Tag: yeddiyurappa

  • ಹೆಚ್‍ಡಿಕೆ ಪಂಚಾಯ್ತಿ ಸದಸ್ಯನಿಗಿಂತಲೂ ಕೀಳುಮಟ್ಟದ ರಾಜಕಾರಣ ಮಾಡ್ತಿದ್ದಾರೆ: ಸಚಿವ ಈಶ್ವರಪ್ಪ

    ಹೆಚ್‍ಡಿಕೆ ಪಂಚಾಯ್ತಿ ಸದಸ್ಯನಿಗಿಂತಲೂ ಕೀಳುಮಟ್ಟದ ರಾಜಕಾರಣ ಮಾಡ್ತಿದ್ದಾರೆ: ಸಚಿವ ಈಶ್ವರಪ್ಪ

    ಶಿವಮೊಗ್ಗ: ಮಾಜಿ ಸಿಎಂ ಎಚ್‍ಡಿಕೆ ಅವರು ಗ್ರಾಮ ಪಂಚಾಯ್ತಿ ಸದಸ್ಯನಿಗಿಂತಲೂ ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ. ಹಾಗಂತ ಗ್ರಾಮ ಪಂಚಾಯ್ತಿ ಸದಸ್ಯ ಕೀಳು ಅಂತಾ ನಾನು ಹೇಳುತ್ತಿಲ್ಲ. ಅವರು ಕೂಡ ಚುನಾಯಿತ ಜನಪ್ರತಿನಿಧಿಗಳು, ಜನರಿಂದ ಆಯ್ಕೆಯಾಗಿ ಬಂದಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದಂತಹ ವ್ಯಕ್ತಿ ಈ ಮಟ್ಟಕ್ಕೆ ಇಳಿಯುತ್ತಾರೆ ಅಂದರೆ ನನಗೆ ತುಂಬಾ ನೋವು ಆಗುತ್ತಿದೆ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೊಡ್ಡ ದೊಡ್ಡ ಆರು ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಮಾಜಿ ಸಿಎಂ ಎಚ್‍ಡಿಕೆ ಆರೋಪ ಮಾಡಿದ್ದರು. ಎಚ್‍ಡಿಕೆ ಅವರ ಈ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ನಿಮ್ಮ ತಂದೆ ದೇವೇಗೌಡರು ಸಹ ಪ್ರಧಾನಿ ಆಗಿದ್ದರು. ಆ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲು ದೇಶದ ಜನ ಬ್ಯಾಗಿನಲ್ಲಿ ಹಾರ, ತುರಾಯಿ ಎಲ್ಲಾ ತೆಗೆದುಕೊಂಡು ಹೋಗುತ್ತಿದ್ದರು. ಹಾಗಾದರೆ ಆ ಸಂದರ್ಭದಲ್ಲಿ ಬ್ಯಾಗ್‍ನಲ್ಲಿ ಏನು ಇರುತಿತ್ತು ಎಂದು ಪ್ರಶ್ನಿಸಿದ್ದಾರೆ.

    ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಜ್ಯದಿಂದ ಹೊಸದಾಗಿ ನಾಲ್ಕು ಮಂದಿ ಕೇಂದ್ರ ಸಚಿವರಾಗಿದ್ದಾರೆ. ಕೇಂದ್ರದಲ್ಲಿ ರಾಜ್ಯದಿಂದ ಒಟ್ಟು ಆರು ಮಂದಿ ಸಚಿವರಾಗಿದ್ದಾರೆ. ಅವರುಗಳಿಗೆ ಶುಭ ಕೋರಿ ಸನ್ಮಾನಿಸಬೇಕು. ಜೊತೆಗೆ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಸಹ ಸಿಎಂ ಭೇಟಿಯಾಗಿದ್ದಾರೆ. ಈ ವೇಳೆ ಎಲ್ಲರಿಗೂ ಶುಭಕೋರಿ ನೆನಪಿನ ಕಾಣಿಕೆ ನೀಡುವ ಸಲುವಾಗಿ ಬ್ಯಾಗ್ ತೆಗೆದುಕೊಂಡು ಹೋದರೆ, ಅದನ್ನು ಹೆಚ್‍ಡಿಕೆ ಅವರು ಕೆಟ್ಟ ಕಣ್ಣಿನಲ್ಲಿ ನೋಡುತ್ತಾರೆ ಅಂದರೆ ಖಂಡಿತಾ ಅವರನ್ನು ದೇವರು ಮೆಚ್ಚುವುದಿಲ್ಲ ಎಂದಿದ್ದಾರೆ.

    ಹೆಚ್ಡಿಕೆ ಅವರಿಗೆ ನಿಜವಾಗಿಯೂ ರಾಜ್ಯದ ಬಗ್ಗೆ ಅಭಿಮಾನ ಇದ್ದರೆ, ಕೇಂದ್ರದ ಮಂತ್ರಿಗಳು ನಮ್ಮ ರಾಜ್ಯಕ್ಕೆ ಒಳ್ಳೆಯದು ಮಾಡಲಿ ಅಂತಾ ಪಕ್ಷ ಭೇದ ಮರೆತು ಅಭಿನಂದನೆ ಸಲ್ಲಿಸಿ ಬರಬೇಕಿತ್ತು. ಅದನ್ನು ಬಿಟ್ಟು ಸಿಎಂ ವಿರುದ್ಧ ಆರೋಪ ಮಾಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿಡಿಕಾರಿದ್ದಾರೆ.

    ಮೋದಿ ಅವರು ನಿರೀಕ್ಷೆ ಮಾಡುವಂತಹ ಕೆಳಮಟ್ಟದ ರಾಜಕಾರಣಿ ಅಲ್ಲ. ಯಡಿಯೂರಪ್ಪ ಅವರು ಸಹ ಮೋದಿ ಅವರನ್ನು ಮೆಚ್ಚಿಸಲು, ತೃಪ್ತಿಪಡಿಸಲು ಯಾವುದೋ ಆಸೆ ಆಮಿಷ ತೋರಿಸಲು ಹೋಗಿರಲಿಲ್ಲ. ಮುಖ್ಯಮಂತ್ರಿ ಆಗಿದ್ದಂತಹವರು ಇಂತಹ ಕೀಳುಮಟ್ಟಕ್ಕೆ ಇಳಿಯಬೇಡಿ. ರಾಜ್ಯದ ಜನ ನಿಮ್ಮನ್ನು ಒಪ್ಪುವುದಿಲ್ಲ. ರಾಜ್ಯದ ಜನ ನಿಮಗೆ ಛೀಮಾರಿ ಹಾಕುವಂತಹ ದಿನ ಬರುತ್ತದೆ. ರಾಜ್ಯದ ಜನರ ಕ್ಷಮೆ ಕೇಳಿ ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ಆಗ ಮಾತ್ರ ರಾಜ್ಯದ ಜನ ಕುಮಾರಸ್ವಾಮಿ ದೊಡ್ಡ ಮನುಷ್ಯ ಅಂತಾ ಒಪ್ಪಿಕೊಳ್ಳುತ್ತಾರೆ. ಇಲ್ಲ ನಾನು ಇದನ್ನೇ ಮುಂದುವರಿಸುತ್ತೇನೆ ಅಂದರೆ ಮುಂದುವರಿಸಿ ನನ್ನ ಅಭ್ಯಂತರವಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಮಂತ್ರಿ ಸ್ಥಾನ ಹೋದರೆ ಗೂಟ ಹೋದ ಹಾಗೆ: ಕೆ.ಎಸ್ ಈಶ್ವರಪ್ಪ

  • ಸತ್ತರೋ ಅಥವಾ ಕೊಂದರೋ? – ಕರ್ನಾಟಕ ಸರ್ಕಾರಕ್ಕೆ ರಾಹುಲ್ ಪ್ರಶ್ನೆ

    ಸತ್ತರೋ ಅಥವಾ ಕೊಂದರೋ? – ಕರ್ನಾಟಕ ಸರ್ಕಾರಕ್ಕೆ ರಾಹುಲ್ ಪ್ರಶ್ನೆ

    ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟಿದ್ದು, ಈ ಘಟನೆ ಕುರಿತಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ರಾಹುಲ್ ಗಾಂಧಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಸತ್ತರೋ ಅಥವಾ ಕೊಂದರೋ? ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ. ವ್ಯವಸ್ಥೆ ಎಚ್ಚರಗೊಳ್ಳವ ಮುನ್ನ ಎಷ್ಟು ಬಲಿ ಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

    ಈ ಕುರಿತಂತೆ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲಾ, ಯಡಿಯೂರಪ್ಪ ಸರ್ಕಾರದ ನಿರ್ಲಕ್ಷ್ಯದ ಕೊಲೆ ಇದಾಗಿದೆ. ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು. ಸಿಎಂ ಯಡಿಯೂರಪ್ಪನವರಿಗೆ ಸಾವಿನ ನೈತಿಕ ಜವಾಬ್ದಾರಿ ಇದೆಯೇ? ಎಂದು ಪ್ರಶ್ನಿಸುವ ಮೂಲಕ ಟ್ಟಿಟ್ಟರ್‌ನಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

  • ರೈತರ ಆದಾಯ ದ್ವಿಗುಣ ಮಾಡ್ತೇವೆ ಎಂದಿದ್ದ ಪ್ರಧಾನಿ ವಿರುದ್ಧ ಹೆಚ್‍ಡಿಕೆ ಕಿಡಿ

    ರೈತರ ಆದಾಯ ದ್ವಿಗುಣ ಮಾಡ್ತೇವೆ ಎಂದಿದ್ದ ಪ್ರಧಾನಿ ವಿರುದ್ಧ ಹೆಚ್‍ಡಿಕೆ ಕಿಡಿ

    ಬೆಂಗಳೂರು: ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿದ್ದ ಪ್ರಧಾನಿ ನರೆಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

    2022ರ ಹೊತ್ತಿಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಮೋದಿ ಹೇಳಿದ್ದರು. ಆದರೆ, 2021ರ ವೇಳೆಗೆ ರೈತರ ಕೃಷಿ ಖರ್ಚು-ವೆಚ್ಚ ದುಪ್ಪಟ್ಟಾಗಿದೆ. ರಸಗೊಬ್ಬರ ಬೆಲೆ ಏರಿದೆ. ರೈತರು ಬೋರ್‍ವೆಲ್ ಕೊರೆಸಲಾಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯು ಪರಿಸ್ಥಿತಿಯನ್ನು ವಿಷಮಗೊಳಿಸಿದೆ. ಆದಾಯ ದ್ವಿಗುಣ ಎಲ್ಲಿ? ಎಂದು ಪ್ರಶ್ನಿಸಿದರು.

    ಇವತ್ತಿನ ಲೆಕ್ಕಾಚಾರದ ಪ್ರಕಾರ ರೈತರು ಬೋರ್‍ವೆಲ್ ಕೊರೆಸಬೇಕಿದ್ದರೆ, 1-2ಲಕ್ಷ ಖರ್ಚು ಮಾಡಬೇಕು. ಪಿವಿಸಿ ಪೈಪ್‍ಗಳ ದರ ದುಪ್ಪಟ್ಟಾಗಿದೆ, ಮೋಟರ್ ಬೆಲೆಯಲ್ಲಿ ಜಿಗಿತವಾಗಿದೆ. ಕೃಷಿ ಪಂಪ್ ಸೆಟ್‍ಗಳಿಗೆ ರೈತರಾದವರೇ ಶೇ.18ರಷ್ಟು ಜಿಎಸ್‍ಟಿ ಪಾವತಿಸಬೇಕಿರುವುದು ವಿಷಾದಕರ. ಇದು ಕೃಷಿಗೆ ಪೂರಕ ಸ್ಥಿತಿಯೇ ಎಂಬುದರ ಅವಲೋಕನೆಯಾಗಬೇಕಿದೆ ಎಂದು ತಿಳಿಸಿದರು.

