೈಲ್, ಕೇವಲ ಒಂದು ನಿಮಿಷದಲ್ಲಿ ಒಂದು ಕಾಲನ್ನು ಬೆನ್ನಿಗೆ ತಾಗಿಸಿಕೊಂಡು, ಇನ್ನೊಂದು ಕಾಲಲ್ಲಿ 60 ಮೀಟರ್ ದೂರ ರನ್ನಿಂಗ್ ಮಾಡುವುದರ ಮೂಲಕ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಪಾತ್ರನಾಗಿದ್ದಾನೆ.

6ನೇ ವಯಸ್ಸಿನಲ್ಲೇ ಶ್ರೀ ಶೈಲ್ ಯೋಗದ ಕಡೆ ಆಕರ್ಷಿತನಾಗಿ ಯೋಗ ಶಿಕ್ಷಕ ಗೋವಿಂದ ಬಳಿ ಯೋಗಾಭ್ಯಾಸ ಮಾಡುತ್ತಿದ್ದಾನೆ. ಯೋಗದ ಕಠಿಣ ಆಸನಗಳನ್ನು ಕರಗತ ಮಾಡಿಕೊಂಡಿರುವ ಈತ ತನ್ನ ದೇಹವನ್ನು ಚಕ್ರದಂತೆ ತಿರುಗಿಸುತ್ತಾನೆ. ಯೋಗ ಪಟುಗಳಲ್ಲೇ ಅತ್ಯಂತ ಚುರುಕಾಗಿರುವ ಬಾಲಕ ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ದುರ್ವಾಸ್ ಆಸನ ಪ್ರದರ್ಶನ ಮಾಡುವ ಬಯಕೆ ಹೊಂದಿದ್ದಾನೆ.
ಮನಸ್ಸು ಮಾಡಿದರೆ ಏನ್ ಬೇಕಾದರು ಮಾಡಬಹುದು ಎನ್ನುವುದಕ್ಕೆ ಈ ಪೋರನೆ ಸಾಕ್ಷಿ. ಸದ್ಯ ಒಂದು ನಿಮಿಷದಲ್ಲಿ ಕಠಿಣ ದುರ್ವಾಸ್ ಆಸನದಲ್ಲಿ 60 ಮೀಟರ್ ರನ್ನಿಂಗ್ ಮಾಡುತ್ತಿದ್ದು, ಮುಂದೆ ಮೂನ್ನೂರು ಮೀಟರ್ ಓಡುವ ಮೂಲಕ ಗಿನ್ನಿಸ್ ದಾಖಲೆಗೆ ಸೇರಬೇಕು ಎನ್ನುವ ಮಹದಾಸೆ ವ್ಯಕ್ತಪಡಿಸಿದ್ದಾನೆ.







































































