Tag: Yodha

  • ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಚಿಕ್ಕೋಡಿ: ನಾಲ್ಕು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದ ಬಿಎಸ್‍ಎಫ್ ಯೋಧ ಮಾನಸಿಕ ಅಸ್ವಸ್ಥನಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಸತ್ಯಪ್ಪ ಸಿದ್ದಪ್ಪ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾನೆ. ಬಳಿಕ ತನ್ನ ಮೇಲೆಯೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: 371 ಜೆ ಅನುಷ್ಠಾನಕ್ಕೆ ಆಗ್ರಹ: ರಾಯಚೂರು ನಗರ ಬಂದ್‍ಗೆ ಉತ್ತಮ ಪ್ರತಿಕ್ರಿಯೆ 

    ಸತ್ಯಪ್ಪ ವೈಯಕ್ತಿಕವಾಗಿ ತುಂಬಾ ಸಾಲ ಮಾಡಿಕೊಂಡಿದ್ದನು. ಅಲ್ಲದೆ ಕೌಟುಂಬಿಕ ವಿಚಾರದಲ್ಲಿಯೂ ನೆಮ್ಮದಿ ಇಲ್ಲದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಈ ಹಿನ್ನೆಲೆ ಅವನಿಗೆ ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು ಎಂಬ ಮಾಹಿತಿ ಸಹ ತಿಳಿದುಬಂದಿದೆ.

    ಕಾರಣವೇನು?
    ಕಳೆದ ವರ್ಷ ಅಂದಾಜು 10 ಲಕ್ಷ ರೂ. ಸಾಲ ಮಾಡಿದ್ದ ಸತ್ಯಪ್ಪ ಸಾಲ ಮರಳಿ ಪಾವತಿಸುವ ಚಿಂತೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ. ಅವನ ವರ್ತನೆ ಕಂಡು ಕುಟುಂಬಸ್ಥರು ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಮಾನಸಿಕ ವೈದ್ಯರಿಂದ ಕೌನ್ಸಲಿಂಗ್ ಕೂಡ ಮಾಡಿಸಿದ್ದರು. ನಂತರ ಯೋಧ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್‍ಎಫ್ ಕಚೇರಿಗೂ ಈ ಕುರಿತು ವರದಿಗಳನ್ನು ನೀಡಲಾಗಿತ್ತು.

    ಇಷ್ಟೆಲ್ಲ ವರದಿ ನೀಡಿದರೂ ಬಿಎಸ್‍ಎಫ್ ಅಧಿಕಾರಿಗಳು ಮರಳಿ ಸತ್ಯಪ್ಪನನ್ನ ಕಾರ್ಯ ನಿಯೋಜನೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮತ್ತೆ ರಜೆ ನೀಡುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ರಜೆ ನೀಡದ್ದಕ್ಕೆ ಸತ್ಯಪ್ಪ ಮಾನಸಿಕವಾಗಿ ನೊಂದಿದ್ದ ಎನ್ನುವ ಮಾಹಿತಿಯನ್ನು ಮೃತ ಯೋಧನ ಸಂಬಂಧಿಗಳು ನೀಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

    ಮಾನಸಿಕ ಅಸ್ವಸ್ಥವಾಗಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ಸತ್ಯಪ್ಪ ಭಾನುವಾರ ಪಂಜಾಬ್‍ನ ಅಮೃತಸರ ಅಟ್ಟಾರಿ ಗಡಿಯ ಖೇಸರ್ ಕ್ಯಾಂಪ್ ನಲ್ಲಿ ನಾಲ್ಕು ಯೋಧರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಮೃತ ಯೋಧನ ಪಾರ್ಥಿವ ಶರೀರದ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ನಿವೃತ್ತಿಯಾಗಿ ಗ್ರಾಮಕ್ಕೆ ಆಗಮಿಸಿದ ವೀರ ಯೋಧನಿಗೆ ಅದ್ಧೂರಿ ಸ್ವಾಗತ

    ನಿವೃತ್ತಿಯಾಗಿ ಗ್ರಾಮಕ್ಕೆ ಆಗಮಿಸಿದ ವೀರ ಯೋಧನಿಗೆ ಅದ್ಧೂರಿ ಸ್ವಾಗತ

    ವಿಜಯಪುರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಊರಿಗೆ ಬಂದ ವೀರ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.

    ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ರಾಘವೇಂದ್ರ ಸಂಗಪ್ಪ ಕ್ಷತ್ರಿಯ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ನಾಲತವಾಡ ಪಟ್ಟಣದ ವೀರೇಶ್ವರ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಬಸವೇಶ್ವರ ಸರ್ಕಲ್ ಮೂಲಕ ಗಣಪತಿ ಸರ್ಕಲ್ ವರೆಗೂ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

    ನಂತರ ವೀರೇಶ್ವರ ಮಠದಲ್ಲಿ ರಾಘವೇಂದ್ರ ಕ್ಷತ್ರಿಯ ಅವರಿಗೆ ಸನ್ಮಾನ ಮಾಡಿ, ಇನ್ನುಳಿದ ವೀರ ಯೋಧರಿಗೆ ಲಕ್ಷೀ ವೇಂಕಟೇಶ್ವರ ದೇವಸ್ಥಾನದಲ್ಲಿ ಸನ್ಮಾನ ಮಾಡಲಾಯಿತು. ನಿವೃತ್ತಿಗೊಂಡು ಊರಿಗೆ ಆಗಮಿಸಿದ ಯೋಧನಿಗೆ ಮೆರವಣಿಗೆ ವೇಳೆ ಸುಮಂಗಲೆಯರು ಆರತಿ ಎತ್ತಿದರು. ಇನ್ನೊಂದೆಡೆ ಸ್ಥಳೀಯರು ಹೂಮಳೆ ಸುರಿಸಿ ಸ್ವಾಗತಿಸಿದರು.

  • 20 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಅದ್ಧೂರಿ ಸ್ವಾಗತ

    20 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಅದ್ಧೂರಿ ಸ್ವಾಗತ

    ಬೆಂಗಳೂರು: ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾರಪ್ಪನಪಾಳ್ಯದಲ್ಲಿ ಯೋಧನಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಜೈ ಜವಾನ್ ಜೈ ಕಿಸಾನ್ ಎಂಬ ಹೇಳಿಕೆಗೆ ನಿವೃತ್ತ ಯೋಧ ಎಂ.ಎ ವೆಂಕಟೇಶರಿಗೆ ಊರಿನ ಗ್ರಾಮಸ್ಥರು ಅದ್ಧೂರಿ ಸನ್ಮಾನ ನಡೆಸಿದರು.

    20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್ ಅವರು ಹುಟ್ಟಿನಿಂದಲೂ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ರೌಢ ಶಿಕ್ಷಣದವರೆಗೆ ಗ್ರಾಮೀಣ ಪ್ರದೇಶವಾದ ಮಾರಪ್ಪನ ಪಾಳ್ಯಗ್ರಾಮದಲ್ಲಿ ಮುಗಿಸಿ, ನಂತರ ಸೇನೆಗೆ ಸೇರಿದ್ದರು.

    ವೆಂಕಟೇಶ್ ಅವರು ಸುಮಾರು 20 ವರ್ಷ ವಿವಿಧ ಪ್ರದೇಶಗಳಾದ ಪಂಜಾಬ್, ಅಸ್ಸಾಂ, ಜಮ್ಮು- ಕಾಶ್ಮೀರ ಇನ್ನೀತರಡೆ ಸೇವೆ ಸಲ್ಲಿಸಿದ ನಂತರ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದರು. ವೆಂಕಟೇಶ್ ಅವರಿಗೆ ಅದ್ಧೂರಿ ಸ್ವಾಗತದ ಮೂಲಕ ಎರಡು ಕಿಲೋಮೀಟರ್ ತೆರೆದ ಜೀಪಿನಲ್ಲಿ ನಿವೃತ್ತಿ ನಂತರ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

    ಗ್ರಾಮದ ದಾರಿಯುದ್ಧಕ್ಕೂ ರಾಷ್ಟ್ರೀಯ ಭಾವೈಕ್ಯತೆ ಗೀತೆಗಳನ್ನು ಹಾಕಿಕೊಂಡು, ಹೂವಿನ ಮೂಲಕ ಪುಷ್ಪಾರ್ಚನೆ ಮಾಡಿ ಯೋಧನಿಗೆ ಸ್ವಾಗತಿಸಲಾಯಿತು. ಊರಿನಲ್ಲಿ ಬೃಹತ್ ಆದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ದೇಶ ಕಾಯುವ ಯೋಧನಿಗೆ, ಅದ್ಧೂರಿ ಸ್ವಾಗತವನ್ನು ಕಡಗ ಮತ್ತು ಶಾಲು ಹೊದಿಸಿ ಭವ್ಯ ಸ್ವಾಗತ ನೀಡಲಾಯಿತು.

  • ವೀರ ಯೋಧನ ಅಂತ್ಯಕ್ರಿಯೆ – ಗ್ರಾಮದಲ್ಲಿ ಜನಸಾಗರ

    ವೀರ ಯೋಧನ ಅಂತ್ಯಕ್ರಿಯೆ – ಗ್ರಾಮದಲ್ಲಿ ಜನಸಾಗರ

    – ದಾರಿಯುದ್ದಕ್ಕೂ ರಂಗೋಲಿ, ಹೂವು

    ಬೆಳಗಾವಿ: ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ವೀರ ಯೋಧ ರಾಹುಲ್ ಸುಳಗೇಕರ್‍ಗಾಗಿ ಇಡೀ ಗ್ರಾಮವೆ ಕಂಬನಿ ಮಿಡಿದಿದೆ. ಯೋಧನ ಪಾರ್ಥೀವ ಶರೀರ ಸಾಗುವ ಮಾರ್ಗದುದ್ದಕ್ಕೂ ಹೂ, ರಂಗೋಲಿಯಿಂದ ಅಲಂಕರಿಸಿ ಗೌರವವನ್ನು ಜನ ಸಲ್ಲಿಸಿದ್ದಾರೆ.

    ಗ್ರಾಮಸ್ಥರು ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸುತ್ತಿದ್ದರೆ, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ದಾರಿಯುದ್ದಕ್ಕೂ ರಾಹುಲ್ ಸುಳಗೇಕರ್ ‘ಅಮರ್ ರಹೇ ಅಮರ್ ರಹೇ’ ಎಂಬ ಘೋಷಣೆ ಮೊಳಗಿತ್ತು.

    ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಸುಳಗೇಕರ್(22) ಯೋಧ ಜಮ್ಮುವಿನ ಪುಂಚ್ ಪ್ರದೇಶದಲ್ಲಿ ಗುರುವಾರ ರಾತ್ರಿ ಉಗ್ರರ ಜೊತೆಗೆ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ್ದರು. ಇಂದು ಯೋಧನ ಪಾರ್ಥೀವ ಶರೀರ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್, ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ ಗೌರವ ಸಲ್ಲಿಸಿದರು.

    ನಂತರ ಹಿಂಡಲಗಾ ಗ್ರಾಮದಿಂದ ಯೋಧನ ಸ್ವಗ್ರಾಮ ಉಚಗಾವಿ ವರೆಗೆ ಭವ್ಯ ಮರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಜನ ಪಾಲ್ಗೊಂಡು ಗೌರವ ಸಲ್ಲಿಸಿದರು. ಯೋಧನ ಪಾರ್ಥಿವ ಶಶೀರ ಸಾಗುವ ರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದ್ದರು. ತ್ರೀವರ್ಣ ಧ್ವಜ ಹೋಲುವ ಹೂವಿನ ಅಲಂಕಾರ ಮಾಡಲಾಗಿತ್ತು. ರಜೆ ಇದ್ದರೂ ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಬಂದು ವೀರ ಯೋಧ ಅಮರ್ ರಹೇ ಅಮರ್ ರಹೇ ಎಂದು ಘೋಷಣೆ ಕೂಗಿದರು.

    ಯೋಧನ ಅಂತ್ಯಕ್ರಿಯೆ ವೇಳೆಯಲ್ಲಿ ಮರಾಠ ಲಘು ಪದಾತಿದಳ ಸೈನಿಕರು ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಕೇಂದ್ರ ಸಚಿವ ಸುರೇಶ್ ಅಂಗಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅನಿಲ್ ಬೆನಕೆ ಸೇರಿ ಅನೇಕರು ಪಾಲ್ಗೊಂಡು ಗೌರವ ಸಲ್ಲಿಸಿದರು.

