Tag: Yedyurappa

  • ವಿಪಕ್ಷಗಳ ಬಾಯಿಗೆ ಬೀಗ ಹಾಕಲು ಪ್ರಧಾನಿ ಎದುರು ಬಿಎಸ್‍ವೈ ಅಂಥಾ ಭಾಷಣ ಮಾಡಿದ್ರಾ?

    ವಿಪಕ್ಷಗಳ ಬಾಯಿಗೆ ಬೀಗ ಹಾಕಲು ಪ್ರಧಾನಿ ಎದುರು ಬಿಎಸ್‍ವೈ ಅಂಥಾ ಭಾಷಣ ಮಾಡಿದ್ರಾ?

    ಬೆಂಗಳೂರು: ವಿಪಕ್ಷಗಳ ಬಾಯಿಗೆ ಬೀಗ ಹಾಕಲು ಪ್ರಧಾನಿ ನರೇಂದ್ರ ಮೋದಿ ಎದುರು ಸಿಎಂ ಯಡಿಯೂರಪ್ಪ ಆ ರೀತಿಯ ಭಾಷಣ ಮಾಡಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ತುಮಕೂರಿನಲ್ಲಿ ಗುರುವಾರ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಎದುರೇ ಮಾಡಿದ ಭಾಷಣ ಹತ್ತು ಹಲವು ವಿಶ್ಲೇಷಣೆಗಳಿಗೆ ವೇದಿಕೆ ಒದಗಿಸಿದೆ. ಹಲವು ಕೋನಗಳಲ್ಲಿ ಯಡಿಯೂರಪ್ಪ ಅವರ ಭಾಷಣವನ್ನು ವಿಶ್ಲೇಷಿಸಲಾಗುತ್ತಿದೆ. ಉಪಚುನಾವಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಹಳೆಯ ಇಮೇಜ್ ಅನ್ನು ಮರಳಿ ಪಡೆದಿರೋದೇನೋ ನಿಜ. ಉಪಚುನಾವಣೆಯ ಗೆಲುವೇ ಬಿಎಸ್‍ವೈಗೆ ಪ್ರಧಾನಿ ಎದುರೇ ಕೇಂದ್ರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮಾತಾಡುವಷ್ಟು ದಿಟ್ಟತನ ತಂದುಕೊಟ್ಟಿರುವುದೂ ಸುಳ್ಳಲ್ಲ. ಆದರೆ ಯಡಿಯೂರಪ್ಪನವರ ಭಾಷಣದ ಹಿಂದೆ ಮತ್ತೊಂದು ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ. ಅದು ವಿರೋಧ ಪಕ್ಷಗಳ ಬಾಯಿಗೆ ಬೀಗ ಹಾಕುವುದು.

    ಕಳೆದ ವರ್ಷ ಆಗಸ್ಟ್ ನಲ್ಲಿ ಎದುರಾದ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರದ ಸ್ಪಂದನೆ ಸಮರ್ಪಕವಾಗಿಲ್ಲ. ಆಗಸ್ಟ್ ಪ್ರವಾಹಕ್ಕೆ ಅಕ್ಟೋಬರಿನಲ್ಲಿ ಕೇವಲ 1,200 ಕೋಟಿ ರೂ.ನಷ್ಟು ಅಲ್ಪ ಪರಿಹಾರ ಬಿಡುಗಡೆ ಮಾಡಿ ಸುಮ್ಮನಾಗಿದೆ. ನೆರೆ ಪರಿಹಾರ ಕೋರಿ ರಾಜ್ಯ ಸರ್ಕಾರ ಹತ್ತು ಹಲವು ಸಲ ಮನವಿ ಮಾಡಿಕೊಂಡರೂ ಕೇಂದ್ರ ಸರ್ಕಾರ ತಾತ್ಸಾರ ತೋರುತ್ತಿರುವುದು ವಾಸ್ತವದ ಸಂಗತಿ.

    ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಕಳೆದ ನಾಲ್ಕೈದು ತಿಂಗಳಿಂದಲೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಟೀಕಾಪ್ರಹಾರ ನಡೆಸುತ್ತಿವೆ. ಅದರಲ್ಲೂ ಸಿಎಂ ಯಡಿಯೂರಪ್ಪ ವಿರುದ್ಧ ತುಸು ಹೆಚ್ಚೇ ವಾಗ್ದಾಳಿ ನಡೆಸಲಾಗುತ್ತಿದೆ. ಯಡಿಯೂರಪ್ಪ ಕೇಂದ್ರದ ಎದುರು ಧೈರ್ಯವಾಗಿ ನೆರೆ ಪರಿಹಾರ ಕೇಳಿಲ್ಲ ಎಂದು ಬಿಎಸ್‍ವೈ ಅವರ ಸ್ವಾಭಿಮಾನವನ್ನೇ ವಿಪಕ್ಷಗಳು ಕೆಣಕಿದ್ದವು. ಜೊತೆಗೆ ಮುಂಬರುವ ವಿಧಾನಮಂಡಲ ಜಂಟಿ ಅಧಿವೇಶ ಮತ್ತು ಬಜೆಟ್ ಅಧಿವೇಶನದಲ್ಲೂ ಇದೇ ವಿಚಾರವನ್ನು ಇಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲು ರಣತಂತ್ರ ಹೆಣೆದಿವೆ.