    ಕೃಷಿ ಪರಿಕರಗಳ ಬೆಲೆ ಏರಿಕೆ ಬಗ್ಗೆ ರಾಜ್ಯದ ಕೃಷಿ ಸಚಿವರು ನೀಡಿರುವ ಹೇಳಿಕೆ ಇಂತಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಳಕ್ಕೆ ರೈತರು ಹೊಂದಿಕೊಳ್ಳಬೇಕು ಎಂದಿದ್ದಾರೆ. ರೈತರ ಕಷ್ಟ ನೀಗಿಸಬೇಕಾದವರು ಬೇಜವಾಬ್ದಾರಿತನ ತೋರುವುದು ಬೇಸರದ ವಿಚಾರ ಎಂದು ವಿಷಾದ ವ್ಯಕ್ತಪಡಿಸಿದರು.

    ಕೃಷಿಯಲ್ಲಿ ಆದಾಯ ಗಳಿಸುವುದು ಇರಲಿ, ಕೃಷಿ ಮಾಡಲೇ ರೈತ ಸಂಕಷ್ಟ ಅನುಭವಿಸಬೇಕಾಗಿರುವುದು ಇವತ್ತಿನ ದುರಂತ. ಇದನ್ನು ನಿವಾರಿಸಲಾಗದೇ ಇರುವುದು ರೈತರ ಆದಾಯ ದ್ವಿಗುಣ ಮಾಡುವ ಕ್ರಮವೇ ಎಂಬುದರ ಬಗ್ಗೆ ಮೋದಿ ಅವರು ಉತ್ತರಿಸಬೇಕು. ಪರಿಸ್ಥಿತಿ ಹೀಗಿದ್ದು, ಸಮಾವೇಶದಲ್ಲಿ ರೈತರ ಕಲ್ಯಾಣದ ಬಗ್ಗೆ ಮೋದಿ ಅವರು ಆಡುವ ಮಾತುಗಳು ಪ್ರಾಮಾಣಿಕವೇ? ಎಂದು ಕಿಡಿ ಕಾರಿದರು.

    ಪ್ರಧಾನಿ ಮೋದಿ ಅವರು ಬಂಗಾಳದ ಏಕಗವಾಕ್ಷಿ ವ್ಯವಸ್ಥೆ ಬಗ್ಗೆ ಮಾತಾಡಿದ್ದಾರೆ. ದೇಶದಲ್ಲಿ ಅಭಿವೃದ್ಧಿಗೆ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದೂ, ಬಂಗಾಳದಲ್ಲಿ ಮಮತ ಅಳಿಯ ಕೇಂದ್ರಿತ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾವ ಏಕಗವಾಕ್ಷಿ ವ್ಯವಸ್ಥೆ ಇದೆ? ಮೋದಿ ಉತ್ತರಿಸುವರೇ? ಎಂದು ಹರಿಹಾಯ್ದರು.

    ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಕುರ್ಚಿ ಹಿಂದೆ ಅಡಗಿ ಕುಳಿತಿರುವ, ರಾಜ್ಯದ ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ಬಗ್ಗೆ ಬಿಜೆಪಿಯ ಹಿರಿಯ ಶಾಸಕರೇ ಹಾದಿ ಬೀದಿಯಲ್ಲಿ ಗೋಳಾಡುತ್ತಿದ್ದಾರೆ. ಯಡಿಯೂರಪ್ಪ ಕುಟುಂಬದ ಅಕ್ರಮದ ಬಗ್ಗೆ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸ್ವಘೋಷಿತ ಮಹಾನಾಯಕ-ಏಕಗವಾಕ್ಷಿ ಬಗ್ಗೆ ಮೋದಿ ಮಾತಾಡುವರೇ? ಎಂದು ವಾಗ್ದಾಳಿ ನಡೆಸಿದ್ದಾರೆ.

    ಕರ್ನಾಟಕದ ಸರ್ಕಾರದಲ್ಲೇ ಏಕಗವಾಕ್ಷಿ ಯೊಂದು ಇರುವಾಗ, ಅದನ್ನು ಉದ್ದೇಶಪೂರ್ವಕವಾಗಿ ಪೋಷಿಸುತ್ತಿರುವಾಗ ಮೋದಿ ಅವರು ಮಮತ ಬಗ್ಗೆ ಟೀಕಿಸುವುದು ಆತ್ಮವಂಚನೆ. ರಾಜ್ಯದ ಜನರ ತೆರಿಗೆ ಹಣ, ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನುಂಗಿಹಾಕುತ್ತಿರುವ, ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಮೋದಿ ಮೊದಲು ಕೊನೆಗಾಣಿಸಲಿ ಎಂದು ಹೆಚ್‍ಡಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

  • ಕೇಂದ್ರದ ಅನುದಾನದ ಬಳಕೆ ಹೇಗೆ ಆಗಿದೆ ಅನ್ನೋದನ್ನು ಮೊದ್ಲು ತಿಳಿಸಲಿ: ಸಿಎಂಗೆ ಬಿಎಸ್‍ವೈ ತಿರುಗೇಟು

    ಕೇಂದ್ರದ ಅನುದಾನದ ಬಳಕೆ ಹೇಗೆ ಆಗಿದೆ ಅನ್ನೋದನ್ನು ಮೊದ್ಲು ತಿಳಿಸಲಿ: ಸಿಎಂಗೆ ಬಿಎಸ್‍ವೈ ತಿರುಗೇಟು

    ಮೈಸೂರು: ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಯ ಬಗ್ಗೆ ರಾಜ್ಯ ಸರ್ಕಾರ ಕೇಂದ್ರವನ್ನು ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ಈ ಕುರಿತು ಮಂಗಳವಾರ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲಿಶಾವಾದ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ಅಂಗನವಾಡಿ ನೌಕರರಿಂದ ಆಹೋರಾತ್ರಿ ಧರಣಿ – ಬೀದಿಯಲ್ಲೇ ಮಕ್ಕಳ ನಿದ್ದೆ

    ಈ ಬಗ್ಗೆ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ ಮೊದಲು 14ನೇ ಹಣಕಾಸು ಆಯೋಗದಿಂದ ಕೇಂದ್ರ ಸರ್ಕಾರ ನೀಡಿರುವ ಹಣವನ್ನು ರಾಜ್ಯ ಸರ್ಕಾರ ಯಾವ ಉದ್ದೇಶಕ್ಕೆ ಬಳಸಿಕೊಂಡಿದೆ ಎಂಬುದನ್ನು ತಿಳಿಸಲಿ. ಕೇಂದ್ರ ಸರ್ಕಾರ ನೀಡುವ ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಬಳಿಕ ಸಮಸ್ಯೆ ಎದುರಾದಾಗ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಅಂತಾ ಸಿಎಂ ಆರೋಪಕ್ಕೆ ತಿರುಗೇಟು ನೀಡಿದರು.

    ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

    ಸಮಸ್ಯೆಗೆ ರಾಜ್ಯ ಸರ್ಕಾರವೇ ಕಾರಣ: ಅಂಗನವಾಡಿ ಕಾರ್ಯಕರ್ತೆಯರ ಈಗಿನ ಸಮಸ್ಯೆಗೆ ರಾಜ್ಯ ಸರ್ಕಾರವೇ ಕಾರಣ. ಕೇಂದ್ರದಿಂದ ರಾಜ್ಯಕ್ಕೆ ನೀಡುತ್ತಿರುವ ಹಣ ದುರುಪಯೋಗವಾಗುತ್ತಿದೆ. ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರ ಬೇರೆ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವೇ ಹಣ ನೀಡಬೇಕು ಅಂತಾ ಸಂಸದೆ ಶೋಭಾಕರಂದ್ಲಾಜೆ ಆಗ್ರಹಿಸಿದರು.

    ಇದನ್ನೂ ಓದಿ:  ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಚ್ಚಿದ ಬೆಂಗಳೂರು – ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್

    ಸರ್ಕಾರ ಹೇಳಿದ್ದೇನು?: ಮಂಗಳವಾರ ವಿಧಾನಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮತ್ತು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಅನುದಾನವನ್ನು ಕಡಿತಗೊಳಿಸಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿದ್ದರು.

    ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ- ಹೆಚ್‍ಡಿಕೆ ಭೇಟಿ, ನೊಂದ ಮಹಿಳೆಯರಿಗೆ ಸಾಂತ್ವನ

    ಉಮಾಶ್ರೀ ಮಾತನಾಡಿ, ಯುಪಿಎ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಶೇ.90ರಷ್ಟು, ರಾಜ್ಯ ಸರ್ಕಾರ ಶೇ.10 ಗೌರವ ಧನ ಕೊಡುತಿತ್ತು. ಆದರೆ ಕೇಂದ್ರ ಸರ್ಕಾರ ಈಗ ಶೇ. 60, ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 5,200 ರೂ. ಸಹಾಯಧನ ಕೊಡ್ತಿದ್ರೆ, ಕೇಂದ್ರ ಸರ್ಕಾರದ ಪಾಲು 1,800 ರೂ. ಮಾತ್ರ. ಇದರಿಂದಾಗಿ ಒಟ್ಟು 7000 ರೂ ಸಂಬಳ ಸಿಗುತ್ತಿದೆ ಎಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಹೆಚ್‍ಡಿಕೆ ಆಯ್ತು ಈಗ ಶೆಟ್ಟರ್ ಆಶ್ವಾಸನೆ – ಸದನದಲ್ಲೂ ಶುರುವಾಯ್ತು ಅಂಗನವಾಡಿ ಕೂಗು

    ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದಿರಾಗಾಂಧಿ ಕಾಲದಲ್ಲಿ ಗೌರವ ಧನ ಕೊಡಲು ಆರಂಭವಾಗಿದ್ದು, ಅಂದಿನಿಂದಲೂ ಕೇಂದ್ರ ಸರ್ಕಾರ ಶೇ.90 ರಷ್ಟು ಗೌರವಧನ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪಾಲು ಕಡಿತಗೊಳಿಸಿದ ಕಾರಣ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಪ್ರತಿ ವರ್ಷ ನಾವು 500 ರೂ ಹೆಚ್ಚಳ ಮಾಡಿದ್ದೇವೆ. ಆದ್ರೆ 2016-17ರಲ್ಲಿ ಹೆಚ್ಚಳ ಮಾಡಿಲ್ಲ, ಅದು ಕೇಂದ್ರ ಸರ್ಕಾರದ ಕ್ರಮದಿಂದ ಆಗಿಲ್ಲ. ಬರೀ ಮಾತನಾಡಬಹುದು, ಕಾಳಜಿ ತೋರಿಸಬಹುದು.ಆದ್ರೆ ಕೇಂದ್ರ ಸರ್ಕಾರ ಪಾಲು ಕಡಿಮೆ ಮಾಡಿದ್ದು ಯಾಕೆ? ಇದು ಮಹಿಳಾ ಪರ ಕಾಳಜಿನಾ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಇದನ್ನೂ ಓದಿ: ಸತತ 2ನೇ ದಿನವೂ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ

    ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ 7 ಸಾವಿರ ಸಂಬಳ: ಯಾರ ಪಾಲು ಎಷ್ಟು? ಬೇರೆ ರಾಜ್ಯದಲ್ಲಿ ಎಷ್ಟಿದೆ?