Tag: World Mother’s day

  • ನಾ ಕಾಣದ ನೋವು, ನಾ ಕಂಡ ನಲಿವು ಎಲ್ಲವೂ ಅವಳದ್ದೇ ಕಾಣಿಕೆ….!

    ನಾ ಕಾಣದ ನೋವು, ನಾ ಕಂಡ ನಲಿವು ಎಲ್ಲವೂ ಅವಳದ್ದೇ ಕಾಣಿಕೆ….!

    ʻಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿʼ ಎನ್ನುವ ಮಾತಿನ ಹಾಗೇ ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಜಗತ್ತಿನಲ್ಲಿರುವ ಎಲ್ಲಾ ಜೀವ ಸಂಕುಲಗಳಿಗೂ ಮಿಗಿಲಾಗಿ ಮಿಡಿಯುವ ಜೀವವದು. ನಮ್ಮೆಲ್ಲರ ಆಸೆಯಾಗಿ, ಆಸರೆಯಾಗಿ, ಆಯಸ್ಸಾಗಿ ಜೊತೆಗಿರುವ ಜೀವನವೂ ಅವಳದ್ದೇ.

    ಇಂದು ವಿಶ್ವ ತಾಯಂದಿರ ದಿನಾಚರಣೆ. ನಮೆಲ್ಲರಿಗಾಗಿ ಬದುಕುವ ಆ ಜೀವಕ್ಕೆ ನಮಿಸುವ ದಿನವಿದು. 20ನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ತಾಯಂದಿರ ದಿನ ಆಚರಿಸಲಾಯಿತು. ಅನ್ನಾ ಜಾರ್ವಿಸ್‌ ಎನ್ನುವ ಮಹಿಳೆ ತನ್ನ ತಾಯಿಯ ಮರಣದ ನಂತರ ಮೊದಲ ಬಾರಿಗೆ ತಾಯಂದಿರ ದಿನವೆಂದು ಆಚರಿಸಿದರು, ಅದಾದ ನಂತರ ಆಗಿನ ಅಧ್ಯಕ್ಷ ವುಡ್ರೋ ವಿಲ್ಸನ್ 1914ರಲ್ಲಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಅಧಿಕೃತವಾಗಿ ಘೋಷಿಸಿದರು.

    ಅಲ್ಲಿಂದ ಪ್ರಾರಂಭವಾದ ಈ ದಿನ ಇಂದಿಗೂ ನಮ್ಮಲ್ಲಿ ಒಂದಾಗಿ ಬೆಳೆದುಕೊಂಡು ಬಂದಿದೆ. ಬೆಲೆಕಟ್ಟಲಾಗದ ಪ್ರೀತಿ, ಮಮಕಾರ ನೀಡುವ ಆ ತಾಯಿಗೆ ಈ ಆಚರಣೆ. ಆಗಸದಷ್ಟು ಪ್ರೀತಿ, ತ್ಯಾಗಕ್ಕೆ ಅವಳದ್ದೇ ಹೆಸರು ಎನ್ನುವಂತೆ ಅವಳು ದೇವರ ಪ್ರತಿರೂಪವೇ ಹೌದು.

    ಪ್ರತಿಯೊಬ್ಬರ ಜೀವನದಲ್ಲಿಯೂ ಹೆತ್ತ ತಾಯಿಯಿಲ್ಲದೇ ಹೋದರೂ, ಹೊತ್ತ ತಾಯಿಯೊಬ್ಬಳು ಇದ್ದೇ ಇರುತ್ತಾಳೆ. ಇನ್ನೂ ಕೆಲವರ ಜೀವನದಲ್ಲಿ ತಾಯಿಯ ಸ್ವರೂಪ ತಂದೆಯೂ ಆಗಿರಬಹುದು. ಆ ನಿಶ್ಕಲ್ಮಶ ಹೃದಯದ ಭಾವಕ್ಕೆ ಸರಿಸಾಟಿಯೇ ಇಲ್ಲ. ನಮ್ಮೆಲ್ಲರ ಜೀವನದಲ್ಲಿ ಪ್ರತಿ ದಿನವೂ ಅವಳದ್ದೇ ದಿನಚರಿ, ಅಡುಗೆಗೂ ಅವಳ ಪ್ರೀತಿಯೇ ಒಗ್ಗರಣೆ. ಉಸಿರಲ್ಲಿಯೂ ಆಕೆಯದ್ದೇ ಏರಿಳಿತ ಎನ್ನುವ ಹಾಗೇ….. ಜೀವನವೇ ಅವಳದೊಂದು ಸಿಹಿ ಕೊಡುಗೆ.

    ಗುರಿಯೇ ಇಲ್ಲದ ಜೀವನದಲ್ಲಿ ಪ್ರತಿ ನಿಲ್ದಾಣವು ಅವಳೇ. ಅವಳ ಪ್ರೀತಿಯೊಂದೇ ನನ್ನ ಗುರಿ. ಇಂದು ನಾ ಕಾಣದ ನೋವು, ನಾ ಕಂಡ ನಲಿವು ಎಲ್ಲವೂ ಅವಳದ್ದೇ ಬಹುದೊಡ್ಡ ಕಾಣಿಕೆ..

    ಹೆತ್ತು, ಹೊತ್ತು, ಸಾಕಿ ಸಲುಹಿದ ಎಲ್ಲರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.

  • ವಿಶ್ವ ತಾಯಂದಿರ ದಿನಾಚರಣೆ – 600ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ

    ವಿಶ್ವ ತಾಯಂದಿರ ದಿನಾಚರಣೆ – 600ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ

    ಬೆಂಗಳೂರು: ವಿಶ್ವ ತಾಯಂದಿರ ದಿನಾಚರಣೆ ಹಿನ್ನೆಲೆಯಲ್ಲಿ 600ಕ್ಕೂ ಹೆಚ್ಚು ಗರ್ಭಿಣಿ ತಾಯಿಯರಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

    ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಎಂಇಐ ಮೈದಾನದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಮೃತ್ಯುಂಜಯ, ಗಣಪತಿ ಹೋಮ ಹವನ ಮಾಡುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಸೀಮಂತ ಶಾಸ್ತ್ರ ಮಾಡಲಾಯಿತು. ಟಿ. ದಾಸರಹಳ್ಳಿಯ ಕಾಂಗ್ರೆಸ್ ಮುಖಂಡೆ ಗೀತಾ ಶಿವರಾಂ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ಕಾರ್ಯಕ್ರಮಕ್ಕೆ ಬಂದಿರುವ ಮಹಿಳೆಯರಿಗೆ ಅರಿಶಿನ ಕುಂಕುಮ, ಸೀರೆ, ಬಳೆ ಜೊತೆಗೆ ವಿಶೇಷ ಉಡುಗೊರೆ ನೀಡುವ ಮೂಲಕ ವಿಶ್ವ ತಾಯಂದಿರ ದಿನಾಚರಣೆ ಆಚರಣೆ ಮಾಡಲಾಯಿತು. ಟಿ.ದಾಸರಹಳ್ಳಿಯ ಕ್ಷೇತ್ರದ ಎಲ್ಲಾ ಬಡಾವಣೆಯ ತಾಯಿಯಂದಿರು ಕಾರ್ಯಕ್ರಮದಲ್ಲಿ ನೆರೆದಿದ್ದರು. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಪತ್ನಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

  • ತಾಯಂದಿರ ದಿನವನ್ನು ಏಕೆ ಆಚರಿಸುತ್ತಾರೆ? ಮಹತ್ವ, ಹಿನ್ನೆಲೆ ಏನು?

    ತಾಯಂದಿರ ದಿನವನ್ನು ಏಕೆ ಆಚರಿಸುತ್ತಾರೆ? ಮಹತ್ವ, ಹಿನ್ನೆಲೆ ಏನು?

    ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವಿಲ್ಲ. ತಾಯಿಯ ಪ್ರೀತಿ, ತ್ಯಾಗಕ್ಕೆ ನಾವು ಏನೇ ಮಾಡಿದರೂ ಅದು ಕಡಿಮೆ ಆಗುತ್ತದೆ. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ. ಹಾಗಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ.

    ತಾಯಂದಿರ ದಿನ ಶುರುವಾಗಿದ್ದು ಹೇಗೆ?
    ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.

    2ನೇ ಭಾನುವಾರ ತಾಯಂದಿರ ದಿನ ಏಕೆ ಆಚರಿಸುತ್ತಾರೆ?
    ಮೇ 9, 1914ರಂದು ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

    ತಾಯಂದಿರ ದಿನ ಏಕೆ ಆಚರಿಸುತ್ತಾರೆ?
    ತಾಯಿಗಾಗಿ ಪ್ರೀತಿ ಹಾಗೂ ಉಡುಗೊರೆ ನೀಡಲು ಯಾವುದೇ ವಿಶೇಷ ದಿನದ ಅಗತ್ಯ ಇಲ್ಲ. ಆದರೂ ಸಹ ತಾಯಂದಿರ ದಿನದಂದು ತಾಯಿಗೆ ಮತ್ತಷ್ಟು ಗೌರವ ನೀಡಲಾಗುತ್ತದೆ. ಈ ದಿನದಂದು ತಾಯಿಗೆ ಸಿಹಿ ಜೊತೆ ಉಡುಗೊರೆ ನೀಡಲಾಗುತ್ತದೆ.

    ಲಂಡನ್‍ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಭಾರತ ಸೇರಿ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಮೇ 12ರಂದು ತಾಯಂದಿರ ದಿನ ಆಚರಿಸಲಾಗುತ್ತದೆ.