Tag: Wound

  • ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮೇಲ್ಛಾವಣೆ ಕುಸಿತ- ಬಾಲಕಿ ಸಾವು, 30 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

    ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮೇಲ್ಛಾವಣೆ ಕುಸಿತ- ಬಾಲಕಿ ಸಾವು, 30 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

    ಬಳ್ಳಾರಿ: ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮನೆಯ ಮೇಲ್ಛಾವಣೆ ಕುಸಿದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆ ಪಟ್ಟಣದ ಚಿತ್ತವಾಡಗಿಯಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ 5 ಗಂಟೆಗೆ ಈ ಘಟನೆ ನಡೆದಿದೆ. ಚಿತ್ತವಾಡಗಿಯಲ್ಲಿ ಮೊಹರಂ ವೀಕ್ಷಣೆಗಾಗಿ ಮನೆಯ ಮೇಲ್ಛಾವಣೆ ಏರಿ ಕುಳಿತಿದಿದ್ದರು. ನೂರಕ್ಕೂ ಅಧಿಕ ಜನರು ಮೇಲ್ಛಾವಣೆ ಮೇಲೆ ಹತ್ತಿದ್ದರಿಂದ ಮಾಳಿಗೆ ಕುಸಿದಿದೆ. ಕೂಡಲೇ ಮೇಲ್ಛಾವಣೆ ಮೇಲೆ ಕುಳಿತಿದ್ದ ಜನರು ಕೆಳಗೆ ಕುಸಿದಿದ್ದಾರೆ. ಕೂಡಲೇ ಸ್ಥಳೀಯರು ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಿದ್ದಾರೆ.

    ಎಲ್ಲ ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾವನ್ನಪ್ಪಿದ ಬಾಲಕಿಯನ್ನು 14 ವರ್ಷದ ಉಷಾ ಎಂದು ಗುರುತಿಸಲಾಗಿದೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಳ್ಳತನ ಒಪ್ಪಿಕೊಳ್ಳುವಂತೆ ಎದೆಗೆ ಒದ್ದ ಪೊಲೀಸ್- ರೈತನ ಸ್ಥಿತಿ ಗಂಭೀರ

    ಕಳ್ಳತನ ಒಪ್ಪಿಕೊಳ್ಳುವಂತೆ ಎದೆಗೆ ಒದ್ದ ಪೊಲೀಸ್- ರೈತನ ಸ್ಥಿತಿ ಗಂಭೀರ

    ಗದಗ: ಬೈಕ್ ಕಳ್ಳತನ ಮಾಡಿರೋದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿ ಪೊಲೀಸರು ಅಮಾಯಕ ರೈತನ ಮೇಲೆ ದೌರ್ಜನ್ಯ ನಡೆಸಿರೋ ಆರೋಪವೊಂದು ಜಿಲ್ಲೆಯಲ್ಲಿ ಕೇಳಿಬಂದಿದೆ.

    ನಗರ ಠಾಣೆಯ ಪೊಲೀಸ್ ಪೇದೆ ಯಲ್ಲಪ್ಪ ಎಂಬವರ ಮೇಲೆ ಈ ಆರೋಪ ಕೇಳಿಬಂದಿದೆ. ಹುಯಿಲಗೋಳ ಗ್ರಾಮದ ರೈತ ಈರಪ್ಪ ಹೊಸಳ್ಳಿಗೆ ಎದೆಗೆ ಯಲ್ಲಪ್ಪ ಬೂಟುಗಾಲಿನಿಂದ ಒದ್ದಿದ್ದಾರೆ ಅಂತ ಗಾಯಾಳು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

    ಏನಿದು ಪ್ರಕರಣ?:
    ಜುಲೈ 23 ರಂದು ಈರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆತನ ಎದೆಗೆ ಪೊಲೀಸ್ ಯಲ್ಲಪ್ಪ ಒದ್ದಿದ್ದಾರೆ. ಬೂಟಿನೇಟಿನಿಂದಾಗಿ ಈರಪ್ಪ ಇದೀಗ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು, ಗದಗ ಜಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದು, ಇದೀಗ ಸ್ಥಿತಿ ಗಂಭೀರವಾಗಿರುವುದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

    ಅಮಾಯಕನನ್ನು ಕರೆತಂದು ಹೊಡೆದಿರುವುದು ಖಂಡನೀಯ. ತಪ್ಪಿತಸ್ಥ ಪೊಲೀಸ್ ಮೇಲೆ ಕ್ರಮಕೈಗೊಳ್ಳದಿದ್ದರೆ, ಕುಟುಂಬ ಸಮೇತ ಪೊಲೀಸ್ ಠಾಣೆಯ ಎದುರು ಹೋರಾಟ ಮಾಡುವುದಾಗಿ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ತನಗೆ ಸಂಬಂಧವಿಲ್ಲದ, ಬೈಕ್ ಕಳ್ಳತನ ಒಪ್ಪಿಕೊಳ್ಳುವಂತೆ ಪೇದೆ ಥಳಿಸಿದ್ದಾನೆಂದು ಈರಪ್ಪ ಅವರ ಸಂಬಂಧಿಗಳು ಆರೋಪಿಸಿದ್ದಾರೆ.

  • ಮೊದಲು ಮಗುವಿಗೆ, ಈಗ ತಾಯಿಯ ಮೈ ಮೇಲೆ ಬ್ಲೇಡ್‍ನಿಂದ ಕುಯ್ದಂತೆ ಗುರುತು

    ಮೊದಲು ಮಗುವಿಗೆ, ಈಗ ತಾಯಿಯ ಮೈ ಮೇಲೆ ಬ್ಲೇಡ್‍ನಿಂದ ಕುಯ್ದಂತೆ ಗುರುತು

    ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಕೋಟೂರು ಗ್ರಾಮದ ಪೂಜೇರಿ ಕುಟುಂಬಸ್ಥರು ಭಾನಾಮತಿಯಿಂದ ನೊಂದು ಹೋಗಿದ್ದೇವೆ ಅಂತಿದ್ದಾರೆ.

    ಪೂಜೇರಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಭಾನಾಮತಿ ಕಾಟಕ್ಕೆ ತುತ್ತಾಗಿದ್ದು, ಇತ್ತೀಚಿಗೆ ಭಾನಾಮತಿ ಕಾಟ ಹೆಚ್ಚಾಗಿದೆ ಎನ್ನುತ್ತಿದ್ದಾರೆ. ಮೊದಲು ಭಾರತಿ ಪೂಜೇರಿ ಅವರ ಕಣ್ಣಲ್ಲಿ ಖಾರದ ಪುಡಿ ಬಿದ್ದ ಅನುಭವ ಆಗ್ತಿತ್ತು. ಬಳಿಕ ಮೂರು ತಿಂಗಳ ಮಗುವಿನ ಮೈಮೇಲೆ ಬ್ಲೇಡ್‍ನಿಂದ ಕೊಯ್ದಂತಾಗಿ ರಕ್ತ ಬರುತ್ತಿತ್ತು. ಇದೀಗ ಮತ್ತೆ ಭಾರತಿ ಮೈ ಮೇಲೆಲ್ಲಾ ಬ್ಲೇಡ್‍ನಿಂದ ಕುಯ್ದ ಗುರುತುಗಳಾಗ್ತಿವೆ.

    ಈ ವಿಚಾರವಾಗಿ ತಾಯಿ ಮತ್ತು ಮಗುವನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ, ಎಕ್ಸರೇ, ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಟೆಸ್ಟ್ ಮಾಡಿಸಿದ್ದಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ದೇವರು, ಪೂಜೆ- ಪುನಸ್ಕಾರ, ಹೋಮ-ಹವನ ಅಂತಾ ಏನೇ ಮಾಡಿದ್ರೂ ಪ್ರಯೋಜನವಾಗಿಲ್ಲ. ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

    ಭಾನಾಮತಿ ಅನ್ನೋದು ಅಸಲಿಗೆ ಇಲ್ಲವೇ ಇಲ್ಲ. ಅದೊಂದು ಮಾನಸಿಕ ಕಾಯಿಲೆ, ಕೌನ್ಸೆಲಿಂಗ್ ಮಾಡುವ ಮೂಲಕ ಸರಿಮಾಡಬೇಕು ಎಂದು ನುರಿತ ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ಅಚ್ಚರಿ: 2 ವರ್ಷದ ಮಗುವಿನ ದೇಹದಲ್ಲಿ ಬ್ಲೇಡ್ ನಿಂದ ಕೊಯ್ದಂತೆ ಹೊರಬರುತ್ತಿದೆ ರಕ್ತ!