    ವಿರೋಧ ಪಕ್ಷಗಳ ಈ ಟೀಕೆಗಳಿಗೆಲ್ಲ ಯಡಿಯೂರಪ್ಪ ತಕ್ಕ ಉತ್ತರ ಕೊಡಲು ಇಂಥ ಸಂದರ್ಭಕ್ಕೆ ಎದುರು ನೋಡುತ್ತಿದ್ದರು. ಪ್ರಧಾನಿ ರಾಜ್ಯಕ್ಕೆ ಬಂದರೂ ನೆರೆ ಪರಿಹಾರ ಕೇಳಲಿಲ್ಲ ಎಂಬ ಟೀಕೆ ಬರಬಾರದೆಂಬ ಕಾರಣಕ್ಕೆ ಸಿಎಂ ತುಸು ಕಟುವಾಗಿಯೇ ನಿನ್ನೆಯ ಭಾಷಣದಲ್ಲಿ ಪ್ರಧಾನಿಗೆ ಪರಿಹಾರ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ನೀವು ಅಂದುಕೊಂಡಿರುವ ಯಡಿಯೂರಪ್ಪ ನಾನಲ್ಲ ಎಂಬ ಖಡಕ್ ಸಂದೇಶವನ್ನು ಯಡಿಯೂರಪ್ಪ ತಮ್ಮ ಭಾಷಣದ ಮೂಲಕ ವಿಪಕ್ಷಗಳಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ತುಮಕೂರಿನಲ್ಲಿ ಯಡಿಯೂರಪ್ಪ ಮಾಡಿದ ಭಾಷಣಕ್ಕೆ ವಿರೋಧ ಪಕ್ಷಗಳೂ ಶಾಕ್ ಆಗಿರುವುದಂತು ಹೌದು.

  • ಒಂದು ಎಂಎಲ್‍ಸಿ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ

    ಒಂದು ಎಂಎಲ್‍ಸಿ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ

    ಬೆಂಗಳೂರು: ಖಾಲಿ ಇರುವ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಲ್ಲಿ ಇಬ್ಬರು ನಾಯಕರ ನಡುವೆ ಪೈಪೋಟಿ ಪ್ರಾರಂಭವಾಗಿದೆ. ಅನರ್ಹ ಶಾಸಕ ಶಂಕರ್ ಮತ್ತು ಡಿಸಿಎಂ ಲಕ್ಷ್ಮಣ ಸವದಿ ನಡುವೆ ಪೈಪೋಟಿ ಏರ್ಪಟ್ಟಿದ್ದು, ಶತಾಯಗತಾಯ ಶಾಸಕರಾಗಲು ಕಸರತ್ತು ಪ್ರಾರಂಭ ಮಾಡಿದ್ದಾರೆ.

    ಅನರ್ಹರಾಗಿ ಉಪಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರವನ್ನು ಬಿಜೆಪಿ ಸೂಚಿಸಿದ ಅಭ್ಯರ್ಥಿಗೆ ಆರ್.ಶಂಕರ್ ಬಿಟ್ಟುಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಶಂಕರ್ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಶಿವಾಜಿನಗರದಿಂದ ಆಯ್ಕೆ ಆಗಿರುವ ರಿಜ್ವಾನ್ ಅರ್ಷದ್ ಅವರಿಂದ ಖಾಲಿಯಾಗಿರುವ ಸ್ಥಾನವನ್ನು ನನಗೆ ನೀಡಿ ಎಂದು ಸಿಎಂಗೆ ಶಂಕರ್ ದುಂಬಾಲು ಬಿದ್ದಿದ್ದಾರೆ. ಸಿಎಂ ಅವರನ್ನು ಭೇಟಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಿ ಅಂತ ಆರ್. ಶಂಕರ್ ಒತ್ತಡ ಹಾಕಿದ್ದಾರೆ.

    ಹೈಕಮಾಂಡ್ ಕೃಪಾಕಟಾಕ್ಷದಿಂದ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡ ಲಕ್ಷ್ಮಣ ಸವದಿ ಯಾವುದೇ ಮನೆಯ ಸದಸ್ಯರಲ್ಲ. ಈಗಾಗಲೇ ಬಹುತೇಕ 4 ತಿಂಗಳು ಕಳೆದು ಹೋಗಿದೆ. ಇನ್ನು ಎರಡು ತಿಂಗಳಲ್ಲಿ ಸವದಿ ಪರಿಷತ್ ಸದಸ್ಯರಾಗದೇ ಹೋದರೆ ಡಿಸಿಎಂ ಸ್ಥಾನ ಹೋಗುತ್ತದೆ. ಉಪ ಚುನಾವಣೆಯಲ್ಲಿ ಕೊಟ್ಟ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿರುವ ಸವದಿ, ಪರಿಷತ್ ಸದಸ್ಯರಾಗಿ ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ಸಿಎಂಗೆ ದುಂಬಾಲು ಬಿದ್ದಿದ್ದಾರೆ.

    ಶಂಕರ್ ಮತ್ತು ಸವದಿ ಒತ್ತಡದಿಂದ ಸಿಎಂ ಅಕ್ಷರಶಃ ಗೊಂದಲಕ್ಕೆ ಒಳಗಾಗಿದ್ದಾರೆ. ಇರುವ ಒಂದು ಸ್ಥಾನ ಯಾರಿಗೆ ನೀಡುವುದು ಎಂದು ಸಿಎಂ ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ಜೂನ್ ನಲ್ಲಿ ಸುಮಾರು 7-8 ವಿಧಾನ ಪರಿಷತ್ ಸ್ಥಾನಗಳು ಖಾಲಿ ಆಗಲಿದೆ. ಹೀಗಾಗಿ ಈಗ ಒಬ್ಬರಿಗೆ ಕೊಟ್ಟು ಮುಂದಿನ ಜೂನ್ ವೇಳೆ ಇನ್ನೊಬ್ಬರಿಗೆ ನೀಡುವ ಚಿಂತನೆಯಲ್ಲಿ ಸಿಎಂ ಇದ್ದಾರೆ. ಯಾರಿಗೆ ಮೊದಲು ಕೊಡಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಲಿದೆ.

  • ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

    ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

    ನವದೆಹಲಿ: ಸಿಎಂ ಸ್ಥಾನಕ್ಕೆ ನಾನು ಅರ್ಹ ವ್ಯಕ್ತಿ, ಸಿಎಂ ಆಗಲು ಎಲ್ಲ ಕ್ವಾಲಿಫೈಗಳು ನನ್ನಲ್ಲಿದೆ. ಆದರೆ ನಾನು ಬಿ.ಎಸ್ ಯಡಿಯೂರಪ್ಪ ಅವರಿಗೆ ಪೈಪೋಟಿ ಅಲ್ಲ ಎಂದು ಶಾಸಕ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಗ್ಯಾಸ್ ಕನೆಕ್ಷನ್ ಸಂಬಂಧ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿಯಾಗುತ್ತೇನೆ. ಕ್ಷೇತ್ರದ ಕೆಲವು ಕೆಲಸಗಳ ಬಗ್ಗೆ ಚರ್ಚೆ ಮಾಡಲಿದ್ದೇನೆ ಎಂದರು.

    ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಬಿಟ್ಟು ಹೈಕಮಾಂಡ್ ಪೈಕಿ ಯಾರ ಜೊತೆಗೂ ಮಾತನಾಡಲ್ಲ. ನಾನು ಮಂತ್ರಿಗಿರಿ ಕೇಳ್ತಿಲ್ಲ, ಅದು ನನ್ನ ಹಕ್ಕು. ನನಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯ ಕೆಲಸ ಮಾಡುವೆ ಎಂದು ಸಿಎಂಗೆ ಗೊತ್ತಿದೆ. ಹೈಕಮಾಂಡ್‍ಗೂ ಮನವಿ ಮಾಡ್ತೇನೆ, ಸಚಿವ ಸ್ಥಾನ ಕೊಡದಿದ್ರೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದರು.

    ಸಿಎಂ ಸ್ಥಾನದ ಬಗ್ಗೆ ಮಾತನಾಡಿ, ನಾನು ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿ, ಎಲ್ಲ ಕ್ವಾಲಿಫೈ ಇದೆ. 8 ಬಾರಿ ಶಾಸಕನಾಗಿದ್ದೇನೆ, ಮಂತ್ರಿಯಾಗಿ 13 ವರ್ಷ ಕೆಲಸ ಮಾಡಿದ ಅನುಭವ ಇದೆ. ಹಾಗಂತ ಮಾತ್ರಕ್ಕೆ ಯಡಿಯೂರಪ್ಪ ಅವರಿಗೆ ನಾನು ಪೈಪೋಟಿ ಅಲ್ಲ, ಮುಂದಿನ ದಿನಗಳಲ್ಲಿ ನಾನು ಸಿಎಂ ಆಗಬಹುದು ಎಂದರು.

    ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ ಅವರನ್ನು ಮುಂದುವರಿಸುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟಿದ್ದು. ನಾನು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಅತಿ ಹೆಚ್ಚು ಶಾಸಕರು ಬೆಳಗಾವಿಯಲ್ಲಿದ್ದಾರೆ. ಹೆಚ್ಚು ಸಚಿವ ಸ್ಥಾನ ಕೊಟ್ಟರೇ ತಪ್ಪಿಲ್ಲ ಎಂದು ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನ ನೀಡುವುದನ್ನು ಸಮರ್ಥಿಸಿಕೊಂಡರು.

  • ಯಡಿಯೂರಪ್ಪರ ಛಲದ ಬಗ್ಗೆ ಡಿಕೆಶಿ ಹೇಳಿದ ಮೆಚ್ಚುಗೆಯ ಮಾತು ವೈರಲ್

    ಯಡಿಯೂರಪ್ಪರ ಛಲದ ಬಗ್ಗೆ ಡಿಕೆಶಿ ಹೇಳಿದ ಮೆಚ್ಚುಗೆಯ ಮಾತು ವೈರಲ್

    ತುಮಕೂರು: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಈ ಹಿಂದೆ ಸದನದಲ್ಲಿ ಡಿ.ಕೆ ಶಿವಕುಮಾರ್, ಸಿಎಂ ಯಡಿಯೂರಪ್ಪ ಅವರ ಬಗ್ಗೆ ವ್ಯಕ್ತಪಡಿಸಿದ ಮೆಚ್ಚುಗೆ ಮಾತುಗಳು ಸಖತ್ ವೈರಲ್ ಆಗಿದೆ.

    ಯಡಿಯೂರಪ್ಪ ಅವರ ಛಲವನ್ನು ನಾನು ಅಭಿನಂದಿಸುತ್ತೆನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು. ಅಲ್ಲದೆ ಯಶಸ್ಸು ಕಾಣಬೇಕಾದರೇ ಧರ್ಮರಾಯನ ಧರ್ಮತ್ವ ಇರಬೇಕು, ದಾನಶೂರ ಕರ್ಣನ ದಾನತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ಭೀಮನ ಬಲ, ವಿದೂರನ ನೀತಿ, ಕೃಷ್ಣನ ತಂತ್ರ ಜೊತೆಗೆ ಯಡಿಯೂರಪ್ಪರ ಛಲವೂ ಬೇಕು ಎಂದು ಡಿಕೆ ಶಿವಕುಮಾರ್ ಬಿಎಸ್‍ವೈರನ್ನು ಹಾಡಿಹೊಗಳಿದ್ದರು.

    ಯಡಿಯೂರಪ್ಪನವರನ್ನು ಧರ್ಮರಾಯ, ಕರ್ಣ, ಅರ್ಜುನ, ಭೀಮ, ವಿದೂರ, ಕೃಷ್ಣನಿಗೆ ಹೋಲಿಕೆ ಮಾಡಿ ಛಲದಂಕ ಮಲ್ಲ ಎಂದು ಬಣ್ಣಿಸಿದ್ದರು. ಪ್ರಸ್ತುತ ಉಪ ಚುನಾವಣೆಯಲ್ಲಿ 12 ಸ್ಥಾನ ಗೆದ್ದು ಸಿಎಂ ಯಡಿಯೂರಪ್ಪರ ಬೀಗುತ್ತಿದ್ದಂತೆ ಡಿಕೆಶಿ ಸಲ್ಲಿಸಿದ್ದ ಅಭಿನಂದನೆ ವಿಡಿಯೋ ವೈರಲ್ ಆಗಿದೆ. 29 ಸೆಕೆಂಡಿನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

  • ಅಪಘಾತದಲ್ಲಿ ಪತ್ರಕರ್ತ ಸಾವು – ಸಿಎಂ ಬಿಎಸ್‍ವೈಯಿಂದ 5 ಲಕ್ಷ ರೂ. ಪರಿಹಾರ

    ಅಪಘಾತದಲ್ಲಿ ಪತ್ರಕರ್ತ ಸಾವು – ಸಿಎಂ ಬಿಎಸ್‍ವೈಯಿಂದ 5 ಲಕ್ಷ ರೂ. ಪರಿಹಾರ

    ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತನ ಕುಟುಂಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

    ಮಂಜುನಾಥ್ ಸಹ್ಯಾದ್ರಿ ಮೃತಪಟ್ಟ ಪತ್ರಕರ್ತ. ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರರಾಗಿದ್ದ ಮಂಜುನಾಥ್, ಬುಧುವಾರ ಸಂಜೆ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ಹೊಳಲ್ಕೆರೆಯಲ್ಲಿರುವ ತನ್ನ ಸಹೋದರಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪಿಬಿ ರಸ್ತೆಯ ಕೊಡಗನೂರು ಬಳಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಅಪಘಾತ ನಡೆದ ನಂತರ ಚಾಲಕ ತನ್ನ ಟ್ರ್ಯಾಕ್ಟರ್ ಸಮೇತ ಪರಾರಿಯಾಗಿದ್ದಾನೆ. ಅಪಘಾತದ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪೊಲೀಸರು ಮಂಜುನಾಥ್ ಮೃತದೇಹವನ್ನು ಟಾಟಾ ಏಸ್‍ನಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

    ಮೃತದೇಹವನ್ನು ಟಾಟಾ ಏಸ್‍ನಲ್ಲಿ ಸಾಗಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಂಜುನಾಥ್ ಅವರ ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ಶಿವಮೊಗ್ಗದಲ್ಲಿ ಮಂಜುನಾಥ್ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

    ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿರುವ ಮಂಜುನಾಥ್ ಪತ್ರಿಕೆಯಲ್ಲಿ ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಬೆಂಗಳೂರಿನಿಂದ ವರ್ಗಾವಣೆಯಾಗಿ ಹಾವೇರಿಗೆ ತೆರಳಿದ್ದರು. ಮಂಜುನಾಥ್ ತಮ್ಮ ಪೋಷಕರು, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

  • ರೋಷನ್ ಬೇಗ್‍ಗೆ ಶಾಕ್ – ಶರವಣಗೆ ಬಿಜೆಪಿ ಟಿಕೆಟ್

    ರೋಷನ್ ಬೇಗ್‍ಗೆ ಶಾಕ್ – ಶರವಣಗೆ ಬಿಜೆಪಿ ಟಿಕೆಟ್

    ಬೆಂಗಳೂರು: ರೋಷನ್ ಬೇಗ್‍ಗೆ ಬಿಜೆಪಿ ಶಾಕ್ ನೀಡಿದ್ದು ಶಿವಾಜಿ ನಗರ ಕ್ಷೇತ್ರದ ಟಿಕೆಟ್ ಬಿಬಿಎಂಪಿ ಮಾಜಿ ಸದಸ್ಯ ಶರವಣ ಅವರಿಗೆ ನೀಡಿದೆ.

    ಅನರ್ಹಗೊಂಡಿರುವ ಶಾಸಕ ರೋಷನ್ ಬೇಗ್ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಐಎಂಎ ಕೇಸ್‍ನಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರೆ ಕೆಟ್ಟ ಹೆಸರು ಬರಬಹುದು ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಷದ ಬಾವುಟವನ್ನು ಬಿಜೆಪಿ ಇಂದು ನೀಡಿರಲಿಲ್ಲ. ಶರವಣ ಅವರು ಹಲಸೂರು ವಾರ್ಡ್ ಪಾಲಿಕೆ ಸದಸ್ಯೆ ಮಮತಾ ಅವರ ಪತಿಯಾಗಿದ್ದಾರೆ.

    ತುಮಕೂರಿನಲ್ಲಿ ರೋಷನ್ ಬೇಗ್ ಬಗ್ಗೆ ಬಿಜೆಪಿ ಸೇರ್ಪಡೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಎಂ ಬಿಎಸ್‍ವೈ ಇನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಮಾಡಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದರು.

    ಇಂದು ಬಿಜೆಪಿಗೆ 16 ಮಂದಿ ಅನರ್ಹ ಶಾಸಕರು ಸೇರ್ಪಡೆಯಾಗಿದ್ದಾರೆ. ಸೇರ್ಪಡೆಯಾದ ಬೆನ್ನಲ್ಲೇ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ಟಿಕೆಟ್ ಗಳನ್ನು ಅನರ್ಹರಿಗೆ ಬಿಜೆಪಿ ಹಂಚಿಕೆ ಮಾಡಿದೆ. ಈ ಮೂಲಕ ಅನರ್ಹರಿಗೆ ನೀಡಿದ ವಚನವನ್ನು ಸಿಎಂ ಈಡೇರಿಸಿದ್ದಾರೆ.

    ರಮೇಶ್ ಜಾರಕಿಹೊಳಿ(ಗೋಕಾಕ್), ಎಂಟಿಬಿ ನಾಗರಾಜ್(ಹೊಸಕೋಟೆ), ಎಚ್. ವಿಶ್ವನಾಥ್(ಹುಣಸೂರು), ಮಹೇಶ್ ಕುಮಟಳ್ಳಿ(ಅಥಣಿ) ಶ್ರೀಮಂತ ಪಾಟೀಲ್(ಕಾಗವಾಡ) ಶಿವರಾಂ ಹೆಬ್ಬಾರ್(ಯಲ್ಲಾಪುರ) ಬಿಸಿ ಪಾಟೀಲ್(ಹಿರೇಕೆರೂರು) ಆನಂದ್ ಸಿಂಗ್ (ವಿಜಯ ನಗರ), ಡಾ.ಸುಧಾಕರ್(ಚಿಕ್ಕಬಳ್ಳಾಪುರ) ಬೈರತಿ ಬಸವರಾಜ್(ಕೆಆರ್ ಪುರ) ಎಸ್‍ಟಿ ಸೋಮಶೇಖರ್(ಯಶವಂತಪುರ), ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣ ಗೌಡ(ಕೆ.ಆರ್.ಪೇಟೆ) ಅವರಿಗೆ ಟಿಕೆಟ್ ನೀಡಲಾಗಿದೆ.

  • 6 ಕ್ಷೇತ್ರ ಗೆದ್ದರಷ್ಟೇ ಬಿಎಸ್‍ವೈ ಸಿಎಂ ಕುರ್ಚಿ ಭದ್ರ

    6 ಕ್ಷೇತ್ರ ಗೆದ್ದರಷ್ಟೇ ಬಿಎಸ್‍ವೈ ಸಿಎಂ ಕುರ್ಚಿ ಭದ್ರ

    ಬೆಂಗಳೂರು: ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟಿನಿಂದ ಬಿಗ್ ರಿಲೀಫ್ ಸಿಕ್ಕಿದರೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮುಂದುವರಿಯಬೇಕಾದರೆ 15 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕನಿಷ್ಟ 6 ಕ್ಷೇತ್ರಗಳನ್ನು ಗೆಲ್ಲಬೇಕಿದೆ.

    ಹೌದು. ಕರ್ನಾಟಕ ವಿಧಾನಸಭೆ ಬಲಾಬಲ 224 ಆಗಿದ್ದು ಒಬ್ಬರು ಅಂಗ್ಲೋ ಇಂಡಿಯನ್ ಸದಸ್ಯರಿದ್ದಾರೆ. 17 ಮಂದಿ ಶಾಸಕರು ಅನರ್ಹಗೊಂಡ ಪರಿಣಾಮ ಬಲ 207ಕ್ಕೆ ಕುಸಿದಿದೆ. ಬಹುಮತ ಸಾಧಿಸಲು 104 ಶಾಸಕರು ಬೆಂಬಲ ಬೇಕಿದ್ದ ಪರಿಣಾಮ ಬಿಜೆಪಿ 105 ಜನ ಶಾಸಕರ ಜೊತೆ ಓರ್ವ ಪಕ್ಷೇತರ ಶಾಸಕರ ಬೆಂಬಲ ಇದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 66, ಜಿಡಿಎಸ್ 34 ಶಾಸಕರಿದ್ದರೆ ಬಿಎಸ್‍ಪಿಯಿಂದ ಉಚ್ಚಾಟಿದ ಶಾಸಕ ಮಹೇಶ್ ಇದ್ದಾರೆ.

    15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಪರಿಣಾಮ ವಿಧಾನಸಭೆಯ ಬಲಾಬಲ 222+1 ಏರಿಕೆ ಆಗಲಿದೆ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ 112 ಶಾಸಕರ ಬೆಂಬಲ ಬೇಕಿದ್ದು, ಬಿಎಸ್‍ವೈ ಸಿಎಂ ಪಟ್ಟ ಉಳಿಸಿಕೊಳ್ಳಬೇಕಾದರೆ ಕನಿಷ್ಟ 6 ಕ್ಷೇತ್ರಗಳಲ್ಲಿ ಜಯಗಳಿಸಲೇಬೇಕಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಡಿ.5 ರಂದು ಮತದಾನ ನಡೆಯಲಿದ್ದು ಡಿ.9 ಸೋಮವಾರದಂದು ಫಲಿತಾಂಶ ಪ್ರಕಟವಾಗಲಿದೆ.

    ಈ 15 ಕ್ಷೇತ್ರಗಳ ಪೈಕಿ ಉತ್ತರ ಕರ್ನಾಟಕ ಮತ್ತು ಬೆಂಗಳೂರು ನಗರ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿಡಿತವಿದೆ. ಆದರೆ ಹಳೆ ಮೈಸೂರು ಭಾಗವಾದ ಕೆ.ಆರ್.ಪೇಟೆ, ಹುಣಸೂರು, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರವಾದ ಸ್ಪರ್ಧೆ ಇದೆ. ಆದರೆ ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಬಿಜೆಪಿ ಗೆದ್ದಿದ್ದು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದಿದ್ದಾರೆ.

    2 ಕ್ಷೇತ್ರಗಳಿಗೆ ಇಲ್ಲ:
    ಆನರ್ಹ ಶಾಸಕರ 17 ಕ್ಷೇತ್ರದ ಪೈಕಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹಾಗೂ ರಾಯಚೂರಿನ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ಚುನಾವಣೆ ನಡೆಯುತ್ತಿಲ್ಲ. 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾಲಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಅನರ್ಹ ಶಾಸಕ ಮುನಿರತ್ನ ಹೆಸರನ್ನು ಜಾಲಹಳ್ಳಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಪಿ.ಎಂ ಮುನಿರಾಜುಗೌಡ 7ನೇ ಎಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುನಿರತ್ನ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂಬುವುದು ಅವರ ವಾದವಾಗಿದೆ. ಈ ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ಈ ಕ್ಷೇತ್ರದ ಉಪ ಚುನಾವಣೆ ತಡೆ ಹಿಡಿಯಲಾಗಿದೆ.

    ಇನ್ನು ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆಯಿಲ್ಲ. ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದು, ಬೋಗಸ್ ಮತದಾನ ನಡೆಯದಿದ್ದರೆ ನಾನೇ ಗೆಲ್ಲುತ್ತಿದ್ದೆ ಎನ್ನುವುದು ಬಸನಗೌಡ ತುರ್ವಿಹಾಳ ವಾದ. ಹೀಗಾಗಿ ಎರಡು ಪ್ರಕರಣ ಕೋರ್ಟಿನಲ್ಲಿ ಇರುವ ಕಾರಣದಿಂದ 2 ಕ್ಷೇತ್ರಗಳ ಉಪಚುನಾವಣೆ ಕೋರ್ಟ್ ತೀರ್ಪು ಬರುವವರೆಗೂ ಕೈ ಬಿಡಲಾಗಿದೆ.

  • ಡಿಸೆಂಬರ್ ನಂತ್ರ ಬಿಎಸ್‌ವೈ ಕೇರಳ ರಾಜ್ಯಪಾಲ: ಶಾಸಕ ನಾಗನಗೌಡ ಕಂದಕೂರ

    ಡಿಸೆಂಬರ್ ನಂತ್ರ ಬಿಎಸ್‌ವೈ ಕೇರಳ ರಾಜ್ಯಪಾಲ: ಶಾಸಕ ನಾಗನಗೌಡ ಕಂದಕೂರ

    ಯಾದಗಿರಿ: ಬಿಜೆಪಿ ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಸೂಚನೆ ನೀಡಿದೆ ಎಂದು ಯಾದಗಿರಿಯಲ್ಲಿ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಕ್ಷೇಮ ಇಲ್ಲ. ಅನಿವಾರ್ಯ ಕಾರಣಗಳಿಂದ ಹೈಕಮಾಂಡ್ ಯಡಿಯೂರಪ್ಪನವರಿಗೆ ಎರಡು ತಿಂಗಳು ಗ್ರೇಸ್ ಪಿರೇಡ್ ಕೊಟ್ಟಿದ್ದಾರೆ. ಅದು ಡಿಸೆಂಬರ್‌ವರೆಗೂ ಮುಂದುವರಿಯುತ್ತದೆ ಎಂದರು.

    ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪನವರನ್ನು ಕೆಳಗಿಳಿಯುವಂತೆ ಸೂಚಿಸಿದೆ. ಹೈಕಮಾಂಡ್ ಯಡಿಯೂರಪ್ಪ ಅವರ ಬಳಿ “ಡಿಸೆಂಬರ್‌ವರೆಗೂ ಜಾಗ ಖಾಲಿ ಮಾಡಿ. ಗೌರವಯುತವಾಗಿ ನಿಮ್ಮನ್ನು ಕೇರಳದ ರಾಜ್ಯಪಾಲರನ್ನಾಗಿ ಮಾಡುತ್ತೇವೆ. ನಿಮ್ಮ ಪುತ್ರ ವಿಜಯೇಂದ್ರ ಅವರನ್ನು ಎಮ್‌ಎಲ್‌ಸಿ ಮಾಡಿ ಮಂತ್ರಿಸ್ಥಾನ ನೀಡುತ್ತೇನೆ” ಎಂದು ಹೇಳಿದ್ದಾರೆ ಎಂದು ನಾಗನಗೌಡ ಕಂದಕೂರ ಹೇಳಿದ್ದಾರೆ.

    ನಾಗನಗೌಡ ಅವರ ಈ ಹೇಳಿಗೆ ನಿಜಾನಾ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಬಗ್ಗೆ ಯಡಿಯೂರಪ್ಪ ಆಗಲಿ, ಬಿಜೆಪಿ ಪಕ್ಷದವರಾಗಲಿ ಯಾವುದೇ ಹೇಳಿಕೆ ಸಹ ನೀಡಲಿಲ್ಲ. ಹಾಗಾಗಿ ಈ ಸುದ್ದಿ ಸತ್ಯನಾ ಅಥವಾ ಸುಳ್ಳೋ ಎಂಬುದು ಗೊತ್ತಿಲ್ಲ.

  • ಸಿಎಂ ಬರಮಾಡಿಕೊಳ್ಳಲು ಹೊರಟಿದ್ದ ಎಸ್ಕಾರ್ಟ್ ವಾಹನ ಪಲ್ಟಿ – ಮೂವರು ಪೊಲೀಸ್ ಸಿಬ್ಬಂದಿಗೆ ಗಾಯ

    ಸಿಎಂ ಬರಮಾಡಿಕೊಳ್ಳಲು ಹೊರಟಿದ್ದ ಎಸ್ಕಾರ್ಟ್ ವಾಹನ ಪಲ್ಟಿ – ಮೂವರು ಪೊಲೀಸ್ ಸಿಬ್ಬಂದಿಗೆ ಗಾಯ

    ಬಾಗಲಕೋಟೆ: ಇಂದು ಬಾಗಲಕೋಟೆ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬರ ಮಾಡಿಕೊಳ್ಳಲು ಹೊರಟಿದ್ದ ಬಾಗಲಕೋಟೆ ಜಿಲ್ಲಾ ಪೊಲೀಸ್ ಬೆಂಗಾವಲು ವಾಹನ ಪಲ್ಟಿ ಆಗಿದೆ.

    ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಎದುರು ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೆಂಗಾವಲು ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದೆ.

    ಈ ಅಪಘಾತದಲ್ಲಿ ಇಳಕಲ್ ಪಿಎಸ್‍ಐ ಕುಮಾರ ಹಾಡಕರ್, ಹವಾಲ್ದಾರ್ ಮಂಜುನಾಥ ರಾಥೋಡ್ ಹಾಗೂ ವಾಹನ ಚಾಲಕ ಶಿವಾನಂದ ಕಟ್ಟಿಮನಿಗೆ ಗಾಯಗೊಂಡಿದ್ದಾರೆ. ಸದ್ಯ ಮೂವರಿಗೆ ಮಹಲಿಂಗಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

  • ಸಿಎಂಗೆ ಚಾಲೆಂಜ್ ಹಾಕಿದ ನಟಿ ಸೋನು ಗೌಡ

    ಸಿಎಂಗೆ ಚಾಲೆಂಜ್ ಹಾಕಿದ ನಟಿ ಸೋನು ಗೌಡ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸೋನು ಗೌಡ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಚಾಲೆಂಜ್ ಹಾಕಿದ್ದಾರೆ.

    ಸೋನು ಗೌಡ ಅವರು ತಮ್ಮ ಟ್ವಿಟ್ಟರಿನಲ್ಲಿ, ಸಿಎಂ ಅವರೇ ನೀವು ದಂಡ ವಿಧಿಸುವ ಮೊದಲು ದಯವಿಟ್ಟು ನೀವು ಉತ್ತಮ ರಸ್ತೆಗಳನ್ನು ನೀಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ಸಾಮಾನ್ಯ ಜನರು ಕಷ್ಟಪಟ್ಟು ಸಂಪಾದಿಸಿದ ಹಣ, ದಯವಿಟ್ಟು ಅವರ ಜೀವನವನ್ನು ಹಾಳು ಮಾಡಬೇಡಿ” ಎಂದು ಟ್ವೀಟ್ ಮಾಡಿದ್ದಾರೆ.

    ತಮ್ಮ ಟ್ವಿಟ್ಟರಿನಲ್ಲಿ ಸೋನು ಅವರು ಸವಾರನೊಬ್ಬ ಬೈಕಿನಿಂದ ಬೀಳುತ್ತಿರುವ ಫೋಟೋ ಹಾಕಿದ್ದಾರೆ. ಅಲ್ಲದೆ ಆ ಫೋಟೋದಲ್ಲಿ, ಕುಡಿದು ಚಾಲನೆ – 10,000 ರೂ., ಜಂಪಿಂಗ್ ಟ್ರಾಫಿಕ್ ಲೈಟ್- 5,000 ರೂ., ಮೊಬೈಲ್ ಫೋನ್ ಬಳಕೆ – 5,000 ರೂ., ಅತಿವೇಗ – 5,000ರೂ ಹಾಗೂ ಸೀಟ್‍ಬೆಲ್ಟ್ ಧರಿಸದಿದ್ದರೆ – 1,000 ರೂ. ರಸ್ತೆಯಲ್ಲಿ ನಾವು ನೋಡಿದ ಗುಂಡಿಗಳಿಗೆ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಹಿಂದೆ ಸೋನು ಗೌಡ ಅವರು ನಗರದಲ್ಲಿನ ರಸ್ತೆ ಗುಂಡಿಗಳ ವಿರುದ್ಧ ಮತ್ಸ್ಯ ಕನ್ಯೆ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದರು. ಕಲಾವಿದ ಬಾದಲ್ ನಂಜುಂಡಸ್ವಾಮಿ ಮತ್ತು ತಂಡದಿಂದ ಈ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿತ್ತು. ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಸ್ವಿಮ್ಮಿಂಗ್ ಪೂಲ್ ರೀತಿ ಮಾಡಿ ಪ್ರತಿಭಟನೆ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕುಮಾರಸ್ವಾಮಿ, ಸಿದ್ದರಾಮಯ್ಯನವರಿಂದಲೂ ಟ್ರಾಫಿಕ್ ರೂಲ್ಸ್ ಬ್ರೇಕ್

    ಇತ್ತೀಚೆಗೆ ಬಾದಲ್ ನಂಜುಂಡಸ್ವಾಮಿ ಅವರು ಗಗನಯಾತ್ರಿ ವೇಶ ಧರಿಸಿ ಚಂದ್ರನ ಮೇಲೆ ನಡೆದುಕೊಂಡು ಹೋಗುತ್ತಿರುವ ಹಾಗೆ ಬೆಂಗಳೂರಿನ ಹೇರೋಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದರು. ಬಾದಲ್ ಅವರು ರಸ್ತೆ ಗುಂಡಿ ಮೇಲೆ ನಡೆದುಕೊಂಡು ಹೋಗುವ ಮೂಲಕ ಬಿಬಿಎಂಪಿ ಗಮನ ಸೆಳೆದಿದ್ದರು. ಬಾದಲ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಫಾಲೋ ಮಾಡೋದ್ರಲ್ಲಿ ಮೋದಿಯೇ ಬೆಸ್ಟ್

    ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

    ಸೋನು ಗೌಡ ಅವರು ಕನ್ನಡದಲ್ಲಿ ನಟ ಶಿವರಾಜ್‍ಕುಮಾರ್ ಜೊತೆ ‘ಪರಮೇಶ ಪಾನ್‍ವಾಲಾ’, ‘ಇಂತಿ ನಿನ್ನ ಪ್ರೀತಿಯ’, ‘ಗುಲಾಮಾ’ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಐ ಲವ್ ಯೂ’ ಚಿತ್ರದಲ್ಲೂ ನಟಿಸಿದ್ದಾರೆ.