Tag: Yes Bank

  • ಲಂಡನ್‍ಗೆ ಹಾರಲು ಮುಂದಾಗಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕನ ಪುತ್ರಿಗೆ ತಡೆ- ಮತ್ತಷ್ಟು ವಂಚನೆ ಬಯಲು

    ಲಂಡನ್‍ಗೆ ಹಾರಲು ಮುಂದಾಗಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕನ ಪುತ್ರಿಗೆ ತಡೆ- ಮತ್ತಷ್ಟು ವಂಚನೆ ಬಯಲು

    – 3 ದಿನ ಇಡಿ ಕಸ್ಟಡಿಗೆ ರಾಣಾ ಕಪೂರ್
    – ಕೆಲಸ ಮಾಡ್ತಿವೆ ಯೆಸ್ ಬ್ಯಾಂಕ್ ಡೆಬಿಟ್ ಕಾರ್ಡ್

    ನವದೆಹಲಿ: ಯೆಸ್ ಬ್ಯಾಂಕ್ ಮುಳುಗಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿರುವ ಜಾರಿ ನಿರ್ದೇಶನಾಲಯಕ್ಕೆ ತನಿಖೆಯ ವೇಳೆ ಬೆಚ್ಚಿಬಿಳುವ ವಿಚಾರಗಳು ಬಯಲಾಗುತ್ತಿವೆ.

    ಅಕ್ರಮ ಹಣ ರವಾನೆ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಡ್ರಿಲ್ ನಡೆಸುತ್ತಿರುವ ಇಡಿ, ಬಗೆದಷ್ಟು ಬಯಲಾಗ್ತಿರುವ ಕರ್ಮಕಾಂಡಗಳನ್ನು ಕಂಡು ಶಾಕ್ ಆಗಿದೆ. ಹೀಗಾಗಿಯೇ ಇಂದು ನಸುಕಿನ ರಾಣಾ ಕಪೂರ್ ಅವರನ್ನು ಬಂಧಿಸಿದ ಇಡಿ, ಕೋರ್ಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡಿದೆ.

    ದೇಶ ಬಿಟ್ಟು ಹೋಗಲು ಯತ್ನಿಸಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪುತ್ರಿ ರೋಶಿನಿ ಕಪೂರ್ ಅವರನ್ನು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ವಶಕ್ಕೆ ಪಡೆಯಲಾಗಿದೆ. ರೋಶಿನಿ ಕಪೂರ್ ಬ್ರಿಟಿಷ್ ಏರ್ ವೇಸ್ ಮೂಲಕ ಲಂಡನ್‍ಗೆ ತೆರಳಲು ಮುಂದಾಗಿದ್ದರು ಎಂದು ವರದಿಯಾಗಿದೆ.

    ‘ರೋಶಿನಿ ಕಪೂರ್ ವಿರುದ್ಧ ನೋಟಿಸ್ ಹೊರಡಿಸಿದ್ದರಿಂದ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿತ್ತು. ರಾಣಾ ಕಪೂರ್, ಅವರ ಪತ್ನಿ ಬಿಂದು ಹಾಗೂ ಮೂವರು ಪುತ್ರಿಯರು ಸೇರಿದಂತೆ ಕುಟುಂಬ ಸದಸ್ಯರು ಕಿಕ್‍ಬ್ಯಾಕ್ ಸ್ವೀಕರಿಸಲು 20ಕ್ಕೂ ಹೆಚ್ಚು ಶೆಲ್ ಕಂಪನಿಗಳನ್ನು ಹೊಂದಿದ್ದರು’ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ರಾಣಾ ಕಪೂರ್ ಪತ್ನಿ ಮತ್ತು ಪುತ್ರಿಯರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

    ವಂಚನೆ ಹೇಗೆ?
    ಕಪೂರ್ ಪತ್ನಿ, ಮೂವರು ಹೆಣ್ಣುಮಕ್ಕಳ ಹೆಸರಲ್ಲಿ 20 ಶೆಲ್ ಕಂಪನಿ ತೆರೆದಿದ್ದಾರೆ. ಖಾಸಗಿ ಕಂಪನಿಗಳು ಸಾಲ ಕೊಟ್ಟಿದ್ದಕ್ಕೆ ಪ್ರತಿಯಾಗಿ 2,000 ಕೋಟಿ ರೂ. ಕಿಕ್‍ಬ್ಯಾಕ್ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಡಿಎಚ್‍ಎಫ್‍ಎಲ್‍ಗೆ 3,700 ಕೋಟಿ ರೂಪಾಯಿ ಸಾಲ ನೀಡಿದ್ದು ಡಿಎಚ್‍ಎಫ್‍ಎಲ್‍ನಿಂದ ಕಪೂರ್ ಶೆಲ್ ಕಂಪನಿಗೆ 600 ಕೋಟಿ ರೂ. ಸಂದಾಯವಾಗಿದೆ. ಕಪೂರ್ ಕುಟುಂಬ ಬ್ರಿಟನ್‍ನಲ್ಲಿ 5 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

    ಮುಂಬೈನ ವರ್ಲಿಯಲ್ಲಿರುವ ರಾಣಾ ಕಪೂರ್ ನಿವಾಸದ ಮೇಲೆ ಮೊನ್ನೆಯಷ್ಟೇ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಅವರ ಪತ್ನಿಯನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದರು. ಅಷ್ಟೇ ಅಲ್ಲದೆ ಶನಿವಾರ ಜಾರಿ ನಿರ್ದೇಶನಾಲಯ ಕಚೇರಿಗೆ ಕರೆಯಿಸಿ ಫುಲ್ ಡ್ರಿಲ್ ಮಾಡಿದ್ದರು. ರಾಣಾ ಕಪೂರ್, ಪತ್ನಿ ಮತ್ತು ಮೂವರು ಪುತ್ರಿಯರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಇಡಿ ತನಿಖೆ ಮುಂದುವರಿಸಿದೆ.

    ತಿಂಗಳಿಗೆ 50 ಸಾವಿರ ರೂ. ವಿತ್‍ಡ್ರಾ ಮಿತಿ:
    ಈ ಮಧ್ಯೆ ಎಸ್‍ಬಿಐ ಕೈಗೊಂಡಿರುವ ಪುನಶ್ಚೇತನ ಕ್ರಮಗಳಿಂದಾಗಿ ಯೆಸ್ ಬ್ಯಾಂಕ್ ಸ್ವಲ್ಪ ಮಟ್ಟಿಗೆ ಉಸಿರಾಡಲು ಶುರುಮಾಡಿದೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಯೆಸ್ ಬ್ಯಾಂಕ್, ತನ್ನ ಗ್ರಾಹಕರಿಗೆ ಸ್ವಲ್ಪ ರಿಲೀಫ್ ನೀಡಿದೆ. ಯೆಸ್ ಬ್ಯಾಂಕ್‍ನ ಡೆಬಿಟ್ ಕಾರ್ಡ್ ಬಳಸಿ ಯಾವುದೇ ಎಟಿಎಂನಲ್ಲಿ ಹಣ ಡ್ರಾ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ ತಿಂಗಳಿಗೆ 50 ಸಾವಿರ ರೂ. ವಿತ್‍ಡ್ರಾ ಮಿತಿ ಮುಂದುವರಿಸಲಾಗಿದೆ. ಯೆಸ್ ಬ್ಯಾಂಕ್ ಪುನಶ್ಚೇತನ ಸಂಬಂಧ ಎಸ್‍ಬಿಐ ರೂಪಿಸಿರುವ ಯೋಜನೆಯ ಕರಡು ಪ್ರತಿಯನ್ನು ಸೋಮವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

  • ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕ ಅರೆಸ್ಟ್

    ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕ ಅರೆಸ್ಟ್

    ಮುಂಬೈ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ರನ್ನು  ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.

    ಮುಂಜಾನೆ 4 ಗಂಟೆ ವೇಳೆ ಮುಂಬೈನಲ್ಲಿ ಕಪೂರನ್ನು ಬಂಧಿಸಿದ್ದು ಹಣ ಅವ್ಯವಹಾರ ಪ್ರಕರಣ ಸಂಬಂಧ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆದರೆ ಬಂಧಿತ ರಾಣಾ ಕಪೂರ್ ಅಧಿಕಾರಿಗಳ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವಂತೆ. ಇದನ್ನೂ ಓದಿ: ಯೆಸ್ ಬ್ಯಾಂಕ್‍ನಲ್ಲಿ ಎಸ್‍ಬಿಐ 10 ಸಾವಿರ ಕೋಟಿ ಹೂಡಿಕೆ

    ಸದ್ಯದಲ್ಲೇ ಕಪೂರ್‍ನ ಅಧಿಕಾರಿಗಳು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಇತ್ತ ಯೆಸ್ ಬ್ಯಾಂಕ್ ಗ್ರಾಹಕರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಹಣ ಡ್ರಾಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಯೆಸ್ ಬ್ಯಾಂಕ್ ಎಟಿಎಂಗಳಲ್ಲಿ ಹಣ ತೆಗೆಯಲು ಮಾತ್ರ ಅವಕಾಶ ಇಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಡೋಂಟ್ ವರಿ, ನಿಮ್ಮ ಹಣ ಸೇಫ್ ಆಗಿದೆ- ಯೆಸ್ ಬ್ಯಾಂಕ್ ಠೇವಣಿದಾರರಿಗೆ ಸೀತಾರಾಮನ್ ಅಭಯ

    ಕಾಳಧನ ಸಕ್ರಮ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಕಪೂರ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ದೇಶ ಬಿಟ್ಟು ಹೋಗದಂತೆ ತಡೆಯಲು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಎಟಿಎಂ ಸ್ಥಗಿತ, ಫೋನ್ ಪೇ ಇಲ್ಲ, ವಿಥ್ ಡ್ರಾಗೆ ಮಿತಿ: ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು ಯಾಕೆ?

  • ಯೆಸ್ ಬ್ಯಾಂಕ್‍ನಲ್ಲಿ ಎಸ್‍ಬಿಐ 10 ಸಾವಿರ ಕೋಟಿ ಹೂಡಿಕೆ

    ಯೆಸ್ ಬ್ಯಾಂಕ್‍ನಲ್ಲಿ ಎಸ್‍ಬಿಐ 10 ಸಾವಿರ ಕೋಟಿ ಹೂಡಿಕೆ

    ಮುಂಬೈ: ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಎಸ್‍ಬಿಐ ಮುಂದಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‍ಬಿಐ ಚೇರ್ಮನ್ ರಜನೀಶ್ ಕುಮಾರ್, ಯೆಸ್ ಬ್ಯಾಂಕ್‍ನ ಶೇ.49ರಷ್ಟು ಷೇರು ಖರೀದಿಗೆ ಎಸ್‍ಬಿಐ ಮುಂದಾಗಿದ್ದು, ಮೊದಲ ಹಂತದಲ್ಲಿ 2,450 ಕೋಟಿ ರೂ. ವಿನಿಯೋಗಿಸಲು ಉದ್ದೇಶಿಸಿದೆ. ಮುಂದಿನ ಹಂತದಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಲಿದ್ದೇವೆ. ಯೆಸ್ ಬ್ಯಾಂಕ್ ಗ್ರಾಹಕರು, ಷೇರುದಾರರ ಹಿತ ಕಾಪಾಡಲು ಎಸ್‍ಬಿಐ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಮಧ್ಯೆ, ಅಕ್ರಮ ಹಣ ರವಾನೆ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ. ಡಿಹೆಚ್‍ಎಫ್‍ಎಲ್ ಬ್ಯಾಂಕ್‍ಗೆ ನೀಡಿದ ಸಾಲ ವಾಪಸ್ ಆಗಿಲ್ಲ. ಇದರಲ್ಲಿ ಕಪೂರ್ ಪಾತ್ರ ಇರುವ ಬಗ್ಗೆ ಸಂಶಯದ ಮೇಲೆ ತನಿಖೆ ನಡೆಸಿದೆ. ಕಳೆದ ರಾತ್ರಿಯಿಂದ ಕಪೂರ್ ಮನೆಯಲ್ಲಿ ಇಡಿ ಶೋಧ ಕಾರ್ಯ ನಡೆಸಿದೆ.

    2ನೇ ದಿನವೂ ದುಡ್ಡಿಗಾಗಿ ಗ್ರಾಹಕರು ಪರದಾಡಿದ್ದಾರೆ. ಬೆಂಗಳೂರಿನ ಹಲವು ಶಾಖೆಗಳಲ್ಲಿ ದುಡ್ಡು ಬಿಡಿಸಿಕೊಳ್ಳಲು ಜನ ಸಾಲುಗಟ್ಟಿ ನಿಂತಿದ್ದರು. ತಿಂಗಳ ವೇತನ ತೆಗೆಯಲಾಗದೇ ಕೆಲವರು ಪರದಾಡಿದರು. ಬ್ಯಾಂಕ್‍ನಲ್ಲಿ ಮೂರೂವರೆ ಲಕ್ಷ ದುಡ್ಡು ಇಟ್ಟಿದ್ದೆ. ಈಗ ತೆಗೆಯಲು ಆಗುತ್ತಿಲ್ಲ. ನನ್ನ ಗಂಡ ಆಸ್ಪತ್ರೆಯಲ್ಲಿದ್ದಾರೆ ಅಂತ ವೃದ್ಧೆ ಕಣ್ಣೀರಿಟ್ಟಿದ್ದಾರೆ.

  • ಡೋಂಟ್ ವರಿ, ನಿಮ್ಮ ಹಣ ಸೇಫ್ ಆಗಿದೆ- ಯೆಸ್ ಬ್ಯಾಂಕ್ ಠೇವಣಿದಾರರಿಗೆ ಸೀತಾರಾಮನ್ ಅಭಯ

    ಡೋಂಟ್ ವರಿ, ನಿಮ್ಮ ಹಣ ಸೇಫ್ ಆಗಿದೆ- ಯೆಸ್ ಬ್ಯಾಂಕ್ ಠೇವಣಿದಾರರಿಗೆ ಸೀತಾರಾಮನ್ ಅಭಯ

    ನವದೆಹಲಿ: ಡೋಂಟ್ ವರಿ, ನಿಮ್ಮ ಹಣ ಸೇಫ್ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೆಸ್ ಬ್ಯಾಂಕ್ ಠೇವಣಿದಾರರಲ್ಲಿ ಧೈರ್ಯ ತುಂಬಲು ಯತ್ನಿಸಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಆರ್‌ಬಿಐ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಯೆಸ್ ಬ್ಯಾಂಕ್‍ನಲ್ಲಿ ಎಸ್‍ಬಿಐ 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು, ಅಲ್ಲಿನ ಉದ್ಯೋಗಿಗಳಿಗೆ ಒಂದು ವರ್ಷ ಯಾವುದೇ ಭಯ ಇರಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ ಸಾಲಗಳೇ ಯೆಸ್ ಬ್ಯಾಂಕ್‍ಗೆ ಮುಳುವಾಗಿವೆ. ಯಶ್ ಬ್ಯಾಂಕ್ ಬಿಕ್ಕಟ್ಟು ದಿಢೀರ್ ಸಂಭವಿಸಿದ್ದಲ್ಲ. 2017ರಿಂದಲೇ ಬ್ಯಾಂಕ್ ಮೇಲೆ ನಾವು ನಿಗಾ ಇಟ್ಟಿದ್ದೇವು. ಈ ನಿಟ್ಟಿನಲ್ಲಿ ಆರ್‌ಬಿಐ ಯೆಸ್ ಬ್ಯಾಂಕ್‍ನ ವ್ಯವಸ್ಥಾಪ ನಿರ್ದೇಶಕ ಹಾಗೂ ಸಿಇಒ ಅವರನ್ನು ಬದಲಿಸಲು ಶಿಫಾರಸು ಮಾಡಿತ್ತು. ಅದರಂತೆ 2018ರ ಸೆಪ್ಟೆಂಬರ್ ನಲ್ಲಿ ಹೊಸದಾಗಿ ಸಿಇಒ ಅವರನ್ನು ನೇಮಕ ಮಾಡಲಾಗಿತ್ತು. ಅಂದಿನಿಂದ ಬ್ಯಾಂಕಿನ ಬಿಕ್ಕಟ್ಟು ಸುಧಾರಣಗೆ ಕೆಲಸ ನಡೆದಿತ್ತು ಎಂದು ತಿಳಿಸಿದರು.

    ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿ, ಆರ್ಥಿಕತೆಯನ್ನು ಕಾಪಾಡುವ ದೃಷ್ಟಿಯಿಂದಲೇ ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈ ತಿಂಗಳ ಒಳಗೆ ಯೆಸ್ ಬ್ಯಾಂಕ್ ಪುನರುಜ್ಜೀವನಕ್ಕೆ ಯೋಜನೆ ರೂಪಿಸಲಾಗುವುದು. ಗ್ರಾಹಕರು ಆತಂಕ ಪಡುವುದು ಬೇಡ ಎಂದಿದ್ದಾರೆ.

    ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. 2014ರಲ್ಲಿ 15 ಲಕ್ಷ ತೆಗೆದುಕೊಳ್ಳಿ ಎಂದ ಮೋದಿ, 2018ರಲ್ಲಿ ಪಕೋಡಾ ತೆಗೆದುಕೊಳ್ಳಿ ಎಂದಿದೆ. ಇದೀಗ ಬ್ಯಾಂಕ್‍ಗಳನ್ನು ಬಂದ್ ಮಾಡಲು ಚಾವಿ ಲೋ ಎನ್ನುತ್ತಿದೆ ಎಂದು ವ್ಯಂಗ್ಯವಾಡಿದೆ. ಇದು ಯೆಸ್ ಬ್ಯಾಂಕ್ ಅಲ್ಲ ನೋ ಬ್ಯಾಂಕ್.. ಮೋದಿ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಹೇಗೆ ಸರ್ವನಾಶ ಮಾಡಿದೆ ಎಂಬುದಕ್ಕೆ ಯೆಸ್ ಬ್ಯಾಂಕ್ ತಾಜಾ ಉದಾಹರಣೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಜೊತೆಗೆ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

  • ಎಟಿಎಂ ಸ್ಥಗಿತ, ಫೋನ್ ಪೇ ಇಲ್ಲ, ವಿಥ್ ಡ್ರಾಗೆ ಮಿತಿ: ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು ಯಾಕೆ?

    ಎಟಿಎಂ ಸ್ಥಗಿತ, ಫೋನ್ ಪೇ ಇಲ್ಲ, ವಿಥ್ ಡ್ರಾಗೆ ಮಿತಿ: ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ್ದು ಯಾಕೆ?

    ಬೆಂಗಳೂರು/ಮುಂಬೈ: ಖಾಸಗಿ ರಂಗದ 5ನೇ ಅತಿ ದೊಡ್ಡ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್‌ಬಿಐ ಸೂಪರ್ ಸೀಡ್ ಮಾಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.

    ಇದೆ ವೇಳೆ ಮುಂದಿನ ಆದೇಶದವರೆಗೂ ಬ್ಯಾಂಕ್ ಗ್ರಾಹಕರು ಗರಿಷ್ಠ 50 ಸಾವಿರ ರೂ.ವರೆಗೆ ನಗದು ಹಣವನ್ನು ಡ್ರಾ ಮಾಡಲು ಅವಕಾಶವನ್ನು ನೀಡಿದೆ. ಈ ವಿಚಾರವನ್ನು ತಿಳಿದು ಗ್ರಾಹಕರು ಬ್ಯಾಂಕ್ ಕಚೇರಿಗೆ ದೌಡಾಯಿಸುತ್ತಿದ್ದು ಎಟಿಎಂ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

    ಕೆಲವೊಂದು ಎಟಿಎಂಗಳು ಸಹ ಕಾರ್ಯನಿರ್ವಹಿಸದ ಪರಿಣಾಮ ಗ್ರಾಹಕರು ಶಾಪ ಹಾಕುತ್ತಿದ್ದಾರೆ. ಎಟಿಎಂ ಮುಂದೆ ಆರ್‌ಬಿಐ ನೋಟಿಸ್ ಅಂಟಿಸಲಾಗಿದ್ದು ಸಹಕರಿಸುವಂತೆ ಬ್ಯಾಂಕ್ ಕೇಳಿಕೊಂಡಿದೆ. ಭಾರೀ ಸಂಖ್ಯೆಯಲ್ಲಿ ಗ್ರಾಕರು ಇಂಟರ್ ನೆಟ್ ವ್ಯವಹಾರ ನಡೆಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗಿದೆ. ಶೀಘ್ರವೇ ಮರಳುತ್ತೇವೆ ಎಂದು ಯೆಸ್ ಬ್ಯಾಂಕ್ ಹೇಳಿದೆ.

    ಆರ್‌ಬಿಐ ಆದೇಶದಲ್ಲಿ ಏನಿದೆ?
    ಯೆಸ್ ಬ್ಯಾಂಕ್‍ನ ಎಲ್ಲಾ ಹಣಕಾಸು ಕಾರ್ಯ ಚಟುವಟಿಕೆಗಳ ಮೇಲೆ ತಡೆ ವಿಧಿಸಲಾಗಿದೆ. ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಲಾಗಿದ್ದು, ಗ್ರಾಹಕರು ಗರಿಷ್ಟ 50 ಸಾವಿರ ರೂ. ಹಣವನ್ನು ಡ್ರಾ ಮಾಡಬಹುದು ಎಂದು ತಿಳಿಸಿದೆ. ಮುಂದಿನ 30 ದಿನಗಳವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬ್ಯಾಂಕಿನ ಹಣಕಾಸು ಪರಿಸ್ಥಿತಿ ಮತ್ತು ಗ್ರಾಹಕರ ಹಿತ ಕಾಪಾಡುತ್ತೇವೆ ಎಂದು ಆರ್‌ಬಿಐ ಹೇಳಿದೆ. ಎಸ್‍ಬಿಐನ ಮಾಜಿ ಸಿಎಫ್‍ಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ.

    ಫೋನ್ ಪೇ ಅಲಭ್ಯ: ಯೆಸ್ ಬ್ಯಾಂಕ್ ಜೊತೆ ಫೋನ್ ಪೇ ಹಣಕಾಸು ವ್ಯವಹಾರ ನಡೆಸುತಿತ್ತು. ಈಗ ವ್ಯವಹಾರಕ್ಕೆ ನಿರ್ಬಂಧ ಹೇರಿದ್ದರಿಂದ ಪೋನ್ ಪೇ ಸೇವೆ ಸಹ ಅಲಭ್ಯವಾಗಿದೆ. ಶೀಘ್ರವೇ ನಾವು ಸೇವೆ ನೀಡುತ್ತೇವೆ ಎಂದು ಫೋನ್ ಪೇ ಸಿಇಒ ಸಮೀರ್ ನಿಗಮ್ ತಿಳಿಸಿದ್ದಾರೆ.

    ಸಂಕಷ್ಟಕ್ಕೆ ಗುರಿಯಾಗಿದ್ದು ಯಾಕೆ?
    ವಸೂಲಾಗದ ಸಾಲದ ಪ್ರಮಾಣದಲ್ಲಿನ ಭಾರಿ ಹೆಚ್ಚಳದಿಂದಾಗಿ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿದೆ. 2003-04 ರಲ್ಲಿ ಆರಂಭಗೊಂಡ ಈ ಬ್ಯಾಂಕ್ 10 ವರ್ಷಗಳಲ್ಲಿ ದೇಶದ ಟಾಪ್ 5 ಖಾಸಗಿ ಬ್ಯಾಂಕ್ ಆಗಿ ಹೊರಹೊಮ್ಮಿತ್ತು. ರಾಣಾ ಕಪೂರ್ ಮಾಲೀಕತ್ವದ ಈ ಬ್ಯಾಂಕ್ ನಲ್ಲಿ ರಾಬೋ ಬ್ಯಾಂಕ್ ಸಹ ಪಾಲು ಹೊಂದಿತ್ತು. ರಾಣಾ ಕಪೂರ್ ಶೇ.26 ರಷ್ಟು ಷೇರು ಹೊಂದಿದ್ದರೆ, ರಾಬೋ ಬ್ಯಾಂಕ್ ಇಂಟರ್ನ್ಯಾಷನಲ್  ಶೇ.20 ರಷ್ಟು ಷೇರುಗಳನ್ನು ಹೊಂದಿತ್ತು.

    ವಿಜಯ್ ಮಲ್ಯ, ನೀರವ್ ಮೋದಿಯಂತಹ ವ್ಯಕ್ತಿಗಳು ಕೋಟ್ಯಂತರ ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾದ ಬಳಿಕ ಕೇಂದ್ರ ಸರ್ಕಾರ ಭಾರೀ ಟೀಕೆಗೆ ಗುರಿಯಾಯಿತು. ಬಡವರ ಸಾಲ ಮನ್ನಾ ಮಾಡಲು ಹಿಂದೆ ಮುಂದೆ ನೋಡುವ ಸರ್ಕಾರಗಳು ಉದ್ಯಮಿಗಳ ಸಾಲ ಮನ್ನಾ ಮಾಡುವುದು ಸರಿಯೇ ಎನ್ನುವ ಪ್ರಶ್ನೆ ಎದ್ದಿತ್ತು. ಈ ಟೀಕೆಯ ನಂತರ ಎಚ್ಚೆತ್ತ ಆರ್‌ಬಿಐ ಸಾಲ ಮಾಡಿ ವಿದೇಶಕ್ಕೆ ಉದ್ಯಮಿಗಳು ಪರಾರಿ ಆಗದೇ ಇರಲು ಎಲ್ಲ ಬ್ಯಾಂಕ್ ಗಳು ಸಾಲದ ವಿವರಗಳನ್ನು ಕಡ್ಡಾಯವಾಗಿ ತನಗೆ ಸಲ್ಲಿಸಬೇಕು ಎಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿ ಅದನ್ನು ಮರಳಿ ಪಾವತಿಸದೆ ಇರುವವರನ್ನು ಆಯಾ ಬ್ಯಾಂಕುಗಳೇ ದಿವಾಳಿ ನ್ಯಾಯಾಲಯಕ್ಕೆ ಎಳೆಯಬೇಕು. ಈ ವಿಚಾರದಲ್ಲಿ ಬ್ಯಾಂಕ್ ಗಳು ಉದ್ಯಮಿಗಳ ಜೊತೆ ಸೇರಿ ಸಾಲವನ್ನು ಮುಚ್ಚಿಟ್ಟು ದಿವಾಳಿ ಪ್ರಕ್ರಿಯೆ ನಡೆಸದೇ ಇದ್ದರೆ ಬ್ಯಾಂಕ್ ಗಳ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

    ಆರ್‌ಬಿಐ ಈ ಕಠಿಣ ನಿಯಮ ಯೆಸ್ ಬ್ಯಾಂಕಿಗೆ ಭಾರೀ ಹೊಡೆತ ನೀಡಿತ್ತು. ಕಠಿಣ ನಿಯಮ ಜಾರಿಯಾದ ನಂತರ ಯೆಸ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ನಲ್ಲಿ ವಸೂಲಾಗದ ಸಾಲದ ವಿಚಾರದಲ್ಲಿ ವ್ಯತ್ಯಾಸ ಇರುವುದು ಆರ್‌ಬಿಐ ಗಮನಕ್ಕೆ ಬಂದಿತ್ತು. 2019ರ ಸೆಪ್ಟೆಂಬರ್ ವೇಳೆ ವಸೂಲಾಗದ ಸಾಲದ ಪ್ರಮಾಣ ಶೇ.7.4ಕ್ಕೆ ಏರಿಕೆಯಾಗಿತ್ತು. ಈ ಸಮಸ್ಯೆಯ ಸುಳಿಯಿಂದ ಹೊರಬರಬೇಕಾದರೆ ಯೆಸ್ ಬ್ಯಾಂಕಿಗೆ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಅವಶ್ಯಕತೆಯಿತ್ತು.

    ವಿವಿಧ ಮೂಲಗಳನ್ನು ಹುಡುಕುತ್ತಿದ್ದಾಗ ಯೆಸ್ ಬ್ಯಾಂಕ್ ಕಳೆದ ನವೆಂಬರ್ ತಿಂಗಳಿನಲ್ಲಿ 2 ಶತಕೋಟಿ ಡಾಲರ್ ಹಣವನ್ನು ಷೇರುಗಳ ಮೂಲಕ ಸಂಗ್ರಹಿಸುವುದಾಗಿ ಘೋಷಣೆ ಮಾಡಿತ್ತು. ಘೋಷಣೆ ಮಾತ್ರ ಆಯ್ತ, ಆದರೆ ಮುಂದೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ.

    ಆರ್‌ಬಿಐನಿಂದ ಪ್ರಕ್ರಿಯೆ ತಡವಾಯ್ತೆ?
    ಕಳೆದ ವರ್ಷ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ(ಪಿಎಂಸಿ) ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್‌ಬಿಐ ಸೂಪರ್ ಸೀಡ್ ಮಾಡಿತ್ತು. ಈ ಪ್ರಕರಣ ನಡೆದ 6 ತಿಂಗಳ ಬಳಿಕ ಖಾಸಗಿ ರಂಗದ ದೊಡ್ಡ ಬ್ಯಾಂಕ್ ಆಗಿದ್ದ ಯೆಸ್ ಬ್ಯಾಂಕನ್ನು ಆರ್‌ಬಿಐ ಸೂಪರ್ ಸೀಡ್ ಮಾಡಿದೆ. ಹಾಗೆ ನೋಡಿದರೆ ಯೆಸ್ ಬ್ಯಾಂಕ್ ಸಂಕಷ್ಟದಲ್ಲಿ ಅಕ್ರಮ ನಡೆದಿರುವ ವಿಚಾರ ಆರ್‌ಬಿಐಗೆ 2018ರಲ್ಲೇ ಗೊತ್ತಾಗಿತ್ತು. ಸೆಬಿ ಸೂಚನೆಯ ಹಿನ್ನೆಲೆಯಲ್ಲಿ ಬ್ಯಾಂಕಿನ ಮುಖ್ಯಸ್ಥ ರಾಣಾ ಕಪೂರ್ 2019ರ ಜ.31ರಂದು ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ವೇಳೆ ತಮ್ಮ ಬಳಿಯಿದ್ದ ಅಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು. ಸದ್ಯ ಈಗ ಶೇ.48ರಷ್ಟು ಷೇರು ಚಿಲ್ಲರೆ ಹೂಡಿಕೆದಾರರ ಬಳಿ ಇದೆ. 2019 ಹಣಕಾಸು ವರ್ಷದ ನಾಲ್ಕನೇಯ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ 1,507 ಕೋಟಿ ರೂ. ನಷ್ಟ ಅನುಭವಿಸಿತ್ತು.

    ಯಾರಿಗೆ ಸಾಲ ನೀಡಿದೆ?
    ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ಜೆಟ್ ಏರ್ ವೇಸ್, ಐಎಲ್ ಆಂಡ್ ಎಫ್‍ಎಸ್, ದಿವಾನ್ ಹೌಸಿಂಗ್, ಕಾಕ್ಸ್ ಆಂಡ್ ಕಿಂಗ್ಸ್, ಸಿಜಿ ಪವರ್, ಅಲ್ಟಿಕೋ ಕಂಪನಿಗಳಿಗೆ ಸಾಲ ನೀಡಿದೆ.

    ಬೇಕಾಬಿಟ್ಟಿ ಸಾಲ?
    ಸಾರ್ವಜನಿಕ ರಂಗದ ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಳ್ಳಬೇಕಾದರೆ ಹಲವು ಮಾನದಂಡಗಳು ಇರತ್ತದೆ ಮತ್ತು ಅಷ್ಟು ಸುಲಭವಾಗಿ ಸಾಲ ಸಿಗುವುದಿಲ್ಲ. ಆದರೆ ಖಾಸಗಿ ಬ್ಯಾಂಕ್ ಗಳು ಉದ್ಯಮಿಗಳಿಗೆ ಕಠಿಣ ನಿಯಮವನ್ನು ವಿಧಿಸುವುದಿಲ್ಲ. ಹೀಗಾಗಿ ಉದ್ಯಮಿಗಳು ಬಡ್ಡಿ ಜಾಸ್ತಿ ಇದ್ದರೂ ಖಾಸಗಿ ಬ್ಯಾಂಕುಗಳಿಂದ ಸಾಲವನ್ನು ಸುಲಭವಾಗಿ ಪಡೆಯುತ್ತಾರೆ. ಸರಿಯಾದ ಮಾನದಂಡಗಳನ್ನು ಅನುಸರಿಸದೇ ಸಾಲ ನೀಡಿರುವುದು ಮತ್ತು ಸಾಲ ಮರುಪಾವತಿ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿದ್ದರೂ ಕಠಿಣ ಕ್ರಮಗಳನ್ನು ಕೈಗೊಳ್ಳದ ಕಾರಣ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿ ಹೆಚ್ಚಾಗುತ್ತದೆ.