Tag: Yadgiri

  • ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

    ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

    ಯಾದಗಿರಿ: ಸರ್ಕಾರದಿಂದ ಸಿಗಬೇಕಾದ ಕೂಲಿ ಹಣ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸಿದ ಕಾರ್ಮಿಕ ಮಹಿಳೆಯೊಬ್ಬರು ಜಿ.ಪಂ ಸಿಇಓ ಅವರನ್ನು ಪ್ರಶ್ನೆ ಮಾಡಿದ್ದರು. ಈ ವೇಳೆ ನನಗೆ ಕಳೆದ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದು ಯಾದಗಿರಿ ಜಿ.ಪಂ ಸಿಇಓ ಕವಿತಾ ಮನ್ನಿಕೇರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಎರಡು ತಿಂಗಳ ಕೂಲಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ತಮ್ಮ ಕೂಲಿ ಹಣ ನೀಡುವಂತೆ ಇಂದು ಕಾರ್ಮಿಕ ಮಹಿಳೆಯರು ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರು ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವ ಭರವಸೆ ನೀಡದರು. ಆದರೆ ಈ ವೇಳೆ ಮಹಿಳೆಯೊಬ್ಬರು ತಮ್ಮ ಕೂಲಿ ಹಣ ಕೂಡಲೇ ಪಾವತಿ ಮಾಡುವಂತೆ ಅಗ್ರಹಿಸಿದ್ದರು. ಕಾರ್ಮಿಕರ ಬೇಡಿಕೆ ಕೇಳಿದ ಸಿಇಒ ಕವಿತಾ ಅವರು ತಮಗೇ ಕಳೆದ 6 ತಿಂಗಳಿಂದ ಸಂಬಳ ಆಗಿಲ್ಲ ಎಂದು ತಿಳಿಸಿದರು.

    ಇತ್ತ ಜಿಲ್ಲಾ ಪಂಚಾಯಿತಿ ಸಿಇಓ ಅವರು ಹೇಳಿದ ಮಾತಿಗೆ ಕೆಲ ಪ್ರತಿಭಟನೆ ನಿಂತ ಮಹಿಳೆಯರು ಕ್ಷಣ ಕಾಲ ಕಂಗಾಲಾದರು. ಪ್ರತಿಭಟನೆ ನಿರತ ಮಹಿಳೆಯ ಮುಂದೇ ನಗುತ್ತಲೇ ನೋವು ಹೊರಹಾಕಿದ ಸಿಇಓ ಕವಿತಾ ಮನ್ನಿಕೇರಿ ಅವರು, ನಿಮ್ಮ ಸಮಸ್ಯೆಗಳು ನನಗೆ ಗೊತ್ತಿದೆ. ನಾನು ಒಬ್ಬ ಹೆಣ್ಣು ಮಗಳು, ನಿಮ್ಮ ಬೇಡಿಕೆಗಳನ್ನು ನಾನು ಸರ್ಕಾರದ ಗಮನ ತರುತ್ತೇನೆ. ಈಗ ಬೆಂಗಳೂರಿನಲ್ಲಿ ಸದನ ನಡೆಯುತ್ತಿದ್ದು, ಆದಷ್ಟು ಶೀಘ್ರ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ ಎಂದು ಕಾರ್ಮಿಕ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದರು.

    ತೀವ್ರ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ಜನ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗುತ್ತಿದ್ದು, ಬಹುತೇಕ ಹಳ್ಳಿಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಸರ್ಕಾರ ಯೋಜನೆಗಳು ಸರಿಯಾದ ಸಮಯಕ್ಕೆ ಅನುಷ್ಠಾನ ಆಗದ ಹಿನ್ನೆಲೆಯಲ್ಲಿ ಬಡ ಜನರ ಹೊತ್ತೊಟ್ಟಿನ ಊಟಕ್ಕಾಗಿ ಪದರಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಪ್ರತಿಭಟನಾಕಾರರು ತಮ್ಮ ನೋವನ್ನು ತೋಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಷೇತ್ರದಲ್ಲಿ ನನ್ನನ್ನು ಬಲಿಕಾ ಬಕ್ರಾ ಮಾಡಲಾಗ್ತಿದೆ: ಪ್ರಿಯಾಂಕ್ ಖರ್ಗೆ

    ಕ್ಷೇತ್ರದಲ್ಲಿ ನನ್ನನ್ನು ಬಲಿಕಾ ಬಕ್ರಾ ಮಾಡಲಾಗ್ತಿದೆ: ಪ್ರಿಯಾಂಕ್ ಖರ್ಗೆ

    ಯಾದಗಿರಿ: ಕ್ಷೇತ್ರದಲ್ಲಿ ನನ್ನನ್ನು ಬಲಿಕಾ ಬಕ್ರಾ ಮಾಡಲಾಗುತ್ತಿದೆ. ಪಕ್ಷ ಬಿಟ್ಟು ಹೋಗಲು ಸದ್ಯ ಎಲ್ಲರಿಗೂ ಒಂದು ಕಾರಣ ಬೇಕಾಗಿದ್ದಕ್ಕೆ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಮೇಶ್ ಜಾಧವ್ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇಲ್ಲಿಯವರೆಗೆ ಉಮೇಶ್ ಜಾದವ್ ನನ್ನ ಕೈಗೆ ಸಿಕ್ಕಿಲ್ಲ ಮತ್ತು ಕರೆ ಮಾಡಿದ್ರು ಸಂಪರ್ಕ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಲು ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನನ್ನು ಬಲಿಕಾ ಬಕ್ರಾ ಮಾಡುತ್ತಿದ್ದಾರೆ. ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಿರೋದಕ್ಕೆ ಅವರ ಕೆಲಸದ ಭಾರವನ್ನು ನಾವು ಹೊತ್ತುಕೊಂಡು ಕರ್ತವ್ಯ ನಿರ್ವಸುತ್ತಿದ್ದೇವೆ. ಪಕ್ಷದಿಂದ ಹೊರಹೋಗಲು ಏನಾದರೂ ಕಾರಣ ಬೇಕಲ್ಲ ಅದಕ್ಕಾಗಿ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ವಿಚಾರವಾಗಿ ಪ್ರತಿಕ್ರಿಯಿಸಿ, ಯಾದಗಿರಿಯಲ್ಲಿ ನಮ್ಮ ತಂದೆ ಅವರಿಗೆ ಅಪಾರ ಸಂಖ್ಯೆಯ ಬೆಂಬಲಿಗರಿದ್ದಾರೆ. ಅವರಿಗ್ಯಾಕೆ ಸೋಲಿನ ಭೀತಿ ಬರುತ್ತದೆ. ಅವರಿಂದ ಬಿಜೆಪಿಯವರಿಗೆ ಸೋಲಿನ ಭೀತಿ ಇದೆ. ಆದರಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲಿ ಸಂಪುಟ ಉಪ ಸಮಿತಿ ತಂಡ ಬರ ಅಧ್ಯಯನ ಪ್ರವಾಸ ನಡೆಸುತ್ತಿದ್ದು, ಜಿಲ್ಲೆಯ ಚಕ್ರ ಗ್ರಾಮದಲ್ಲಿ ಸಚಿವ ಬಂಡೆಪ್ಪ ಕಾಂಶೆಂಪುರ, ಪ್ರಿಯಾಂಕ್ ಖರ್ಗೆ ಹಾಗೂ ರಾಜಶೇಖರ ಬಿ ಪಾಟೀಲ್ ಒಳಗೊಂಡ ಸಚಿವರ ತಂಡ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ್ದಾರೆ. ಚಕ್ರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ, ಬೋರವೆಲ್, ಜೋಳದ ಬೆಳೆ ಪರಿಶೀಲಿಸಿದ ತಂಡ, ಇದೇ ಫೆ.4 ರಂದು ಬರ ಪರಿಶೀಲನೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಮಿತಿ ಸಲ್ಲಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪೊಲೀಸರ ಕೈಯಲ್ಲಿ ಲಾಠಿ ಬದಲು ಪೊರಕೆಯಿಂದ ಪರಿಸರ ಸ್ವಚ್ಛತಾ ಕಾರ್ಯ

    ಪೊಲೀಸರ ಕೈಯಲ್ಲಿ ಲಾಠಿ ಬದಲು ಪೊರಕೆಯಿಂದ ಪರಿಸರ ಸ್ವಚ್ಛತಾ ಕಾರ್ಯ

    ಯಾದಗಿರಿ: ಖಾಕಿ ಬಟ್ಟೆ ಧರಿಸಿ ಕೈಯಲ್ಲಿ ಲಾಠಿ ಹಿಡಿದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಖಾಕಿ ಪಡೆ ಇಂದು ಪೊರಕೆ ಹಿಡಿದು ಸ್ವಚ್ಛತಾ ಕಾಳಜಿ ಮೆರೆದಿದ್ದಾರೆ.

    ಹೌದು, ಯಾದಗಿರಿ ನಗರದ ವಿವಿಧೆಡೆ ಪೊಲೀಸರು ಕೈಯಲ್ಲಿ ಪೊರಕೆ ಹಿಡಿದು ಚರಂಡಿ, ರಸ್ತೆ ಮೇಲಿದ್ದ ರಾಶಿ ರಾಶಿ ಕಸವನ್ನು ತೆಗೆದು ನಗರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಅಷ್ಟೇ ಅಲ್ಲದೇ ನಗರದ ಜನರಿಗೆ, ಸ್ವಚ್ಛತೆ ಕಾಳಜಿ ಪ್ರತಿಯೊಬ್ಬರು ತೊರಬೇಕು, ಪ್ರತಿಯೊಬ್ಬರು ಸ್ವಚ್ಛತಾ ಕಾಳಜಿ ವಹಿಸಿದರೆ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯವೆಂದು ಸಂದೇಶ ಸಾರಿದರು.

    ನಿತ್ಯವು ಆರೋಪಿಗಳನ್ನು ಹುಡುಕುವುದು, ಭದ್ರತೆಗೆಂದು ಲಾಠಿ ಹಿಡಿದುಕೊಂಡು ಖಾಕಿ ಪಡೆಗಳು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಇಂದು ಕರ್ತವ್ಯದ ಜಂಜಾಟ ಬಿಟ್ಟು ಪೊಲೀಸರು ಬೆಳ್ಳಂಬೆಳಗ್ಗೆ ಪೊರಕೆ ಹಿಡಿದು ಚರಂಡಿ ಸ್ವಚ್ಛತೆ ಮಾಡಿದರು. ಯಾದಗಿರಿಯ ಎಸ್‍ಪಿ ಯಡಾ ಮಾರ್ಟಿನ್ ನೇತೃತ್ವದಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

    ಯಾದಗಿರಿ ಎಸ್ಪಿ ಯಡಾ ಮಾರ್ಟಿನ್, ಡಿವೈಎಸ್ಪಿ ಪಾಂಡುರಂಗ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವೈದ್ಯರು ಕೂಡ ಖಾಕಿ ಪಡೆಗಳ ಜೊತೆ ಕೈಜೋಡಿಸಿದರು. ನಗರದ ಸುಭಾಷ್ ವೃತ್ತ, ಚಿತ್ತಾಪುರ ರಸ್ತೆ, ಹಳೆ ಬಸ್ ನಿಲ್ದಾಣ ಹಾಗೂ ಮೊದಲಾದ ಕಡೆ ಸ್ವಚ್ಛ ಮಾಡಿದರು. ಖುದ್ದು ಎಸ್ಪಿ ಯಡಾ ಮಾರ್ಟಿನ್ ಅವರು ಚರಂಡಿ ಹಾಗೂ ರಸ್ತೆ ಬದಿ ಇದ್ದ ತ್ಯಾಜ್ಯವನ್ನು ಕೈಯಿಂದ ತೆಗೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್ ಓವರ್‌ಟೇಕ್ ಮಾಡಿದ್ದಕ್ಕೆ ಯುವಕರ ಮಧ್ಯೆ ಜಗಳ- ಬಿಡಿಸಲು ಬಂದವರ ಮೇಲೆ ಹಲ್ಲೆಗೈದು ಪರಾರಿ

    ಬೈಕ್ ಓವರ್‌ಟೇಕ್ ಮಾಡಿದ್ದಕ್ಕೆ ಯುವಕರ ಮಧ್ಯೆ ಜಗಳ- ಬಿಡಿಸಲು ಬಂದವರ ಮೇಲೆ ಹಲ್ಲೆಗೈದು ಪರಾರಿ

    ಯಾದಗಿರಿ: ಬೈಕ್ ಹಿಂದಿಕ್ಕಿದ್ದಕ್ಕೆ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ಯುವಕರು ಜಗಳವಾಡಿದ್ದು, ಇದನ್ನು ಬಿಡಿಸಲು ಹೋದವರ ಮೇಲೆಯೇ ಅವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

    ಇಂದು ಬೆಳಗ್ಗೆ ಕಕ್ಕೇರಾ ಪಟ್ಟಣದ ಸವಾರನೊಬ್ಬ ಮತ್ತೊಂದು ಬೈಕ್ ಹಿಂದಿಕ್ಕಿ ಮುಂದೆ ಹೋಗಿದ್ದನು. ಮಧ್ಯಾಹ್ನ ಈ ಇಬ್ಬರು ಯುವಕರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪಟ್ಟಣದ ಮಧ್ಯೆ ಜಗಳವಾಡಿದ್ದಾರೆ. ಈ ವೇಳೆ ಇಬ್ಬರ ಸಹಚರರು ಆಗಮಿಸಿ ಬಡಿದಾಡಿಕೊಂಡಿದ್ದಾರೆ.

    ಈ ಜಗಳವನ್ನು ನೋಡಿದ ಕೆಲವು ಸ್ಥಳೀಯರು ಜಗಳ ಬಿಡಿಸಲು ಹೋಗಿದ್ದರು. ಯಾರ ಮಾತಿಗೂ ಬಗ್ಗದ ಯುವಕರು ಜಗಳ ಬಿಡಿಸಲು ಬಂದವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಅಂಬರೀಶ್ ಸೋಲಾಪುರ ಸೇರಿದಂತೆ ಕೆಲವರಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಬಾರಿ ಕಾರೊಂದರ ಮೇಲೆ ಕಲ್ಲು ಬಿದ್ದ ಪರಿಣಾಮ ಮುಂಬದಿಯ ಗಾಜು ಜಖಂಗೊಂಡಿದೆ.

    ವ್ಯಕ್ತಿಯೊಬ್ಬರು ತಕ್ಷಣವೇ ಕೊಡೇಕಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಬರುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಯುವಕರು ತಮ್ಮ ಬೈಕ್‍ಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಪಟ್ಟಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪರಾರಿಯಾದ ಯುವಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಕುರಿತು ಮಾಹಿತಿ ನೀಡಲು ಸ್ಥಳದಲ್ಲಿದ್ದ ಅನೇಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆ ಬಂದ್ರೆ ಸಾಕು ಯಾದಗಿರಿ ವಿದ್ಯಾರ್ಥಿಗಳು ಭಯಪಡ್ತಾರೆ!

    ಮಳೆ ಬಂದ್ರೆ ಸಾಕು ಯಾದಗಿರಿ ವಿದ್ಯಾರ್ಥಿಗಳು ಭಯಪಡ್ತಾರೆ!

    ಯಾದಗಿರಿ: ಮಳೆ ಬಂದ್ರೆ ಸಾಕು ಯಾದಗಿರಿ ತಾಲೂಕಿನ ಅರಕೇರಾ (ಕೆ) ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲೆ ಜಲಮಯವಾಗುತ್ತದೆ ಎಂದು ಭಯಪಡುತ್ತಾರೆ.

    ಸಣ್ಣ ಮಳೆ ಬಂದ್ರೂ ಇಲ್ಲಿಯ ಇಡೀ ಶಾಲೆ ಜಲಮಯ ಆಗುತ್ತದೆ. ಇದರಿಂದ ಎಲ್ಲಾ ಕೊಠಡಿಗಳಲ್ಲೂ ನೀರು ತೊಟ್ಟಿಕ್ಕುತ್ತಲೇ ಇರುತ್ತದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕಾಂದ್ರೆ ಮಕ್ಕಳು ಕೈಯಲ್ಲಿ ಕೊಡೆ ಹಿಡಿದುಕೊಂಡು ಕುಳಿತುಕೊಳ್ಳಬೇಕು. ಇನ್ನು ಶಿಕ್ಷರದ್ದು ಅದೇ ಫಜೀತಿಯಾಗಿದೆ.

    ಹೀಗಾಗಿ ಕೊಡೆ ಹಿಡಿದುಕೊಂಡೇ ಪಾಠ ಮಾಡಬೇಕಾದ ಅನಿವಾರ್ಯತೆ ಇಲ್ಲಿನ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರಿಸ್ಥಿತಿಯಾಗಿದೆ. ಈ ಶಾಲೆಯಲ್ಲಿ ಸುಮಾರು 450 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಶಾಲಾ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿರುವ ಕಾರಣ ಮಳೆ ಬಂದಾಗ ಸೋರುತ್ತದೆ. ಅಲ್ಲದೇ ಕಟ್ಟಡದಲ್ಲಿ ಬಿರುಕುಗಳು ಸಹ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಆತಂಕದಿಂದಲೇ ಪಾಠ ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ.

    ಈ ಬಗ್ಗೆ ಶಿಕ್ಷಣ ಇಲಾಖೆಗೆ ಸಾಕಷ್ಟು ಬಾರಿ ಗಮನಕ್ಕೆ ತಂದಿದ್ರೂ ಪ್ರಯೋಜನ ಆಗಿಲ್ಲ ಅಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದೂರಿದ್ದಾರೆ.

  • ಮರಿ ಶ್ವಾನ ಬದುಕಿನ ನೊಗಕ್ಕೆ ಹೆಗಲು ಕೊಡುತ್ತಿದೆ ಹಂದಿ

    ಮರಿ ಶ್ವಾನ ಬದುಕಿನ ನೊಗಕ್ಕೆ ಹೆಗಲು ಕೊಡುತ್ತಿದೆ ಹಂದಿ

    ಯಾದಗಿರಿ: ತಾಯಿಯನ್ನು ಕಳೆದು ಕೊಂಡ ನಾಯಿ ಮರಿಯೊಂದು ಬದುಕಲು ಪರದಾಟ ನಡೆಸಿದ್ದ ವೇಳೆ ಹಂದಿಯೊಂದು ಹಾಲು ಉಣಿಸಿ ತಾಯಿ ವಾತ್ಸಲ್ಯ ತೋರುತ್ತಿರುವ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದ ಆಶ್ರಯ ಕಾಲೋನಿ ಘಟನೆ ನಡೆದಿದೆ.

    ಸುಮಾರು ಒಂದು ತಿಂಗಳಿಂದ ನಾಯಿ ಮರಿಗೆ ಹಂದಿ ನಿತ್ಯವು ಹಾಲು ಉಣಿಸುತ್ತಿದ್ದು, ಮಾತೃ ಹೃದಯ ನೋಡುಗರನ್ನು ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ನಾಯಿ ತನ್ನ ಮರಿಗೆ ಜನ್ಮ ನೀಡಿದ ಬಳಿಕ ಅಪಘಾತದಲ್ಲಿ ಸಾವನಪ್ಪಿದೆ. ಹೀಗಾಗಿ ತಬ್ಬಲಿಯಾದ ನಾಯಿ ಮರಿಗೆ ಹಂದಿ ತಾಯಿ ಮಮಕಾರ ತೋರಿಸಿ ಹಾಲುಣಿಸುತ್ತಿದೆ.

    ಸಾಮಾನ್ಯವಾಗಿ ನಾಯಿ ಹಾಗೂ ಹಂದಿ ಮಧ್ಯೆ ಹೆಚ್ಚು ಕಿತ್ತಾಟ ನಡೆಯುತ್ತಿರುತ್ತದೆ. ಆದರೆ ಇಲ್ಲಿ ಹಂದಿ ನಾಯಿಗೆ ಹಾಲುಣಿಸುವ ಮೂಲಕ ಮಾನವೀಯತೆ ಮೆರೆದಿದೆ. ಸಮಾಜದಲ್ಲಿ ಪ್ರೀತಿ ಪ್ರೇಮ ವಿಶ್ವಾಸದಿಂದ ಬದುಕು ಸಾಧಿಸಬಹುದು ಎಂದು ಪ್ರಾಣಿಗಳು ತೋರಿಸಿಕೊಟ್ಟಿದೆ. ಎಂಥಾ ಕಷ್ಟವನ್ನು ಬಂದರು ಬದುಕಬೇಕು ಎನ್ನುವುದು ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ.

  • ವಾಕಿಂಗ್ ಹೋಗಿದ್ದವರು ಹೆಣವಾಗಿ ರಸ್ತೆಯಲ್ಲಿ ಬಿದ್ದರು!

    ವಾಕಿಂಗ್ ಹೋಗಿದ್ದವರು ಹೆಣವಾಗಿ ರಸ್ತೆಯಲ್ಲಿ ಬಿದ್ದರು!

    ಯಾದಗಿರಿ: ಬೆಳಗ್ಗೆ ವಾಕಿಂಗ್ ಹೋಗಿದ್ದ ಇಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ದಾರಿಯಲ್ಲಿಯೇ ಮೃತಪಟ್ಟ ಘಟನೆ ಸುರಪುರ ತಾಲೂಕಿನ ಭಿ.ಗುಡಿ ಬಳಿ ನಡೆದಿದೆ.

    ಗಂಗಾಧರ್‍ಸ್ವಾಮಿ, ಮೋಹನ್(38) ಮೃತ ದುರ್ದೈವಿಗಳು. ಮದುವೆ ನಿಮಿತ್ತ ಗಂಗಾಧರ್ ಸ್ವಾಮಿ ಹಾಗೂ ಮೋಹನ್ ಭಿ.ಗುಡಿ ಗ್ರಾಮಕ್ಕೆ ಬಂದಿದ್ದರು. ಬೆಳಗ್ಗೆ ವಾಕಿಂಗ್ ಅಂತಾ ಹೋಗಿದ್ದಾಗ ಅನಾಹುತ ಸಂಭವಿಸಿದೆ.

    ಡಿಕ್ಕಿ ಹೊಡೆದ ತಕ್ಷಣವೇ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಾದಗಿರಿಯಲ್ಲಿ ಏಳು ಹಸುಗಳನ್ನು ಬಲಿತೆಗೆದುಕೊಂಡ ಲಾರಿ!

    ಯಾದಗಿರಿಯಲ್ಲಿ ಏಳು ಹಸುಗಳನ್ನು ಬಲಿತೆಗೆದುಕೊಂಡ ಲಾರಿ!

    ಯಾದಗಿರಿ: ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿಯೊಂದು ಮನೆಗೆ ನುಗ್ಗಿದ ಪರಿಣಾಮ ಏಳು ಹಸುಗಳು ಬಲಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಈ ಘಟನೆ ಯಾದಗಿರಿ ತಾಲೂಕಿನ ರಾಮಸಮುದ್ರಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ನಿಂತಿದ್ದ ಲಾರಿ ಹಠಾತ್ ಆಗಿ ಚಲಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ನಿನ್ನೆ ರಾತ್ರಿ ಚಾಲಕ ಮೈಲಾಪುರ ಕ್ರಾಸ್ ಬಳಿ ಲಾರಿ ನಿಲ್ಲಿಸಿ ಊಟಕ್ಕೆ ತೆರಳಿದ್ದನು. ಈ ಸಂದರ್ಭದಲ್ಲಿ ಲಾರಿ ಹಠತ್ತಾಗಿ ಹಿಂದಕ್ಕೆ ಚಲಿಸಿ ಪಕ್ಕದಲ್ಲೇ ಇದ್ದ ಮನೆಯೊಳಗೆ ನುಗ್ಗಿದೆ. ಪರಿಣಾಮ ಏಳು ಹಸುಗಳು ಮೃತಪಟ್ಟಿವೆ.

    ಘಟನೆಯಿಂದ ಅಂದಾಜು 1.50 ಲಕ್ಷದ ಹಸು, 2 ಲಕ್ಷದಷ್ಟು ಮನೆ ವಸ್ತುಗಳು ಹಾನಿಯಾಗಿವೆ. ಘಟನೆ ನಡೆದು 14 ಗಂಟೆಯಾದ್ರೂ, ಸ್ಥಳಕ್ಕೆ ಬಾರ ಪೊಲೀಸರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಈ ಘಟನೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಬಿಜೆಪಿ ಟಿಕೆಟ್ ಆಕಾಂಕ್ಷಿ ಪತ್ನಿಗೆ ಬರೆ ಹಾಕಿದ ದುಷ್ಕರ್ಮಿಗಳು

    ಬಿಜೆಪಿ ಟಿಕೆಟ್ ಆಕಾಂಕ್ಷಿ ಪತ್ನಿಗೆ ಬರೆ ಹಾಕಿದ ದುಷ್ಕರ್ಮಿಗಳು

    ಯಾದಗಿರಿ: ಚುನಾವಣೆ ಕಾವು ಹೆಚ್ಚಳವಾಗುತ್ತಿದಂತೆ ರಾಜಕೀಯ ದುರುದ್ದೇಶದಿಂದ ಕೂಡಿರುವ ಕೃತ್ಯಗಳು ಆರಂಭವಾಗಿದ್ದು, ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಪತ್ನಿ ಮೇಲೆ ಮಾರಣಾಂತಿಕವಾಗಿ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

    ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಡೆಸಿದ್ದಾರೆ. ಆದರೆ ಬಿಜೆಪಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾಗನೂರ ಪತ್ನಿ ಶಿಲ್ಪಾ ಮಾಗನೂರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ಕಳೆದ ಬಾರಿ ಬಿಜೆಪಿ ಪಕ್ಷದಿಂದ ಚಂದ್ರಶೇಖರ್ ಮಾಗನೂರ ಯಾದಗಿರಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಭಾರಿ ಯಾದಗಿರಿ ಮತಕ್ಷೇತ್ರ ಬಿಜೆಪಿ ಆಕಾಂಕ್ಷಿಯಾಗಿದ್ದರು. ಆದರೆ ಗುರುವಾರ ಬೆಳಗ್ಗೆ ಚಂದ್ರಶೇಖರ್ ಅವರ ಸ್ವಗ್ರಾಮವಾಗಿರುವ ಸುರಪುರ ತಾಲೂಕಿನ ರಾಜನಕೋಳುರ ಗ್ರಾಮದ ಮನೆ ಬಳಿ ಪತ್ನಿ ಶಿಲ್ಪಾ ವಾಯು ವಿಹಾರಕ್ಕೆ ತೆರಳಿದಾಗ ಹಿಂಬದಿಯಿಂದ ಬಂದ ಇಬ್ಬರು ದುಷ್ಕರ್ಮಿಗಳು ಶಿಲ್ಪಾರಿಗೆ ಕಾಯಿಸಿದ ಕಬ್ಬಿಣದ ರಾಡ್ ಬರೆ ಎಳೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಮೂಲಕ ಚಂದ್ರಶೇಖರ ಮಾಗನೂರ ಅವರನ್ನು ರಾಜಕೀಯ ಬಿಡಬೇಕೆಂದು ದುಷ್ಕರ್ಮಿಗಳು ಜೀವ ಬೇದರಿಕೆ ಕೂಡ ಹಾಕಿದ್ದಾರೆ.

    ಸದ್ಯ ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡಿರುವ ಶಿಲ್ಪಾ ಅವರು ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶಿಲ್ಪಾ ಮೇಲಾದ ಹಲ್ಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನೀತಿಸಂಹಿತೆ ಲೆಕ್ಕಿಸದೆ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಶಿಲ್ಪಾ ಮಾಗನೂರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಅಲ್ಲದೇ ಹಲ್ಲೆಯನ್ನು ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಕೊಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಘಟನೆ ಕುರಿತು ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು

    ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು

    ಯಾದಗಿರಿ: ಬಿರುಗಾಳಿ ಸಹಿತ ಮಳೆ ವೇಳೆ ಸಿಡಿಲು ಬಡಿದು ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ನಡೆದಿದೆ.

    ಸುರಪುರ ತಾಲೂಕಿನ ಪೀರಗಾರದೊಡ್ಡಿ ಗ್ರಾಮದ 12 ವರ್ಷದ ಮೌನೇಶ್ ಸಿಡಿಲು ಬಡಿದ ಸಾವನ್ನಪ್ಪಿದ ಬಾಲಕ. ಗ್ರಾಮ ಹೊರ ವಲಯದಲ್ಲಿ ದನ ಮೇಯಿಸುತ್ತಿದ್ದ ಸಮಯದಲ್ಲಿ ಮಳೆ ಬಂದ ಕಾರಣ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದ ವೇಳೆ ಸಿಡಿಲು ತಾಗಿದೆ.

    ಮತ್ತೊಂದು ಘಟನೆಯಲ್ಲಿ ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಕುಮಾರ್ (30) ಎಂಬ ಯುವಕ ಮೃತ ಪಟ್ಟಿದ್ದಾರೆ. ದೇವಾಲಯಕ್ಕೆ ತೆರಳಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ 5 ಜನರು ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಿಡಿದು ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ. ಅಲ್ಲದೇ ಜಿಲ್ಲೆಯ ರಾಮಸಮುದ್ರ ಬಳಿ ಸಿಡಿಲಿಗೆ ಚಂದ್ರಪ್ಪ, ಸಿದ್ದರಾಮಪ್ಪ ಎಂಬವರಿಗೆ ಸೇರಿದ 12 ಮೇಕೆಗಳು ಸಾವನ್ನಪ್ಪಿವೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸಾಲಗುಂದ ಬಳಿ ಸಿಡಿಲು ಬಡಿದು ಒಬ್ಬ ಯುವಕ ಹಾಗೂ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ಸಾಲಗುಂದ ಗ್ರಾಮದ 34 ವರ್ಷದ ಮಹಿಬೂಬ ರಾಜಾ ನಾಯ್ಕ್ ಮೃತ ದುರ್ದೈವಿ. ಮೇಕೆ ಕಾಯಲು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ಸಿಡಿದು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಜೊತೆಗಿದ್ದ ನಾಲ್ಕು ಮೇಕೆಗಳು ಸಾವಿಗೀಡಾಗಿವೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ನಗರದಲ್ಲೂ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಭಾಗದಲ್ಲಿ ಭತ್ತ ಸೇರಿ ವಿವಿಧ ಬೆಳೆ ಹಾನಿಯಾಗಿವೆ.