Tag: Yelahanka

  • ಯಲಹಂಕ ಆಸ್ಪತ್ರೆಯಲ್ಲಿ 14 ವೆಂಟಿಲೇಟರ್ ಬೆಡ್, 50 ಆಮ್ಲಜನಕ ಬೆಡ್ ವ್ಯವಸ್ಥೆ ಲೋಕಾರ್ಪಣೆ ಮಾಡಿದ ಡಿಸಿಎಂ

    ಯಲಹಂಕ ಆಸ್ಪತ್ರೆಯಲ್ಲಿ 14 ವೆಂಟಿಲೇಟರ್ ಬೆಡ್, 50 ಆಮ್ಲಜನಕ ಬೆಡ್ ವ್ಯವಸ್ಥೆ ಲೋಕಾರ್ಪಣೆ ಮಾಡಿದ ಡಿಸಿಎಂ

    ಬೆಂಗಳೂರು: ಯಲಹಂಕದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಿರುವ 14 ವೆಂಟಿಲೇಟರ್‍ಗಳ ಐಸಿಯು ಬೆಡ್ ವ್ಯವಸ್ಥೆ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ಶಾಲೆಯಲ್ಲಿ ಸ್ಥಾಪಿಸಿರುವ ಆಮ್ಲಜನಕ ಸಹಿತ 50 ಬೆಡ್‍ಗಳ ಆರೈಕೆ ಕೇಂದ್ರಕ್ಕೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೋಮವಾರ ಚಾಲನೆ ನೀಡಿದರು.

    ‘ವಿಶ್ವವಾಣಿ’ ಫೌಂಡೇಶನ್ ಹಾಗೂ ‘ಅಜೀಂ ಪ್ರೇಮ್ ಜಿ’ ಫೌಂಡೇಶನ್ ಸಹಯೋಗದಲ್ಲಿ ಈ ಕೋವಿಡ್ ಐಸಿಯು ವೆಂಟಿಲೇಟರ್ ವಾರ್ಡ್ ಸ್ಥಾಪನೆಯಾಗಿದ್ದು, ಈ ಭಾಗದ ಸೋಂಕಿತರಿಗೆ ಹೆಚ್ಚು ಅನುಕೂಲವಾಗಲಿದೆ.

    ಉದ್ಘಾಟನೆ ನಂತರ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಟೆಕ್ನಾಲಜಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಖಾಸಗಿಯವರ ಸಹಯೋಗದಲ್ಲಿ ಉತ್ತಮ ಆರೋಗ್ಯ ಮೂಲಸೌಕರ್ಯ ಒದಗಿಸುವ ಕೆಲಸ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಆಗುತ್ತಿದೆ. ಈ ನಿಟ್ಟಿನಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪ್ರಯತ್ನ ಶ್ಲಾಘನೀಯ ಎಂದರು.

    ರಾಜ್ಯದ ಉದ್ದಗಲಕ್ಕೂ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಸರಕಾರ ಸರ್ವ ರೀತಿಯ ಕ್ರಮ ವಹಿಸಿದೆ. ಕಾಲಮಿತಿಯೊಳಗೆ ಈ ಕೆಲಸ ಮಾಡಿ ಮುಗಿಸಲಾಗುವುದು. ಸರಕಾರಿ & ಖಾಸಗಿ ಸಹಯೋಗದಲ್ಲಿ ಈ ಮಹತ್ಕಾರ್ಯವನ್ನು ಸಾಧಿಸಲಾಗುವುದು ಎಂದ ಅವರು, ಕೋವಿಡ್‍ನಂಥ ಸಾಂಕ್ರಾಮಿಕ ಮಾರಿಯನ್ನು ಎದುರಿಸಬೇಕಾದರೆ ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ವೈದ್ಯ ವ್ಯವಸ್ಥೆ ಇರಲೇಬೇಕು ಎಂದರು.

    ಯಲಹಂಕದಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಮಾತನಾಡಿ, ಕ್ಷೇತ್ರದಲ್ಲಿ ಯಾರೊಬ್ಬರೂ ಆರೋಗ್ಯ ಸೇವೆಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಉತ್ತಮ ರೀತಿಯ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ. ಕ್ಷೇತ್ರದಲ್ಲಿ ಜನಸಾಮಾನ್ಯರಿಗೂ ವೆಂಟೆಲೇಟರ್ ಸೌಲಭ್ಯ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದರ ಉಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

    ಆಸ್ಪತ್ರೆಯಲ್ಲಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ಮತ್ತು ಡಾಕ್ಡರ್ಸ್ ಫಾರ್ ಯೂ ಸಂಸ್ಥೆಯ ಸಿಬ್ಬಂದಿ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಕೋವಿಡ್ ಕೇರ್ ಕೇಂದ್ರದಲ್ಲಿ ಸೋಂಕಿತರಿಗೆ ರಿಕ್ರಿಯೇಷನ್ ಗೂ ಅವಕಾಶ ಇದ್ದು ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕ್ರಿಕೆಟ್ ಆಡುವುದರ ಮೂಲಕ ಅದಕ್ಕೂ ಚಾಲನೆ ನೀಡಿದರು. ಕ್ರಿಕೆಟ್, ವಾಲಿಬಾಲ್, ಕೇರಂ ಇತ್ಯಾದಿ ಆಟಗಳಿಗೂ ಯಲಹಂಕ ದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿಶ್ವನಾಥ ತಿಳಿಸಿದರು.

    ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಆಸ್ಪತ್ರೆ ಮುಖ್ಯಸ್ಥೆ ಡಾ.ಅಸ್ಮಾ, ಡಿಎಚ್‍ಒ ಡಾ.ಶ್ರೀನಿವಾಸ್, ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ಮತ್ತು ಡಾಕ್ಟರ್ ಫಾರ್ ಯೂ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

  • 80 ಆಮ್ಲಜನಕ ಸಾಂದ್ರಕಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಿದ ಗಿವ್ ಇಂಡಿಯಾ

    80 ಆಮ್ಲಜನಕ ಸಾಂದ್ರಕಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಿದ ಗಿವ್ ಇಂಡಿಯಾ

    – 2,000 ಸಾಂದ್ರಕ ಕೊಡುವ ಭರವಸೆ
    – ಯಲಹಂಕದಲ್ಲಿ ಬೋಯಿಂಗ್‍ನಿಂದ 450 ಬೆಡ್ ಆಕ್ಸಿಜನ್ ಘಟಕ

    ಬೆಂಗಳೂರು: ಗಿವ್ ಇಂಡಿಯಾ ಸಂಸ್ಥೆಯು ಜಿಕೆವಿಕೆ ಕ್ಯಾಂಪಸ್ಸಿನಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗೆ 80 ಆಮ್ಲಜನಕ ಸಾಂದ್ರಕ (oxygen concentrator) ಗಳನ್ನು ಶನಿವಾರ ಹಸ್ತಾಂತರ ಮಾಡಿದೆ.

    ಸಂಸ್ಥೆಯ ಸಿಇಒ ಅಥುತ್ ಸಟೇಜಾ ಅವರು ಆಮ್ಲಜನಕ ಸಾಂದ್ರಕಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಜಿಕೆವಿಕೆ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಹಸ್ತಾಂತರ ಮಾಡಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಮುಂದಿನ ದಿನಗಳಲ್ಲಿ ಗಿವ್ ಇಂಡಿಯಾ ಸಂಸ್ಥೆ ಇನ್ನೂ 2000 ಆಮ್ಲಜನಕ ಸಾಂದ್ರಕಗಳನ್ನು ನೀಡಲಿದೆ. ಅವುಗಳನ್ನು ರಾಜ್ಯಾದ್ಯಂತ ಸ್ಥಾಪನೆ ಮಾಡಲಾಗುವ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಅಳವಡಿಸಲಾಗುವುದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಖಾಸಗಿ ಕ್ಷೇತ್ರವೂ ಹೆಗಲು ಕೊಡುತ್ತಿರುವುದು ಅತ್ಯಂತ ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಗಿವ್ ಇಂಡಿಯಾದ ಕೊಡುಗೆ ಸ್ಮರಣೀಯವಾಗಿದೆ. ಜಿಕೆವಿಕೆಯ ಕೋವಿಡ್ ಕೇರ್ ಸೆಂಟರ್ ಅತ್ಯುತ್ತಮವಾಗಿದ್ದು, ಯಾರೇ ಸೋಂಕಿತರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯಬಹುದಾಗಿದೆ. ಇಲ್ಲಿಗೆ ಬಂದವರಿಗೆ ನಿಸ್ಸಂಶಯವಾಗಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು.

    ಬೋಯಿಂಗ್‍ನಿಂದ 450 ಬೆಡ್:
    ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದ ಮಾತುಕತೆ ಫಲವಾಗಿ ಯಲಹಂಕ ಭಾಗದಲ್ಲಿ 200 ಆಕ್ಸಿಜನ್ ಬೆಡ್‍ಗಳ ಚಿಕಿತ್ಸಾ ಘಟಕವನ್ನು ಬೋಯಿಂಗ್ ಸಂಸ್ಥೆ ಸ್ಥಾಪಿಸಿದ್ದು, ಅದು ಲೋಕಾರ್ಪಣೆಗೆ ಸಿದ್ಧವಾಗಿದೆ. ಇನ್ನೂ 250 ಬೆಡ್‍ಗಳನ್ನು ಮಾಡಿಕೊಡಲು ಅದೇ ಸಂಸ್ಥೆ ಮುಂದೆ ಬಂದಿದೆ. ಅದು ಕೂಡ ಬೇಗ ಕಾರ್ಯಾರಂಭ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಕರಕುಶಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಸಿಎಸ್‍ಆರ್ ಸಲಹೆಗಾರ ಕೆ.ವಿ.ಮಹೇಶ್, ಯಲಹಂಕ ವಲಯದ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಏರೋ ಇಂಡಿಯಾ ಶೋಗೆ ಚಾಲನೆ

    ಏರೋ ಇಂಡಿಯಾ ಶೋಗೆ ಚಾಲನೆ

    ಬೆಂಗಳೂರು: ಇಂದಿನಿಂದ ಮೂರು ದಿನ ಯಲಹಂಕದ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾ ಶೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ರು. ಭಾರತೀಯ ವಾಯುಸೇನೆ ಹಾಗೂ ಏರೋ ಇಂಡಿಯಾ 2021 ಧ್ವಜಹೊತ್ತು ಎಲ್‍ಯುಎಚ್ (ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್) ಹೆಲಿಕ್ಯಾಪ್ಟರ್ ಗಳು ವೇದಿಕೆಯ ಎಡಭಾಗದಿಂದ ಬಲಭಾಗಕ್ಕೆ ಹಾರುವ ಮೂಲಕ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಾಯ್ತು.

    ಏರೋ ಇಂಡಿಯಾ ಶೋಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ರಾಜನಾಥ ಸಿಂಗ್, ಕೊರೋನಾ ಕಷ್ಟದ ಸಮಯದಲ್ಲಿ ಏರೋ ಶೋ ಆರಂಭವಾಗಿದೆ. ಏಷ್ಯಾದಲ್ಲೇ ಅತ್ಯಂತ ಅತಿ ದೊಡ್ಡ ಏರೋ ಶೋ ಆಯೋಜನೆ ಮಾಡಿರುವ ಬೆಂಗಳೂರಿಗೆ ಅಭಿನಂದನೆ. ಬಸವಣ್ಣ, ವಿಶ್ವೇಶ್ವರಯ್ಯ ಹುಟ್ಟಿದ ನಾಡು ಕರುನಾಡು. ಏರೋ ಶೋ ಆಯೋಜನೆ ಮಾಡಲು ಸಹಕರಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಅಚವರಿಗೆ ಅಭಿನಂದನೆ ಸಲ್ಲಿಸಿದ್ರು.

    ರಾಜ್ಯ ಸರ್ಕಾರ ಎಲ್ಲರ ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದು, 540 ಪ್ರದರ್ಶಕರು, 77 ವಿದೇಶಿ ಪ್ರದರ್ಶಕರು ಭಾಗಿಯಾಗಲಿದ್ದಾರೆ. ಬೆಂಗಳೂರು ವಿದ್ಯಾಭ್ಯಾಸ, ಸ್ಟಾರ್ಟ್ ಅಪ್, ವಹಿವಾಟಿಗೆ ಅತ್ಯುತ್ತಮ ಸ್ಥಳವಾಗಿದೆ. 1 ಸಾವಿರ ಎಕರೆ ವಿಸ್ತೀರ್ಣದ ಏರೋಸ್ಪೇಸ್ ಪಾರ್ಕ್ ದೇವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ. ಎರಡು ಅಂತರಾಷ್ಟ್ರೀಯ ಮತ್ತು ಐದು ಡೊಮೆಸ್ಟಿಕ್ ಏರ್ಪೋರ್ಟ್ ಕರ್ನಾಟಕದಲ್ಲಿದೆ. ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತದ ಕನಸು ಕಂಡಿದ್ದಾರೆ. ಅದಕ್ಕೆ ಪೂರಕವಾಗಿ ಕರ್ನಾಟಕವೂ ನಡೆದುಕೊಳ್ಳುತ್ತಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

    ಇಂದಿನಿಂದ ಮೂರು ದಿನ ಏರೊ ಇಂಡಿಯಾ ಶೋ ನಡೆಯಲಿದ್ದು, ಪ್ರತಿದಿನ 2 ಬಾರಿ ಭಾರತ, ವಿದೇಶಗಳ ಒಟ್ಟು 63 ವಿಮಾನಗಳ ಪ್ರದರ್ಶನ ನಡೆಯಲಿವೆ. ಈ ಬಾರಿ ಹೆಚ್‍ಎಎಲ್ ವಿಮಾನಗಳಿಂದ ಆತ್ಮ ನಿರ್ಭರ ಫಾರ್ಮೆಷನ್ ಪ್ರಮುಖ ಆಕರ್ಷಣೆಯಾಗಿದೆ. ಇದೇ ಮೊದಲ ಬಾರಿಗೆ ವಿಶ್ವದ ಏಕೈಕ ಹೆಲಿಕಾಪ್ಟರ್ ಸ್ಟಂಟ್ ತಂಡ ಸಾರಂಗ್, ಸೂರ್ಯಕಿರಣ್ ತಂಡಗಳು ಏಕಾಕಾಲಕ್ಕೆ ಜಂಟಿಯಾಗಿ ಪ್ರದರ್ಶನಕ್ಕಿಳಿಯಲಿವೆ.

  • ಮಹಿಳೆಗೆ ಗುದ್ದಿ, ಬಾನೆಟ್ ಮೇಲೆ ಹತ್ತಿದ ವ್ಯಕ್ತಿಯನ್ನು ಎಳೆದೊಯ್ದ ಕಾರು ಚಾಲಕ

    ಮಹಿಳೆಗೆ ಗುದ್ದಿ, ಬಾನೆಟ್ ಮೇಲೆ ಹತ್ತಿದ ವ್ಯಕ್ತಿಯನ್ನು ಎಳೆದೊಯ್ದ ಕಾರು ಚಾಲಕ

    – ಸ್ಥಳಾವಕಾಶ ಇಲ್ಲದ ಜಾಗದಲ್ಲಿ ಕಾರು ನುಸುಳಿಸಿದ ವ್ಯಕ್ತಿ
    – ಸಿನಿಮೀಯ ರೀತಿಯಲ್ಲಿ ಅಪಘಾತ

    ಬೆಂಗಳೂರು: ಸ್ಥಳಾವಕಾಶ ಇಲ್ಲದ ಜಾಗದಲ್ಲಿ ಕಾರು ನುಸುಳಿಸಿದ ಚಾಲಕ ರಸ್ತೆಯಲ್ಲಿ ನಿಂತಿರುವ ಮಹಿಳೆಗೆ ಗುದ್ದಿದ್ದಾನೆ. ಪ್ರಶ್ನೆ ಮಾಡಲು ಬಂದಿರುವ ವ್ಯಕ್ತಿ ಬಾನೆಟ್ ಮೇಲೆ ಏರಿದ್ರೂ ಕಾರ್ ನಿಲ್ಲಿಸಿದೇ ಚಲಾಯಿಸಿಕೊಂಡು ಹೋಗಿರುವ ಘಟನೆ ಯಲಹಂಕದ ನಾಗೇನಹಳ್ಳಿ ಗೇಟ್ ಬಳಿ ನಡೆದಿದೆ.

    ಒನ್‍ವೇ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಬಂದಿರುವ ಚಾಲಕ ಮಹಿಳೆ ಗುದ್ದಿ, ಬಾನೆಟ್ ಮೇಲೆ ಹತ್ತಿದ ವ್ಯಕ್ತಿಯನ್ನು ಎಳೆದೊಯ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾರು ಚಾಲಕನ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ಯಲಹಂಕದ ನಾಗೇನಹಳ್ಳಿ ಗೇಟ್‍ನ ದೊಡ್ಡಬಳ್ಳಾಪುರ, ಯಲಹಂಕ ಹೆದ್ದಾರಿಯಲ್ಲಿ ಒನ್‍ವೇ ರಸ್ತೆಯಲ್ಲಿ ಕಾರು ಚಾಲಕನೊಬ್ಬ ಜಾಗ ಇಲ್ಲದೆ ಇದ್ದರು ಕಾರು ಮುಂದಕ್ಕೆ ಹೋಗಲು ಯತ್ನಿಸುತ್ತಾನೆ. ಇದರಿಂದ ಸಾಲುಗಟ್ಟಿ ನಿಂತ ವಾಹನ ಸವಾರರಿಗೆ ಕೆಲವು ಸಮಯ ಕಿರಿಕಿರಿ ಉಂಟಾಗಿದೆ.

    ಕಾರು ಚಾಲಕ ಕಿರಿಯಾದ ಜಾಗದಲ್ಲಿ ಕಾರು ನುಗ್ಗಿಸಿ ಮತ್ತೊಂದು ಕಾರಿಗೆ ತಾಕಿಸಿದ್ದಾನೆ. ಇದಕ್ಕೆ ಕೋಪಗೊಂಡ ಮತ್ತೊಂದು ಕಾರಿನಲ್ಲಿರುವ ವ್ಯಕ್ತಿ ಈತನನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾನೆ. ಭಯಗೊಂಡ ಕಾರಿನ ಚಾಲಕ ಆತನ ಮೇಲೆ ಕಾರನ್ನು ಚಲಾಯಿಸಿಕೊಂಡು ಎಳೆದೊಯ್ದಿದ್ದಾನೆ.

    ಆತರವಾಗಿ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳವ ಈ ವೇಳೆ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಗುದ್ದಿದ್ದಾನೆ. ಕಾರನ್ನು ತಡೆಯಲು ಯತ್ನಿಸಿದ ವ್ಯಕ್ತಿ ಕಾರಿನ ಬಾನೆಟೆ ಹತ್ತಿದ್ದಾನೆ. ಭಯಗೊಂಡ ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಇದರಿಂದ ವ್ಯಕ್ತಿ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದಾನೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರು ಚಾಲಕ ರಭಸವಾಗಿ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

  • ಅಮಾವಾಸ್ಯೆ ದಿನ ಭೀಕರ ಅಪಘಾತದಲ್ಲಿ ಮೂವರು ಸಾವು- ವ್ಹೀಲಿಂಗ್ ವೇಳೆ ಡಿಕ್ಕಿ ಶಂಕೆ

    ಅಮಾವಾಸ್ಯೆ ದಿನ ಭೀಕರ ಅಪಘಾತದಲ್ಲಿ ಮೂವರು ಸಾವು- ವ್ಹೀಲಿಂಗ್ ವೇಳೆ ಡಿಕ್ಕಿ ಶಂಕೆ

    – ಹೆಲ್ಮೆಟ್ ಹಾಕದ ಸವಾರರ ತಲೆ ಅಪ್ಪಚ್ಚಿ

    ಬೆಂಗಳೂರು: ಅಮಾವಾಸ್ಯೆ ದಿನ ಭೀಕರ ಸಂಭವಿಸಿ ಮೂವರು ಯುವಕರು ಧಾರುಣ ಸಾವು ಕಂಡ ಘಟನೆ ಯಲಹಂಕದ ಜೆಕೆವಿಕೆ ಬಳಿ ಇಂದು ಬೆಳಗ್ಗೆ ನಡೆದಿದೆ.

    ಬೆಂಗಳೂರಿನ ನಿವಾಸಿಗಳಾದ ಮಹಮ್ಮದ್ ಆದಿ ಆಯಾನ್ (16), ಮಾಜ್ ಅಹಮ್ಮದ್ ಖಾನ್(17) ಹಾಗೂ ಸಯ್ಯದ್ ರಿಯಾಜ್ (22) ಮೃತ ದುರ್ದೈವಿಗಳು. ವ್ಹೀಲಿಂಗ್ ಮಾಡುವ ವೇಳೆ ಬೈಕ್ ಮುಖಾ ಮುಖಿ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.

    ಯುವಕರು ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದರು. ಈ ವೇಳೆ ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್ ಪೀಸ್ ಪೀಸ್ ಆಗಿದ್ದು, ತಲೆಗೆ ಅಪ್ಪಚ್ಚಿಯಾಗಿ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಯುವಕರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

  • ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡದೇ ರಾಹುಲ್, ಸೋನಿಯಾ ಗಾಂಧಿ ಹೆಸರಿಡಬೇಕಾ?- ಸಿಸಿ ಪಾಟೀಲ್

    ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡದೇ ರಾಹುಲ್, ಸೋನಿಯಾ ಗಾಂಧಿ ಹೆಸರಿಡಬೇಕಾ?- ಸಿಸಿ ಪಾಟೀಲ್

    ಗದಗ: ಬೆಂಗಳೂರಿನ ಯಲಹಂಕ ಫ್ಲೈಓವರ್‌ಗೆ ವೀರ ಸಾವರ್ಕರ್ ಅವರ ಹೆಸರಿಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಚಿವ ಸಿ.ಸಿ.ಪಾಟೀಲ್ ಸಿಡಿಮಿಡಿಗೊಂಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಸಚಿವರು, ಫ್ಲೈಓವರಿಗೆ ವೀರ ಸಾವರ್ಕರ್ ಹೆಸರಿಡದೇ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್‍ನವರು ಮೊದಲು ತಿಳಿಯಲಿ. ಸಾವರ್ಕರ್ ಅವರ ಬಗ್ಗೆ ಮಾತಾಡುವಂತ ಯೋಗ್ಯತೆ ಯಾವೋಬ್ಬ ಕಾಂಗ್ರೆಸ್ಸಿಗರಿಗೂ ಇಲ್ಲಾ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ಸಿಗರಿಗೆ ತ್ಯಾಗ ಬಲಿದಾನ ಮಾಡಿದ ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಕಮಾನ್ಯ ತಿಲಕ್ ಅವರು ಗೊತ್ತಿಲ್ಲಾ. ವೀರ ಸಾವರ್ಕರ್ ಬಿಜೆಪಿಯವರಾ? ಅವಾಗ ಬಿಜೆಪಿ ಇತ್ತಾ ಅಂತ ಪ್ರಶ್ನಿಸಿದರು.

    ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್, ರಾಜೀವ್ ಗಾಂಧಿ ರೋಡ್, ಇಂದಿರಾ ಗಾಂಧಿ ರೋಡ್, ಆಯೋಜನೆ ಈ ಯೋಜನೆ ಅಂತೆಲ್ಲಾ ಇದೆ. ಎಲ್ಲಾದರೂ ನರೇಂದ್ರ ಮೋದಿ ರೋಡ್, ಬಿ.ಎಸ್.ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಇವರೇ ಕಟ್ಟಿ ಬೆಳೆಸಿ ಉತ್ತುಂಗಕ್ಕೆ ತಂದ್ರಾ? ಕಾಂಗ್ರೆಸ್ಸಿಗರು ಹೇಳೋದು ಆಚಾರ ತಿನ್ನೋದು ಬದನೆಕಾಯಿ ಎಂದು ಗುಡುಗಿದರು.

    ಬಿಜೆಪಿ ಪಕ್ಷದಲ್ಲಿ ಎದ್ದಿರುವ ಬಂಡಾಯದ ವಿಚಾರವಾಗಿ ಮಾತನಾಡಿದ ಸಚಿವರು, ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಬಾಧಿತ, ಸುಭದ್ರವಿದೆ. ಹಲವಾರು ಹಿರಿಯ ಶಾಸಕರು ನಮ್ಮಲ್ಲಿ ಭಿನ್ನಮತ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ನಾಯಕರು ಸಹ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೊಗಳಿದ್ದಾರೆ. ನಮ್ಮ ಬಗ್ಗೆ ಯಾರು ಏನೂ ಚಿಂತೆ ಮಾಡುವ ಅಗತ್ಯವಿಲ್ಲ, ಸರ್ಕಾರ ಸುಭದ್ರವಾಗಿರುತ್ತದೆ. ಮುಂದಿನ ಅವಧಿಗೆ ಪಕ್ಷವನ್ನು ಬಿಎಸ್‍ವೈ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದರು.

    ಕಪ್ಪತ್ತಗುಡ್ಡದಲ್ಲಿ ಸರ್ಕಾರ ಮೈನಿಂಗ್ ನಡೆಸುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಆರೋಪಕ್ಕೆ ಸಿ.ಸಿ.ಪಾಟೀಲ್ ತಿರುಗೇಟು ನೀಡಿದರು. ಕಪ್ಪತ್ತಗುಡ್ಡ ರಕ್ಷಣೆ ಸರ್ಕಾರದ ಹೊಣೆ. ನಾನು ಮೂಲತಃ ಬೆಳಗಾವಿ ಜಿಲ್ಲೆಯವನು. ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸತೀಶ್ ಜಾರಕಿಹೊಳಿ ಆಧಾರ ರಹಿತ ಆರೋಪ ಮಾಡಿದರೆ ಅವರ ಮೇಲೆ ಬ್ಲಾಕ್ ಆಂಡ್ ವೈಟ್ ಅಲಿಗೇಷನ್ ಸಾಕಷ್ಟಿವೆ. ಸಮಯ ಸಂದರ್ಭ ಬಂದಾಗ ಮುಂದಿನ ದಿನಗಳಲ್ಲಿ ಎಲ್ಲಾ ಪುಟಗಳನ್ನ ತೆರೆದಿಡುತ್ತೇನೆ ಎಂದು ಟಾಂಗ್ ಕೊಟ್ಟರು.

    ಮುಂಬೈ-ಗದಗ ಎಕ್ಸ್‍ಪ್ರೆಸ್ ರೈಲು ಬರಲಿದೆ. ರಾಜ್ಯದ ಜನ ಮುಂಬೈ ನಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದು ಮುಂಬೈ ಕನ್ನಡಿಗರನ್ನ ಅನಿವಾರ್ಯವಾಗಿ ಕರೆಸಿಕೊಳ್ಳಬೇಕಿದೆ. ಎಷ್ಟು ಜನ ಮುಂಬೈನಿಂದ ಬರುತ್ತಾರೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಬಂದಿಲ್ಲ. ಮಂಗಳವಾರ ಬೆಳಗ್ಗೆ 11 ಗಂಟೆ ನಂತರ ಗದಗ ನಿಲ್ದಾಣಕ್ಕೆ ಮುಂಬೈ ರೈಲು ಬರಲಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿ ನಂತರ 7 ದಿನ ಸರ್ಕಾರದ ನಿಯಮಗಳ ಪ್ರಕಾರ ಕ್ವಾರಂಟೈನ್ ಮಾಡಲಾಗುತ್ತದೆ ಎಂದರು.

    ಮುಂಬೈನಿಂದ ಗದಗ ಜಿಲ್ಲೆಗೆ ನಿರೀಕ್ಷೆ ಮೀರಿ ಜನ ಬಂದರೂ ಕ್ವಾರಂಟೈನ್ ಮಾಡುತ್ತೇವೆ. ಪ್ರಯಾಣಿಕರಿಗೆ ಯಾವುದೇ ಅನಾನುಕೂಲ ಆಗದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಜಿಲ್ಲಾ ಕೇಂದ್ರದಲ್ಲಿ ಕ್ವಾರಂಟೈನ್ ಸಾಲದಿದ್ದರೆ, ಕೊರತೆ ಕಂಡುಬಂದರೆ ಮುಂದೆ ತಾಲೂಕ ಕೇಂದ್ರಗಳಿಗೂ ಕಳಿಸುತ್ತೆವೆ ಎಂದು ತಿಳಿಸಿದರು.

  • ಬೆಂಗ್ಳೂರಿನ ಸೃಷ್ಟಿ ಕಾಲೇಜಿನ ಗೋಡೆಬರಹಕ್ಕೀಗ ರಾಜಕೀಯ ಬಣ್ಣ

    ಬೆಂಗ್ಳೂರಿನ ಸೃಷ್ಟಿ ಕಾಲೇಜಿನ ಗೋಡೆಬರಹಕ್ಕೀಗ ರಾಜಕೀಯ ಬಣ್ಣ

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ನಾನಾ ರೂಪದಲ್ಲಿ ನಡೆಯುತ್ತಲೇ ಇದೆ. ಯಲಹಂಕದ ಕಾಲೇಜು ವಿದ್ಯಾರ್ಥಿಗಳು ಗೋಡೆಬರಹಗಳ ಮೂಲಕ ಪ್ರಧಾನಿ ಮೋದಿ ಹಾಗೂ ಸಿಎಎ ಕಾಯ್ದೆಯನ್ನು ವಿರೋಧಿಸಿದ್ದು ಈಗ ಈ ಪ್ರಕರಣಕ್ಕೆ ರಾಜಕೀಯ ಟ್ವಿಸ್ಟ್ ಸಿಕ್ಕಿದೆ.

    ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳು ಗೋಡೆಬಹರಗಳನ್ನ ಬರೆದಿದ್ದ ವಿಚಾರ ಹೊಸ ರೂಪ ಪಡೆದಿದೆ. ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿ, ವಿದ್ಯಾರ್ಥಿನಿಯರ ಡ್ರೆಸ್ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಿದರು ಎಂದು ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕಾ ಪ್ರಕಟಣೆ ಹೊರ ತಂದಿದ್ದರು. ಇದನ್ನೂ ಓದಿ: ಖಾಸಗಿ ಕಾಲೇಜಿನಲ್ಲಿ ಸಿಎಎ ವಿರೋಧಿಸಿ ಗೋಡೆ ಬರಹ

    ಇದಕ್ಕೆ ಸ್ಪಷ್ಟನೆ ನೀಡಿರುವ ಶಾಸಕ ಎಸ್. ಆರ್ ವಿಶ್ವನಾಥ್, ಕಾಲೇಜಿನ ಸುತ್ತಲೂ ರಸ್ತೆಗಳಿವೆ. ಆದರೆ ವಿದ್ಯಾರ್ಥಿಗಳು ಕಾಲೇಜಿನ ಒಳಗೆ ಪಾರ್ಕಿಂಗ್ ಮಾಡುವ ಬದಲು ಫುಟ್‍ಪಾತ್ ಮತ್ತು ರಸ್ತೆ ಮೇಲೆ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆಯೆಂದು ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆ ಕಾಲೇಜಿಗೆ ಭೇಟಿ ನೀಡಿ ವಾಹನಗಳನ್ನು ಆವರಣದಲ್ಲಿ ನಿಲ್ಲಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ. ಮೋದಿ ಬಗ್ಗೆ ಆಕ್ಷೇಪಾರ್ಹ ಬರಹ ಮತ್ತು ಚಿತ್ರಗಳನ್ನು ಬರೆದಿದ್ದರು. ಅವುಗಳನ್ನು ಅಳಿಸಿ ಹಾಕಲಾಗಿದೆ. ಯಾರು ಆ ಚಿತ್ರಗಳನ್ನು ಬಿಡಿಸಿದ್ದರು ಎನ್ನುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆಸಲಾಗುತ್ತದೆ ಎಂದು ತಿಳಿಸಿದರು. ಜೊತೆಗೆ ವಿದ್ಯಾರ್ಥಿನಿಯರ ಡ್ರೆಸ್ ವಿಚಾರವಾಗಿ ಪ್ರತಿಕ್ರಿಯಿಸಿ, ನಾನ್ಯಾಕೆ ಡ್ರೆಸ್ ಬಗ್ಗೆ ಮಾತನಾಡಲಿ ಎಂದು ಆರೋಪ ತಳ್ಳಿಹಾಕಿದ್ದಾರೆ.

    ಶಾಸಕರ ಭೇಟಿ ನಂತರ ಈ ಗೋಡೆ ಬರಹದ ಪ್ರಕರಣ ರಾಜಕೀಯ ತಿರುವು ಪಡೆದಿದ್ದು, ಶಾಸಕರ ಗೂಂಡಾಗಿರಿ ವರ್ತನೆ ಎಂದು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದು ಗೂಂಡಾವರ್ತನೆ ಎಂದು ದೂರಿದ್ದಾರೆ.

    ಪ್ರಕರಣದ ವಿವಾದ ಹೆಚ್ಚಾಗುತ್ತಿದ್ದಂತೆ ಇಂದು ಕಾಲೇಜಿಗೆ ರಜೆ ನೀಡಲಾಗಿದ್ದು, ಶಾಸಕರ ವಿರುದ್ಧದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ವಿದ್ಯಾರ್ಥಿಗಳು ಇಡೀ ಪ್ರಕರಣದಿಂದ ಹಿಂದೆ ಉಳಿದಿದ್ದಾರೆ.

    ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಬಾರದೆಂದು ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ. ಈ ಬಗ್ಗೆ ಕಾಲೇಜಿನ ಆಡಳಿತ ಸಿಬ್ಬಂದಿ ಮಾತಾನಾಡಿ, ಗೋಡೆ ಬರಹಕ್ಕೂ ನಮ್ಮ ವಿದ್ಯಾರ್ಥಿಗಳಿಗೂ ಸಂಬಂಧವಿಲ್ಲ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ರಕ್ಷಣೆಗೆ ನಮ್ಮ ಮೊದಲ ಆದ್ಯತೆ. ನಾವು ಸ್ಥಳೀಯರೊಂದಿಗೆ ಸೌರ್ಹದಯುತವಾಗಿ ಇರುತ್ತೇವೆ ಎಂದಿದ್ದಾರೆ.

    ಇತ್ತ ಸ್ಥಳೀಯರು ಮಾತ್ರ ಕಾಲೇಜಿನವರಿಗೆ ಎಷ್ಟೇ ಬಾರಿ ಹೇಳಿದರು ಕೇಳಿಲ್ಲ. ರಸ್ತೆನಲ್ಲೇ ಪಾರ್ಕಿಂಗ್ ಮಾಡುತ್ತಾರೆ. ಕಾಲೇಜಿನ ಸುತ್ತಮುತ್ತಲಿನ ವಾತಾವರಣದಲ್ಲೇ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾರೆ. ಇಲ್ಲಿನ ಮನೆಗಳಿಗೆ ಈ ವಿದ್ಯಾರ್ಥಿಗಳಿಂದ ಸಮಸ್ಯೆಗಳು ಆಗುತ್ತಿವೆ. ವಿದ್ಯಾರ್ಥಿಗಳ ವರ್ತನೆಯನ್ನ ಸರಿಮಾಡಿಕೊಳ್ಳುವಂತೆ ಕಾಲೇಜು ಮಂಡಳಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವೈಕುಂಠ ಏಕಾದಶಿಗೆ ಯಲಹಂಕದಲ್ಲಿ 2 ಲಕ್ಷ ಲಾಡು ತಯಾರು

    ವೈಕುಂಠ ಏಕಾದಶಿಗೆ ಯಲಹಂಕದಲ್ಲಿ 2 ಲಕ್ಷ ಲಾಡು ತಯಾರು

    – 27 ವರ್ಷದಿಂದ ಸತತ ಲಾಡು ತಯಾರಿಕೆ

    ಬೆಂಗಳೂರು: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಯಲಹಂಕದಲ್ಲಿ 2 ಲಕ್ಷ ಲಾಡುಗಳನ್ನು ತಯಾರು ಮಾಡಲಾಗಿದ್ದು, ಬೆಂಗಳೂರಿನ ಅನೇಕ ದೇವಾಲಯಗಳಿಗೆ ತಲುಪಿಸು ಸಿದ್ಧತೆ ನಡೆದಿದೆ.

    ಅರ್ನ ಸೇವಾ ಟ್ರಸ್ಟ್ ವತಿಯಿಂದ ಕೇಶವ ರಾಜಣ್ಣ ನೇತೃತ್ವದಲ್ಲಿ ಲಾಡುಗಳನ್ನ ತಯಾರು ಮಾಡಲಾಗಿದೆ. ಬೆಂಗಳೂರಿನ ಕೆಲವು ದೇವಾಲಯಗಳಿಗೆ ಇವರೇ ಹೋಗಿ ದೇವಾಲಯದಲ್ಲಿ ಹಂಚಿ ಬರುತ್ತಾರೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ವೆಂಕಟೇಶ್ವರ ದೇವಾಲಯದ ಯಾರೇ ಕರೆ ಮಾಡಿ ಲಾಡು ಬೇಕು ಅಂದ್ರು ಅವರಿಗೆ ತಲುಪಿಸುವ ಕೆಲಸವನ್ನ ಮಾಡಲಾಗುತ್ತಿದೆ.

    ದೇವಾಲಯದ ಯಾರಾದರೂ ಕಾಲ್ ಮಾಡಿ ದೇವಾಲಯದ ವಿಳಾಸ ಹೇಳಿದರೆ ಅರ್ನ ಸೇವಾ ಟ್ರಸ್ಟ್ ನವರೇ ಕಳುಹಿಸಿಕೊಡುತ್ತಾರೆ. ಇಲ್ಲವೇ ದೇವಾಲಯದವರೇ ಬಂದು ಲಾಡುಗಳನ್ನು ತೆಗೆದುಕೊಂಡು ಹೋಗಬಹುದು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರ್ನ ಸೇವಾ ಟ್ರಸ್ಟ್ ಸದಸ್ಯರೊಬ್ಬರು, ಎಲ್ಲಾ ಲಾಡುಗಳನ್ನ ಹಲವು ವರ್ಷಗಳಿಂದ ಉಚಿತವಾಗಿ ವಿತರಣೆ ಮಾಡುತ್ತಲೇ ಬಂದಿದ್ದೇವೆ. ಈ ಬಾರಿ ಚಿತ್ರನಟಿ ಸುಧಾರಾಣಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಭಾನುವಾರ ಯಲಹಂಕ ಉಪನಗರದ ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣ ಸಂಘದ ಮೈದಾನದ ಆವರಣದಲ್ಲಿ ನಡೆಯಲಿದೆ. ಯಾರಿಗೆ ಲಾಡುಗಳು ಬೇಕೋ ಅವರು ಒಂದು ಕರೆ ಲಾಡುಗಳನ್ನ ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದ್ದಾರೆ.

  • ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

    ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

    – ರಾಜ್ಯ ಸರ್ಕಾರ ರಕ್ಷಣೆ ನೀಡಬೇಕಿತ್ತು
    – ದೇಶದ್ರೋಹಿಗಳು ಕೃತ್ಯ ಎಸಗಿದ್ರಾ?
    – ರಾಜ್ಯ, ಕೇಂದ್ರದಿಂದ ಜಂಟಿ ತನಿಖೆಗೆ ಆಗ್ರಹ

    ಉಡುಪಿ: ಬೆಂಗಳೂರಿನ ಏರ್ ಶೋ ದುರಂತಕ್ಕೆ ದೇಶದ್ರೋಹಿ ಲಿಂಕ್ ಇದ್ಯಾ? ಇದೂ ಒಂಥರಾ ಕಾಶ್ಮೀರದ ಪುಲ್ವಾಮಾ ದಾಳಿಯ ಮುಂದುವರಿದ ಭಾಗನಾ? ದೇಶದ್ರೋಹಿಗಳು ಈ ಕೃತ್ಯದಲ್ಲಿ ತೊಡಗಿರಬಹುದಾ? ಇಂತದ್ದೊಂದು ಸಂಶಯವನ್ನು ಸಂಸದೆ ಶೋಭಾ ಕರಂದ್ಲಾಜೆ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ಬೆಂಗಳೂರು ಏರ್ ಶೋ ಸಂದರ್ಭದ ಬೆಂಕಿ ಅನಾಹುತದ ಬಗ್ಗೆ ಎಲ್ಲಾ ಆಯಾಮದಲ್ಲಿ ಉನ್ನತಮಟ್ಟದ ತನಿಖೆಯಾಗಬೇಕು. ಏರ್ ಶೋ ಕೇಂದ್ರ ಸರ್ಕಾರ, ಕೇಂದ್ರದ ವಿವಿಧ ಇಲಾಖೆಯ ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೆ ಸಂಪೂರ್ಣ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿ. ಏರ್ ಶೋಗೆ ದೇಶ ವಿದೇಶದಿಂದ ಜನ ಬಂದಿದ್ದಾರೆ. ಬಹಳ ಜನ ಪೈಲೆಟ್ ಗಳು ವಿವಿಐಪಿಗಳು ಬಂದಿದ್ದರು. ಈ ನಡುವೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ವರ್ತನೆ ತೋರಿದಿದೆ ಎಂದು ಆಕ್ರೋಶ ಹೊರಹಾಕಿದರು.

    ಏರ್ ಶೋ ಬೆಂಕಿ ಅವಘಡದಲ್ಲಿ ಏನು ಒಂದು ಸಂಶಯ ಕಾಡುತ್ತಿದೆ. ಇಷ್ಟೊಂದು ವಾಹನಗಳು ಸುಡಬೇಕು ಅಂದ್ರೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಘಟನೆಗೂ ಇದಕ್ಕೂ ಸಂಬಂಧವಿದೆಯಾ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಯಾರಾದರೂ ದೇಶದ್ರೋಹಿಗಳು ಈ ಕೆಲಸವನ್ನು ಮಾಡಿದ್ರಾ ಅಥವಾ ಆಕಸ್ಮಿಕ ಬೆಂಕಿ ಅವಘಡನಾ ಎಂಬುದರ ಬಗ್ಗೆ ಸೂಕ್ತ ತನಿಖೆಯ ಅವಶ್ಯಕತೆಯಿದೆ. ರಾಜ್ಯ ಸರ್ಕಾರ ತನ್ನ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಕಿ ಅವಘಡದಲ್ಲಿ 300 ಜನರು ಕಾರು ಕಳೆದುಕೊಂಡಿದ್ದಾರೆ. ಹಲವರು ಕಾರಿನಲ್ಲಿ ಇರಿಸಿದ ದಾಖಲೆಗಳು ಕಳೆದುಕೊಂಡಿದ್ದು, ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ತನಿಖೆ ನಡೆಸಬೇಕೆಂದು ಶೋಭಾ ಕರಂದ್ಲಾಜೆ ಅಗ್ರಹಿಸಿದರು.

    ಏರ್ ಶೋ ಶಿಫ್ಟ್ ಆಗುವಾಗ ನಾವು ಧನಿ ಎತ್ತಿದ್ದೆವು. ಮತ್ತೆ ಕರ್ನಾಟಕಕ್ಕೆ ಅದನ್ನು ತಂದಿದ್ದೇವೆ. ಇಂತಹ ಘಟನೆ ನಮಗೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತಿದೆ. ರಕ್ಷಣೆ ಕೊಡಲು ಆಗುದಿಲ್ಲ ಅಂದರೆ ಏನರ್ಥ? ರಾಜ್ಯ ಪೊಲೀಸ್, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿತ್ತು.? ಎಂದು ಸಂಸದೆ ಶೋಭಾ ಕರಂದ್ಲಾಜೆ ಸಾಲು ಸಾಲು ಪ್ರಶ್ನೆಗಳನ್ನು ಮಾಡಿದ್ದಾರೆ.

    ಕಾರು ನಿಲ್ಲಿಸಿದ ಜಾಗದಲ್ಲಿ ಪೊಲೀಸರಿಲ್ಲ, ಅಗ್ನಿಶಾಮಕದಳದ ಸಿಬ್ಬಂದಿ ಇರಲಿಲ್ಲ. ಪಾರ್ಕಿಂಗ್ ಜಾಗದಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಮಾಡಿರಲಿಲ್ಲ. ಕರ್ನಾಟಕದ ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ಮರೆತಿದೆ. ಏರ್ ಶೋ ಬೆಂಗಳೂರಿನಲ್ಲಿಯೇ ನಡೆಯಬೇಕೆಂದು ಸಿಎಂ ಸೇರಿದಂತೆ ಎಲ್ಲರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತನಾಡಿ ಬೆಂಗಳೂರಿನಲ್ಲಿ ನಡೆಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ನಮಗೆ ಬೇಕು ಎಂದು ಏರ್ ಶೋ ತಂದಾಗ ರಕ್ಷಣೆ ನೀಡಬೇಕಾದ ರಾಜ್ಯ ಸರ್ಕಾರ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ನಾನು ನಿನ್ನೆಯೇ ಟ್ವೀಟ್ ಮಾಡಿದ್ದೇನೆ ಎಂದು ಕರಂದ್ಲಾಜೆ ತಿಳಿಸಿದರು.

    ಶೋಭಾ ಕರಂದ್ಲಾಜೆ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ

    https://www.youtube.com/watch?v=BUA3pczdc3w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ಅಗ್ನಿ ದುರಂತಕ್ಕೆ ವಿಮೆಗಾಗಿ ಯಲಹಂಕ ಆರ್​ಟಿಓ ಓಪನ್

    ಏರ್ ಶೋ ಅಗ್ನಿ ದುರಂತಕ್ಕೆ ವಿಮೆಗಾಗಿ ಯಲಹಂಕ ಆರ್​ಟಿಓ ಓಪನ್

    -ಸ್ಥಳದಲ್ಲೇ ಕೌಂಟರ್ ತೆಗೆದ ವಿಮೆ ಕಂಪನಿಗಳು

    ಬೆಂಗಳೂರು: ಬೆಂಗಳೂರಿನ ಯಲಹಂಕದ ಬಳಿಯ ಏರ್ ಶೋನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿವೆ. ಇದೀಗ ವಾಹನ ಮಾಲೀಕರು ಕಣ್ಣೀರು ಹಾಕ್ತಿದ್ದಾರೆ. ಸಾಲ ಸೋಲ ಮಾಡಿ, ಇಎಂಐಗಳನ್ನ ಕಟ್ಟಿಕೊಂಡು ಬರ್ತಿದ್ದವರು ಅಯ್ಯೋ… ಹೀಗಾಗೋಯ್ತಲ್ಲ ಅಂತ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ.

    ಏರ್ ಶೋನಲ್ಲಿ ಧಗಧಗಿಸಿ ಹೋದ ಕಾರ್ ಗಳು ಮಾಲೀಕರು ಇದೀಗ ಇನ್ಸುರೆನ್ಸ್ ಪಡೆಯೋಕೆ ಪರದಾಡುತ್ತಿದ್ದಾರೆ. ಆದ್ರೆ, ನ್ಯಾಚುರಲ್ ಡಿಸಾಸ್ಟರ್ ಅಂತ ಈ ಘಟನೆಯನ್ನು ಘೋಷಣೆ ಮಾಡಿದ್ರೆ ಬಹುತೇಕ ಎಲ್ಲಾ ವಾಹನಗಳಿಗೆ ಹಂಡ್ರೆಡ್ ಪರ್ಸೆಂಟ್ ವಿಮೆ ಸಿಗಲಿದೆ. ಹೀಗಾಗಿ, ವಿಮಾ ಕಂಪನಿಗಳು ಸಹ ಘಟನಾ ಸ್ಥಳದಲ್ಲೇ ಕೌಂಟರ್ ತೆಗೆದಿವೆ. ಸುಟ್ಟು ಹೋಗಿರುವ ಕಾರ್‍ಗಳನ್ನು ಪತ್ತೆ ಹಚ್ಚಿದ ಮಾಲೀಕರು ರಿಜಿಸ್ಟ್ರೇಷನ್ ನಂಬರ್ ಬರೆದಿದ್ದಾರೆ.

    ಇವತ್ತೂ ಸಹ ಯಲಹಂಕ ಆರ್ ಟಿಒ ಕಚೇರಿ ಓಪನ್ ಇರುತ್ತೆ. ವಾಹನ ನೊಂದಣಿ, ಚಾಲನಾ ಪತ್ರಗಳ ವಿವರಗಳನ್ನ ಪಡೆಯಲು ಸಾರಿಗೆ ಇಲಾಖೆ ಯಲಹಂಕದಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದೆ. ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ 080-29729908, ಮೊ. 9449864050 ಕಾರು ಮಾಲೀಕರು ಸಹಾಯ ಕೇಂದ್ರದ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

    ಇನ್ಸುರೆನ್ಸ್ ಗಾಗಿ ಏನೇನು ಮಾಡಬೇಕು..?
    * ವಾಹನ ಮಾಲೀಕರು ಮೊದಲು ಕಂಪ್ಲೆಂಟ್ ಕೊಡಬೇಕು.
    * ಆ ಕಂಪ್ಲೆಂಟ್ ಕಾಪಿಯನ್ನು ಇಟ್ಕೊಂಡು ವಿಮೆಗೆ ಅಪ್ಲೈ ಮಾಡಬೇಕು.
    * ಇನ್ಶುರೆನ್ಸ್ ಕಚೇರಿಗೆ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
    * ಮೂಲ ದಾಖಲಾತಿ ಇಲ್ಲದಿದ್ದರೆ ನಕಲು ಪ್ರತಿಗಳನ್ನು ಸಲ್ಲಿಸಿ ಇನ್ಸುರೆನ್ಸ್ ಗೆ ಅರ್ಜಿ ಸಲ್ಲಿಸಿ.
    * ಮೂಲ ದಾಖಲಾತಿ ಕಳೆದುಹೋಗಿದ್ದರೆ ಆರ್ ಟಿಒ ಕಚೇರಿಗೆ ಭೇಟಿ ನೀಡಿ ನಕಲು ದಾಖಲಾತಿಗಳನ್ನು ಪಡೆದುಕೊಳ್ಳಿ.

    * ನಂತರ ಎಲ್ಲಾ ದಾಖಲಾತಿ ಸಮೇತ ಕಂಪ್ಲೆಂಟ್ ಕಾಪಿಯನ್ನು ಇನ್ಸುರೆನ್ಸ್ ಆಫೀಸ್ ಗೆ ಸಲ್ಲಿಸಿ.
    * ಆಗ ಇನ್ಸುರೆನ್ಸ್ ಕಂಪನಿ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತದೆ.
    * ಒಂದು ವೇಳೆ ಹೊರ ರಾಜ್ಯದಲ್ಲಿ ನೋಂದಣಿಯಾಗಿದ್ದರೆ ಎಲ್ಲಿ ನೋಂದಣಿಯಾಗಿದೆ, ಕೊನೆಗೆ ಯಾರು ರಿಜಿಸ್ಟ್ರರ್ ಮಾಡಿದ್ರು ಅನ್ನೋ ದಾಖಲೆಯೊಂದಿಗೆ ಕಂಪ್ಲೆಂಟ್ ಕಾಪಿ ಸಮೇತ ವಿಮೆಗೆ ಅರ್ಜಿ ಸಲ್ಲಿಸಿ.
    * ಮೊದಲನೆಯದಾಗಿ ನಿಮ್ಮ ಇನ್ಸುರೆನ್ಸ್ ಕೊನೆಯಾಗಿರಬಾರದು. ಮಾನ್ಯವಾಗಿರಬೇಕು.
    * ಇನ್ಸುರೆನ್ಸ್ ನವೀಕರಣ ಆಗಿರಬೇಕು
    * ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ಆರ್ ಟಿಒ ಕಚೇರಿಯಿಂದ ಒಂದೇ ಬಾರಿಗೆ ಅಪ್ರೂವಲ್ ಮಾಡೋ ಕ್ರಮದ ಭರವಸೆ.

    ಏರ್‍ಶೋ ಎಂದಿನ ವೇಳಾಪಟ್ಟಿಯಂತೆ ಇವತ್ತೂ ಮುಂದುವರಿಯಲಿದೆ. ಊಹಾಪೋಹಗಳಿಗೆ ಕಿವಿಕೊಡಬೇಡಿ ಅಂತಾ ಡಿಫೆನ್ಸ್ ಅಧಿಕಾರಿಗಳು ಹೇಳಿದ್ದಾರೆ. ದುರಂತರದ ಬಳಿಕ ಆಯೋಜಕರು ಎಚ್ಚೆತ್ತುಕೊಂಡಿದ್ದು, ಕಾರ್ ಪಾರ್ಕಿಂಗ್‍ಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವೀಕೆಂಡ್ ಆಗಿರೋ ಕಾರಣ ಸಾವಿರಾರು ಮಂದಿ ಆಗಮಿಸಬಹುದು. ಆದರೆ ಘಟನೆಯಿಂದ ವೀಕ್ಷಕರ ಸಂಖ್ಯೆ ಕಡಿಮೆಯೂ ಆಗಬಹುದು. ಯಾವುದೇ ಕಾರಣಕ್ಕೂ ಏರ್ ಶೋ ರದ್ದಾಗಲ್ಲ. ಎಂದಿನಂತೆ ನಡೆಯಲಿದೆ.

    https://www.youtube.com/watch?v=ISKqdrigZd0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv