Tag: Yatindra

  • ನಾಳೆ ಯತೀಂದ್ರಗೆ ಟಿಪ್ಪು ಹೆಸರು ಇಟ್ಟರೂ ಅಚ್ಚರಿ ಇಲ್ಲ – ಸಿಎಂಗೆ ಬಿಜೆಪಿ ಟಾಂಗ್‌

    ನಾಳೆ ಯತೀಂದ್ರಗೆ ಟಿಪ್ಪು ಹೆಸರು ಇಟ್ಟರೂ ಅಚ್ಚರಿ ಇಲ್ಲ – ಸಿಎಂಗೆ ಬಿಜೆಪಿ ಟಾಂಗ್‌

    ಬೆಂಗಳೂರು: ತುಷ್ಟೀಕರಣದ ಉತ್ತುಂಗಕ್ಕೆ ತಲುಪಿರುವ ಸಿದ್ದರಾಮಯ್ಯ (Siddaramaiah) ಸಾಹೇಬರು ನಾಳೆ ಯತೀಂದ್ರ (Yatindra) ಅವರಿಗೆ ಟಿಪ್ಪು(Tippu) ಎಂದು ನಾಮಕರಣ ಮಾಡಿದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಹೇಳಿದೆ.

    ಕಾಂಗ್ರೆಸ್‌ (Congres) ಕೆಲ ಶಾಸಕರು ಟಿಪ್ಪು ಜಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ ಸರ್ಕಾರಕ್ಕೆ ಬಿಜೆಪಿ ಟಾಂಗ್‌ ನೀಡಿದೆ.  ಇದನ್ನೂ ಓದಿ: ಮೈಸೂರು ಬಿಟ್ಟು ಹೊರಗಡೆ ತೆರಳಬೇಡಿ: ಮನೋರಂಜನ್‌ ಕುಟುಂಬಕ್ಕೆ ಗುಪ್ತಚರ ಇಲಾಖೆ ಸೂಚನೆ

     

    ಪೋಸ್ಟ್‌ನಲ್ಲಿ ಏನಿದೆ?
    ಲೋಕಸಭಾ ಚುನಾವಣೆಗಾಗಿ ಅಲ್ಪಸಂಖ್ಯಾತರ ಓಲೈಕೆಗೆ 10 ಸಾವಿರ ಕೋಟಿ ರೂ. ಕೊಡುತ್ತಿರುವ ಸಿದ್ದರಾಮಯ್ಯನವರು ಇನ್ನೂ ಮೆಚ್ಚಿಸಲು ಮಾಡಬಹುದಾದ ಘನಂದಾರಿ ಕೆಲಸಗಳು – ಮೈಸೂರಿನಲ್ಲಿ ಟಿಪ್ಪು ವಿಮಾನ ನಿಲ್ದಾಣ, ವಿಧಾನಸೌಧಕ್ಕೆ ಟಿಪ್ಪು ಸೌಧವೆಂದು ಮರು ನಾಮಕರಣ, ಮೈಸೂರು ವಿವಿಗೆ ಟಿಪ್ಪು ಹೆಸರು, ಟಿಪ್ಪುವಿನ 108 ಅಡಿ ಪ್ರತಿಮೆ, ಟಿಪ್ಪು ಮದ್ಯದ ಬಾಟಲಿ, ಬಿಎಂಟಿಸಿ/ಕೆಎಸ್‌ಆರ್‌ಟಿಸಿಗೆ ಟಿಪ್ಪು ಸಾರಿಗೆ ಎಂಬ ಹೆಸರು. ಇದನ್ನೂ ಓದಿ: ಟಿಪ್ಪುವಿನ ಹೆಸರನ್ನು ಶೌಚಾಲಯಗಳಿಗೆ ಇಡಬೇಕು: ಯತ್ನಾಳ್‌

     

  • ಯತೀಂದ್ರ ಭಾರೀ ಭ್ರಷ್ಟ – ಸಚಿವ ಲಾಡ್ ಯಡವಟ್ಟು

    ಯತೀಂದ್ರ ಭಾರೀ ಭ್ರಷ್ಟ – ಸಚಿವ ಲಾಡ್ ಯಡವಟ್ಟು

    ಹುಬ್ಬಳ್ಳಿ: ಯತೀಂದ್ರ (Yatindra) ಆಡಳಿತದಲ್ಲಿ ಹಸ್ತಕ್ಷೇಪ ಮಾಡತ್ತಾರೆ ಅವರು ಭಾರೀ ಭ್ರಷ್ಟರಿದ್ದಾರೆ. ಯತೀಂದ್ರರನ್ನು ಯಾಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅವರನ್ನೇ ಕೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಅವರನ್ನು ಟೀಕಿಸುವ ಭರದಲ್ಲಿ ಯತೀಂದ್ರ ಅವರ ಹೆಸರನ್ನು ಉಲ್ಲೇಖಿಸಿ ಸಚಿವ ಸಂತೋಷ್ ಲಾಡ್ (Santosh Lad) ಯಡವಟ್ಟು ಮಾಡಿಕೊಂಡಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಮತ್ತು ಯತೀಂದ್ರ ಹೆಸರನ್ನು ಗೊಂದಲ ಮಾಡಿಕೊಂಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಅವರು ವಿಜಯೇಂದ್ರ ಬಗ್ಗೆ ಮಾತನಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: CSR ಅಂದರೆ ಕರಪ್ಟ್ ಸನ್ ಆಫ್ ಸಿದ್ದರಾಮಯ್ಯ: HDK ವಾಗ್ದಾಳಿ

    ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೇಳಗೆ ಇಳಿಸಲಾಗಿತ್ತು. ಆರ್‍ಎಸ್‍ಎಸ್ ಮತ್ತು ಕೇಂದ್ರ ಸರ್ಕಾರ ವಿಜಯೇಂದ್ರರ ಹಸ್ತಕ್ಷೇಪಕ್ಕೆ ಬೇಸತ್ತು ಬಿಎಸ್‍ವೈ ಅವರನ್ನು ಕೆಳಗಿಸಿತ್ತು. ಈಗ ಅದೇ ವಿಜಯೇಂದ್ರರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಬಿಜೆಪಿ ನಾಯಕರು ಇದಕ್ಕೆ ಉತ್ತರ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್

  • ಇನ್ಮುಂದೆಯಾದ್ರೂ ಎಚ್ಚರ ಅಪ್ಪ- ಸಿದ್ದುಗೆ ಪುತ್ರ ಯತೀಂದ್ರ ಸಲಹೆ

    ಇನ್ಮುಂದೆಯಾದ್ರೂ ಎಚ್ಚರ ಅಪ್ಪ- ಸಿದ್ದುಗೆ ಪುತ್ರ ಯತೀಂದ್ರ ಸಲಹೆ

    ಬೆಂಗಳೂರು: ಲಿಂಗಾಯತ, ಒಕ್ಕಲಿಗ ಜಾತಿ ಲೆಕ್ಕಾಚಾರ ಹಾಗೂ ಡಿಕೆಶಿ ಜೆಡಿಎಸ್ ಬಾವುಟ ಹಿಡಿದ ವಿಷಯದ ಬಗ್ಗೆ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಮಾತನಾಡುತ್ತಾ ಕುಳಿತ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪುತ್ರ ಯತೀಂದ್ರ ಅವರು ಅಸಮಾಧಾನವನ್ನು ಹೊರ ಹಾಕಿ ಸಲಹೆ ನೀಡಿದ್ದಾರೆ.

    ಸಿದ್ದರಾಮಯ್ಯ ಆಪ್ತರೇ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ವಿಡಿಯೋವನ್ನ ಲೀಕ್ ಮಾಡಿಸಿದ್ದರು. ಆದರೆ ಆ ವಿಡಿಯೋ ಸಿದ್ದರಾಮಯ್ಯ ಪಾಲಿಗೆ ಮತ್ತಷ್ಟು ನೆಗೆಟಿವ್ ಆಗುತ್ತಿದೆ ಅನ್ನೋದು ಪುತ್ರ ಯತೀಂದ್ರರ ಆಕ್ಷೇಪವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸೋಮವಾರ ಈ ಸಂಬಂಧ ಸಿದ್ದರಾಮಯ್ಯ ಜೊತೆ ಯತೀಂದ್ರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರ ವಿರುದ್ಧ ಮಾತನಾಡಬೇಡಿ ಅಂತ ಹೇಳಿದ್ದೆ. ಆಗ ನಿನಗೆ ರಾಜಕೀಯ ಗೊತ್ತಾಗಲ್ಲ ಸುಮ್ನಿರು ಅಂತ ನನಗೆ ಬೈದಿದ್ದೀರಿ. ಆ ಬಳಿಕ ಏನಾಯಿತು, ಅದೇ ವಿಷಯದಿಂದಾಗಿ ಅದೇ ಸಮುದಾಯಗಳ ಸಿಟ್ಟು ನಿಮ್ಮ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಈಗ ಮತ್ತೆ ಅದೇ ರೀತಿಯ ತಪ್ಪು ಮಾಡುತ್ತಿದ್ದೀರಿ. ನಾಲ್ಕು ಗೋಡೆಯ ಮಧ್ಯೆ ಆಪ್ತರ ಮುಂದೆ ಮಾತನಾಡಿದ್ದನ್ನ ವಿಡಿಯೋ ಮಾಡಿ ಬಹಿರಂಗಪಡಿಸೋ ಅವಶ್ಯಕತೆ ಏನಿತ್ತು ಎಂದು ಅಪ್ಪನ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ದೋಸ್ತಿ ಮುಗಿದ ಮೇಲೆ ಇವರಿಗ್ಯಾಕೆ ಅವ್ರ ಉಸಾಬರಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಅಪ್ಪನ ಜೊತೆಗಿರುವವರೇ ದಿಕ್ಕು ತಪ್ಪಿಸುತ್ತಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ಪುತ್ರ ಯತೀಂದ್ರ ಅವರು ಸಿದ್ದರಾಮಯ್ಯಗೆ ತಿಳಿಸಿದ್ದಾರೆ. ಮಗನ ರಾಜಕೀಯ ಗುಣಾಕಾರ, ಭಾಗಕಾರ ಕಂಡ ಸಿದ್ದರಾಮಯ್ಯ ಅವರು, ಪುತ್ರನ ಮಾತಿಗೆ ಮರು ಮಾತನಾಡದೆ ಸೈಲೆಂಟಾಗಿದ್ದಾರೆ. ಈ ಮೂಲಕ ಆಪ್ತರೇ ಅಪ್ಪನನ್ನ ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನ ಅರಿತ ಡಾ.ಯತೀಂದ್ರ, ಅಪ್ಪನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:  ವಿಡಿಯೋದ ತಪ್ಪು ವ್ಯಾಖ್ಯಾನ ನೀಡಿ ಬಿಜೆಪಿ ವಿಕೃತಾನಂದ: ಸಿದ್ದರಾಮಯ್ಯ

    ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬುದ್ಧಿ ಹೇಳಿದ್ದ ಮಗನನ್ನ ಗದರಿದ್ದ ಸಿದ್ದರಾಮಯ್ಯ ರಾಜಕೀಯವಾಗಿ ಎಡವಿದ್ದರೂ ಈಗ ಬುದ್ಧಿ ಹೇಳಿದ ಮಗನಿಗೆ ಸಿದ್ದರಾಮಯ್ಯರ ಮೌನವೇ ಉತ್ತರವಾಗಿರುವುದು ಕುತೂಹಲ ಮೂಡಿಸಿದೆ.

  • ಪುತ್ರನಿಗೆ ಕ್ಯಾಬಿನೆಟ್‍ ನಲ್ಲಿ ಸ್ಥಾನ ನೀಡಿ: ಸಿದ್ದರಾಮಯ್ಯ ಲಾಬಿ

    ಪುತ್ರನಿಗೆ ಕ್ಯಾಬಿನೆಟ್‍ ನಲ್ಲಿ ಸ್ಥಾನ ನೀಡಿ: ಸಿದ್ದರಾಮಯ್ಯ ಲಾಬಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದು, ಇದರ ಬೆನ್ನಲ್ಲೇ ಪುತ್ರನ ಪರ ಲಾಬಿ ಶುರುಮಾಡಿದ್ದಾರೆ.

    ಸಿದ್ದರಾಮಯ್ಯನವರು ಯತೀಂದ್ರ ಅವರಿಗೆ ಸಚಿವ ಸ್ಥಾನ ಕೊಡುವಂತೆ ಹೈಕಮಾಂಡ್ ನಲ್ಲಿ ಲಾಬಿ ಮಾಡುತ್ತಿದ್ದಾರೆ. ಮತ್ತೊಂದು ಕಡೆ ತನ್ನ ಬೆಂಬಲಿಗರ ಶಾಸಕರಿಂದಲೂ ಯತೀಂದ್ರ ಪರ ಲಾಬಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಸಿದ್ದರಾಮಯ್ಯ ಈಗಾಗಲೇ ಹಿಲ್ಟನ್ ರೆಸಾರ್ಟ್ ಗೆ ಭಾನುವಾರ ಭೇಟಿ ಕೊಟ್ಟಿದ್ದು, ಕಾಂಗ್ರೆಸ್ ಹೈಕಮಾಂಡ್ ನಲ್ಲೂ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಶಾಸಕ ಯತೀಂದ್ರ ವೈದ್ಯರಾಗಿರುವುದರಿಂದ ಆರೋಗ್ಯ ಖಾತೆಯನ್ನು ನೀಡುವಂತೆ ಸಿದ್ದರಾಮಯ್ಯ ಪಟ್ಟು ಹಿಡಿದ್ದಾರೆ ಎನ್ನಲಾಗಿದೆ.

    ಎಚ್‍ಡಿ ಕುಮಾರಸ್ವಾಮಿ ಬುಧವಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸೋದು ಪಕ್ಕಾ ಆಗಿದೆ. ಆದರೆ ಗುರುವಾರ ಸದನದಲ್ಲಿ ಬಹುಮತ ಸಾಬೀತುಪಡಿಸಿದ ಮಾರನೇ ದಿನ ಅಂದರೆ ಶುಕ್ರವಾರ ಸಂಪುಟ ರಚನೆಯಾಗುವ ಸಾಧ್ಯತೆಗಳು ಇವೆ.

    ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಗಳು ಎರಡೂ ಪಕ್ಷಗಳಲ್ಲಿ ಹೆಚ್ಚಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಯಾರಾದರೂ ಕೈಕೊಟ್ಟರೆ ಕಷ್ಟ ಎನ್ನುವ ಕಾರಣಕ್ಕಾಗಿ ಉಭಯ ಪಕ್ಷಗಳ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • Exclusive ಶಾಸಕರ ಪುತ್ರ ಆಯ್ತು, ಈಗ ಸಿಎಂ ಪುತ್ರನ ಸ್ನೇಹಿತರಿಂದ ಗೂಂಡಾಗಿರಿ! – ವಿಡಿಯೋ ನೋಡಿ

    Exclusive ಶಾಸಕರ ಪುತ್ರ ಆಯ್ತು, ಈಗ ಸಿಎಂ ಪುತ್ರನ ಸ್ನೇಹಿತರಿಂದ ಗೂಂಡಾಗಿರಿ! – ವಿಡಿಯೋ ನೋಡಿ

    ಬೆಂಗಳೂರು: ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಗೂಂಡಾಗಿರಿಯೂ ಹೆಚ್ಚಾಗ್ತಿದೆ. ಎರಡು, ಮೂರು ದಿನಗಳಿಂದ ಸಿಎಂ ಬೆಂಬಲಿಗರು, ಆಪ್ತರು, ಶಾಸಕರ ಮಕ್ಕಳ ಗೂಂಡಾಗಿರಿ ನೋಡಿದ್ದಾಯ್ತು. ಇದೀಗ ಸಿಎಂ ಪುತ್ರನ ಗೆಳೆಯರ ಸರದಿ. ಸಿಎಂ ಮಗ ಯತೀಂದ್ರ ಪಾಲುದಾರಿಕೆ ಹೊಂದಿದ್ದ ಶಾಂತ ಇಂಡಸ್ಟ್ರೀಸ್‍ನ ನಿರ್ದೇಶಕ ರಾಜೇಶ್ ಗೌಡ ಮತ್ತು ಕಾರ್ನರ್ ಬ್ರೋಕರ್ ಸೂರಿ ಗೂಂಡಾಗಿರಿ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಹೆಬ್ಬಾಳದ ಸಮೀಪ ಬಿಡಿಎ ಅಕ್ರಮವಾಗಿ ಮಂಜೂರು ಮಾಡಿದ್ದ ನಿವೇಶನದ ಪಕ್ಕದ ಜಮೀನಿನ ಬೇಲಿಯನ್ನು ಜೆಸಿಬಿ ಮೂಲಕ ತೆರವು ಮಾಡಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಮಾಲೀಕ ಎಚ್‍ಬಿ ಶಿವರಾಂಗೆ ಸಿಎಂ ಸಿದ್ದರಾಮಯ್ಯ ಹೆಸರನ್ನು ಹೇಳಿ ಧಮ್ಕಿ ಹಾಕಿದ್ದಾರೆ. ಜೆಸಿಬಿ ಮೂಲಕ ಡಿಕ್ಕಿ ಹೊಡೆಸಲು ಯತ್ನಿಸಿದ್ದಾರೆ. ಸುಮಾರು 50 ರೌಡಿಗಳನ್ನ ಛೂ ಬಿಟ್ಟು ಬೆದರಿಕೆ ಹಾಕಿದ್ದಾರೆ.

    ಅಷ್ಟೇ ಅಲ್ಲದೇ ಅಕ್ರಮವಾಗಿ ಶಿವರಾಂ ಜಮೀನಿನಲ್ಲಿ ಕಾಮಗಾರಿ ಪ್ರಾರಂಭಿಸಿದೆ ರಾಜೇಶ್ ಗೌಡ ಮತ್ತು ಬ್ರೋಕರ್ ಸೂರಿ ಗ್ಯಾಂಗ್. ನಿವೇಶನ ವಿವಾದ ಹಿನ್ನೆಲೆಯಲ್ಲಿ ಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಿ ಎಂದು ಹೇಳಿದ್ರೂ ಸಿಎಂ ಪುತ್ರನ ಸ್ನೇಹಿತ ದಬ್ಬಾಳಿಕೆ ನಡೆಸಿದ್ದಾರೆ. ಈ ಬಗ್ಗೆ ಹೆಚ್‍ಬಿ ಶಿವರಾಮ್ ಕುಟುಂಬಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ. ಈ ವಿಚಾರದ ಬಗ್ಗೆ ಬ್ರೋಕರ್ ಸೂರಿ ಅವರ ಪ್ರತಿಕ್ರಿಯೆ ಪಡೆಯುವ ವೇಳೆ ಪಬ್ಲಿಕ್ ಟಿವಿಯ ಮೇಲೆ ದಬ್ಬಾಳಿಕೆ ಮಾಡುವ ರೀತಿ ಮಾತನಾಡಿದ್ದಾರೆ.

    ಈ ಹಿಂದೆ ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ರಾಶಿ ರಾಶಿ ನೋಟಿನ ಕಂತೆಗಳನ್ನು ಇಟ್ಟು ಬ್ರೋಕರ್ ಸೂರಿ ಆಲಿಯಾಸ್ ಕಾರ್ನರ್ ಸೂರಿ ಸುದ್ದಿಗೆ ಗ್ರಾಸವಾಗಿದ್ದರು.  ಇದನ್ನೂ ಓದಿ: ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್

    ಏನಿದು ಭೂ ವಿವಾದ?
    ಸಿಎಂ ಒತ್ತಡಕ್ಕೆ ತಲೆವಬಾಗಿದ ಬಿಡಿಎ ಯತೀಂದ್ರ ಪಾಲುದಾರಿಕೆಯ ಶಾಂತಾ ಇಂಡಸ್ಟ್ರೀಸ್‍ಗೆ ಇಂಡಸ್ಟ್ರೀಸ್‍ಗೆ ಹೆಬ್ಬಾಳದ ಫ್ಲೈ ಓವರ್ ಬಳಿ 50 ಕೋಟಿ ರೂ. ಮೌಲ್ಯದ 2.19 ಎಕರೆ ಜಮೀನನ್ನು ನೀಡಿತ್ತು. ಇದೇ ಸರ್ವೆ ನಂ 110/2ರಲ್ಲಿ 19 ಗುಂಟೆ ಜಮೀನನ್ನು ಶಿವರಾಮ್ ಸಹೋದರರು ಹೊಂದಿದ್ದು ವಿವಾದ ದೊಡ್ಡದಾಗುತ್ತಲೇ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಸೂಚಿತ್ತು. ಕೋರ್ಟ್ ಸೂಚನೆ ಉಲ್ಲಂಘಿಸಿ ಜೆಸಿಬಿ ತಂದು ರಾಜೇಶ್ ಗೌಡ, ಬ್ರೋಕರ್ ಸೂರಿಯ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ ಎನ್ನುವುದು ಈಗ ಬಂದಿರುವ ಆರೋಪ.

    ಭೂ ವಿವಾದದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಬ್ರೋಕರ್ ಸೂರಿ, ದೌರ್ಜನ್ಯಕ್ಕೆ ಒಳಗಾದ ದಯಾನಂದ್ ಮಾತನಾಡಿದ್ದು ಆ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ.

     

    https://youtu.be/iBuK_oBxQdU

    https://youtu.be/PDV4D4j53aQ

  • ಚುನಾವಣೆಯಲ್ಲಿ ನಿಲ್ಲಬೇಕು ಅಂತ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲ: ಯತೀಂದ್ರ

    ಚುನಾವಣೆಯಲ್ಲಿ ನಿಲ್ಲಬೇಕು ಅಂತ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲ: ಯತೀಂದ್ರ

    ಮಂಡ್ಯ: ನಾನು ಚುನಾವಣೆಗೆ ನಿಲ್ಲಬೇಕು ಅಂತಾ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಬ್ಯೂಸಿ ಆಗಿರುವದರಿಂದ ಅವರ ಪರವಾಗಿ ವರುಣಾ ಕ್ಷೇತ್ರದ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಸಿಎಂ ಪುತ್ರ ಡಾ. ಯತೀಂದ್ರ ತಿಳಿಸಿದ್ದಾರೆ.

    ಚುನಾವಣೆಗೆ ಸ್ಪರ್ಧಿಸುವ ವಿಚಾರ ಇನ್ನೂ ತೀರ್ಮಾನವಾಗಿಲ್ಲ. ಪಕ್ಷದ ಹೈಕಮಾಂಡ್ ಟಿಕೆಟ್ ನೀಡುವ ಸಂದರ್ಭದಲ್ಲಿ ಚುನಾವಣೆಯ ಬಗ್ಗೆ ನಾನು ಖಚಿತ ನಿರ್ಧಾರವನ್ನು ತಿಳಿಸುತ್ತೇನೆ. ಚುನಾವಣೆಗೆ ನಿಲ್ಲುವಂತೆ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುವುದಲ್ಲಿ ತಪ್ಪೇನಿಲ್ಲ ಅಂತಾ ಅಂದ್ರು.

    ಇದನ್ನೂ ಓದಿ: ಸಿಎಂ ಪುತ್ರ ಯತೀಂದ್ರ ವಿರುದ್ಧ ಶಂಕರ್ ಬಿದರಿ ಸ್ಪರ್ಧೆ?

    ಒಂದು ವೇಳೆ ರಾಜಕೀಯಕ್ಕೆ ಬಂದರೂ ಅದು ಕುಟುಂಬ ರಾಜಕಾರಣವಾಗಲ್ಲ. ಪ್ರಜಾಪ್ರಭುತ್ವದ ಜನರು ಒಪ್ಪಿಕೊಂಡರೆ ಮಾತ್ರ ನಾನು ಜನ ನಾಯಕ ಆಗಬಲ್ಲೆ ಎಂದು ಸ್ಪಷ್ಟಪಡಿಸಿದರು. ಸಿಎಂ ಸಿದ್ದರಾಮಯ್ಯನವರು ತಮ್ಮ ಪುತ್ರ ಯತೀಂದ್ರರಿಗಾಗಿ ವರುಣಾ ಕ್ಷೇತ್ರವನ್ನು ತ್ಯಜಿಸಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ.

    ಇದನ್ನೂ ಓದಿ:  ಕ್ಷೇತ್ರ ಬದಲಾವಣೆಯ ಗುಟ್ಟು ಬಿಟ್ಟುಕೊಟ್ಟ ಸಿದ್ದರಾಮಯ್ಯ ಲೆಕ್ಕಾಚಾರ ಹೇಗಿದೆ?

  • ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಬಿಗ್ ರಿಲೀಫ್!

    ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಬಿಗ್ ರಿಲೀಫ್!

    ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಯೂನಿಟ್ ಆರಂಭಕ್ಕೆ ಟೆಂಡರ್ ಅನ್ನು ನಿಯಮ ಬಾಹೀರವಾಗಿ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವಿರುದ್ಧ ನೀಡಿದ್ದ ಪ್ರಕರಣಕ್ಕೆ ಕ್ಲೀನ್ ಚಿಟ್ ದೊರೆತಿದೆ.

    ಏನಿದು ಪ್ರಕರಣ?: 23.05.2016 ರಂದು ಸಿದ್ದರಾಮಯ್ಯ ನವರ ಪುತ್ರ ಯತೀಂದ್ರ ರವರು ನಡೆಸಿರುವ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ ಇಂಡಿಯಾ ಪ್ರೈವೇಟ್ ಲಿ ಸಂಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ತ ಸುರಕ್ಷಾ ಯೋಜನೆ ಅಡಿಯಲ್ಲಿ ಡಯಾಗ್ನೋಸ್ಟಿಕ್ ಸರ್ವೀಸಸ್ ಅನ್ನು ಪ್ರಾರಂಭಿಸಿಲು ಟೆಂಡರ್‍ನ್ನು ನಿಯಮಬಾಹಿರವಾಗಿ ನೀಡಿರುತ್ತಾರೆಂದು ಆಪಾದಿಸಿ, ಸಾಮಾಜಿಕ ಕಾರ್ಯಕರ್ತ ಎಸ್. ಭಾಸ್ಕರನ್ ಸಲ್ಲಿಸಿದ್ದ ದೂರನ್ನು ಎಸಿಬಿ ಗೆ ನೀಡಿದ್ದರು.

    ಅರ್ಜಿಯ ವಿಚಾರಣೆಯಲ್ಲಿ ಭಾಸ್ಕರನ್ ಮಾಡಿರುವ ಆಪಾದನೆಗಳು ಸಾಬೀತಾಗದ ಕಾರಣ ಅವರು ಸಲ್ಲಿಸಿದ ದೂರು ಅರ್ಜಿಯ ವಿಚಾರಣೆಯನ್ನು ಮುಕ್ತಾಯ ಗೊಳಿಸಲಾಗದೆ ಎಂದು ಎಸಿಬಿ ತಿಳಿಸಿದೆ.

    ಎಸಿಬಿ ಧೋರಣೆಗೆ ಭಾಸ್ಕರನ್ ಆಕ್ರೋಶ ವ್ಯಕ್ತಪಡಿಸಿದ್ದು, ಹೈಕೋರ್ಟ್ ನಲ್ಲಿ ಕಾನೂನು ಸಮರ ಆರಂಭಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಹೇಳಿಕೆಯನ್ನು ಪಡೆಯದೆ ಪ್ರಕರಣಕ್ಕೆ ಎಸಿಬಿ ತಿಲಾಂಜಲಿ ಇಟ್ಟಿದೆ ಎಂದು ಆರೋಪಿಸಿದ್ದಾರೆ.

     

  • ಪುತ್ರ ವ್ಯಾಮೋಹದ ನಡುವೆ ಅಗ್ನಿಪರೀಕ್ಷೆಗೆ ಸಿದ್ದು ರೆಡಿ…!

    ಪುತ್ರ ವ್ಯಾಮೋಹದ ನಡುವೆ ಅಗ್ನಿಪರೀಕ್ಷೆಗೆ ಸಿದ್ದು ರೆಡಿ…!

    – ಕ್ಷೇತ್ರ ಬದಲಾವಣೆಯ ಗುಟ್ಟು ಬಿಟ್ಟುಕೊಟ್ಟ ಸಿದ್ದರಾಮಯ್ಯ ಲೆಕ್ಕಾಚಾರ ಹೇಗಿದೆ?

    ಕೆ.ಪಿ.ನಾಗರಾಜ್
    ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಕ್ಯಾಲ್ಕುಲೇಟಿವ್ ರಿಸ್ಕ್ ತೆಗೆದು ಕೊಳ್ಳುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಬಿಟ್ಟು ತಮಗೆ ರಾಜಕೀಯ ಪುನರ್ ಜನ್ಮ ಕೊಟ್ಟಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರುಳುತ್ತಿದ್ದಾರೆ. ಅಂದ ಮಾತ್ರಕ್ಕೆ ವರುಣಾ ಕ್ಷೇತ್ರದಲ್ಲಿ ಸಿಎಂಗೆ ವಿರೋಧವಿದೆ, ಸಿಎಂಗೆ ವರುಣಾ ಸೇಫ್ ಅಲ್ಲ ಎಂದರ್ಥವಲ್ಲ. ಈ ಕ್ಷಣಕ್ಕೆ ಸಿಎಂಗೆ ವರುಣಾ ಕ್ಷೇತ್ರ ತುಂಬಾ ಸೇಫ್ ಇದೆ. ಆದರೂ, ಅವರು ಕ್ಷೇತ್ರ ಬಿಡುತ್ತಿರುವುದಕ್ಕೆ ಕಾರಣ ಪುತ್ರ ವ್ಯಾಮೋಹ. ತಮ್ಮ ಮಗ ಡಾ. ಯತೀಂದ್ರರನ್ನು ಶಾಸಕನಾಗಿ ನೋಡಬೇಕೆಂಬ ಆಸೆ ಅವರನ್ನು ಇವತ್ತು ಕ್ಷೇತ್ರ ಬಿಡುವ ರೀತಿ ಮಾಡುತ್ತಿದೆ. ಈ ಮೂಲಕ ಸಿಎಂ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಅಗ್ನಿಪರೀಕ್ಷೆಗೆ ರೆಡಿಯಾಗುತ್ತಿದ್ದಾರೆ.

    ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುವ ಇಂಗಿತವನ್ನು ಸಿಎಂ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಅವರಿಗೆ ಹೊಸದೇನೂ ಅಲ್ಲ. 1983 ರಿಂದ ಒಟ್ಟು 7 ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಅದರಲ್ಲಿ ಐದು ಬಾರಿ ಗೆದ್ದಿದ್ದರು. ಅದರಲ್ಲೂ 2006ರಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ನಡೆದ ಉಪಚುನಾವಣೆ ನಿಜಕ್ಕೂ ಒಂದು ಕದನ. ಅಂತಹ ಕದನದಲ್ಲಿ 257 ಮತಗಳಿಂದ ಕ್ಷೇತ್ರದ ಮತದಾರರು ಸಿದ್ದರಾಮಯ್ಯಗೆ ರಾಜಕೀಯ ಪುನರ್ ಜನ್ಮ ನೀಡಿದ್ದರು. ನಂತರ, ಕ್ಷೇತ್ರ ಪುನರ್ ವಿಂಗಡಣೆ ಆಗಿ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ವರುಣಾ ಪ್ರತ್ಯೇಕ ಕ್ಷೇತ್ರವಾಯಿತು. ಆಗ, ಸಿದ್ದರಾಮಯ್ಯ ತಮ್ಮ ಹುಟ್ಟೂರು ಸಿದ್ದರಾಮನ ಹುಂಡಿ ಸೇರುವ ವರುಣಾ ಕ್ಷೇತ್ರವನ್ನು ತುಂಬಾ ಲೆಕ್ಕಚಾರದ ಮೇಲೆಯೇ ಆಯ್ಕೆ ಮಾಡಿಕೊಂಡು ಚಾಮುಂಡೇಶ್ವರಿಯಿಂದ ಶಿಫ್ಟ್ ಆದರು. ಅವರ ಲೆಕ್ಕಾಚಾರ ಸರಿ ಇತ್ತು. ವರುಣಾ ಕ್ಷೇತ್ರ ಸೃಷ್ಟಿಯಾದ ಮೇಲೆ ನಡೆದ ಎರಡು ಚುನಾವಣೆಗಳಲ್ಲಿ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.

    ವರುಣಾ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಇದೆ. ಅದರ ಜೊತೆಗೆ, ದಲಿತರು, ಕುರುಬರು, ಹಿಂದುಳಿದ ವರ್ಗದವರು, ನಾಯಕರು, ಮುಸ್ಲಿಮರು, ಒಕ್ಕಲಿಗರ ಮತಗಳು ಇವೆ. ಇಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ದೊಡ್ಡ ಬೇಸ್ ಇಲ್ಲ. ಜೆಡಿಎಸ್ ಕಥೆ ಬಿಜೆಪಿಗಿಂತಾ ಕೆಟ್ಟದಾಗಿದೆ. ವಿರೋಧ ಪಕ್ಷಗಳ ಸಂಘಟನೆ ಇಲ್ಲದಿರುವುದು, ಸ್ಥಳೀಯ ಮಟ್ಟದ ಒಡಕುಗಳು ಸಿದ್ದರಾಮಯ್ಯಗೆ ವರುಣಾ ಕ್ಷೇತ್ರವನ್ನು ಮತ್ತಷ್ಟು ಗಟ್ಟಿ ಮಾಡಿಕೊಟ್ಟಿವೆ.

    ವರುಣಾ ಸೇಫ್!: ವರುಣಾ ಕ್ಷೇತ್ರದ ಜಾತಿ ಸಮೀಕರಣ ಮತ್ತು ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ಸ್ಥಿತಿ ಎಲ್ಲವನ್ನೂ ನೋಡಿದರೆ ಈ ಕ್ಷಣಕ್ಕೆ ಸಿದ್ದರಾಮಯ್ಯ ಪಾಲಿಗೆ ವರುಣಾ ಸೇಫ್ ಪ್ಲೇಸ್. ಹೀಗಾಗಿ, ಇಂತಹ ಕ್ಷೇತ್ರದಲ್ಲಿ ಮಗ ಯತೀಂದ್ರಗೆ ಟಿಕೆಟ್ ಕೊಡಿಸಿ ಚುನಾವಣೆಗೆ ನಿಲ್ಲಿಸಿದರೆ ಗೆಲ್ಲಿಸುವುದು ಸುಲಭ. ರಿಸ್ಕ್ ಇರೋ ಕ್ಷೇತ್ರದಲ್ಲಿ ಮಗನನ್ನು ಕಣಕ್ಕೆ ಇಳಿಸಿ ಚಾನ್ಸ್ ತೆಗೆದುಕೊಳ್ಳುವುದಕ್ಕಿಂತಾ ತನಗೆ ಸೇಫ್ ಆಗಿರೋ ಕ್ಷೇತ್ರವನ್ನು ಮಗನಿಗೆ ಬಿಟ್ಟು ತಾನೂ ಬೇರೆ ಕ್ಷೇತ್ರಕ್ಕೆ ಹೋಗುವುದೇ ಸರಿ ಅನ್ನುವುದು ಸಿಎಂ ಲೆಕ್ಕಚಾರ.

    ಈ ಎಲ್ಲಾ ಕಾರಣಕ್ಕೆ ಸಿಎಂ ಈಗ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರ ಸಿಎಂಗೆ ವರುಣಾದಷ್ಟು ಸೇಫ್ ಅಲ್ಲ. ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಇದ್ದ ಚಾಮುಂಡೇಶ್ವರಿ ಕ್ಷೇತ್ರವೇ ಬೇರೆ, ಕ್ಷೇತ್ರ ಪುನರ್ ವಿಂಗಡಣೆ ನಂತರದ ಚಾಮುಂಡೇಶ್ವರಿ ಕ್ಷೇತ್ರವೇ ಬೇರೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಕ್ಷೇತ್ರದ ಜಾತಿ ಲೆಕ್ಕಾಚಾರ ಬದಲಾಗಿವೆ. ಒಕ್ಕಲಿಗ ಮತಗಳ ಪ್ರಾಬಲ್ಯ ಕ್ಷೇತ್ರದಲ್ಲಿ ಹೆಚ್ಚಿದೆ. ಜೆಡಿಎಸ್ ಇಡೀ ಕ್ಷೇತ್ರದಲ್ಲಿ ಬಲವಾಗಿ ಬೇರೂರಿದೆ. ಇದಕ್ಕೆ ಸಾಕ್ಷಿ ಎಂಬಂತೆ, 2013ರ ನಂತರ ನಡೆದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಪಿಎಂಸಿ, ಹಾಲು ಒಕ್ಕೂಟ ಹೀಗೆ ಎಲ್ಲಾ ಸ್ಥರದ ಚುನಾವಣೆಯಲ್ಲೂ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೂರು ದಿನ ಈ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೂ ಕೂಡ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದೆಲ್ಲದರ ಆಧಾರದ ಮೇಲೆ ಈ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆಯ ರೀತಿ ಮಾರ್ಪಟ್ಟಿದೆ.

    ರಿಸ್ಕ್ ಯಾಕೆ ತಗೋತಿದ್ದಾರೆ ಸಿಎಂ?: ಈ ಕಾರಣದಿಂದಲೇ ಸಿಎಂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದು ಒಂದು ರೀತಿ ಅಗ್ನಿಪರೀಕ್ಷೆ ರೀತಿ ಕಾಣುತ್ತಿದೆ. ವಾಸ್ತವ ಹೀಗಿದ್ದರೂ ಸಿಎಂ ಯಾಕೆ ಇಂತಹ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಅನ್ನುವುದಕ್ಕೂ ಕಾರಣವಿದೆ. ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರದಲ್ಲಿ ಇದ್ದರೂ ಸಹಿತ ಹಿಂದುಳಿದ ವರ್ಗಗಳ ಮತಗಳು ಕೂಡಾ ಹೆಚ್ಚಿವೆ. ಅದನ್ನೆಲ್ಲಾ ತಮ್ಮ ಹೆಸರಿನಲ್ಲಿ ಒಗ್ಗೂಡಿಸಬಹುದು. ಸಿಎಂ ಆಗಿ ತಮ್ಮ ಸಾಧನೆ ದೊಡ್ಡದಿದೆ ಆ ವರ್ಚಸ್ಸು ಕೆಲಸ ಮಾಡುತ್ತೆ. ಅಲ್ಲದೆ, ಮುಂದೆಯೂ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬ ಮಾತನ್ನೇ ಮತ್ತಷ್ಟು ಗಟ್ಟಿ ಮಾಡಿದರೆ ಜನ ತಮ್ಮನ್ನು ಕೈ ಬಿಡುವುದು ಸಾಧ್ಯವೇ ಇಲ್ಲ ಅನ್ನೋದು ಸಿದ್ದರಾಮಯ್ಯ ಅವರ ಪೊಲಿಟಿಕಲ್ ಲೆಕ್ಕಾಚಾರ.

    ಒಂದಂಥೂ ಸತ್ಯ. ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ತಾನೂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತಿರುವುದು ರಿಸ್ಕ್ ಅಂತಾ. ಆದರೆ, ಮಗನ ರಾಜಕೀಯ ಭವಿಷ್ಯ ಭದ್ರ ಮಾಡಲು ತಂದೆಯಾಗಿ ಇಂತಹ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಅವರು ಹಿಂದೆ ಮುಂದೆ ನೋಡುತ್ತಿಲ್ಲ ಅಷ್ಟೆ. ಅಕ್ಷರಶಃ ಕದನದಂತಾ ಚಾಮುಂಡೇಶ್ವರಿ ಉಪ ಚುನಾವಣೆ ಸಿದ್ದರಾಮಯ್ಯ ರಾಜಕೀಯ ಜೀವನದ ದೊಡ್ಡ ಭಾಗ. ಈಗ, ಸಿಎಂ ಆದ ನಂತರ ಅದೇ ಕ್ಷೇತ್ರದಲ್ಲಿ ಸವಾಲಿಗೆ ಎದೆಯೊಡ್ಡೋದಕ್ಕೆ ರೆಡಿಯಾಗಿದ್ದಾರೆ. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರ ಮುಂದಿನ ವಿಧಾನಸಭಾ ಚುನಾವಣೆಯ ನಂಬರ್ ಒನ್ ಸ್ಟಾರ್ ಕ್ಷೇತ್ರವಾಗುವುದು ನಿಶ್ಚಿತ.