Tag: Yashaswini Gowda

  • ರೌಡಿಶೀಟರ್ ಯಶಸ್ವಿನಿ ಗೌಡ ಜೊತೆ ವೇದಿಕೆ ಹಂಚಿಕೊಂಡ ಈಶ್ವರಪ್ಪ

    ರೌಡಿಶೀಟರ್ ಯಶಸ್ವಿನಿ ಗೌಡ ಜೊತೆ ವೇದಿಕೆ ಹಂಚಿಕೊಂಡ ಈಶ್ವರಪ್ಪ

    ಬೆಂಗಳೂರು: ಸಿಲಿಕಾನ್ ಸಿಟಿಯ ಕುಖ್ಯಾತ ರೌಡಿಶೀಟರ್ ಯಶಸ್ವಿನಿ ಗೌಡ ಜೊತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಖಾತೆಯ ಸಚಿವ ಕೆ.ಎಸ್. ಈಶ್ವರಪ್ಪ ವೇದಿಕೆ ಹಂಚಿಕೊಂಡಿದ್ದಾರೆ.

    ಬೆಂಗಳೂರಿನ ಟೌನ್ ಹಾಲ್‍ನಲ್ಲಿ ಶ್ರೀರಾಮ ಸೇನಾ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯಪುರದ ರೌಡಿಶೀಟರ್ ಆಗಿರುವ ಯಶಸ್ವಿಗೌಡ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈಶ್ವರಪ್ಪ ಹಿಂದೆ ಯಶಸ್ವಿನಿ ಗೌಡ ನಿಂತಿದ್ದರು. ನಂತರ ಆಕೆಯನ್ನು ಈಶ್ವರಪ್ಪ ಮುಂದೆ ಕರೆದು ಅವರಿಂದ ದೀಪ ಬೆಳಗಿಸಿದ್ದಾರೆ. ಹೀಗಾಗಿ ಈಕೆಯ ಬಗ್ಗೆ ಈಶ್ವರಪ್ಪಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:   ಹಣ ಕೊಟ್ಟು ಡಾಕ್ಟರೇಟ್ ಪಡೆದ ರೌಡಿಶೀಟರ್ ಯಶಸ್ವಿನಿ ಗೌಡ?

    ಈ ಹಿಂದೆಯೇ ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಯಶಸ್ವಿನಿ ಗೌಡಳನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಆಕೆಗೂ ಹಾರ, ಶಾಲು ಹಾಕಿ ಸ್ವಾಗತ ಕೋರಲಾಗಿದೆ. ವೇದಿಕೆಯಲ್ಲಿ ಸಚಿವ ಈಶ್ವರಪ್ಪ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ:  ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ಈಶ್ವರಪ್ಪ ಪ್ರತಿಕ್ರಿಯೆ: ದೇಶಭಕ್ತರು ಎಂದು ಬಂದಿದ್ದೆ, ಆದರೆ ರೌಡಿಶೀಟರ್, ಪೌಡಿಶೀಟರ್ ಗೊತ್ತಿಲ್ಲ. ನಿಮ್ಮಲ್ಲೇ ರೌಡಿಶೀಟರ್ ಇದ್ದರೆ ಯಾರಿಗೆ ಗೊತ್ತು. ನನಗೆ ರೌಡಿಶೀಟರ್ ಬಗ್ಗೆ ಮಾಹಿತಿ ಇರಲಿಲ್ಲ. ಸೌಜನ್ಯವಾಗಿ ಕರೆದಿದ್ದರು, ಹೀಗಾಗಿ ಬಂದು ಹೋಗುತ್ತೀದ್ದೇನೆ ಎಂದು ರೌಡಿಶೀಟರ್ ಜೊತೆಗೆ ವೇದಿಕೆ ಹಚ್ಚಿಕೊಂಡ ಬಗ್ಗೆ ಸ್ಪಷ್ಟನೆ ಕೊಡುವಾಗ ಈಶ್ವರಪ್ಪ ಗರಂ ಆದರು.

    ಯಶಸ್ವಿನಿ ಗೌಡ ಸ್ವತಃ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈಕೆಯ ಎರಡನೇ ಪತಿ ದಡಿಯಾ ಮಹೇಶ್ ಕೂಡ ರೌಡಿಶೀಟರ್ ಆಗಿದ್ದನು. ಯಶಸ್ವಿಗೌಡ ಮೀಟರ್ ಬಡ್ಡಿ ದಂಧೆಯನ್ನು ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು. ರಾಬರಿ, ಧಮ್ಕಿ ಕೊಲೆಯತ್ನ ಸೇರಿ ಹಲವು ಪ್ರಕರಣಗಳು ಈಕೆಯ ಮೇಲಿವೆ.

  • ನಾನೇನು ತಪ್ಪು ಮಾಡಿಲ್ಲ: ರೌಡಿಶೀಟರ್ ಯಶಸ್ವಿನಿ ಗೌಡ

    ನಾನೇನು ತಪ್ಪು ಮಾಡಿಲ್ಲ: ರೌಡಿಶೀಟರ್ ಯಶಸ್ವಿನಿ ಗೌಡ

    ಬೆಂಗಳೂರು: ನಾನು, ನನ್ನ ಗಂಡನ ಜೊತೆ ಕೌಟುಂಬಿಕವಾಗಿ ತುಂಬಾ ಚೆನ್ನಾಗಿದ್ದು ಯಾವುದೇ ಸಮಸ್ಯೆ ಇಲ್ಲ. ಆದರೆ ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ರೌಡಿಶೀಟರ್ ಯಶಸ್ವಿನಿ ತಿಳಿಸಿದ್ದಾರೆ.

    ತನ್ನ ಮೇಲಿನ ಆರೋಪ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯಶಸ್ವಿನಿ ಗೌಡ, ನನ್ನ ಗಂಡನ ಮೇಲೆ ರೌಡಿ ಶೀಟರ್ ಹಾಕಲಾಗಿದ್ದು, ಈ ಕುರಿತು ವಿಚಾರಣೆ ನಡೆಸಲು ನನ್ನ ಪತಿಯನ್ನು ಪೊಲೀಸರು ಕರೆಸಿದ್ದಾರೆ ಅಷ್ಟೇ. 2009ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದೇನೆ. ಆದರೆ ನನ್ನ ಪತಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತು ನಾನು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದೇನೆ. ಆದರೆ ನನ್ನ ಪತಿ ಮಹೇಶ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಬೇಡ ಎಂದು ಹೇಳಿದ್ದರು. ಪೊಲೀಸ್ ವಿಚಾರಣೆ ವೇಳೆ ಈ ವಿಚಾರದ ಕುರಿತು ಸಂಭಾಷಣೆ ನಡೆದಿದೆ. ಆದರೆ ಇದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದು ತಿಳಿಸಿದರು.

    ನನ್ನ ವಿರುದ್ಧ ಇಲ್ಲದ ಆರೋಪ ಮಾಡಿ ರೌಡಿ ಶೀಟರ್ ತೆರೆದಿದ್ದಾರೆ. ಆದರೆ ಈ ಕುರಿತು ಎಲ್ಲಾ ಸಾಕ್ಷ್ಯಾಧಾರಗಳನ್ನು ಕೋರ್ಟ್ ಗೆ ಸಲ್ಲಿಸಲು ನಾನು ಅರ್ಜಿ ಸಲ್ಲಿದ್ದೇನೆ. ಪೊಲೀಸ್ ವಿಚಾರಣೆಯಲ್ಲಿ ನಡೆದ ಸಂಭಾಷಣೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ. ನನ್ನ ಪತಿ ಮೇಲೆ ಕಳೆದ 4 ವರ್ಷಗಳಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಅವರು ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದಾರೆ. ನಾನು ವಿದ್ಯಾವಂತೆಯಾಗಿದ್ದು, ಇಂತಹ ಕೃತ್ಯಗಳಲ್ಲಿ ಭಾಗವಹಿಸುವುದಿಲ್ಲ. ಅಲ್ಲದೇ ನನ್ನನ್ನು ಪೊಲೀಸರು ಕರೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ಬೆಂಗಳೂರು: ನನ್ನ ಹೆಂಡತಿ ನನ್ನ ಮಾತೇ ಕೇಳುವುದಿಲ್ಲ ಸಾರ್, ನೀವೇ ನನ್ನ ಹೆಂಡತಿಯನ್ನ ಕಂಟ್ರೋಲ್ ಮಾಡಬೇಕು ಸಾರ್ ಎಂದು ಕೈಮುಗಿದುಕೊಂಡು ರೌಡಿಶೀಟರ್ ಯಶಸ್ವಿನಿಯ ಎರಡನೇ ಪತಿ ದಡಿಯಾ ಮಹೇಶ್ ಪೊಲೀಸರ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

    ಇಂದು ಸಿಸಿಬಿ ಪೊಲೀಸರು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಆಗ ಸಿಸಿಬಿ ಪೊಲೀಸರು ದಡಿಯಾ ಮಹೇಶ್‍ಗೆ ನಿನ್ನ ಹೆಂಡತಿಯೂ ರೌಡಿಶೀಟರ್, ಆಕೆಯನ್ನು ಕಂಟ್ರೋಲ್‍ನಲ್ಲಿ ಇಡು ಅಂತ ಹೇಳಿದ್ದಾರೆ. ಆಗ ನಾನು ಎಲ್ಲಾ ತರದಲ್ಲೂ ಬುದ್ಧಿ ಹೇಳಿದ್ದೇನೆ. ಆದರೆ ಅವಳು ನನ್ನ ಮಾತೇ ಕೇಳುವುದಿಲ್ಲ ಸರ್. ನಿಮ್ಮಂಥವರೇ ಅವಳಿಗೆ ಬುದ್ಧಿ ಕಲಿಸಿದರೆ ಕಲಿತಾಳೆ ಸಾರ್ ಅಂತ ಸಿಸಿಬಿ ಡಿಸಿಪಿ ಗಿರೀಶ್ ಮುಂದೆ ದಡಿಯಾ ಮಹೇಶ್ ಮನವಿ ಮಾಡಿಕೊಂಡಿದ್ದಾನೆ.

    ರೌಡಿಶೀಟರ್ ಮಹೇಶ್ ಮನೆಯಲ್ಲಿ ಆಕೆಯ ಹೆಂಡತಿಯ ಫೋಟೋ ಮತ್ತು ಪಿಸ್ತೂಲ್ ಸಿಕ್ಕಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಈ ಬಗ್ಗೆ ಪ್ರತಿಕ್ರಿಸಿದ ಡಿಸಿಪಿ ಗಿರೀಶ್ ಅವರು, ನಿನ್ನ ಹೆಂಡತಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ. ನಿಮ್ಮ ಮನೆಯಲ್ಲಿ ಸಿಕ್ಕ ಪಿಸ್ತೂಲ್ ಬಗ್ಗೆ ತನಿಖೆ ಮಾಡುತ್ತೇವೆ. ನಿನ್ನ ಮತ್ತು ನಿನ್ನ ಜೊತೆ ನಿನ್ನ ಹೆಂಡತಿಯನ್ನ ಕೂಡಲೇ ಸರಿ ಮಾಡುತ್ತೇವೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

    ಇತ್ತೀಚೆಗಷ್ಟೇ ಶಿಸ್ತು ಸಂಸ್ಕೃತಿ ಎನ್ನುವ ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ರೌಡಿ ಶೀಟರ್ ಯಶಸ್ವಿನಿ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿಯೇ ಹಾರ ಹಾಕಿಸಿಕೊಳ್ಳುವ ಮೂಲಕ ಯಶಸ್ವಿನಿ ಗೌಡಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುತಾಲಿಕ್ ಹಾಗೂ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಯಶಸ್ವಿನಿ ಗೌಡ ಅವರಿಗೆ ಅಧಿಕಾರ ನೀಡಲಾಗಿದೆ.

    ಯಶಸ್ವಿನಿ ಗೌಡ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದಾಳೆ. ಅಲ್ಲದೇ ನಗರದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಳು ಎಂಬ ಮಾಹಿತಿ ಕೂಡ ಲಭಿಸಿದೆ. ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ರೌಡಿಶೀಟರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv