Tag: yaarige yaaruntu

  • ಯಾರಿಗೆ ಯಾರುಂಟು ಚಿತ್ರಕ್ಕೆ ಯೋಗರಾಜ್ ಭಟ್ ಹಾರೈಕೆ!

    ಯಾರಿಗೆ ಯಾರುಂಟು ಚಿತ್ರಕ್ಕೆ ಯೋಗರಾಜ್ ಭಟ್ ಹಾರೈಕೆ!

    ಬೆಂಗಳೂರು: ಹಾಡುಗಳ ಮೂಲಕವೇ ಹವಾ ಸೃಷ್ಟಿಸೋ ಚಿತ್ರಗಳೆಲ್ಲ ಗೆಲುವು ದಾಖಲಿಸುತ್ತವೆಂದು ನಂಬಿಕೆಯಿದೆ. ಈ ಸೂತ್ರದ ಆಧಾರದಲ್ಲಿ ಹೇಳೋದಾದರೆ ರಘುನಾಥ್ ನಿರ್ಮಾಣದ ಯಾರಿಗೆ ಯಾರುಂಟು ಚಿತ್ರದ ಗೆಲುವೂ ನಿಚ್ಚಳವಾದಂತಿದೆ. ಈ ಚಿತ್ರದ ಹಾಡುಗಳೆಲ್ಲ ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ. ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆಗೆ ತಯಾರಾಗಿ ನಿಂತಿರೋ ಯಾರಿಗೆ ಯಾರುಂಟು ಬಗ್ಗೆ ನಿರ್ದೇಶಕ ಯೋಗರಾಜ ಭಟ್ ಮೆಚ್ಚುಗೆಯ ಮಾತಾಡುತ್ತಲೇ ಶುಭ ಹಾರೈಸಿದ್ದಾರೆ.

    ಹುಮ್ಮಸ್ಸು ಹೊಂದಿರೋ ತಂಡವೊಂದರಿಂದ ರೂಪುಗೊಂಡಿರೋ ಈ ಚಿತ್ರ ಯಾರಿಗೆ ಯಾರುಂಟು ಎರವಿನ ಸಂಸಾರ ಎಂಬ ದಾಸವಾಣಿಯ ಸಾಲುಗಳನ್ನು ಹೊಂದಿರೋ ಚಿತ್ರ. ಸಂಗೀತವನ್ನೂ ಪ್ರಧಾನವಾಗಿಸಿಕೊಂಡಿರೋ ಇದು ತಮ್ಮ ಪರಿಚಿತರನೇಕರು ಸೇರಿ ಮಾಡಿರೋ ಚಿತ್ರ. ಎಲ್ಲರೂ ನೋಡಿ ಈ ಪ್ರಯತ್ನವನ್ನು ಗೆಲ್ಲಿಸಬೇಕಾಗಿ ಯೋಗರಾಜ ಭಟ್ ಕೇಳಿಕೊಂಡಿದ್ದಾರೆ.

    ಕಿರಣ್ ಗೋವಿ ನಿರ್ದೇಶನದ ಈ ಚಿತ್ರ ಯೋಗರಾಜ ಭಟ್ ಮಾತಿನಂತೆಯೇ ಬದುಕಿನ ನಾನಾ ಮಗ್ಗುಲುಗಳನ್ನು ಭರ್ಜರಿ ಮನರಂಜನೆಯೊಂದಿಗೆ ತೆರೆದಿಡುವ ಚಿತ್ರ. ಈಗಾಗಲೇ ಇದರ ಅಸಲಿ ಕಥೆಯೇನು ಅಂತ ಪ್ರೇಕ್ಷಕರು ಚರ್ಚಿಸಲಾರಂಭಿಸಿದ್ದಾರೆ. ಒರಟ ಪ್ರಶಾಂತ್ ಮೂರು ವರ್ಷದ ಬಳಿಕ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋ ಕಾತರ ಹೊಂದಿದ್ದಾರೆ. ಕೃತಿಕಾ ರವೀಂದ್ರ, ಲೇಖಾ ಚಂದ್ರ ಮತ್ತು ಅದಿತಿ ರಾವ್ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv  

