Tag: Yahoo

  • ಡಿಸೆಂಬರ್‌ನಲ್ಲಿ ಯಾಹೂ ಗ್ರೂಪ್ ಶಟ್‌ಡೌನ್‌ – ಟೆಕ್‌ ಕಂಪನಿ ಸೋತಿದ್ದು ಎಲ್ಲಿ?

    ಡಿಸೆಂಬರ್‌ನಲ್ಲಿ ಯಾಹೂ ಗ್ರೂಪ್ ಶಟ್‌ಡೌನ್‌ – ಟೆಕ್‌ ಕಂಪನಿ ಸೋತಿದ್ದು ಎಲ್ಲಿ?

    ಕ್ಯಾಲಿಫೋರ್ನಿಯಾ: ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ಡಿಸೆಂಬರ್‌ 15 ರಿಂದ ಯಾಹೂ ಗ್ರೂಪ್‌ ಶಟ್‌ಡೌನ್‌ ಆಗಲಿದೆ.

    ಅಮೆರಿಕದ ವೈರ್‌ಲೆಸ್‌ ಕಮ್ಯೂನಿಕೇಶನ್‌ ಸೇವಾ ಸಂಸ್ಥೆ ವೆರಿಝೋನ್‌ ಕಂಪನಿ 2017ರಲ್ಲಿ ಯಾಹೂ ಕಂಪನಿಯನ್ನು 4.8 ಶತಕೋಟಿ ಡಾಲರ್‌ ನೀಡಿ ಖರೀದಿಸಿತ್ತು. ಖರೀದಿಸಿದ ಬಳಿಕವೂ ಯಾಹೂ ಯಾವುದೇ ಪ್ರಗತಿಯನ್ನು ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಯಾಹೂ ಗ್ರೂಪ್ ಮುಚ್ಚುವ ನಿರ್ಧಾರ ಪ್ರಕಟವಾಗಿದೆ.

    1994 ರಲ್ಲಿ ಆರಂಭಗೊಂಡ ಯಾಹೂ ಕಂಪನಿ 2001ರಲ್ಲಿ  ವಿವಿಧ ಸೇವೆಗಳನ್ನು ಆರಂಭಿಸಿತ್ತು. ಹೊಸ ಆಲೋಚನೆಗಳನ್ನು ತರಲು ಸಿಇಒಗಳನ್ನು ಬದಲಾವಣೆ ಮಾಡಿತ್ತು. ಆದರೆ ರೆಡಿಟ್‌, ಗೂಗಲ್‌, ಫೇಸ್‌ಬುಕ್‌ ಮುಂದೆ ಸ್ಪರ್ಧೆ ನೀಡದೇ ಮಾರುಕಟ್ಟೆಯಲ್ಲಿ ಸೋತಿತು.

    ಯಾಹೂ ಗ್ರೂಪ್ ವೆಬ್‌ಸೈಟ್‌ ಶಟ್‌ಟೌನ್‌ ಆದರೂ ಯಾಹೂ ಮೇಲ್‌ ಮೂಲಕ ಕಳುಹಿಸಿದ, ಸ್ವೀಕರಿಸಿದ ಇಮೇಲ್‌ ಹಾಗೆಯೇ ಇರಲಿದೆ. ಆದರೆ ಡಿಸೆಂಬರ್‌ 15ರ ನಂತರ ಇಮೇಲ್‌ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಿಲ್ಲ. ಇಮೇಲ್‌ ಕಳುಹಿಸಿದರೂ ಫೇಲ್ಯೂರ್‌ ನೋಟಿಫಿಕೇಶನ್‌ ಬರಲಿದೆ ಎಂದು ಕಂಪನಿ ತಿಳಿಸಿದೆ.

    ಯಾಹೂ ಸೋತಿದ್ದು ಹೇಗೆ?
    ಯಾವುದೇ ಕಂಪನಿ ಬೆಳವಣಿಗೆ ಆಗಬೇಕಾದರೆ ಭವಿಷ್ಯದ ದೃಷ್ಟಿಕೋನ ಚೆನ್ನಾಗಿರಬೇಕು. ಆದರೆ ಯಾಹೂ ಕಂಪನಿ ದೃಷ್ಟಿಕೋನ ಸರಿ ಇಲ್ಲದ ಕಾರಣ ಈಗ‌  ಯಾಹೂ ಗ್ರೂಪ್ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ವಿಶೇಷ ಏನೆಂದರೆ ಯಾಹೂ ಕಂಪನಿಗೆ ಗೂಗಲ್‌ ಮತ್ತು ಫೇಸ್‌ಬುಕ್‌ ಕಂಪನಿಯನ್ನೇ ಖರೀದಿಸುವ ಅವಕಾಶವಿತ್ತು. ಗೂಗಲ್‌ ಸಂಸ್ಥಾಪಕರಾದ ಲಾರಿ ಪೇಜ್‌ ಮತ್ತು ಸರ್ಜೆ ಬ್ರಿನ್‌ ಉನ್ನತ ಶಿಕ್ಷಣ ಪಡೆಯುವ ಸಲುವಾಗಿ 1 ದಶಲಕ್ಷ ಡಾಲರ್‌ ಬೆಲೆಗೆ ಯಾಹೂ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಈ ಖರೀದಿ ಒಪ್ಪಂದ ಫಲಪ್ರದವಾಗಿರಲಿಲ್ಲ.

    ಗೂಗಲ್‌ ಡೀಲ್‌ ವಿಫಲವಾದ ಬಳಿಕ 1 ಶತಕೋಟಿ ಡಾಲರ್‌ ನೀಡಿ ಫೇಸ್‌ಬುಕ್‌ ಕಂಪನಿಯನ್ನು ಖರೀದಿಸಲು ಯಾಹೂ ಉತ್ಸಾಹ ತೋರಿಸಿತ್ತು. ಆದರೆ ನಂತರ ಈ ಖರೀದಿ ಮೊತ್ತವನ್ನು 850 ದಶಲಕ್ಷ ಡಾಲರ್‌ಗೆ ಇಳಿಕೆ ಮಾಡಿತ್ತು. ಮೊತ್ತ ಇಳಿಕೆಯಾದ ಹಿನ್ನೆಲೆಯಲ್ಲಿ ಕಂಪನಿಯನ್ನು ಮಾರಾಟ ಮಾಡದೇ ಇರಲು ಫೇಸ್‌ಬುಕ್‌ ತೀರ್ಮಾನ ತೆಗೆದುಕೊಂಡಿತ್ತು.

    ಟೆಕ್‌ ಕಂಪನಿಯಾದರೂ ಯಾಹೂ ಮಾಧ್ಯಮ ಕಂಪನಿ ರೀತಿ ಪ್ರಚಾರ ಪಡೆದುಕೊಂಡಿತ್ತು. ಕಾಲಕ್ಕೆ ತಕ್ಕಂದೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸದೇ  ಜಾಹೀರಾತು ಮೂಲಕ ಆದಾಯ ಹೆಚ್ಚು ಮಾಡಲು ಮುಂದಾಗಿತ್ತು. ಈ ವೇಳೆ ಗೂಗಲ್‌ ಟೆಕ್‌ ಕ್ಷೇತ್ರದಲ್ಲಿ ಹಲವು ಸೇವೆಗಳನ್ನು ಆರಂಭಿಸಿದ್ದು ಯಾಹೂ ಕಂಪನಿಗೆ ಭಾರೀ ಹೊಡೆತ ನೀಡಿತು.

    2008ರಲ್ಲಿ ಮೈಕ್ರೋಸಾಫ್ಟ್‌ ಕಂಪನಿ ಯಾಹೂ ಕಂಪನಿಯನ್ನು 44.6 ಶತಕೋಟಿ ಡಾಲರ್‌ ನೀಡಿ ಖರೀದಿಸಲು ಆಸಕ್ತಿ ತೋರಿಸಿತು. ಆದರೆ ಯಾಹೂ ಈ ಖರೀದಿ ಪ್ರಸ್ತಾಪವನ್ನು ತಿರಸ್ಕರಿಸಿತ್ತು.

    ತನ್ನ ಮಾರುಕಟ್ಟೆ ಕಳೆದುಕೊಳ್ಳಲು ಸಿಇಒಗಳು ಕೈಗೊಳ್ಳುವ ನಿರ್ಧಾರವೇ ಕಾರಣ ಎಂದು ಅರಿತು 2012ರಲ್ಲಿ ಗೂಗಲ್‌ ಕಂಪನಿಯಲ್ಲಿ ಕೆಲಸ ಮಾಡಿದ್ದ ಮರಿಸ್ಸಾ ಮೇಯರ್‌ ಅವರನ್ನು ಸಿಇಒರನ್ನಾಗಿ ಯಾಹೂ ಕಂಪನಿ ನೇಮಕ ಮಾಡಿತು. ಗೂಗಲ್ ಮೇಲ್‌, ಗೂಗಲ್ ಫೋಟೋ, ಗೂಗಲ್ ನ್ಯೂಸ್‌, ಗೂಗಲ್ ನಕ್ಷೆಗಳು, ಗೂಗಲ್ ಪುಸ್ತಕಗಳು ಸೇರಿದಂತೆ ಗೂಗಲ್‌ ಕಂಪನಿಯಲ್ಲಿ ಹಲವು ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ ಮರಿಸ್ಸಾ 2017ರವರೆಗೆ ಸಿಇಒ ಆಗಿದ್ದರೂ ಯಾಹೂ ಕಂಪನಿ ಬಳಕೆದಾರರನ್ನು ಸೆಳೆಯುವಲ್ಲಿ ಸೋತಿತು. ಕೊನೆಗೆ ವೆರಿಝೋನ್‌ ಕಂಪನಿ 2017ರಲ್ಲಿ ಯಾಹೂ ಕಂಪನಿಯನ್ನು 4.8 ಶತಕೋಟಿ ಡಾಲರ್‌ ನೀಡಿ ಖರೀದಿಸಿತು.