Tag: World Organization

  • ಕೊರೊನಾ ಎಫೆಕ್ಟ್ – 6 ದೇಶಗಳಿಗೆ ಏರ್ ಇಂಡಿಯಾ ಸೇವೆ ರದ್ದು

    ಕೊರೊನಾ ಎಫೆಕ್ಟ್ – 6 ದೇಶಗಳಿಗೆ ಏರ್ ಇಂಡಿಯಾ ಸೇವೆ ರದ್ದು

    ನವದೆಹಲಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಇಟಲಿ, ಫ್ರಾನ್ಸ್, ಜರ್ಮನಿ, ಇಸ್ರೇಲ್, ದಕ್ಷಿಣ ಕೊರಿಯಾ, ಶ್ರೀಲಂಕಾ ದೇಶಗಳಿಗೆ ಏರ್ ಇಂಡಿಯಾ ವಿಮಾನ ಸೇವೆಯನ್ನು ರದ್ದು ಮಾಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಕೊರೊನಾ ಸಾಂಕ್ರಾಮಿಕ ರೋಗ ಎಂದು ಘೋಷಣೆಯಾದ ಬೆನ್ನಲ್ಲೇ ಈ ನಿರ್ಧಾರವನ್ನು ಏರ್ ಇಂಡಿಯಾ ತೆಗೆದುಕೊಂಡಿದ್ದು, ಏಪ್ರಿಲ್ 30ರವರೆಗೂ ಈ ದೇಶಗಳಿಗೆ ಸೇವೆ ರದ್ದು ಮಾಡಲಾಗಿದೆ. ಇದಕ್ಕೂ ಮುನ್ನ ಇಟಲಿ, ಫ್ರಾನ್ಸ್ ಸೇರಿ ಯುರೋಪಿಯನ್ ದೇಶಗಳಿಗೆ ಚಾಲನೆಯಲ್ಲಿದ್ದ ವಿಮಾನ ಹಾರಾಟದ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಬಳಿಕ ಇಟಲಿ, ಫ್ರಾನ್ಸ್, ಜರ್ಮನಿ, ಇಸ್ರೇಲ್, ದಕ್ಷಿಣ ಕೊರಿಯಾ, ಶ್ರೀಲಂಕಾಕ್ಕೆ ಹಾರಾಟ ರದ್ದು ಮಾಡಿದೆ.

    ಕೊರೊನಾ ವೈರಸ್ ಏಕಾಏಕಿ ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್, ಇಸ್ರೇಲ್, ದಕ್ಷಿಣ ಕೊರಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ಅಲ್ಲಿಂದ ಭಾರತಕ್ಕೆ ಬರುವ ಪ್ರಯಾಣಿಕರಲ್ಲಿ ಸೋಂಕು ಹೆಚ್ಚು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಏರ್ ಇಂಡಿಯಾ ಮುಖ್ಯಸ್ಥರು ತಿಳಿಸಿದ್ದಾರೆ.

    ಇತ್ತೀಚೆಗೆ ಮಾರ್ಚ್ 13ರಿಂದ ಏಪ್ರಿಲ್ 15ರವರೆಗೆ ರಾಜತಾಂತ್ರಿಕ ಮತ್ತು ಕೆಲವು ವಿಭಾಗಗಳನ್ನು ಹೊರತುಪಡಿಸಿ ಎಲ್ಲಾ ಮಾದರಿ ವೀಸಾಗಳನ್ನು ಅಮಾನತುಗೊಳಿಸಲು ಬುಧವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

  • ಕಾರ್ಗಿಲ್ ಯುದ್ಧದ ವೇಳೆಯೂ ಯೋಧ ಸೆರೆ: ಬಿಡುಗಡೆಗಡೆಯಾಗಿದ್ದು ಹೇಗೆ?

    ಕಾರ್ಗಿಲ್ ಯುದ್ಧದ ವೇಳೆಯೂ ಯೋಧ ಸೆರೆ: ಬಿಡುಗಡೆಗಡೆಯಾಗಿದ್ದು ಹೇಗೆ?

    ನವದೆಹಲಿ: 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತ ಪೈಲಟ್ ಗ್ರೂಪ್ ಕ್ಯಾಪ್ಟನ್ ಕಬಂಪತಿ ನಚಿಕೇತ ಭಾರತದ ಮೊದಲ ಹಾಗೂ ಏಕೈಕ ಯುದ್ಧ ಕೈದಿ ಆಗಿದ್ರು. ಯುದ್ಧದ ಸಂದರ್ಭದಲ್ಲಿ ನಚಿಕೇತ ಅವರಿಗೆ ಕೇವಲ 26 ವರ್ಷ ವಯಸ್ಸು, ಭಾರತೀಯ ವಾಯುದಳದ ನಂ.9 ಸ್ಕ್ವಾರ್ಡನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ತಂಡ ಯುದ್ಧ ಪೀಡಿತ ಬಟಾಲಿಕ್ ವಲಯವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿತ್ತು. ಈ ವೇಳೆ ಮಿಗ್ 27 ಫೈಟರ್ ಏರ್ ಕ್ರಾಫ್ಟ್ ಮೇಲೆ ಎದುರಾಳಿಗಳು ಕ್ಷಿಪಣಿ ದಾಳಿ ನಡೆಸಿದ ಸಂದರ್ಭದಲ್ಲಿ ನಚಿಕೇತ ನಡೆಸುತ್ತಿದ್ದ ಮಿಗ್ ವಿಮಾನದ ಇಂಜಿನ್ 17 ಸಾವಿರ ಎತ್ತರದಲ್ಲಿ ಕೈಕೊಟ್ಟಿತ್ತು. ಬೇರೆ ದಾರಿ ಇಲ್ಲದ ಕಾರಣ ನಚಿಕೇತ ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಕೆಳಕ್ಕೆ ಹಾರಿದ್ದರು.

    ಈ ವೇಳೆ ಇವರ ಸಹಾಯಕ್ಕೆ ಆಗಮಿಸಿದ್ದ ಮಿಗ್ 21 ಜೆಟ್‍ನ ಲೀಡರ್ ಅಜಯ್ ಅಹುಜಾರ ಮೇಲೂ ಕೂಡ ಪಾಕ್ ಕ್ಷಿಪಣಿ ದಾಳಿ ನಡೆಸಿತ್ತು. ಕೆಳಕ್ಕೆ ಬಿದ್ದಿದ್ದ ನಚಿಕೇತ ಅವರನ್ನು ಪಾಕ್ ಸೈನಿಕರು ವಶಕ್ಕೆ ಪಡೆಯಲು ಯತ್ನಿಸಿದ್ದರು. ಪಾಕ್ ಸೈನ್ಯಕ್ಕೆ ಸುಲಭವಾಗಿ ಸಿಗಲು ಇಚ್ಛಿಸದ ನಚಿಕೇತ ತಮ್ಮ ಸರ್ವೀಸ್ ಗನ್ ನಿಂದ ಪಾಕ್ ಸೈನಿಕರತ್ತ ಗುಂಡು ಹಾರಿಸಿದ್ದರು. ಆದರೆ ನಚಿಕೇತ ಗನ್ ಬುಲೆಟ್ ಖಾಲಿಯಾದ ಪರಿಣಾಮ ಪಾಕ್ ಸೈನಿಕರು ಅವರನ್ನು ವಶಕ್ಕೆ ಪಡೆದಿದ್ರು. ಆ ಬಳಿಕ ಅವರನ್ನು ಪಾಕಿಸ್ತಾನದ ರಾವಲ್ಪಿಂಡಿ ಜೈಲಿನಲ್ಲಿ ಇಟ್ಟು ಹಿರಿಯ ಕಮಾಂಡರ್ ಆಗಮಿಸುವ ವೇಳೆಗೆ ಚಿತ್ರಹಿಂಸೆ ನೀಡಲಾಗಿತ್ತು.

    2016 ರಲ್ಲಿ ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಚಿಕೇತ ಅವರು, ಹಿರಿಯ ಕಮಾಂಡರ್ ಆಗಮಿಸುವವರೆಗೂ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಅಲ್ಲದೇ ನಾನು ಅವರ ವಿರುದ್ಧ ಆಗಸದಿಂದ ದಾಳಿ ನಡೆಸಿದ್ದ ಪರಿಣಾಮ ಕೊಲೆ ಮಾಡಲು ಕೂಡ ಉದ್ದೇಶಿಸಿದ್ದರು. ಆದರೆ ಹಿರಿಯ ಕಮಾಂಡರ್ ಬಂದ ವೇಳೆ ನಾನು ಸೆರೆ ಆಗಿರುವುದು ಅರಿವಾಗಿ ನನ್ನನ್ನು ಈ ರೀತಿ ನಡೆಸಿಕೊಳ್ಳದಂತೆ ತಿಳಿಸಿದ್ದರು. ಆ ಬಳಿಕ ಅವರು ಇತರೇ ಸೈನಿಕರನ್ನು ನಿಯಂತ್ರಿಸಿದ್ದರು. ಇದು ಅವರು ಮಾಡಿದ ದೊಡ್ಡ ಕಾರ್ಯವಾಗಿತ್ತು ಎಂದು ತಿಳಿಸಿದ್ದರು.

    ಪಾಕಿಸ್ತಾನ ಸೈನಿಕರಿಗೆ ಸೆರೆ ಸಿಕ್ಕ ಅವರು ನಾನು ಎಂದು ಭಾರತಕ್ಕೆ ಹಿಂದಿರುಗಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆ ಸಂದರ್ಭವನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಇಲ್ಲಿಗೆ ನನ್ನ ಜೀವನ ಕೊನೆ ಆಯ್ತು ಎಂದು ಭಾವಿಸಿದ್ದೆ. 3 ರಿಂದ 4 ದಿನಗಳಿಂದ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು. ಆದರೆ ನಾನು ಆ ದೇವರಿಗೆ ಋಣಿಯಾಗಿರುತ್ತೇನೆ. ಆ ಘಟನೆಯಿಂದ ನಾನು ಬದುಕಿ ಬಂದಿದ್ದೇನೆ ಎಂದು ತಿಳಿಸಿದ್ದರು.

    ತನ್ನ ದೇಶದ ಸೈನಿಕ ಪಾಕಿಸ್ತಾನ ಕೈಯಲ್ಲಿ ಸೆರೆಯಾಗಿದ್ದಾರೆ ಎಂದು ತಿಳಿದ ಕೂಡಲೇ ಭಾರತ ವಿದೇಶಗಳಿಂದ ಪಾಕಿಸ್ತಾನದ ಮೇಲೆ ಒತ್ತಡ ತಂದಿತ್ತು. ಅಲ್ಲದೇ ವಿಶ್ವಸಂಸ್ಥೆ ಕೂಡ ಪಾಕಿಸ್ತಾನ ಮೇಲೆ ಒತ್ತಡ ಹಾಕಿದ್ದ ಪರಿಣಾಮ ಬೇರೆ ದಾರಿ ಇಲ್ಲದೇ ನಚಿಕೇತರನ್ನು 8 ದಿನಗಳ ಬಳಿಕ, ಅಂದರೆ ಜೂನ್ 1999ರಂದು ಬಿಡುಗಡೆ ಮಾಡಿತ್ತು.

    ವಾಘಾ ಗಡಿಯಲ್ಲಿ ಪಾಕಿಸ್ತಾನ ನಚಿಕೇತರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ತವರಿಗೆ ಬಂದ ವೇಳೆ ಅವರ ಆರೋಗ್ಯ ಸ್ಥಿತಿ ಕೂಡ ಹದಗೆಟ್ಟಿತ್ತು. ಏಕೆಂದರೆ ಸುಮಾರು 18 ಸಾವಿರ ಅಡಿ ಎತ್ತರದಿಂದ ನೆಲಕ್ಕೆ ಜಿಗಿದ ಪರಿಣಾಮ ಗಾಯಗೊಂಡಿದ್ದರು. ಮನೆಗೆ ಹಿಂದಿರುಗಿದ ಬಳಿಕ ಸತತ ಮೂರು ವರ್ಷಗಳ ಕಾಲ ಅವರು ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ಗ್ರೌಂಡ್ ಕೆಲಸ ನೀಡಲಾಗಿತ್ತು. 2003 ರಲ್ಲಿ ಮತ್ತೆ ಅವರು ಪೈಲಟ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

    ಇವರ ಧೈರ್ಯ ಸಾಹಸ ಮೆಚ್ಚಿದ ಸರ್ಕಾರ 2000 ಇಸವಿಯಲ್ಲಿ ವಾಯು ಸೇನಾ ಪದಕವನ್ನು ನೀಡಿ ಗೌರವಿಸಿತ್ತು. ಕಾರ್ಗಿಲ್ ಯುದ್ಧದ ಸಂದರ್ಭ ನನಗೆ ಜೀವನ ಪಾಠ ಕಲಿಸಿಕೊಟ್ಟಿತ್ತು ಎಂದು ನಚಿಕೇತ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ವಶದಲ್ಲಿ ನಮ್ಮ ವಿಂಗ್ ಕಮಾಂಡರ್ – ಬಿಡುಗಡೆಗೆ ಭಾರತ ಆಗ್ರಹ- ಬಿಡುಗಡೆ ಯಾಕೆ ಮಾಡಬೇಕು?

    ಪಾಕ್ ವಶದಲ್ಲಿ ನಮ್ಮ ವಿಂಗ್ ಕಮಾಂಡರ್ – ಬಿಡುಗಡೆಗೆ ಭಾರತ ಆಗ್ರಹ- ಬಿಡುಗಡೆ ಯಾಕೆ ಮಾಡಬೇಕು?

    ನವದೆಹಲಿ: ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ನಿನ್ನೆಯಷ್ಟೇ ಭಾರತ ವಾಯುದಾಳಿ ನಡೆಸುತ್ತಿದ್ದಂತೆ ಇಡೀ ದೇಶವೇ ಕುಣಿದು ಕುಪ್ಪಳಿಸಿತ್ತು. ಆದರೆ ಇಂದು ಬೆಳಗ್ಗೆ ಪಾಕಿಸ್ತಾನ ಯುದ್ಧ ವಿಮಾನಗಳು ಭಾರತದ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಪ್ರಯತ್ನಿಸಿದ್ದು, ಪಾಕ್ ಯುದ್ಧ ವಿಮಾನಗಳನ್ನು ಹಿಂದಿಕ್ಕುವ ವೇಳೆ ಒಂದು ಮಿಗ್-21 ವಿಮಾನ ಪತನಗೊಂಡು ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಸೈನ್ಯದ ವಶದಲ್ಲಿದ್ದಾರೆ.

    ಇಂದು ಬೆಳಗ್ಗೆ ಇಬ್ಬರು ಪೈಲಟ್ ಗಳು ನಮ್ಮ ವಶದಲ್ಲಿದ್ದಾರೆ ಎಂದು ತಿಳಿಸಿದ್ದ ಪಾಕ್ ಅಧಿಕಾರಿಗಳು ಆ ಬಳಿಕ ನಮ್ಮ ಬಳಿ ಒಬ್ಬ ಕಮಾಂಡರ್ ಮಾತ್ರ ಇದ್ದಾರೆ ಎಂದು ಉಲ್ಟಾ ಹೊಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಬೆಳಗ್ಗೆ ಬಿಡುಗಡೆ ಮಾಡಿದ್ದು, ಪೈಲಟ್ ಡ್ರೆಸ್ ತೊಟ್ಟಿರುವ ವ್ಯಕ್ತಿ ತಾನು ಭಾರತ ಯೋಧ, ಭಾರತೀಯ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಅವರನ್ನು ಕೈ ಕಟ್ಟಿಹಾಕಿ ಹಲ್ಲೆ ನಡೆಸಿರುವ ವಿಡಿಯೋವನ್ನು ಬಿಡುಗಡೆ ಮಾಡಿ ಬಳಿಕ ಭಾರತದ ಕಡೆಯಿಂದ ಆಕ್ರೋಶ ಕೇಳಿ ಬಂದ ಬೆನ್ನಲ್ಲೇ ತಮ್ಮ ಟ್ವಿಟ್ಟರ್ ಖಾತೆಗಳಿಂದ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ.

    ಭಾರತದ ಗಡಿ ದಾಟಿದ ಪಾಕಿಸ್ತಾನದ 3 ವಿಮಾನಗಳು ಪೂಂಚ್, ನೌಷೇರಾ, ಕೃಷ್ಣಘಟಿಯಲ್ಲಿ ದಾಳಿಗೆ ಯತ್ನ ನಡೆಸಿದ್ದವು. ಆದರೆ 3 ವಿಮಾನಗಳ ಪೈಕಿ ಪಾಕಿಸ್ತಾನದ ಎಫ್-16 ಒಂದು ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿತ್ತು. ಇನ್ನೆರಡು ವಿಮಾನಗಳನ್ನು ಮಿಗ್-21 ವಿಮಾನವನ್ನು ಅಟ್ಟಾಡಿಸಿಕೊಂಡು ಹೋದ ವೇಳೆ ಪಾಕಿಸ್ತಾನವೂ ಭಾರತದ ಒಂದು ಮಿಗ್-21 ವಿಮಾನವನ್ನು ನೆಲಕ್ಕುರುಳಿಸಿತ್ತು. ಈ ವೇಳೆ ಒಬ್ಬ ಪೈಲಟ್ ನನ್ನು ಜೀವಂತವಾಗಿ ಸೆರೆ ಹಿಡಿರುವುದಾಗಿ ಪಾಕಿಸ್ತಾನ ಹೇಳಿದೆ.

    ವಿಂಗ್ ಕಮಾಂಡರ್ ದೃಶ್ಯಗಳನ್ನು ಪಾಕ್ ರಿಲೀಸ್ ಮಾಡಿದ್ದರೂ ಕೂಡ ನಾವು ಸೇನೆ ಮೇಲಿನ ಗೌರವಾರ್ಥ ಆ ವಿಂಗ್ ಕಮಾಂಡರ್ ದೃಶ್ಯ ಅಥವಾ ಫೋಟೋವನ್ನು ನಾವು ಪ್ರಕಟಿಸುವುದಿಲ್ಲ.

    ಇತ್ತ ಪಾಕಿಸ್ತಾನ ಬಳಿ ಭಾರತದ ಕಮಾಂಡರ್ ಇದ್ದರೆ ಎಂಬುವುದು ಖಚಿತವಾಗುತ್ತಿದಂತೆ ಭಾರತ, ಪಾಕಿಸ್ತಾನದ ಉಪ ಹೈಕಮೀಷನರ್‍ಗೆ ಕೇಂದ್ರ ಸರ್ಕಾರ ದಿಢೀರ್ ಬುಲಾವ್ ನೀಡಿತ್ತು. ಅಲ್ಲದೇ ಪಾಕಿಸ್ತಾನ ವಶಕ್ಕೆ ಪಡೆದ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷತೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಜೀನಿವಾ ಒಪ್ಪಂದ ಆರ್ಟಿಕಲ್ 3 ಪ್ರಕಾರ, ಪಾಕ್ ಬಿಡುಗಡೆ ಮಾಡಬೇಕು ಎಂದು ಕೋರಿದೆ.

    ಕಾರ್ಗಿಲ್ ಯುದ್ಧದ ವೇಳೆ ಪಾಕ್ ಸೈನಿಕರಿಗೆ ಸಿಕ್ಕಿಬಿದ್ದಿದ್ದ ಮಿಗ್ ಪೈಲಟ್ ನಚಿಕೇತರನ್ನು ರಿಲೀಸ್ ಮಾಡಿದಂತೆಯೇ ಅಭಿನಂದನ್‍ರನ್ನು ರಿಲೀಸ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

    ಏನಿದು ಜಿನೀವಾ ಒಪ್ಪಂದ..?
    ಎರಡನೇ ಮಹಾಯುದ್ಧದ ಬಳಿಕ 1949ರಲ್ಲಿ 196 ದೇಶಗಳ ನಡುವೆ ಏರ್ಪಟ್ಟ ವೇಳೆ ಒಪ್ಪಂದ ನಡೆದಿತ್ತು. ಈ ಒಪ್ಪಂದ ಪ್ರಕಾರ ಯುದ್ಧ ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು. ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾದ ಯುದ್ಧ ಕೈದಿಗಳಿಗೆ ಚಿಕಿತ್ಸೆ ನೀಡಬೇಕು. ಜಿನೀವಾ ಒಪ್ಪಂದ ಆರ್ಟಿಕಲ್ 3 ಅಘೋಷಿತ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಯುದ್ಧ ಕೈದಿಯ ಕೊಲೆ, ಹಲ್ಲೆ, ಶಿರಚ್ಛೇದ, ಒತ್ತೆಯಂತಹ ಕೃತ್ಯಗಳನ್ನು ಮಾಡಬಾರದು. ಕಾನೂನು ಪ್ರಕ್ರಿಯೆಗಳನ್ನು ಮಾಡದೇ, ಆರೋಪ ಸಾಬೀತಾಗದೇ ಶಿಕ್ಷೆ ನೀಡಬಾರದು. ಆರೋಪ ಸಾಬೀತಾಗದೇ ಇದ್ದಲ್ಲಿ ಯುದ್ಧ ಕೈದಿಯನ್ನು ಅವರ ದೇಶಕ್ಕೆ ಒಪ್ಪಿಸಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv