Tag: Yakshagana

  • ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ ಅಸ್ತಂಗತ

    ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ ಅಸ್ತಂಗತ

    ಉಡುಪಿ: ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ ಇಂದು ಒಂತಿಬೆಟ್ಟುವಿನಲ್ಲಿ ನಿಧನರಾಗಿದ್ದಾರೆ.

    ಹಿರಿಯಡ್ಕ ಮೂಲದವರು ಗೋಪಾಲ್ ರಾವ್ ಅವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿದ್ದರು. ಏರು ಮದ್ದಳೆಯ ಅನ್ವೇಷಕ ಎಂಬ ಖ್ಯಾತಿಯ ಕಲಾವಿದ ಎಂದು ಚಿರಪರಿಚಿತರಾಗಿದ್ದರು. ದೇಶ, ವಿದೇಶಗಳಲ್ಲೂ ಗೋಪಾಲ್ ರಾವ್ ಅವರು ಯಕ್ಷಗಾನ ಪ್ರದರ್ಶನ ನೀಡಿದ್ದರು.

    1919 ಡಿಸೆಂಬರ್ 15ರಂದು ಹಿರಿಯಡ್ಕದಲ್ಲಿ ಗೋಪಾಲ್ ರಾವ್ ಅವರು ಜನಿಸಿದ್ದರು. ಮೇಳದಲ್ಲಿ ಮದ್ದಳೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಗೋಪಾಲ್ ರಾವ್ ಅವರು ಯಕ್ಷಗಾನದ ಬಡಗುತಿಟ್ಟಿನಲ್ಲಿ ಏರು ಮದ್ದಳೆ ಬಾರಿಸುವದರಲ್ಲಿ ಖ್ಯಾತನಾಮರಾಗಿದ್ದರು. ಹಿರಿಯಡ್ಕ್ ಗೋಪಾಲರಾವ್ ಕುರಿತು ಡಾ.ಕೆ.ಎಂ.ರಾಘವ್ ನಂಬಿಯಾರ್ ಅವರು ‘ರಂಗ ವಿದ್ಯೆಯ ಹೊಲಬು’ ಎಂಬ ಪುಸ್ತಕ ಬರೆದಿದ್ದಾರೆ.

    ಕನ್ನಡ ರಾಜ್ಯೋತ್ಸವ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೇರಿದಂತೆ ಹಲವು ಪ್ರಶಸ್ತಿ ಇವರನ್ನ ಅರಸಿ ಬಂದಿದ್ದವು. ಹಿರಿಯಡ್ಕ ಗೋಪಾಲ್ ರಾವ್ ಅವರಿಗೆ 101 ವರ್ಷ ವಯಸ್ಸಾಗಿತ್ತು. ಗೋಪಾಲರಾವ್ ಅವರ ಅಂತ್ಯಕ್ರಿಯೆ ಭಾನುವಾರ ಹಿರಿಯಡ್ಕದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  • ನವೆಂಬರ್ ಅಂತ್ಯಕ್ಕೆ ತಿರುಗಾಟಕ್ಕೆ ಸಿದ್ಧತೆ ಮಾಡಿ- ಯಕ್ಷಗಾನ ಮೇಳಗಳಿಗೆ ಕೋಟ ಸೂಚನೆ

    ನವೆಂಬರ್ ಅಂತ್ಯಕ್ಕೆ ತಿರುಗಾಟಕ್ಕೆ ಸಿದ್ಧತೆ ಮಾಡಿ- ಯಕ್ಷಗಾನ ಮೇಳಗಳಿಗೆ ಕೋಟ ಸೂಚನೆ

    ಮಂಗಳೂರು: ಯಕ್ಷಗಾನ ಮೇಳಗಳು ಕೋವಿಡ್ 19 ನಿಯಮಗಳನ್ನು ಅಳವಡಿಸಿಕೊಂಡು ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು, ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ. ಕೊರೊನಾದಿಂದಾಗಿ ಯಕ್ಷಗಾನಗಳು ನಡೆಯದೆ ಕಲಾವಿದರು ಸಂಕಷ್ಟದಿಂದ ಇದ್ದಾರೆ. ಹೀಗಾಗಿ ಯಕ್ಷಗಾನ ಮೇಳಗಳು ಕೋವಿಡ್ 19 ನಿಯಮಗಳನ್ನು ಅಳವಡಿಸಿಕೊಂಡು ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಅಧಿಕಾರಿಗಳು, ಕಲಾವಿದರು ಹಾಗೂ ಮೇಳಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

    ಕಲಾವಿದರ ಪರವಾಗಿ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಉಜಿರೆ ಅಶೋಕ್ ಭಟ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಸ್ಯಕಲಾವಿದ ಸೀತಾರಾಮ್ ಕುಮಾರ್ ಮಾತನಾಡುತ್ತಾ, ವೃತ್ತಿಪರ ಯಕ್ಷಗಾನ ಮೇಳಗಳು ನಿಂತಲ್ಲಿ ಕಲಾವಿದರ ಬದುಕು ದುಸ್ತರವಾಗುವುದು. ಈಗಾಗಲೇ ಕೋವಿಡ್ 19 ನಿಂದಾಗಿ ನೊಂದ ಕಲಾವಿದರ ಕುಟುಂಬದ ನೆರವಿಗೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

    ಕಟೀಲು ದೇವಳದ ಆಡಳಿತ ಮೊಕ್ತೇಸರ ಶ್ರೀ ಹರಿ ಅಸ್ರಣ್ಣ ಮಾತನಾಡಿ, ಕಟೀಲಿನ ಆರು ಮೇಳಗಳು ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಬಪ್ಪನಾಡು, ಸಸಿಹಿತ್ಲು ಮೇಳಗಳ ಸಹಿತ ಅನೇಕರು ಕೊರೊನಾ ಸಂದರ್ಭದಲ್ಲಿ ಕಲಾವಿದರು ಮತ್ತು ವೃತ್ತಿಪರ ಮೇಳಗಳ ಸಮಸ್ಯೆಗಳನ್ನು ವಿವರಿಸಿದರು.