  • ‘ಯಾರಿಗೆ ಯಾರುಂಟು’ ಅಂತಿದಾರೆ ನಿರ್ಮಾಪಕ ರಘು ಹೆಸರಘಟ್ಟ

    ‘ಯಾರಿಗೆ ಯಾರುಂಟು’ ಅಂತಿದಾರೆ ನಿರ್ಮಾಪಕ ರಘು ಹೆಸರಘಟ್ಟ

    ಕಷ್ಟದ ಹಾದಿಯಲ್ಲೇ ಕಟ್ಟಿಕೊಂಡ ಬದುಕು ಮತ್ತು ಮುಂದ್ಯಾವತ್ತೋ ಒಂದೊಳ್ಳೆ ಚಿತ್ರವನ್ನು ಕನ್ನಡ ಚಿತ್ರರಂಗಕ್ಕಾಗಿ ಕೊಡಬೇಕೆಂಬ ಬಣ್ಣದ ಕನಸು… ಬ್ಯುಸಿನೆಸ್ಸು, ಒತ್ತಡ ಅಂತ ಅದೇನೇ ಇದ್ದರೂ ಪ್ರತೀ ಕನ್ನಡ ಚಿತ್ರಗಳನ್ನೂ ಕುಟುಂಬ ಸಮೇತ ನೋಡುವ ಕಲಾ ಪ್ರೇಮ. ಇದೀಗ ಹಾಡುಗಳ ಮೂಲಕ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿರುವ ಯಾರಿಗೆ ಯಾರುಂಟು ಚಿತ್ರ ನಿರ್ಮಾಣದ ಹಿಂದೆ ಇದೆಲ್ಲವೂ ಇದೆ. ಅಂಥಾದ್ದೊಂದು ಕಲಾಪ್ರೇಮದ ದ್ಯೋತಕವೆಂಬಂತೆ ನಿರ್ಮಾಪಕ ಹೆಚ್ ಸಿ ರಘುನಾಥ್ ಅವರೂ ಇದ್ದಾರೆ!

    ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರವನ್ನು ನಿರ್ಮಾಣ ಮಾಡಿರುವವರು ರಘುನಾಥ್. ನಿರ್ದೇಕ ಕಿರಣ್ ಗೋವಿ ಅವರ ಚಿಕ್ಕಪ್ಪನ ಮಗನೂ, ವರಸೆಯಲ್ಲಿ ಅಣ್ಣನೂ ಆಗಿರುವ ರಘುನಾಥ್ ಹೆಸರಘಟ್ಟ ಸೀಮೆಯ ತುಂಬಾ ರಘು ಅಣ್ಣ ಎಂದೇ ಪ್ರಸಿದ್ಧರು. ಹೆಸರಘಟ್ಟದ ಅಂಗಡಿ ಚಿಕ್ಕಣ್ಣನವರ ಪುತ್ರ ರಘು ಎಲ್ಲ ವ್ಯವಹಾರಗಳಾಚೆಗೂ ಈ ಭಾಗದಲ್ಲಿ ಎಲ್ಲರ ಪ್ರೀತಿಯ ವ್ಯಕ್ತಿ. ಇಷ್ಟು ವರ್ಷಗಳ ಕಾಲ ತಾವು ಸಂಪಾದಿಸಿದ ಹಣಕ್ಕಿಂತಲೂ, ಈಗ ಪಡೆದುಕೊಂಡಿರೋ ಜನರ ವಿಶ್ವಾಸ ಪ್ರೀತಿಯೇ ದೊಡ್ಡದೆಂಬ ಭಾವನೆ ರಘು ಅವರದ್ದು.

    ಈ ಭಾಗದಲ್ಲಿ ಯಶಸ್ವೀ ಉದ್ಯಮಿಯಾಗಿ ಗುರುತಿಸಿಕೊಂಡಿರೋ ರಘು ತಮ್ಮ ಸೋದರ ಸಂಬಂಧಿಯೇ ಆಗಿರುವ ಕಿರಣ್ ಗೋವಿ ಅವರ ಕನಸಿಗೆ ಸಾಥ್ ನೀಡಿದ್ದಾರೆ. ಈಗ್ಗೆ ಮೂರು ವರ್ಷದ ಹಿಂದೆ ಕಿರಣ್ ಗೋವಿಯವರ ತಂದೆ ಅನಾರೋಗ್ಯಕ್ಕೀಡಾಗಿದ್ದರು. ಹೆಚ್ಚೂ ಕಮ್ಮಿ ಆಸ್ಪತ್ರೆಯ ಅಲೆದಾಟವೇ ಬದುಕಾಗಿ ಹೋಗಿತ್ತು. ಅಖಂಡ ಮೂರು ವರ್ಷಗಳ ಕಾಲ ಕಿರಣ್ ಗೋವಿಯವರನ್ನು ತಟಸ್ಥರಾಗುವಂತೆ ಮಾಡಿದ್ದದ್ದು ಅದೇ ಸಂಕಟ. ಕಡೆಗೂ ಅವರ ತಂದೆ ತೀರಿಕೊಂಡಿದ್ದರು. ಈ ಸಂಕಟದ ಮಡುವಲ್ಲಿಯೂ ಕಿರಣ್ ಒಂದೊಳ್ಳೆ ಕಥೆ ರೂಪಿಸಿಕೊಂಡು ಈ ವಿಚಾರವನ್ನು ತಿಳಿಸಿದಾಗ ರಘು ಮೊದಲು ಕಥೆ ಕೇಳಿದ್ದರಂತೆ. ಸಂಬಂಧದ ಬಂಧ ಏನೇ ಇದ್ದರೂ ಕಥೆ ತುಂಬಾ ಹಿಡಿಸಿದ್ದರಿಂದ, ಅದನ್ನು ಒಂದು ಒಳ್ಳೆ ಚಿತ್ರವಾಗಿ ರೂಪಿಸುತ್ತಾರೆಂಬ ಭರವಸೆ ಕಿರಣ್ ಗೋವಿಯವರ ಮೇಲಿದ್ದುದರಿಂದಲೇ ರಘು ಈ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ.

    ರಘುನಾಥ್ ಅವರು ಹೆಸರಘಟ್ಟ ಸೀಮೆಯಲ್ಲಿಯೇ ಹುಟ್ಟಿ ಬೆಳೆದವರು. ಇವರ ತಂದೆ ಇಲ್ಲಿಯೇ ಒಂದು ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದರು. ಅದರಲ್ಲಾಗೋ ವ್ಯಾಪಾರವೇ ಇಡೀ ಸಂಸಾರದ ಅನ್ನದ ಮೂಲವಾಗಿತ್ತು. ಈ ವ್ಯಾಪಾರದ ಕಾರಣದಿಂದಲೇ ಅವರು ಅಂಗಡಿ ಚಿಕ್ಕಣ್ಣ ಎಂದೇ ಖ್ಯಾತರಾಗಿದ್ದವರು. ಆರಂಭದಲ್ಲಿ ಇದೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ರಘು ಆ ಬಳಿಕ ಅಲ್ಲಿಯೇ ಒಂದು ಫೋಟೋ ಸ್ಟುಡಿಯೋ ಆರಂಭಿಸಿ ಫೋಟೋಗ್ರಾಫರ್ ಆಗಿದ್ದರು. ತರುವಾಯ ಟ್ರಾವೆಲ್ಸ್ ಫೀಲ್ಡಿಗೆ ಬಂದು, ಮಾತೃಶ್ರೀ ಗ್ರೂಪಿನಲ್ಲಿ ಹನುಮಂತರಾಯಪ್ಪನವರೊಂದಿಗೆ ಲ್ಯಾಂಡ್ ಡೆವಲಪಿಂಗ್ ವಲಯದಲ್ಲಿ ದುಡಿಯುತ್ತಾ ತದ ನಂತರ ತಾವೇ ಆ ವೃತ್ತಿಯನ್ನು ಆರಂಭಿಸಿದ್ದರು.

    ಇದೀಗ ಎಸ್‍ಎಲ್ ಆರ್ ಎಂಟರ್ ಪ್ರೈಸಸ್ ಮೂಲಕ ವ್ಯವಹಾರ ನಡೆಸುತ್ತಿರುವ ರಘು ಅದೇ ಬ್ಯಾನರಿನಡಿಯಲ್ಲಿ ಯಾರಿಗೆ ಯಾರುಂಟು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಾವುದಕ್ಕೂ ಕೊರತೆಯಾಗದಂತೆ ಇಡೀ ಚಿತ್ರವನ್ನು ಪೊರೆದಿದ್ದಾರೆ. ಈ ಮೂಲಕ ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿ ಅವರದ್ದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv