ಮಂಗಳೂರು: ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ. ಸಾಮಾನ್ಯವಾಗಿ ಪುರಾಣ ಕಥೆಗಳು ಯಕ್ಷರಂಗದ ಮೇಲೆ ಪ್ರದರ್ಶನಗೊಳ್ಳುತ್ತವೆ. ಆದ್ರೆ ಇದೀಗ ಪ್ರಧಾನಿ ನರೇಂದ್ರ ಮೋದಿಯ ಜೀವನದ ಕಥೆಯೂ ಯಕ್ಷಗಾನ ಪ್ರಸಂಗವಾಗಿ ಮೂಡಿ ಬಂದಿದೆ. ಮೋದಿ ಅಭಿಮಾನಿಗಳು ಸೇರಿ “ನರೇಂದ್ರ ವಿಜಯ” ಎನ್ನುವ ಪ್ರಸಂಗ ಪ್ರದರ್ಶಿಸಿ, ಯಕ್ಷಗಾನಕ್ಕೂ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಲೇಪ ಕಟ್ಟಿಕೊಟ್ಟಿದ್ದಾರೆ.
ಮೋದಿ ಲೈಫ್ ಸ್ಟೋರಿ ಸಿನಿಮಾ ಆಗಿ ಸದ್ದು ಮಾಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಕರಾವಳಿಯ ಯಕ್ಷಗಾನದಲ್ಲೂ ಮೋದಿ ಜೀವನಗಾಥೆ ಮೂಡಿಬಂದಿದೆ. ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರಿಎಂಬವರು ಬರೆದ ‘ನರೇಂದ್ರ ವಿಜಯ’ ಎಂಬ ಕಾಲ್ಪನಿಕ ಕೃತಿಗೆ ಪ್ರಸಂಗಕರ್ತ ಎಂ.ಕೆ.ರಮೇಶ್ ಆಚಾರ್ಯ ಯಕ್ಷಗಾನ ಶೈಲಿಯ ಪದ್ಯಗಳನ್ನು ಬರೆದು, ಪ್ರಸಂಗವಾಗಿ ಪರಿವರ್ತಿಸಿದ್ದಾರೆ. ನರೇಂದ್ರ ವಿಜಯ ಯಕ್ಷಗಾನ ಪ್ರಸಂಗದ ಮೊದಲ ಪ್ರದರ್ಶನ ಮಂಗಳೂರಿನ ಕೊಡಿಯಾಲ್ ಬೈಲಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಪ್ರದರ್ಶನಗೊಂಡಿದ್ದು, ಮೋದಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಎರಡೂವರೆ ಗಂಟೆ ಕಾಲ ಪ್ರದರ್ಶನಗೊಂಡ ಈ ಕಾಲ್ಪನಿಕ ಕಥೆಯ ಯಕ್ಷಗಾನ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಮೋದಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿತ್ತು.
ನರೇಂದ್ರ ವಿಜಯ ಯಕ್ಷಗಾನದಲ್ಲಿ ಏನಿತ್ತು?
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದ ಇಲ್ಲಿವರೆಗಿನ ಪ್ರಮುಖ ಘಟನೆಗಳನ್ನು ಯಕ್ಷಗಾನದಲ್ಲಿ ಅಳವಡಿಸಲಾಗಿದೆ. ಅಮಿತ್ ಶಾ ‘ವಿಜಯ’ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಕಡಿವಾಣ ನೆಪದಲ್ಲಿ ಕೈಗೊಂಡ ನೋಟ್ ಬ್ಯಾನ್, ಮುಸ್ಲಿಂ ಮಹಿಳೆಯರ ರಕ್ಷಣೆಗೆ ಜಾರಿ ಮಾಡಿದ ತ್ರಿವಳಿ ತಲಾಖ್ ಮಸೂದೆ, ಕೇದಾರನಾಥಕ್ಕೆ ಮೋದಿ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಶಿವ ಪ್ರತ್ಯಕ್ಷನಾಗುವ ಸನ್ನಿವೇಶ ಕೂಡ ಇದೆ. ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದ್ದು, ಇದರಿಂದ ಉಂಟಾದ ಪರಿಣಾಮಗಳು, ಬಾಲಾಕೋಟ್ ಉಗ್ರ ಶಿಬಿರದ ಮೇಲೆ ಸರ್ಜಿಕಲ್ ಸ್ಟ್ರೈಕ್ ಹೀಗೆ ಅನೇಕ ವಿಷಯಗಳನ್ನು ಪ್ರಸಂಗದಲ್ಲಿ ಚಿತ್ರಿಸಲಾಗಿದೆ. ಮೋದಿಯವರ ತಾಯಿ ಹೀರಾಬೆನ್ ಹಿರಿಯಮ್ಮನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
ಐತಿಹಾಸಿಕ ಘಟನೆಗಳು, ವ್ಯಕ್ತಿಗಳನ್ನಾಧರಿಸಿದ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದ ನಿದರ್ಶನ ಕರಾವಳಿಯಲ್ಲಿದೆ. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿಯ ಜೀವನದ ಕಥೆಯನ್ನೂ ಸೇರಿಸಲಾಗಿದ್ದು ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು. ಮೋದಿ ಅಭಿಮಾನಿಗಳು ಮಾತ್ರ ನೋಡಿದ್ದಲ್ಲದೆ, ಯಕ್ಷಗಾನಕ್ಕೂ ರಾಜಕೀಯದ ಲೇಪ ಕಟ್ಟಿಕೊಟ್ಟಿದ್ದಾರೆಂಬ ಟೀಕೆಯೂ ಕೇಳಿ ಬಂದಿದೆ.
ಅಶ್ವಥ್ ಸಂಪಾಜೆ ಬೆಂಗಳೂರು: ಈಗ ಜಗತ್ತೇ ನಮ್ಮ ಅಂಗೈಯಲ್ಲಿ ಸಿಗುತ್ತದೆ. ಎಲ್ಲವೂ ಡಿಜಿಟಲ್ ಆಗುತ್ತಿದೆ. ಎಲ್ಲವೂ ಡಿಜಿಟಲ್ ಆಗುತ್ತಿರುವಾಗ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನ ಪ್ರಸಂಗಗಳು ಡಿಜಿಟಲ್ ಮೂಲಕ ಅಭಿಮಾನಿಗಳನ್ನು ತಲುಪುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷವಾಹಿನಿ ಸಂಸ್ಥೆಯು ನವೀನ ಮಾದರಿಯ ಯೋಜನೆಗಳ ಮೂಲಕ ಯಕ್ಷಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಯಕ್ಷಗಾನ ಪ್ರಸಂಗ ಪ್ರದರ್ಶನದಲ್ಲಿ ಕುಣಿತ, ವೇಷ, ಸಂಭಾಷಣೆಗಳ ಜೊತೆಗೆ ಪದಗಳು/ಹಾಡುಗಳು ಬಹಳ ಮುಖ್ಯಪಾತ್ರ ವಹಿಸುತ್ತದೆ. ಪ್ರಸಂಗ ಪದ್ಯಗಳು ಯಕ್ಷಗಾನ ಸಾಹಿತ್ಯದ ಜೀವಾಳ. ಭಾಗವತರು ಈ ಪದಗಳನ್ನು ಹಾಡುವ ಮೂಲಕ ಪ್ರಸಂಗವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಯಕ್ಷಾಸಕ್ತರಿಂದ ಮರೆಯಾಗುತ್ತಿರುವ ಮತ್ತು ದುರ್ಲಭವಾಗುತ್ತಿರುವ ಪ್ರಸಂಗ ಸಾಹಿತ್ಯವು ಸರ್ವರಿಗೂ ಸುಲಭವಾಗಿ ತಲುಪುವಂತೆ ಮಾಡಲು ‘ಯಕ್ಷವಾಹಿನಿ’ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸುವ ಕೈಂಕರ್ಯದಲ್ಲಿ ಸದ್ದಿಲ್ಲದಂತೆ ತೊಡಗಿದೆ. ಇದೇ ನಿಟ್ಟಿನಲ್ಲಿ ಯಕ್ಷಕವಿಗಳಿಂದ ರಚಿಸಲ್ಪಟ್ಟ ಹಲವಾರು ಮುದ್ರಿತ/ಹಸ್ತಪ್ರತಿಗಳ ಸಂಗ್ರಹಣೆ, ದಾಖಲೀಕರಣ ಮತ್ತು ಅವುಗಳ ವಿದ್ಯುನ್ಮಾನ ಪ್ರತಿಗಳನ್ನು ಅಂತರ್ಜಾಲದ ಸಹಾಯದಿಂದ ಆಸಕ್ತರಿಗೆ ನಿಲುಕುವಂತೆ ಮಾಡುವ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ. ಈಗಾಗಲೇ 600ಕ್ಕೂ ಹೆಚ್ಚಿನ ಸ್ಕ್ಯಾನ್ ಪ್ರತಿಗಳು ಸಂಗ್ರಹಗೊಂಡಿದ್ದು ಈಗ ‘ಪ್ರಸಂಗಪ್ರತಿಸಂಗ್ರಹ‘ ಎಂಬ ಜನಸ್ನೇಹಿ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಬಿಡುಗಡೆ ಮಾಡಲಾಗಿದೆ.
ಯಕ್ಷವಾಹಿನಿ ಸಂಸ್ಥೆಯು ಮುಖ್ಯವಾಗಿ ಎರಡು ರೀತಿಯಲ್ಲಿ ಯಕ್ಷಗಾನ ಪ್ರಸಂಗಗಳು ಡಿಜಿಟಲೀಕರಣ ಯೋಜನೆಗಳನ್ನು ಹಮ್ಮಿಕೊಂಡಿದೆ.. ಮೊದಲನೆಯದಾಗಿ ಯಕ್ಷಪ್ರಸಂಗಕೋಶ: ಇದರಲ್ಲಿ ಪ್ರಸಂಗಳನ್ನು ಟೈಪಿಸಿ, ಛಂದಸ್ಸು, ಮಟ್ಟುಗಳನ್ನು ವಿದ್ವಾಂಸರಿಂದ ಪರಿಶೀಲಿಸಿ, ತಪ್ಪುಗಳನ್ನು ತಿದ್ದಿಸಿ ಅಪ್ಲೋಡ್ ಮಾಡಲಾಗುತ್ತದೆ. ಎರಡನೇಯದಾಗಿ ಪ್ರಸಂಗಪ್ರತಿಸಂಗ್ರಹ: ಪ್ರಸಂಗಪ್ರತಿಸಂಗ್ರಹದಲ್ಲಿ ಯಕ್ಷಗಾನ ಪ್ರಸಂಗ ಪ್ರತಿಗಳನ್ನು/ಹಸ್ತಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗುತ್ತದೆ. ಆಂಡ್ರಾಯ್ಡ್ ಅಪ್ಲಿಕೇಶನ್‍ನಲ್ಲಿ ಯಕ್ಷಪ್ರಸಂಗಕೋಶ ಮತ್ತು ಪ್ರಸಂಗಪ್ರತಿಸಂಗ್ರಹ ಈ ಎರಡೂ ಯೋಜನೆಗಳ ಪ್ರತಿಗಳು ಸಿಗುತ್ತವೆ. ಎಲ್ಲಾ ಡಿಜಿಟಲ್ ಪ್ರಸಂಗ ಪ್ರತಿಗಳು ಉಚಿತ ಪ್ರಸಾರಕ್ಕಾಗಿಯೇ ಮೀಸಲಾಗಿವೆ.
ಪ್ರಸಂಗಪ್ರತಿಸಂಗ್ರಹದಲ್ಲಿ ಇಲ್ಲಿಯವರೆಗೂ ಒಟ್ಟು 600ಕ್ಕೂ ಹೆಚ್ಚು ಪ್ರಸಂಗಗಳನ್ನು ದಾಖಲಿಸಲಾಗಿದೆ. ಬರೀ ಪದಗಳು ಮಾತ್ರ ಸಿಗದೇ ಈ ಪ್ರಸಂಗ ಬರೆದ ಕವಿಗಳು ಪರಿಚಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕವಿಗಳ ಹೆಸರು, ಪ್ರಸಂಗವನ್ನು ಪ್ರಕಾಶಿಸಿದ ಸಂಸ್ಥೆಯ ಹೆಸರನ್ನು ಇಲ್ಲಿ ದಾಖಲಿಸಲಾಗುತ್ತದೆ. ಪ್ರಸಂಗಗಳು ಇನ್ನೂ ಪ್ರಕಾಶನವಾಗದೇ ಇದ್ದರೆ ಆ ಕವಿಯ ಹಸ್ತ ಪ್ರತಿಯ ಸ್ಕ್ಯಾನ್ ಸೇರಿಸಲಾಗುತ್ತದೆ.
ಯಾಕೆ ಈ ಯೋಜನೆ?
ಸುಮಾರು 8 ಸಾವಿರ ಯಕ್ಷಗಾನ ಪ್ರಸಂಗಗಳು ಬರೆದು ಹೋಗಿರುವ ಅಖಿಲ ಕರ್ನಾಟಕ ಸಮಗ್ರ (ಎಲ್ಲಾ ಪಾಯಗಳು ಸೇರಿ) ಯಕ್ಷಗಾನ ಸಾಹಿತ್ಯದಲ್ಲಿ ಸುಮಾರು ಅರ್ಧದಷ್ಟು ಸಂಗ್ರಹವಿಲ್ಲದೇ ಯಾ ಸಂಗ್ರಹದ ಮಾಹಿತಿ ಇಲ್ಲದೇ ನಶಿಸಿ ಹೋಗಿರುವ ಸಾಧ್ಯತೆಗಳಿವೆ. ಉಳಿದ ಸುಮಾರು 4 ಸಾವಿರ ಪ್ರಸಂಗಗಳು ಬೇರೆ ಬೇರೆ ಸಂಗ್ರಹಗಳಲ್ಲಿ ಚದುರಿ ಹೋಗಿ ಎಲ್ಲವೂ ಒಂದೇ ಸಂಗ್ರಹದಿಂದ ವಿದ್ಯುನ್ಮಾನ ಪ್ರತಿಗಳನ್ನಾಗಿ (ಸ್ಕ್ಯಾನ್ ಪ್ರತಿಗಳನ್ನಾಗಿ) ಕೊಡುತ್ತಾ ಹೋಗುವುದಲ್ಲದೇ, ವಿದ್ಯುನ್ಮಾನ ಪ್ರತಿಗಳ ರೂಪದಲ್ಲಿ ಉಳಿದು ಹೋಗಿರುವುದನ್ನು ಕಾಲಗರ್ಭದಲ್ಲಿ ನಶಿಸಿಹೋಗದಂತೆ ಕಾಪಿಡುವುದು ನಮ್ಮ ಗುರಿ ಎಂದು ಯಕ್ಷವಾಹಿನಿ ಸಂಸ್ಥೆ ಹೇಳಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಯಕ್ಷ ಪ್ರೇಮಿ ಟೆಕ್ಕಿಗಳ ಕ್ರಿಯಾಶೀಲತೆಯನ್ನು ನೋಡಿ ನಟರಾಜ ಉಪಾಧ್ಯ ಅವರು ಅಂತರ್ಜಾಲದ ಮೂಲಕ ಯಕ್ಷಗಾನದ ದಾಖಲಿಕರಣದ ಕೆಲಸಗಳಲ್ಲಿ ಉಳಿದ ಹೋಗಿರುವ ಕೆಲಸ ಮಾಡಲು ಸ್ವಯಂಸೇವಕರ ತಂಡವನ್ನು ಕಟ್ಟುವ ಪ್ರಸ್ತಾವನೆ ಮಾಡಿದರು. ಈ ಯೋಜನೆಗೆ ರವಿ ಮಡೋಡಿ, ಆನಂದರಾಮ ಉಪಾಧ್ಯ, ಡಾ. ಪ್ರದೀಪ್ ಸಾಮಗ, ಎಂ.ಎಲ್. ಸಾಮಗ, ಲ.ನಾ. ಭಟ್, ಕಜೆ ಸುಬ್ರಹ್ಮಣ್ಯ ಭಟ್, ದಿನೇಶ ಉಪ್ಪೂರ, ರಾಜಗೋಪಾಲ ಕನ್ಯಾನ, ಅಶ್ವಿನಿ ಹೊದಲ, ಶಶಿರಾಜ ಸೋಮಯಾಜಿ, ಅವಿನಾಶ್ ಬೈಪಡಿತ್ತಾಯ, ಅಶೋಕ ಮುಂಗಳೀಮನೆ, ವಸುಮತಿ ಮುಂತಾದ 25 ಕ್ಕೂ ಹೆಚ್ಚಿನ ಯಕ್ಷ ಪ್ರೇಮಿಗಳು ಕೈ ಜೋಡಿಸಿದರು. ಈ ತಂಡವನ್ನು ಶ್ರೀ ಡಿ.ಎಸ್. ಶ್ರೀಧರ ಮತ್ತು ಶ್ರೀ ಗಿಂಡೀಮನೆ ಮೃತ್ಯುಂಜಯ ಅವರು ಯಕ್ಷಗಾನ ಛಂದಸ್ಸಿನ ಕುರಿತಾದ ತಪ್ಪುಗಳನ್ನು ತಿದ್ದುವತ್ತ, ಆಚಾರ್ಯ ಸ್ಥಾನದಲ್ಲಿ ನಿಂತು ಮುನ್ನಡೆಸಿದರು. ಇನ್ನು ಆನೇಕ ಯಕ್ಷಗಾನದ ಕಲಾವಿದರು, ಪ್ರಸಂಗ ಕವಿಗಳು, ಪ್ರಸಂಗ ಸಂಗ್ರಹಕಾರರು ಮತ್ತು ಟೆಕ್ಕಿಗಳ ಸೇರುತ್ತಾ ಸುಮಾರು 100 ಮಂದಿ ಸ್ವಯಂ ಸೇವಕರ ತಂಡ ಈಗ ಈ ಯೋಜನೆಗೆ ಸಹಕಾರ ನೀಡುತ್ತಿದೆ.
ಯಾವುದೇ ಆರ್ಥಿಕ ಲಾಭದ ಉದ್ದೇಶ ಇಲ್ಲದ ಈ ಯೋಜನೆಗೆ ಅನೇಕ ಪ್ರಸಂಗ ಕವಿಗಳು, ಪ್ರಕಾಶಕರು ಸಮ್ಮತಿ ನೀಡಿ ಹರಸಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರು ಪ್ರಸಂಗದ ಡಿಜಿಟಲೀಕರಕ್ಕೆ ಮುಂದಾಗಿದ್ದು, ಯಕ್ಷವಾಹಿನಿಯ ಸಹಯೋಗವನ್ನು ಪಡೆಯುತ್ತಿದ್ದಾರೆ. ಈ ಕುರಿತಾಗಿ ಅಕಾಡೆಮಿಯು ಸಂಸ್ಥೆಗೆ ನೀಡುವ ಪ್ರೋತ್ಸಾಹ ಧನದಲ್ಲಿ ಸಿಂಹಪಾಲನ್ನು ಸಮಕಾಲೀನ ಕವಿಗಳಿಗೆ ನೀಡಿ ಪ್ರೋತ್ಸಾಹಿಸುತ್ತಿದೆ.
ಪ್ರಸಂಗ ಪ್ರತಿ ಸಂಗ್ರಹ ಹೆಚ್ಚಿಸಲು ಸಾಮೂಹಿಕ ಸ್ಕ್ಯಾನಿಂಗ್ ಕಮ್ಮಟಗಳನ್ನು ಯಕ್ಷವಾಹಿನಿಯು ಆಯೋಜಿಸುತ್ತಿದೆ. ಯಕ್ಷ ಪ್ರಸಂಗ ಕೋಶಕ್ಕಾಗಿ ಆನೇಕ ಸ್ವಯಂಸೇವಕರು ಕಂಪ್ಯೂಟರಿನಲ್ಲಿ ಟೈಪಿಸಿ ಪ್ರಸಂಗಗಳನ್ನು ಕಳುಹಿಸುತ್ತಿದ್ದಾರೆ.
ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ನಟರಾಜ ಉಪಾಧ್ಯ ಅವರು, ಯಕ್ಷಗಾನ ಮಟ್ಟುಗಳ ಯಾದಿಯನ್ನು ತಯಾರಿಸಿ, ಎಲ್ಲಾ ಪಾಯಗಳಲ್ಲಿ ಛಂದಸ್ಸಿಗೆ ಅನುಗುಣವಾದ ಈ ಮಟ್ಟುಗಳನ್ನು ಹಾಡುವ ಶೈಲಿಗಳ ವೈವಿಧ್ಯವನ್ನು ಆಡಿಯೋ, ವಿಡಿಯೋ ದಾಖಲೆ ಮಾಡಬೇಕು ಎನ್ನುವ ಚಿಂತನೆ ಇದೆ. ಇದರ ಜೊತೆಯಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲ ಸಂಘ ಸಂಸ್ಥೆಗಳ ಮಾಹಿತಿಯ ಪಟ್ಟಿಯನ್ನು ಹೊರತರಲು ಉತ್ಸುಕರಾಗಿದ್ದೇವೆ. ಮೂರು ವರ್ಷಗಳ ಹಿಂದೆಯೇ ಪ್ರಕಟಿಸಿದ 5 ಸಾವಿರಕ್ಕೂ ಮಿಕ್ಕಿದ ಯಕ್ಷ ಪ್ರಸಂಗಗಳ ಯಾದಿಯನ್ನು ಮತ್ತಷ್ಟು ಪರಿಷ್ಕರಿಸಿ 6 ಸಾವಿರಕ್ಕೆ ಏರಿಸಲು ಹೊರಟಿದ್ದೇವೆ, ಅಲ್ಲದೇ ಎಲ್ಲಾ ಯಕ್ಷಗಾನಕ್ಕೆ ಕುರಿತಾದ ಪುಸ್ತಕಗಳ ಯಾದಿಯನ್ನೂ ತಯಾರಿಸಬೇಕಾಗಿದೆ ಎಂದು ತಿಳಿಸಿದರು.
ಈ ಯೋಜನೆಗಳನ್ನು ಮತ್ತಷ್ಟು ತ್ವರಿತಗೊಳಿಸಲು ಸ್ವಯಂಸೇವಕರ ಶ್ರಮದಾನ ಹಾಗೂ ದಾನಿಗಳಿಂದ ಧನ ಸಹಾಯ ಬೇಕಾಗುತ್ತದೆ. ಕಲಾಸಕ್ತರು yakshavahini@gmail.com ಮೂಲಕ ಸಂಸ್ಥೆಯನ್ನು ಸಂಪರ್ಕಿಸಬಹುದು. ನಟರಾಜ ಉಪಾಧ್ಯ ಮೊಬೈಲ್ ನಂ 96328 24391.
ಉಡುಪಿ: ಕಟೀಲು ಯಕ್ಷಗಾನ ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿಯನ್ನು ಈ ಬಾರಿ ತಿರುಗಾಟದಿಂದ ಕೈಬಿಡಲಾಗಿದೆ. ಈ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತಲೋಕದ ಎಂಟ್ರಿಯಾಗಿದೆ.
ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಭಾಗವತ ಸತೀಶ್ ಪಟ್ಲ ಅವರಿಗೆ ಈ ಬಾರಿ ಗೇಟ್ ಪಾಸ್ ಕೊಡಲಾಗಿದೆ. ಒಂದು ವಾರದಿಂದ ಈ ಬೆಳವಣಿಗೆ ಕರಾವಳಿಯ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಪ್ರಕರಣದಲ್ಲಿ ಕಟೀಲು ದೇವಸ್ಥಾನದ ಮೇಳದ ಮ್ಯಾನೇಜರ್ ಗೆ ಬೆಂಬಲಿಸಿದ್ದ ಪಡುಬಿದ್ರೆ ಉದ್ಯಮಿಗೆ ಭೂಗತ ಲೋಕದಿಂದ ಬೆದರಿಕೆ ಕರೆ ಬಂದಿದೆ.
ಉದ್ಯಮಿ ಧನಪಾಲ್ ಶೆಟ್ಟಿಗೆ ವಿಕ್ಕಿ ಶೆಟ್ಟಿ ಎಂಬಾತನಿಂದ ಕೊಲೆ ಬೆದರಿಕೆ ಕರೆ ಬಂದಿದ್ದು ಈ ಸಂಬಂಧ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧನಪಾಲ್ ಶೆಟ್ಟಿ ಪ್ರತಿಕ್ರಿಯಿಸಿ, ವಿಕ್ಕಿ ಶೆಟ್ಟಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಹೋದರನಾಗಿದ್ದು, ಈತ ಭೂಗತ ಲೋಕದ ನಂಟಿರುವ ವ್ಯಕ್ತಿ. ಮೇಳದ ಮ್ಯಾನೇಜರ್ ಕಲ್ಲಾಡಿ ದೇವಿಪ್ರಸಾದ್ ಗೆ ಬೆಂಬಲಿಸಿದ್ದಕ್ಕೆ ಬೆದರಿಕೆ ಹಾಕಿದ್ದು, ನಿನ್ನನ್ನು ಕೊಲೆ ಮಾಡುವುದಾಗಿ ಫೋನ್ ಕರೆಯಲ್ಲಿ ಎಚ್ಚರಿಕೆ ನೀಡಿದ್ದಾನೆ. ಈ ಸಂಬಂಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತು ವಿಕ್ಕಿ ಶೆಟ್ಟಿ ವಿರುದ್ಧ ದೂರು ನೀಡಿದ್ದೇವೆ. ನನ್ನ ಗೆಳೆಯ ಗಣಪತಿ ಕಾಮತ್ ಎಂಬವರಿಗೆ ಕರೆ ಮಾಡಿ ತಾನು ವಿಕ್ಕಿ ಶೆಟ್ಟಿ ಎಂದು ಹೇಳಿಕೊಂಡಿದ್ದಾನೆ. ಕಟೀಲು ಪ್ರಕರಣದಲ್ಲಿ ಕಲ್ಲಾಡಿಗೆ ಬೆಂಬಲಿಸಿದರೆ ಸುಮ್ಮನಿರಲ್ಲ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ.
ಉಡುಪಿ: ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ದ ಜೋಡಿ ‘ರಂಗನಾಯಕ’ನಾಗಿ ರೀ ಎಂಟ್ರಿ ಕೊಡುತ್ತಿದ್ದಾರೆ. 2020ರಲ್ಲಿ ಗುರುಪ್ರಸಾದ್ ಡೈರೆಕ್ಷನ್, ಜಗ್ಗೇಶ್ ಅಭಿನಯದ ಚಿತ್ರ ರಿಲೀಸ್ ಆಗಲಿದ್ದು, ಟೀಸರ್ ಗದ್ದಲ ಎಬ್ಬಿಸಿದೆ. ಯಕ್ಷಗಾನಕ್ಕೆ ಅಪಮಾನ ಮಾಡಿದ್ದಾರೆ ಎಂಬುದು ಕರಾವಳಿಯ ಯಕ್ಷ ಪ್ರೇಮಿಗಳ ಆರೋಪ.
ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಮೂಲಕ ಸೂಪರ್ ಹಿಟ್ ಜೋಡಿಯಾಗಿರುವ ಜಗ್ಗೇಶ್ ಮತ್ತು ಗುರುಪ್ರಸಾದ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರಕ್ಕೆ ರಂಗನಾಯಕ ಎನ್ನುವ ನಾಮಕರಣವಾಗಿದೆ. ಟೀಸರ್ ಬಿಡುಗಡೆಯಾಗಿ ಬಹಳ ಪ್ರಚಾರ ಗಿಟ್ಟಿಸಿದೆ. ಹೊಸ ಚಿತ್ರ ರಂಗನಾಯಕದ ಟೀಸರ್ ಯಕ್ಷಗಾನ ಅಭಿಮಾನಿಗಳ ಮತ್ತು ಕಲಾವಿದರ ಕಣ್ಣು ಕೆಂಪು ಮಾಡಿದೆ. ಯಕ್ಷಗಾನ ಶೈಲಿಯ ಟೀಸರಿನಲ್ಲಿ ಇಂಗ್ಲಿಷ್ ಮಿಕ್ಸ್ ಆಗಿದೆ. ಆರಂಭದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚಿಹ್ನೆ ಬಳಸಲಾಗಿದ್ದು, ಯಕ್ಷಗಾನವನ್ನು ಅಪಭ್ರಂಶ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಗವತಿಕೆಯ ಹಲವೆಡೆ ಇಂಗ್ಲಿಷ್ ಶಬ್ದ ಪ್ರಯೋಗ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬಹಳ ವಿರೋಧಿ ಚರ್ಚೆಯಾಗುತ್ತಿದೆ. ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಯಕ್ಷಗಾನ ಪ್ರೇಮಿಗಳು, ಪ್ರಸಂಗಕರ್ತರು, ಹಿಮ್ಮೇಳ ಮುಮ್ಮೇಳ ಕಲಾವಿದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಕ್ಷಗಾನಕ್ಕೆ ತನ್ನದೇ ಆದ ಮಹತ್ವ ಇದೆ. ದೇವಸ್ಥಾನಗಳ ಮೂಲಕ ಮೇಳಗಳನ್ನು ಕಟ್ಟಿ ಪುರಾಣದ ಕಥೆಗಳನ್ನು ಮತ್ತು ಸಾಮಾಜಿಕ ಕಾಳಜಿಯಿರುವ ಪ್ರಸಂಗಗಳನ್ನು ಮೇಳಗಳು ಪ್ರದರ್ಶನ ಮಾಡುತ್ತದೆ. ಆದರೆ ರಂಗನಾಯಕ ಚಿತ್ರ ತಂಡ ಎಲ್ಲಾ ಸಂಪ್ರದಾಯ ಚೌಕಟ್ಟನ್ನು ಗಾಳಿಗೆ ತೂರಿದೆ ಎಂದು ಯಕ್ಷಾರಾಧಕರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹವ್ಯಾಸಿ ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ, ಯಕ್ಷಗಾನದ ಪದ್ಯದಲ್ಲಿ ಆಂಗ್ಲ ಪದ ಬಳಕೆ ಮತ್ತು ರಾಜಕೀಯ ತೂರಿಕೊಂಡಿರುವುದಕ್ಕೆ ನಮ್ಮ ಆಕ್ಷೇಪ. ಕಾಂಗ್ರೆಸ್, ಬಿಜೆಪಿಯ ಚಿಹ್ನೆ ಬಳಸಿರುವುದು ಸರಿಯಲ್ಲ. ಯಕ್ಷಗಾನ ದೇವರ ಹೆಸರಿನಲ್ಲಿ, ನಂಬಿಕೆಯ ಆಧಾರದಲ್ಲಿ ನಡೆಯುತ್ತಿದೆ. ಹರಕೆಯ ರೂಪದಲ್ಲಿ ಆಟ ಆಡಿಸುವವರು ಯಕ್ಷಗಾನವನ್ನು ದೇವರ ಸೇವೆಯಂತೆ ಕಾಣುತ್ತಾರೆ. ಹೀಗಿರುವಾಗ ಜನರ ಭಾವನೆಗಳ, ನಂಬಿಕೆ ಶ್ರದ್ಧೆಯ ಜೊತೆ ಆಟವಾಡುವುದು ಸರಿಯಲ್ಲ ಎಂದು ಹೇಳಿದರು.
ಮೋದಿ ಪ್ರಧಾನಿಯಾದರೆ ಯಕ್ಷಗಾನ ಮಾಡಿಸುವ ಹರಕೆ ಹೊತ್ತಿರುವ ಉದಾಹರಣೆ ಕರಾವಳಿಯಲ್ಲಿದೆ. ಯಕ್ಷಗಾನ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ತರ್ಜುಮೆಗೊಂಡು ಪ್ರದರ್ಶನವಾಗಿದ್ದೂ ಇದೆ. ಇಷ್ಟಕ್ಕೂ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಾಡಿನ ಗಂಡುಕಲೆಗೆ ಅಪಮಾನ ಮಾಡಬೇಡಿ ಎಂದು ಚಿತ್ರದ ಡೈರೆಕ್ಟರ್ ಗುರುಪ್ರಸಾದ್ ಅವರಲ್ಲಿ ಕರಾವಳಿಯ ಯಕ್ಷಗಾನ ಕಲಾವಿದರು ವಿನಂತಿ ಮಾಡಿಕೊಂಡಿದ್ದಾರೆ.
ಉಡುಪಿ: ಇದೇ ಮೊದಲ ಬಾರಿಗೆ ಕರಾವಳಿಯ `ಯಕ್ಷಗಾನ’ ಮರಾಠಿ ಭಾಷೆಯಲ್ಲಿ ತರ್ಜುಮೆಗೊಳ್ಳಲಿದೆ. ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನದ ಚಂಡೆ ನಾದವು ಇನ್ನು ಮುಂದೆ ಮಹಾರಾಷ್ಟ್ರದಲ್ಲೂ ಕೇಳಲಿದೆ.
ಭಾಷಾವಾರು ಪ್ರಾಂತ ರಚನೆಯ ನಂತರ ಮಹಾರಾಷ್ಟ್ರ ಮತ್ತು ನಾವು ಬಾಂಧವ್ಯ ಬೆಸೆದದ್ದಕ್ಕಿಂತ ಕಚ್ಚಾಡಿದ್ದೇ ಹೆಚ್ಚು. ಆದರೆ ಕನ್ನಡ ನೆಲದ ಯಕ್ಷಗಾನ ಕಲೆಯು ಪ್ರೀತಿ ಹಂಚಲು ಹೊರಟಿದೆ. ಕೋಟ ಶಿವರಾಮ ಕಾರಂತರಿಂದ ಮರುಜೀವ ಪಡೆದ ಬಡಗುತಿಟ್ಟು ಯಕ್ಷಗಾನಕ್ಕೆ ಉಡುಪಿಯ ಯಕ್ಷಗಾನ ಕೇಂದ್ರವೇ ಮೂಲಸ್ಥಾನ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆಯಿಂದ ವಿದ್ವಾಂಸರುಗಳ ತಂಡವೊಂದು ಉಡುಪಿಯಲ್ಲಿ ಬೀಡುಬಿಟ್ಟಿದೆ. ಕೇಂದ್ರದವರು ಕಲಿಸುವ ಯಕ್ಷಗಾನ ಪ್ರದರ್ಶನ ಕಂಡು ಈ ಕಲೆಯ ಸಾಂಸ್ಕೃತಿಕ ಶ್ರೀಮಂತಿಕೆಗೆ ದಂಗಾಗಿದ್ದಾರೆ.
ಮರಾಠಿಯಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಉದ್ದೇಶದಿಂದ ಅವರು ಕರಾವಳಿಗೆ ಬಂದಿದ್ದಾರೆ. ಕನ್ನಡ ಭಾಷೆಯಲ್ಲಿರುವ ಯಕ್ಷಗಾನದ ಅಪರೂಪದ ಕೃತಿಗಳನ್ನು ಅನುವಾದ ಮಾಡಿ, ಮರಾಠಿ ಭಾಷೆಯಲ್ಲೇ ಪ್ರದರ್ಶನ ನೀಡಲು ತಯಾರಾಗಿದ್ದಾರೆ. ಮರಾಠಿ ರಂಗಭೂಮಿಗೆ ವಿಶ್ವ ಭೂಪಟದಲ್ಲಿ ಮಹತ್ವದ ಸ್ಥಾನಮಾನ ಇದೆ. ಇನ್ನು ಮುಂದೆ ನಮ್ಮ ಯಕ್ಷಗಾನವೂ ಮರಾಠಿ ನೆಲದಲ್ಲಿ ಮನೆಮಾತಾಗಲು ಸಿದ್ಧತೆ ನಡೆಯುತ್ತಿದೆ.
ಯಕ್ಷಗಾನ ಮಹಾರಾಷ್ಟ್ರ ಮಂದಿಗೆ ಪರಿಚಯವಾಗಿಲ್ಲ. ಅದಕ್ಕೆ ನಾವು ಯಕ್ಷಗಾನವನ್ನು ಸಂಪೂರ್ಣವಾಗಿ ಮರಾಠಿಯಲ್ಲಿ ಅನುವಾದ ಮಾಡಿದ್ದೇವೆ. ಈ ವಿಚಾರದಿಂದ ನಾವು ಉಡುಪಿಗೆ ಬಂದಿದ್ದೇವೆ. ನಾವು ಮೊದಲು ಯಕ್ಷಗಾನದ ಪ್ರಕಾರದಲ್ಲಿ ಇರುವ ಏಳೆಂಟು ಪ್ರಸಂಗಗಳನ್ನು ಅನುವಾದ ಮಾಡುತ್ತೇವೆ. ಅದರ ಕಾವ್ಯ, ಗದ್ಯವನ್ನು ಅನುವಾದ ಮಾಡಿ ಪ್ರಕಟಿಸುತ್ತೆವೆ. ಆ ಬುಕ್ ಜುಲೈ ತಿಂಗಳಿನೊಳಗೆ ಪಬ್ಲಿಶ್ ಆಗುತ್ತದೆ. ಬಳಿಕ ಅದರಲ್ಲಿ ಎರಡು ಪ್ರಸಂಗವನ್ನು ವೇದಿಕೆ ಮೇಲೆ ತರುತ್ತೇವೆ. ಇದಕ್ಕಾಗಿ ನಮಗೆ ಬೇರೆ ಬೇರೆ ಕಲಾವಿದರ ಸಹಾಯ ಬೇಕಾಗುತ್ತದೆ. ಮೊದಲು ಪುಣೆದಲ್ಲಿ ಮಾಡಿ ಯಶಸ್ವಿಯಾದರೆ ಬೇರೆ ಮಹಾರಾಷ್ಟ್ರದಲ್ಲಿ ಮಾಡುತ್ತೇವೆ ಎಂದು ಮಹಾರಾಷ್ಟ್ರ ಸಾಂಸ್ಕೃತಿಕ ತಜ್ಞರಾದ ಗುರುರಾಜ್ ಕುಲಕರ್ಣಿ ಹೇಳಿದ್ದಾರೆ.
ಪುಣೆಯಲ್ಲಿ 3 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ಅವರು ಕನ್ನಡ ಭಾಷೆಯಲ್ಲಿ ನಡೆಯುವ ಯಕ್ಷಗಾನಗಳನ್ನು ಕಂಡು ಖುಷಿಪಡುತ್ತಾರೆ. ಆದರೆ ಅಲ್ಲಿರುವ ಮರಾಠಿಗರನ್ನೂ ಯಕ್ಷಗಾನ ಆಕರ್ಷಿಸಿದೆ. ತಮ್ಮ ಭಾಷೆಯಲ್ಲೇ ಯಕ್ಷಗಾನ ಮಾಡಿ ಈ ಕಲೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಈ ಮರಾಠಿ ವಿದ್ವಾಂಸರು ಯೋಜನೆ ಹಾಕಿಕೊಂಡಿದ್ದಾರೆ.
ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಐದು ಮಹತ್ವದ ಯಕ್ಷಗಾನ ಕೃತಿಗಳು ಭಾಷಾನುವಾದ ಆಗಲಿದೆ. ಮುಂದೆ ಯಕ್ಷಗಾನ ಕೇಂದ್ರದ ಗುರುಗಳೇ ಪುಣೆಗೆ ತೆರಳಿ ಯಕ್ಷಗಾನ ತರಬೇತಿ ನೀಡಲಿದ್ದಾರೆ. ಅಲ್ಲಿಂದ ಮುಂದೆ ಮರಾಠಿಯಲ್ಲೇ ಯಕ್ಷಗಾನ ಪ್ರದರ್ಶನ ಏರ್ಪಾಟಾಗಲಿದೆ. ಮಹಾರಾಷ್ಟ್ರದ ಅನೇಕ ಕಲಾ ಪ್ರಕಾರಗಳಿಗೆ ಯಕ್ಷಗಾನದ ನೃತ್ಯ ಮತ್ತು ರಂಗಸೂತ್ರಗಳೇ ಮೂಲ ಎನ್ನುವುದು ಈ ವಿದ್ವಾಂಸರ ಖಚಿತ ಅಭಿಪ್ರಾಯ. ಈ ವಿದ್ವಾಂಸರ ವೀಕ್ಷಣೆಗೆಂದೇ `ವೀರ ಅಭಿಮನ್ಯು’ ಹಾಗೂ `ಜಟಾಯು ಮೋಕ್ಷ’ ಎಂಬ ಎರಡು ಪ್ರಸಂಗಗಳ ಪ್ರದರ್ಶನವೂ ಏರ್ಪಾಟಾಗಿತ್ತು.
ಮಹಾರಾಷ್ಟ್ರದಿಂದ ಕೆಲ ವಿದ್ವಾಂಸರು ಬಂದಿದ್ದಾರೆ. ಇದಕ್ಕೆ ಶಿವರಾಮ ಕಾರಂತ ಅವರು ಮಹಾರಾಷ್ಟ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಯಕ್ಷಗಾನ ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಿದೆ. ಉಡುಪಿಯಲ್ಲಿ ಇದು ಮೂಲ ಗುರುಕುಲ ಕೇಂದ್ರ. ವಿದ್ವಾಂಸರು ಇಲ್ಲಿಗೆ ಬಂದು ಇಲ್ಲಿ ಅಧ್ಯಾಯನ ಮಾಡಿ ಬಳಿಕ ಇಲ್ಲಿಯ ತಂಡವನ್ನು ಮರಾಠಿಯಲ್ಲೂ ಮಾಡಿಸುತ್ತಿದ್ದಾರೆ. ಇದು ನಮ್ಮ ಕನ್ನಡ ಭಾಷೆಯ ಹೆಮ್ಮೆ ಎಂದು ಯಕ್ಷ ಗುರುಗಳಾದ ಸಂಜೀವ ಸುವರ್ಣ ತಿಳಿಸಿದ್ದಾರೆ.
ಮಂಗಳೂರು: ಕರಾವಳಿಯಲ್ಲಿ ಇಷ್ಟಾರ್ಥ ಈಡೇರಿಕೆಗೆ ಹರಕೆ ಹೇಳಿ ಯಕ್ಷಗಾನ ಮಾಡಿಸುತ್ತಾರೆ.
ಪ್ರಧಾನಿ ಮೋದಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಲ್ಲಿ ಕಟೀಲು ಮೇಳದ ಯಕ್ಷಗಾನ ಆಡಿಸುವುದಾಗಿ ಮಂಗಳೂರಿನ ಟೀಂ ಮೋದಿ ತಂಡ ಹರಕೆ ಹೊತ್ತಿತ್ತು. ಅದರಂತೆ, ಭಾರೀ ಗೆಲುವಿನೊಂದಿಗೆ ಮೋದಿ ವಿಜಯ ಪತಾಕೆ ಹಾರಿಸುತ್ತಿದ್ದಂತೆ ಮಂಗಳೂರಿನಲ್ಲಿ ತರಾತುರಿಯಲ್ಲಿ ಕಟೀಲು ಮೇಳದಿಂದ ದೇವಿ ಮಹಾತ್ಮೆ ಹರಕೆ ಬಯಲಾಟ ಆಡಿಸಿದೆ.
ಬಿಜೆಪಿ ಶಾಸಕರು, ನೂತನ ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಯಕ್ಷಗಾನ ವೀಕ್ಷಣೆಗೆ ಆಗಮಿಸಿದ್ದರು. ಕಟೀಲು ದೇವಿಗೆ ಯಕ್ಷಗಾನ ಸೇವೆಯೂ ಪೂಜೆ ಇದ್ದಂತೆ. ಹಾಗಾಗಿ ಕಲಾವಿದರ ಮೂಲಕ ದೇವಿಯ ಕತೆಯನ್ನು ಆಡಿಸುವುದೇ ದೊಡ್ಡ ಸೇವೆ ಎನ್ನುವ ಪ್ರತೀತಿ ಇದೆ.
ಇದೀಗ ಮೋದಿ ಗೆಲುವಿಗಾಗಿ ಹರಕೆ ಹೊತ್ತುಕೊಂಡಿದ್ದ ಮೋದಿ ಟೀಂ ಮಂಗಳೂರಿನ ರಥಬೀದಿಯಲ್ಲಿ ಯಕ್ಷಗಾನದ ಹರಕೆ ಸೇವೆ ಸಲ್ಲಿಸಿ ಕೃತಾರ್ಥವಾಗಿದೆ.
ಉಡುಪಿ: ಹಿಂದೆಲ್ಲಾ ಮದುವೆ ಮಂಟಪಕ್ಕೆ ವಧು- ವರರು ಮಾಮೂಲಿಯಾಗಿ ದಿಬ್ಬಣ ಮೂಲಕ ಬರುವ ಸಂಪ್ರದಾಯ ಇತ್ತು. ಆದರೆ ಈಗ ಮದುವೆಗಳೆಲ್ಲಾ ಸಿಕ್ಕಾಪಟ್ಟೆ ಫಾರ್ವರ್ಡಾಗಿದೆ. ಎಲ್ಲವೂ ಫಿಲ್ಮೀ ಸ್ಟೈಲಲ್ಲಿ ನಡೆಯುತ್ತದೆ.
ಉಡುಪಿಯ ಕಿದಿಯೂರು ಹೋಟೆಲ್‍ನಲ್ಲಿ ನಡೆದ ಮದುವೆಯಲ್ಲಿ ಯಕ್ಷಗಾನ ವೇಷಧಾರಿಗಳೊಂದಿಗೆ ಮದುವೆ ಮನೆಗೆ ವಧ- ವರ ಆಗಮನವಾಗಿದೆ. ಮದುವೆಗೆ ವಧು ವೇಷಧಾರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ಉಡುಪಿ ಶೇಷ ಶಯನ ಹಾಲ್ ನ ಮುಂಭಾಗದಲ್ಲಿ ಫೋಟೋಗ್ರಾಫರ್ಸ್ ಶೂಟಿಂಗ್ ಮಾಡುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಡಗು ತಿಟ್ಟು ವೇಷಧಾರಿಗಳ ಜೊತೆ ವಧು ಕುಣಿದರೆ, ವರ ನಾಚಿಕೊಂಡು ವಾಕ್ ಮಾಡಿದ್ದಾನೆ. ಚೆಂಡೆಯ ನಾದಕ್ಕೆ ತಕ್ಕಂತೆ ಶಾಸ್ತ್ರೀಯ ಯಕ್ಷಗಾನದ ಸ್ಟೆಪ್ ಹಾಕಿದ ವಧು ವೇಷಧಾರಿಗಳು ನಾಚುವಂತೆ ಕುಣಿದಿದ್ದಾರೆ.
ಮದುವೆ ದಿಬ್ಬಣ ಸಂದರ್ಭ ಪಲ್ಲಕ್ಕಿ ಮೇಲೆ ಡಾನ್ಸ್ ಗ್ರೂಪ್ ನ ನಡುವೆ ಬರುವ ಟ್ರೆಂಡ್ ಶುರುವಾಗಿದೆ. ಆದರೆ ಯಕ್ಷಗಾನ ವೇಷಧಾರಿಗಳ ಜೊತೆ ಮದುವೆ ದಿಬ್ಬಣ ಬಂದಿರೋದು ಇದೇ ಮೊದಲು. ಕರಾವಳಿಯ ಗಂಡುಕಲೆಯನ್ನು ಈ ರೀತಿ ಬಳಸಿದ್ದಕ್ಕೆ ಕೆಲ ಯಕ್ಷಪ್ರೇಮಿಗಳು ಮೂಗು ಮುರಿದಿದ್ದಾರೆ.
ಮಂಗಳೂರು: ಮಹಾಶಿವರಾತ್ರಿ ಜಾಗರಣೆಯ ಪ್ರಯುಕ್ತ ನಡೆಯುತ್ತಿದ್ದ ಭಜನೆ ಹಾಗೂ ಯಕ್ಷಗಾನವನ್ನು ನಿಲ್ಲಿಸಲು ಒತ್ತಡ ಹೇರಿದ್ದಾರೆ ಅನ್ನೋ ಆರೋಪವೊಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ವಿರುದ್ಧ ಕೇಳಿಬಂದಿದೆ.
ಹೌದು, ಮಂಗಳೂರಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾಗರಣೆಯ ಅಂಗವಾಗಿ ಭಜನೆಗಳು ಹಾಗೂ ಯಕ್ಷಗಾನ ನಡೆಯುತ್ತಿತ್ತು. ಈ ದೇವಸ್ಥಾನದ ಹತ್ತಿರದಲ್ಲೇ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಬಂಗಲೆ ಇದೆ. ಹೀಗಾಗಿ ಕಾರ್ಯಕ್ರಮದಿಂದ ಪೊಲೀಸ್ ಅಧಿಕಾರಿಯ ನಿದ್ದೆಗೆ ಭಂಗವಾಗಿದ್ದು, ಕಾರ್ಯಕ್ರಮ ನಿಲ್ಲಿಸಲು ಒತ್ತಡ ಹೇರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕಾರ್ಯಕ್ರಮದಿಂದ ಕಿರಿಕಿರಿಯಾಗುತ್ತದೆ ಎಂದು ಪೊಲೀಸರು ಒತ್ತಡ ಹಾಕಿದ್ದಾರೆ. ಅಲ್ಲದೆ ಧ್ವನಿವರ್ಧಕ ಸ್ಥಗಿತಗೊಳಿಸಿ ಕಾರ್ಯಕ್ರಮ ನಡೆಸಲು ಸೂಚನೆ ನೀಡಿದ್ದಾರೆ. ನಾಗರಿಕರ ದೂರು ನೆಪದಲ್ಲಿ ಕಾರ್ಯಕ್ರಮ ರದ್ದುಪಡಿಸಲು ಒತ್ತಾಯ ಮಾಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ದೇವಸ್ಥಾನದ ಭಕ್ತರ ನಡುವೆ ಜಟಾಪಟಿ ನಡೆದಿದೆ.
ಮಾಹಿತಿ ಪಡೆದ ಉಸ್ತುವಾರಿ ಸಚಿವ ಯು.ಟಿ.ಖಾದರ್, ಶಾಸಕ ಡಾ.ಭರತ್ ಶೆಟ್ಟಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ಜನಪ್ರತಿನಿಧಿಗಳ ಪ್ರವೇಶದಿಂದ ಜಟಾಪಟಿ ನಿಂತು ಕಾರ್ಯಕ್ರಮ ಮುಂದುವರಿದಿದೆ.
ಮಂಗಳೂರು: ಯಕ್ಷಗಾನದ ಸಂಭಾಷಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹೆಸರು ಉಲ್ಲೇಖಿಸಿ ಸಂಭಾಷಣೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿದ್ದು, ಕಲಾವಿದರನ್ನು ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಂಡ ಪೊಲೀಸರ ವಿರುದ್ಧ ಹಿಂದೂ ಪರ ಸಂಘಟನೆಗಳು ಕಿಡಿಕಾರಿವೆ.
ಛತ್ರಪತಿ ಶಿವಾಜಿ ಮಹಾರಾಜನ ಕಥೆಯುಳ್ಳ ಪ್ರಸಂಗದ ಯಕ್ಷಗಾನ ನಡೆಯುತ್ತಿದ್ದಾಗ ಶಿವಾಜಿಯ ಗುರು ಸಮರ್ಥ ರಾಮದಾಸನ ಪಾತ್ರ ಮಾಡಿದ್ದ ಕಲಾವಿದ ಗಣರಾಜ ಭಟ್ ಬಡೆಕ್ಕಿಲ,”ಭಾರತದ ಸ್ವಚ್ಛತೆಗಾಗಿ ನರೇಂದ್ರನಂತೆ ನೀನು ಕೇಸರಿಯ ತಂಡ ಕಟ್ಟಬೇಕು. ರಾತ್ರಿ ವೇಳೆ ಗೋವುಗಳನ್ನು ಕದ್ದೊಯ್ಯುವ ದುಷ್ಟರನ್ನು ಸದೆಬಡಿಯಲು ಜಾಗರಣ ನಿಲ್ಲುವಂತೆ ತರುಣ ಪಡೆಯನ್ನು ಜಾಗರಣ ವೇದಿಕೆಯ ರೂಪದಲ್ಲಿ ಕಟ್ಟಬೇಕಿದೆ” ಎನ್ನುವ ಉಪದೇಶವನ್ನು ಶಿವಾಜಿಗೆ ಹೇಳುತ್ತಾರೆ. ಇದನ್ನು ಓದಿ: ಇವನರ್ವ, ಇವನರ್ವ ಎಂದು ಡೈಲಾಗ್ ಹೇಳಿದ್ದಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಅಮಾನತು!
ಕಥೆಯ ರೂಪವನ್ನು ಈಗಿನ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಬದಲಿಸಿಕೊಂಡು ಪ್ರಧಾನಿ ಮತ್ತು ಹಿಂದೂ ಸಂಘಟನೆಯ ಹೆಸರು ಹೇಳಿದ್ದು ಬಿಜೆಪಿ ವಿರೋಧಿಗಳ ಕಣ್ಣು ಕೆಂಪಾಗಿಸಿದ್ದು ಕಾಂಗ್ರೆಸ್ಸಿಗರಿಂದ ಆಕ್ಷೇಪ ಕೇಳಿಬಂದಿದೆ. ಇದರಿಂದಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ರಮಾನಾಥ ರೈ ದಕ್ಷಿಣ ಕನ್ನಡ ಎಸ್‍ಪಿಗೆ ಫೋನ್ ಮಾಡಿ ಕಲಾವಿದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ ಲಿಖಿತವಾಗಿ ಯಾವುದೇ ದೂರು ಸಲ್ಲಿಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಪುತ್ತೂರು ಠಾಣೆ ಪೊಲೀಸರು ಕಲಾವಿದ ಗಣರಾಜ ಭಟ್ಟರನ್ನು ಠಾಣೆಗೆ ಕರೆಸಿ, ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ಈ ಯಕ್ಷಗಾನ ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ದೇಂತಡ್ಕದಲ್ಲಿ ನಡೆದಿತ್ತು. ಇದೀಗ ರಮಾನಾಥ್ ರೈ ಅವರ ಫೋನ್ ಕರೆಗೆ ಪೊಲೀಸರು ಕಲಾವಿದನನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದು ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ: ಏರು ಮದ್ದಳೆಯ ಮಾಂತ್ರಿಕನಿಗೆ ವಯಸ್ಸು 99 ಆದ್ರೂ 19 ರ ಉತ್ಸಾಹ. ಮದ್ದಳೆಯ ನಾದಕ್ಕೆ ಮಂತ್ರಮುಗ್ಧರಾದ್ರು ನಟಿ ಜಯಮಾಲಾ. ವಿದೇಶಕ್ಕೆ ಯಕ್ಷಗಾನ ಕೊಂಡೊಯ್ದ ಗೋಪಾಲರಾಯರಿಗೆ ಮನೆಯಲ್ಲೇ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತ ರ ಒಡನಾಡಿ, ಯಕ್ಷಗಾನವನ್ನು ಪಾಶ್ಚಾತ್ಯ ದೇಶಗಳಿಗೆ ಯಕ್ಷಗಾನವನ್ನು ಕೊಂಡೊಯ್ದ ಹಿರಿಯಡ್ಕ ಗೋಪಾಲರಾಯರಿಗೆ ಈ ಬಾರಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಅನಾರೋಗ್ಯದಿಂದಿರುವ ಗೋಪಾಲರಾಯರು ಬೆಂಗಳೂರಿಗೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರಲಿಲ್ಲ. ಹಿರಿಯಡ್ಕದಲ್ಲಿರುವ ತನ್ನ ಮನೆಗೆ ಬಂದು ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಚಿವೆ ಜಯಮಾಲ ಮುಂದೆ ಕೆಲನಿಮಿಷಗಳ ಕಾಲ ಮದ್ದಳೆ ನುಡಿಸಿ ಮಂತ್ರಮುಗ್ದಗೊಳಿಸಿದರು. ತಾನೇ ಅನ್ವೇಷಿಸಿದ ಏರು ಮದ್ದಳೆಯಿಂದ ನಾದ ಹೊರಹೊಮ್ಮಿಸುತ್ತಿದ್ದಂತೆ, ಜಯಮಾಲಾ ಅಲ್ಲೇ ಕುಳಿತುಬಿಟ್ಟರು.
ಹಿರಿಯ ತಾಳಮದ್ದಳೆ ಕಲಾವಿದ, ಯಕ್ಷಗಾನದ ಇತಿಹಾಸದಲ್ಲಿ ಉಡುಪಿಯ ಹಿರಿಯಡ್ಕ ಗೋಪಾಲ ರಾಯರದ್ದು ದೊಡ್ಡ ಹೆಸರು. ಮೊದಲಬಾರಿಗೆ ಯಕ್ಷಗಾನವನ್ನು ವಿದೇಶಕ್ಕೆ ತೆರಳಿ ಕಲಿಸಿ ಬಂದ ಗೋಪಾಲರಾಯರು ಮೇರು ಕಲಾವಿದ. ಇಳಿವಯಸ್ಸಿನಲ್ಲೂ ಅವರ ಯಕ್ಷ ಉತ್ಸಾಹ ಕಳೆದುಕೊಂಡಿಲ್ಲ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಜಯಮಾಲ ಚಪ್ಪಾಳೆ ಹೊಡೆದು ತಾಳ ಹಾಕುತ್ತಿದ್ದಂತೆ 99 ರ ಹರೆಯದ ಗೋಪಾಲರಾಯರು ನಿರಂತರ ಮದ್ದಳೆ ನುಡಿಸಿ ಅಚ್ಚರಿಗೊಳಿಸಿದರು.
ಅಮೇರಿಕಾದ ರಂಗತಜ್ಞೆ ಮಾರ್ಥಾ ಆಸ್ಟಿನ್ ಸೇರಿದಂತೆ ಹಲವಾರು ಕಲಾವಿದರಿಗೆ ಗೋಪಾಲರಾಯರು ಮಹಾಗುರುಗಳಾಗಿದ್ದಾರೆ. ಸಾವಿರಾರು ಮಂದಿ ಮದ್ದಳೆ ಕಲಿತು ಜೀವನ ರೂಪಿಸಿಕೊಂಡವರಿದ್ದಾರೆ.