    ಈಗಿರುವ ಮೇಳಗಳಲ್ಲಿ ಯಾವುದಾದರೂ ನಿಲುಗಡೆಯಾದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿಯ ಸಂಪನ್ಮೂಲವಿರುವ ದೇವಳದ ಮೂಲಕ ಹೆಚ್ಚುವರಿ ಮೇಳಗಳನ್ನು ರಚಿಸಲು ಇಲಾಖೆ ಪರಿಶೀಲಿಸಿ ಬೇಕೆಂಬ ಮನವಿ ಸಭೆಯಲ್ಲಿ ಮೂಡಿಬಂತು.

    ಸರ್ಕಾರದ ಪರವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಇಂತಹ ಪರಿಸ್ಥಿತಿಯಲ್ಲಿ ಯಕ್ಷಗಾನ ಮೇಳಗಳ ಕೊನೆಯ ಕಲಾವಿದನಿಗೂ ತೊಂದರೆ ಆಗದಂತೆ ಸರ್ಕಾರ ಕಲಾವಿದರ ಬೆಂಬಲಕ್ಕೆ ನಿಲ್ಲಲಿದೆ ಎಂದರು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.

  • ಹಿರಿಯ ಯಕ್ಷಗಾನ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ನಿಧನ

    ಹಿರಿಯ ಯಕ್ಷಗಾನ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ನಿಧನ

    ಮಂಗಳೂರು: ಅಸೌಖ್ಯದಿಂದ ಬಳಲುತ್ತಿದ್ದ ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

    1944ರಲ್ಲಿ ಪ್ರಸಿದ್ಧ ಚಕ್ರಕೋಡಿ ಮನೆತನದ ತೆಂಕಬೈಲು ಕೃಷ್ಣ ಶಾಸ್ತ್ರಿ ಸಾವಿತ್ರಿಯಮ್ಮ ದಂಪತಿಯ ಪುತ್ರರಾಗಿ ಜನಿಸಿದ ತಿರುಮಲೇಶ್ವರ ಶಾಸ್ತ್ರಿಯವರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ತೆಂಕಬೈಲು ಎಂಬಲ್ಲಿ ನೆಲೆಸಿದ್ದರು.

    ಹವ್ಯಾಸಿ ಭಾಗವತರಾಗಿಯೂ, ಕೆಲ ವರ್ಷ ವೃತ್ತಿ ಮೇಳಗಳಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೈರಂಗಳ, ಬಪ್ಪನಾಡು, ಮಲ್ಲ, ಮಧೂರು, ಇರಾ, ಕುಂಟಾರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಪೆರ್ಲದ ಶ್ರೀ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ ಹಿಮ್ಮೇಳ ಅಧ್ಯಾಪಕರಾಗಿ ಹಲವಾರು ಶಿಷ್ಯರನ್ನು ಹೊಂದಿದ್ದರು.

    ತನ್ನ ವಿಶಿಷ್ಟ ಶೈಲಿಯ ಹಾಡುಗಾರಿಕೆಯಿಂದ ಅಭಿಮಾನಿಗಳನ್ನು ಗೆದ್ದಿದ್ದ ಅವರು ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಉಡುಪಿ ಯಕ್ಷಗಾನ ಕಲಾರಂಗ, ದ.ಕ.ಜಿಲ್ಲಾ ರಾಜ್ಯೋತ್ಸವ, ಕುರಿಯ ವಿಟ್ಠಲ ಶಾಸ್ತ್ರಿ, , ಪದ್ಯಾಣ, ಪಟ್ಟಾಜೆ, ದಿವಾಣ ಪ್ರಶಸ್ತಿಗಳಲ್ಲದೆ ಹಲವು ಪುರಸ್ಕಾರಗಳನ್ನು ಪಡೆದಿದ್ದರು.

    ತಿರುಮಲೇಶ್ವರ ಶಾಸ್ತ್ರಿ ಅವರು ಪುತ್ರ-ಹವ್ಯಾಸಿ ಭಾಗವತ-ಶಿಕ್ಷಕ ಮುರಳೀಕೃಷ್ಣ ಶಾಸ್ತ್ರಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

  • ಆನ್‍ಲೈನಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ: ಹೊಸ ಪ್ರಯೋಗಕ್ಕೆ ಪಟ್ಲ ಫೌಂಡೇಶನ್ ನಾಂದಿ

    ಆನ್‍ಲೈನಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ: ಹೊಸ ಪ್ರಯೋಗಕ್ಕೆ ಪಟ್ಲ ಫೌಂಡೇಶನ್ ನಾಂದಿ

    ಮಂಗಳೂರು: ಲಾಕ್‍ಡೌನ್ ನಡುವೆಯೂ ಕರಾವಳಿಯಲ್ಲಿ ಯಕ್ಷಗಾನ ಮತ್ತೆ ಶುರುವಾಗಿದೆ ಎಂಬ ಸಂತಸದ ಸುದ್ದಿಯೊಂದು ಸಿಕ್ಕಿದೆ. ಆದರೆ ಪ್ರೇಕ್ಷಕರು ಬರುವಂತಿಲ್ಲ ಬದಲಾಗಿ ಆನ್‍ಲೈನಿನಲ್ಲಿ ವೀಕ್ಷಿಸಬಹುದಾಗಿದೆ.

    ಕರಾವಳಿ ಉದ್ದಗಲದಲ್ಲಿ ಚೆಂಡೆ ಮದ್ದಳೆ ಚಕ್ರತಾಳದ ಸದ್ದು, ಭಾಗವತರ ಸುಶ್ರಾವ್ಯ ಪದ, ಕಲಾವಿದರ ಕುಣಿತ ಸಂಭಾಷಣೆ ಇವುಗಳಿಲ್ಲದೇ ಸುಮಾರು ಎರಡು ತಿಂಗಳಾಯ್ತು. ಯಾವುದೇ ಗಲಾಟೆ, ಕರ್ಫ್ಯೂ ಇದ್ದರೂ ಯಕ್ಷಗಾನಕ್ಕೆ ತಡೆ ಇರುತ್ತಿರಲಿಲ್ಲ. ಆದರೆ ಕೊರೊನಾ ಮಾಹಾಮಾರಿಯಿಂದಾಗಿ ಇದೇ ಮೊದಲ ಬಾರಿಗೆ ಯಕ್ಷಗಾನ ನಿಂತಿದ್ದು, ಯಕ್ಷಗಾನ ಪ್ರಿಯರಿಗೆ ಬಾರಿ ನಿರಾಸೆಯಾಗಿದೆ.

    ಈಗ ಖ್ಯಾತ ಯಕ್ಷಗಾನ ಭಾಗವತ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಮುಂದಾಳತ್ವದ ಯಕ್ಷದ್ರುವ ಪಟ್ಲ ಫೌಂಡೇಷನ್ ಆನ್‍ಲೈನಿನಲ್ಲಿ ಸಪ್ತಾಹ ಮಾಡಲು ಮುಂದಾಗಿದೆ. ತೆಂಕು ಹಾಗೂ ಬಡಗು ತಿಟ್ಟುವಿನ ಖ್ಯಾತ 40 ಕಲಾವಿದರನ್ನು ಒಳಗೊಂಡ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮೇ 25 ರಂದು ಆರಂಭವಾಗಿ 31ರವರೆಗೆ ನಡೆಯಲಿದೆ.

    ಸಂಜೆ ನಾಲ್ಕರಿಂದ 6 ಗಂಟೆಯವರೆಗೆ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಯಕ್ಷಗಾನ ತಾಳಮದ್ದಳೆ ಯೂಟ್ಯೂಬ್/ ಫೇಸ್‍ಬುಕ್ ನಲ್ಲಿ ಲೈವ್ ಆಗಿ ಪ್ರಸಾರಗೊಳ್ಳಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಆಯಾದಿನದ ಕಲಾವಿದರು ಮಾತ್ರ ಪಾಲ್ಗೊಳ್ಳುತ್ತಾರೆ.

    ಈ ತಾಳಮದ್ದಳೆ ಸಪ್ತಾಹದಲ್ಲಿ ಹೆಸರಾಂತ ಕಲಾವಿದರು ಭಾಗವಹಿಸುವ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಾಕಷ್ಟು ಪ್ರಚಾರ ಪಡೆದುಕೊಂಡು ಯಶಸ್ಸಿನ ಮುನ್ಸೂಚನೆ ಸಿಕ್ಕಿದೆ.

    ಯಕ್ಷಗಾನ ಕ್ಷೇತ್ರದಲ್ಲಿ ಇದು ಹೊಸ ಆನ್ಲೈನ್ ತಾಳಮದ್ದಳೆ ಸಪ್ತಾಹ ಹೊಸ ಪ್ರಯೋಗವಾಗಿದ್ದು. ಇಷ್ಟು ದಿನ ಹಳೆಯ ಯಕ್ಷಗಾನ ವಿಡಿಯೋ ತುಣುಕುಗಳನ್ನು ಯೂಟ್ಯೂಬ್ ಹಾಗೂ ಫೇಸ್‍ಬುಕ್ ಗಳಲ್ಲಿ ವೀಕ್ಷಿಸುತ್ತಿದ್ದರು. ಆದರೆ ಈಗ ಯಕ್ಷಗಾನ ಪ್ರೇಕ್ಷಕರಿಗೆ ಇನ್ನು ಮುಂದೆ ಲೈವ್ ಆಗಿ ತಾಳಮದ್ದಳೆ ವೀಕ್ಷಣೆ ಮಾಡಬಹುದು.

  • ಕೊಲ್ಲೂರು ಮೂಕಾಂಬಿಕಾದಿಂದ 18 ಸಾವಿರ ಯಕ್ಷಗಾನ ಕಲಾವಿದರಿಗೆ ಸಹಾಯ

    ಕೊಲ್ಲೂರು ಮೂಕಾಂಬಿಕಾದಿಂದ 18 ಸಾವಿರ ಯಕ್ಷಗಾನ ಕಲಾವಿದರಿಗೆ ಸಹಾಯ

    – 20 ಲಕ್ಷ ಮೌಲ್ಯದ ಆಹಾರ ಕಿಟ್ ವಿತರಣೆ

    ಉಡುಪಿ: ಕೊರೊನಾ ಲಾಕ್ ಡೌನ್ ಸಂದರ್ಭ ಯಕ್ಷಗಾನ ಕಲಾವಿದರು ಸೇವಾ ಆಟ, ಸಾರ್ವಜನಿಕ ಪ್ರದರ್ಶನ ಇಲ್ಲದೆ ಕಂಗಾಲಾಗಿದ್ದಾರೆ. ಸಂಕಷ್ಟದಲ್ಲಿರುವ ನಾಲ್ಕು ಜಿಲ್ಲೆಯ ಕಲಾವಿದರ ಸಹಾಯಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮುಂದೆ ಬಂದಿದೆ.

    ಕೊರೊನಾ ಆವರಿಸಿದ ನಂತರ ಯಕ್ಷಗಾನ ಮೇಳಗಳ ತಿರುಗಾಟವೆಲ್ಲ ರದ್ದಾಗಿದೆ. ಕರಾವಳಿ ಭಾಗದಲ್ಲಂತೂ ಯಕ್ಷಗಾನ ಕಲಾವಿದರಿಗೆ ಸೆಲೆಬ್ರಿಟಿ ಸ್ಥಾನಮಾನವಿದೆ. ಕಷ್ಟಕಾಲದಲ್ಲಿ ಬೇರೆಯವರಿಂದ ಸಹಾಯ ಯಾಚಿಸಲು ಕಲಾವಿದರಿಗೆ ಸ್ವಾಭಿಮಾನ ಬಿಡುವುದಿಲ್ಲ. ಕೊನೆಗೂ ಯಕ್ಷಗಾನ ಕಲಾವಿದರ ಕಷ್ಟ ಸರ್ಕಾರದ ಅರಿವಿಗೆ ಬಂದಿದೆ. ತಿರುಗಾಟ ಇಲ್ಲದೆ ನಲುಗಿ ಹೋಗಿರುವ ಕಲಾವಿದರಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಹಾರದ ಕಿಟ್ ವಿತರಿಸಿದ್ದಾರೆ.

    ಉಡುಪಿ ಯಕ್ಷಗಾನ ಕಲಾರಂಗದ ಮುತುವರ್ಜಿಯಿಂದ ವಿವಿಧ ಯಕ್ಷಗಾನ ಮೇಳಗಳಲ್ಲಿ ದುಡಿಯುವ 1,800 ಕಲಾವಿದರನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೈ ಹಿಡಿದಿದೆ. ದೇಗುಲದ ವತಿಯಿಂದ ಯಕ್ಷಗಾನ ಕಲಾವಿದರಿಗೆ ದಿನಸಿ ಕಿಟ್ ಗಳ ವಿತರಣೆ ಮಾಡಲಾಯ್ತು. ಸುಮಾರು 20 ಲಕ್ಷ ಮೌಲ್ಯದ ಆಹಾರದ ಕಿಟ್ ಗಳನ್ನು ನೀಡಲಾಯ್ತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಹಾಯ ಹಸ್ತಕ್ಕೆ ಚಾಲನೆ ನೀಡಿದರು. ದ.ಕ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗದ ಕಲಾವಿದರಿಗೆ ನೆರವು ನೀಡಲಾಗಿದೆ. ಉಡುಪಿಯ ಯಕ್ಷಗಾನ ಕಲಾರಂಗಸಂಸ್ಥೆಯ ಸಹಕಾರ ದಲ್ಲಿ ಕಿಟ್ ವಿತರಣೆ ಮಾಡಲಾಯ್ತು. ಕಿಟ್ ಹಂಚುವಾಗಲೂ ವಿಶೇಷ ಕ್ರಮ ಅನುಸರಿಸಲಾಗಿದೆ.

    ಕಲಾವಿದರನ್ನು ಕರೆಸಿಕೊಂಡು ಕಿಟ್ ನೀಡಿ ಅವರನ್ನು ಚಿಕ್ಕವರನ್ನಾಗಿಸದೆ, ಅವರಿದ್ದಲ್ಲಿಗೇ ಹೋಗಿ ಆಯಾ ಊರುಗಳಲ್ಲಿ ಕಿಟ್ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಮಾತನಾಡಿದ ಸಚಿವರು, ಯಕ್ಷಗಾನ ಕ್ಷೇತ್ರದಲ್ಲಿ ಸಾವಿರಾರು ಕಲಾವಿದರು ಇನ್ನೂ ಬಡತನದಲ್ಲಿದ್ದಾರೆ. ಯಕ್ಷಗಾನ ಸೇವೆ ನಡೆದರೆ ಮಾತ್ರ ಅವರ ಹೊಟ್ಟೆ ತುಂಬುವ ಪರಿಸ್ಥಿತಿ ಇದೆ. ಯಕ್ಷಗಾನದಲ್ಲಿ ಕಲಾವಿದರು ಕಷ್ಟದಲ್ಲಿರುವಾಗ ಅವರ ಕೈ ಹಿಡಿಯುವುದು ನಮ್ಮ ಕರ್ತವ್ಯ ಎಂದರು.

    ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಗೆ ಕಿಟ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಸಹಾಯಕ ಇ ಒ ಕೃಷ್ಣಮೂರ್ತಿ, ಮೇಳಗಳ ಯಜಮಾನ ಪಿ ಕಿಶನ್ ಹೆಗ್ಡೆ, ಕಲಾರಂಗದ ಪಧಿಕಾರಿಗಳಾದ ಎಸ್ ವಿ ಭಟ್, ಗಂಗಾಧರ ರಾವ್, ನಾರಾಯಣ ಹೆಗಡೆ, ಗಣೇಶ್ ಬ್ರಹ್ಮಾವರ, ಅಜಿತ್ ರಾವ್, ಎಚ್ ಎನ್ ಶೃಂಗೇಶ್ವರ, ರಾಜೇಶ್ ನಾವಡ, ಹೆಚ್ ಎನ್ ವೆಂಕಟೇಶ್, ಕಿಶೋರ್ ಆಚಾರ್ಯ, ಸನಕ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

    ಈ ಮೂಲಕ ಕಲಾವಿದರಿಗೆ ನೆರವು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಸಚಿವರಿಗೆ, ದೇವಳದ ಆಡಳಿತ ಮಂಡಳಿಗೆ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕೃತಜ್ಞತೆ ಅರ್ಪಿಸಿದರು.

  • ಕೊರೊನಾ ಭೀತಿ- ಇಂದಿನಿಂದ ಕರಾವಳಿಯಲ್ಲಿ ಯಕ್ಷಗಾನ ಬಂದ್

    ಕೊರೊನಾ ಭೀತಿ- ಇಂದಿನಿಂದ ಕರಾವಳಿಯಲ್ಲಿ ಯಕ್ಷಗಾನ ಬಂದ್

    ಮಂಗಳೂರು: ಕೊರೊನಾ ವೈರಸ್ ಭೀತಿ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೂ ತಟ್ಟಿದ್ದು, ಇಂದಿನಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ಸ್ಥಗಿತವಾಗಲಿದೆ.

    ಜಿಲ್ಲಾಡಳಿತದ ಆದೇಶದ ಮೇರೆಗೆ ಯಕ್ಷಗಾನ ಪ್ರದರ್ಶನಗಳು ಸ್ಥಗಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟೀಲು ಯಕ್ಷಗಾನ ಮೇಳದ ತಿರುಗಾಟವೂ ಬಂದ್ ಆಗಲಿದೆ. ಇಂದಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಯಕ್ಷಗಾನಕ್ಕೆ ತಡೆ ಬಿದ್ದಿದೆ. ಆದರೆ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇರುವ ಹಿನ್ನಲೆಯಲ್ಲಿ ಕಟೀಲು ದೇವಸ್ಥಾನದ ಮುಂಭಾಗ ಒಂದು ಗಂಟೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 7 ಗಂಟೆಯಿಂದ 8 ಗಂಟೆ ತನಕ ಪ್ರದರ್ಶನ ನಡೆಯಲಿದೆ ಎಂದು ಕಟೀಲು ಯಕ್ಷಗಾನ ಮೇಳ ಆಡಳಿತ ಮಂಡಳಿ ಹಾಗೂ ದೇವಳದ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿದ್ದಾರೆ.

    ಕೊರೊನಾ ಮಹಾಮಾರಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಕಟೀಲು ಯಕ್ಷಗಾನ ಮೇಳದ ತಿರುಗಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇಂದಿನಿಂದ ಕಟೀಲು ಆರು ಮೇಳಗಳ ಯಕ್ಷಗಾನ ಪ್ರದರ್ಶನ ಜಿಲ್ಲಾಧಿಕಾರಿಗಳ ಮುಂದಿನ ಆದೇಶದ ವರೆಗೆ ಇರುವುದಿಲ್ಲ. ಆದರೆ ಮೇಳ ಹೊರಟ ಮೇಲೆ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇದೆ. ಇದೂ ಕೂಡ ದೇವರ ಪೂಜೆ ಎಂಬುದು ಇಲ್ಲಿಯ ನಂಬಿಕೆ. ಹೀಗಾಗಿ ಮೇಳದ ದೇವರಿಗೆ ಅರ್ಚಕರು ತ್ರಿಕಾಲಪೂಜೆ ಮಾಡುತ್ತಾರೆ ಎಂದು ಮಂಡಳಿ ತಿಳಿಸಿದೆ.

    ರಂಗಸ್ಥಳದಲ್ಲಿ ಕಟ್ಟೇಶ (ಬಾಲಗೋಪಾಲ) ವೇಷದವರು ಕುಣಿದು ಆರತಿ ಮಾಡುತ್ತಾರೆ. ಅಲ್ಲಿಯವರೆಗಿನ ವ್ಯವಸ್ಥೆ ದೇವರ ಪೂಜೆ ಎಂಬ ನಂಬಿಕೆ ಇದೆ. ಅದೇ ರೀತಿ ಮುಖ್ಯ ಸ್ತ್ರೀ ವೇಷದ ನಂತರ ಯಕ್ಷಗಾನ ಪ್ರದರ್ಶನ ಎನ್ನುವ ಕಲ್ಪನೆಯೂ ಇದೆ. ಈ ಹಿನ್ನಲೆಯಲ್ಲಿ ದೇವರ ಪೂಜಾರೂಪವಾದ ಯಕ್ಷಗಾನವನ್ನು ಮಾತ್ರ ಕಟೀಲು ರಥಬೀದಿಯಲ್ಲಿ ಇಂದಿನಿಂದ ನಡೆಸಲಾಗುವುದು ಎಂದು ಮಾಹಿತಿ ನೀಡಿದೆ.

    ಸಂಜೆ ಏಳು ಗಂಟೆಗೆ ಆರೂ ಮೇಳಗಳ ದೇವರ ಪೂಜೆಯನ್ನು ಬಿಡಾರದಲ್ಲಿಯೇ ನೆರವೇರಿಸಿ, ಅಲ್ಲಿಂದ ರಂಗಸ್ಥಳಕ್ಕೆ ಕುಕ್ಕೇಶ(ಕೋಡಂಗಿ) ಬರಲಿದೆ. ಸೀಮಿತ ಹಾಡುಗಳ ನಂತರ ಕುಕ್ಕೇಶ(ಬಾಲಗೋಪಾಲ) ಬಂದು ಕುಣಿದಾಗ ಆರೂ ಮೇಳದ ದೇವರು ರಂಗಸ್ಥಳಕ್ಕೆ ಬರಲಿದ್ದಾರೆ ದೇವರ ಪೂಜೆ ಬಾಲಗೋಪಾಲ ವೇಷದವರು ನೆರವೇರಿಸಿದ ನಂತರ ಮೇಳದ ದೇವರ ಪೂಜಾವಿಧಿಗಳು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಿಕವಾಗಿ ಮುಗಿಯುತ್ತದೆ. ಅಲ್ಲಿಗೆ ಯಕ್ಷಗಾನ ಮುಗಿಸಿ ದೇವರಿಗೆ ಬಿಡಾರದಲ್ಲಿ ಪುನಃ ಅರ್ಚಕರು ಪೂಜೆ ಮಾಡಿದ ನಂತರ ಇಡೀ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದೆ.

    ದೇವಳದ ಮುಂಭಾಗ ಸುಮಾರು ಅರ್ಧ ಗಂಟೆ ಮಾತ್ರ ಈ ವಿಧಿ ನೆರವೇರಲಿದೆ. ದ.ಕ ಜಿಲ್ಲಾಡಳಿತದ ಸೂಚನೆ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಭಕ್ತಾದಿಗಳ ಭಾಗವಹಿಸುವಿಕೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

  • ಯಕ್ಷಗಾನದ ರಂಗಸ್ಥಳಕ್ಕೂ ಕೊರೊನಾ ಪ್ರವೇಶ- ಹಾಸ್ಯಗಾರನಿಂದ ಜಾಗೃತಿ

    ಯಕ್ಷಗಾನದ ರಂಗಸ್ಥಳಕ್ಕೂ ಕೊರೊನಾ ಪ್ರವೇಶ- ಹಾಸ್ಯಗಾರನಿಂದ ಜಾಗೃತಿ

    ಉಡುಪಿ: ಎಲ್ಲಿ ನೋಡಿದರೂ ಕೊರೊನಾ ವೈರಸಿದ್ದೇ ಭೀತಿ. ಸರ್ಕಾರ ಕೂಡ ಅಷ್ಟೇ ಜನಜಾಗೃತಿ ಮೂಡಿಸುತ್ತಿದೆ. ಆದರೆ ಉಡುಪಿಯ ಕಾರ್ಕಳದ ಪಳ್ಳಿ ಗ್ರಾಮದಲ್ಲಿ ನಡೆದ ತುಳು ಯಕ್ಷಗಾನದಲ್ಲೂ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ.

    ಸಸಿಹಿತ್ಲು ಮೇಳದ ಪ್ರಸಂಗದಲ್ಲಿ ಬಂದ ಹಾಸ್ಯ ಪಾತ್ರಧಾರಿ ಕೊರೊನಾ ಬಗ್ಗೆ ಚರ್ಚೆ ನಡೆಸಿ, ಜಾಗೃತಿ ಮೂಡಿಸಿದ್ದಾರೆ. ಉಡುಪಿಯ ನಿಂಜೂರಿನಲ್ಲಿ ಕಳೆದ ರಾತ್ರಿ ತುಳು ಯಕ್ಷಗಾನ ಪ್ರದರ್ಶನ ನಡೆಯಿತು. ಈ ವೇಳೆ ಪ್ರಸಂಗದ ಹಾಸ್ಯ ಪಾತ್ರದಾರಿ ಪ್ರಸನ್ನ ಶೆಟ್ಟಿ ಬೈಲೂರು ಅವರು ಹಾಸ್ಯಗಾರನಾಗಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪ್ರವೇಶ ಮಾಡಿದ್ದಾರೆ. ಈ ವೇಳೆ ಹಾಸ್ಯ ಮಯವಾಗಿಯೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

    ಮೊದಲು ಭಾಗವತರಿಗೆ ಕೆಮ್ಮು, ಶೀತ ಇದೆಯೇ ಎಂದು ಕೇಳಿದ ಪಾತ್ರಧಾರಿ ಈಗೆಲ್ಲಾ ಮುಖಕ್ಕೆ ಅಡ್ಡ ಪಟ್ಟಿ ಧರಿಸದೆ ಎಲ್ಲೂ ಹೋಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಕೊರೊನಾ ವೈರಸ್ ಇಂಗ್ಲಿಷ್ ಶಬ್ದವಾದ ಕಾರಣ, ಯಕ್ಷಗಾನದಲ್ಲಿ ಈ ಶಬ್ದ ಬಳಕೆಗೆ ಅವಕಾಶವಿಲ್ಲದೆ, ಕೊರಂಬು ಬೈರಾಸ್ ಎಂದು ಹಾಸ್ಯದ ಧಾಟಿಯಲ್ಲಿ ಈ ವೈರಸ್ ಬಗ್ಗೆ ಎಚ್ಚರಿಕೆ ಮೂಡಿಸಿದ್ದಾರೆ. ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಈ ಹಾಸ್ಯ ಜಾಗೃತಿಗೆ ಕೈ ಜೋಡಿಸಿದರು.

    ರಂಗನಾಯಕಿ ಎಂಬ ಯಕ್ಷಗಾನ ಸಾಮಾಜಿಕ ಕಥಾ ಪ್ರಸಂಗ ಆಗಿರುವುದರಿಂದ ಪಾತ್ರಗಳಿಗೆ ಮುಕ್ತವಾದ ಅವಕಾಶ ಇರುತ್ತದೆ. ಪ್ರಸಕ್ತ ವಿಚಾರಗಳ ಬಗ್ಗೆ ಮಾತನಾಡುವ, ಚರ್ಚೆ ಮಾಡುವ ಅವಕಾಶ ಇದೆ. ಪೌರಾಣಿಕ ಪಾತ್ರಗಳೂ ಪ್ರಸಕ್ತ ವಿಚಾರವನ್ನು ಮಾತನಾಡುತ್ತಾರೆ ಎಂದು ಹಿರಿಯ ಯಕ್ಷಗಾನ ಕಲಾವಿದ ಅಲೆವೂರು ರಾಜೇಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

  • ಯಕ್ಷಗಾನ ವೇಷದಲ್ಲಿ ಅಬ್ಬರಿಸಿದ ಮುಸ್ಲಿಂ ಯುವತಿ

    ಯಕ್ಷಗಾನ ವೇಷದಲ್ಲಿ ಅಬ್ಬರಿಸಿದ ಮುಸ್ಲಿಂ ಯುವತಿ

    ಮಂಗಳೂರು: ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ. ಆದರೆ ಮುಸ್ಲಿಂ ಯುವತಿಯೊಬ್ಬರು ಯಕ್ಷಗಾನ ವೇಷ ಹಾಕಿ ರಕ್ಕಸನ ವೇಷದಲ್ಲಿ ಅಬ್ಬರಿಸಿದ್ದು ಎಲ್ಲರನ್ನು ನಿಬ್ಬೆರೆಗಾಗಿಸಿದ್ದಾರೆ.

    ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಯಕ್ಷಗಾನದಲ್ಲಿ ವೇಷ ಹಾಕಿಕೊಂಡು ಕುಣಿಯುವುದು ಮಾಮೂಲಿ ವಿಚಾರವಲ್ಲ. ಆದರೆ ದಕ್ಷಿಣ ಕನ್ನಡದ ಬಂಟ್ವಾಳದ ವಿಟ್ಲ ನಿವಾಸಿ ಮುಸ್ಲಿಂ ಹುಡುಗಿ ಅರ್ಷಿಯಾ ಅವರು ಇತ್ತೀಚೆಗೆ ಯಕ್ಷಗಾನಕ್ಕೆ ಸೇರಿ ಸಾಕಷ್ಟು ಪ್ರದರ್ಶನಗಳನ್ನು ನೀಡಿದ್ದು, ಜನಪ್ರಿಯ ಕಲಾವಿದರು ಎಂದೇ ಹೆಸರುವಾಸಿಯಾಗಿದ್ದಾರೆ.

    ಪ್ರಸ್ತುತ ಇವರು ಆಟೋಮೊಬೈಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅರ್ಷಿಯಾ ಅವರು ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನೂರಿನಲ್ಲಿ ಪ್ರದರ್ಶಿಸಿದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರದಿಂದ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದ್ದಾರೆ. ಅಂದಿನಿಂದ ಅರ್ಷಿಯಾ ಅವರು ಯಕ್ಷಗಾನ ಕಲಾ ಪ್ರಕಾರ, ಪಾತ್ರ, ಚೆಂಡೆ ಧ್ವನಿಯಿಂದ ಆಕರ್ಷಿತರಾಗಿದ್ದು, ಈ ಮೂಲಕ ಕಲಾಪ್ರಕಾರವನ್ನು ಕಲಿಯಲು ಇಚ್ಚಿಸಿದ್ದರು.

    10ನೇ ವಯಸ್ಸಿನಲ್ಲಿ ತನ್ನೂರಾದ ವಿಟ್ಲದಲ್ಲಿ ಯಕ್ಷಗಾನವನ್ನು ಪ್ರಾರಂಭಿಸಿದ್ದು, ಶಾಲೆಯ ವಾರ್ಷಿಕೋತ್ಸವದ ಸಂದರ್ಭ ಶಾಲಾ ಶಿಕ್ಷಕಿಯೊಬ್ಬರು ತನಗೆ ಯಕ್ಷಗಾನವನ್ನು ಕಲಿಸಿದ್ದರು ಎಂದು ಅರ್ಷಿಯಾ ನೆನಪಿಸಿಕೊಳ್ಳುತ್ತಾರೆ. ಅರ್ಷಿಯಾ ಶ್ರೀದೇವಿ ಮಹಾತ್ಮೆ ಪ್ರಸಂಗ, ನಿಶಂಭಾಸುರ, ರಕ್ತಬೀಜಾಸುರ ಹಾಗೂ ಮಹಿಷಾಸುರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಸ್ಲಿಂ ಸಮುದಾಯದ ಯುವತಿ ಹಿಂದೂ ಧಾರ್ಮಿಕ ಪುರಾಣಗಳನ್ನು ಕರಗತ ಮಾಡಿಕೊಂಡು ಯಕ್ಷಗಾನ ಪಾತ್ರ ಮಾಡಿದ್ದು ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ಅನಂತರಾಜ ಉಪಾಧ್ಯರಿಗೆ ಕಲಾರಂಗದ ಸೇವಾಭೂಷಣ ಪ್ರಶಸ್ತಿ

    ಅನಂತರಾಜ ಉಪಾಧ್ಯರಿಗೆ ಕಲಾರಂಗದ ಸೇವಾಭೂಷಣ ಪ್ರಶಸ್ತಿ

    ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಯಕ್ಷಗಾನ ಕಲಾರಂಗದ ಸೇವಾಭೂಷಣ ಪ್ರಶಸ್ತಿ ಸಮರ್ಪಣೆಯಾಗಿದೆ. ಉಡುಪಿಯ ಯು. ಅನಂತರಾಜ ಉಪಾಧ್ಯರಿಗೆ ಈ 2019-2020ನೇ ಸಾಲಿನ ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು. ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪ್ರಶಸ್ತಿ ವಿತರಣೆ ಮಾಡಿದರು. ಸ್ವಾಮೀಜಿ ಈ ಸಂದರ್ಭ ಮಾತನಾಡಿ, ಯಕ್ಷಗಾನ ಕಲಾರಂಗದ ಸೇವೆ ಅನನ್ಯವಾದದ್ದು. ಅರ್ಹರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಗೌರವ ಹೆಚ್ಚುತ್ತದೆ ಎಂದರು.

    ಮಾತು ಮುಂದುವರೆಸಿದ ಶ್ರೀಗಳು ಜನರಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದಲ್ಲಿ ನಿಸ್ವಾರ್ಥ ಸೇವೆಗಳು ನಡೆಯುತ್ತಿದೆ. ಈ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಿಸ್ವಾರ್ಥ ಸೇವೆ ಮಾಡುವವರ ಕೆಲಸವನ್ನು ಸಮಾಜ ಎಂದಿಗೂ ಗೌರವಿಸಬೇಕು ಎಂದು ಹೇಳಿದರು.

    ಸಂಸ್ಥೆಯ ಎಸ್. ವಿ ಭಟ್, ಅಧ್ಯಕ್ಷ ಗಣೇಶ್ ರಾವ್, ಮುರಳಿ ಕಡೆಕಾರು ಮತ್ತಿತರರ ಸಮ್ಮುಖದಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು.

  • ತುಳುನಾಡಿನ ಯಕ್ಷಗಾನದಲ್ಲೂ ಎಚ್‍ಡಿಕೆಯ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಟ್ರೋಲ್ 

    ತುಳುನಾಡಿನ ಯಕ್ಷಗಾನದಲ್ಲೂ ಎಚ್‍ಡಿಕೆಯ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಟ್ರೋಲ್ 

    ಮಂಗಳೂರು: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಪತ್ತೆಯಾಗಿದ್ದ ಬಾಂಬ್ ವಿಚಾರವಾಗಿ ಮಾತನಾಡುವಾಗ ‘ಮಿಣಿ ಮಿಣಿ ಪೌಡರ್’ ಎಂಬ ಪದ ಬಳಸಿದ್ದರು. ಈ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಇಟ್ಟುಕೊಂಡು ಎಲ್ಲೆಡೆ ಎಚ್‍ಡಿಕೆ ಅವರನ್ನ ಟ್ರೋಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣ ಮಾತ್ರವಲ್ಲ ಯಕ್ಷಗಾನದಲ್ಲೂ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಸಖತ್ ಫೇಮಸ್ ಆಗಿದೆ.

    ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು, ಬಾಂಬ್ ಜೊತೆ ಬ್ಯಾಗ್‍ನಲ್ಲಿ ‘ಮಿಣಿ ಮಿಣಿ ಪೌಡರ್’ ಕೂಡ ಪತ್ತೆಯಾಗಿತ್ತು ಎಂದು ಹೇಳಿದ್ದರು. ಈ ಮಿಣಿ ಮಿಣಿ ಪೌಡರ್ ಡೈಲಾಗ್ ಎಷ್ಟರ ಮಟ್ಟಿಗೆ ಟ್ರೋಲ್ ಆಗುತ್ತಿದೆ ಎಂದರೆ ಯಕ್ಷಗಾನದ ಪ್ರಸಂಗದಲ್ಲಿಯೂ ಈ ಡೈಲಾಗ್ ಬಳಿಸಿ ಟ್ರೋಲ್ ಮಾಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ಯಕ್ಷಗಾನ ಪ್ರಸಂಗ ಒಂದರಲ್ಲಿ ಹಾಸ್ಯ ಕಲಾವಿದರೋರ್ವರು ಕುಮಾರಸ್ವಾಮಿಯವರ ಹೆಸರು ಉಲ್ಲೇಖಿಸದೆ ‘ಮಿಣಿ ಮಿಣಿ ಪೌಡರ್’ ಬಗ್ಗೆ ಅಣಕಿಸಿದ್ದಾರೆ. ಜ್ಯೋತಿಷಿಯ ವೇಷಧಾರಿಯಾಗಿದ್ದ ಕಲಾವಿದ, ಮಿಣಿ ಮಿಣಿ ಪೌಡರ್ ಹಾಸನ ಮೂಲದ ಜ್ಯೋತಿಷಿ ನಂಗೆ ಕೊಟ್ಟಿದ್ದು, ಆ ಪೌಡರ್ ಅಸಾಮಾನ್ಯ ಶಕ್ತಿಯುಳ್ಳದ್ದು, ತಲೆಯಲ್ಲಿ ಕೂದಲು ಇಲ್ಲದ ದೊಡ್ಡ ಜ್ಯೋತಿಷಿ ಇದನ್ನು ನಂಗೆ ಕೊಟ್ಟಿದ್ದಾಗಿ ಹೇಳುತ್ತಾ ನಗುತ್ತಾನೆ. ಯಕ್ಷಗಾನ ಪ್ರಸಂಗದ ಈ ವಿಡಿಯೋ ಈಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.