Tag: Yakshagana

  • ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಗೋವಾ, ಬೆಳಗಾವಿ, ಧಾರವಾಡ, ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನ ಹಂಚಿಕೊಂಡಿದೆ ಉತ್ತರ ಕನ್ನಡ ಜಿಲ್ಲೆ. ಹಚ್ಚ ಹಸುರಿನ ಸೀರೆಯುಟ್ಟು ಸದಾ ಮದುವಣಗಿತ್ತಿಯಂತೆ ಕಂಗೊಳಿಸೋ ಈ ಜಿಲ್ಲೆಗೆ ಅರಬ್ಬೀ ಸಮುದ್ರ ಕಿರೀಟಕ್ಕೊಂದು ಗರಿ ಇಟ್ಟಂತೆ. ರವೀಂದ್ರ ನಾಥರಿಗೆ ಗೀತಾಂಜಲಿ ಬರೆಯೋದಕ್ಕೆ ಸ್ಪೂರ್ತಿ ನೀಡಿದ್ದು ಕಾರವಾರದ ಕಡಲ ತೀರವಂತೆ. ಆದ್ರೆ, ಅಭಿವೃದ್ಧಿ ಅನ್ನೋ ವಿಚಾರ ಬಂದಾಗ ಮಾತ್ರ ಉತ್ತರ ಕನ್ನಡ ಜಿಲ್ಲೆ ನಿರುತ್ತರವಾಗಿ ಬಿಡುತ್ತದೆ. ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲ ಜಿಲ್ಲೆಯ ಪ್ಲಸ್ ಪಾಯಿಂಟ್ ಆಗಿದ್ರೂ ಕೈಗೆಟುಕದೇ ಇರೋ ಅಭಿವೃದ್ಧಿಯೇ ಈ ಜಿಲ್ಲೆಗೆ ತಟ್ಟಿದ ಮಹಾನ್ ಶಾಪ. ಇಂತಿಪ್ಪ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಚುನಾವಣೆ ರಂಗು ರಂಗೇರಿದೆ.

    ಹಸಿರ ಕಾನನದ ನಡುವೆ ರಮ್ಯ ತಾಣಗಳ ವೈಭವ
    ಉತ್ತರ ಕರ್ನಾಟಕಕ್ಕೆ ಹೋಗೋರು ಬನವಾಸಿಗೆ ಹೋಗಿಲ್ಲ ಅಂದ್ರೆ ನಿಮ್ಮ ಪ್ರವಾಸ ಪರಿಪೂರ್ಣವಾಗೋಕೆ ಸಾಧ್ಯಾನೇ ಇಲ್ಲ. ಮಹಾಕವಿ ಪಂಪನೇ ವರ್ಣಿಸಿರುವಂತೆ ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನ ಬನವಾಸಿ ದೇಶಮಂ ಅಂತಾ ಈ ಸ್ಥಳವನ್ನು ಮನಬಿಚ್ಚಿ ವರ್ಣಿಸಿದ್ದಾನೆ.

    ಇನ್ನು ಬೇಲೆಕೇರಿಯ ಅದಿರು ನಾಪತ್ತೆ ಪ್ರಕರಣವನ್ನು ಯಾರಾದ್ರೂ ಮರೆಯೋದುಂಟೇ..? ಬೇಲೆಕೇರಿ ಅತ್ಯಂತ ಹಳೆಯ ಹಾಗೂ ಸುಂದರ ಬಂದರು. ಉತ್ತರ ಕನ್ನಡದ ಭಟ್ಕಳ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಹೆಬ್ಬಾಗಿಲಾಗಿತ್ತಂತೆ. ಭಯೋತ್ಪಾದಕ ಚಟುವಟಿಕೆಗಳು ಈ ಊರಿಗೆ ಕಪ್ಪು ಮಸಿ ಬಳೀತಾದ್ರೂ ಇಂದಿಗೂ ಭಟ್ಕಳ ಶಾಂತ ಸಮುದ್ರದಂತೆ ಕಂಗೊಳಿಸುತ್ತದೆ.

    ಕಾರವಾರದಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದೆ ದಾಂಡೇಲಿ. ಸಿಂಥೇರಿ ರಾಕ್ಸ್, ನಾಗಝರಿ ವ್ಯಾಲಿ, ಕಾವಲಾ ಕೇವ್ಸ್ ಹಗೆ ದಾಂಡೇಲಿಯಲ್ಲಿ ನೋಡೋದಕ್ಕೆ ಅನೇಕ ಸ್ಥಳಗಳಿವೆ. ಅರಣ್ಯದಲ್ಲಿರೋ ವಸತಿ ಗೃಹದಲ್ಲಿ ಉಳಿದುಕೊಂಡು ಪ್ರವಾಸವನ್ನ ಕೂಲಾಗಿ ಅನುಭವಿಸಬಹುದು.

    ಕಾರವಾರದಿಂದ ಸರಿ ಸುಮಾರು 60 ಕಿಲೋಮೀಟರ್ ದೂರದಲ್ಲಿರೋ ಪುಣ್ಯ ಕ್ಷೇತ್ರವೇ ಗೋಕರ್ಣ. ಶಿವನ ಆತ್ಮಲಿಂಗದ ಒಂದು ತುಣುಕು ಇಲ್ಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಈ ಕ್ಷೇತ್ರ ವಾರಣಾಸಿಯಷ್ಟೇ ಪವಿತ್ರ ಅನ್ನೋದು ಭಕ್ತರ ಅಂಬೋಣ. ಇನ್ನುಳಿದಂತೆ ಕಾರವಾರ ಸಮುದ್ರ ತೀರ, ಶಿರಸಿಯ ಮಾರಿಕಾಂಬ ದೇವಾಲಯ, ಶ್ಯಾಮಲೆಯ ತಟದಲ್ಲಿರೋ ಸೊಂದಾ ಮಠ, ಹಾಗೆಯೇ ಪ್ರಸಿದ್ಧ ಪ್ರವಾಸೀ ತಾಣವಾಗಿರೋ ಯಾಣ ಕೂಡಾ ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತೆ.

    ದಕ್ಷಿಣ ಕನ್ನಡದಲ್ಲಿ ತೆಂಕು ತಿಟ್ಟು, ಉತ್ತರ ಕನ್ನಡದಲ್ಲಿ ಬಡಾ ಬಡಗುತಿಟ್ಟಿನ ತಾಳ ಮೇಳ..!
    ಯಕ್ಷಗಾನದಲ್ಲಿ ತೆಂಕು ತಿಟ್ಟು, ಬಡಗು ತಿಟ್ಟು ಹಾಗೂ ಬಡಾ ಬಡಗುತಿಟ್ಟು ಅನ್ನೋ ಪ್ರಬೇಧಗಳಿವೆ. ಇದ್ರಲ್ಲಿ ಉತ್ತರ ಕನ್ನಡದವರು ಬಡಾ ಬಡಗು ತಿಟ್ಟನ್ನಾಡುತ್ತಾರೆ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಶೇಣಿ ಗೋಪಾಲಕೃಷ್ಣ ಭಟ್ ಹೀಗೆ ಉತ್ತರಕನ್ನಡ ಘಟಾನುಘಟಿ ಯಕ್ಷಕರ್ಮಿಗಳ ತವರೂರು. ಇಂದಿಗೂ ಮನೋರಂಜನೆಗಾಗಿ ಸಿನಿಮಾ, ಟಿವಿ ಮಾಧ್ಯಮಗಳಿದ್ರೂನೂ ಉತ್ತರ ಕನ್ನಡದ ಮಂದಿ ಮಾತ್ರ ಯಕ್ಷಗಾನವನ್ನ ತಮ್ಮ ಉಸಿರಲ್ಲಿ ಉಸಿರಾಗಿಸ್ಕೊಂಡಿದ್ದಾರೆ.

    ಉತ್ತರ ಕನ್ನಡದಲ್ಲಿ ಉತ್ತರವೇ ಇಲ್ಲದ ಪ್ರಶ್ನೆಗಳು ಹಲವಾರು..!
    ಇಷ್ಟೆಲ್ಲಾ ವೈಶಿಷ್ಟ್ಯತೆಗಳ ನಡುವೆ ಉತ್ತರ ಕನ್ನಡದಲ್ಲಿ ಈ ಬಾರಿ ಅತೀ ಹೆಚ್ಚು ಸದ್ದು ಮಾಡಿದ್ದು ಪರೇಶ್ ಮೇಸ್ತಾ ಸಾವು. ಇದು ದೊಡ್ಡ ಮಟ್ಟದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಪರಿಣಾಮ ಬೀರೋ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು, ಅಭಿವೃದ್ಧಿ ಹಾಗೂ ಉತ್ತರ ಕನ್ನಡ ಒಂದು ರೀತಿಯಲ್ಲಿ ಎಣ್ಣೆ ಸೀಗೆ ಇದ್ದಂತೆ. ಅಭಿವೃದ್ಧಿ ಅನ್ನೋದನ್ನ ನೋಡಿಯೇ ಕಾಲವಾಗಿದೆ. ಹಾಗಾದ್ರೆ, ಕ್ಷೇತ್ರವಾರು ಲೆಕ್ಕಾಚಾರಗಳು, ಕಳೆದ ಬಾರಿಯ ಫಲಿತಾಂಶ ಹಾಗೂ ಈ ಬಾರಿಯ ಕ್ಯಾಂಡಿಡೇಟ್ ಗಳ ವಿವರಗಳನ್ನು ನೋಡೋಣ ಬನ್ನಿ.

    ಕಾರವಾರ ಈ ಬಾರಿ ಯಾರ ಪಾಲಿನ ವರ..?

    ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾ ಕಾರವಾರದಲ್ಲಿದೆ. ಕರ್ನಾಟಕದ ಎರಡನೇ ಅತೀ ಪ್ರಮುಖ ಬಂದರೂ ಕೂಡಾ ಹೌದು. ಇಲ್ಲಿನ ಜನ ಪಕ್ಷ ನೋಡೋರೇ ಅಲ್ಲ. ಯಾವ ವ್ಯಕ್ತಿ ಸೂಕ್ತ, ಯಾರ ವರ್ಚಸ್ಸು ಇಲ್ಲಿ ವರ್ಕೌಟ್ ಆಗುತ್ತೋ ಅವರಿಗೇ ಇಲ್ಲಿನ ಮತದಾರ ಜೈ ಅಂತಾನೆ. 2013ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಂಪ್ ಆಗಿದ್ದ ಆನಂದ್ ಅಸ್ನೋಟಿಕರ್ ಇಲ್ಲಿ ಮಕಾಡೆ ಮಲಗಿದ್ರು. ಈ ಬಾರಿ ಆಸ್ನೋಟಿಕರ್ ಜೆಡಿಎಸ್ ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್ ಇಲ್ಲಿ ಇದ್ದೂ ಇಲ್ಲದಂತಿದ್ರೂ ಆಸ್ನೋಟಿಕರ್ ಹೆಸರು ಸ್ವಲ್ಪ ಮಟ್ಟಿಗೆ ಪರಿಗಣಿತಗೊಳ್ಬೋದು. ಇನ್ನುಳಿದಂತೆ ಬಿಜೆಪಿಯಿಂದ ರೂಪಾಲಿ ನಾಯ್ಕ್, ಕಾಂಗ್ರೆಸ್ ನಿಂದ ಸತೀಶ್ ಸೈಲ್ ಕೃಷ್ಣ ಕಣದಲ್ಲಿದ್ದಾರೆ. ಸೋ ಇಲ್ಲಿ ಮತದಾರ ಯಾರಿಗೆ ಜೈ ಅಂತಾನೆ ಅನ್ನೋದೇ ಸದ್ಯದ ಕುತೂಹಲ.

    ಕುಮಟಾದಲ್ಲಿ ಗೆಲುವಿನ ತಮಟೆ ಹೊಡೆಯೋರು ಯಾರು..?
    ಕುಮಟಾ ಹೊನ್ನವರ ಕ್ಷೇತ್ರದ ಹಾಲಿ ಶಾಸಕಿ ಶಾರದಾ ಮೋಹನ ಶೆಟ್ಟಿ. ಈ ಬಾರಿಯೂ ಇವರೇ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್ ನಿಂದ ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ್ ನಾಯ್ಕ್ ಬಿರುಸಿನ ಪ್ರಚಾರ ನಡೆಸ್ತಾ ಇದ್ದಾರೆ. 2013ರಲ್ಲಿ ಜೆಡಿಎಸ್ ನಿಂದ ಕಂಟೆಸ್ಟ್ ಮಾಡಿ ಕೇವಲ 420 ಮತಗಳಿಂದ ಸೋಲು ಕಂಡಿದ್ದ ದಿನಕರ್ ಶೆಟ್ಟಿ ಈ ಬಾರಿ ಭಾಜಪಾದ ಹುರಿಯಾಳು. ಕಳೆದ ಬಾರಿ ಶಾರದ ಮೋಹನ್ ಶೆಟ್ಟಿ 36,756 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ರು. ಜೆಡಿಎಸ್ ನ ದಿನಕರ್ ಕೇಶವ್ ಶೆಟ್ಟಿ 36,336 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತರಾಗ್ಬೇಕಾಯ್ತು.

    ಭಟ್ಕಳದಲ್ಲಿ ಗೆಲುವಿನ ಅಟ್ಟಕ್ಕೇರೋರು ಯಾರು..?
    ಕಳೆದ ಬಾರಿ ಪಕ್ಷೇತರವಾಗಿ ನಿಂತು ಗೆದ್ದು ಬೀಗಿದ್ದ ಮಂಕಾಳ ವೈದ್ಯ ಈ ಬಾರಿ ಕಾಂಗ್ರೆಸ್ ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುನಿಲ್ ನಾಯ್ಕ್ ಈ ಬಾರಿ ಬಿಜೆಪಿಯ ಕಟ್ಟಾಳು. ಜೆಡಿಎಸ್ ಇನಾಯಿತುಲ್ಲಾ ಷಾ ಬಂದ್ರಿಯವರಿಗೆ ಟಿಕೆಟ್ ಕೊಡೋದಕ್ಕೆ ಬಯಸಿದ್ರೂ ಕೊನೆಗೆ ಯಾರನ್ನೂ ಕಣಕ್ಕಿಳಿಸದೆ ಸೈಲೆಂಟಾಗಿದೆ.

    ಹಳಿಯಾಳದಲ್ಲಿ ಗೆಲುವಿನ ಹಳಿಯಲ್ಲಿ ಓಡೋರು ಯಾರು..?
    ಹಳಿಯಾಳ ಕ್ಷೇತ್ರ ಸಚಿವ ಆರ್.ವಿ ದೇಶಪಾಂಡೆಯವ್ರ ಸಾಮ್ರಾಜ್ಯ. 1983ರಿಂದ ಸತತ ಆರು ಎಲೆಕ್ಷನ್ ಗೆದ್ದಿರೋ ದೇಶಪಾಂಡೆಗೆ ಇಲ್ಲಿ ಸೋಲಿನ ರುಚಿ ತೋರಿಸೋರು ಯಾರು ಇಲ್ಲ ಅನ್ನೋ ಪರಿಸ್ಥಿತಿ ಇತ್ತು. ಆದ್ರೆ, 2008ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಸಿದ್ದ ಸುನಿಲ್ ಹೆಗಡೆ ದೇಶಪಾಂಡೆಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ರು. ಆದ್ರೆ, 2013ರಲ್ಲಿ ಮತ್ತೆ ದೇಶಪಾಂಡೆ ಗೆಲುವಿನ ನಗೆ ಬೀರಿದ್ರು. ಈಗ ಇಬ್ಬರೂ ಮತ್ತೆ ಮುಖಾಮುಖಿಯಾಗ್ತಿದ್ದಾರೆ. ಜೆಡಿಎಸ್ ನಿಂದ ಕೆ. ರಮೇಶ್ ಈ ಬಾರಿ ಕಣದಲ್ಲಿದ್ದಾರೆ.

    ಶಿರಸಿಯಲ್ಲಿ ಯಾರ ಶಿರಕ್ಕೆ ಗೆಲುವಿನ ಮುಕುಟ..?
    ಬಿಜೆಪಿಯಿಂದ ಶಿರಸಿಯನ್ನು ಹೇಗಾದ್ರೂ ಮಾಡಿ ಕಸಿಯಲೇಬೇಕು ಅನ್ನೋ ಪಣಕ್ಕೆ ಬಿದ್ದಿವೆ ಕಾಂಗ್ರೆಸ್ ಹಾಗೂ ಜೆಡಿಎಸ್. 1999ರಿಂದಲೂ ಇಲ್ಲಿ ಬಿಜೆಪಿಯದ್ದೇ ಅಬ್ಬರ. ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ. ದಿ.ರಾಮಕೃಷ್ಣ ಹೆಗಡೆ ಕುಟುಂಬದ ಶಶಿಭೂಷಣ ಹೆಗಡೆ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದು ಕದನ ಕಣ ಕುತೂಹಲ ಮೂಡಿಸಿದೆ. ಹೀಗಾಗಿ, ಶಿರಸಿ ಹವ್ಯಕರ ಮತ ಬ್ಯಾಂಕ್ ಒಡೆದು ಹೋಗುವ ಸಾಧ್ಯತೆ ದಟ್ಟವಾಗಿದೆ. ದಿ.ಎಸ್ ಬಂಗಾರಪ್ಪ ಅವ್ರ ದೂರದ ಸಂಬಂಧಿ ಭೀಮಣ್ಣ ನಾಯ್ಕ್ ಕೂಡಾ ಕಣದಲ್ಲಿದ್ದು ಈ ಬಾರಿ ಘಟಾನುಘಟಿ ನಾಯಕ್ರ ಸಂಬಂಧಿಕರದ್ದೇ ಚರ್ಚೆ ಶಿರಸಿಯಲ್ಲಿ ಜೋರಾಗಿದೆ.

    ಯಲ್ಲಾಪುರದ ಅರಸ ಯಾರಾಗ್ತಾರೆ..?
    ಯಲ್ಲಾಪುರದ ಜನರಿಗೆ ಬಿಜೆಪಿ ಫೆವರೇಟ್ ಅನ್ನೋದು ಸದ್ಯಕ್ಕಿರೋ ಟ್ರೆಂಡ್. ಯಾಕಂದ್ರೆ ಇಲ್ಲಿ ಜನಪ್ರತಿನಿಧಿಗಳು ಯಾರಾಗ್ಬೇಕು ಅನ್ನೋದನ್ನ ನಿರ್ಧರಿಸೋರೇ ಹವ್ಯಕ ಬ್ರಾಹ್ಮಣ, ಲಿಂಗಾಯತ ಹಾಗೂ ನಾಮಧಾರಿಗಳು. ಆದ್ರೆ, 2013ರಲ್ಲಿ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಹೋಗಿತ್ತು. ಹಾಲಿ ಶಾಸ್ ಕಾಂಗ್ರೆಸ್ ನ ಶಿವರಾಮ ಹೆಬ್ಬಾರ್ ಈ ಬಾರಿಯೂ ಕಣದಲ್ಲಿದ್ದಾರೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ತೆನೆ ಹೊತ್ತಿದ್ದ ರವೀಂದ್ರನಾಥ್ ಈ ಬಾರಿ ಜೆಡಿಎಸ್ ನಿಂದ ಪೈಪೋಟಿ ಕೊಡೋಕೆ ನಿಂತಿದ್ದಾರೆ. ಇನ್ನು ಬಿಜೆಪಿಯಿಂದ ವಿಎಸ್ ಪಾಟೀಲ್ ರಣಕಣಕ್ಕೆ ಧುಮುಕಿದ್ದಾರೆ. ಆದ್ರೆ, ಮತದಾರ ಈ ಬಾರಿ ಯಾರಿಗೆ ಕೃಪಾಕಟಾಕ್ಷ ತೋರ್ತಾನೆ ಅನ್ನೋದಕ್ಕೆ ಮೇ 15ರವರೆಗೆ ಕಾಯ್ಲೇಬೇಕು.

  • ಇವನರ್ವ, ಇವನರ್ವ ಎಂದು ಡೈಲಾಗ್ ಹೇಳಿದ್ದಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಅಮಾನತು!

    ಇವನರ್ವ, ಇವನರ್ವ ಎಂದು ಡೈಲಾಗ್ ಹೇಳಿದ್ದಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಅಮಾನತು!

    ಮಂಗಳೂರು: ಯಕ್ಷಗಾನದಲ್ಲಿ ರಾಜಕೀಯ ಪ್ರೇರಿತ ಪದವನ್ನು ಬಳಕೆ ಮಾಡಿದ್ದಕ್ಕೆ ಕಟೀಲು ಮೇಳದ ಹಾಸ್ಯ ಕಲಾವಿದರು ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ.

    ಏಪ್ರಿಲ್ 1 ರಂದು ಪಡುಮರ್ನಾಡ್ ಬಳಿಯ ಬನ್ನಡ್ಕ ಎಂಬಲ್ಲಿ ನಡೆದಿದೆ ಎನ್ನಲಾದ ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ಯ ಪ್ರಸಂಗದ ಒಂದು ಸನ್ನಿವೇಶದಲ್ಲಿ “ಇವನರ್ವ, ಇವನರ್ವ” ಎಂದು ಡೈಲಾಗ್ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಚುನಾವಣಾ ಆಯೋಗದ ಕಚೇರಿಯಿಂದ ಕಟೀಲು ಮೇಳದ ಮುಖ್ಯಸ್ಥರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದರು.

    ಸದ್ಯ ಮೂಡಬಿದ್ರೆ ಚುನಾವಣಾ ಕಚೇರಿ ಯಿಂದ ನೋಟಿಸ್ ಜಾರಿಯಾಗಿದ್ದು, ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸಬೇಕು ಮತ್ತು ಕಲಾವಿದನನ್ನು ಮೇಳದಿಂದ ತೆಗೆಯಬೇಕೆಂದು ಆದೇಶ ನೋಟಿಸ್ ನಲ್ಲಿದೆ.

    ಚುನಾವಣಾ ಆಯೋಗದ ಕ್ರಮಕ್ಕೆ ಕಲಾವಿದರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಪೂರ್ಣೇಶ್ ಆಚಾರ್ಯ ಅವರು ಕೇರಳ ರಾಜ್ಯದ ಕಾಸರಗೋಡುವಿನ ಮಾನ್ಯದಲ್ಲಿ ನಡೆದ ಪ್ರದರ್ಶನದ ವೇಳೆ ಈ ಡೈಲಾಗ್ ಹೇಳಿದ್ದಾರೆ. ಹೀಗಾಗಿ ಅಲ್ಲಿ ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲ. ಇವನರ್ವ ಪದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಕಲಾವಿದರ ಮೇಲೆ ಚುನಾವಣಾ ಆಯೋಗ ಪ್ರಹಾರ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಕಲಾವಿದ ಪೂರ್ಣೇಶ್ ಆಚಾರ್ಯ, ಯಕ್ಷಗಾನದಲ್ಲಿ ಹಾಸ್ಯವಾಗಿ ಬಳಕೆ ಮಾಡಿದ್ದೇನೆ ಹೊರತು ಇಲ್ಲಿ ಎಲ್ಲೂ ರಾಜಕೀಯ ವಿಚಾರವನ್ನು ಪ್ರಸ್ತಾಪ ಮಾಡಿಲ್ಲ. ಅಷ್ಟೇ ಅಲ್ಲದೇ ಯಾವ ಆಧಾರವನ್ನು ಇಟ್ಟುಕೊಂಡು ಆಯೋಗ ನನ್ನ ಮೇಲೆ ಕ್ರಮಕ್ಕೆ ಸೂಚಿಸಿದೆ ಎನ್ನುವುದು ತಿಳಿದಿಲ್ಲ ಎಂದು ಹೇಳಿದರು.

    ದೂರಿನಲ್ಲಿ ಉಲ್ಲೇಖವಾಗಿರುವಂತೆ ಏಪ್ರಿಲ್ 1 ರಂದು ಪಡುಮರ್ನಾಡ್ ಬಳಿಯ ಬನ್ನಡ್ಕದಲ್ಲಿ ಕಲಾವಿದ ಪೂರ್ಣೆಶ್ ಆಚಾರ್ಯ ಯಕ್ಷಗಾನದಲ್ಲಿ ಭಾಗವಹಿಸಿರಲಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸ್ಪಷ್ಟಪಡಿಸಲಾಗಿದೆ ಎಂದು ಕಟೀಲು ಮೇಳದ ವ್ಯವಸ್ಥಾಪಕರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳನ್ನು ಹೇಳುವ ಸಂದರ್ಭದಲ್ಲಿ “ಇವನರ್ವ, ಇವನರ್ವ, ಇವನರ್ವ ಇವನಮ್ವ, ಇವನಮ್ವ, ಇವನಮ್ವ” ಎಂದು ಸ್ಪಷ್ಟವಾಗಿ ಉಚ್ಚಾರಣೆ ಮಾಡದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    https://www.youtube.com/watch?v=PkOxyBGcxqU

    https://www.youtube.com/watch?v=8kW6xyEWF3A

  • ಬೆಳಕಿಗಾಗಿ ಹಂಬಲಿಸುತ್ತಿರೋ ಯಕ್ಷಗಾನ ಕಲಾವಿದನ ಕುಟುಂಬಕ್ಕೆ ಸಹಾಯ ಮಾಡಿ ಪ್ಲೀಸ್

    ಬೆಳಕಿಗಾಗಿ ಹಂಬಲಿಸುತ್ತಿರೋ ಯಕ್ಷಗಾನ ಕಲಾವಿದನ ಕುಟುಂಬಕ್ಕೆ ಸಹಾಯ ಮಾಡಿ ಪ್ಲೀಸ್

    ಕಾರವಾರ: ಕಲಾವಿದರ ಬದುಕೇ ಹಾಗೆ, ತನ್ನ ಜೀವನವನ್ನೇ ಧಾರೆಯೆರೆದು ಕಲಾಪೋಷಣೆಗೆ ನಿಲ್ಲುವ ಇವರು ತಮ್ಮ ಬದುಕನ್ನೇ ಕತ್ತಲಾಗಿಸಿಕೊಂಡು ಕಲಾ ಆರಾಧನೆ ಮಾಡುತ್ತಾರೆ.

    ಹೊನ್ನಾವರ ತಾಲೂಕಿನ ನಿವಾಸಿಯಾಗಿರುವ ಮಂಜುನಾಥ್ ಭಂಡಾರಿ ಮೂರು ತಲೆಮಾರುಗಳಿಂದ ಯಕ್ಷಗಾನದ ಹಿಮ್ಮೇಳಕ್ಕೆ ಜೀವ ತುಂಬಿ ಇದಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದ್ರೆ ಮಂಜುನಾಥ್ ಅವರ ಬಾಳಲ್ಲಿ ಬರ ಸಿಡಿಲಿನಂತೆ ಅನಾರೋಗ್ಯ ಆವರಿಸಿದೆ. ಒಂಬತ್ತು ವರ್ಷಗಳು ಕಳೆದರೂ ಈ ಕೂಪದಿಂದ ಹೊರಬರಲಾಗದೇ ಇಡೀ ಕುಟುಂಬ ಬಡತನ ಬದುಕು ಸಾಗಿಸುತ್ತಿದ್ದು ಬೆಳಕಿಗಾಗಿ ಹಂಬಲಿಸುತ್ತಿದೆ.

    ಮೃದಂಗ, ಚಂಡೆ ವಾದಕರಾಗಿ ಇದರ ತಯಾರಿಕೆಯನ್ನು ಸಹ ಮಾಡುತ್ತಿರುವ ಈ ಕಲೆ ಮುತ್ತಜ್ಜನಿಂದ ಬಳುವಳಿಯಾಗಿ ಬಂದಿದೆ. ಮಂಜುನಾಥರ ತಂದೆ ಪ್ರಭಾಕರ್ ಪಾಂಡುರಂಗ ಭಂಡಾರಿ ಕೂಡ ಕರಾವಳಿ ಭಾಗದಲ್ಲಿ ಪ್ರಸಿದ್ಧ ಮೃದಂಗ ವಾದಕರಾಗಿದ್ದು, 2002ರಲ್ಲಿ ಅಂದಿನ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಸಹ ನೀಡಿ ಸನ್ಮಾನಿಸಿತ್ತು.

    ಮಂಜುನಾಥ್ ಭಂಡಾರಿಯವರು ಮೃದಂಗ, ಚಂಡೆ ವಾದನದ ಜೊತೆಗೆ ಮಣ್ಣಿನ ಕಲಾಕೃತಿ ರಚನೆಯಲ್ಲಿಯೂ ಸಿದ್ಧಹಸ್ತರು. ಹೀಗಾಗಿ ಅನೇಕ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇನ್ನು ತನ್ನ ಮಡದಿ ಶಾರದಾ, ತಂದೆ ಪಾಂಡುರಂಗ ಭಂಡಾರಿ, ಇಬ್ಬರು ಹೆಣ್ಣುಮಕ್ಕಳಾದ ಮಧುರ, ಮಾನಸಾ ಎಂಬವರೊಂದಿಗೆ ಕಲಾರಾಧನೆ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಇವರಿಗೆ ವಾತ ಹಾಗೂ ಮೂಳೆ ಸಮಸ್ಯೆ ಎದುರಾಗಿ ತನ್ನ ದೇಹದ ಶಕ್ತಿ ಕಳೆದುಕೊಳ್ಳುವ ಜೊತೆಗೆ ಕೈಗಳ ಮೂಳೆ ಬೆಳೆದು ಸ್ವಾಧೀನ ಇಲ್ಲದಂತಾಗಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಇವರು ದಿನದ ತುತ್ತಿಗೂ ಕಷ್ಟಪಡುವಂತಾಗಿದೆ.

    ಚಿಕಿತ್ಸೆಗಾಗಿ ಕೂಡಿಟ್ಟ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬಲಗೈಗೆ ರಾಡ್ ಹಾಕುವ ಮೂಲಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದ್ರೆ ಗುಣಮುಖವಾಗುವ ಬದಲು ಕೈಯಲ್ಲಿದ್ದ ಹಣ ಖಾಲಿಯಾಗಿ ಇತ್ತ ಮೃದಂಗ, ಚಂಡೆಯ ಬಾರ್ ಕಟ್ಟಲೂ ಶಕ್ತನಾಗದೇ ಈ ಕೆಲಸವನ್ನೇ ಬಿಡುವಂತಾಯ್ತು. ಮಂಜುನಾಥ್ ಅವರ ಕಷ್ಟಕ್ಕೆ ಯಕ್ಷಾಭಿಮಾನಿಗಳು ಧನ ಸಹಾಯ ಮಾಡಿ ಮತ್ತಷ್ಟು ಚಿಕಿತ್ಸೆಗೆ ಸಹಕರಿಸಿದ್ರು. ಇದರಿಂದ ಸ್ವಲ್ಪ ಮಟ್ಟಿಗೆ ಆರೋಗ್ಯ ಸುಧಾರಿಸಿದೆ. ಆದರೆ ಬೆಳದು ನಿಂತ ಹಿರಿಯ ಮಗಳು ಮಧುರಾ ಅವರಿವರ ಸಹಾಯದಿಂದ ಬಿಎಡ್ ಮಾಡಿ ಎಂಎ ಮಾಡುತ್ತಿದ್ದಾರೆ. ಎರಡನೇ ಮಗಳು ಮಾನಸ ಅಂತಿಮ ಬಿಕಾಂ ಓದುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ಕಷ್ಟಪಡುತ್ತಿದ್ದು ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬೇಡಿದ್ದಾರೆ.

    ಮಂಜುನಾಥ್ ಭಂಡಾರಿ ಕಳೆದ ಒಂಬತ್ತು ವರ್ಷಗಳಿಂದ ಅಕಾಲಿಕ ರೋಗದಿಂದಾಗಿ ಮೃದಂಗ, ಚಂಡೆ ತೆಯಾರಿಕೆಯನ್ನು ಮಾಡಲಾಗದೇ ಜೀವನಕ್ಕೆ ಆಧಾರವಾಗಿದ್ದ ಕಸುಬನ್ನು ಬಿಟ್ಟು ಪಾಶ್ರ್ವ ವಾಯು ಪೀಡಿತ ತಂದೆ, ಇಬ್ಬರ ಮಕ್ಕಳ ಶಿಕ್ಷಣ ನೋಡಿಕೊಳ್ಳಲು ಪರದಾಡುತ್ತಿದ್ದಾರೆ. ಇತ್ತ ಅವರ ಚಿಕಿತ್ಸೆ ಜೊತೆಯಲ್ಲಿ ಮಕ್ಕಳ ಓದಿಗೆ ಸಹಾಯ ಮಾಡಿದ್ದಲ್ಲಿ ಅವರ ಉದ್ಯೋಗದಿಂದ ಜೀವನ ನಡೆಸಬಹುದಾಗಿದ್ದು ಕಷ್ಟಗಳು ದೂರವಾಗುತ್ತವೆ ಎಂಬವುದು ಅಭಿಮಾನಿಗಳ ಹಂಬಲ.

    ಮೂರು ತಲೆಮಾರುಗಳಿಂದ ಯಕ್ಷಗಾನ ಲೋಕಕ್ಕೆ ತನ್ನದೇ ಆದ ಸೇವೆಯನ್ನು ಈ ಕುಟುಂಬ ನೀಡುತ್ತಾ ಬಂದಿದೆ. ಇವರ ಈ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ನೀಡಿದೆ. ಒಂಬತ್ತು ವರ್ಷದ ವನವಾಸದಲ್ಲಿ ಅಭಿಮಾನಿಗಳ ಹೊರತಾಗಿ ಸರ್ಕಾರ ಮಾತ್ರ ಈ ಕುಟುಂಬದ ಸಹಾಯಕ್ಕೆ ಬರಲಿಲ್ಲ. ತಮ್ಮ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಕ್ಕೆ ಯಾರಾದರೂ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಮಂಜುನಾಥ್ ಭಂಡಾರಿ ಇದ್ದಾರೆ.

     

    https://youtu.be/0MfO9F_5xyg

  • ಯಕ್ಷಗಾನದಲ್ಲಿ ಹಾಸ್ಯದ ದೃಶ್ಯಕ್ಕೆ ಕೋಮು ಬಣ್ಣ- ವಿಡಿಯೋ ವೈರಲ್

    ಯಕ್ಷಗಾನದಲ್ಲಿ ಹಾಸ್ಯದ ದೃಶ್ಯಕ್ಕೆ ಕೋಮು ಬಣ್ಣ- ವಿಡಿಯೋ ವೈರಲ್

    ಮಂಗಳೂರು: ಯಕ್ಷಗಾನ ಪ್ರಸಂಗವೊಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕು ವೈರಲ್ ಮಾಡಲಾಗಿದೆ.

    ಸಾಂದರ್ಭಿಕ ಹಾಸ್ಯಕ್ಕಾಗಿ ಮುಸ್ಲಿಂ ಪಾತ್ರಧಾರಿ ಮತ್ತು ಇನ್ನೊಬ್ಬ ಕಲಾವಿದರ ನಡುವಿನ ಸಂಭಾಷಣೆಯಲ್ಲಿ ಬಂದ ಮಾತುಗಳನ್ನು ಇಡೀ ಮುಸ್ಲಿಂ ಸಮುದಾಯಕ್ಕಾದ ಅಪಚಾರವೆಂದು ಬಿಂಬಿಸಿ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ.

    ಮುಸ್ಲಿಂ ವಾಟ್ಸಪ್ ಗ್ರೂಪ್ ಗಳಲ್ಲಿ ವಿಡಿಯೋ ಭಾರೀ ವೈರಲ್ ಆಗಿದ್ದು ಹೀಗೆ ಅವಹೇಳನಗೈದ ಕಲಾವಿದರು ಬೀದಿ ಹೆಣವಾಗಲಿದ್ದಾರೆ ಅಂತಾ ಬೆದರಿಕೆ ಒಡ್ಡಿದ್ದಾರೆ. ಇಬ್ಬರ ಸಂಭಾಷಣೆಯ ನಡುವೆ ನಿಮ್ಮಲ್ಲಿ ಹುಟ್ಟುಹಬ್ಬದ ಆಚರಣೆ ಇದೆಯೇ? ಅಷ್ಟೊಂದು ಮಕ್ಕಳಿರುವಾಗ ಹುಟ್ಟುಹಬ್ಬ ಆಚರಣೆಗೆ ಟೈಮ್ ಬೇಕಲ್ಲ. ಅದಲ್ಲದೆ ಈ ಮಕ್ಕಳೆಲ್ಲ ನಿಮಗೇ ಹುಟ್ಟಿದ್ದೆಂಬ ಗ್ಯಾರಂಟಿ ಇದೆಯೇ? ಹೀಗೆಲ್ಲ ಮಾತು ಬರುತ್ತದೆ. ಹಾಸ್ಯದ ಸನ್ನಿವೇಶವನ್ನು ಕಲಾವಿದರು ಪ್ರಸಕ್ತ ರಾಜಕೀಯ ವಿಚಾರಗಳಿಗೆ ಬೆಸೆದು ಕಟ್ಟಿಕೊಟ್ಟಿದ್ದಾರೆ.

    ಅಷ್ಟಕ್ಕೇ ಕರಾವಳಿಯಲ್ಲಿ ಕೋಮು ವೈಷಮ್ಯದ ಗಲಾಟೆ ಹೆಚ್ಚಿರುವಾಗ ಇಂಥ ವಿಡಿಯೋ ತುಣುಕನ್ನು ವೈರಲ್ ಮಾಡಿದ್ದಲ್ಲದೆ ಕಲಾವಿದರಿಗೆ ಬಹಿರಂಗ ಬೆದರಿಕೆ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಡಿಯೋ ಮತ್ತು ಬೆದರಿಕೆಯ ಕಾರಣದಿಂದ ಮತ್ತೊಂದು ಎಡವಟ್ಟು ಆಗುವ ಮುನ್ನ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

     

    https://youtu.be/Hskcb0y1pgI

  • ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಟ್ಟಾಣಿಗೆ ಚಿಕಿತ್ಸೆ ಮುಂದುವರಿಕೆ

    ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಟ್ಟಾಣಿಗೆ ಚಿಕಿತ್ಸೆ ಮುಂದುವರಿಕೆ

    ಉಡುಪಿ: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ನ್ಯೂಮೋನಿಯಾ ಹಾಗೂ ಪಾಶ್ರ್ವ ವಾಯುವಿನಿಂದ ಬಳಲುತ್ತಿರುವ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನವರಾತ್ರಿ ಅಂಗವಾಗಿ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚಿಟ್ಟಾಣಿ ಪಾತ್ರ ನಿರ್ವಹಿಸಿದ್ದರು. ಸೆ.25ರಂದು ವಸುವರಾಂಗಿ ಪ್ರಸಂಗದಲ್ಲಿ ಭೀಷ್ಮನ ತಂದೆ ಶಂತನು ಪಾತ್ರ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೆಲ ಪಾತ್ರವನ್ನು ಅವರು ಅರ್ಧವಷ್ಟೇ ಮಾಡುತ್ತಿದ್ದು, ಬಳಿಕ ಬೇರೆ ಬೇರೆ ಕಲಾವಿದರು ಮುಂದುವರಿಸುತ್ತಿದ್ದರು.

    ಆದರೆ ಸೆ.25ರಂದು ಶಂತನು ಪಾತ್ರವನ್ನು ಅವರೊಬ್ಬರೇ ಮಾಡಿದ್ದರು. ಬಳಿಕ ಆರೋಗ್ಯ ಕೈಕೊಟ್ಟಿದ್ದು, ಸುಧಾರಿಸಿಕೊಳ್ಳಲಿಲ್ಲ. ಅವರಿಗೆ ಮೊದಲು ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಸೆ.29ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕಳೆದ 7 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಿಟ್ಟಾಣಿ ಅವರ ಇಬ್ಬರೂ ಮಕ್ಕಳು ಹಾಗೂ ಮೊಮ್ಮಗ ಕೂಡಾ ಯಕ್ಷಗಾನ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.

    ಕೆಎಂಸಿಯ ತೀವ್ರ ನಿಗಾ ಘಟಕದಲ್ಲಿ ಚಿಟ್ಟಾಣಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರು ಹಿರಿಯ ಕಲಾವಿದರ ಆರೋಗ್ಯದ ಬಗ್ಗೆ ನಿಗಾ ವಹಿಸಿರುವುದಾಗಿ ಚಿಟ್ಟಾಣಿ ಕುಟುಂಬಸ್ಥರು ತಿಳಿಸಿದ್ದಾರೆ.

  • ವಿಡಿಯೋ: ವಿವಾದಕ್ಕೆ ಕಾರಣವಾಯ್ತು ಯಕ್ಷಗಾನ ಶೃಂಗಾರ ದೃಶ್ಯ!

    ವಿಡಿಯೋ: ವಿವಾದಕ್ಕೆ ಕಾರಣವಾಯ್ತು ಯಕ್ಷಗಾನ ಶೃಂಗಾರ ದೃಶ್ಯ!

    ಮಂಗಳೂರು: ಯಕ್ಷಗಾನ ಕಾರ್ಯಕ್ರಮ ಒಂದರಲ್ಲಿ ಇಬ್ಬರು ಕಲಾವಿದರು ಚುಂಬಿಸಿದ ದೃಶ್ಯ ಈಗ ವಿವಾದಕ್ಕೆ ಕಾರಣವಾಗಿದೆ.

    ರಾಮ ಕಾರುಣ್ಯ ಎಂಬ ಪ್ರಸಂಗದಲ್ಲಿ ಜಯಂತ ಮತ್ತು ಸುಷಮೆ ಎಂಬ ಪತಿ ಪತ್ನಿಯರ ಪಾತ್ರದಲ್ಲಿ ಕಲಾವಿದರು ಶೃಂಗಾರ ರಸದಲ್ಲಿ ಅಭಿನಯಿಸಿದ್ದರು. ಕಟೀಲು ಮೇಳದ ಸ್ತ್ರೀ ವೇಷಧಾರಿ ಪ್ರಶಾಂತ ಶೆಟ್ಟಿ ನೆಲ್ಯಾಡಿ ಮತ್ತು ರಾಕೇಶ್ ರೈ ಅಡ್ಕ ಹೀಗೆ ಚುಂಬಿಸಿದ್ದು ಶಾಸ್ತ್ರೀಯ ಯಕ್ಷಗಾನ ಕಲಾವಿದರ ಆಕ್ಷೇಪಕ್ಕೆ ಕಾರಣವಾಗಿದೆ.

    ಬಂಟ್ವಾಳ ತಾಲೂಕಿನ ವಗೆನಾಡು ಸುಬ್ರಾಯ ದೇವಸ್ಥಾನದಲ್ಲಿ ಕಳೆದ ಸೆ.16 ರಂದು ಯಕ್ಷಗಾನ ವೈಭವ ನಡೆದಿತ್ತು. ತೆಂಕುತಿಟ್ಟಿನ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಈ ಯಕ್ಷಗಾನ ನಾಟ್ಯ ವೈಭವಕ್ಕೆ ಭಾಗವತರಾಗಿದ್ದರು. ಈಗ ಶೃಂಗಾರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಬೇಕೆಂದೇ ಮುತ್ತು ಕೊಟ್ಟಿರುವುದು ಅಲ್ಲ. ಪಾತ್ರದ ದೃಶ್ಯದ ವೇಳೆ ಟೋಪನ್ ಗೆ ಮುತ್ತು ನೀಡಿದ್ದಾರೆ. ನಾವು ಮಾಡಿದ್ದು ತಪ್ಪು ಆದರೆ ಖಂಡಿತ ಒಪ್ಪುತ್ತೇನೆ ಎಂದು ತಿಳಿಸಿದ್ದಾರೆ.

    https://youtu.be/5caQu_u6mxA

    https://youtu.be/9sKsONVo7ro

     

  • ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಕುಬಣೂರು ಶ್ರೀಧರ್ ರಾವ್ ವಿಧಿವಶ

    ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಕುಬಣೂರು ಶ್ರೀಧರ್ ರಾವ್ ವಿಧಿವಶ

    ಬೆಂಗಳೂರು: ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತರಾಗಿದ್ದ ಕುಬಣೂರು ಶ್ರೀಧರರಾವ್ ತಮ್ಮ ಜೀವನ ಹಾಡನ್ನು ನಿಲ್ಲಿಸಿದ್ದಾರೆ. ತೆಂಕುತಿಟ್ಟಿನ ಶ್ರೇಷ್ಠ ಭಾಗವತರಾಗಿದ್ದ ಶ್ರೀಧರ್ ರಾವ್ ಅವರು ತೀವ್ರ ಜ್ವರದಿಂದಾಗಿ ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

    ಕಾಸರಗೋಡು ಜಿಲ್ಲೆಯ ಕುಬಣೂರಿನಲ್ಲಿ ಹುಟ್ಟಿ, ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಓದಿದ್ದರೂ ಅವರನ್ನು ಸೆಳೆದಿದ್ದು ಮಾತ್ರ ಯಕ್ಷಗಾನ ಕಲೆ. ಲಕ್ಷಣ ತೋರಿ ಉಪ್ಪಳ ಕೃಷ್ಣ ಮಾಸ್ತರ್ ಅವರಿಂದ ಮದ್ದಳೆ, ಟಿ. ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನ ಭಾಗವತಿಕೆ ಕಲಿತ ಇವರು ಟಿ. ರಾಘವ ಮಾಸ್ತರ್‍ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು.

    ಆರಂಭದಲ್ಲಿ ಕದ್ರಿ, ನಂದಾವರ, ಅರುವ, ಬಪ್ಪನಾಡು, ಕಾಂತಾವರ ಮೇಳದಲ್ಲಿ ತಿರುಗಾಟ ನಡೆಸಿ ಕಳೆದ ಎರಡೂವರೆ ದಶಕಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು 27 ವರ್ಷದಿಂದ ‘ಯಕ್ಷ ಪ್ರಭ’ ಮಾಸ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕರಾಗಿದ್ದರು.

    2016ರ ನವೆಂಬರ್ ನಲ್ಲಿ ಕಟೀಲು ಕ್ಷೇತ್ರದ ಸರಸ್ವತೀ ಸದನದಲ್ಲಿ ‘ಶ್ರೀಧರಾಯಣ’ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ ಕುಬಣೂರು ಶ್ರೀಧರ ರಾವ್ ಅವರನ್ನು ಅಭಿನಂದಿಸಲಾಗಿತ್ತು.

    https://youtu.be/jpbuW4IZV1Q

    https://youtu.be/1Cm7i2RU4zo

  • ಬಾಹುಬಲಿ ಯಕ್ಷಗಾನ: ಬೆಂಗಳೂರಿನಲ್ಲಿ ನಡೆಯಿತು ಮೊದಲ ಪ್ರದರ್ಶನ

    ಬಾಹುಬಲಿ ಯಕ್ಷಗಾನ: ಬೆಂಗಳೂರಿನಲ್ಲಿ ನಡೆಯಿತು ಮೊದಲ ಪ್ರದರ್ಶನ

    ಬೆಂಗಳೂರು: ಬಾಹುಬಲಿ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಷ್ಟು ಕ್ರೇಜ್ ಸೃಷ್ಠಿ ಮಾಡಿದ್ದ ಚಿತ್ರ ಅದು. ಬಾಹುಬಲಿ ಭಾಗ 2 ಭಾರತೀಯ ಚಿತ್ರೋದ್ಯಮದ ಎಲ್ಲ ದಾಖಲೆಗಳನ್ನ ಮುರಿದುಹಾಕಿದ್ದು ಈಗ ಇತಿಹಾಸ. ಇದೇ ಬಾಹುಬಲಿ ಸಿನಿಮಾ ಇದೀಗ ಯಕ್ಷಗಾನ ರೂಪದಲ್ಲಿ ಕನ್ನಡದಲ್ಲಿ ಬಂದಿದೆ.

    ಹೌದು. ಬಾಹುಬಲಿ ಚಿತ್ರದ ಯಶಸ್ಸಿನ ಬೆನ್ನಲ್ಲೇ ಆ ಚಿತ್ರದ ಚಿತ್ರಕತೆಯನ್ನು ಆಧರಿಸಿ ವಜ್ರಮಾನಸಿ ಎಂಬ ಯಕ್ಷಗಾನವನ್ನು  ರಂಗದ ಮೇಲೆ ಮೊದಲ ಬಾರಿಗೆ ಪ್ರಯೋಗ ಮಾಡಲಾಯಿತು. ಕಳೆದ ರಾತ್ರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ವಜ್ರಮಾನಸಿ ಭಾಗ 2, ಬಾಹುಬಲಿ ಭಾಗ 2 ಚಿತ್ರದ ಕಥೆಯನ್ನ ಆಧರಿಸಿದ ಯಕ್ಷಗಾನದ ರಂಗರೂಪಕವಾಗಿದೆ. ಸತತ 7 ತಾಸುಗಳ ಯಕ್ಷಗಾನಕ್ಕೆ ನೂರಾರು ಕಲಾಪ್ರಿಯರು ಸಾಕ್ಷಿಯಾಗಿದ್ರು.

    ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮದ ವತಿಯಿಂದ ಬಾಹುಬಲಿ ಭಾಗ ಒಂದರ ಕಥೆಯನ್ನ ರಂಗದ ಮೇಲೆ ತಂದು ವಜ್ರಮಾನಸಿ ಹೆಸರಿನಲ್ಲಿ 150ಕ್ಕೂ ಹೆಚ್ಚು ಪ್ರದರ್ಶನಗಳನ್ನ ಮಾಡಿದ್ರು. ಈಗ ಭಾಗ 2ರ ಕಥೆಯನ್ನ ರಂಗದ ಮೇಲೆ ಪ್ರಯೋಗ ಮಾಡ್ತಿದ್ದಾರೆ. ಬಾಹುಬಲಿ ಚಿತ್ರದಿಂದ ಪ್ರೇರೇಪಣೆ ಪಡೆದಿರುವ ಮಾಹಿಶ್ಮತಿ ನಗರದ ವೈಭವ, ರಾಜತಾಂತ್ರಿಕ ಗುಟ್ಟುಗಳ ಅನಾವರಣ, ಶತ್ರುಗಳ ಒಳಮರ್ಮಗಳನ್ನಾಧರಿಸಿದ ಕತೆಯನ್ನು ಹೆಣೆದು ರಂಗ ಪ್ರಯೋಗ ಮಾಡಲಾಗಿದೆ.

    ಚಿತ್ರದ ತಿರುಳನ್ನು ತರ್ಜುಮೆ ಮಾಡಿ ಪಾತ್ರಗಳನ್ನು ಸೃಷ್ಟಿಸಿದ್ದ ಯಕ್ಷಗಾನ ನೋಡುಗರ ಕಣ್ಮನ ಸೆಳೆದಿದ್ದು ಯಶಸ್ವಿಯಾಗುವ ನಂಬಿಕೆ ಇದೆ ಅನ್ನೋದು ಈ ಯಕ್ಷಗಾನದ ರಚನಕಾರ ಹಾಗೂ ರಂಗ ನಿರ್ದೇಶಕ ದೇವದಾಸ್ ಅವರ ಅಭಿಮತ.

    ಒಟ್ಟಿನಲ್ಲಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ಅನೇಕ ಹೊಸ ದಾಖಲೆಗಳನ್ನ ಮಾಡಿದ ಬಾಹುಬಲಿ ಚಿತ್ರ ಈಗ ಯಕ್ಷಗಾನ ರೂಪದಲ್ಲಿ ರಂಗದ ಮೇಲೆ ಪ್ರಯೋಗವಾಗುತ್ತಿರುವುದು ಯಕ್ಷಗಾನ ಪ್ರಿಯರಿಗೆ ಸಂತಸ ತಂದಿದೆ.

     

  • ರಂಗಸ್ಥಳದಲ್ಲೇ ಕುಸಿದು ಇಹಲೋಕ ತ್ಯಜಿಸಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

    ರಂಗಸ್ಥಳದಲ್ಲೇ ಕುಸಿದು ಇಹಲೋಕ ತ್ಯಜಿಸಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

    ಮಂಗಳೂರು: ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವಾಗ ವೇದಿಕೆಯಲ್ಲೇ ಕುಸಿದು ಮೃತಪಟ್ಟಿದ್ದಾರೆ.

    ಬುಧವಾರ ರಾತ್ರಿ ಎಕ್ಕಾರಿನ ದುರ್ಗಾನಗರದಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ ಆಯೋಜನೆಗೊಂಡಿತ್ತು. ಗಂಗಯ್ಯ ಶೆಟ್ಟರು ಅರುಣಾಸುರ ಪಾತ್ರ ನಿರ್ವಹಿಸುತ್ತಿದ್ದರು. ಮುಂಜಾನೆ ದುಂಭಿಯನ್ನು ಕೊಲ್ಲಲು ಬಂಡೆಯನ್ನು ಒಡೆಯುವ ಸನ್ನಿವೇಶ ಬಂದಾಗ ಶೆಟ್ಟರು ವೇದಿಕೆಯಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

    ಕಟೀಲು ಮೇಳವೊಂದರಲ್ಲೇ ಸುದೀರ್ಘ 47 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಮೂರನೇ ಮೇಳದ ಮ್ಯಾನೇಜರ್ ಆಗಿದ್ದರು. ದೇವಿ ಮಹಾತ್ಮೆಯಲ್ಲಿನ ಮಹಿಷಾಸುರ ಪಾತ್ರ ಗಂಗಯ್ಯ ಶೆಟ್ಟರಿಗೆ ಅಪಾರವಾದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

     

    15 ವರ್ಷಗಳ ಹಿಂದೆ ಹೃದಯಾಘಾತಕ್ಕೊಳಗಾದ ಬಳಿಕ ವೈದ್ಯರ ಸಲಹೆಯಂತೆ ಅವರು ಮಹಿಷಾಸುರನ ಪಾತ್ರವನ್ನು ಮಾಡುತ್ತಿರಲಿಲ್ಲ. ಅರುಣಾಸುರ, ರಕ್ತಬೀಜ, ರುದ್ರಭೀಮ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಅಪರೂಪಕ್ಕೊಮ್ಮೆ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಯಕ್ಷಮಿತ್ರರು, ದುಬೈ ಇವರ ವತಿಯಿಂದ ದುಬೈಯಲ್ಲಿ ಜರಗಿದ್ದ ಪ್ರದರ್ಶನದಲ್ಲಿ ಮಹಿಷಾಸುರ ಪಾತ್ರ ಮಾಡಿದ್ದರು.

    ಅರುಣಾಸುರನ ಪಾತ್ರದಲ್ಲಿ ಅದ್ಭುತ ನಿರ್ವಹಣೆ ನೀಡಿದ್ದರು. ಕೊನೆಯ ಎರಡು ಪದ್ಯಗಳಲ್ಲಿ ವಿಶೇಷವಾಗಿ ಅಭಿನಯ ನೀಡಿದ್ದರು ಎಂದು ಎಂದು ಪ್ರೇಕ್ಷಕರು ಹಾಗೂ ಮೇಳದ ಕಲಾವಿದರು ತಿಳಿಸಿದ್ದಾರೆ.

    ಧರ್ಮಪತ್ನಿ, ಸುಪುತ್ರರಾದ ಶಶಿಕಾಂತ, ಮುಕೇಶ್ ಹಾಗೂ ಶ್ರೀನಿಧಿ, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಗಂಗಯ್ಯ ಶೆಟ್ಟರ ನಿಧನಕ್ಕೆ ಯಕ್ಷಗಾನ ಅಭಿಮಾನಿಗಳು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

    ರಂಗಸ್ಥಳದಲ್ಲೇ ನಿಧನರಾದ ಕಲಾವಿದರು: ಈ ಹಿಂದೆ ಇದೇ ರೀತಿಯಲ್ಲಿ ಮೇರು ಶಿರಿಯಾರ ಮಂಜು ನಾಯ್ಕ, ಕೆರೆಮನೆ ಶಂಭುಹೆಗಡೆ, ದಾಮೋದರ ಮಂಡೆಚ್ಚ, ಚಿಪ್ಪಾರು ಕೃಷ್ಣಯ್ಯ ಬಳ್ಳಾಲ್, ಅರುವ ನಾರಾಯಣ ಶೆಟ್ಟಿ, ಅಶೋಕ ಕೊಲೆಕಾಡಿ ಅವರಂತಹ ದಿಗ್ಗಜ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದ ವೇಳೆ ರಂಗದಲ್ಲೇ ಮೃತಪಟ್ಟಿದ್ದರು.

    ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಲನಾ ಭಟ್ ಅವರು ಗಂಗಯ್ಯ ಶೆಟ್ಟರನ್ನು ಈ ರೀತಿಯಾಗಿ ನೆನಪುಮಾಡಿಕೊಳ್ಳುತ್ತಾರೆ

    ಕೊನೆಗೂ ಪಾತ್ರವನ್ನು ಬಿಟ್ಟು ಕೊಡದ ಶೆಟ್ಟರು.
    ಬಂಡೆಗಲ್ಲಿಗೆ ಅರುಣಾಸುರ ಖಡ್ಗದಿಂದ ಬಡಿದಾಗ ಬಂಡೆಯೊಡೆದು ಚಿಮ್ಮುವ ವಜ್ರದುಂಬಿ, ಮತ್ತೆ ಸಭೆಯಲ್ಲಿ ಅರುಣಾಸುರ ಓಡುವ ಸನ್ನಿವೇಶ. ಕಲ್ಲಿಗೆ ಹೊಡೆದು ಭ್ರಾಮರಿಯನ್ನು ಸಾಕ್ಷಾತ್ಕರಿಸಿದ ಶೆಟ್ಟರ ಅರುಣ ಕುಸಿದು ಬಿದ್ದಿದ್ದ. ರಂಗದಲ್ಲಿ ರಾರಾಜಿಸಿದ್ದ ಖಳಪಾತ್ರಗಳ ದೊರೆ ತನ್ನ ಕೊನೆಯ ಪಾತ್ರವನ್ನೂ ಬಿಟ್ಟುಕೊಡದೆ ಮುಗಿಸಿಯೇ ಹೋಗಿದ್ದ. ಕನ್ನಡದ ಚಿತ್ರರಂಗಕ್ಕೆ ಖಳನಾಯಕ ವಜ್ರಮುನಿಯಾದರೆ ನನ್ನ ಮಟ್ಟಿಗೆ ಪೌರಾಣಿಕ ಪ್ರಸಂಗಗಳ ಯಕ್ಷಗಾನದ ಖಳನಾಯಕ ಗಂಗಯ್ಯ ಶೆಟ್ಟರು.

    ಚಿಕ್ಕಂದಿನಲ್ಲಿ ನಮ್ಮ ಊರಿಗೆ ಕಟೀಲು ಮೇಳ ಬಂದಿದ್ದಾಗ ಗಂಗಯ್ಯ ಶೆಟ್ಟರನ್ನು ಮೊದಲು ನೋಡಿದ ನೆನಪು, ನಾಟಕೀಯ ವೇಷಗಳಲ್ಲಿ ದೃಢಕಾಯರಾದ ಶೆಟ್ಟರು ಭೀಮಕಾಯರಾಗುತ್ತಿದ್ದರು, ಅವರ ವೇಷವನ್ನು ಚೌಕಿಯಲ್ಲಿ ಹತ್ತಿರದಿಂದ ನೋಡುವ ಸೊಗಸೇ ಬೇರೆ. ಬಣ್ಣಗಳನ್ನು ಅದ್ಭುತವಾಗಿ ಬಳಸಿ ಖಳಪಾತ್ರದ ಛಾಯೆ ಮುಖದಲ್ಲಿ ಎದ್ದು ಕಾಣುವಂತೆ ಬರೆಯುತ್ತಿದ್ದರು. ಶೆಟ್ಟರು ವೇಷಧರಿಸಿದ ಬಳಿಕ ನಡೆಯುತ್ತಿದ್ದ ಶೈಲಿಯೂ ಆಕರ್ಶಕ. ಹಿರಣ್ಯಕಶ್ಯಪನ ಪಾತ್ರ ಶೆಟ್ಟರ ಅದ್ಭುತ ಪಾತ್ರಗಳಲ್ಲೊಂದು, ಅದನ್ನು ನೋಡಿದ ನೆನಪಿದೆ. ಪ್ರಹ್ಲಾದನ ಮೇಲೆ ಒಮ್ಮೆ ಉಕ್ಕುವ ಮಮತೆ, ಮತ್ತೆ ಅರೆಕ್ಷಣದಲ್ಲಿ ಹುಟ್ಟಿಕೊಳ್ಳುವ ಹರಿದ್ವೇಷವನ್ನು ಅವರು ತೋರಿಸುತ್ತಿದ್ದ ಪರಿ ಅನನ್ಯ, ಅದನ್ನು ಇನ್ನು ಕಾಣುವುದಕ್ಕಿಲ್ಲ.

    ಇಂದು ಬೆಳಗ್ಗೆ ವಾಟ್ಸಾಪ್ ತೆರೆದು ನೋಡಿದಾಗ ಕಂಡದ್ದು ಮಹಾನ್ ಕಲಾವಿದನ ಕೊನೆಯ ವೇಷದ ಸುದ್ದಿ, ಕ್ಷಣಮಾತ್ರ ಕಣ್ಣು ಮಂಜಾಯ್ತು. ಛೇ ಇನ್ನವರ ವೇಷ ನೋಡುವ ಭಾಗ್ಯ ಇಲ್ಲವಲ್ಲ ಅನ್ನಿಸಿತು. ಗಂಗಯ್ಯ ಶೆಟ್ಟರ ರುದ್ರಭೀಮನ ವಿಡಿಯೋ ಸಿಡಿ ನಾನು ಹೈಸ್ಕೂಲ್ ಮುಗಿಸುವ ಸಂದರ್ಭದಲ್ಲಿ ಹೊರಬಂದಿತ್ತು, ಅದನ್ನು ಎಷ್ಟು ಬಾರಿ ನೋಡಿದ್ದೇನೋ ನನಗೇ ಗೊತ್ತಿಲ್ಲ. ನಮ್ಮ ಕಾಲದ ರುದ್ರಭೀಮ ಎಂದರೆ ಗಂಗಯ್ಯ ಶೆಟ್ಟರದ್ದು ಎನ್ನುವ ಭಾವನೆ ಇವತ್ತಿಗೂ ಜೀವಂತವಾಗಿದೆ.

    ಅನೇಕ ಕ್ಯಾಸೆಟ್ ಗಳಲ್ಲಿ ಅವರ ಧ್ವನಿಯನ್ನಾಲಿಸಿದ್ದೇನೆ. ಚಂದಗೋಪ, ವಿದ್ಯುನ್ಮಾಲಿ,ಅರುಣಾಸುರ, ಬಣ್ಣದವೇಷ ಇತ್ಯಾದಿ ವೇಷಗಳನ್ನು ನೋಡಿದ್ದೇನೆ. ನೇರವಾಗಿ ಅವರ ವೇಷ ನೋಡಿದ್ದಕ್ಕಿಂತ ಹೆಚ್ಚು ಸಿಡಿಗಳಲ್ಲೇ ನೋಡಿದ್ದು,ಅನುಭವಿಸಿದ್ದು ಹೆಚ್ಚು. ಪಾತ್ರಗಳ ಮನೋಧರ್ಮವನ್ನರಿತುಕೊಂಡು ಸ್ವಭಾವ ಮತ್ತು ಭಾವನೆಯನ್ನು ವ್ಯಕ್ತಪಡಿಸಿ ಅದ್ಭುತವಾದ ವಾತಾವರಣ ಸೃಷ್ಟಿಸುತ್ತಿದ್ದ ವಿರಳ ಕಲಾವಿದರವರು. ಅವರ ವೇಷ ರಂಗದಲ್ಲಿ ಇದ್ದಷ್ಟು ಹೊತ್ತು ಪಾತ್ರವೇ ಆಗಿರುತ್ತಿತ್ತು ಹೊರತು ಗಂಗಯ್ಯ ಶೆಟ್ಟರು ಎಂದೂ ಕಾಣಿಸುತ್ತಿರಲಿಲ್ಲ. ಪರಂಪರೆಯ ಬಣ್ಣದವೇಷದ ಹಳೆ ತಲೆಮಾರಿನ ಕೊಂಡಿಯೊಂದು ಕಳಚಿದೆ. ಅಗಲಿದ ದಿವ್ಯಾತ್ಮಕ್ಕೆ ದೇವಿ ಭ್ರಾಮರಿ ಚಿರಶಾಂತಿಯನ್ನು ಕರುಣಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ.

    ಇಲ್ಲಿ ಗಂಗಯ್ಯ ಶೆಟ್ಟಿಯವರು ವೇದಿಕೆಯಲ್ಲಿ ಕುಸಿದು ಬೀಳುತ್ತಿರುವ ವಿಡಿಯೋ ಮತ್ತು ಈ ಹಿಂದೆ ಅವರ ನಿರ್ವಹಿಸಿದ ರುದ್ರಭೀಮ ಪಾತ್ರದ ವಿಡಿಯೋವನ್ನು ನೀಡಲಾಗಿದೆ.

    https://www.youtube.com/watch?v=RRAkNKSejyw


    ವಿಡಿಯೋ ಕೃಪೆ. ಕೆಆರ್ ಕೆ ಭಟ್