    ಮೊದಲ ಪ್ರಯತ್ನದಲ್ಲೇ ಸೇನೆ ಸೇರ್ಪಡೆ
    ವೀರಯೋಧ ರಾಹುಲ್ ಸುಳಗೇಕರ್ ಮೊದಲ ಪ್ರಯತ್ನದಲ್ಲಿಯೇ ಸೇನೆ ಸೇರಿದ್ದರು. 2015ರ ಮರಾಠ ಲಘು ಪದಾತಿ ದಳದಲ್ಲಿ ಸೇರಿ ರಾಜಸ್ಥಾನದಲ್ಲಿ ತರಬೇತಿ ಪಡೆದಿದ್ದರು. ಅಲ್ಲಿಂದ ಸ್ವಲ್ಪ ತಿಂಗಳಗಳ ಬಳಿಕ ಜಮ್ಮುವಿನ ಕೃಷ್ಣಾ ಘಾಟಿಯಲ್ಲಿಯೇ ಗಡಿ ಕಾವಲಿಗೆ ನಿಯೋಜನೆಗೊಂಡಿದ್ದರು. ಗುರುವಾರ ರಾತ್ರಿ ಜಮ್ಮುವಿನ ಪೂಂಚ್ ಪ್ರದೇಶದಲ್ಲಿ ಉಗ್ರರ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ವೀರ ಮರಣ ಹೊಂದಿದ್ದರು.

    ರಾಹುಲ್ ಸುಳಗೇಕರ್ ಅವರ ಇಡೀ ಕುಟುಂಬವೇ ದೇಶ ಸೇವೆಗೆ ನಿಂತಿದೆ. ರಾಹುಲ್ ತಂದೆ ಬೈರು ಸುಳಗೇಕರ್ ಭಾರತೀಯ ಸೇನೆಯಲ್ಲಿ 19 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ತಮ್ಮ ಇಬ್ಬರು ಮಕ್ಕಳಾದ ರಾಹುಲ್, ಮಯೂರ್ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಓರ್ವ ಮಗ ವೀರ ಮರಣಹೊಂದಿದ್ದು, ಇಡೀ ಕುಟುಂಬಕ್ಕೆ ದೊಡ್ಡ ಆಘಾತವನ್ನು ಉಂಟುಮಾಡಿದೆ.

    ರಾಹುಲ್ ಸುಳಗೇಕರ್ ಈ ಬಾರಿ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ತಾಯಿ 4 ದಿನಗಳ ಹಿಂದೆ ಸಿಹಿ ತಿನಿಸು ತಯಾರಿಸಿ ಮಗನಿಗಾಗಿ ಇಟ್ಟಿದ್ದರು. ಆದರೆ ಈ ತಿಂಡಿ ಆತನ ಕೈ ಸೇರುವ ಮೊದಲೇ ತಾಯಿಗೆ ಮಗನ ಸಾವಿನ ಕಹಿ ಸುದ್ದಿ ಸಿಕ್ಕಿದೆ.

  • ಕಣ್ಣು ದಾನಗೈದು ಸಾವಿನಲ್ಲೂ ಸಾರ್ಥಕತೆ ಮೆರೆದ ಹಾವೇರಿಯ ಹುತಾತ್ಮ ಯೋಧ

    ಕಣ್ಣು ದಾನಗೈದು ಸಾವಿನಲ್ಲೂ ಸಾರ್ಥಕತೆ ಮೆರೆದ ಹಾವೇರಿಯ ಹುತಾತ್ಮ ಯೋಧ

    ಹಾವೇರಿ: ಪುಲ್ವಾಮಾದಲ್ಲಿ ನಡೆದ ಸರ್ಚ್ ಅಪರೇಶನ್ ವೇಳೆ ಉಗ್ರರ ದಾಳಿಯಿಂದಾಗಿ ಗಾಯಗೊಂಡಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಯೋಧ ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು. ಇಂದು ಅವರ ಅಂತ್ಯಕ್ರಿಯೆ ನೆರವೇರಿದ್ದು, ಯೋಧ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ 26 ವರ್ಷದ ಶಿವಲಿಂಗೇಶ್ವರ ಪಾಟೀಲ ಏಳು ವರ್ಷಗಳ ಹಿಂದೆ ದೇಶಸೇವೆಗೆ ಸೇರಿದ್ದರು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 14ರಂದು ಪುಲ್ವಾಮಾದ ಸರ್ಚ್ ಅಪರೇಶನ್ ನಲ್ಲಿ ಭಾಗವಹಿಸಿದ್ದ ಶಿವಲಿಂಗೇಶ್ವರ ಮೇಲೆ ಉಗ್ರರು ದಾಳಿ ಮಾಡಿದ್ದರು. ಉಗ್ರರ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶಿವಲಿಂಗೇಶ್ವರ ಅವರನ್ನು ದೆಹಲಿಯ ಆರ್.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಶಿವಲಿಂಗೇಶ್ವರ ಮೇ 25ರಂದು ಮೃತಪಟ್ಟಿದ್ದರು.

    ಶಿವಲಿಂಗೇಶ್ವರ ಅವರು ಸಾವಿನ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ಏಕೆಂದರೆ ಶಿವಲಿಂಗೇಶ್ವರ ಸೈನ್ಯದಲ್ಲಿದ್ದಾಗ ಸಾವಿನ ನಂತರ ಗೆಳೆಯರ ಬಳಿ ನೇತ್ರದಾನದ ಬಗ್ಗೆ ಹೇಳಿಕೊಂಡಿದ್ದರು. ಅದರಂತೆಯೇ ಶಿವಲಿಂಗೇಶ್ವರ ಅವರು ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಕಣ್ಣಿಲ್ಲದವರಿಗೆ ಕಣ್ಣಾಗಿದ್ದಾರೆ.

    ಶಿವಲಿಂಗೇಶ್ವರ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಹಾವೇರಿ ನಗರದ ನಿವಾಸಕ್ಕೆ ಆಗಮಿಸಿತ್ತು. ಕುಟುಂಬಸ್ಥರು ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದಲ್ಲಿ ಮೆರವಣಿಗೆ ಮಾಡಿದ ನಂತರ ಯೋಧ ಶಿವಲಿಂಗೇಶ್ವರ ಹುಟ್ಟೂರು ಗುಂಡೇನಹಳ್ಳಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು. ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅದಾದ ಮೇಲೆ ಹುತಾತ್ಮ ಯೋಧ ಹುಟ್ಟಿದ ಮನೆಗೆ ಒಯ್ದು ಪೂಜೆ ಸಲ್ಲಿಸಿ ನಂತರ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಶಾಸಕರು, ಮಾಜಿ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ನೂರಾರು ಜನರು ಆಗಮಿಸಿ ಪಾರ್ಥಿವ ಶರೀರಕ್ಕೆ ಹೂಗುಚ್ಛವಿರಿಸಿ ಅಂತಿಮ ದರ್ಶನ ಪಡೆದುಕೊಂಡರು.

    ಹುತಾತ್ಮ ಯೋಧ ಶಿವಲಿಂಗೇಶ್ವರ ಸಾವು ಗ್ರಾಮದ ಮಕ್ಕಳು, ಮಹಿಳೆಯರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿತ್ತು. ಪ್ರತಿಯೊಬ್ಬರು ಸೆಲ್ಯೂಟ್ ಮಾಡುತ್ತಾ “ಶಿವಲಿಂಗೇಶ್ವರ ಅಮರ್ ರಹೇ, ಅಮರ್ ರಹೇ” ಎಂದು ಜೈಕಾರ ಹಾಕುತ್ತಿದ್ದರು. ಹುತಾತ್ಮ ಯೋಧನ ತಾಯಿ ಸಹ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಬೇಕು ಎಂದು ಮನವಿ ಮಾಡಿಕೊಂಡರು.

  • ಉಗ್ರರ ದಾಳಿಗೆ ಗಾಯಗೊಂಡಿದ್ದ ಹಾವೇರಿಯ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮ

    ಉಗ್ರರ ದಾಳಿಗೆ ಗಾಯಗೊಂಡಿದ್ದ ಹಾವೇರಿಯ ಯೋಧ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮ

    ಹಾವೇರಿ: ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಯೋಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ವಿರುದ್ಧ ಸರ್ಚ್ ಆಪರೇಷನ್ ನಡೆಸಲಾಗಿತ್ತು. ಈ ಕಾರ್ಯಾಚರಣೆ ವೇಳೆ ಉಗ್ರರ ದಾಳಿಗೆ ಯೋಧ ಶಿವಲಿಂಗೇಶ್ವರ ಪಾಟೀಲ(26) ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಯೋಧ ದೆಹಲಿಯ ಆರ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ತಮ್ಮ ಕೊನೆಯುಸಿರು ಎಳೆದಿದ್ದಾರೆ.

    2012ರಲ್ಲಿ ಭಾರತೀಯ ಸೇನೆಗೆ ಶಿವಲಿಂಗೇಶ್ವರ ಪಾಟೀಲ ಅವರು ಸೇರಿದ್ದರು. 6 ವರ್ಷದಿಂದ ಭಾರತೀಯ ಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸಿ ಇಂದು ದೇಶಕ್ಕಾಗಿ ಜೀವವನ್ನು ಬಿಟ್ಟು ವೀರ ಯೋಧ ಎನಿಸಿಕೊಂಡಿದ್ದಾರೆ. ಯೋಧ ಹುತಾತ್ಮರಾದ ವಿಷಯ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಸೋಮವಾರದಂದು ಹುತಾತ್ಮ ಯೋಧರ ಪಾರ್ಥೀವ ಶರೀರ ಅವರ ಸ್ವಗ್ರಾಮ ಗುಂಡೇನಹಳ್ಳಿ ಆಗಮಿಸಲಿದ್ದು, ಸಕಲ ಸರಕಾರಿ ಗೌರವ ಹಾಗೂ ಸೇನಾ ಗೌರವಗಳೊಂದಿಗೆ ಶಿವಲಿಂಗೇಶ್ವರ ಅವರ ಅಂತ್ಯಕ್ರಿಯೆ ನಡೆಯಲಿದೆ.

  • ಸಾವನ್ನೇ ಗೆದ್ದು ಬಂದ ವೀರಯೋಧನಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

    ಸಾವನ್ನೇ ಗೆದ್ದು ಬಂದ ವೀರಯೋಧನಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

    ಬೀದರ್: ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಸಾವನ್ನೇ ಗೆದ್ದು ಬಂದ ಯೋಧನಿಗೆ ಗಡಿ ಜಿಲ್ಲೆ ಬೀದರ್ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಮನೋಹರ್ ರಾಥೋಡ್ ಸಾವನ್ನೇ ಗೆದ್ದು ಬಂದ ಯೋಧ. ಮನೋಹರ್ ರಾಥೋಡ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ್ ತಾಂಡ ನಿವಾಸಿ. ಪುಲ್ವಾಮಾ ಬಳಿ ಉಗ್ರರು ಮಾಡಿದ ದಾಳಿಯಲ್ಲಿ ಮನೋಹರ್ ಹಿಂಬದಿ ಬಸ್ಸಿನಲ್ಲಿ ಬರುತ್ತಿದ್ದರು.

    ಉಗ್ರರ ದಾಳಿಯಿಂದ ಮನೋಹರ್ ರಾಥೋಡ್ ಬಚಾವ್ ಆಗಿದ್ದಾರೆ. ಹಾಗಾಗಿ ಮನೋಹರ್ ಅವರನ್ನು ನಗರದ ನೌಬಾದ್ ವೃತ್ತ ದವರೆಗೆ ಯುವಕರು ಬೈಕ್ ರ‍್ಯಾಲಿ ನಡೆಸಿ ಸಾರ್ವಜನಿಕವಾಗಿ ಗೌರವ ನೀಡಿದರು. ಅಲ್ಲದೆ ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಪ್ರತಿಮೆಗೆ ಹಾರ ಹಾಕುವ ಮೂಲಕ ಯೋಧ ಮನೋಹರ್ ನಗರಕ್ಕೆ ಎಂಟ್ರಿ ಕೊಟ್ಟರು.

    ಫೆ.14 ರಂದು ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ್ದ ಮಾರುತಿ ಇಕೋ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಗುದ್ದಿದ್ದಾನೆ. ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಬಳಿಕ ಭಾರತೀಯ ವಾಯುಪಡೆ ಪುಲ್ವಾಮ ದಾಳಿಯ ಪ್ರತಿಕಾರ ತೀರಿಸಿಕೊಳ್ಳಲು ಏರ್ ಸ್ಟ್ರೈಕ್ ನಡೆಸಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv