Tag: World War II

  • ಪಂಜಾಬ್‌ | ನಕಲಿ ದಾಖಲೆ ಸೃಷ್ಟಿಸಿ 2ನೇ ಮಹಾಯುದ್ಧದಲ್ಲಿ ಬಳಸಿದ್ದ ವಾಯುನೆಲೆ ಮಾರಾಟ – 28 ವರ್ಷಗಳ ಬಳಿಕ ಎಫ್‌ಐಆರ್‌

    ಪಂಜಾಬ್‌ | ನಕಲಿ ದಾಖಲೆ ಸೃಷ್ಟಿಸಿ 2ನೇ ಮಹಾಯುದ್ಧದಲ್ಲಿ ಬಳಸಿದ್ದ ವಾಯುನೆಲೆ ಮಾರಾಟ – 28 ವರ್ಷಗಳ ಬಳಿಕ ಎಫ್‌ಐಆರ್‌

    ಚಂಡೀಗಢ: ಪಂಜಾಬ್‌ನ (Punjab) ಫಟ್ಟು ವಾಲಾ ಗ್ರಾಮದಲ್ಲಿರುವ 2ನೇ ಮಹಾಯುದ್ಧದಲ್ಲಿ (World War II) ಬಳಸಲಾಗಿದ್ದ ವಾಯುನೆಲೆಯನ್ನು (Airstrip )ನಕಲಿ ದಾಖಲೆ ಸೃಷ್ಟಿಸಿ 28 ವರ್ಷಗಳ ಹಿಂದೆಯೇ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು (Woman) ತನ್ನ ಮಗನ ಜೊತೆ ಸೇರಿ ಈ ಕೃತ್ಯ ಎಸಗಿದ್ದು, ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ದುಮಾನಿ ವಾಲಾ ಗ್ರಾಮದ ಉಷಾ ಅನ್ಸಾಲ್ ಮತ್ತು ಆಕೆಯ ಮಗ ನವೀನ್ ಚಂದ್ ಅನ್ಸಾಲ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಈ ಇಬ್ಬರು ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ,  ವಾಯುನೆಲೆಯ ಜಾಗವನ್ನು ಮಾರಾಟ ಮಾಡಿದ್ದಾರೆ. ಭಾರತ 1962, 1965 ಮತ್ತು 1971ರ ಯುದ್ಧಗಳ ಸಮಯದಲ್ಲಿ ಈ ವಾಯು ನೆಲೆಯನ್ನು ಬಳಸಿತ್ತು. ಈ ಭೂಮಿಯನ್ನು 1997 ರಲ್ಲಿ ಮಾರಾಟ ಮಾಡಲಾಗಿದೆ. ಈ ಜಾಗ ಮಾರಾಟ ಮಾಡಿರುವ ಉಷಾ ಮತ್ತು ಚಂದ್‌ ಅನ್ಸಾಲ್‌ ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

    ವರ್ಷಗಳ ಹಿಂದೆ ಈ ಸಂಬಂಧ ನಿವೃತ್ತ ಕನುಂಗೋ ನಿಶಾನ್ ಸಿಂಗ್ ದೂರು ದಾಖಲಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 2021 ರಲ್ಲಿ, ಪಂಜಾಬ್‌ನ ಹಲ್ವಾರಾ ವಾಯುಪಡೆ ನಿಲ್ದಾಣದ ಅಧಿಕಾರಿಗಳು ಫಿರೋಜ್‌ಪುರದ ಉಪ ಆಯುಕ್ತರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆಗಲೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ಬಳಿಕ ನಿಶಾನ್ ಸಿಂಗ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಕುಲ್‌ಗಢಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉಷಾ ಹಾಗೂ ಆಕೆಯ ಮಗ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳ ಜೊತೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆ ನಕಲಿ ದಾಖಲೆ ಬಳಸಿ IAF (Indian Air Force) ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

    ನ್ಯಾಯಾಲಯದ ನಿರ್ದೇಶನದ ನಂತರ, ಉಪ ಆಯುಕ್ತರು 1958-59 ರ ಕಂದಾಯ ದಾಖಲೆಗಳ ಪ್ರಕಾರ ಭೂಮಿ ಇನ್ನೂ IAF ವಶದಲ್ಲಿದೆ ಎಂದು ಮೂರು ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಿಶಾನ್‌ ಸಿಂಗ್‌ ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

    1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

    ಮಾಸ್ಕೋ: ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ಸೋಲಿನ 77ನೇ ವಾರ್ಷಿಕೋತ್ಸವವನ್ನು ರಷ್ಯಾ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಸೋವಿಯತ್ ರಾಷ್ಟ್ರಗಳಿಗೆ ಅಭಿನಂದನೆ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ‘1945 ರಲ್ಲಿದ್ದಂತೆ, ಗೆಲುವು ನಮ್ಮದೇ ಎಂದು ಉಕ್ರೇನ್ ವಿರೋಧ ಭಾನುವಾರ ಪ್ರತಿಜ್ಞೆ ಮಾಡಿದರು.

    ಎರಡನೇ ಮಹಾಯುದ್ಧದ ಜಯವನ್ನು ಕುರಿತು ಸಭೆಯನ್ನು ಉದ್ದೇಶಿ ಮಾತನಾಡಿದ ಪುಟಿನ್, ಸೈನಿಕರು 1945ರಲ್ಲಿ ಹೋರಾಟ ಮಾಡಿದಂತೆ ಈಗ ನಮ್ಮ ಸೈನಿಕರು ಗೆಲುವು ನಮ್ಮದೇ ಎಂಬ ವಿಶ್ವಾಸದಿಂದ ಉಕ್ರೇನ್‌ನಲ್ಲಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಭೂಮಿಯನ್ನು ನಾಜಿ ಎಂಬ ಕೆಟ್ಟಶಕ್ತಿಗಳಿಂದ ಮುಕ್ತಗೊಳಿಸಲು ಸೈನಿಕರು ಹೋರಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

    ವಿವಿಧ ದೇಶಗಳ ಜನರಿಗೆ ನೋವುಂಟು ಮಾಡಿದ ನಾಜಿಸಂ ಮರುಹುಟ್ಟು ತಡೆಯುವುದು ನಮ್ಮ ಕರ್ತವ್ಯವಾಗಿದೆ. ಲೆಕ್ಕವಿಲ್ಲದಷ್ಟು ತ್ಯಾಗಗಳನ್ನು ಮಾಡಿ ನಮ್ಮ ಸೈನ್ಯವು ನಾಜಿಸಂ ಅನ್ನು ಹೊಡೆದುರುಳಿಸಿದೆ. ಆದರೆ ಈಗ ಮತ್ತೆ ಅದು ತಲೆ ಎತ್ತುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು- ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ, 60 ಮಂದಿ ಸಾವು

    ಎರಡನೇ ಮಹಾಯುದ್ಧದಲ್ಲಿ ಸೋತವರನ್ನು ಮತ್ತೆ ತಲೆ ಎತ್ತದಂತೆ ಮಾಡುವುದು ನಮ್ಮ ಪವಿತ್ರ ಕರ್ತವ್ಯವಾಗಿದೆ. ಇದು ಮಾಸ್ಕಾದ ಮಹಾನ್ ದೇಶಭಕ್ತಿಯ ಯುದ್ಧವಾಗಿದೆ ಎಂದರು.

    ಈ ವೇಳೆ ಅವರು, ಉಕ್ರೇನ್‍ನ ಎಲ್ಲ ನಿವಾಸಿಗಳು ಶಾಂತಿಯುತ ಮತ್ತು ನ್ಯಾಯಯುತ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ ಎಂದು ತಿಳಿಸಿದರು.

  • 2ನೇ ಮಹಾಯುದ್ಧ ಕಾಲದ ಬಾಂಬ್ ಸ್ಫೋಟಕ್ಕೆ ವ್ಯಕ್ತಿ ಬಲಿ

    2ನೇ ಮಹಾಯುದ್ಧ ಕಾಲದ ಬಾಂಬ್ ಸ್ಫೋಟಕ್ಕೆ ವ್ಯಕ್ತಿ ಬಲಿ

    ಪೆರುಗ್ವೆ: ಉತ್ಖನನದ ಸಂದರ್ಭದಲ್ಲಿ 2ನೇ ವಿಶ್ವಯುದ್ಧ ಕಾಲದ ಬಾಂಬ್ ಒಂದು ಸ್ಫೋಟಿಸಿದ ಘಟನೆ ಜೆಕ್ ಗಣರಾಜ್ಯದ ಓಸ್ಟ್ರಾವಾದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೊಬ್ಬರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.

    ಶುಕ್ರವಾರ ಮುಂಜಾನೆ ನಡೆದಿರುವ ಘಟನೆಯಲ್ಲಿ 2ನೇ ವಿಶ್ವಸಮರ ಕಾಲದ ಬಾಂಬ್ ಸ್ಫೋಟಿಸಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ. ಘಟನೆ ನಡೆದಿರುವ ಸ್ಥಳದಿಂದ 300 ಮೀ. ವ್ಯಾಪ್ತಿಯಲ್ಲಿರುವ ಮನೆಗಳಿಂದ ಸುಮಾರು 50 ಜನರನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ರಾಕೆಟ್ ದಾಳಿ – 35 ಸಾವು

    ಈಶಾನ್ಯ ಜೆಕ್ ಗಣರಾಜ್ಯದಲ್ಲಿ 2ನೇ ಮಹಾಯುದ್ಧದಲ್ಲಿ ಬಳಕೆಯಾಗುತ್ತಿದ್ದ ಬಾಂಬ್‌ಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಪ್ರದೇಶದಲ್ಲಿ ಹಲವು ಬಾರಿ ಸ್ಫೋಟಗೊಳ್ಳದ ಬಾಂಬ್‌ಗಳು ಪತ್ತೆಯಾಗಿದ್ದು, ಕಳೆದ ಬಾರಿ ಸಾವಿರಾರು ನಿವಾಸಿಗಳನ್ನು ಪೊಲೀಸರು ಸ್ಥಳಾಂತರ ಮಾಡಿದ್ದರು. ಇದನ್ನೂ ಓದಿ: ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ

     

  • 60 ವರ್ಷದ ನಂತರ ಮತ್ತೆ ನಿಂತ ಕ್ರಿಕೆಟ್ ಚಟುವಟಿಕೆ – ಕೊರೊನಾಕ್ಕೆ ತತ್ತರಿಸಿದ ಕ್ರೀಡಾ ಕ್ಷೇತ್ರ

    60 ವರ್ಷದ ನಂತರ ಮತ್ತೆ ನಿಂತ ಕ್ರಿಕೆಟ್ ಚಟುವಟಿಕೆ – ಕೊರೊನಾಕ್ಕೆ ತತ್ತರಿಸಿದ ಕ್ರೀಡಾ ಕ್ಷೇತ್ರ

    – ಈ ಹಿಂದೆ 2 ಬಾರಿ ಸ್ತಬ್ಧವಾಗಿದ್ದ ಕ್ರಿಕೆಟ್ ಜಗತ್ತು
    – ಪ್ರಪಂಚದಲ್ಲಿ ಕ್ರಿಕೆಟ್ ನಿಂತಿದ್ದರು ಅಂದು ಭಾರತದಲ್ಲಿ ನಿಂತಿರಲಿಲ್ಲ

    ನವದೆಹಲಿ: ಕೊರೊನಾ ಮಹಾಮಾರಿಯಿಂದ ವಿಶ್ವದಾದ್ಯಂತ ಎಲ್ಲಾ ಕ್ಷೇತ್ರಗಳು ನೆಲಕಚ್ಚಿವೆ. ಈ ವೈರಸ್ ಅರ್ಭಟಕ್ಕೆ ಕ್ರೀಡಾ ಕ್ಷೇತ್ರ ತತ್ತರಿಸಿ ಹೋಗಿದೆ. ಸುಮಾರು 60 ವರ್ಷದ ನಂತರ ಮತ್ತೆ ವಿಶ್ವದಲ್ಲಿ ಕ್ರಿಕೆಟ್ ಆಟ ತನ್ನ ಎಲ್ಲಾ ಚಟುವಟಿಕೆಯನ್ನು ನಿಲ್ಲಿಸಿದೆ.

    ಕೊರೊನ ವೈರಸ್ ಹೊಡೆತಕ್ಕೆ ವಿಶ್ವದಲ್ಲಿ 5 ಸಾವಿರಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದಾರೆ. ಇದರಿಂದ ಅನೇಕ ಆರ್ಥಿಕತೆಗೆ ಮತ್ತು ಜಾಗತಿಕ ಕ್ರೀಡಾಕೂಟಗಳಿಗೆ ಹಾನಿಯಾಗಿದೆ. ಕೊರೊನಾ ವೈರಸ್‍ನಿಂದ ಫಾರ್ಮುಲಾ ಒನ್ ರೇಸ್, ಫುಟ್ಬಾಲ್, ರಗ್ಬಿಯಂತಹ ಜನಪ್ರಿಯ ಕ್ರೀಡೆಗಳು ನಿಂತು ಹೋಗಿವೆ. ಇದರ ಜೊತೆಗೆ ಕೊರೊನಾ ಕರಿನೆರಳು ಕ್ರಿಕೆಟ್ ಮೇಲೆ ಬಿದ್ದಿದ್ದು, ಕ್ರಿಕೆಟಿನ ಚುಟುವಟಿಕೆ ಸಂಪೂರ್ಣವಾಗಿ ಬಂದ್ ಆಗಿದೆ.

    ಕೊರೊನಾ ವೈರಸ್ ಎಲ್ಲಡೇ ಮಾರಕವಾಗಿ ಹಬ್ಬಿದ ಪರಿಣಾಮ ಮೊದಲಿಗೆ ಭಾರತ ವಿರುದ್ಧದ ದಕ್ಷಿಣ ಆಫ್ರಿಕಾ ಏಕದಿನ ಪ್ರವಾಸ ರದ್ದಾಗಿತ್ತು. ನಂತರ ಪ್ರೇಕ್ಷಕರಿಲ್ಲದೆ ಆಡಿದ ಒಂದು ಏಕದಿನ ಪಂದ್ಯವನ್ನು ಹೊರತುಪಡಿಸಿದರೆ ನ್ಯೂಜಿಲೆಂಡ್‍ನ ಆಸ್ಟ್ರೇಲಿಯಾ ಪ್ರವಾಸ ಕೂಡ ಅರ್ಧಕ್ಕೆ ನಿಂತು ಹೋಗಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಪ್ರವಾಸವನ್ನು ಮುಂದೂಡಲಾಗಿದೆ.

    ಕೊರೊನಾಗೆ ತತ್ತರಿಸಿದ ಐಪಿಎಲ್
    ಕೊರೊನಾ ವೈರಸ್‍ನಿಂದಾಗಿ ಇದೇ ತಿಂಗಳು ಮಾರ್ಚ್ 29 ರಂದು ನಡೆಯಬೇಕಿದ್ದ ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2020) ಅನ್ನು ಮುಂದೂಡಲಾಗಿದೆ. ಕೊರೊನಾ ಅರ್ಭಟ ಕಮ್ಮಿಯಾದರೆ ಐಪಿಎಲ್ ಅನ್ನು ಏಪ್ರಿಲ್ ತಿಂಗಳಲ್ಲಿ ಆರಂಭ ಮಾಡುವುದಾಗಿ ಬಿಸಿಸಿಐ ಹೇಳಿತ್ತು. ಆದರೆ ಸೋಂಕು ಕಮ್ಮಿಯಾಗುವ ಲಕ್ಷಣ ಕಂಡುಬಾರದ ಹಿನ್ನೆಲೆ ಜೂನ್ ತಿಂಗಳಲ್ಲಿ ಆಡಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಸೋಂಕಿನಿಂದ ಪಾಕಿಸ್ತಾನ ಸೂಪರ್ ಲೀಗ್ ಕೂಡ ಅರ್ಧಕ್ಕೆ ನಿಂತು ಹೋಗಿದೆ.

    ಕೊರೊನಾ ವೈರಸ್ ಕ್ರಿಕೆಟ್ ಅಭಿಮಾನಿಗಳ ಮನರಂಜನೆಯನ್ನು ಕಿತ್ತುಕೊಂಡಿದೆ. ಅದರೆ ಈ ರೀತಿ ಕ್ರಿಕೆಟ್ ವಿಶ್ವದಲ್ಲಿ ಸ್ತಬ್ಧವಾಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಹಿಂದೆ ಎರಡು ಬಾರಿ ಕ್ರಿಕೆಟ್ ನಿಂತು ಹೋಗಿತ್ತು. 1877ರಲ್ಲಿ ಆರಂಭವಾದ ಕ್ರಿಕೆಟ್ ಇಲ್ಲಿವರೆಗೂ ಎರಡು ಬಾರಿ ತನ್ನ ಚಟುವಟಿಕೆನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಆದರೆ ಅಂದು ಯಾವುದೇ ಸಂಕ್ರಾಮಿಕ ರೋಗದಿಂದ ಕ್ರಿಕೆಟ್ ನಿಂತಿರಲಿಲ್ಲ. ಬದಲಿಗೆ ವಿಶ್ವದಲ್ಲಿ ನಡೆದು ಮಹಾಯುದ್ಧದ ಸಲುವಾಗಿ ನಿಂತಿತ್ತು. ಆದರೆ ಮಹಾಯುದ್ಧದ ಸಮಯದಲ್ಲೂ ಇಂಡಿಯಾದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ನಿಂತಿರಲಿಲ್ಲ.

    ಮೊದಲ ಮಹಾಯುದ್ಧ (1914 ಜು.28ರಿಂದ 1918 ನ.11ರವರೆಗೆ)
    1914 ರಲ್ಲಿ ಮೊದಲ ಮಹಾಯುದ್ಧ ಆರಂಭವಾದಾಗ ಇಂಗ್ಲೆಂಡಿನ ಕೆಲ ಪ್ರಥಮ ದರ್ಜೆ ಕ್ರಿಕೆಟಿಗರು ಸೈನ್ಯ ಸೇರಿ ದೇಶಸೇವೆ ಮಾಡಲು ಹೊರಟಿದ್ದರು. 1914 ಸೆಪ್ಟೆಂಬರ್ 2ರಿಂದ ಇಂಗ್ಲೆಂಡ್‍ನಲ್ಲಿ ಕ್ರಿಕೆಟ್ ಅಮಾನತುಗೊಳಿಸಲಾಗಿತ್ತು. 210ಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟಿಗರು ಬ್ರಿಟಿಷ್ ಸೈನ್ಯಕ್ಕೆ ಸೇರಿದ್ದರು. ಇಂಗ್ಲೆಂಡ್ ನಂತರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳು ಪ್ರಥಮ ದರ್ಜೆ ಕ್ರಿಕೆಟ್ ಅನ್ನು ಅಮಾನತುಗೊಳಿಸಿದ್ದವು.

    ಯಾವ ಯಾವ ದೇಶಗಳು ಎಷ್ಟು ದಿನಗಳ ಕಾಲ ಕ್ರಿಕೆಟ್ ಅನ್ನು ಅಮಾನತ್ತು ಮಾಡಿದ್ದವು ಎಂದು ನೋಡುವುದಾದರೆ ವೆಸ್ಟ್ ಇಂಡೀಸ್ 1913 ಮಾರ್ಚ್ 14ರಿಂದ 1920 ಫೆಬ್ರವರಿ 5ರ ವರೆಗೆ, ಇಂಗ್ಲೆಂಡ್ 1914 ಸೆಪ್ಟೆಂಬರ್ 2ರಿಂದ 1919 ಮೇ 12ರವರೆಗೆ, ಆಸ್ಟ್ರೇಲಿಯಾ 1915 ಫೆಬ್ರವರಿ 19ರಿಂದ 1918 ಡಿಸೆಂಬರ್ 26ರವರೆಗೆ, ನ್ಯೂಜಿಲೆಂಡ್ 1915 ಏಪ್ರಿಲ್ 2ರಿಂದ 1917 ಡಿಸೆಂಬರ್ 25ರವರೆಗೆ ಮತ್ತು ದಕ್ಷಿಣ ಆಫ್ರಿಕಾ 1914 ಏಪ್ರಿಲ್ 11ರಿಂದ 1919 ಅಕ್ಟೋಬರ್ 18ರವರೆಗೆ ಕ್ರಿಕೆಟ್ ಚಟುವಟಿಕೆಯನ್ನು ನಿಲ್ಲಿಸಿತ್ತು.

    ಎರಡನೆಯ ಮಹಾಯುದ್ಧ (1939 ಸೆ.1 ರಿಂದ, 1945 ಸೆ.2ರವರೆಗೆ)
    ಒಂದನೇ ಮಹಾಯುದ್ಧದ ಬಳಿಕ ಮತ್ತೆ ಆರಂಭವಾಗಿದ್ದ ಕ್ರಿಕೆಟ್ ಚಟುವಟಿಕೆ ಎರಡನೇ ಮಹಾಯುದ್ಧ ಆರಂಭವಾದಾಗ ಎರಡನೇ ಬಾರಿಗೆ ಮತ್ತೆ ಸ್ತಬ್ಧವಾಗಿತ್ತು. ಯುದ್ಧ ಆರಂಭವಾದಾಗ ತಕ್ಷಣ ಇಂಗ್ಲೆಂಡ್ ತನ್ನೆಲ್ಲ ಕ್ರಿಕೆಟ್ ಚಟುವಟಿಕೆಯನ್ನು ನಿಲ್ಲಿಸಿತ್ತು. ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‍ನಲ್ಲಿ ಹಲವಾರು ಪ್ರಥಮ ದರ್ಜೆ ಪಂದ್ಯಗಳು ನಡೆಯುತ್ತಲೇ ಇದ್ದವು. ಆದರೆ ಈ ಪಂದ್ಯಗಳು ಹೆಚ್ಚಾಗಿ ಯುದ್ಧದಲ್ಲಿ ಆದ ನಷ್ಟಕ್ಕೆ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದವು. ಈ ಬಾರಿಯೂ ಕೂದ ಭಾರತದಲ್ಲಿ ರಣಜಿ ಟ್ರೋಫಿ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿದಿತ್ತು.

    ಎರಡನೇ ಮಹಾಯುದ್ಧದ ಸಮಯದಲ್ಲಿ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ದೇಶಗಳು ರಾಷ್ಟ್ರೀಯ ಪಂದ್ಯಾವಳಿಗಳನ್ನು ಮಾತ್ರ ರದ್ದು ಮಾಡಿದ್ದವು. ಇನ್ನೂ ಇಂಗ್ಲೆಂಡ್ 1939 ಸೆಪ್ಟೆಂಬರ್ 2ರಿಂದ 1945 ಮೇ 18ರವರೆಗೆ ಮತ್ತು ಆಸ್ಟ್ರೇಲಿಯಾ 1941 ಡಿಸೆಂಬರ್ 2 ರಿಂದ 1945 ನವೆಂಬರ್ 22ರವರೆಗೆ ತನ್ನ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ರದ್ದು ಮಾಡಿತ್ತು.

    ಎರಡನೇ ಮಹಾಯುದ್ಧ ಮುಗಿದ ಬಳಿಕ ಮತ್ತೆ ವಿಶ್ವದಲ್ಲಿ ಯಾವುದೇ ಮಹಾಯುದ್ಧಗಳು ನಡೆದಿರಲಿಲ್ಲ. ಬಳಿಕ ಬಹಳ ಜನಪ್ರಿಯವಾದ ಕ್ರಿಕೆಟ್ ಆಟ ಕೂಡ ಎಂದಿಗೂ ನಿಂತಿರಲಿಲ್ಲ. ಆದರೆ 60 ವರ್ಷದ ಬಳಿಕ ಮತ್ತೆ ಯಾವುದೇ ಮಹಾಯುದ್ಧಗಳು ಸಂಭವಿಸದಿದ್ದರೂ ಮಹಾಮಾರಿ ಕೊರೊನಾಗೆ ಭಯಪಟ್ಟು ಮೂರನೇ ಬಾರಿಗೆ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಹೋಗಿವೆ.