Tag: Yashasvi Jaiswal

  • ದಿಲ್ಲಿಯಲ್ಲಿ ದರ್ಬಾರ್‌, ದಿಲ್‌ ಗೆದ್ದ ಗಿಲ್‌ – ಭಾರತದ ಹಿಡಿತದಲ್ಲಿ ಪಂದ್ಯ, ವಿಂಡೀಸ್‌ 140ಕ್ಕೆ 4 ವಿಕೆಟ್‌

    ದಿಲ್ಲಿಯಲ್ಲಿ ದರ್ಬಾರ್‌, ದಿಲ್‌ ಗೆದ್ದ ಗಿಲ್‌ – ಭಾರತದ ಹಿಡಿತದಲ್ಲಿ ಪಂದ್ಯ, ವಿಂಡೀಸ್‌ 140ಕ್ಕೆ 4 ವಿಕೆಟ್‌

    • 518ಕ್ಕೆ ಭಾರತ ಡಿಕ್ಲೇರ್‌

    ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದ 2ನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ 173 ರನ್ ಗಳಿಸಿ ಕ್ರೀಸ್‌ಗೆ ಬಂದಾಗ, ನೆರೆದಿದ್ದ ಜನರೆಲ್ಲಾ ಅವರು ದ್ವಿಶತಕ ಗಳಿಸುವುದನ್ನ ನೋಡಲು ಕಾತರರಾಗಿದ್ದರು. ಆದ್ರೆ ಸಣ್ಣ ಎಡವಟ್ಟಿನಿಂದ ದ್ವಿಶತಕ ಗಳಿಸುವ ಅವಕಾಶದಿಂದ ವಂಚಿತರಾದರು. ಜೈಸ್ವಾಲ್‌ ಪೆವಿಲಿಯನ್‌ ಸೇರಿದ ಬಳಿಕ ನಾಯಕ ಗಿಲ್‌ ಶತಕದ ನೆರವಿನಿಂದ ಭಾರತ, ವೆಸ್ಟ್‌ ಇಂಡೀಸ್‌ ವಿರುದ್ಧ 518 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಡಿಕ್ಲೇರ್‌ ಮಾಡಿಕೊಂಡಿತು.

    ಬಳಿಕ ತನ್ನ ಮೊದಲ ಇನ್ನಿಂಗ್ಸ್‌ ಶುರು ಮಾಡಿರುವ ವಿಂಡೀಸ್‌ ತಂಡ 2ನೇ ದಿನದ ಅಂತ್ಯಕ್ಕೆ 43 ಓವರ್‌ಗಳಲ್ಲಿ 140 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದೆ. ಟೆವಿನ್ ಇಮ್ಲಾಚ್ 14 ರನ್‌, ಶಾಯಿ ಹೋಪ್‌ 31 ರನ್‌ ಗಳಿಸಿ ಕ್ರೀಸ್‌ನಲ್ಲಿಂದು ಭಾನುವಾರ 3ನೇ ದಿನದ ಆಟ ಆರಂಭಿಸಲಿದ್ದಾರೆ. ಇದನ್ನೂ ಓದಿ: IPL Auction 2026 | ಡಿಸೆಂಬರ್‌ನಲ್ಲಿ ಮಿನಿ ಹರಾಜು – ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌!

    ದ್ವಿಶತಕ ಸನಿಹದಲ್ಲಿ ರನೌಟ್‌
    ಜೇಡನ್ ಸೀಲ್ಸ್ ಅವರ ಬೌಲಿಂಗ್‌ನಲ್ಲಿ ಮಿಡ್-ಆಫ್ ಕಡೆಗೆ ಚೆಂಡನ್ನು ತಳ್ಳಿ ಯಶಸ್ವಿ ಒಂದು ರನ್‌ಗಾಗಿ ಓಡಿದರು. ಆದರೆ, ಅರ್ಧ ದೂರ ಕ್ರಮಿಸುವ ವೇಳೆಗೆ ಇನ್ನೊಂದು ತುದಿಯಲ್ಲಿದ್ದ ನಾಯಕ ಶುಭಮನ್ ಗಿಲ್ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ತಕ್ಷಣ ಎಚ್ಚೆತ್ತ ಟ್ಯಾಗನರೈನ್ ಚಂದ್ರಪಾಲ್ ತ್ವರಿತವಾಗಿ ಚೆಂಡನ್ನು ಹಿಡಿದು ವಿಕೆಟ್ ಕೀಪರ್ ಟೆವಿನ್ ಇಮ್ಲಾಕ್ ಎಸೆದರು. ಇಮ್ಲಾಕ್ ಸ್ಟಂಪ್ಸ್‌ಗಳನ್ನು ಉರುಳಿಸಿ ರನ್ ಔಟ್ ಮಾಡಿದರು. ನಾಯಕ ಶುಭಮನ್ ಗಿಲ್ ಅವರೊಂದಿಗಿನ ಗೊಂದಲಮಯ ಓಟದಿಂದಾಗಿ ಯಶಸ್ವಿ ಕೇವಲ 175 ರನ್‌ಗಳಿಗೆ ತಮ್ಮ ಆಟವನ್ನು ಮುಗಿಸಬೇಕಾಯಿತು. ದ್ವಿಶತಕದಿಂದ ವಂಚಿತರಾಗಿದ್ದಕ್ಕೆ ತೀವ್ರ ನಿರಾಶೆಗೊಂಡ ಯಶಸ್ವಿ ಜೈಸ್ವಾ, ತಮ್ಮ ಹಣೆಗೆ ಬಡಿದುಕೊಂಡು ಮೈದಾನದಿಂದ ಹೊರನಡೆದರು. ಇದನ್ನೂ ಓದಿ: ಮತ್ತೊಮ್ಮೆ ದ್ವಿಶತಕ ಸಿಡಿಸುವ ತವಕದಲ್ಲಿ ಜೈಸ್ವಾಲ್‌ -ಬೃಹತ್‌ ಮೊತ್ತದತ್ತ ಭಾರತ

    10ನೇ ಟೆಸ್ಟ್‌ ಶತಕ, ಒಂದೇ ವರ್ಷದಲ್ಲಿ 5 ಶತಕ
    ಇನ್ನೂ ಭಾರತ ಟೆಸ್ಟ್ ತಂಡದ ನಾಯಕ ಶುಭಮನ್‌ ಗಿಲ್, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ತಮ್ಮ 10ನೇ ಟೆಸ್ಟ್ ಶತಕವನ್ನು ಭಾರಿಸಿ ರೆಕಾರ್ಡ್ ಮುರಿದಿದ್ದಾರೆ. 26 ವರ್ಷದ ಗಿಲ್, ನಾಯಕನಾಗಿ ತಮ್ಮ ಐದನೇ ಶತಕ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್‌ನಲ್ಲಿ ಚಿನ್ನದ ಓಟವನ್ನು ಮುಂದುವರೆಸಿದರು. ಶನಿವಾರ ಮಧ್ಯಾಹ್ನದ ಊಟದ ವಿರಾಮದ ನಂತರ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿದ್ದು, ನಾಯಕನಾಗಿ ಐದನೇ ಟೆಸ್ಟ್ ಶತಕದೊಂದಿಗೆ, ಗಿಲ್ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ, ಭಾರತದ ಟೆಸ್ಟ್ ತಂಡದ ನಾಯಕರಾಗಿ ಅತಿ ಹೆಚ್ಚು ಶತಕಗಳ ವಿಷಯದಲ್ಲಿ ಎಂ.ಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಇದನ್ನೂ ಓದಿ: ಮಹಿಳಾ ವಿಶ್ವಕಪ್‌ | ಭಾರತದ ವನಿತೆಯರ ಪರಾಕ್ರಮ – ಪಾಕ್‌ ವಿರುದ್ಧ 88 ರನ್‌ಗಳ ಭರ್ಜರಿ ಜಯ

    ಇಂಗ್ಲೆಂಡ್‌ನಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ತಮ್ಮ ಮೊದಲ ಸರಣಿಯಲ್ಲಿಯೇ ನಾಲ್ಕು ಶತಕಗಳನ್ನು ಗಳಿಸಿದ್ದರು. ವಿರಾಟ್ ಕೊಹ್ಲಿ 20 ಶತಕಗಳೊಂದಿಗೆ ಭಾರತದ ಟೆಸ್ಟ್ ನಾಯಕರಾಗಿ ಅಗ್ರಸ್ಥಾನದಲ್ಲಿದ್ದಾರೆ, ನಂತರ ಸುನಿಲ್ ಗವಾಸ್ಕರ್ 11 ಮತ್ತು ಮೊಹಮ್ಮದ್ ಅಜರುದ್ದೀನ್ 9 ಶತಕಗಳ ಪಟ್ಟಿಯಲ್ಲಿ ಇದ್ದಾರೆ.

  • ಮತ್ತೊಮ್ಮೆ ದ್ವಿಶತಕ ಸಿಡಿಸುವ ತವಕದಲ್ಲಿ ಜೈಸ್ವಾಲ್‌ -ಬೃಹತ್‌ ಮೊತ್ತದತ್ತ ಭಾರತ

    ಮತ್ತೊಮ್ಮೆ ದ್ವಿಶತಕ ಸಿಡಿಸುವ ತವಕದಲ್ಲಿ ಜೈಸ್ವಾಲ್‌ -ಬೃಹತ್‌ ಮೊತ್ತದತ್ತ ಭಾರತ

    – ಶತಕ ಬಾರಿಸಿ ಸಚಿನ್‌ ಬಳಿಕ ವಿಶೇಷ ಸಾಧನೆ ಮಾಡಿದ ಯಶಸ್ವಿ

    ನವದೆಹಲಿ: ವಿಂಡೀಸ್‌ (West Indies) ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ 2ನೇ ಪಂದ್ಯದಲ್ಲಿ ಭಾರತ (Team India) ಮೊದಲ ದಿನವೇ 300 ರನ್‌ಗಳ ಗಡಿ ದಾಟಿದೆ. ಮೊದಲ ದಿನದ ಅಂತ್ಯಕ್ಕೆ ಕೇವಲ 2 ವಿಕೆಟ್‌ಗೆ 90 ಓವರ್‌ಗಳಲ್ಲಿ 318 ರನ್‌ ಸಿಡಿಸಿದ್ದು, ಬೃಹತ್‌ ಮೊತ್ತ ಪೇರಿಸುವ ವಿಶ್ವಾಸದಲ್ಲಿದೆ.

    ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲ ದಿನ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ (Yashasvi Jaiswal) ವಿಕೆಟ್‌ ಬಿಟ್ಟುಕೊಡದೇ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. 173 ರನ್‌ ಗಳಿಸಿ ಕ್ರೀಸ್‌ನಲ್ಲಿರುವ ಯಶಸ್ವಿ ಮತ್ತೊಮ್ಮೆ ದ್ವಿಶತಕ ಸಿಡಿಸುವ ವಿಶ್ವಾಸದಲ್ಲಿದ್ದಾರೆ.

    ಭಾರತ ಪರ ಕೆ.ಎಲ್ ರಾಹುಲ್ (KL Rahul) ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ವಿಕೆಟ್​ಗೆ ಈ ಜೋಡಿ 58 ರನ್​ಗಳ ಜೊತೆಯಾಟ ಆಡಿತು. ರಾಹುಲ್ 54 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು. ಊಟದ ವಿರಾಮದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 145 ಎಸೆತಗಳಲ್ಲಿ 16 ಫೋರ್​ನೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 7ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದರು. ಅತ್ತ ಸಾಯಿ ಸುದರ್ಶನ್ ಕೂಡ ಅರ್ಧಶತಕ ಸಿಡಿಸಿ ಮಿಂಚಿದರು.

    ಸುದರ್ಶನ್‌ ಕೈತಪ್ಪಿದ ಶತಕ
    ಇನ್ನೂ ಅರ್ಧಶತಕ ಗಳಿಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ಸುದರ್ಶನ್‌ ಶತಕ ವಂಚಿತರಾದರು. 165 ಎಸೆತಗಳಲ್ಲಿ 12 ಬೌಂಡರಿ ಸಹಿತ 87 ರನ್‌ ಗಳಿಸಿ ಔಟಾದರು. ನಂತರ ಕ್ರೀಸ್‌ಗೆ ಬಂದ ಶುಭಮನ್‌ ಗಿಲ್‌ 68 ಎಸೆತಗಳಲ್ಲಿ 20 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ದಿನದ ಕೊನೆಯವರೆಗೂ ವಿಕೆಟ್‌ ಬಿಟ್ಟು ಕೊಡದ ಜೈಸ್ವಾಲ್‌ 253 ಎಸೆತಗಳಲ್ಲಿ 22 ಬೌಂಡರಿ ಸಹಿತ 173 ರನ್‌ ಬಾರಿಸಿದ್ದಾರೆ. ಶನಿವಾರ 2ನೇ ದಿನದ ಆಟ ಮುಂದುವರಿಸಲಿದ್ದಾರೆ.

    ವಿಶೇಷ ದಾಖಲೆ ಬರೆದ ಜೈಸ್ವಾಲ್‌
    ಇನ್ನೂ ಈ ಪಂದ್ಯದ ಮಧ್ಯೆ ಜೈಸ್ವಾಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದರು. ಅವರು 3,000 ರನ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು. ಈ ಪಂದ್ಯಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ 25 ಟೆಸ್ಟ್ ಪಂದ್ಯಗಳ 47 ಇನ್ನಿಂಗ್ಸ್‌ಗಳಲ್ಲಿ 2,245 ರನ್ ಗಳಿಸಿದ್ದರು. ಇದರಲ್ಲಿ 6 ಶತಕಗಳು ಮತ್ತು 12 ಅರ್ಧಶತಕಗಳು ಸೇರಿವೆ. ಜೈಸ್ವಾಲ್ ಅವರ ಟೆಸ್ಟ್ ಸರಾಸರಿ ಸುಮಾರು 49.88 ಆಗಿದ್ದು, ಇದನ್ನು ಅತ್ಯುತ್ತಮ ಪರಿಗಣಿಸಬಹುದು.

    ಜೈಸ್ವಾಲ್ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕವೇ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಆಗಲೂ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದರು. ಅಲ್ಲದೇ 23ನೇ ವರ್ಷ ವಯಸ್ಸಿನವರಲ್ಲಿ ಸಚಿನ್‌ ತೆಂಡೂಲ್ಕರ್‌ ಬಳಿಕ ಅಧಿಕ ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸಚಿನ್‌ 23 ವರ್ಷದ ಹೊತ್ತಿಗೆ 11 ಶತಕ ಗಳಿಸಿದ್ದರೆ, ಯಶಸ್ವಿ 7 ಶತಕ ಗಳಿಸಿದ್ದಾರೆ. ಇನ್ನುಳಿದಂತೆ ರವಿ ಶಾಸ್ತ್ರಿ ಹಾಗೂ ದಿಲೀಪ್ ವೆಂಗ್‌ಸರ್ಕಾರ್ ತಲಾ 5 ಶತಕ ಗಳಿಸಿದ್ದು, ಕ್ರಮವಾಗಿ ಮೂರು ಮತ್ತು 4ನೇ ಸ್ಥಾನದಲ್ಲಿದ್ದಾರೆ.

  • IND vs ENG Test: ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

    IND vs ENG Test: ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

    – ಜೈಸ್ವಾಲ್‌ ಅಮೋಘ ಶತಕ; ಆಕಾಶ್‌, ಜಡೇಜಾ, ವಾಷಿಂಗ್ಟನ್‌ ಫಿಫ್ಟಿ ಆಟ

    ಲಂಡನ್‌: ದಿ ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನ 3ನೇ ದಿನದಾಟದಂದು ಯಶಸ್ವಿ ಜೈಸ್ವಾಲ್ ಅಮೋಘ ಶತಕ, ಆಕಾಶ್‌, ಜಡೇಜಾ, ವಾಷಿಂಗ್ಟನ್‌ ಆಕರ್ಷಕ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾವು ಇಂಗ್ಲೆಂಡ್‌ ಗೆಲುವಿಗೆ ದೊಡ್ಡ ಮೊತ್ತದ ಸವಾಲನ್ನು ಒಡ್ಡಿದೆ.

    ಭಾರತವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 396 ರನ್ ಗಳಿಸಿದ್ದು, ಇಂಗ್ಲೆಂಡ್‌ಗೆ 374 ರನ್‌ಗಳ ಗುರಿಯನ್ನು ನೀಡಿದೆ. ಹೆಡಿಂಗ್ಲಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ ನಂತರ, ಜೈಸ್ವಾಲ್‌ ಇಂಗ್ಲೆಂಡ್‌ ವಿರುದ್ಧ ಮತ್ತೊಂದು ಶತಕ ಗಳಿಸಿದ್ದಾರೆ. 118 ರನ್ ಗಳಿಸಿದ ಜೈಸ್ವಾಲ್, ಸರಣಿಯಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದ್ದಾರೆ.

    ಜೈಸ್ವಾಲ್‌ಗೆ ಸಾಥ್‌ ನೀಡಿದ ಆಕಾಶ್‌ ದೀಪ್‌ ಅರ್ಧಶತಕ ಗಳಿಸಿ ಗಮನ ಸೆಳೆದರು. ಈ ಜೋಡಿ 3ನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟದ ಕೊಡುಗೆ ನೀಡಿತು. ಭಾರತಕ್ಕೆ ಉತ್ತಮ ರನ್‌ಗಳ ಅಡಿಪಾಯ ಹಾಕಿಕೊಡುವಲ್ಲಿ ಇಬ್ಬರು ಪ್ರಮುಖ ಪಾತ್ರ ವಹಿಸಿದರು.

    2ನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ (56) ಮತ್ತು ವಾಷಿಂಗ್ಟನ್ ಸುಂದರ್ (53) ಅರ್ಧಶತಕ ಗಳಿಸಿ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡುವಲ್ಲಿ ನೆರವಾದರು. ಜಡೇಜಾ ತಾಳ್ಮೆಯ ಆಟವಾಡಿದರೆ, ಸುಂದರ್ ಆಕ್ರಮಣಕಾರಿಯಾಗಿ ಆಡಿದರು.

    2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 396 ರನ್‌ ಗಳಿಸಿ ಆಲೌಟ್‌ ಆಯಿತು. ಇಂಗ್ಲೆಂಡ್‌ ಪರ ಜೋಶ್ ಟಂಗ್ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿ 5 ವಿಕೆಟ್‌ ಪಡೆದರು. ಗಸ್ ಅಟ್ಕಿನ್ಸನ್ 3 ಹಾಗೂ ಜೇಮೀ ಓವರ್ಟನ್ 2 ವಿಕೆಟ್‌ ಕಿತ್ತರು.

  • ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ – ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

    ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ – ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

    ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ (Team India) ನಿಧಾನಗತಿಯ ಆರಂಭ ಪಡೆದಿದ್ದು ಮೊದಲ ದಿನದ ಅಂತ್ಯಕ್ಕೆ 83 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 264 ರನ್‌ ಹೊಡೆದಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಉತ್ತಮ ಆರಂಭ ಪಡೆದಿತ್ತು. ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್‌ (Yashasvi Jaiswal) ಮತ್ತು ಕೆಎಲ್‌ ರಾಹುಲ್‌ (KL Rahul) 94 ರನ್‌ಗಳ ಜೊತೆಯಾಟವಾಡಿದರು.

    ಉತ್ತಮವಾಗಿ ಆಡುತ್ತಿದ್ದ ರಾಹುಲ್‌ 46 ರನ್‌ಗಳಿಸಿದ್ದಾಗ ಔಟ್‌ ಆದರು. ತಂಡದ ಮೊತ್ತ 120 ರನ್‌ ಆಗಿದ್ದಾಗ ಅರ್ಧಶತಕ ಹೊಡೆದ ಜೈಸ್ವಾಲ್‌ 58 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

    ನಾಯಕ ಶುಭಮನ್‌ ಗಿಲ್‌ 12 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಂತರ ಬಂದ ರಿಷಭ್‌ ಪಂತ್‌ (Rishabh Pant) ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದರು. 37 ರನ್‌(48 ಎಸೆತ, 2 ಬೌಂಡರಿ, 1 ಸಿಕ್ಸರ್)‌ ಗಳಿಸಿದ್ದಾಗ ರಿವರ್ಸ್‌ ಸೀಪ್‌ ಹೊಡೆಯಲು ಪ್ರಯತ್ನಿಸಿದಾಗ ಬಾಲ್‌ ನೇರವಾಗಿ ಬಲಗಾಲಿನ ಶೂಗೆ ಬಡಿಯಿತು.  ಇದನ್ನೂ ಓದಿ: WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

    ಗಂಭೀರವಾಗಿ ಗಾಯಗೊಂಡ ರಿಷಭ್‌ ನಂತರ ಮೈದಾನಲ್ಲೇ ಮಲಗಿದರು. ನಡೆಯಲು ಸಾಧ್ಯವಾಗದ ಕಾರಣ ಕೊನೆಗೆ ಗಾಲ್ಫ್‌ ಕಾರ್ಟ್‌ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

    ಉತ್ತಮವಾಗಿ ಆಡುತ್ತಿದ್ದ ಸಾಯಿ ಸುದರ್ಶನ್‌ 61 ರನ್‌ ಗಳಿಸಿ ಔಟಾದರೆ ರವೀಂದ್ರ ಜಡೇಜಾ 19 ರನ್‌, ಶಾರ್ದೂಲ್‌ ಠಾಕೂರ್‌ 19 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

    ಬೆನ್‌ ಸ್ಟೋಕ್ಸ್‌ 2 ವಿಕೆಟ್‌ ಪಡೆದರೆ, ಕ್ರಿಸ್‌ ವೋಕ್ಸ್‌ ಮತ್ತು ಲಿಯಾಮ್ ಡಾಸನ್ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2025 | ಒಂದೇ ಒಂದು ತೂಫಾನ್‌ ಶತಕ – ವೈಭವ್‌ಗೆ 10 ಲಕ್ಷ ರೂ. ಬಹುಮಾನ!

    IPL 2025 | ಒಂದೇ ಒಂದು ತೂಫಾನ್‌ ಶತಕ – ವೈಭವ್‌ಗೆ 10 ಲಕ್ಷ ರೂ. ಬಹುಮಾನ!

    – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

    ಜೈಪುರ: ತನ್ನ ಚೊಚ್ಚಲ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲೇ (IPL 20225) ಸ್ಫೋಟಕ ಶತಕ ಸಿಡಿಸಿದ ಕ್ರೀಡಾತಾರೆ ವೈಭವ್‌ ಸೂರ್ಯವಂಶಿಗೆ (Vaibhav Suryavanshi) ಬಿಹಾರ ರಾಜ್ಯ ಸರ್ಕಾರ ಬಂಪರ್‌ ಬಹುಮಾನ ನೀಡಿ ಘೋಷಿಸಿದೆ.

    ಶತಕ ಬಾರಿಸಿದ ವೈಭವ್‌ ಸೂರ್ಯವಂಶಿಗೆ ಸಿಎಂ ನಿತೀಶ್‌ ಕುಮಾರ್‌ (Nitish Kumar) ತಮ್ಮ ನಿವಾಸದಲ್ಲಿ ಸನ್ಮಾನಿಸಿದರು. ಇದೇ ವೇಳೆ ಬಿಹಾರ ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದರು. ಇದನ್ನೂ ಓದಿ: ʻವೈಭವ’ ಶತಕ – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

    ವೈಭವ್‌ ಸೂರ್ಯವಂಶಿಗೆ ಅಭಿನಂದನೆ ತಿಳಿಸಿದರು. ಕಿರಿಯ ವಯಸ್ಸಿನಲ್ಲೇ ಅವರ ಪ್ರತಿಭೆ ಮುಂದೆ ಭಾರತೀಯ ಕ್ರಿಕೆಟ್‌ಗೆ ಹೊಸ ಭರವಸೆಯಾಗಿದೆ. ಇಂದು ಇಡೀ ದೇಶವೇ ಅವನ ಬಗ್ಗೆ ಹೆಮ್ಮೆ ಪಡುತ್ತಿದೆ. 2024ರಲ್ಲಿ ನಾನು ವೈಭವ್‌ ಮತ್ತು ಅವರ ತಂದೆಯನ್ನ ಭೇಟಿಯಾಗಿದ್ದೆ, ಆಗಲೇ ನಾನು ಅವರ ಭವಿಷ್ಯ ಉಜ್ವಲವಾಗಿರಲಿದೆ ಎಂದು ಹಾರೈಸಿದ್ದೆ. ಹಾಗೆಯೇ ಇಂದು ಯಶಸ್ಸು ಕಾಣುತ್ತಿದ್ದಾರೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ಬಳಿಕ ನಾನು ಅವರಿಗೆ ಫೋನ್‌ ಮಾಡಿ ಮಾತನಾಡಿದ್ದೆ. ವೈಭವ್ ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಇನ್ನಷ್ಟು ದಾಖಲೆಗಳನ್ನು ಸೃಷ್ಟಿಸಿ ದೇಶಕ್ಕೆ ಕೀರ್ತಿ ತರಲೆಂದು ಹಾರೈಸುತ್ತೇನೆ ಎಂದು ಶುಭಕೋರಿದರು.  ಇದನ್ನೂ ಓದಿ: ಐಪಿಎಲ್‌ಗಾಗಿ ಮಟನ್‌, ಪಿಜ್ಜಾ ತ್ಯಜಿಸಿದ್ದ ವೈಭವ್‌ – ಡಯಟ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಕೋಚ್‌

    ವೇಗದ ಶತಕ ಸಿಡಿಸಿದ ಮೊದಲ ಭಾರತೀಯ
    ತನ್ನ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ 3ನೇ ಪಂದ್ಯದಲ್ಲೇ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು 35 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ವೇಗದ ಶತಕ ಬಾರಿಸಿದ 2ನೇ ಆಟಗಾರ ಹಾಗೂ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಡೀ ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಖ್ಯಾತಿ ಕ್ರಿಸ್ ಗೇಲ್ (30 ಎಸೆತ) ಅವರ ಹೆಸರಿನಲ್ಲಿದೆ. ಇದೀಗ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೈಭವ್ ಸೂರ್ಯವಂಶಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಉಳಿದಂತೆ ಯೂಸೂಫ್ ಪಠಾಣ್ (37 ಎಸೆತ), ಡೇವಿಡ್ ಮಿಲ್ಲರ್ (38 ಎಸೆತ), ಟ್ರಾವಿಸ್ ಹೆಡ್ (39 ಎಸೆತ) ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಟಾಪ್-5 ಆಟಗಾರ ಪಟ್ಟಿಯಲ್ಲಿದ್ದಾರೆ.

    ವೇಗದ ಫಿಫ್ಟಿ:
    ಇನ್ನೂ ವೈಭವ್ ಈ ಆವೃತ್ತಿಯಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಜೊತೆಗೆ ಅತೀ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ. ಇಡೀ ಐಪಿಎಲ್‌ನಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್ ಹೆಸರಲ್ಲಿದೆ. 2023ರ ಆವೃತ್ತಿಯಲ್ಲಿ ಜೈಸ್ವಾಲ್ ಕೆಕೆಆರ್ ವಿರುದ್ಧ ಕೇವಲ 13 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು. 2018ರಲ್ಲಿ ಕೆ.ಎಲ್ ರಾಹುಲ್, 2022ರಲ್ಲಿ ಪ್ಯಾಟ್ ಕಮ್ಮಿನ್ಸ್ (ಅಂದು ಕೆಕೆಆರ್) ಮುಂಬೈ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿದ್ದಾರೆ. ಇದನ್ನೂ ಓದಿ: ಸ್ಪಿನ್‌ ಮಾಂತ್ರಿಕ ಅಶ್ವಿನ್‌, ಒಲಿಂಪಿಕ್ಸ್‌ ಪದಕ ವಿಜೇತ ಶ್ರೀಜೇಶ್‌ಗೆ ಪದ್ಮ ಪ್ರಶಸ್ತಿ ಗೌರವ 

    ಈ ಆವೃತ್ತಿಯಲ್ಲಿ ವೇಗದ ಫಿಫ್ಟಿ ಬಾರಿಸಿದ ಆಟಗಾರರು
    ವೈಭವ್ (ರಾಜಸ್ಥಾನ್) – 50 ರನ್ – 17 ಎಸೆತ
    ಪೂರನ್ (ಎಲ್‌ಎಸ್‌ಜಿ) – 50 ರನ್, 18 ಎಸೆತ
    ಮಾರ್ಷ್ (ಎಲ್‌ಎಸ್‌ಜಿ) – 50 ರನ್, 21 ಎಸೆತ
    ಹೆಡ್ (ಎಸ್‌ಆರ್‌ಹೆಚ್) – 50 ರನ್, 21 ಎಸೆತ

  • ʻವೈಭವ’ ಶತಕ – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

    ʻವೈಭವ’ ಶತಕ – ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಇತಿಹಾಸ ನಿರ್ಮಿಸಿದ 14ರ ಬಾಲಕ

    – ಎಬಿಡಿ, ಹೆಡ್‌ ಮಿಲ್ಲರ್‌ರಂತಹ ದಿಗ್ಗಜರ ದಾಖಲೆಗಳು ಉಡೀಸ್‌

    ಜೈಪುರ: ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL 2025) ಈ ಬಾರಿ ಹೊಸ ಯುವಕರ ಆರ್ಭಟವೇ ಜೋರಾಗಿದೆ. ಆದ್ರೆ 14 ವರ್ಷದ ಬಾಲಕ ತಾನು ಪ್ರವೇಶಿಸಿದ ಚೊಚ್ಚಲ ಐಪಿಎಲ್‌ ಆವತ್ತಿಯಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಕ್ರಿಕೆಟ್‌ ದಿಗ್ಗಜರ ಹುಬ್ಬೇರಿಸುವಂತೆ ಮಾಡಿದ್ದಾನೆ.

    ಹೌದು. ಐಪಿಎಲ್‌ ಅಂದ್ರೆ ಸಿಕ್ಸರ್‌, ಬೌಂಡರಿಗಳ ಅಬ್ಬರ ಇದ್ದೇ ಇರುತ್ತೇ. ಕೆಲವೊಮ್ಮೆ ಬ್ಯಾಟರ್‌ಗಳು ಕಡಿಮೆ ಎಸೆತಗಳಲ್ಲಿ ಭಾರೀ ರನ್‌ ಗಳಿಸಿ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದ ದಿಗ್ಗಜರೇ ಹೆಚ್ಚಾಗಿರುವ ಈ ಅಖಾಡದಲ್ಲಿ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ (Vaibhav Suryavanshi) ಮಿಂಚುತ್ತಿದ್ದಾರೆ.

    ತನ್ನ ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್‌ ಸಿಡಿಸುವ ಮೂಲಕ ಐಪಿಎಲ್‌ ವೃತ್ತಿ ಬದುಕು ಶುರು ಮಾಡಿದ ವೈಭವ್‌ ಸೂರ್ಯವಂಶಿ 3ನೇ ಪಂದ್ಯದಲ್ಲೇ ಸ್ಫೋಟಕ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಗುಜರಾತ್‌ ಟೈಟಾನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್‌ ಕೇವಲ 17 ಎಸೆತಗಳಲ್ಲಿ 6 ಸಿಕ್ಸರ್‌, 3 ಬೌಂಡರಿ ಬಾರಿಸುವ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿದ್ದರು. ಮುಂದಿನ 18 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ ಶತಕ ಪೂರೈಸಿದ್ದಾರೆ. ಒಟ್ಟು ತಾನು ಎದುರಿಸಿದ 38 ಎಸೆತಗಳಲ್ಲಿ 101 ರನ್‌ (11 ಸಿಕ್ಸರ್, 7 ಬೌಂಡರಿ) ಸಿಡಿಸಿ ಔಟಾದರು.

    2ನೇ ಆಟಗಾರನೆಂಬ ದಾಖಲೆ:
    ಇಡೀ ಐಪಿಎಲ್‌ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಖ್ಯಾತಿ ಕ್ರಿಸ್‌ ಗೇಲ್‌ ಅವರ ಹೆಸರಿನಲ್ಲಿದೆ. ಇದೀಗ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೇಗದ ಶತಕ ಬಾರಿಸಿದ 2ನೇ ಆಟಗಾರ ಜೊತೆಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.‌ ಉಳಿದಂತೆ ಯೂಸೂಫ್‌ ಪಠಾಣ್‌ (37 ಎಸೆತ), ಡೇವಿಡ್‌ ಮಿಲ್ಲರ್‌ (38 ಎಸೆತ), ಟ್ರಾವಿಸ್‌ ಹೆಡ್‌ (39 ಎಸೆತ) ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಟಾಪ್‌-5 ಆಟಗಾರರಾಗಿದ್ದಾರೆ.

    ವೇಗದ ಫಿಫ್ಟಿ:
    ಇನ್ನೂ ವೈಭವ್‌ ಈ ಆವೃತ್ತಿಯಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಜೊತೆಗೆ ಅತೀ ಕಡಿಮೆ ವಯಸ್ಸಿಗೆ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ.

    ಇಡೀ ಐಪಿಎಲ್‌ನಲ್ಲೇ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್‌ ಹೆಸರಲ್ಲಿದೆ. 2023ರ ಆವೃತ್ತಿಯಲ್ಲಿ ಜೈಸ್ವಾಲ್‌ ಕೆಕೆಆರ್‌ ವಿರುದ್ಧ ಕೇವಲ 13 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು. 2018ರಲ್ಲಿ ಕೆ.ಎಲ್‌ ರಾಹುಲ್‌, 2022ರಲ್ಲಿ ಪ್ಯಾಟ್‌ ಕಮ್ಮಿನ್ಸ್‌ (ಅಂದು ಕೆಕೆಆರ್‌) ಮುಂಬೈ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿದ್ದಾರೆ.

    ಈ ಆವೃತ್ತಿಯಲ್ಲಿ ವೇಗದ ಫಿಫ್ಟಿ ಬಾರಿಸಿದ ಆಟಗಾರರು
    ವೈಭವ್‌ (ರಾಜಸ್ಥಾನ್‌) – 50 ರನ್‌ – 17 ಎಸೆತ
    ಪೂರನ್‌ (ಎಲ್‌ಎಸ್‌ಜಿ) – 50 ರನ್‌, 18 ಎಸೆತ
    ಮಾರ್ಷ್‌ (ಎಲ್‌ಎಸ್‌ಜಿ) – 50 ರನ್‌, 21 ಎಸೆತ
    ಹೆಡ್‌ (ಎಸ್‌ಆರ್‌ಹೆಚ್‌) – 50 ರನ್‌, 21 ಎಸೆತ

  • ತವರಿನಲ್ಲಿ RCBಗೆ ʻಜೋಶ್‌ʼ ತಂದ ಜಯ – ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಬೆಂಗಳೂರು

    ತವರಿನಲ್ಲಿ RCBಗೆ ʻಜೋಶ್‌ʼ ತಂದ ಜಯ – ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಬೆಂಗಳೂರು

    – ರೋಚಕ ಹಣಾಹಣಿಯಲ್ಲಿ ರಾಜಸ್ಥಾನ್‌ಗೆ ವಿರೋಚಿತ ಸೋಲು

    ಬೆಂಗಳೂರು: ಕಳೆದ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ತನ್ನ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸೋಲಿನ ಮುಖವಾಡ ಕಳಚುವುದರ ಜೊತೆಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

    ಗುರುವಾರ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ 11 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ ಆಡಿರುವ ಒಂಬತ್ತು ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕಗಳನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ ಮತ್ತೆ 3ನೇ ಸ್ಥಾನಕ್ಕೇರಿದೆ.

    ಗೆಲುವಿಗೆ 206 ರನ್ ಗಳ ಕಠಿಣ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳು ಮುಗಿದಾಗ 9 ವಿಕೆಟ್ ನಷ್ಟಕ್ಕೆ ಕೇವಲ 194 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ 49 ರನ್‌ ಗಳಿಸುವ ಮೂಲಕ ಸ್ಫೋಟಕ ಆರಂಭ ಒದಗಿಸಿದರೂ ಅದನ್ನು ಕೊನೇವರೆಗೂ ಬೆಳೆಸಿಕೊಂಡು ಹೋಗುವಲ್ಲಿ ರಾಜಸ್ಥಾನ ರಾಯಲ್ಸ್ ಸಂಪೂರ್ಣವಾಗಿ ಎಡವಿತು.

    ಹೇಜಲ್ವುಡ್ 4 ವಿಕೆಟ್
    ಜೋಶ್‌ ಹೇಜಲ್ವುಡ್‌ ತನ್ನ ಪಾಲಿನ ಅಂತಿಮ ಓವರ್‌ನಲ್ಲಿ ಸ್ಫೋಟಕವಾಗಿ ಆಡುತ್ತಿದ್ದ ಧ್ರುವ್ ಜುರೆಲ್ (47) ಅವರು ಆರ್ ಸಿಬಿ ಪಾಳೆಯದಿಂದ ಪಂದ್ಯ ಕಿತ್ತುಕೊಳ್ಳುವ ಸೂಚನೆ ನೀಡಿದರಾದರೂ ಹೇಜಲ್ವುಡ್ ಅದಕ್ಕೆ ಅವಕಾಶ ನೀಡಲಿಲ್ಲ. ಹೇಟ್ಮೇಯರ್ (11), ಶುಭಂ ದುಬೆ (12) ಸೇರಿದಂತೆ ಯಾವ ಬ್ಯಾಟರ್ ಸಹ ಅಗತ್ಯ ಸಂದರ್ಭದಲ್ಲಿ ಆಟವಾಡಲು ವಿಫಲವಾಗಿದ್ದರಿಂದ ಆರ್‌ಸಿಬಿ ಜಯಭೇರಿ ಬಾರಿಸಿತು. ಆರ್ ಸಿಬಿ ಪರ ಹೇಜಲ್ವುಡ್ ಅವರು 33 ರನ್ ಗಳಿಗೆ 4 ವಿಕೆಟ್ ಕಬಳಿಸಿದರು. ಕೃನಾಲ್ ಪಾಂಡ್ಯ 2 ವಿಕೆಟ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ತಲಾ 1 ವಿಕೆಟ್ ಗಳಿಸಿದರು.

    ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಜತ್ ಪಾಟೀದಾರ್ ಬಳಗ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.

    ಕೊಹ್ಲಿ- ಪಡಿಕ್ಕಲ್ ಮಿಂಚಿನಾಟ:
    ಆರ್‌ಸಿಬಿ ಪವರ್‌ ಪ್ಲೇನಲ್ಲಿ ಸ್ಫೋಟಕ ಆರಂಭ ಪಡೆದಿತ್ತು. ಆ ಬಳಿಕ ವಿರಾಟ್ ಕೊಹ್ಲಿ ಜೊತೆಗೂಡಿದ ದೇವದತ್ ಪಡಿಕ್ಕಲ್ ಅವರು 95 ರನ್‌ಗಳ ಮಹತ್ವದ ಜೊತೆಯಾಟವಾಡಿದರು. ತಂಡದ ಮೊತ್ತವನ್ನು 15 ಓವರ್ ಗಳಲ್ಲಿ 150ರ ಗಡಿದಾಟಿಸಿದರು. 16ನೇ ಓವರ್ ನಲ್ಲೇ ಆರ್ಚರ್ ಅವರು ವಿರಾಟ್ ಕೊಹ್ಲಿ ಅವರನ್ನು ಜೋಫ್ರಾ ಆರ್ಚರ್ ಅವರು ಔಟ್ ಮಾಡಿದರು. ವಿರಾಟ್ ಕೊಹ್ಲಿ ಅವರು 42 ಎಸೆತಗಳಲ್ಲಿ 70 ರನ್ ಗಳನ್ನು ಗಳಿಸಿದರು. ಅದರಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದವು. ಮುಂದಿನ ಓವರ್ ನಲ್ಲೇ ಸಂದೀಪ್ ಶರ್ಮಾ ಅವರು ದೇವದತ್ ಪಡಿಕ್ಕಲ್ ಅವರನ್ನು ಪೆವಿಲಿಯನ್ ಗೆ ಅಟ್ಟಿದರು.

    27 ಎಸೆತಗಳಿಂದ 50 ರನ್ ಗಳಿಸಿದ ಅವರ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದವು. ಇದು ದೇವದತ್ ಪಡಿಕ್ಕಲ್ ಅವರ ನಿರಂತರ ಎರಡನೇ ಅರ್ಧಶತಕವಾಗಿದೆ. ಅಂತಿಮ ಹಂತದಲ್ಲಿ ಟಿಂ ಡೇವಿಡ್ (23) ಮತ್ತು ಜಿತೇಶ್ ಶರ್ಮಾ(20) ಬಿರುಸಿನ ಆಟವಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ರಾಜಸ್ಥಾನ ರಾಯಲ್ಸ್ ಪರ ಸಂದೀಪ್ ಶರ್ಮಾ 2 ವಿಕೆಟ್ ಗಳಿಸಿದರೆ, ಜೋಫ್ರಾ ಆರ್ಚರ್ ಮತ್ತು ಹಸರಂಗ ತಲಾ ಒಂದು ವಿಕೆಟ್ ಉರುಳಿಸಿದರು. ಮತ್ತೊಂದು ವಿಕೆಟ್ ರನೌಟ್ ರೂಪದಲ್ಲಿ ಬಂತು.

  • ಸಿಟ್ಟಿನಿಂದ ರಹಾನೆ ಕಿಟ್‌ಬ್ಯಾಗ್‌ ಒದ್ದಿದ್ದ ಜೈಸ್ವಾಲ್‌ – ಮುಂಬೈ ತಂಡ ತೊರೆಯಲು ಅಸಲಿ ಕಾರಣ ರಿವೀಲ್‌

    ಸಿಟ್ಟಿನಿಂದ ರಹಾನೆ ಕಿಟ್‌ಬ್ಯಾಗ್‌ ಒದ್ದಿದ್ದ ಜೈಸ್ವಾಲ್‌ – ಮುಂಬೈ ತಂಡ ತೊರೆಯಲು ಅಸಲಿ ಕಾರಣ ರಿವೀಲ್‌

    ಮುಂಬೈ: ಕೆಲ ವರ್ಷಗಳಿಂದ ಮುಂಬೈ (Mumbai) ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಜೊತೆಗಿನ ಸಂಬಂಧ ಹಳಸಿದ್ದರಿಂದ 23 ವರ್ಷದ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಗೋವಾ (Goa) ತಂಡಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ.

    2025 ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡ ಜಮ್ಮು ಮತ್ತು ಕಾಶ್ಮೀರ (Jammu Kashmir) ವಿರುದ್ಧ ಸೋತಿತ್ತು. ಸೋತ ನಂತರ ತಂಡ ಸಭೆಯಲ್ಲಿ ರಹಾನೆ ಮತ್ತು ಕೋಚ್ ಓಂಕಾರ್ ಸಾಲ್ವಿ ಅವರು ಜೈಸ್ವಾಲ್‌ ಅವರನ್ನು ಟಾರ್ಗೆಟ್‌ ಮಾಡಿದ್ದರು. ಇದರಿಂದ ಸಿಟ್ಟಾದ ಜೈಸ್ವಾಲ್‌ ರಹಾನೆ ಕಿಟ್‌ ಬ್ಯಾಗ್‌ ಅನ್ನು ಒದ್ದಿದ್ದರು.

    ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ 4 ಮತ್ತು 26 ರನ್ ಹೊಡೆದಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 120 ರನ್‌ಗಳಿಗೆ ಆಲೌಟ್‌ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಆಲೌಟ್‌ ಆಗಿ 5 ವಿಕೆಟ್‌ಗಳ ಸೋಲನ್ನು ಅನುಭವಿಸಿತ್ತು.

    ರಹಾನೆ ಮತ್ತು ತಂಡದ ಕೋಚ್‌ ಓಂಕಾರ್‌ ಸಾಲ್ವಿ ಪಂದ್ಯದ ನಂತರ ಜೈಸ್ವಾಲ್ ಅವರ ಆಟದ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಆದರೆ ತಂಡದ ಸೋಲಿಗೆ ತನ್ನನ್ನು ಒಬ್ಬನನ್ನೇ ಹೊಣೆ ಮಾಡಿದ್ದಕ್ಕೆ ಜೈಸ್ವಾಲ್‌ ಸಿಟ್ಟಾಗಿದ್ದರು.

    ರಹಾನೆ ಮತ್ತು ಜೈಸ್ವಾಲ್‌ ನಡುವಿನ ಸಂಬಂಧ ಹಾಳಾಗಲು ಜಮ್ಮು ಕಾಶ್ಮೀರ ವಿರುದ್ಧ ಸೋಲು ಒಂದೇ ಕಾರಣವಲ್ಲ. 2022 ರಲ್ಲಿ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಎದುರಾಳಿ ತಂಡದ ರವಿತೇಜ ಅವರ ಮೇಲೆ ಸ್ಲೆಡ್ಜಿಂಗ್ ಮಾಡಿದ್ದಕ್ಕಾಗಿ ಜೈಸ್ವಾಲ್ ಅವರನ್ನು ಮೈದಾನದಿಂದ ರಹಾನೆ ಹೊರಹೋಗುವಂತೆ ಸೂಚಿಸಿದ್ದರು. ಈ ಘಟನೆಯ ಬಳಿಕ ಜೈಸ್ವಾಲ್‌ ಮತ್ತು ರಹಾನೆ ನಡುವಿನ ಸಂಬಂಧ ಹಳಸಲು ಆರಂಭವಾಯಿತು.

    ಸ್ಲೆಡ್ಜಿಂಗ್‌ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಜೈಸ್ವಾಲ್‌, ಯಾರಿಗೂ ಸ್ಲೆಡ್ಜ್‌ ಬಗ್ಗೆ ನಿಜವಾಗಿಯೂ ತಿಳಿಯುವುದಿಲ್ಲ.ಯಾರಾದರೂ ನನ್ನ ತಾಯಿ ಅಥವಾ ನನ್ನ ಸಹೋದರಿಯ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಸಹಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    ಜೈಸ್ವಾಲ್ ಮಂಗಳವಾರ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ ಬಿಟ್ಟು ಗೋವಾಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಆಡಳಿತ ಮಂಡಳಿ ಅವರ ವಿನಂತಿಯನ್ನು ಸ್ವೀಕರಿಸಿತ್ತು. ಹೀಗಾಗಿ ಜೈಸ್ವಾಲ್ 2025-26ರ ಋತುವಿನಿಂದ ಗೋವಾ ಪರ ಆಡಲಿದ್ದಾರೆ.  ಇದನ್ನೂ ಓದಿ: ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಭಾರತದ ಎಲ್ಲ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ತಂಡದಲ್ಲಿಲ್ಲದಿದ್ದಾಗ ದೇಶೀಯ ಕ್ರಿಕೆಟ್ ಆಡಬೇಕು ಎಂಬ ಬಿಸಿಸಿಐ ಕಟ್ಟುನಿಟ್ಟಿನ ನಿರ್ದೇಶನ ಜಾರಿ ಮಾಡಿದೆ. ನಿರ್ದೇಶನದ ಅನ್ವಯ ಜೈಸ್ವಾಲ್ ಕೊನೆಯದಾಗಿ ಜನವರಿ 23-25ರ ಅವಧಿಯಲ್ಲಿ ನಡೆದ ರಣಜಿ ಟ್ರೋಫಿ ಗ್ರೂಪ್ ಎ ಲೀಗ್ ಸುತ್ತಿನ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಿದ್ದರು.

    ಜೈಸ್ವಾಲ್‌ ಅವರು ಮುಂಬೈನಿಂದ ಗೋವಾಕ್ಕೆ ನಿಷ್ಠೆ ಬದಲಿಸಿದ ಮೂರನೇ ಕ್ರಿಕೆಟರ್‌ ಆಗಿದ್ದಾರೆ. ಈ ಹಿಂದೆ ಸಚಿನ್‌ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಿದ್ದೇಶ್‌ ಲಾಡ್‌ ಅವರು 2022–23 ರಿಂದ ಗೋವಾ ಪರ ಆಡಿದ್ದರು. ಇವರಲ್ಲಿ ಲಾಡ್ ಅವರು ಎಂಸಿಎ ನಿಯಮದಂತೆ ‘ಕೂಲಿಂಗ್ ಆಫ್‌’ ಅವಧಿ ಪೂರೈಸಿ ಮತ್ತೆ ಮುಂಬೈ ತಂಡಕ್ಕೆ ಮರಳಿದ್ದಾರೆ.

     

  • ICC ವರ್ಷದ ಟೆಸ್ಟ್ ತಂಡದಲ್ಲಿ ಬುಮ್ರಾ, ಜೈಸ್ವಾಲ್, ಜಡೇಜಾಗೆ ಸ್ಥಾನ

    ICC ವರ್ಷದ ಟೆಸ್ಟ್ ತಂಡದಲ್ಲಿ ಬುಮ್ರಾ, ಜೈಸ್ವಾಲ್, ಜಡೇಜಾಗೆ ಸ್ಥಾನ

    ಮುಂಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ವರ್ಷದ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಕಳೆದ 8 ಟೆಸ್ಟ್‌ಗಳ ಪೈಕಿ 6 ರಲ್ಲಿ ಸೋತಿದ್ದರೂ, ಮೂವರು ಭಾರತೀಯ ಆಟಗಾರರು ತಾರಾ ಬಳಗದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ನಾಯಕರಾಗಿ ಆಯ್ಕೆಯಾದ ತಂಡದಲ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸ್ಥಾನ ಸಿಕ್ಕಿದೆ.

    11 ಆಟಗಾರರ ತಂಡದಲ್ಲಿ ಇಂಗ್ಲೆಂಡ್‌ನ ನಾಲ್ವರು, ಭಾರತದ ಮೂವರು, ನ್ಯೂಜಿಲೆಂಡ್‌ನ ಇಬ್ಬರು ಮತ್ತು ಶ್ರೀಲಂಕಾದ ಒಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.

    ಟೆಸ್ಟ್‌ ತಂಡ ಹೀಗಿದೆ
    ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ (ನಾಯಕ), ಭಾರತದ ಯಶಸ್ವಿ ಜೈಸ್ವಾಲ್‌, ರವೀಂದ್ರ ಜಡೇಜಾ, ಜಸ್ಪ್ರಿತ್‌ ಬುಮ್ರಾ, ಇಂಗ್ಲೆಂಡ್‌ನ ಬೆನ್‌ ಡಕೆಟ್‌, ಜೊ ರೂಟ್‌, ಹ್ಯಾರಿ ಬ್ರೂಕ್‌, ಜೆಮ್ಮಿ ಸ್ಮಿತ್‌, ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌, ಮ್ಯಾಟ್‌ ಹೆನ್ರಿ, ಶ್ರೀಲಂಕಾದ ಕಮಿಂದು ಮೆಂಡೀಸ್‌ ತಂಡದಲ್ಲಿದ್ದಾರೆ.

  • ಕೊನೆಯ 30 ನಿಮಿಷ ಆಟ| 11 ರನ್‌ ಅಂತರದಲ್ಲಿ 3 ವಿಕೆಟ್‌ ಪತನ – ಸಂಕಷ್ಟದಲ್ಲಿ ಭಾರತ

    ಕೊನೆಯ 30 ನಿಮಿಷ ಆಟ| 11 ರನ್‌ ಅಂತರದಲ್ಲಿ 3 ವಿಕೆಟ್‌ ಪತನ – ಸಂಕಷ್ಟದಲ್ಲಿ ಭಾರತ

    ಮೆಲ್ಬರ್ನ್‌: ಕೊನೆಯ 30 ನಿಮಿಷದಲ್ಲಿ 11 ರನ್‌ ಅಂತರದಲ್ಲಿ 3 ವಿಕೆಟ್‌ ಕಳೆದುಕೊಂಡು ಭಾರತ (Team India) ಈಗ ಸಂಕಷ್ಟಕ್ಕೆ ಸಿಲುಕಿದೆ.

    ಮೂರನೇ ಟೆಸ್ಟ್‌ ಕ್ರಿಕೆಟಿನ (Test Cricket) ಎರಡನೇ ದಿನ ಆಸ್ಟ್ರೇಲಿಯಾವನ್ನು (Australia) 474 ರನ್‌ಗಳಿಗೆ ನಿಯಂತ್ರಿಸಿದ ಭಾರತ ಈಗ 5 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿದೆ.

    ಆಸ್ಟ್ರೇಲಿಯಾವನ್ನು ಆಲೌಟ್‌ ಮಾಡಿ ತನ್ನ ಸರದಿ ಆರಂಭಿಸಿದ ಭಾರತ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು.  8 ರನ್‌ ಗಳಿಸಿದ್ದಾಗ ರೋಹಿತ್‌ ಶರ್ಮಾ (Rohit Sharama) ಔಟಾದರೆ 51 ರನ್‌ ಗಳಿಸಿದ್ದಾಗ ರಾಹುಲ್‌ ಔಟಾದರು.  ನಂತರ ಜೊತೆಯಾದ ಯಶಸ್ವಿ ಜೈಸ್ವಾಲ್‌ (Yashasvi Jaiswal)  ಮತ್ತು ವಿರಾಟ್‌ ಕೊಹ್ಲಿ (Virat Kohli)  ಮೂರನೇ ವಿಕೆಟಿಗೆ 102 ರನ್‌ ಜೊತೆಯಾಟವಾಡಿದರು. ತಂಡದ ಮೊತ್ತ 153 ಆಗಿದ್ದಾಗ ಜೈಸ್ವಾಲ್‌ ರನೌಟ್‌ ಆದರು. ಕೊಹ್ಲಿ ಮತ್ತು ಜೈಸ್ವಾಲ್‌ ಮಧ್ಯೆ ಸಂವಹನ ಕೊರತೆಯಿಂದ 82 ರನ್‌ ಗಳಿಸಿದ್ದ ಜೈಸ್ವಾಲ್‌ ವಿಕೆಟ್‌ ಒಪ್ಪಿಸಬೇಕಾಯಿತು.  ಇದನ್ನೂ ಓದಿ: ಬೂಮ್ರಾ ಒಂದೇ ಓವರ್‌ನಲ್ಲಿ 18 ರನ್‌ ಚಚ್ಚಿದ 19ರ ಯುವಕ – ರೋಹಿತ್‌ ಪಡೆ ತಬ್ಬಿಬ್ಬು

    ಜೈಸ್ವಾಲ್‌ ಔಟಾದ ಬೆನ್ನಲ್ಲೇ 36 ರನ್‌ ಗಳಿಸಿದ್ದ ಕೊಹ್ಲಿ ಕ್ಯಾಚ್‌ ನೀಡಿ ಹೊರನಡೆದರು. ನಂತರ ಬಂದ ಆಕಾಶ್‌ ದೀಪ್‌ ಶೂನ್ಯ ಸುತ್ತಿದರು. ಸದ್ಯ 6 ರನ್‌ ಹೊಡೆದಿರುವ ರಿಷಭ್‌ ಪಂತ್‌ ಮತ್ತು 4 ರನ್‌ ಹೊಡೆದಿರುವ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದಾರೆ. ಇದನ್ನೂ ಓದಿ: Ind vs Aus | ಯುವ ಆಟಗಾರನಿಗೆ ಡಿಕ್ಕಿ ಹೊಡೆದ ಕೊಹ್ಲಿಗೆ ದಂಡ


    ಮೊದಲ ದಿನ 6 ವಿಕೆಟ್‌ ನಷ್ಟಕ್ಕೆ 311 ರನ್‌ಗಳಿಸಿದ್ದ ಆಸ್ಟ್ರೇಲಿಯಾ ಇಂದು 163 ಸೇರಿಸಿ 474 ರನ್‌ಗಳಿಗೆ ಆಲೌಟ್‌ ಆಯ್ತು. ಸ್ಟೀವ್‌ ಸ್ಮಿತ್‌ 140 ರನ್‌ಗಳಿಸಿ ಔಟಾದರೆ ನಾಯಕ ಪ್ಯಾಟ್‌ ಕಮ್ಮಿನ್ಸ್‌ 49 ರನ್‌ ಹೊಡೆದು ಔಟಾದರು. ಇತರೇ ರೂಪದಲ್ಲಿ ಭಾರತ 27 ರನ್‌ (ಲೆಗ್‌ ಬೈ 11, ನೋಬಾಲ್‌ 6, ವೈಡ್‌ 10) ಕೊಟ್ಟಿದೆ.