Tag: World Health Organization

  • ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    – ಲ್ಯಾಬ್‍ನಲ್ಲಿ ಸೃಷ್ಟಿಯಾಗಿದ್ದಕ್ಕೆ ಯಾವುದೇ ಸಾಕ್ಷಿ ಇಲ್ಲ

    ಬೀಜಿಂಗ್: ಲ್ಯಾಬ್‍ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎರಡು ಬಾರಿ ಹೇಳಿದೆ ಎಂದು ಚೀನಾ ತಿಳಿಸಿದೆ.

    ಇಂದು ಇಡೀ ವಿಶ್ವಕ್ಕೆ ದೊಡ್ಡ ತಲೆನೋವಾಗಿರುವ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಸೋಂಕು ಇಂದು ವಿಶ್ವವ್ಯಾಪಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೆ ಇದನ್ನು ಚೀನಾ ಬಯೋವೆಪನ್ ಆಗಿ ಬಳಸುತ್ತಿದೆ. ಇದು ಚೀನಾದ ಲ್ಯಾಬ್‍ನಲ್ಲಿ ತಯಾರದ ಭಯಾನಕ ವೈರಸ್ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಕೇಳಿ ಬಂದಿದ್ದವು. ಇದನ್ನು ಓದಿ: ಕೊರೊನಾ ವೈರಸ್ ಸೃಷ್ಟಿ ಆಗಿದ್ದು ಎಲ್ಲಿ – ರಹಸ್ಯ ಭೇದಿಸಲು ಹೊರಟ ಅಮೆರಿಕ

    ಈ ಮಾತುಗಳನ್ನು ಚೀನಾ ಮುಂಚೆಯಿಂದಲೂ ತಳ್ಳಿ ಹಾಕಿಕೊಂಡು ಬಂದಿತ್ತು. ಈಗ ಮತ್ತೆ ಈ ವಿಚಾರವಾಗಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝೋವೋ ಲಿಜಿಯಾನ್, ಕೊರೊನಾ ಚೀನಾದ ವೈರಸ್ ಅಲ್ಲ. ಇದು ಯಾವುದೇ ಪ್ರಯೋಗಾಲಯಗಳಲ್ಲಿ ಮಾಡಲ್ಪಟ್ಟ ವೈರಸ್ ಅಲ್ಲ. ಇದಕ್ಕೆ ಯಾವುದೇ ಸಾಕ್ಷಿ ಕೂಡ ಇಲ್ಲ. ಇದೇ ಮಾತನ್ನು ವಿಶ್ವ ಆರೋಗ್ಯ ಸಂಸ್ಥೆ ಎರಡು ಬಾರಿ ಹೇಳಿದೆ ಎಂದು ಹೇಳಿದ್ದಾರೆ.

    ಬುಧವಾರ ಮಾತನಾಡಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸಂಭವಿಸಿರುವ ಈ ಭಯಾನಕ ಪರಿಸ್ಥಿತಿ ಯಾಕೆ ಸೃಷ್ಟಿ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದರು. ಟ್ರಂಪ್ ಅವರ ಪ್ರತಿಕ್ರಿಯೆಗೆ ಮಾಧ್ಯಮಗಳು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಬಳಿ ಈ ಬಗ್ಗೆ ನೀವು ಮಾತನಾಡಿದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಲ್ಯಾಬ್ ಬಗ್ಗೆ ಮಾತನಾಡಿದ ವಿಚಾರವನ್ನು ಚರ್ಚಿಸಲು ಇಷ್ಟ ಪಡುವುದಿಲ್ಲ. ಈ ವಿಚಾರವನ್ನು ಚರ್ಚಿಸುವ ಸರಿಯಾದ ಸಮಯ ಇದಲ್ಲ ಎಂದು ಉತ್ತರಿಸಿದ್ದರು. ಇದನ್ನು ಓದಿ: ಕೊರೊನಾ ಚೀನಾ ವೈರಸ್ ಅನ್ನಬೇಡಿ: ಭಾರತಕ್ಕೆ ಚೀನಾ ಮನವಿ

    ಈ ಹಿಂದೆಯೂ ಕೂಡ ಟ್ರಂಪ್ ಅವರು ಕೊರೊನಾ ವೈರಸ್ ನ್ನು ಚೀನಾ ವೈರಸ್ ಎಂದು ಹೇಳಿದ್ದರು. ಈ ವಿಚಾರವಾಗಿ ಕಿಡಿಕಾರಿದ್ದ ಚೀನಾ ಕೆಲ ಅಮೆರಿಕದವರು ಬೇಕು ಎಂದೇ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಹೇಳುತ್ತಿದ್ದಾರೆ. ಯಾವುದೇ ಒಂದು ವೈರಸ್ ಅನ್ನು ಒಂದು ದೇಶಕ್ಕೆ ಸೀಮಿತಗೊಳಿಸುವುದು ತಪ್ಪು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ ಎಂದು ಜಾಗತಿಕ ಮಟ್ಟದಲ್ಲಿ ಕೊರೊನಾ ಚೀನಾ ವೈರಸ್ ಅಲ್ಲ ಎಂದು ಅಭಿಯಾನ ಆರಂಭಿಸಿತ್ತು.

    ಒಂದು ಭಯಾನಕ ವೈರಸ್ ಅನ್ನು ಒಂದು ದೇಶಕ್ಕೆ ಸೀಮಿತ ಮಾಡಿದರೆ, ಅದೂ ದೇಶದ ಮುಂದಿನ ಬೆಳವಣಿಗೆಗೆ ಮಾರಕವಾಗುತ್ತದೆ. ಈ ಕಾರಣಕ್ಕೆ ಕೊರೊನಾವನ್ನು ಚೀನಾ ವೈರಸ್ ಎನ್ನಬೇಡಿ ಎಂದಿತ್ತು. ಜೊತೆಗೆ ಭಾರತ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯುವ ಸಂಕುಚಿತ ಮನೋಭಾವನೆಯನ್ನು ಹೊಂದಿಲ್ಲ ಎಂದು ಚೀನಾ ರಾಯಭಾರಿ ಅಂದು ಹೇಳಿದ್ದರು.

  • ಚೀನಾ ಪರವಾಗಿರುವ WHOಗೆ ಫಂಡ್ ನೀಡಲ್ಲ -ಟ್ರಂಪ್

    ಚೀನಾ ಪರವಾಗಿರುವ WHOಗೆ ಫಂಡ್ ನೀಡಲ್ಲ -ಟ್ರಂಪ್

    – ಮೊದಲೇ ಎಚ್ಚರಿಕೆ ನೀಡದ್ದರಿಂದ ವಿಶ್ವದಲ್ಲಿ ಅವಾಂತರ
    – ಅಮೆರಿಕದಿಂದಲೇ ಅತಿ ಹೆಚ್ಚು ಫಂಡ್

    ವಾಷಿಂಗ್ಟನ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಮೊದಲು ಚೀನಾದಲ್ಲಿ ಪತ್ತೆಯಾದಾಗ ಇದು ಅತೀ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಮೊದಲೇ ಎಚ್ಚರಿಕೆ ನೀಡಬೇಕಿತ್ತು. ಆದರೆ ವಿಶ್ವಕ್ಕೆ ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದಕ್ಕೆ ಅಮೆರಿಕ ಡಬ್ಲ್ಯೂಎಚ್‍ಒಗೆ ನೀಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿದೆ.

    ಚೀನಾ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಮೊದಲು ಕಾಣಿಸಿಕೊಂಡಾಗ ಅದು ವೇಗವಾಗಿ ಹಬ್ಬುತ್ತಿರುವ ಬಗ್ಗೆ ಡಬ್ಲ್ಯೂಎಚ್‍ಒ ಮೊದಲೇ ಎಚ್ಚರಿಕೆ ನೀಡದೆ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಮತ್ತು ತೀವ್ರವಾಗಿ ನಿಗಾವಹಿಸುವಲ್ಲಿ ವಿಫಲವಾಗಿದೆ. ಡಬ್ಲ್ಯೂಎಚ್‍ಒ ಮೊದಲೇ ಸರಿಯಾಗಿ ಮಾಹಿತಿ ಕೊಟ್ಟಿದ್ದರೆ ವೈರಸ್ ಈ ರೀತಿ ವಿಶ್ವದಲ್ಲಿ ಅಟ್ಟಹಾಸ ಮೆರೆಯುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬಹುದಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

    ಶ್ವೇತ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಟ್ರಂಪ್ ಅವರು, ಕೊರೊನಾ ಬಗ್ಗೆ ಮಾಹಿತಿ ನೀಡುವಲ್ಲಿ ಡಬ್ಲ್ಯೂಎಚ್‍ಒ ವಿಫಲವಾಗಿದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಡಬ್ಲ್ಯೂಎಚ್‍ಒಗೆ ನೀಡಲಾಗುತ್ತಿದ್ದ ಧನಸಹಾಯವನ್ನು ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

    ಅಮೆರಿಕದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಹಬ್ಬುತ್ತಿದೆ. ಈ ಅಪಾಯದ ಬಗ್ಗೆ ಅರಿವಿದ್ದರೂ ಕೂಡ ಡಬ್ಲ್ಯೂಎಚ್‍ಒ ತಮ್ಮ ದೇಶಕ್ಕೆ ಮುನ್ನೆಚ್ಚರಿಕೆ ನೀಡಿರಲಿಲ್ಲ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ ಚೀನಾದ ಪರವಾಗಿ ಡಬ್ಲ್ಯೂಎಚ್‍ಒ ಇದೆ ಎನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಡಬ್ಲ್ಯೂಎಚ್‍ಒಗೆ ಅಮೆರಿಕದಿಂದ ಹೆಚ್ಚು ಧನಸಹಾಯವನ್ನು ಮಾಡಲಾಗುತ್ತಿತ್ತು. ಅಮೆರಿಕದ ಮಂದಿ ವಿಶ್ವ ಆರೋಗ್ಯ ಸಂಸ್ತೆಗೆ ಹೆಚ್ಚು ಫಂಡ್ ನೀಡುತ್ತಿದ್ದರು. ಕಳೆದ ವರ್ಷ ಸಂಸ್ಥೆಗೆ ಅಮೆರಿಕ 400 ದಶಲಕ್ಷ ಯುಎಸ್ ಡಾಲರ್(3,056 ಕೋಟಿ) ನೆರವನ್ನು ನೀಡಿತ್ತು. ಪ್ರತಿ ವರ್ಷ 400ರಿಂದ 500 ದಶಲಕ್ಷ ಯುಎಸ್ ಡಾಲರ್ ನೆರವನ್ನು ಡಬ್ಲ್ಯೂಎಚ್‍ಒಗೆ ಅಮೆರಿಕ ನೀಡುತ್ತದೆ. ಆದರೆ ಚೀನಾ ಡಬ್ಲ್ಯೂಎಚ್‍ಒಗೆ 40 ದಶಲಕ್ಷ ಯುಎಸ್ ಡಾಲರ್ ಗಿಂತ ಕಡಿಮೆ ಹಣವನ್ನು ನೀಡುತ್ತದೆ. ಆದರೂ ಡಬ್ಲ್ಯೂಎಚ್‍ಒ ಚೀನಾ ಪರವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

    ಡಬ್ಲ್ಯೂಎಚ್‍ಒ ಕೊರೊನಾ ವೈರಸ್ ಬಗ್ಗೆ ಸರಿಯಾಗಿ ಮಾಹಿತಿ ವಿಶ್ವಕ್ಕೆ ನೀಡುತ್ತಿಲ್ಲ. ರಾಷ್ಟ್ರಗಳ ನಡುವಿನ ಬಾಂಧವ್ಯ ಹೆಚ್ಚಿಸಲು, ಸ್ನೇಹವನ್ನು ಹೆಚ್ಚಿಸಲು ಡಬ್ಲ್ಯೂಎಚ್‍ಒ ಕೆಲಸ ಮಾಡಬೇಕು. ಯಾವ ರಾಷ್ಟ್ರದ ಸ್ಥಿತಿ ಹೇಗಿದೆ ಎಂದು ವಿಶ್ವಕ್ಕೆ ಮಾಹಿತಿ ನೀಡಬೇಕು. ಆದರೆ ಡಬ್ಲ್ಯೂಎಚ್‍ಒ ಕೊರೊನಾ ವೈರಸ್ ಹುಟ್ಟಿಕೊಂಡ ರಾಷ್ಟ್ರದಲ್ಲಿ ಯಾವ ಹೊಸ ನಿಯಮ ಪಾಲಿಸುತ್ತಿದ್ದಾರೆ? ವಿಜ್ಞಾನಿಗಳ ಸಂಶೋಧನೆ ಏನಾಯಿತು? ವೈದ್ಯರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇತರೆ ರಾಷ್ಟ್ರಗಳಿಗೆ ನೀಡುತ್ತಿಲ್ಲ. ಚೀನಾದ ಪರವಾಗಿ ಡಬ್ಲ್ಯೂಎಚ್‍ಒ ನಿಂತಿದೆ ಎಂದು ಟ್ರಂಪ್ ಹರಿಹಾಯ್ದಿದ್ದಾರೆ.

    ಸದ್ಯ ವಿಶ್ವಾದ್ಯಂತ 1,17,217 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ ಹೆಚ್ಚು ಮಂದಿ ಅಮೆರಿಕದಲ್ಲಿಯೇ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 5,94,207 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ.

  • ಕಠಿಣ, ಸಮಯೋಚಿತ- ಮೋದಿ ನಡೆಯನ್ನು ಶ್ಲಾಘಿಸಿದ WHO

    ಕಠಿಣ, ಸಮಯೋಚಿತ- ಮೋದಿ ನಡೆಯನ್ನು ಶ್ಲಾಘಿಸಿದ WHO

    ನವದೆಹಲಿ: ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಭಾರತದ ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರ ಕಠಿಣ ಮತ್ತು ಸಮಯೋಚಿತ ಎಂದು ಮೋದಿ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.

    ಇಂದು ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸಿದ್ದರು. ಇದರ ಜೊತೆಗೆ ಏಪ್ರಿಲ್ 20ರವರೆಗೆ ಡಬಲ್ ಲಾಕ್‍ಡೌನ್ ಇರಲಿದ್ದು, ಕಠಿಣ ರೀತಿಯಲ್ಲಿ ಕಾನೂನನ್ನು ಜಾರಿ ಮಡಲಾಗುವುದು ಎಂದು ಹೇಳಿದ್ದರು. ಮೋದಿ ಅವರ ಈ ನಡೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚಿಕೊಂಡಿದೆ.

    ಮೋದಿ ಅವರು ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶವನ್ನು ಮೇ 3ರವರೆಗೆ ಲಾಕ್‍ಡೌನ್ ಮಾಡಿರುವುದು ಕಠಿಣ ಮತ್ತು ಸಮಯೋಚಿತ ತೀರ್ಮಾನವಾಗಿದೆ. ಈಗಲೇ ಅಂಕಿ-ಅಂಶಗಳ ಬಗ್ಗೆ ಮಾತನಾಡಬಾರದು. ಆದರೆ 6 ವಾರಗಳು ದೇಶವನ್ನು ಲಾಕ್‍ಡೌನ್ ಮಾಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮಯವಾಗುತ್ತದೆ. ಜೊತೆಗೆ ಹೊಸ ಹೊಸ ಪ್ರಕರಣಗಳನ್ನು ಪತ್ತೆ ಹಚ್ಚಲು, ಅವರನ್ನು ಐಸೊಲೇಷನ್ ಮಾಡಲು ವೈರಸ್ ಅನ್ನು ತಡೆಗಟ್ಟಲು ಬಹಳ ಉಪಯೋಗವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

    ದೊಡ್ಡ ದೊಡ್ಡ ಸವಾಲುಗಳ ಹೊರತಾಗಿಯೂ, ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಅಚಲವಾದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಈ ವೈರಸ್ ಅನ್ನು ಸೋಲಿಸಲು ಪ್ರತಿಯೊಬ್ಬರೂ ಅತ್ಯುತ್ತಮವಾಗಿ ಮತ್ತು ಒಟ್ಟಾಗಿ ಕೆಲಸ ಮಾಡುವ ಸಮಯ ಇದು ಎಂದು ಭಾರತದ ಕಾರ್ಯವನ್ನು ಪೂನಂ ಖೇತ್ರಪಾಲ್ ಸಿಂಗ್ ಮೆಚ್ಚಿಕೊಂಡಿದ್ದಾರೆ.

    ಇಂದು ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ. ಲಾಕ್‍ಡೌನ್ ಪಾಲನೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತ್ತಷ್ಟು ನಿಯಂತ್ರಿಸಲು ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇನೆ. ನಾವು ಕೊರೊನಾ ವಿರುದ್ಧ ಹೇಗೆ ಹೋರಾಟ ನಡೆಸಬೇಕು. ಜನರ ಕಷ್ಟಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಬಗ್ಗೆ ರಾಜ್ಯಗಳ ಜೊತೆ ಚರ್ಚೆ ಮಾಡಿದ್ದೇವೆ. ಎಲ್ಲ ರಾಜ್ಯಗಳು ಲಾಕ್ ಡೌನ್ ವಿಸ್ತರಿಸಲು ಸಲಹೆ ನೀಡಿವೆ. ಕೆಲ ರಾಜ್ಯಗಳು ಈಗಾಗಲೇ ವಿಸ್ತರಣೆ ಮಾಡಿವೆ ಎಂದು ತಿಳಿಸಿದ್ದರು.

    ಹಿಂದೆ ಪಾಲಿಸಿದಂತೆ ಮುಂದೆಯೂ ನಿಯಮ ಪಾಲಿಸಬೇಕು. ಹೊಸ ಪ್ರದೇಶದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳಬೇಕಿದೆ. ಒಂದು ಸಾವು ನಮ್ಮ ಚಿಂತೆಯನ್ನ ಹೆಚ್ಚಿಸುತ್ತದೆ. ಮೊದಲಿಗಿಂತ ಹೆಚ್ಚು ನಿಯಮಗಳು ಹಾಟ್ ಸ್ಪಾಟ್ ಗಳಲ್ಲಿ ಹೆಚ್ಚಲಿದೆ. ಹೊಸ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗುತ್ತದೆ. ದೇಶಾದ್ಯಂತ ಒಂದು ವಾರ ಡಬ್ಬಲ್ ಲಾಕ್‍ಡೌನ್ ಇರಲಿದೆ ಎಂದು ಹೇಳಿದ್ದರು.

  • ಚೀನಾದಲ್ಲಿ ಕೊರೊನಾಗೆ 908 ಮಂದಿ ಬಲಿ – ಕೇರಳದಲ್ಲೂ ಹೆಚ್ಚಿದ ಭೀತಿ

    ಚೀನಾದಲ್ಲಿ ಕೊರೊನಾಗೆ 908 ಮಂದಿ ಬಲಿ – ಕೇರಳದಲ್ಲೂ ಹೆಚ್ಚಿದ ಭೀತಿ

    ಬೀಜಿಂಗ್: ದಿನೇ ದಿನೇ ಮಹಾಮಾರಿ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ 800 ಮಂದಿ ಚೀನಾದಲ್ಲಿ ಕೊರೊನಾಗೆ ಸಾವನ್ನಪ್ಪಿದ್ದರೆ ಈ ಸಂಖ್ಯೆ ಸೋಮವಾರ 908ಕ್ಕೆ ತಲುಪಿದೆ.

    ಭಾನುವಾರ 3 ಸಾವಿರ ಹೊಸ ಪ್ರಕರಣ ಚೀನಾದಲ್ಲಿ ದಾಖಲಾಗಿದ್ದು, ಈವರೆಗೆ ಚೀನಾದಲ್ಲಿ ಒಟ್ಟು 40 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಚೀನಾದಲ್ಲಿ ಭೀತಿ ಹೆಚ್ಚಿಸಿದ್ದು, ಈ ಬಗ್ಗೆ ಚೀನಾ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದ್ದು, ಸೋಂಕು ಹರಡದಂತೆ ನಿಗವಹಿಸುತ್ತಿದೆ. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

    2002-2003ರಲ್ಲಿ ಸಾರ್ಸ್ ಹೆಸರಿನ ವೈರಸ್ ಚೀನಾದಲ್ಲಿ 650 ಮಂದಿಯನ್ನು ಬಲಿ ಪಡೆದಿತ್ತು. ಆದರೆ ಕೊರೊನಾ ವೈರಸ್ ಈ ದಾಖಲೆ ಮುರಿದು ತನ್ನ ಕರಾಳತೆಯನ್ನು ಮುಂದುವರಿಸಿದೆ. ಚೀನಾದಿಂದ ಸುಮಾರು 20 ಇತರೆ ರಾಷ್ಟ್ರಗಳಿಗೂ ಕೊರೊನಾ ಹರಡಿದೆ. ಈ ಹಿನ್ನೆಲೆ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಪ್ರಯಾಣಿಕರು ಮತ್ತು ಚೀನಾಗೆ ತೆರಳುವ ಪ್ರಯಾಣಿಕರ ಮೇಲೂ ನಿರ್ಬಂಧ ವಿಧಿಸಲಾಗಿದ್ದು, ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

    ಈ ಸೋಂಕಿನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಶೀಘ್ರವೇ ಚೀನಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದ್ದು, ಈ ಭೀಕರ ವೈರಸ್‍ಗೆ ಔಷಧ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ.

    ಕೇರಳದಲ್ಲೂ ಕೊರನಾ ಭೀತಿ:
    ಕೇರಳದಲ್ಲೂ ಕೊರೊನಾ ವೈರಸ್ ಭೀತಿ ಮುಂದುವರಿದಿದೆ. 3,252 ಮಂದಿಯನ್ನು ಪರಿಶೀಲನೆಯಲ್ಲಿ ಇಡಲಾಗಿದೆ. ಕೊರೊನಾ ವೈರಸ್ ಭೀತಿ ತಗುಲಿದೆ ಎಂದು ಹೇಳಲಾದ 345 ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 326 ಮಂದಿಗೆ ಕೊರನಾ ವೈರಸ್ ಸೋಂಕು ತಗುಲಿಲ್ಲ ಎನ್ನುವುದು ಧೃಡಪಟ್ಟಿದೆ. ಇದನ್ನೂ ಓದಿ: ಕೊರೊನಾ ವೈರಸ್‍ನಿಂದ ಆಸ್ಪತ್ರೆ ಸೇರಿದ ತಂದೆ – ಹಸಿವಿನಿಂದ ಬಳಲಿ ಶವವಾದ ವಿಶೇಷಚೇತನ ಮಗ

    ಔಷಧಿ ಕಂಡುಹಿಡಿಯುತ್ತಿರುವ ಭಾರತೀಯ ವಿಜ್ಞಾನಿ:
    ಆಸ್ಟ್ರೇಲಿಯಾದ ಪ್ರಮುಖ ವೈಜ್ಞಾನಿಕ ಸಂಸ್ಥೆಯಾದ ಸಿಎಸ್‍ಐಆರ್‍ಓ(ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ)ಯಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ನೇತೃತ್ವವನ್ನು ಭಾರತೀಯ ವಿಜ್ಞಾನಿ ಎಸ್.ಎಸ್ ವಾಸನ್ ವಹಿಸಿದ್ದಾರೆ. ವಾಸನ್ ಅವರು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಸ್ಕಾಲರ್ ಹಾಗೂ ಬೆಂಗಳೂರಿನ ಐಐಎಸ್‍ಸಿ(ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್) ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

    ಇವರ ನೇತೃತ್ವದ ತಂಡ ಆಸ್ಟ್ರೇಲಿಯಾದ ಸಿಎಸ್‍ಐಆರ್‍ಓನಲ್ಲಿ ಚಿಕಿತ್ಸಾತ್ಮಕವಾಗಿ ಮೊದಲ ಹಂತದಲ್ಲಿ ಕೊರೊನಾ ವೈರಸ್‍ಗಳನ್ನು ಬೆಳೆಸಿದೆ. ಮಾನವ ದೇಹದಿಂದ ಪಡೆದ ಸ್ಯಾಂಪಲ್ ಕೊರೊನಾ ವೈರಸ್‍ಗಳನ್ನು ವಿನಾಶಗೊಳಿಸಲು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಎಸ್.ಎಸ್ ವಾಸನ್ ತಂಡದ ನೇತೃತ್ವದಲ್ಲೇ ಡೆಂಗ್ಯೂ, ಚಿಕನ್ ಗುನ್ಯಾ ಸೇರಿ ಹಲವು ರೋಗಗಳಿಗೆ ಔಷಧಿ ಕಂಡುಹಿಡಿಯಲಾಗಿತ್ತು.

  • ಇಂದು ವಿಶ್ವ ತಂಬಾಕು ದಿನ – ಸ್ಯಾಂಡ್ ಆರ್ಟ್ ಮೂಲಕ ಸಂದೇಶ ಕೊಟ್ಟ ಕಲಾವಿದ

    ಇಂದು ವಿಶ್ವ ತಂಬಾಕು ದಿನ – ಸ್ಯಾಂಡ್ ಆರ್ಟ್ ಮೂಲಕ ಸಂದೇಶ ಕೊಟ್ಟ ಕಲಾವಿದ

    ನವದೆಹಲಿ: ಮೇ 31 ರಂದು ವಿಶ್ವ ತಂಬಾಕು ದಿನ ಎಂದು ಆಚರಣೆ ಮಾಡುತ್ತೇವೆ. ಈ ದಿನ ತಂಬಾಕು ಸೇವನೆ ಮಾಡುವವರಿಗೆ ತನ್ನ ಮರಳು ಶಿಲ್ಪ ಕಲೆಯ ಮೂಲಕ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ಒಳ್ಳೆಯ ಸಂದೇಶ ನೀಡಿದ್ದಾರೆ.

    ಒಡಿಶಾದ ಜನಪ್ರಿಯ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ಮರಳಿನಲ್ಲಿ ಮೇರುಕೃತಿಗಳನ್ನು ತಯಾರು ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಇಂದು ವಿಶ್ವ ತಂಬಾಕು ದಿನ ಇರುವ ಕಾರಣ ತಮ್ಮ ಮರಳು ಶಿಲ್ಪ ಕಲೆಯ ಮೂಲಕ “ತಂಬಾಕು ಸೇವನೆ ಬಿಡಿ ಜೀವ ಉಳಿಸಿಕೊಳ್ಳಿ” ಎಂಬ ಸಂದೇಶವನ್ನು ನೀಡಿದ್ದಾರೆ.

    ತಂಬಾಕು ಸೇವನೆಯಿಂದ ಪ್ರಾಣಕ್ಕೆ ಹಾನಿಯಾಗುತ್ತದೆ ಎಂದು ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ವತಿಯಿಂದ ಮೇ 31 ರಂದು ಪ್ರತಿ ವರ್ಷ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ.

    ತಂಬಾಕು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಉಸಿರಾಟದ ಕಾಯಿಲೆಗಳು ಬರುತ್ತವೆ. ಈ ರೀತಿಯ ಆಚರಣೆಯಿಂದ ತಂಬಾಕು ಸೇವನೆ ಮಾಡುವವರಿಗೆ ಒಳ್ಳೆಯ ಸಂದೇಶ ನೀಡಬೇಕು ಮತ್ತು ಜನರಲ್ಲಿ ತಂಬಾಕು ಸೇವನೆಯನ್ನು ಕಡಿಮೆ ಮಾಡಬೇಕು ಎಂಬುದು ಇದರ ಉದ್ದೇಶವಾಗಿದೆ.

  • ರಸ್ತೆ ದಾಟುವಾಗ ಮೊಬೈಲ್ ನೋಡುತ್ತಾ ಮಗುವಿನ ಕೈಬಿಟ್ಟ ತಾಯಿ- ಮುಂದೇನಾಯ್ತು ವಿಡಿಯೋ ನೋಡಿ

    ರಸ್ತೆ ದಾಟುವಾಗ ಮೊಬೈಲ್ ನೋಡುತ್ತಾ ಮಗುವಿನ ಕೈಬಿಟ್ಟ ತಾಯಿ- ಮುಂದೇನಾಯ್ತು ವಿಡಿಯೋ ನೋಡಿ

    ಚೀನಾ: ರಸ್ತೆ ದಾಟುತ್ತಿದ್ದಾಗ ತಾಯಿಯ ಅಜಾಗರೂಕತೆಯಿಂದಾಗಿ ಮಗುವಿಗೆ ಕಾರ್ ಡಿಕ್ಕಿಯಾದ ಘಟನೆ ದಕ್ಷಿಣ ಚೀನಾದ ಬೈಸ್ ನಗರದಲ್ಲಿ ನಡೆದಿದೆ.

    ಈ ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಏನಿದು ಘಟನೆ?: ತಾಯಿಯೊಬ್ಬಳು ರಸ್ತೆ ದಾಟಲೆಂದು ತನ್ನ ಮಗುವಿನ ಕೈ ಹಿಡಿದುಕೊಂಡು ನಿಂತಿದ್ದಳು. ಇದೇ ವೇಳೆ ಆಕೆ ಮಗುವಿನ ಕೈ ಬಿಟ್ಟು ತನ್ನ ಫೋನಿನ ಕಡೆ ಗಮನಹರಿಸುತ್ತಾಳೆ. ತಾಯಿಯ ಕೈ ಬಿಟ್ಟ ಮಗು ಆರಾಮವಾಗಿ ರಸ್ತೆ ದಾಟಿದೆ. ಅಲ್ಲದೇ ಇನ್ನೊಂದು ಬಾಲಕನ ಜೊತೆ ಆಟವಾಡುತ್ತಾ ಇತ್ತು.

    ರಸ್ತೆ ದಾಟಿ ಬಂದ ಮಗು ಬಳಿಕ ತನ್ನ ತಾಯಿಯನ್ನು ತನ್ನ ಕಡೆ ಬರುವಂತೆ ಜೋರಾಗಿ ಕರೆದಿದೆ. ಆದ್ರೆ ತಾಯಿ ಮಾತ್ರ ತನ್ನ ಫೋನಿನಲ್ಲಿ ಮಗ್ನನಾಗಿದ್ದಳು. ಅಲ್ಲದೇ ಸ್ವಲ್ಪ ಸಮಯದ ಬಳಿಕ ಆಕೆ ರಸ್ತೆ ದಾಟಲು ಮುಂದಾಗಿದ್ದಳು. ಈ ವೇಳೆ ಇತ್ತ ಈಗಾಗಲೇ ರಸ್ತೆ ದಾಟಿ ಬಂದಿದ್ದ ಮಗು ಮತ್ತೆ ತನ್ನ ತಾಯಿಯತ್ತ ಓಡಿದೆ. ಪರಿಣಾಮ ಎಡಗಡೆಯಿಂದ ಬರುತ್ತಿದ್ದ ಕಾರ್ ಮಗುವಿಗೆ ಡಿಕ್ಕಿ ಹೊಡೆದಿದೆ.

    ಕಾರು ನಿಧಾನವಾಗಿ ಚಲಿಸುತ್ತಿದ್ದುದರಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಗುವಿಗೆ ಕಾರ್ ಡಿಕ್ಕಿಯಾಗುತ್ತಿದ್ದಂತೆಯೇ ಎಚ್ಚೆತ್ತ ತಾಯಿ, ಅದರತ್ತ ಓಡಿ ಬಂದು ಎಬ್ಬಿಸಿದ್ದಾಳೆ. ಈ ಎಲ್ಲಾ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶಾಂಘೈ ವೆಬ್‍ಸೈಟ್ ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಹಾಕಿ `ವರ್ಷದ ಅತೀ ಕೆಟ್ಟ ತಾಯಿಗೆ ಮತ್ತೊಂದು ಬಲವಾದ ಸ್ಪರ್ಧಿ’ ಎಂದು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿಡಿಯೋ ನೋಡಿದ ಪ್ರತಿಯೊಬ್ಬರು ತಾಯಿಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಈ ಘಟನೆಯನ್ನು ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 10,000 ಕ್ಕಿಂತ ಹೆಚ್ಚು ಮಕ್ಕಳು ಚೀನಾದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದ್ದಾರೆ.