Tag: yoga

  • ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಜನರ ಮನ ಗೆದ್ದ ಎಸ್‍ಪಿ

    ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಜನರ ಮನ ಗೆದ್ದ ಎಸ್‍ಪಿ

    ಹಾಸನ: ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಹಾಸನದ ಎಸ್‍ಪಿ ಶ್ರೀನಿವಾಸ್ ಗೌಡ ಜನರ ಮನ ಗೆದ್ದಿದ್ದಾರೆ.

    ಲಾಕ್‍ಡೌನ್ ಉಲ್ಲಂಘಿಸಿ ನಗರದ ಮೈದಾನದಲ್ಲಿ ಗುಂಪು ಗುಂಪಾಗಿ ಜನರು ವಾಕ್ ಮಾಡುತ್ತಿದ್ದಾರೆ. ಎಷ್ಟು ತಿಳಿ ಹೇಳಿದರೂ ಹಾಸನದ ಜನ ಬೆಳಗ್ಗೆ ಮೈದಾನಕ್ಕೆ ತೆರಳಿ ವಾಕ್ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಈ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನ ಎಸ್‍ಪಿ ಶ್ರೀನಿವಾಸ್ ಗೌಡ ಸ್ವತಃ ಕಾರ್ಯಾಚರಣೆಗಿಳಿದ್ದಾರೆ.

    ಶ್ರೀನಿವಾಸ್ ಗೌಡ ಅವರು ಇಂದು ತಮ್ಮ ತಂಡದೊಂದಿಗೆ ಮೈದಾನಕ್ಕೆ ತೆರಳಿ ವಾಕ್ ಮಾಡುತ್ತಿದ್ದವರನ್ನು ಪೊಲೀಸ್ ವಾಹನದಲ್ಲಿ ಡಿಆರ್ ಮೈದಾನಕ್ಕೆ ಕರೆ ತಂದಿದ್ದರು. ಅಲ್ಲಿಗೆ ಒಬ್ಬರು ಯೋಗ ಗುರುಗಳನ್ನು ಕರೆಸಿ ಮನೆಯಲ್ಲೇ ಮಾಡಬಹುದಾದ ಸರಳ ವ್ಯಾಯಾಮ ಮತ್ತು ಯೋಗಾಸನಗಳ ಬಗ್ಗೆ ತಿಳಿಸಿಕೊಟಿದ್ದಾರೆ.

    ಎಸ್‍ಪಿಯವರೇ ಸ್ವತಃ ಜನರೊಂದಿಗೆ ಕುಳಿತು ಯೋಗ ಮಾಡಿದ್ದಲ್ಲದೆ, ಇನ್ನು ಮುಂದೆ ಮನೆಯಲ್ಲೇ ಇದ್ದು ವ್ಯಾಯಾಮ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರು ಅಂದ್ರೆ ಭಯದಿಂದ ನೋಡುತ್ತಿದ್ದ ಜನ, ಹಾಸನ ಎಸ್‍ಪಿಯವರ ಸರಳ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಚಕ್ರಾಸನದ ರೇಸ್- ತನುಶ್ರೀ ಪಿತ್ರೋಡಿಯಿಂದ ಮತ್ತೊಂದು ವಿಶ್ವದಾಖಲೆ

    ಚಕ್ರಾಸನದ ರೇಸ್- ತನುಶ್ರೀ ಪಿತ್ರೋಡಿಯಿಂದ ಮತ್ತೊಂದು ವಿಶ್ವದಾಖಲೆ

    – ಪಬ್ಲಿಕ್ ಹೀರೋ ತನುಶ್ರೀಯ ಐದನೇ ವಿಶ್ವದಾಖಲೆ

    ಉಡುಪಿ: ಯೋಗಾಸನದ ಮೂಲಕವೇ ನಾಲ್ಕು ವಿಶ್ವದಾಖಲೆ ಮಾಡಿರುವ ಕೇವಲ 10 ವರ್ಷದ ತನುಶ್ರೀ ಮತ್ತೊಂದು ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ.

    ಅತೀ ಕಲ್ಲಿಷ್ಟಕರ ಚಕ್ರಾಸನ ರೇಸ್ ಮಾಡುವ ಮೂಲಕ ದಾಖಲಿ ಬರೆದಿದ್ದಾರೆ. ಉಡುಪಿಯ ಉದ್ಯಾವರದಲ್ಲಿ ಈ ಸಾಧನೆ ದಾಖಲೆಯಾಗಿದ್ದು, ಈಗಾಗಲೇ ನಾಲ್ಕು ವಿಶ್ವದಾಖಲೆ ಹೊಂದಿರುವ ಪಬ್ಲಿಕ್ ಹೀರೋ ತನುಶ್ರೀ ಪಿತ್ರೋಡಿ ಇದೀಗ ಅತೀ ಕ್ಲಿಷ್ಟಕರ ಚಕ್ರಾಸನ ರೇಸ್ ಮಾಡಿದ್ದಾಳೆ. 100 ಮೀಟರ್ ಚಕ್ರಾಸನ ರೇಸನ್ನು ಕೇವಲ 1.14 ನಿಮಿಷದಲ್ಲಿ ಮುಗಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ.

    10 ವರ್ಷದ ಪುಟಾಣಿಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿಂದ ನೋಡುತ್ತಿದೆ. ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಹೆಸರಿನಲ್ಲಿದ್ದ ದಾಖಲೆಯನ್ನು ಉಡುಪಿಯ ತನುಶ್ರೀ ಮುರಿದಿದ್ದಾಳೆ. ಸಮೀಕ್ಷಾ ಇದೇ ದೂರ ಕ್ರಮಿಸಲು ಆರು ನಿಮಿಷ ತೆಗೆದುಕೊಂಡಿದ್ದರು. ಆದರೆ ತನುಶ್ರೀ ಕೇವಲ 1.14 ನಿಮಿಷಗಳಲ್ಲಿ 100 ಮೀ. ಕ್ರಮಿಸುವ ಮೂಲಕ ದಾಖಲೆ ಮುರಿದಿದ್ದಾರೆ. ಯೋಗಾಸನದಲ್ಲೇ ರೇಸ್ ಮಾಡೋದು ಅಂದ್ರೆ ಅಸಾಧ್ಯ ಎನ್ನುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ತನುಶ್ರೀ ಕೇವಲ 1.14 ನಿಮಿಷದಲ್ಲಿ 100 ಮೀಟರ್ ಕ್ರಮಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

    ತನುಶ್ರೀ ಈ ಹಿಂದೆ ನಾಲ್ಕು ವಿಶ್ವದಾಖಲೆ ನಿರ್ಮಿಸಿದ್ದಾರೆ 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನವನ್ನು ಕೇವಲ ಒಂದು ನಿಮಿಷದಲ್ಲಿ 19 ಬಾರಿ ಮಾಡಿದ್ದಾರೆ. ಅಲ್ಲದೆ, 2018ರಲ್ಲಿ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿರಿಸಿ ಉಳಿದ ಭಾಗವನ್ನು 1.42 ನಿಮಿಷದಲ್ಲಿ 42 ಬಾರಿ ತಿರುಗಿಸಿ ದಾಖಲೆ ಮಾಡಿದ್ದರು. 2019ರಲ್ಲಿ ಇದೇ ಭಂಗಿಯಲ್ಲಿ ತನ್ನ ಹಿಂದಿನ ದಾಖಲೆ ಮುರಿದಿದ್ದರು. ನಂತರ ಧನುರಾಸನ ಭಂಗಿಯನ್ನು 1.40 ನಿಮಿಷದಲ್ಲಿ 96 ಬಾರಿ ಮಾಡಿ ಮತ್ತೊಂದು ದಾಖಲೆಗೆ ಕಾರಣರಾಗಿದ್ದರು. ಇದೀಗ ಐದನೇ ವಿಶ್ವದಾಖಲೆ ಮಾಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ತನುಶ್ರೀ ನಮ್ಮ ಪಬ್ಲಿಕ್ ಹೀರೋ ಎಂಬುದು ಮತ್ತೊಂದು ಹೆಮ್ಮೆಯ ವಿಚಾರವಾಗಿದೆ.

  • ಯೋಗ, ಪ್ರಕೃತಿ ಚಿಕಿತ್ಸೆ ಅನಿವಾರ್ಯ: ಡಾ. ವೀರೇಂದ್ರ ಹೆಗ್ಗಡೆ

    ಯೋಗ, ಪ್ರಕೃತಿ ಚಿಕಿತ್ಸೆ ಅನಿವಾರ್ಯ: ಡಾ. ವೀರೇಂದ್ರ ಹೆಗ್ಗಡೆ

    ಉಡುಪಿ: ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಇಂದು ಅಗತ್ಯವಾಗಿದೆ. ನಿಸರ್ಗದ ಮಡಿಲಲ್ಲಿ ಆಸ್ಪತ್ರೆ ಇರುವುದರಿಂದ ಇಲ್ಲಿ ದೊರೆಯುವ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

    ಉಡುಪಿ ಜಿಲ್ಲೆಯ ಮೂಡುಗಿಳಿಯಾರಿನ ಯೋಗಬನದ ಪ್ರಕೃತಿ ಮಡಿಲಲ್ಲಿ ತಲೆ ಎತ್ತಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಉದ್ಘಾಟಿಸಿದರು. ಬಳಿಕ ಡಿವೈನ್ ಪಾರ್ಕ್ ಟ್ರಸ್ಟ್‍ನ ಅಂಗ ಸಂಸ್ಥೆಯಾದ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಉದ್ಘಾಟಿಸಿ ಡಾ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. ವಾಸ್ತುಶಿಲ್ಪ ಹಾಗೂ ಪ್ರಾಚೀನ ಶೈಲಿಯಿಂದಾಗಿ ಆಸ್ಪತ್ರೆ ಪ್ರಕೃತಿಗೆ ಹತ್ತಿರವಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡಿರುವುದು ಇದರ ಹೆಮ್ಮೆ ಎಂದರು.

    ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಲ್ಲಿಯ ಪರಿಸರದಲ್ಲಿ ಚಿಕಿತ್ಸೆ ಸಿಗುವುದು ನಮ್ಮ ಪುಣ್ಯ. ಆಧುನಿಕತೆಯಿಂದಾಗಿ ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡುವವರು ಇಲ್ಲಿ ಬಂದು ನೆಮ್ಮದಿ ಹುಡುಕಬಹುದು ಎಂದರು.

    ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಎಚ್.ಆರ್.ನಾಗೇಂದ್ರ ಮಾತನಾಡಿ, ಯೋಗ, ಧ್ಯಾನ ಹಾಗೂ ಪ್ರಕೃತಿ ಚಿಕಿತ್ಸೆ ಸಿಗುವಂತಹ ಜಾಗದಲ್ಲಿ ವಿವೇಕಾನಂದರ ಪ್ರತಿಮೆ ಕಾಣಲು ಸಿಗಲಿದೆ. ಅವರು ನಡೆದ ಹಾದಿ ಇಲ್ಲಿ ನಮಗೆ ನೆನಪಾದರೆ ಅದಕ್ಕಿಂತ ಅರ್ಥಪೂರ್ಣವಾದ ಕೆಲಸ ಬೇರೆ ಇಲ್ಲ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈನ್‍ಪಾರ್ಕ್ ಟ್ರಸ್ಟ್ ನ ಆಡಳಿತ ನಿರ್ದೇಶಕ ಉಡುಪ ಮಾತನಾಡಿ, ಶಾಂತಿ, ನೆಮ್ಮದಿ ಅರಸುವವರಿಗೆ ಇದು ಪ್ರಶಸ್ತ ಜಾಗ. ಪ್ರಕೃತಿ ಚಿಕಿತ್ಸೆ ಇಂದು ವಿಶ್ವದಾದ್ಯಂತ ಪಸರಿಸಿದೆ. ಇದಕ್ಕೆ ಕಾರಣ ನಮ್ಮ ಪ್ರಕೃತಿಯಲ್ಲಿಯೇ ಇರುವ ಔಷಧಿ ಗುಣ. ನಾವು ಇದನ್ನು ಬೆಳೆಸಿ ಉಳಿಸಬೇಕಿದೆ ಎಂದರು.

    “ರುದ್ರಿ” ಸಿನಿಮಾದ ನಾಯಕಿ ಹಾಗೂ ನಟಿ ಪಾವನಾ ಗೌಡ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಘಟನೆಗಳು ನಿತ್ಯ ನಡೆಯುತ್ತವೆ. ನಮ್ಮ ಸಿನಿಮಾ “ರುದ್ರಿ” ಕೂಡ ಇಂತದ್ದೇ ಒಂದು ಕಥೆಯನ್ನು ಒಳಗೊಂಡಿದೆ. ಪ್ರಕೃತಿ ನಮ್ಮ ಎಲ್ಲಾ ಪ್ರಶ್ನೆಗಳು ಉತ್ತರ ನೀಡಬಲ್ಲದು. ಹಾಗೇ ಇಲ್ಲಿ ಸಿಗುವ ಚಿಕಿತ್ಸೆ ಕೂಡ ಇಂದು ತೀರಾ ಅನಿವಾರ್ಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ಉಡುಪ ಹಾಗೂ ವಿವೇಕ್ ಉಡುಪ ಇದ್ದರು.

  • ಹುಬ್ಬಳ್ಳಿಯಲ್ಲಿ ಉಪರಾಷ್ಟ್ರಪತಿಯಿಂದ ಯೋಗಾಸನ

    ಹುಬ್ಬಳ್ಳಿಯಲ್ಲಿ ಉಪರಾಷ್ಟ್ರಪತಿಯಿಂದ ಯೋಗಾಸನ

    ಹುಬ್ಬಳ್ಳಿ: ಇಲ್ಲಿನ ರೇಲ್ವೆ ಮೈದಾನದಲ್ಲಿ ನಡೆಯುತ್ತಿರುವ ಯೋಗಗುರು ಬಾಬಾ ರಾಮ್ ದೇವ್ ಅವರ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಭಾಗವಹಿಸಿ ಸ್ವತಃ ತಾಡಾಸನ ಪ್ರದರ್ಶಿಸಿದರು.

    ಉಪರಾಷ್ಟ್ರಪತಿಗಳ ಸಮ್ಮುಖದಲ್ಲಿ ಬಾಬಾ ರಾಮ್ ದೇವ್ ಅವರು ವೃಕ್ಷಾಸನ, ತ್ರಿಕೋನಾಸನ, ಉಷ್ಟ್ರಾಸನ, ವಜ್ರಾಸನ, ಮಂಡೂಕಾಸನ, ಧನುರಾಸನ, ಮರ್ಕಟಾಸನ, ಭುಜಂಗಾಸನ ಮತ್ತಿತರ ಯೋಗಾಸನಗಳನ್ನು ಪ್ರದರ್ಶಿಸಿದರು.

    ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಬೀದರ್ ಸಂಸದ ಭಗವಂತ ಖೂಬಾ, ವಿಆರ್‍ಎಲ್ ಸಮೂಹ ಸಂಸ್ಥೆಗಳ ಎಂ.ಡಿ ಆನಂದ್ ಸಂಕೇಶ್ವರ, ಪತಂಜಲಿ ಯೋಗ ಸಮಿತಿಯ ಭವರಲಾಲ ಆರ್ಯ ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು.

  • ಜೀವ ಸಮಾಧಿಯಾಗ್ತೀನಿ ಅಂತ ಗುಂಡಿ ತೆಗೆದ- ಪೊಲೀಸ್ರು ಬಂದೊಡನೆ ಪರಾರಿ

    ಜೀವ ಸಮಾಧಿಯಾಗ್ತೀನಿ ಅಂತ ಗುಂಡಿ ತೆಗೆದ- ಪೊಲೀಸ್ರು ಬಂದೊಡನೆ ಪರಾರಿ

    ಚಿಕ್ಕಬಳ್ಳಾಪುರ: 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಾಗ್ತೀನಿ ಅಂತ ಸ್ವಾಮೀಜಿಯೋರ್ವ ಗುಂಡಿ ತೆಗೆಸಿ ಸಕಲ ಸಿದ್ಧತೆ ಮಾಡಿಕೊಂಡು ಕೊನೆಗೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಗ್ರಾಮಕ್ಕೆ ಆಗಮಿಸಿದ್ದ ಸ್ವಾಮೀಜಿಯೋರ್ವ ಗ್ರಾಮಸ್ಥರ ಜಮೀನುವೊಂದರ ಬಳಿ 9 ಅಡಿ ಆಳದ ಬೃಹದಾಕಾರದ ಗುಂಡಿ ತೆಗೆಯಲಾಗಿತ್ತು. ಗುಂಡಿಯೊಳಗೆ ತಾನು 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿ ಆಗುವುದಾಗಿ ಪತ್ರಗಳನ್ನು ಹಂಚಿಕೆ ಮಾಡಿ ಪ್ರಚಾರ ಮಾಡಿದ್ದನು. ಅಂತೆಯೇ ಜೀವಂತ ಯೋಗ ಸಮಾಧಿಗೆ ಜಮೀನುವೊಂದರಲ್ಲಿ ಗುಂಡಿ ಅಗೆದು ಗುಂಡಿ ಮೇಲ್ಭಾಗವನ್ನ ನೀಲಗಿರಿ ಸೊಪ್ಪು ಚಾಪೆ ಹಾಕಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಿಕೊಂಡಿದ್ದ. ಇನ್ನೂ ಗುಂಡಿಯೊಳಗೆ ಇಳಿಯೋಕೆ ಅಂತ ಒಂದಷ್ಟು ಜಾಗ ಬಿಟ್ಟು ಏಣಿ ಹಾಕಿಕೊಂಡು ಸಕಲ ಸನ್ನದ್ಧನಾಗಿದ್ದನು.

    ಹೇಳಿದಂತೆ ಇಂದು ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ ಯೋಗ ಸಮಾಧಿಗೆ ಸ್ವಾಮೀಜಿ ಸಕಲ ತಯಾರಿಗಿದ್ದ. ಆದರೆ ಅಷ್ಟರಲ್ಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ವಾಮೀಜಿ ಕಾರ್ಯಕ್ಕೆ ಅನುಮತಿ ಪಡೆದಿಲ್ಲ. ಈ ರೀತಿ ಮಾಡುವ ಹಾಗಿಲ್ಲ ಮಾಡಿದ್ರೇ ಕೇಸ್ ದಾಖಲಿಸ್ತೀವಿ ಅಂತ ಎಚ್ಚರಿಕೆ ಕೊಟ್ಟ ಹಿನ್ನೆಲೆ ಸ್ವಾಮೀಜಿ ಅಲ್ಲಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ.

    ಸ್ವಾಮೀಜಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಹಂಚಿದ್ದ ಪಾಂಪ್ಲೇಟ್ ನಲ್ಲಿ ‘ತಾರನೇಯಿ ಸಾಯಿ ಆದ ನಾನು ದೇವರ ಅನುಗ್ರಹದಿಂದ, ಭೂಮಿಯೊಳಗೆ 9 ಅಡಿ ಆಳದಲ್ಲಿ 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಗುತ್ತಿದ್ದೇನೆ. ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಶಿವಲೋಕಂ ಸೃಷ್ಠಿಸಿ ಆಶ್ರಮ ಮಾಡಿ ಶಿವನ ದೇವಾಲಯ, ಆರ್ಯುವೇದ ಹಾಗೂ ಹೀಲಿಂಗ್ ಸೆಂಟರ್ ಸೇರಿದಂತೆ ಯೋಗ, ಧ್ಯಾನ ಶಿಬಿರಗಳನ್ನ ಆಯೋಜಿಸಲಾಗುವುದು ಅಂತ ಪ್ರಕಟಿಸಿ ಹಂಚಲಾಗಿತ್ತು.

    ಸದ್ಯ ಘಟನೆ ನಂತರ ಸ್ವಾಮೀಜಿ ಉತ್ತರಭಾರತ ಮೂಲದವನು ಅಂತ ಮಾಹಿತಿ ಸಿಕ್ಕಿದ್ದರೂ, ಈತ ಸ್ಪಷ್ಟವಾಗಿ ತೆಲುಗು ಭಾಷೆ ಮಾತನಾಡುತ್ತಿದ್ದ ಕಾರಣ ಆಂದ್ರಪ್ರದೇಶ ಮೂಲದವನು ಅಂತ ಹೇಳಲಾಗಿದೆ. ಇನ್ನೂ ಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್ ಎಂಬವರ ಮನೆಯಲ್ಲಿ ಕಳೆದ ಒಂದು ತಿಂಗಳಿನಿಂದ ವಾಸ್ತವ್ಯ ಹೂಡಿದ್ದು ಅವರದೇ ಜಮೀನಿನಲ್ಲಿ ಈ ರೀತಿ ಯೋಗ ಸಮಾಧಿಗೆ ಸ್ವಾಮೀಜಿ ಪ್ಲಾನ್ ಮಾಡಿ ಸದ್ಯ ಪೊಲೀಸರ ಭಯದಿಂದ ಪರಾರಿಯಾಗಿದ್ದಾನೆ.

  • ಕರ್ತವ್ಯದ ಸಮಯದಲ್ಲಿ ಇನ್ಮುಂದೆ ‘ವೈ’ ಬ್ರೇಕ್

    ಕರ್ತವ್ಯದ ಸಮಯದಲ್ಲಿ ಇನ್ಮುಂದೆ ‘ವೈ’ ಬ್ರೇಕ್

    ನವದೆಹಲಿ : ಕೆಲಸ ವೇಳೆ ನೌಕರರ ಒತ್ತಡ ಕಡಿಮೆಗೊಳಿಸಿ ಉತ್ಸಾಹ ತುಂಬುವ ನಿಟ್ಟಿನಲ್ಲಿ ಕರ್ತವ್ಯ ಸಮಯದ ವೇಳೆ ವೈ ಬ್ರೇಕ್ ಅಥಾವ ‘ಯೋಗ’ ಬ್ರೇಕ್ ನೀಡಲು ಚಿಂತಿಸಲಾಗುತ್ತಿದೆ. ಖ್ಯಾತ ಯೋಗಪಟುಗಳಿಂದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಕೇಂದ್ರ ಆಯುಷ್ ಸಚಿವಾಲಯದ ಸಹಭಾಗಿತ್ವದಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಯೋಜನೆಗಳು ಸಿದ್ದವಾಗಿದ್ದು ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಐದು ನಿಮಿಷದ ಯೋಗ ವಿರಾಮ ನೀಡಲಾಗುವುದು. ಈ ಸಂಬಂಧ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಪತ್ರ ಬರೆದಿರುವ ಆಯುಷ್ ಇಲಾಖೆ ವೈ ಬ್ರೇಕ್ ವ್ಯವಸ್ಥೆ ಜಾರಿ ಮಾಡುವಂತೆ ಮನವಿ ಮಾಡಿದೆ.

    ಈಗಾಗಲೇ ಟಾಟಾ ಕೆಮಿಕಲ್ಸ್, ಎಕ್ಸಿಸ್ ಬ್ಯಾಂಕ್ ಸೇರಿ ಹದಿನೈದು ಕಾರ್ಪೋರೇಟ್ ಕಂಪನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು ಸ್ವಯಂ ಪ್ರೇರಣೆಯಿಂದ ನೌಕರಿಗೆ ಯೋಗ ಬ್ರೇಕ್ ಕೊಡಲು ಒಪ್ಪಿಗೆ ಸೂಚಿಸಿದೆ. ಪ್ರಾಯೋಗಿಕವಾಗಿ ಈ ವ್ಯವಸ್ಥೆ ಶುರುವಾಗಿದ್ದು ಮುಂದಿನ ದಿನಗಳಲ್ಲಿ ವೈ ಬ್ರೇಕ್ ನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ.

  • ಯೋಗ ಭಾರತೀಯ ಪರಂಪರೆಯ ತಾಯಿ ಬೇರು: ಹುಕ್ಕೇರಿ ಸ್ವಾಮೀಜಿ

    ಯೋಗ ಭಾರತೀಯ ಪರಂಪರೆಯ ತಾಯಿ ಬೇರು: ಹುಕ್ಕೇರಿ ಸ್ವಾಮೀಜಿ

    ಹಾವೇರಿ: ಯೋಗವು ಭಾರತೀಯ ಪರಂಪರೆಯ ತಾಯಿ ಬೇರಾಗಿದ್ದು, ಭಾರತವು ವಿಶ್ವಕ್ಕೆ ನೀಡಿದ ಅತೀ ಪ್ರಮುಖ ಕೊಡುಗೆ. ಯೋಗವು ನಮ್ಮಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹುಕ್ಕೇರಿ ಮಠ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಯೋಗ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಯೋಗಾಸನ ಚಾಂಪಿಯನ್‍ಶಿಫ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಸದಾಶಿವ ಸ್ವಾಮೀಜಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು.

    ಪ್ರಾಚೀನ ಕಾಲದಲ್ಲಿ ಸಂತ ಮಹಾತ್ಮರು ಆರಂಭಿಸಿದ ಯೋಗವು ಇಂದು ಜನ ಸಾಮಾನ್ಯರಿಗೂ ವಿಸ್ತರಿಸಿದೆ. ಯಾವುದೇ ವಯೋಮಾನದವರು ಕೂಡಾ ಯೋಗವನ್ನು ಮಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹೊಂದಬಹುದು ಎಂದು ಸ್ವಾಮೀಜಿ ಹೇಳಿದರು.

    ಎಲ್ಲ ಭಾಗ್ಯಗಳಿಗಿಂತ ಆರೋಗ್ಯದ ಭಾಗ್ಯವೇ ದೊಡ್ಡದು ಎನ್ನುವಂತೆ ಹಿತ ಮಿತವಾದ ಊಟ, ಚಟುವಟಿಕೆಯುಕ್ತ ಜೀವನ ಹಾಗೂ ಯೋಗವನ್ನು ಪ್ರತಿನಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತೆ ಅಳವಡಿಸಿಕೊಳ್ಳಬೇಕು. ಆಗ ರೋಗ ಮುಕ್ತ ಬದುಕನ್ನು ಹಾಗೂ ರೋಗ ಮುಕ್ತ ಸಮಾಜವನ್ನು ನಿರ್ಮಿಸಬಹುದು ಎಂದು ಕಿವಿಮಾತು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಭಾರತ ಯೋಗ ಫೆಡರೇಶನ್‍ನ ಉಪಾಧ್ಯಕ್ಷ ಗಂಗಾಧರಪ್ಪ ಅವರು ಮಾತನಾಡಿ, ಇಂದು ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಬಯಸುತ್ತಿದ್ದು, ಯೋಗ ಅಂತರಾಷ್ಟ್ರೀಯ ಸ್ಪರ್ಧೆಯಾಗಿ ಮಾರ್ಪಾಡಾಗಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸುವುದರ ಜೊತೆಗೆ ಒಲಿಂಪಿಕ್ಸ್ ನಲ್ಲಿ ಯೋಗವನ್ನು ಸೇರ್ಪಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

    ಯೋಗ ಚಾಂಪಿಯನ್‍ಶಿಪ್‍ನಲ್ಲಿ 30 ಜಿಲ್ಲೆಗಳಿಂದ ಒಟ್ಟು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟನ ಶಶಿಕಾಂತ ಜೈನ್ ಜಾತ್ರಾ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಾವೇರಿ, ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ನ ಶಿವಬಸಪ್ಪ ಮುಷ್ಟಿ, ವೀರಣ್ಣ ಅಂಗಡಿ, ಎಂ.ಸಿ ಮಳಿಮಠ, ಬಿ. ಬಸವರಾಜ, ಮತ್ತಿತರರು ಉಪಸ್ಥಿತರಿದ್ದರು. ಯೋಗ ಸಂಯೋಜಕರಾದ ಪ್ರೇಮಕುಮಾರ ಮುದ್ದಿ ಕಾರ್ಯಕ್ರಮ ನಿರ್ವಹಿಸಿದರು.

  • ಟ್ರಾಫಿಕ್ ತಲೆನೋವಿನಿಂದ ರಿಲ್ಯಾಕ್ಸ್ ಆಗಲು ಸಂಚಾರಿ ಪೊಲೀಸರ ಯೋಗ, ಬಾಡಿ ಮಸಾಜ್

    ಟ್ರಾಫಿಕ್ ತಲೆನೋವಿನಿಂದ ರಿಲ್ಯಾಕ್ಸ್ ಆಗಲು ಸಂಚಾರಿ ಪೊಲೀಸರ ಯೋಗ, ಬಾಡಿ ಮಸಾಜ್

    – ಠಾಣೆಯಲ್ಲೇ ಸಿಬ್ಬಂದಿಯ ಯೋಗಾಭ್ಯಾಸ

    ಬೆಂಗಳೂರು: ಟ್ರಾಫಿಕ್ ಕ್ಲಿಯರ್ ಮಾಡಿ ರೋಸಿಹೋಗಿರುವ ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರು ರಿಲ್ಯಾಕ್ಸ್ ಆಗಲು ಪ್ರತಿದಿನ ಬೆಳಗ್ಗೆ ಠಾಣೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

    ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರತಿದಿನ ಯೋಗ ಮಾಡುತ್ತಿದ್ದಾರೆ. ಖ್ಯಾತ ಯೋಗತಜ್ಞ ರಾಮಕೃಷ್ಣ ಅವರಿಂದ ಸಿಬ್ಬಂದಿಗೆ ಯೋಗ ತರಬೇತಿ ನೀಡಲಾಗುತ್ತಿದೆ. ಕೆಲಸದಿಂದ ದೇಹದ ಮೇಲಾಗುವ ಒತ್ತಡ ಕಡಿಮೆ ಮಾಡಲು ಬನಶಂಕರಿ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಕೃಷ್ಣ ನೇತೃತ್ವದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ.

    45 ದಿನಗಳ ಕಾಲ ಬನಶಂಕರಿ ಸಂಚಾರಿ ಠಾಣೆಯಲ್ಲೇ ಯೋಗಾಭ್ಯಾಸ ಮಾಡಲಾಗುತ್ತದೆ. ಇದರ ಜೊತೆಗೆ ಪಿಸಿಯೋಥೆರಪಿ ಮೂಲಕ ಸಿಬ್ಬಂದಿಗೆ ಬಾಡಿ ಮಸಾಜ್ ಕೂಡ ಮಾಡಲಾಗುತ್ತಿದೆ. ಟ್ರಾಫಿಕ್ ಕ್ಲೀಯರ್ ಮಾಡಲು ನಿಂತು ಸಿಬ್ಬಂದಿಗೆ ತೀವ್ರ ಕಾಲು ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿನಿತ್ಯ ನುರಿತ ವೈದ್ಯರಿಂದ ಸಿಬ್ಬಂದಿಗೆ ಪಿಸಿಯೋಥೆರಪಿ ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    -ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಅಕ್ರಮ ದಂಧೆ

    ಚಿತ್ರದುರ್ಗ: ವೈದ್ಯೋ ನಾರಾಯಣೋ ಹರಿ ಅಂತಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ದೊಡ್ಡ ಅಕ್ರಮ ದಂಧೆ ನಡೆಯುತ್ತಿದೆ.

    ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯ ಆಯುಷ್ ಡಾಕ್ಟರ್ ಎ.ಎನ್ ಸುರೇಶ್ ಎಂಬ ಆಸಾಮಿ, ಹಣಕ್ಕಾಗಿ ತಾನೊಬ್ಬ ವೈದ್ಯ ಅನ್ನೋದನ್ನೇ ಮರೆತು ಕ್ಯಾನ್ಸರ್ ರೋಗಿಗಳಿಗೆ ಪಾರಂಪರಿಕಚಿಕಿತ್ಸೆ ಕೊಡುತ್ತೇವೆ ಎಂದು ಅವರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ. ಕುಣಿಗಲ್‍ನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೆಸರಲ್ಲಿ ಖಾಸಗಿ ವಾಹಿನಿಗಳಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ತಾ, ಕ್ಯಾನ್ಸರ್ ರೋಗಿಗಳನ್ನು ಚಿತ್ರದುರ್ಗದ ಯೋಗಾವನ ಬೆಟ್ಟಕ್ಕೆ ಸೆಳೆಯುತ್ತಾನೆ. ಅಲ್ಲದೇ ಇವರ ಅಕ್ರಮ ಬಯಲಾಗದಿರಲಿ ಎಂದು ನಕಲಿ ಖಾವಿಧಾರಿಗಳ ಬೆಂಗಾವಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇಲ್ಲಸಲ್ಲದ ಚಿಕಿತ್ಸೆ ನೀಡುತ್ತಿದ್ದಾನೆ ಆರೋಪಗಳು ಕೇಳಿ ಬಂದಿವೆ.

    ಯೋಗದಿಂದ ಕ್ಯಾನ್ಸರ್ ಗುಣಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳೋ ಈ ದಂಧೆಕೋರರ ಮಾತಿಗೆ ಮರುಳಾದ ಹುಬ್ಬಳ್ಳಿ ಮೂಲದ ಬಾಲರಾಜ್ ಕುಮಾರ್ ಎಂಬ ರೋಗಿಯಿಂದ 30 ಸಾವಿರ ರೂಪಾಯಿ ಹಣ ಪಡೆದು, ಆರು ತಿಂಗಳಿಂದ ಅಲ್ಲೇ ಉಳಿದರೂ ರೋಗ ಗುಣವಾಗದೇ ಆತ ಸಾವಿನಂಚಿಗೆ ತಲುಪಿದ್ದಾನೆ. ಈ ಬಗ್ಗೆ ಕೇಳಲು ಬಂದಿದ್ದ ಬಾಲರಾಜ್ ಕುಟುಂಬದ ಮೇಲೆ ಡಾಕ್ಟರ್ ಸುರೇಶನ ಚೇಲಗಳು ದೌರ್ಜನ್ಯವೆಸಗಲು ಮುಂದಾಗಿದ್ದರು. ಆಗ ಆಕ್ರೋಶಗೊಂಡ ಕ್ಯಾನ್ಸರ್ ರೋಗಿ ಅಲ್ಲಿನ ನಕಲಿ ಖಾವಿಧಾರಿಗಳಿಗೆ ಭರ್ಜರಿ ಗೂಸಕೊಟ್ಟು ತನ್ನ ಕೋಪವನ್ನು ಈಡೇರಿಸಿಕೊಂಡಿದ್ದಾನೆ.

    ಈ ಅಕ್ರಮ ಸುಮಾರು ನಾಲ್ಕು ವರ್ಷಗಳಿಂದ ನಡೆಯುತಿದ್ದರೂ ಸಹ ಆರೋಗ್ಯ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇನ್ನಾದರೂ ಆರೋಗ್ಯ ಸಚಿವರು ಈ ಅಕ್ರಮಕ್ಕೆ ಹಾಕುತ್ತಾರ ಬ್ರೇಕ್ ಕಾದು ನೋಡಬೇಕಿದೆ.

  • ತಲೆ ಕೆಳಗಾಗಿ ಯೋಗ ಮಾಡಲು ಹೋಗಿ 80 ಅಡಿ ಎತ್ತರದಿಂದ ಬಿದ್ದ ಯುವತಿ

    ತಲೆ ಕೆಳಗಾಗಿ ಯೋಗ ಮಾಡಲು ಹೋಗಿ 80 ಅಡಿ ಎತ್ತರದಿಂದ ಬಿದ್ದ ಯುವತಿ

    – 110 ಮೂಳೆ ಮುರಿತ, ಯುವತಿ ಸ್ಥಿತಿ ಗಂಭೀರ

    ಮೆಕ್ಸಿಕೋ: ಯುವತಿಯೊಬ್ಬಳು ಬಾಲ್ಕನಿಯಲ್ಲಿ ತಲೆ ಕೆಳಗಾಗಿ ಯೋಗ ಮಾಡಲು ಹೋಗಿ, ಆಯತಪ್ಪಿ 80 ಅಡಿ ಮೇಲಿಂದ ಕೆಳಗೆ ಬಿದ್ದು, 110 ಮೂಳೆಗಳನ್ನು ಮುರಿದುಕೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

    ಅಲೆಕ್ಸಾ ಟೆರಾಜಾ(23) ತಲೆ ಕೆಳಗಾಗಿ ಯೋಗ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾಳೆ. ಅಲೆಕ್ಸಾ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿರುವ ತನ್ನ ಮನೆಯ ಬಾಲ್ಕನಿಯ ಕಂಬಿಯ ಮೇಲೆ ತಲೆ ಕೆಳಗೆ ಮಾಡಿ, ಕಾಲಿನಿಂದ ಕಂಬಿ ಹಿಡಿದು ಸಾಹಸ ಮಾಡುತ್ತಾ ಯೋಗ ಮಾಡಲು ಹೋಗಿದ್ದಾಳೆ. ಆದರೆ ಈ ವೇಳೆ ಆಯತಪ್ಪಿ ಅಲೆಕ್ಸಾ ಬಾಲ್ಕನಿಯಿಂದ 80 ಅಡಿ ಕೆಳಗೆ ಬಿದ್ದಿದ್ದಾಳೆ. ಪರಿಣಾಮ ಆಕೆಯ ದೇಹದ 110 ಮೂಳೆಗಳು ಮುರಿದಿದೆ, ಜೊತೆಗೆ ತಲೆಗೆ ಕೂಡ ಗಂಭಿರವಾಗಿ ಪೆಟ್ಟಾಗಿದೆ.

    ಈ ಅಪಾಯಕಾರಿ ಸಾಹಸವನ್ನು ಅಲೆಕ್ಸಾ ಮಾಡುತ್ತಿರುವ ಫೋಟೋವನ್ನು ಆಕೆಯ ಸ್ನೇಹಿತ ಕ್ಲಿಕ್ಕಿಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.

    ಯುವತಿ ಕೆಳಗೆ ಬಿದ್ದ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ತೀವ್ರ ಗಾಯಗೊಂಡ ಕಾರಣಕ್ಕೆ ವೈದ್ಯರು ಆಕೆಯ ಶಸ್ತ್ರಚಿಕಿತ್ಸೆ ಕೂಡ ಮಾಡಿದ್ದಾರೆ. ಬಹಳ ಎತ್ತರದಿಂದ ಬಿದ್ದ ಪರಿಣಾಮ ಆಕೆಯ ಮಂಡಿ ಮತ್ತು ಪಾದದ ಕೀಲುಗಳಿಗೆ ಹಾನಿಯಾಗಿತ್ತು. ಆದ್ದರಿಂದ ಅವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಣೆ ಮಾಡಲಾಗಿದೆ. ಹೀಗಾಗಿ ಆಕೆ ಮೂರು ವರ್ಷ ನಡೆದಾಡಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಯುವತಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಬರೋಬ್ಬರಿ 11 ಗಂಟೆ ಸಮಯ ತೆಗೆದುಕೊಂಡಿದ್ದಾರೆ.

    ಯುವತಿ ಕೆಳಗೆ ಬಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ಹೀಗಾಗಿ ಆಕೆಗೆ ರಕ್ತದ ಅವಶ್ಯಕತೆ ಇದೆ. ಆದ್ದರಿಂದ ಅಲೆಕ್ಸಾ ಕುಟುಂಬಸ್ಥರು ರಕ್ತದಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ನೂರು ಮಂದಿ ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ. ಸದ್ಯ ಯುವತಿ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.