Tag: Yakshagana

  • ಬಡ ಯಕ್ಷಗಾನ ಕಲಾವಿದರಿಗೆ ಉಚಿತ ರೇಷನ್ – ಯಕ್ಷಧ್ರುವ ಪಟ್ಲ ಫೌಂಡೇಶನ್ ಘೋಷಣೆ

    ಬಡ ಯಕ್ಷಗಾನ ಕಲಾವಿದರಿಗೆ ಉಚಿತ ರೇಷನ್ – ಯಕ್ಷಧ್ರುವ ಪಟ್ಲ ಫೌಂಡೇಶನ್ ಘೋಷಣೆ

    ಮಂಗಳೂರು: ಯಕ್ಷಗಾನ ಕರಾವಳಿಯ ಪ್ರಮುಖ ಜಾನಪದ ಕಲೆ. ಯಕ್ಷಗಾನವನ್ನು ನಂಬಿಕೊಂಡು ಸಾವಿರಾರು ಕಲಾವಿದರು ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಮಹಾಮಾರಿಯಿಂದ ಕಳೆದ ವರ್ಷ ತತ್ತರಿಸಿದ ಯಕ್ಷಗಾನ ಕಲಾವಿದರು ಈ ಬಾರಿಯೂ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದಾರೆ. ಅಂತವರ ನೆರವಿಗೆ ಮುಂದಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಉಚಿತ ರೇಷನ್ ವಿತರಣೆಯ ಘೋಷಣೆ ಮಾಡಿದೆ.

    ಲಾಕ್‍ಡೌನ್‍ನಿಂದ ಮೇಳದ ತಿರುಗಾಟವಿಲ್ಲದೆ ಮತ್ತು ಮುಂದಿನ 4-5 ತಿಂಗಳು ಯಾವ ಕಾರ್ಯಕ್ರಮವೂ ಇಲ್ಲದೆ ಯಕ್ಷಗಾನ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರ ಈ ಸ್ಥಿತಿಯನ್ನು ಮನಗಂಡು ಕಳೆದ ವರ್ಷದಂತೆ ಈ ಬಾರಿಯೂ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ತೀರಾ ಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಉಚಿತವಾಗಿ ರೇಷನ್ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.

    ಅತೀ ಅವಶ್ಯಕತೆ ಇರುವ ಯಕ್ಷಗಾನ ವೃತ್ತಿ ಕಲಾವಿದರು ಟ್ರಸ್ಟ್ ನ ಘಟಕದ ಪದಾಧಿಕಾರಿಗಳನ್ನು ಮೇ 10ರೊಳಗೆ ಸಂಪರ್ಕಿಸಿ ತಮ್ಮ ಹೆಸರು, ವಿಳಾಸ ಮತ್ತು ಮೇಳದ ಹೆಸರನ್ನು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 91645 21588 ಮತ್ತು 74111 61662 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಕಟನೆ ತಿಳಿಸಿದೆ.

  • ಯಕ್ಷರಂಗದ ಸಿಡಿಲಮರಿ ಶ್ರೀಧರ ಭಂಡಾರಿ ವಿಧಿವಶ

    ಯಕ್ಷರಂಗದ ಸಿಡಿಲಮರಿ ಶ್ರೀಧರ ಭಂಡಾರಿ ವಿಧಿವಶ

    ಮಂಗಳೂರು: ತೆಂಕುತಿಟ್ಟು ಯಕ್ಷಗಾನದಲ್ಲಿ ಸಿಡಿಲಮರಿ ಎಂದೇ ಖ್ಯಾತಿ ಪಡೆದಿದ್ದ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಡಾ. ಶ್ರೀಧರ ಭಂಡಾರಿ (73) ವಿಧಿವಶರಾಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬನ್ನೂರು ನಿವಾಸಿಯಾಗಿದ್ದ ಶ್ರೀಧರ ಭಂಡಾರಿ ಒಂದು ವರ್ಷದ ಹಿಂದೆ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಇಂದು ಮುಂಜಾನೆ ಶ್ರೀಧರ ಭಂಡಾರಿ ನಿಧನರಾಗಿದ್ದು, ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲಾ, ಶಾಂತನಾ, ಪುತ್ರರಾದ ಡಾ ಅನಿಲ, ದೇವಿ ಪ್ರಕಾಶ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಜನರಾಗಿದ್ದ ಶ್ರೀಧರ ಭಂಡಾರಿ ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದರಾಗಿದ್ದರು. ಪುಂಡುವೇಷದ ಗಂಡುಗಲಿ, ಧೀಂಗಿಣ ವೀರ ಎಂದೇ ಪ್ರಸಿದ್ಧಿ ಪಡೆದಿದ್ದರು.

    ಪುಂಡು ವೇಷಗಳಿಗೆ ಹೆಸರು ಪಡೆದಿದ್ದ ಇವರಿಗೆ ರಂಗಸ್ಥಳದಲ್ಲಿ ಚುರುಕಿನ, ವೇಗದ ನಡೆಯಿಂದ ಅವರಿಗೆ ಸಿಡಿಲಮರಿ ಎಂಬ ಬಿರುದು ಒಲಿದಿತ್ತು. ಒಂದೇ ಬಾರಿಗೆ 200ರಿಂದ 250ರಷ್ಟು ಧೀಂಗಿಣ ಹಾಕುತ್ತಿದ್ದ ಶ್ರೀಧರ ಭಂಡಾರಿ ಅವರು ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮುಂತಾದ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದರು.

    ತಮ್ಮ 62ನೇ ವಯಸ್ಸಿನಲ್ಲಿ ಖಾಸಗಿ ಸುದ್ದಿವಾಹಿನಿಯ ‘ಶಭಾಶ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಧರ ಭಂಡಾರಿಯವರು 3 ನಿಮಿಷಗಳಲ್ಲಿ 148 ಧೀಂಗಿಣಗಳನ್ನು ಹೊಡೆದಿದ್ದರು. ಕಲಾ ಸೇವೆಗಾಗಿ ಅಮೇರಿಕಾದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಶ್ರೀಧರ ಭಂಡಾರಿ ಅವರನ್ನು ಗೌರವಿಸಿತ್ತು.

    ಅಜ್ಜನಿಂದ ಪ್ರಭಾವಿತರಾಗಿ ಯಕ್ಷಗಾನದತ್ತ ಆಕರ್ಷಿತರಾಗಿದ್ದ ಇವರು ಕುರಿಯ ವಿಠಲ ಶಾಸ್ತ್ರಿ ಅವರಿಂದ ಶಾಸ್ತ್ರಬದ್ಧವಾಗಿ ಯಕ್ಷಗಾನ ಅಭ್ಯಾಸ ಮಾಡಿದ್ದರು. ಸುಬ್ರಹ್ಮಣ್ಯ ಮೇಳ, ಬಾಳಂಬೆಟ್ಟು ಮೇಳ, ಪುತ್ತೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ ಶ್ರೀಧರ ಭಂಡಾರಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವೇರ ಮೇಳದಲ್ಲಿ ಸುದೀರ್ಘ 45 ವರ್ಷಗಳ ಕಾಲ ಪ್ರಮುಖ ವೇಷಧಾರಿಯಾಗಿ ಕಲಾ ಸೇವೆಗೈದಿದ್ದರು.

  • ರಂಗಸ್ಥಳದಲ್ಲೇ ಕುಸಿದು ಯಕ್ಷಗಾನ ಕಲಾವಿದ ಸಾಧು ಕೊಠಾರಿ ನಿಧನ

    ರಂಗಸ್ಥಳದಲ್ಲೇ ಕುಸಿದು ಯಕ್ಷಗಾನ ಕಲಾವಿದ ಸಾಧು ಕೊಠಾರಿ ನಿಧನ

    ಉಡುಪಿ: ರಂಗಸ್ಥಳದಲ್ಲಿ ಯಕ್ಷಗಾನದ ಪದ್ಯಕ್ಕೆ ಕುಣಿಯುತ್ತಿರುವ ಸಂದರ್ಭದಲ್ಲಿಯೇ ಕಲಾವಿದ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

    ಮಂದಾರ್ತಿ ದುರ್ಗಾಪರಮೇಶ್ವರಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಹೃದಯಾಘಾತದಿಂದ ರಂಗಸ್ಥಳದಲ್ಲೇ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಶಿರಿಯಾರದ ಕಾಜ್ರಲ್ಲಿ ಸಮೀಪದ ಕಲ್ಬೆಟ್ಟು ಎನ್ನುವಲ್ಲಿ ಬೆಳಗ್ಗಿನ ಜಾವ ಸಂಭವಿಸಿದೆ.

    ಯಕ್ಷಗಾನ ಮೇಳದ ಪ್ರಧಾನ ವೇಷಧಾರಿ ಪಾತ್ರ ನಿರ್ವಹಿಸುತ್ತಿದ್ದ, ಕೊಠಾರಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ‘ಮಹಾಕಲಿ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭ ರಂಗದಲ್ಲೇ ಎದೆ ನೋವಿನಿಂದ ತೀವ್ರ ಅಸ್ವಸ್ಥಗೊಂಡರು. ನಂತರ ತಕ್ಷಣ ವೇಷ ಕಳಚಿ, ಮೇಳದ ಪ್ರಧಾನ ಭಾಗವತ ಸದಾಶಿವ ಅಮೀನ್ ಹಾಗೂ ಮೇಳದ ಮ್ಯಾನೇಜರ್ ಮತ್ತು ಸಹಕಲಾವಿದರು, ಸ್ಥಳೀಯರು ಜೊತೆಯಾಗಿ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ.

    ಬಾರಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಸಾಧು ಕೊಠಾರಿಯವರು, ಬಡಗುತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಯಕ್ಷ ತಿರುಗಾಟ ನಡೆಸಿದ್ದರು. ಹಲವಾರು ಯಕ್ಷಗಾನ ಮೇಳದ ಕಲಾವಿದರು, ಸಂಘಟನೆಗಳು ಸಂತಾಪ ಸೂಚಿಸಿವೆ.

  • ಭಾಗವತ ಪದ್ಯಾಣ ಗೋವಿಂದ ಭಟ್ಟರಿಗೆ ‘ಶ್ರೀ ಕದ್ರಿ’ ಪ್ರಶಸ್ತಿ

    ಭಾಗವತ ಪದ್ಯಾಣ ಗೋವಿಂದ ಭಟ್ಟರಿಗೆ ‘ಶ್ರೀ ಕದ್ರಿ’ ಪ್ರಶಸ್ತಿ

    ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ 5ನೇ ತಂಡದ ಪ್ರಧಾನ ಭಾಗವತ ಪದ್ಯಾಣ ಗೋವಿಂದ ಭಟ್ ಅವರು ‘ಶ್ರೀ ಕದ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಡಿ.27ರಂದು ಸಂಜೆ ಕದ್ರಿ ದೇವಸ್ಥಾನ ಬಳಿಯ ಮಂಜುನಾಥ ಕಾಲೋನಿಯ ಶ್ರೀಕದ್ರಿ ಪ್ರಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಸಮ್ಮುಖ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ತಿಳಿಸಿದ್ದಾರೆ. ಪದ್ಯಾಣ ಗಣಪತಿ ಭಟ್- ಅದಿತಿ ಅಮ್ಮ ದಂಪತಿ ಪುತ್ರ 51 ವರ್ಷದ ಗೋವಿಂದ ಭಟ್ಟರು ಬಿ.ಕಾಂ. ಪದವೀಧರ. 29 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಮಾಡುತ್ತಿದ್ದು, ಕಳೆದ 6 ವರ್ಷಗಳಿಂದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ. ಮಾಂಬಾಡಿ ಸುಬ್ರಹ್ಮಣ್ಯ ಭಾಗವತರ ಶಿಷ್ಯರಾದ ಗೋವಿಂದ ಭಟ್ಟರನ್ನು ಕುರಿಯ ಶಾಸ್ತ್ರಿಗಳು, ಬೊಟ್ಟಿಕೆರೆ ಪೂಂಜರು ತಿದ್ದಿ ತೀಡಿದ್ದಾರೆ.

    ಏಕಾದಶ ಸಂಭ್ರಮ: ಇದೇ ಸಂದರ್ಭ ಕಟೀಲು ಮೇಳದ 11ನೇ ವರ್ಷದ ಸೇವೆಯಾಟ ಶ್ರೀದೇವಿ ಲಲಿತೋಪಖ್ಯಾನ ಯಕ್ಷಗಾನ ಇಂದು ರಾತ್ರಿ ಮಂಜುನಾಥ ಕಾಲೋನಿ ಆವರಣದಲ್ಲಿ ನಡೆಯಲಿದೆ ಎಂದು ಆಯೋಜಕ ಕುಂಜತ್ತೋಡಿ ವಾಸುದೇವ ಭಟ್ ತಿಳಿಸಿದ್ದಾರೆ.

  • ನೈಟ್ ಕರ್ಫ್ಯೂ: ಕಟೀಲು ಮೇಳದ ಎಲ್ಲಾ ಪ್ರದರ್ಶನಗಳು ಕಾಲಮಿತಿ ಯಕ್ಷಗಾನ

    ನೈಟ್ ಕರ್ಫ್ಯೂ: ಕಟೀಲು ಮೇಳದ ಎಲ್ಲಾ ಪ್ರದರ್ಶನಗಳು ಕಾಲಮಿತಿ ಯಕ್ಷಗಾನ

    ಮಂಗಳೂರು: ರಾಜ್ಯಾದ್ಯಂತ ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ.

    ಕಟೀಲು‌ ದೇವಸ್ಥಾನದ ಎಲ್ಲಾ ಆರು ಯಕ್ಷಗಾನ ಮೇಳಗಳು ಡಿಸೆಂಬರ್ ‌24ರ ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಯಕ್ಷಗಾನ ಪ್ರಸಂಗ ಆರಂಭಿಸಲಿದೆ. ರಾತ್ರಿ 9:45 ಕ್ಕೆ ಮಂಗಳ ಹಾಡುವುದರ ಮೂಲಕ ಯಕ್ಷಗಾನ‌ ಕೊನೆಗೊಳ್ಳಲಿದೆ.

    ಎಲ್ಲ ಕಲಾವಿದರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು ಸೂಚಿಸಲಾಗಿದೆ. ನಾಳೆಯಿಂದ ಕರ್ಫ್ಯೂ ಮುಗಿಯುವ ತನಕ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಈ ದಿನದಲ್ಲಿ‌ ಯಕ್ಷಗಾನ ಬುಕ್ ಮಾಡಿದವರು ಕಾಲಮಿತಿ ಯಕ್ಷಗಾನಕ್ಕೆ‌ ಸಹಕಾರ ನೀಡಬೇಕೆಂದು ಕ್ಷೇತ್ರದ ಆಡಳಿತ‌ ಮಂಡಳಿ ವಿನಂತಿ ಮಾಡಿಕೊಂಡಿದೆ.

    ಕಟೀಲು ಯಕ್ಷಗಾನ ಮೇಳ‌ ಮಾಮೂಲಿಯಾಗಿ ರಾತ್ರಿ 9 ಗಂಟೆಗೆ ಪ್ರಸಂಗ ಆರಂಭಿಸಿ ಬೆಳಗ್ಗಿನ‌ ಜಾವ 6 ಗಂಟೆಯವರೆಗೂ ನಡೆಯುತ್ತದೆ. ಆದರೆ ನೈಟ್ ಕರ್ಫ್ಯೂ ಹಿನ್ನಲೆಯಲ್ಲಿ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

  • ಧರ್ಮಸ್ಥಳ ಯಕ್ಷಗಾನ ಮಂಡಳಿ – ಸೇವೆ ಬಯಲಾಟ ಪ್ರದರ್ಶನ ಪ್ರಾರಂಭ

    ಧರ್ಮಸ್ಥಳ ಯಕ್ಷಗಾನ ಮಂಡಳಿ – ಸೇವೆ ಬಯಲಾಟ ಪ್ರದರ್ಶನ ಪ್ರಾರಂಭ

    ಮಂಗಳೂರು: ಇನ್ನೂರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಶುಕ್ರವಾರದಿಂದ ಯಕ್ಷಗಾನ ಸೇವೆ ಬಯಲಾಟ ಪ್ರದರ್ಶನ ಪ್ರಾರಂಭಿಸಿದೆ.

    ಕಳೆದ ಐದು ವರ್ಷಗಳಿಂದ ಪ್ರತಿದಿನ ಸಂಜೆ 7 ರಿಂದ ರಾತ್ರಿ 12ರ ವರೆಗೆ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದು ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕಲಾವಿದರಿಗೂ ವಿಶ್ರಾಂತಿ ಹಾಗೂ ಹೆಚ್ಚಿನ ಅಧ್ಯಯನ, ಅಭ್ಯಾಸಕ್ಕೆ ಅವಕಾಶವಿದೆ. ಉದ್ಯೋಗದಲ್ಲಿರುವವರು, ವ್ಯವಹಾರ ನಡೆಸುವವರು ಹಾಗೂ ವಿದ್ಯಾರ್ಥಿಗಳು ಕೂಡಾ ಕಾಲಮಿತಿ ಯಕ್ಷಗಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2021ರ ಮೇ 23 ರ ವರೆಗೆ ಧರ್ಮಸ್ಥಳ ಭಕ್ತರು ಹಾಗೂ ಅಭಿಮಾನಿಗಳು ತಮ್ಮ ಊರಿನಲ್ಲಿ ಸೇವೆ ಬಯಲಾಟ ಪ್ರದರ್ಶನ ಆಯೋಜಿಸಿದ್ದಾರೆ. 2021ರ ಮೇ 24 ರಿಂದ 27ರ ವರೆಗೆ ಧರ್ಮಸ್ಥಳದಲ್ಲಿ ಮೂರು ದಿನ ಸೇವೆ ಬಯಲಾಟ ಪ್ರದರ್ಶನ ನೀಡಿ ವರ್ಷದ ತಿರುಗಾಟಕ್ಕೆ ಕಲಾವಿದರು ಮಂಗಳ ಹಾಡುವರು.

    ಶುಕ್ರವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರಿಗೆ ಪೂಜೆ ನೆರೆವೇರಿಸಿ ಭವ್ಯ ಮೆರವಣಿಗೆಯಲ್ಲಿ ಭಕ್ತಿಪೂರ್ವಕವಾಗಿ ಕಳುಹಿಸಿಕೊಡಲಾಯಿತು. 2021ರ ಮೇ 23ರ ವರೆಗೆ ಯಕ್ಷಗಾನ ಮೇಳದ ಕಲಾವಿದರು ಬೇರೆ-ಬೇರೆ ಊರುಗಳಲ್ಲಿ ಸೇವೆ ಬಯಲಾಟ ಪ್ರದರ್ಶನ ನೀಡುವರು.

  • ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ತಿರುಗಾಟ ಆರಂಭ

    ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ತಿರುಗಾಟ ಆರಂಭ

    – ಗೆಜ್ಜೆ ಕಟ್ಟಿದ ಆರು ಮೇಳದ ಕಲಾವಿದರು
    – ಒಂದೇ ಬಾರಿಗೆ ಆರು ಮೇಳಗಳ ಯಕ್ಷಗಾನ ಪ್ರದರ್ಶನ

    ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಬುಧವಾರ ಆರಂಭಗೊಂಡಿತು.

    ಕಲಾವಿದರಿಗೆ ಗೆಜ್ಜೆಗಳನ್ನು ಅರ್ಚಕ ಅನಂತ ಪದ್ಮನಾಭ ಆಸ್ರಣ ನೀಡುವ ಮೂಲಕ ಈ ವರ್ಷದ ತಿರುಗಾಟಕ್ಕೆ ಚಾಲನೆ ನೀಡಲಾಯಿತು. ಆರಂಭದಲ್ಲಿ ಆರು ಮೇಳಗಳ ಭಾಗವತರಾದ ಅಂಡಾಲ ದೇವೀಪ್ರಸಾದ ಶೆಟ್ಟಿ ಬಲಿಪ ಪ್ರಸಾದ ಭಟ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಶ್ರೀನಿವಾಸ್ ಬಳ್ಳಮಂಜ, ಪದ್ಯಾಣ ಗೋವಿಂದ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಾಗವತರಿಂದ ತಾಳಮದ್ದಲೆ ನಡೆದು ಬಳಿಕ ಪ್ರಾರ್ಥನೆ ನಡೆಯಿತು.

    ಕಲಾವಿದರು ದೇವರ ಎದುರು ಕುಣಿದು, ಬಂಗಾರದ ಕಿರೀಟ ಆಯುಧ ಇತ್ಯಾದಿಗಳೊಂದಿಗೆ ಚೌಕಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅಲ್ಲಿ ಆರು ದೇವರ ಪೂಜೆ ಆರು ರಂಗಸ್ಥಳದಲ್ಲಿ ಏಕಕಾಲದಲ್ಲಿ ವೇಷಗಳು ಪೂರ್ವರಂಗ ಕುಣಿದು ರಂಗಸ್ಥಳಕ್ಕೆ ದೇವರು ಬಂದ ಬಳಿಕ ಒಂದು ರಂಗಸ್ಥಳದಲ್ಲಿ ಆರೂ ಮೇಳಗಳ ಕಲಾವಿದರಿಂದ ಪಾಂಡವಾಶ್ವಮೇಧ ಪ್ರಸಂಗ ನಡೆಯಿತು.

    ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ ಶೆಟ್ಟಿ, ಧರ್ಮಸ್ಥಳ ಮೇಳದ ಮುಖ್ಯಸ್ಥರಾದ ಹರ್ಷೇಂದ್ರ ಕುಮಾರ್, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ,ಪಂಚ ಮೇಳಗಳ ಸಂಚಾಲಕ ಕಿಶನ್ ಹೆಗ್ಡೆ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ಮುಂತಾದವರಿದ್ದರು.

    ಆರು ಮೇಳಗಳಿಂದ ಭಕ್ತಾದಿಗಳು ಹರಕೆ ಸೇವೆಯಾಟವನ್ನು ಆಡಿಸುತ್ತಾ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಕಟೀಲು ದೇವಿ ಯಕ್ಷಗಾನ ಪ್ರಿಯೆ ಆಗಿರೋದ್ರಿಂದ ಹೆಚ್ಚಿನ ಭಕ್ತರು ತಮ್ಮ ಕಷ್ಟಕಾಲದಲ್ಲಿ ದೇವಿಗೆ ಹರಕೆಯ ಯಕ್ಷಗಾನ ಸೇವೆ ಕೊಡಿಸುವ ಸಂಕಲ್ಪ ಮಾಡಿರುತ್ತಾರೆ. ಹೀಗಾಗಿ ಮುಂದಿನ 10 ವರ್ಷಗಳವರೆಗೂ ಕಟೀಲು ಕ್ಷೇತ್ರದ ಆರೂ ಮೇಳಗಳ ಆಟ ಬುಕ್ಕಿಂಗ್ ಇದ್ದು, ಇಂದಿಗೂ ಯಕ್ಷಗಾನಕ್ಕೆ ಇಷ್ಟೊಂದು ಬೇಡಿಕೆ ಇರೋದು ದೇವಿಯ ಹಾಗೂ ಯಕ್ಷಗಾನಕ್ಕೆ ಇರುವ ನಂಬಿಕೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕಟೀಲಿನ ಆರು ಮೇಳಗಳಲ್ಲಿ ಮುನ್ನೂರ ಐವತ್ತರಷ್ಟು ಕಲಾವಿದರು ಇತರ ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ವರುಷ ಸುಮಾರು 990 ಯಕ್ಷಗಾನ ಪ್ರದರ್ಶನಗಳು ನಡೆಯಲಿದ್ದು, ಮೇ 25ರ ಪತ್ತನಾಜೆಯ ದಿನ ಮೇಳಗಳು ತಿರುಗಾಟ ಮುಗಿಸಲಿವೆ.

  • ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಯಕ್ಷಗಾನ ಮೇಳದ ಉದ್ಘಾಟನೆ: ಪ್ರಥಮ‌ ಸೇವೆಯಾಟ ಆರಂಭ

    ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಯಕ್ಷಗಾನ ಮೇಳದ ಉದ್ಘಾಟನೆ: ಪ್ರಥಮ‌ ಸೇವೆಯಾಟ ಆರಂಭ

    ಮಂಗಳೂರು:ಯಕ್ಷಗಾನದ ಅಧ್ಯಯನದ ಉತ್ತಮ ಅವಕಾಶಗಳನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕು ಎಂದು ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಹೇಳಿದರು.

    ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆಯ ಮೇಳವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಯಕ್ಷಗಾನ ನಮ್ಮ ಸಂಸ್ಕೃತಿ ಮಾತ್ರವಲ್ಲ ಅದು ಆರಾಧನೆಯಾಗಿದೆ, ಇಂದಿನ ಯಾನಾರಂಭ ನಿರಂತರ ಮುಂದುವರಿಯಲಿ ಎಂದರು.

    ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ದಾನಿಗಳನ್ನು ಗೌರವಿಸಿದರು. ಉದ್ಘಾಟನೆಗೂ ಮೊದಲು ಸೇವಾದಾರರು ನೀಡಿದ ಬೆಳ್ಳಿಯ ಅಭರಣಗಳನ್ನು ಮೆರವಣಿಗೆ ಮೂಲಕ ಚೌಕಿಗೆ ತರಲಾಗಿತು. ಸೇವಾ ಬಯಲಾಟದ ಅಂಗವಾಗಿ ಪಾಂಡವಾಶ್ವಮೇಧ ಯಕ್ಷನಾನ ನಡೆಯಿತು.

    ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೀತಾರಾಮ ರೈ ಸವಣೂರು, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ದ.ಕ. ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು,ತಾ.ಪಂ. ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ್ ಆಳ್ವ, ಭುಜಬಲಿ ಧರ್ಮಸ್ಥಳ ಮತ್ತಿತರರು ಉಪಸ್ಥಿತರಿದ್ದರು.

    ಅಡ್ಯಾರು ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು, ಮೇಳದ ಭಾಗವತರು ಹಾಗೂ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಪ್ರಸ್ತಾವನೆಗೈದರು. ಕರ್ನಾಟಕ ಯಕ್ಷಗಾನ ಮಂಡಳಿಯ ಸದಸ್ಯ ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು. ಧರ್ಮದರ್ಶಿ ಡಾ. ಯಾಜಿ ನಿರಂಜನ್ ಭಟ್ ಮೇಳದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

  • ಯಕ್ಷಲೋಕದ ಅನರ್ಘ್ಯ ರತ್ನ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ

    ಯಕ್ಷಲೋಕದ ಅನರ್ಘ್ಯ ರತ್ನ ಮಲ್ಪೆ ವಾಸುದೇವ ಸಾಮಗ ಇನ್ನಿಲ್ಲ

    ಉಡುಪಿ: ಯಕ್ಷಲೋಕದ ರತ್ನ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ಸಂಘಟಕ, ಯಕ್ಷ ಕವಿ ಮಲ್ಪೆ ವಾಸುದೇವ ಸಾಮಗ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಯಕ್ಷಗಾನ ವಿದ್ವತ್ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ.

    ಸಾಮಗರಿಗೆ 71 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಕೋವಿಡ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ನಿಧನರಾಗಿದ್ದಾರೆ. ಯಕ್ಷಗಾನ ರಂಗದಲ್ಲಿ ತನ್ನ ವಾಕ್ಪಟುತ್ವದಿಂದ ಖ್ಯಾತಿಗಳಿಸಿದ್ದ ವಾಸುದೇವ ಸಾಮಗರು, ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಅಮೃತೇಶ್ವರಿ ಮೇಳದ ಮೂಲಕ ಯಕ್ಷಗಾನ ವೃತ್ತಿರಂಗಕ್ಕೆ ಕಾಲಿಟ್ಟಿದ್ದರು.

    ಧರ್ಮಸ್ಥಳ, ಕದ್ರಿ, ಕರ್ನಾಟಕ, ಸುರತ್ಕಲ್, ಸಾಲಿಗ್ರಾಮ, ಬಗ್ವಾಡಿ, ಸೌಕೂರು ಮೇಳಗಳಲ್ಲಿಯೂ ಕಲಾ ಸೇವೆ ಸಲ್ಲಿಸಿದ್ದಾರೆ. ಮೇಳದ ಯಜಮಾನಿಕೆಯನ್ನೂ ಹೊತ್ತಿದ್ದರು. ಉತ್ತರಕುಮಾರ, ಯಕ್ಷಲೋಕ ವಿಜಯ ಪ್ರಸಂಗದ ಪ್ರದೀಪ, ಭಾನುತೇಜಸ್ವಿ ಪ್ರಸಂಗದ ಭಾನುತೇಜಸ್ವಿ ಮೊದಲಾದ ಪಾತ್ರಗಳು ಅವರಿಗೆ ಅಪಾರ ಜನಮನ್ನಣೆ ತಂದುಕೊಟ್ಟಿವೆ.

    ಯಕ್ಷಗಾನದಲ್ಲಿ ಮೊದಲ ಬಾರಿಗೆ ಕೋರ್ಟ್ ಸನ್ನಿವೇಶವನ್ನು ಸೃಷ್ಟಿ ಮಾಡಿ ಹೊಸ ದಾಖಲೆ ಮಾಡಿದವರು. ಸಂಯಮಂ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸಮಯ ಮಿತಿಯ ತಾಳಮದ್ದಳೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಕೊನೆಯ ತಾಳಮದ್ದಲೆಯನ್ನು ಕೆಲದಿನಗಳ ಹಿಂದೆ ಮೂಡುಬಿದರೆಯ ಅಲಂಗಾರಿನಲ್ಲಿ ನಡೆಸಿದ್ದರು. ಅಪಾರ ಯಕ್ಷಗಾನ ಅಭಿಮಾನಿಗಳನ್ನು ತನ್ನ ಮಾತಿನ ಮೂಲಕ, ಜ್ಞಾನ ಸಂಪತ್ತಿನ ಮೂಲಕ ಸಂಪಾದಿಸಿದ್ದರು.

  • ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

    ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

    – ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ
    – ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ

    ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯೊಂದಿಗೆ ಹೊಸ ಯಕ್ಷಗಾನ ಮೇಳ ಆರಂಭಗೊಂಡಿದ್ದು, ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ರಂಗಸ್ಥಳದಲ್ಲಿ ಮೇಳೈಸಲಿದ್ದಾರೆ.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಿಂದ ಹೊರ ಬಂದ ಬಳಿಕ ಪಟ್ಲ ಅವರು ಹೊಸ ಯಕ್ಷಗಾನ ಮೇಳ ಮಾಡುತ್ತಾರೆ ಎಂಬ ಸುದ್ದಿ ಇತ್ತು, ಅದು ಈಗ ನಿಜವಾಗಿದೆ. ನವೆಂಬರ್ ತಿಂಗಳ 27ರಿಂದ ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರದರ್ಶನ ಆರಂಭವಾಗಲಿದೆ ಎಂದು ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಹೇಳಿದ್ದಾರೆ.

    ಮೇಳದ ಯಕ್ಷಗಾನ ಪ್ರದರ್ಶನವು ಕಾಲಮಿತಿಯದ್ದಾಗಿದ್ದು, ಸಾಮಾನ್ಯವಾಗಿ ಸಂಜೆ 6 ಗಂಟೆಯಿಂದ 11ರವರೆಗಿನ ಅವಧಿಯಲ್ಲಿ ನಡೆಯಲಿದೆ. ಈ ಎಲ್ಲಾ ಪ್ರದರ್ಶನಗಳನ್ನು ಕೋವಿಡ್-19ರ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ನಿರ್ದೇಶನಗಳಿಗೆ ಒಳಪಟ್ಟು ನಡೆಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.

    ನೂತನ ಮೇಳದ ಕಲಾವಿದರು
    ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಧಾನ ಭಾಗವತರಾಗಿದ್ದು, ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತಿಕೆಯಲ್ಲಿ ಸಾಥ್ ನೀಡಲಿದ್ದಾರೆ. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ ಇರಲಿದ್ದಾರೆ. ಉಜಿರೆ ನಾರಾಯಣ, ಸಂದೇಶ್ ಮಂದಾರ ಹಾಸ್ಯ ಪಾತ್ರಧಾರಿಗಳಾಗಿ ಬಣ್ಣ ಹಚ್ಚಲಿದ್ದಾರೆ.

    ಅಕ್ಷಯ್ ಕುಮಾರ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು ಸ್ತ್ರೀಪಾತ್ರಧಾರಿಗಳಾಗಲಿದ್ದಾರೆ. ಪ್ರಧಾನ ವೇಷಧಾರಿಗಳಾಗಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷಣ, ಮಧುರಾಜ್, ಭುವನ್ ಮತ್ತಿತರು ಇರಲಿದ್ದಾರೆ.

    ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ
    ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಸತೀಶ್ ಪಟ್ಲರಿಗೆ ಶ್ರೀದೇವಿ ಮಹಾತ್ಮೆ ಪ್ರಸಂಗ ಸಾಕಷ್ಟು ಪ್ರಖ್ಯಾತಿ ತಂದು ಕೊಟ್ಟಿದ್ದು, ಇಲ್ಲಿಯೂ ಕೂಡ ದೇವಿ ಮಹಾತ್ಮೆ ಪ್ರಸಂಗಕ್ಕೆ ಕಲಾವಿದರು ಸೆಟ್ ಆದಂತೆ ಇದ್ದಾರೆ. ಅಕ್ಷಯ್ ಕುಮಾರ್ ದೇವಿ, ರಾಜೇಶ್ ನಿಟ್ಟೆ ಮಾಲಿನಿ, ಸತೀಶ್ ನೈನಾಡು ಮಹಿಷಾಸುರ, ರಾಧಾಕೃಷ್ಣ ನಾವಡ ರಕ್ತಬೀಜ, ಲೋಕೇಶ್ ಮುಚ್ಚೂರು ಮತ್ತು ಬೆಳ್ಳಿಪಾಡಿ ಮೋಹನ್ ಚಂಡ- ಮುಂಡರು ಹೀಗೆ ದೇವಿ ಮಹಾತ್ಮೆ ಪ್ರಸಂಗಕ್ಕೆ ಸೆಟ್ ಆಗುವಂತೆ ಕಲಾವಿದರ ಆಯ್ಕೆ ಆದಂತೆ ಇದೆ.

    ಯಕ್ಷಗಾನದ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಪಟ್ಲ ಸತೀಶ್ ಶೆಟ್ಟಿ ಅವರ ಕಂಠಸಿರಿಯನ್ನು ಅವರೇ ನೇತೃತ್ವವಹಿಸಿದ ಯಕ್ಷಗಾನ ಮೇಳದೊಂದಿಗೆ ನೋಡಿ ಆನಂದಿಸಲು ಅವರ ಅಭಿಮಾನಿಗಳು ಕಾತುರರಾಗಿರೋದಂತು ಸತ್ಯ. ಹಿಂದಿನಿಂದಲೂ ಪಾವಂಜೆ ಕ್ಷೇತ್ರ ಯಕ್ಷಗಾನಕ್ಕೆ ಗರಿಷ್ಠ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿಂದ ಹೊರಡುವ ನೂತನ ಮೇಳ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.