Tag: Yeshwantpur

  • ಯಶವಂತಪುರ ಫ್ಲೈಓವರ್‌ನಲ್ಲಿ ಸಾಲು ಸಾಲು ಅಪಘಾತ – 18 ಜಿಲ್ಲೆ ಸಂಪರ್ಕಿಸುವ ಪ್ಲೈಓವರ್ ಬಳಿ ಸೂಚನಾ ಫಲಕಗಳೇ ಇಲ್ಲ

    ಯಶವಂತಪುರ ಫ್ಲೈಓವರ್‌ನಲ್ಲಿ ಸಾಲು ಸಾಲು ಅಪಘಾತ – 18 ಜಿಲ್ಲೆ ಸಂಪರ್ಕಿಸುವ ಪ್ಲೈಓವರ್ ಬಳಿ ಸೂಚನಾ ಫಲಕಗಳೇ ಇಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯಿಂದ (Silicon City) 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ಲೈಓವರ್, ಆಕ್ಸಿಡೆಂಟ್ ಹಾಟ್‌ಸ್ಪಾಟ್ ಆಗಿ ಬದಲಾಗಿ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಆದರೆ ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪರಿಣಾಮ ಪ್ಲೈಓವರ್ ಆಕ್ಸಿಡೆಂಟ್ ಝೋನ್ (Accindent Zone) ಆಗಿ ಬದಲಾಗುತ್ತಿದೆ.

    ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳ ಪೈಕಿ ಯಶವಂತಪುರ ಫ್ಲೈಓವರ್ ಕೂಡ ಒಂದು. ನಗರದ ಪ್ರಮುಖ ಹೆದ್ದಾರಿಗೆ ಸಂಪರ್ಕಿಸುವ ಈ ಫ್ಲೈಓವರ್ ಕಳೆದ ಕೆಲ ದಿನಗಳಿಂದ ಭೀಕರ ಅಪಘಾತಗಳಿಗೆ ಸಾಕ್ಷಿಯಾಗುತ್ತಿದೆ. ಫ್ಲೈಓವರ್ ಮೇಲೆ ಅಪಘಾತಗಳು ಒಂದರ ಹಿಂದೆ ಒಂದರಂತೆ ಸಂಭವಿಸುತ್ತಿವೆ. ಹೀಗಿದ್ದರೂ ಫ್ಲೈಓವರ್ ಮೇಲೆ ಅಪಘಾತ ತಡೆಯುವ ನಿಟ್ಟಿನಲ್ಲಿ ಜಾರಿಯಾಗಬೇಕಿದ್ದ ಕ್ರಮಗಳು ಮಾತ್ರ ಇನ್ನೂ ಜಾರಿಯಾಗುತ್ತಿಲ್ಲ.

    ಇತ್ತೀಚಗೆ ಯಶವಂತಪುರ (Yeshwantpura) ಫ್ಲೈಓವರ್‌ನಲ್ಲಿ ಕಾರು, ಲಾರಿ ಸೇರಿದಂತೆ ದೊಡ್ಡ ವಾಹನಗಳೇ ಭೀಕರ ಅಪಘಾತಕ್ಕೆ ಒಳಗಾಗುತ್ತಿವೆ. ಒಂದು ಕಡೆ ಕೆಲವರ ನಿರ್ಲಕ್ಷ್ಯತನದ ಚಾಲನೆ ಅಪಘಾತಕ್ಕೆ ಕಾರಣವಾದರೆ, ಇನ್ನೂ ಕೆಲವರು ಸರಿಯಾಗಿ ರಸ್ತೆಯ ಮಾಹಿತಿ ಇಲ್ಲದೇ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಸದ್ಯ ಈ ಫ್ಲೈಓವರ್‌ನಲ್ಲಿ ಟೆಕ್ನಿಕಲ್ ಸಮಸ್ಯೆ ಇರುವುದಾಗಿ ಐಐಎಸ್‌ಸಿ ಕೂಡ ಹೇಳಿದೆ. ಆದರೆ ಟೆಕ್ನಿಕಲ್ ಸಮಸ್ಯೆ ಒಂದು ಕಡೆ ಆದರೆ ಮತ್ತೊಂದು ಕಡೆ ಫ್ಲೈಓವರ್‌ಗೆ ಅಳವಡಿಕೆ ಮಾಡಬೇಕಿದ್ದ ಸೂಚನಾ ಫಲಕಗಳು ಇಲ್ಲದಿರುವುದು. ಟಾಟಾ ಇನ್ಸ್ಟಿಟ್ಯೂಟ್ ಕಡೆಯಿಂದ ಬರುವ ವಾಹನಗಳು ನೇರವಾಗಿ ಫ್ಲೈಓವರ್ ಎಂಟ್ರಿಯಾಗಬೇಕಾದರೆ ರಾತ್ರಿ ವೇಳೆ ಸರಿಯಾದ ಮಾಹಿತಿ ಚಾಲಕರಿಗೆ ಸಿಗುತ್ತಿಲ್ಲ. ರಸ್ತೆ ತಿರುವು ಎಷ್ಟಿದೆ? ಎಲ್ಲಿ ತಿರುವಿದೆ? ವೇಗದ ಕಂಟ್ರೋಲ್ ಎಷ್ಟು? ಎನ್ನುವ ಬಗ್ಗೆ ಸರಿಯಾದ ಫಲಕಗಳ ಅಳವಡಿಕೆ ಮಾಡದ ಕಾರಣ ನಿತ್ಯ ಅಪಘಾತಗಳು ಹೆಚ್ಚಾಗುತ್ತಿವೆ.

    ಶೀಘ್ರವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳೇನು?
    ಫ್ಲೈಓವರ್ ಎಂಟ್ರಿಯಲ್ಲಿ ಬ್ಲಿಂಕ್ ಟ್ರಾಫಿಕ್ ಲೈಟ್‌ನ್ನು ಹಾಕಬೇಕು.
    ಫ್ಲೈಓವರ್ ಇರುವ ಬಗ್ಗೆ, ವೇಗದ ಮಿತಿ ಸಂಬಂಧ ಫ್ಲೈಓವರ್ ಆರಂಭಕ್ಕೂ ಮುನ್ನ ಸೂಚನಾ ಫಲಕ ಹಾಕಬೇಕು.
    ಫ್ಲೈಓವರ್ ಎಂಟ್ರಿಯ ತಡೆಗೊಡೆಗಳಲ್ಲಿ ಲೈಟ್‌ಗಳ ಅಳವಡಿಕೆಯಾಗಬೇಕು.
    ಫ್ಲೈಓವರ್ ಮೇಲೆ ತಿರುವಿನ ಪ್ರಮಾಣ, ತಿರುವು ಇರುವ ಜಾಗದಲ್ಲಿ ರಿಫ್ಲೆಕ್ಟ್ ಲೈಟ್‌ಗಳ ಅಳವಡಿಕೆಯಾಗಬೇಕು.
    ಫ್ಲೈಓವರ್ ಎಂಟ್ರಿಯಲ್ಲಿ ವೇಗ ನಿಯಂತ್ರಣ ಸೂಚನಾ ಫಲಕ ಹಾಕಬೇಕು.

    ಸದ್ಯ ಈ ಯಾವ ಕ್ರಮಗಳು ಇಲ್ಲದೇ ಇರುವ ಕಾರಣ ರಸ್ತೆ ಅಥವಾ ಫ್ಲೈಓವರ್ ಪರಿಚಯ ಇಲ್ಲದವರು ವೇಗವಾಗಿ ಬಂದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಟೆಕ್ನಿಕಲ್ ಸಮಸ್ಯೆ ಸರಿಮಾಡಲು ಸಮಯ ಬೇಕಾಗಲಿದೆ. ಆದರೆ ಕನಿಷ್ಟ ಸೂಚನಾ ಫಲಕಗಳನ್ನಾದರೂ ಹಾಕುವ ಕೆಲಸವಾದರೆ ಅಪಘಾತಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಕೂಡಲೇ ಕ್ರಮಕೈಗೊಳ್ಳಬೇಕಿದೆ.

  • ಬೈಕ್‌ಗೆ ಕಾರು ಡಿಕ್ಕಿ: ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದ ಕಾರು – ಮೂವರ ಸ್ಥಿತಿ ಗಂಭೀರ

    ಬೈಕ್‌ಗೆ ಕಾರು ಡಿಕ್ಕಿ: ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದ ಕಾರು – ಮೂವರ ಸ್ಥಿತಿ ಗಂಭೀರ

    ಬೆಂಗಳೂರು: ಬೈಕ್‌ಗೆ ಡಿಕ್ಕಿ ಹೊಡೆದು ಕಾರು ಫ್ಲೈಓವರ್ (Fly Over) ಮೇಲಿನಿಂದ ಕೆಳಗೆ ಬಿದ್ದಿರುವ ಭೀಕರ ಅಪಘಾತ ನಗರದ ಯಶವಂತಪುರ ಸರ್ಕಲ್‌ನಲ್ಲಿ (Yashwantpur Circle) ನಡೆದಿದೆ.

    ಬೈಕ್‌ನಲ್ಲಿದ್ದ ಇಬ್ಬರು, ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.ಇದನ್ನೂ ಓದಿ: ರಾತ್ರಿ ತರಬೇತಿ ಕಾರ್ಯಾಚರಣೆ ವೇಳೆ ವಾಯುಪಡೆಯ MiG-29 ಫೈಟರ್ ಜೆಟ್ ಪತನ – ಪೈಲಟ್‌ ಸೇಫ್‌

    ಬೆಳಗ್ಗೆ 3:45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರು ವೇಗದ ಪರಿಣಾಮದಿಂದಾಗಿ ಫ್ಲೈಓವರ್ ಮೇಲಿನ ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಗುದ್ದಿದೆ. ಇದರಿಂದ ಫ್ಲೈಓವರ್ ಮೇಲಿನಿಂದ ಕಾರು ಕೆಳಗೆ ಬಿದ್ದಿದೆ.

    ಚಾಲಕ ಕುಡಿದು ಕಾರು ಓಡಿಸಿರುವ ಶಂಕೆಯಿದ್ದು, ಕಾರು ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಖಾಲಿ ಮದ್ಯ ಬಾಟಲಿಗಳು ಪತ್ತೆಯಾಗಿದೆ. ತಮಿಳುನಾಡು ರಿಜಿಸ್ಟ್ರೇಷನ್ ಹೊಂದಿರುವ ವೊಕ್ಸ್ ವಾಗೇನ್ ವೆಂಟೋ (Volkswagen Vento) TN37DH9484 ಕಾರಿನಲ್ಲಿ 3 ಯುವಕರು ತೆರಳುತ್ತಿದ್ದರು.ಇದನ್ನೂ ಓದಿ: ಅಮೆರಿಕದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಶ್ರಾವಣ ಅಮಾವಾಸ್ಯೆ ಆಚರಣೆ

    ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಗಾಯಾಳುಗಳನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ..

  • ಹಳಿ ತಪ್ಪಿದ ರೈಲಿಗೆ ಯಶವಂತಪುರದಿಂದ ಸಾಗುತ್ತಿದ್ದ ರೈಲು ಡಿಕ್ಕಿ – 50 ಸಾವು

    ಹಳಿ ತಪ್ಪಿದ ರೈಲಿಗೆ ಯಶವಂತಪುರದಿಂದ ಸಾಗುತ್ತಿದ್ದ ರೈಲು ಡಿಕ್ಕಿ – 50 ಸಾವು

    ಭುವನೇಶ್ವರ: ಒಡಿಶಾದ (Odisha) ಬಾಲಸೋರ್ (Balasore) ಜಿಲ್ಲೆಯಲ್ಲಿ ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು (Coromandel Express Train) ಡಿಕ್ಕಿ ಹೊಡೆದು 10-12 ಬೋಗಿಗಳು ಹಳಿತಪ್ಪಿದ್ದವು. ಇದರ ಬೆನ್ನಲ್ಲೇ ಯಶವಂತಪುರದಿಂದ (Yeshwantpur) ಹೌರಾದೆಡೆಗೆ (Howrah) ಸಾಗುತ್ತಿದ್ದ ಮತ್ತೊಂದು ರೈಲು (Train) ಅದೇ ಮಾರ್ಗವಾಗಿ ಸಾಗುತ್ತಿದ್ದಾಗ ಹಳಿ ತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೇ ವಕ್ತಾರ ಅಮಿತಾಬ್ ಶರ್ಮಾ, ಸಂಜೆ 7 ಗಂಟೆ ಸುಮಾರಿಗೆ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್‌ನ 10-12 ಬೋಗಿಗಳು ಬಾಲೇಶ್ವರ ಬಳಿ ಮತ್ತೊಂದು ಹಳಿ ಮೇಲೆ ಬಿದ್ದಿತ್ತು. ಸ್ವಲ್ಪ ಸಮಯದ ನಂತರ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಅದರ 3-4 ಬೋಗಿಗಳು ಹಳಿತಪ್ಪಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾದಲ್ಲಿ ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ಹಲವರ ಸಾವಿನ ಶಂಕೆ

    ಸರಣಿ ಅಪಘಾತದಲ್ಲಿ ರೈಲುಗಳ ಬೋಗಿಯೊಳಗಡೆ ಹಲವರು ಸಿಕ್ಕಿಬಿದ್ದಿರುವುದಾಗಿ ವರದಿಗಳು ತಿಳಿಸಿವೆ. ಈಗಾಗಲೇ 50 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇನ್ನೂ ಹಲವರು ಸಿಕ್ಕಿ ಬಿದ್ದಿರುವುದರಿಂದ ಸಾವು ನೋವುಗಳ ಸಂಖ್ಯೆ ಹೆಚ್ಚುವ ಸಾದ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 200 ಯೂನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ – ವಾರ್ಷಿಕ ಸರಾಸರಿ ಅಸ್ತ್ರ ಬಳಸಿ ಬಿಲ್ ವಸೂಲಿ

    ಸಹಾಯವಾಣಿ ಸಂಖ್ಯೆಗಳು:
    ಹೌರಾ: 033-26382217
    ಖರಗ್‌ಪುರ: 8972073925 & 9332392339
    ಬಾಲಸೋರ್: 8249591559 & 7978418322
    ಶಾಲಿಮಾರ್: 9903370746

  • ಬಿಬಿಎಂಪಿ ಎಡವಟ್ಟು- ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆತಂದ ಕುಟುಂಬಸ್ಥರು

    ಬಿಬಿಎಂಪಿ ಎಡವಟ್ಟು- ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆತಂದ ಕುಟುಂಬಸ್ಥರು

    ಬೆಂಗಳೂರು: ಕೊರೊನಾ ಸೋಂಕಿತನನ್ನು ಅವರ ಕುಟುಂಬಸ್ಥರೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುವ ಘಟನೆ ಸಿಲಿಕಾನ್ ಸಿಟಿಯ ಯಶವಂತಪುರದಲ್ಲಿ ನಡೆದಿದೆ.

    ಕಳೆದ ಎರಡು ದಿನದ ಹಿಂದೆಯೇ ಸೋಂಕಿತನಿಗೆ ಕರೆ ಮಾಡಿದ್ದ ಬಿಬಿಎಂಪಿಯವರು ನಿಮಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಮನೆಯಲ್ಲೇ ಇರಿ ಅಂಬುಲೆನ್ಸ್ ಬಂದು ಕರೆದುಕೊಂಡು ಬರುತ್ತದೆ ಎಂದಿದ್ದಾರೆ. ಆದರೆ ಎರಡು ದಿನ ಕಳೆದರೂ ಅಂಬುಲೆನ್ಸ್ ಬಾರದ ಕಾರಣ, ಇಂದು ಮನೆಯವರೇ ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

    ಯಶವಂತಪುರ ಬಳಿ ಇರುವ ಮೋಹನ್ ಕುಮಾರ್ ನಗರದ 48 ವರ್ಷದ ವ್ಯಕ್ತಿಗೆ ಕೆಮ್ಮು ಜ್ವರ, ಉಸಿರಾಟದ ಸಮಸ್ಯೆ ಇದ್ದ ಕಾರಣ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಆತನಿಗೆ ಸೋಂಕು ಪಾಸಿಟಿವ್ ಬಂದಿದೆ. ಆಗ ಕರೆ ಮಾಡಿದ ಬಿಬಿಎಂಪಿ ಅಧಿಕಾರಿಗಳು ನಿಮಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಮನೆಯ ಬಳಿ ಅಂಬುಲೆನ್ಸ್ ಕಳಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಎರಡು ದಿನ ಕಳೆದರು ಅಂಬುಲೆನ್ಸ್ ಕಳುಹಿಸಿಲ್ಲ.

    ಇಂದು ಸೋಂಕಿತ ಮಾತನಾಡಲು ಆಗದ ಸ್ಥಿತಿಗೆ ತಲುಪಿದ್ದು, ಭಯಭೀತರಾದ ಕುಟುಂಬಸ್ಥರು ತಮ್ಮ ಸ್ವಂತ ಕಾರಿನಲ್ಲೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಬಾವ ಯಶವಂತಪುರ ಠಾಣೆಗೆ ಕರೆತಂದಿದ್ದು, ನಂತರ ಅದೇ ಕಾರಿನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

  • ಬೆಂಗಳೂರಲ್ಲಿ ರಸ್ತೆ ಮಧ್ಯೆ ಏಕಾಏಕಿ ಭೂ ಕುಸಿತ

    ಬೆಂಗಳೂರಲ್ಲಿ ರಸ್ತೆ ಮಧ್ಯೆ ಏಕಾಏಕಿ ಭೂ ಕುಸಿತ

    ಬೆಂಗಳೂರು: ಸಿಲಿಕಾನ್ ಸಿಟಿಯ ಆರ್‌ಎಂಸಿ ಯಾರ್ಡ್‌ನಲ್ಲಿ ಇದ್ದಕ್ಕಿದ್ದಂತೆ ಭೂ ಕುಸಿತ ಸಂಭವಿಸಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

    ನಗರದ ಆರ್‌ಎಂಸಿ ಯಾರ್ಡ್‌ನ ಎಂಇಐ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಭೂ ಕುಸಿತ ಉಂಟಾಗಿದೆ. ಸುಮಾರು 12 ಅಡಿಗಿಂತ ಹೆಚ್ಚು ಆಳಕ್ಕೆ ರಸ್ತೆ ಕುಸಿದು ಸ್ಥಳೀಯರಲ್ಲಿ ಹಾಗೂ ವಾಹನಸವಾರರಲ್ಲಿ ಭಯ ಮೂಡುವಂತೆ ಮಾಡಿದೆ. ಎಂಇಐ ರಸ್ತೆಯ ಮಧ್ಯಭಾಗದಲ್ಲಿ ಭೂ ಕುಸಿತವಾಗಿದ್ದು, ಕೆಳಗೆ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಭೂಮಿ ಕುಸಿಯುವ ಆತಂಕದಲ್ಲಿ ಜನ ಇದ್ದಾರೆ.

    ಮಣ್ಣು ಪೂರ್ತಿ ಕುಸಿದಿರುವುದರಿಂದ ಒಂದು ಭಾಗದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ರಸ್ತೆ ಸಮೀಪದಲ್ಲಿ ಓಡಾಡಲು ಜನ ಭಯ ಪಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಲಾರಿಯೊಂದು ಹಾದು ಹೋದ ನಂತರ ಈ ಭೂ ಕುಸಿತ ಸಂಭವಿಸಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸದ್ಯ ಸ್ಥಳೀಯರೇ ಭೂಕುಸಿತವಾದ ರಸ್ತೆಗೆ ಬ್ಯಾರಿಕೇಡ್ ಹಾಕಿ ಹಗ್ಗ ಕಟ್ಟಿದ್ದಾರೆ. ಕೆಳಗೆ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಮಣ್ಣು ಕುಸಿಯುವ ಆತಂಕ ಎದುರಾಗಿದೆ.

    ಈ ಹಿಂದೆ ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಸಹ ಗುಂಡಿ ಬಿದ್ದು ಆತಂಕ ಸೃಷ್ಟಿಸಿತ್ತು. ನಂತರ ದುರಸ್ಥಿ ಮಾಡಲಾಯಿತು. ಈಗಲೂ ಸಹ ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದರ ಬಳಿಕ ಇದೀಗ ಆರ್‍ಎಂಸಿ ಯಾರ್ಡ್ ಬಳಿ ರಸ್ತೆ ಮಧ್ಯೆ ಭೂ ಕುಸಿತ ಸಂಭವಿಸಿದೆ.

  • ಯಶವಂತಪುರ- ಕಾರವಾರ- ವಾಸ್ಕೋ ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭ

    ಯಶವಂತಪುರ- ಕಾರವಾರ- ವಾಸ್ಕೋ ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭ

    – ಹೊಸ ರೈಲಿಗೆ ಬಿಎಸ್‍ವೈ ಚಾಲನೆ

    ಬೆಂಗಳೂರು: ಕಾರವಾರ ಮಾರ್ಗವಾಗಿ ಯಶವಂತಪುರ-ವಾಸ್ಕೋ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದರು.

    ಯಶವಂತಪುರ ರೈಲು ನಿಲ್ದಾಣದಲ್ಲಿ ಹೊಸ ರೈಲಿಗೆ ಸಿಎಂ ಚಾಲನೆ ನೀಡಿದರು. ಇದೇ ವೇಳೆ ಯಶವಂತಪುರ-ವಿಜಯಪುರ-ಯಶವಂತಪುರ ರೈಲನ್ನು ಎಲ್‍ಎಚ್‍ಬಿ ಕೋಚ್‍ಗಳಾಗಿ ಪರಿವರ್ತನೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.

    ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ, ಯಶವಂತಪುರ-ಕಾರವಾರ-ವಾಸ್ಕೋ ಮಾರ್ಗದಲ್ಲಿ ಇಂದು ಹೊಸ ರೈಲು ಚಾಲನೆ ಸಂತಸ ತಂದಿದೆ. ಈ ರೈಲು ಸಂಜೆ ಬೆಂಗಳೂರಿಂದ ಹೊರಟು ಬೆಳಗ್ಗೆ ಕಾರವಾರಕ್ಕೆ ತಲುಪಲಿದೆ. ಹೊಸ ರೈಲಿನಿಂದ ಶಿರಾಡಿಘಾಟ್ ಮೇಲಿನ ವಾಹನ ಸಂಚಾರ ಒತ್ತಡ ಕಡಿಮೆಯಾಗಲಿದೆ. ನಾನು ಮುಖ್ಯಮಂತ್ರಿಯಾದ ಹೊಸದರಲ್ಲಿ ರೈಲ್ವೆ ಯೋಜನೆಗಳಿಗೆ ಭೂಮಿ, ಅರ್ಧ ವೆಚ್ಚ ಕೊಡುವ ಭರವಸೆ ಕೊಟ್ಟಿದ್ದೆ. ಸರ್ಕಾರ ರೈಲ್ವೆ ಯೋಜನೆಗಳಿಗೆ ಸದಾ ಬೆಂಬಲ ಕೊಡಲಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೊಸ ರೈಲುಗಳ ಸೇವೆ ಸಿಗಲಿದೆ ಎಂದರು.

    ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಮಾತನಾಡಿ, ಈ ಹೊಸ ರೈಲಿನ ಇನ್ನೊಂದು ವಿಶೇಷ ಎಂಬಂತೆ ರೈಲು ಚಾಲನೆ ಮಾಡುವವರಿಬ್ಬರೂ ಮಹಿಳಾ ಲೋಕೊಪೈಲಟ್ ಗಳು. ಸಂಸದೆ ಶೋಭಾ ಕರಂದ್ಲಾಜೆಯವರು ಈ ಹೊಸ ರೈಲಿಗೆ ಒತ್ತಾಯ ಮಾಡಿದವರು. ಶೋಭಾ ಅವರು ರಾಣಿ ಚೆನ್ನಮ್ಮ ರೀತಿಯಲ್ಲಿ ಹೋರಾಡಿ ಈ ಹೊಸ ರೈಲು ಸಂಚರಿಸಲು ಕಾರಣರಾಗಿದ್ದಾರೆ. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಲೋಕೊಪೈಲಟ್‍ಗಳಿಂದ ರೈಲು ಚಾಲನೆ ಮಾಡಲಾಗುತ್ತಿದೆ ಎಂದರು.

    ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಇನ್ನೂ ಕೆಲವು ಜಿಲ್ಲೆಗಳಿಗೆ ರೈಲು ಸೇವೆ ದೊರೆತಿಲ್ಲ, ನಾನು ಪ್ರತಿನಿಧಿಸುವ ಚಿಕ್ಕಮಗಳೂರಿಗೆ ರೈಲು ಬಂದಿದ್ದೇ ನಮ್ಮ ಸರ್ಕಾರ ಬಂದ ಮೇಲೆ. ಹಬ್ಬಗಳು ಬಂದರೆ ನಮ್ಮ ಭಾಗದ ಜನ ಟ್ಯಾಕ್ಸಿ, ಟಿಟಿ ಮಾಡಿಕೊಂಡು ಊರಿಗೆ ಹೋಗಬೇಕಿತ್ತು. ಬೆಂಗಳೂರಿನಲ್ಲಿ ಕರಾವಳಿಯ ಸಾಕಷ್ಟು ಜನ ಇದ್ದಾರೆ. ಆದರೆ ನಮ್ಮ ಊರುಗಳಿಗೆ ಹೋಗಲು ರೈಲು ಸೇವೆ ಇರಲಿಲ್ಲ. ಇಂದು ನಮ್ಮ ಭಾಗದ ಜನರ ನಿರೀಕ್ಷೆ ಈಡೇರಿದೆ ಎಂದರು.

    https://twitter.com/ShobhaBJP/status/1236162444264796163

    ಉಡುಪಿ, ಭಟ್ಕಳ, ಕಾರವಾರ ಮಾರ್ಗದಲ್ಲಿ ಈ ಹೊಸ ರೈಲು ಸಂಚರಿಸಲಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿಯವರಿಗೆ ಅಭಿನಂದನೆಗಳು. ಇಂದು ಹೊಸ ರೈಲು ಸೇವೆ ಸಿಕ್ಕಿದೆ. ಆದರೆ ಈ ಮಾರ್ಗದಲ್ಲಿರುವ ಹಳೆ ರೈಲನ್ನು ನಿಲ್ಲಿಸಬೇಡಿ. ಹಳೆಯ ರೈಲು ಸಂಚಾರ ಮುಂದುವರಿಯಲಿ, ಯಡಿಯೂರಪ್ಪನವರು ಮೊದಲ ಸಲ ಸಿಎಂ ಆಗಿದ್ದಾಗಿಂದಲೂ ರೈಲ್ವೆ ಯೋಜನೆಗಳಿಗೆ ಬೆಂಬಲಿಸುತ್ತಿದ್ದಾರೆ. ರೈಲ್ವೆ ಯೋಜನೆಗಳಿಗೆ ಶೇ.50ರಷ್ಟು ನೆರವು ಕೊಡುವುದಾಗಿ ಹೇಳಿದ ಮೊದಲ ಸಿಎಂ ಯಡಿಯೂರಪ್ಪ. ಅಲ್ಲದೆ ಶಿವಮೊಗ್ಗ ಮಾರ್ಗವಾಗಿ ಹಾಸನ, ಬೇಲೂರು, ಚಿಕ್ಕಮಗಳೂರು, ಶೃಂಗೇರಿಗೆ ರೈಲು ಸೇವೆ ಅಗತ್ಯವಿದೆ. ಈ ಬೇಡಿಕೆಯನ್ನೂ ಶೀಘ್ರದಲ್ಲೇ ಕೇಂದ್ರ ಸರ್ಕಾರ ಈಡೇರಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

    ರೈಲು ವೇಳಾಪಟ್ಟಿ: ಪ್ರತಿ ದಿನ ಸಂಜೆ 6ಕ್ಕೆ ಯಶವಂತಪುರದಿಂದ 14 ಬೋಗಿಗಳ ಈ ರೈಲು ಹೊರಡಲಿದೆ. ಕುಣಿಗಲ್ ಮೂಲಕವಾಗಿ ಹಾಸನಕ್ಕೆ ರಾತ್ರಿ 9.15ಕ್ಕೆ, ಪಡೀಲ್ ಗೆ ಬೆಳಗ್ಗಿನ ಜಾವ 3ಕ್ಕೆ, ಉಡುಪಿಗೆ ಬೆಳಗ್ಗೆ 5ಕ್ಕೆ, ಕುಂದಾಪುರ 5.30ಕ್ಕೆ, ಕಾರವಾರಕ್ಕೆ ಬೆಳಗ್ಗೆ 8.30 ಮತ್ತು ವಾಸ್ಕೋಗೆ ಬೆಳಗ್ಗೆ 10.30ಕ್ಕೆ ತಲುಪಲಿದೆ. ಮರಳಿ ವಾಸ್ಕೋದಿಂದ ಸಂಜೆ 5.20ಕ್ಕೆ ಹೊರಡಲಿದ್ದು, ಸಂಜೆ 7.25ಕ್ಕೆ ಕಾರವಾರ, 9.30ಕ್ಕೆ ಕುಂದಾಪುರ, 10ಕ್ಕೆ ಉಡುಪಿ, ಬೆಳಗ್ಗೆ 8ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರ, ಚಿಕ್ಕಬಾಣಾವರ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಾಣಿಯೂರು, ಕಬಕ, ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರ್, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾ, ಕಾರವಾರ, ವಾಸ್ಕೋಗಳಲ್ಲಿ ಈ ಹೊಸ ರೈಲು ನಿಲುಗಡೆಯಾಗಲಿದೆ.

  • ಬೆಳ್ಳಂಬೆಳಗ್ಗೆ ಕಂಠಪೂರ್ತಿ ಮದ್ಯ ಕುಡಿದು ಮಿನಿ ಬಸ್ ಚಾಲನೆ- 4 ಆಟೋ, ಬೈಕ್ ಜಖಂ

    ಬೆಳ್ಳಂಬೆಳಗ್ಗೆ ಕಂಠಪೂರ್ತಿ ಮದ್ಯ ಕುಡಿದು ಮಿನಿ ಬಸ್ ಚಾಲನೆ- 4 ಆಟೋ, ಬೈಕ್ ಜಖಂ

    – ತಪ್ಪಿದ ಭಾರೀ ಅನಾಹುತ, ಮೂವರಿಗೆ ಗಂಭೀರ ಗಾಯ
    – ಮಿನಿ ಬಸ್ ಚಾಲಕನನ್ನು ವಶಕ್ಕೆ ಪಡೆದ ಪೊಲೀಸ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಕಂಠಪೂರ್ತಿ ಮದ್ಯ ಕುಡಿದು ಮಿನಿ ಬಸ್ ಚಾಲಕನೊಬ್ಬ ಸರಣಿ ಅಪಘಾತ ನಡೆಸಿರುವ ಘಟನೆ ಬೆಂಗಳೂರಿನ ಯಶವಂತಪುರ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

    ವೆಂಕಟರಮಣಪ್ಪ ಮದ್ಯ ಕುಡಿದು ಮಿನಿ ಬಸ್ ಓಡಿಸಿದ ಚಾಲಕ. ಘಟನೆಯಲ್ಲಿ ಆಟೋ ಚಾಲಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಿನಿ ಬಸ್ ಚಾಲಕ ವೆಂಕಟರಮಣಪ್ಪ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಪೀಣ್ಯ ಕಡೆಯಿಂದ ಯಶವಂತಪುರ ಕಡೆ ವೇಗವಾಗಿ ಹೋಗುತ್ತಿದ್ದ. ಆದರೆ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಆಟೋ ಸ್ಟ್ಯಾಂಡ್‍ಗೆ ನುಗ್ಗಿತ್ತು. ಪರಿಣಾಮ ನಾಲ್ಕು ಆಟೋ ಹಾಗೂ ಒಂದು ಬೈಕ್ ಜಖಂಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಆಟೋ ಸ್ಟ್ಯಾಂಡ್‍ನಲ್ಲಿದ್ದ ಚಾಲಕರು ಮಿನಿ ಬಸ್ ಚಾಲಕ ವೆಂಕಟರಮಣಪ್ಪನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಎಣ್ಣೆ ಹೊಡೆದಿರುವುದು ಖಚಿತವಾಗಿತ್ತು. ಈ ಸಂಬಂಧ ಆಟೋ ಚಾಲಕರು ಯಶವಂತಪುರ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ದೌಡಾಯಿಸಿದ ಪೊಲೀಸರು ವೆಂಕಟರಮಣಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ವೆಂಕಟರಣಪ್ಪನನ್ನು ಆಸ್ಪತ್ರೆಗೆ ಕರೆದೊಯ್ದು ಆಲ್ಕೋ ಹಾಲ್ ಪರಿಶೀಲನೆ ಮಾಡಿಸಿದಾಗ ಆರೋಪಿಯು ಮದ್ಯ ಸೇವಿಸಿದ್ದು ದೃಡಪಟ್ಟಿದೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

    ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

    – ಅನರ್ಹರಿಗೆ ಮಂತ್ರಿಗಿರಿ ಕೊಡಲ್ಲಾಂದ್ರೆ ಮೊದಲೇ ಹೇಳ್ಬೇಕಿತ್ತು
    – ಬಿಜೆಪಿ ಸರ್ಕಾರ ಆಗೋದು ಬೇಡ ಅನ್ಬೇಕಿತ್ತು
    – ಕಾಂಗ್ರೆಸ್‍ನಲ್ಲಿ ಇದ್ದೀದ್ರೆ ಸಮಾಧಿ ಆಗುತ್ತಿದ್ವಿ

    ಬೆಂಗಳೂರು: ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅರ್ನಹ ಶಾಸಕರಿಗೆ ಸಚಿವಸ್ಥಾನ ನೀಡಿದರೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗುತ್ತದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಬಿಜೆಪಿಯವರು ಮೊದಲೇ ಹೇಳಬೇಕಿತ್ತು. ಬಿಜೆಪಿ ಸರ್ಕಾರ ರಚನೆ ಆಗುವುದು ಬೇಡ ಅಂತ ಹೇಳಬೇಕಿತ್ತು. ಸಚಿವಸ್ಥಾನ ನೀಡಿದರೆ ಅಸಮಾಧಾನ ಉಂಟಾಗುತ್ತದೆ ಅಂತ ಹೇಳುವುದಾದರೆ ನಮ್ಮನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು ಎಂದು ಗುಡುಗಿದರು. ಇದನ್ನೂ ಓದಿ: ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    ಶಿವಾಜಿ ನಗರ ಉಪ ಚುನಾವಣೆ ಸ್ಪರ್ಧೆಗೆ ರೋಷನ್ ಬೇಗ್ ಮುಂದಾಗಲಿಲ್ಲ. ರಾಣೇಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ, ಮಂತ್ರಿ ಮಾಡುತ್ತಾರೆ ಎಂಬ ಮಾಹಿತಿ ಇದೆ. ಅನರ್ಹರಿಗೆ ಸಚಿವ ಸ್ಥಾನ ತಪ್ಪುವುದಿಲ್ಲ ಎಂದರು.

    ನಾವು ಕಾಂಗ್ರೆಸ್‍ನಲ್ಲಿ ಇದ್ದಿದ್ದರೆ ಸಮಾಧಿ ಆಗುತ್ತಿದ್ದೇವು. ಈಗ ಸಮಾಧಿಯಿಂದ ಹೊರಗೆ ಬಂದಿದ್ದೇವೆ. ಟೀಕೆ ಮಾಡುವವರು ಮಾಡಲಿ. ನಾವು ಮಾತ್ರ ಚೆನ್ನಾಗಿದ್ದೇವೆ. ನಮ್ಮ ವಿರುದ್ಧ ಕಾಂಗ್ರೆಸ್‍ನವರಿಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ಆರೋಪ ಮಾಡಿದರೆ ಏನು ಪ್ರಯೋಜನ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಾರೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಈ ಹಿಂದೆ ನಾನೊಬ್ಬನೇ ಚುನಾವಣೆ ಎದುರಿಸಿದ್ದೆ. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯವರನ್ನು ಒಗ್ಗೂಡಿಸಲಾಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಯಕರು ಪ್ರಚಾರಕ್ಕೆ ಬಂದಿದ್ದರು. 641 ಬೂತ್‍ಗಳಲ್ಲಿ ಎಲ್ಲ ರೀತಿಯ ಅಧ್ಯಯನ ಮಾಡಿದ್ದೇನೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ.

    ಉಪ ಚುನಾವಣೆ ಫಲಿತಾಂಶದ ಬಳಿಕ ಕ್ಷೇತ್ರದ ವಿವಿಧೆಡೆ ಹೋಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದವರು ಯಾರೂ ಸೋಮವಾರ ಕ್ಷೇತ್ರ ಬಿಟ್ಟು ಬರುವುದಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಅನರ್ಹ ಶಾಸಕರೆಲ್ಲರೂ ಒಟ್ಟಾಗಿ ಸೇರುತ್ತೇವೆ ಎಂದು ತಿಳಿಸಿದರು.

    ಒಕ್ಕಲಿಗ ನಾಯಕನಾಗಲು ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇದ್ದಾಗಲೂ ನಾನು ಪೈಪೋಟಿ ಮಾಡಿಲ್ಲ. ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಈಗ ಸಚಿವ ಆರ್.ಅಶೋಕ್ ಅವರಿಗೆ ಪೈಪೋಟಿ ನೀಡಿ ಒಕ್ಕಲಿಗ ನಾಯಕನಾಗುವ ಆಸೆ ನನ್ನಗಿಲ್ಲ. ಬಿಜೆಪಿಗೆ ಬಂದಿದ್ದೇನೆ. ಇಲ್ಲಿ ಇರುವಷ್ಟು ದಿನ ಪ್ರಾಮಾಣಿಕನಾಗಿ ಇರುತ್ತೇನೆ. ಇಲ್ಲಿಂದ ಬೇರೆ ಕಡೆ ಹೋಗುವ ಯೋಚನೆ ಮಾಡಿಲ್ಲ. ಮಂತ್ರಿ ಮಾಡಿ ಎಂದು ಎಂದಿಗೂ ಕೇಳುವುದಿಲ್ಲ. ಇಂತಹ ಖಾತೆ ಬೇಕು ಅಂತ ಕಂಡಿಷನ್ ಹಾಕಿಲ್ಲ. ಮಂತ್ರಿ ಸ್ಥಾನವನ್ನು ಅವರೇ ಕೊಟ್ಟರೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್- ಜೆಡಿಎಸ್ ಒಪ್ಪಂದದ ಆಡಿಯೋ ಈಗಲೂ ನನ್ನ ಬಳಿಯಿದೆ. ಸೂಕ್ತ ಸಮಯ ಬಂದಾಗ ಆಡಿಯೋ ಬಿಡುತ್ತೇಮೆ. ಆ ಲೀಡರ್ ಯಾರು ಅಂತ ಹೇಳುತ್ತೇನೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ಮಾಡುವ ಅವಶ್ಯಕತೆ ಬೀಳಲ್ಲ. 9 ಜನ ಜೆಡಿಎಸ್ ಶಾಸಕರು, 4 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತೇವೆ ಅಂದಿದ್ದಾರೆ. ಆದರೆ ನಾವು ನಮ್ಮ ಕಷ್ಟ ಹೇಳಿದ್ದೇವೆ ಎಂದು ಹೊಸ ಬಾಂಬ್ ಸಿಡಿಸಿದರು.

    ನಮ್ಮ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರು ಆರೋಗ್ಯ ಎಲ್ಲವನ್ನೂ ಕೊಟ್ಟು ಒಳ್ಳೆಯದು ಮಾಡಲಿ. ನಾವು ಮೂರ್ನಾಲ್ಕು ತಿಂಗಳು ನೋವು ಅನುಭವಿಸಿದ್ದೇವೆ. ಈ ಎಲ್ಲ ನೋವನ್ನು ರಾಜೀನಾಮೆ ಕೊಡಲು ಮುಂದಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ತಿಳಿಸಿದ್ದೇವೆ ಎಂದರು.

  • ನೀರು ತರಲು ರೈಲಿನಿಂದ ಕೆಳಗಿಳಿದಿದ್ದ ವ್ಯಕ್ತಿ ಸಾವು

    ನೀರು ತರಲು ರೈಲಿನಿಂದ ಕೆಳಗಿಳಿದಿದ್ದ ವ್ಯಕ್ತಿ ಸಾವು

    – ಪತಿಯ ಶವ ಸಾಗಿಸಲು ಪತ್ನಿಯ ಪರದಾಟ

    ಬೆಂಗಳೂರು: ನೀರು ತರಲು ರೈಲಿನಿಂದ ಕೆಳಗಿಳಿದಿದ್ದ ಪತಿ ಶವವಾಗಿ ಪತ್ತೆಯಾದ ಘಟನೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಪವನ್ ವಿಜಯ್‍ಕುಮಾರ್ ಪಾಟೀಲ್ (32) ಸಾವನ್ನಪ್ಪಿದ ದುರ್ದೈವಿ. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಭಾನುವಾರವೇ ಘಟನೆ ನಡೆದಿದ್ದು, ಪವನ್ ಅವರು ಮೃತಪಟ್ಟಿರುವುದು ಪತ್ನಿಗೆ ಮಂಗಳವಾರ ಗೊತ್ತಾಗಿದೆ.

    ಆಗಿದ್ದೇನು?
    ಬೀದರ್ ಜಿಲ್ಲೆಯ ಪವನ್ ವಿಜಯ್‍ಕುಮಾರ್ ಪಾಟೀಲ್ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲು ಪವನ್ ಪತ್ನಿ ಹಾಗೂ ಮಗುವಿನ ಜೊತೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಪಡೆದು ಭಾನುವಾರ ಬೀದರ್ ಗೆ ರೈಲಿನಲ್ಲಿ ಮರಳುತ್ತಿದ್ದರು. ಈ ವೇಳೆ ಯಶವಂತಪುರ ನಿಲ್ದಾಣದಲ್ಲಿ ರಾತ್ರಿ ರೈಲು ನಿಂತಿದ್ದಾಗ ಪವನ್ ನೀರು ತರಲು ಹೋಗಿದ್ದರು. ರೈಲು ಆರಂಭವಾದರೂ ಪತಿ ಬಾದರಿದ್ದಾಗ ಗಾಬರಿಗೊಂಡ ಪವನ್ ಅವರ ಪತ್ನಿ ಮಗುವನ್ನು ಎತ್ತಿಕೊಂಡು ರೈಲು ಇಳಿದಿದ್ದರು.

    ರೈಲು ಹತ್ತಲು ಹೋಗಿ ಪವನ್ ಕೆಳಗೆ ಬಿದ್ದಿದ್ದರು. ಅಷ್ಟೇ ಅಲ್ಲದೆ ಅವರ ಅಂಗಿ ರೈಲಿಗೆ ಸಿಕ್ಕಿಕೊಂಡಿದ್ದರಿಂದ ಮೃತದೇಹ ರೈಲು ನಿಲ್ದಾಣದಿಂದ ದೂರದಲ್ಲಿ ಬಿದ್ದಿತ್ತು. ಆದರೆ ಪವನ್ ಅವರ ಪತ್ನಿ ಮಾತ್ರ ಪತಿಗಾಗಿ ಹುಡುಕಾಟ ನಡೆಸಿದ್ದರು. ಭಾನುವಾರ ರಾತ್ರಿ, ಸೋಮವಾರ ಹಾಗೂ ಮಂಗಳವಾರ ಪತಿಯನ್ನು ಹುಡುಕಿದ್ದಾರೆ. ಆದರೆ ಪತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಯಶವಂತಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ವೇಳೆ ಪವನ್ ಅವರ ಪತ್ನಿ ಪತಿಯ ಫೋಟೋ ತೋರಿಸಿದ್ದಾರೆ. ಫೋಟೋವನ್ನು ನೋಡಿದ ಪೊಲೀಸರು ಪವನ್ ವಿಜಯ್‍ಕುಮಾರ್ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

    ಪತಿಯ ಸಾವಿನ ಸುದ್ದಿ ಕೇಳಿ ಪವನ್ ಅವರ ಪತ್ನಿ ಆಘಾತಕ್ಕೆ ಒಳಾಗದರು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಪತಿ ಈಗ ಹೆಣವಾಗಿದ್ದಾರೆ ಎಂದು ಕಣ್ಣೀರು ಹಾಕಿದರು. ಮಗುವನ್ನು ಎತ್ತಿಕೊಂಡು ಪತಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಪವನ್ ಪತ್ನಿ ಪರದಾಟುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

  • ಭಾರೀ ಮಳೆಗೆ ಭೂಕುಸಿತ: ಮಂಗ್ಳೂರು- ಬೆಂಗ್ಳೂರು ರೈಲು ಸಂಚಾರ ಅಸ್ತವ್ಯಸ್ಥ

    ಭಾರೀ ಮಳೆಗೆ ಭೂಕುಸಿತ: ಮಂಗ್ಳೂರು- ಬೆಂಗ್ಳೂರು ರೈಲು ಸಂಚಾರ ಅಸ್ತವ್ಯಸ್ಥ

    ಹಾಸನ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ರೈಲು ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

    ಜಿಲ್ಲೆಯ ಹಾಸನ ಹಾಗೂ ಸಕಲೇಶಪುರ ತಾಲೂಕುಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಸನ-ಮಂಗಳೂರು ಮಾರ್ಗದಲ್ಲಿ ಮೂರುಕಡೆ ಭೂಕುಸಿತ ಉಂಟಾಗಿದೆ. ಯಡಕುಮೇರಿಯ 218 ಮೈಲಿಯಲ್ಲಿ ಭೂಕುಸಿತ ಉಂಟಾಗಿದ್ದು ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

    ಬೆಂಗಳೂರಿಂದ-ಮಂಗಳೂರಿಗೆ ಹೋಗುತ್ತಿದ್ದ ರೈಲು ಹಾಸನದಲ್ಲಿ ನಿಂತುಕೊಂಡಿದೆ. ಇದರಿಂದ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ನಿಗದಿತ ಜಾಗಗಳಿಗೆ ತಲುಪಲಾಗದೇ ಪರದಾಡಬೇಕಾಗಿದೆ.

    ಹಾಸನದಿಂದ ಬೆಂಗಳೂರಿಗೆ ಹೋಗಲು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. 1200 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಟಿಕೆಟ್ ದರ ಮರುಪಾವತಿ ಮಾಡಿದೆ. ಮಾರ್ಗಮಧ್ಯೆ ಗುಡ್ಡ ಕುಸಿತದಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸಂಜೆ ವೇಳೆಗೆ ರೈಲು ಹಳಿ ಸಂಚಾರಕ್ಕೆ ಮುಕ್ತವಾಗಲಿವೆ ಎಂದು ಹಾಸನ ರೈಲ್ವೆ ನಿಲ್ದಾಣಾಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.

    ಯಡಕುಮೇರಿ-ಕಡಗರವಳ್ಳಿ ನಡುವೆ ನಾಲ್ಕುಕಡೆ ಗುಡ್ಡ ಕುಸಿದು ಯಶವಂತಪುರದಿಂದ ಕಾರವಾರಕ್ಕೆ ಹೋಗುವ ರೈಲಿನ ಪ್ರಯಾಣ ರದ್ದುಗೊಂಡಿದೆ. ಅಲ್ಲಿಗೆ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡಲಾಗಿದೆ. ಆರು ಬಸ್ ಗಳ ಮೂಲಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಹಿತ ದೃಷ್ಟಿಯಿಂದ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ರೈಲಿನ ಮಾರ್ಗವನ್ನೂ ಬದಲಾವಣೆ ಮಾಡಲಾಗಿದೆ.