Tag: World Environment Day

  • ನಟ ಯಶ್ ನೇತೃತ್ವದ ತಂಡದಿಂದ ಪುರಾತನ ಕಲ್ಯಾಣಿ ಜೀರ್ಣೋದ್ಧಾರ

    ನಟ ಯಶ್ ನೇತೃತ್ವದ ತಂಡದಿಂದ ಪುರಾತನ ಕಲ್ಯಾಣಿ ಜೀರ್ಣೋದ್ಧಾರ

    ಶಿವಮೊಗ್ಗ: ಕೆಳದಿ ಅರಸನಾಗಿದ್ದ ವೆಂಕಟಪ್ಪ ನಾಯಕರ ಪ್ರೇಯಸಿ ಚಂಪಕ ಎಂಬುವರ ಸವಿನೆನಪಿಗಾಗಿ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಿರ್ಮಿಸಿದ್ದ ಕಲ್ಯಾಣಿಗೆ ಸುಮಾರು 400 ವರ್ಷಗಳ ಇತಿಹಾಸವಿದೆ. ಈ ಕಲ್ಯಾಣಿಗೆ ಚಂಪಕ ಸರಸ್ಸು ಕಲ್ಯಾಣಿ ಅಥವಾ ಕೊಳ ಅಂತಾ ಸಹ ಕರೆಯಲಾಗುತ್ತದೆ.

    ಈ ಸುಂದರ ಕಲ್ಯಾಣಿ ಇಂದು ನಶಿಸಿ ಹೋಗುವಂತಹ ಹಂತ ತಲುಪಿತ್ತು. ಆದರೆ ಈ ಸುಂದರ ಕಲ್ಯಾಣಿಯನ್ನು ನಟ ಯಶ್ ನಡೆಸುತ್ತಿರುವ ಯಶೋಮಾರ್ಗ ತಂಡ ಅಭಿವೃದ್ಧಿಪಡಿಸಿದೆ. ಕಲ್ಯಾಣಿಯನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗಿದ್ದು, ಕಲ್ಯಾಣಿ ಸುತ್ತ ಕಲ್ಲಿನಲ್ಲಿ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಕಲ್ಯಾಣಿಯ ಮಧ್ಯದಲ್ಲಿ ಶಿವನ ಸಣ್ಣ ಮಂದಿರ ಸಹ ಇದೆ. ಮಂದಿರಕ್ಕೆ ತೆರಳಲು ಕಲ್ಲಿನ ದಾರಿ ಇದೆ. ಕಲ್ಯಾಣಿಯ ಪ್ರವೇಶದಲ್ಲಿ ಕಲ್ಲಿನ ಆನೆಗಳನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

    ಇಂತಹ ಸುಂದರ ಕಲ್ಯಾಣಿಯನ್ನು, ಯಶೋ ಮಾರ್ಗ ತಂಡ ಹಾಗು ಹೈದರಾಬಾದ್ ಮೂಲದ ಫ್ರೀಡಂ ಆಯಿಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜೀರ್ಣೋದ್ಧಾರಗೊಂಡ ಚಂಪಕ ಸರಸ್ಸು ಕಲ್ಯಾಣಿಯನ್ನು ಜಲ ತಜ್ಞ ಶಿವಾನಂದ ಕಳವೆ ಚಾಲನೆ ನೀಡಿದರು. ಇದನ್ನೂ ಓದಿ: ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

    ರಾಜ್ಯದ ಕೆರೆಗಳ ಅಭಿವೃದ್ಧಿ ಕುರಿತು ಯಶ್ ಅವರ ಜೊತೆ ಚರ್ಚೆ ಮಾಡುವಾಗ ಚಂಪಕ ಸರಸ್ಸು ಕಲ್ಯಾಣಿ ಬಗ್ಗೆ ಚರ್ಚೆ ಮಾಡಿದ್ದೇವು. ರಾಜ್ಯದ ಜೀವ ಸೆಲೆ ಉಳಿಯಬೇಕು ಎಂಬ ಉದ್ದೇಶದಿಂದ ಯಶ್ ಅವರು, ಅವರ ಅಭಿಮಾನಿಗಳ ಮೂಲಕ ಇದನ್ನು ಅಭಿವೃದ್ಧಿಪಡಿಸಿರುವುದು ಖುಷಿಯ ವಿಚಾರ ಎಂದರು.

  • ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಚಿಕ್ಕಬಳ್ಳಾಪುರ: ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ದಿನ ಅಂಗವಾಗಿ ಎಲ್ಲೆಲ್ಲೂ ಗಿಡಗಳನ್ನು ನೆಡುವುದರ ಮೂಲಕ ಆಚರಣೆ ಮಾಡಲಾಗುತ್ತಿದೆ. ಆದರೆ ಇಲ್ಲೊಬ್ಬರು ಗಗನಸಖಿ ಗಗನದಿಂದಲೇ ಬೀಜ ಬಿತ್ತನೆ ಮಾಡಿ ಗಮನಸೆಳೆದಿದ್ದಾರೆ.

    ಸಿಲಿಕಾನ್ ಸಿಟಿಯ ಬೆಡಗಿ, ಮಾಜಿ ಗಗನ ಸಖಿ, ಗಗನದಿಂದಲೇ ಪ್ಯಾರಾಗ್ಲೈಡಿಂಗ್ ಮೂಲಕ ಪಂಚಗಿರಿಗಳ ಸಾಲಲ್ಲಿ ಬೀಜದುಂಡೆ ಬಿತ್ತನೆ ಮಾಡಿದ್ದಾರೆ. ಈ ಮೂಲಕ ವಿಶೇಷವಾಗಿ ಪರಿಸರ ದಿನಾಚರಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹತ್ತಾರು ವರ್ಷಗಳ ಕಾಲ ಗಗನಸಖಿಯಾಗಿ ಕೆಲಸ ಮಾಡಿದ್ದ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿ ಅನಿತಾ ರಾವ್ ಭಾನುವಾರ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳಲ್ಲಿ ಪ್ಯಾರಾಮೋಟರಿಂಗ್ ಮೂಲಕ ಬೀಜದುಂಡನೆ ಬಿತ್ತನೆ ಮಾಡಿದರು. ಇದನ್ನೂ ಓದಿ: ಲಂಕಾಗೆ 3.3 ಟನ್‌ ಔಷಧ ಪೂರೈಕೆ – ಭಾರತ ಸರ್ಕಾರದಿಂದ ನೆರವು

    ಹೌದು, ಗಗನಸಖಿಯಾಗಿ ಕೆಲಸ ಮಾಡಿ, ಸಾಂಸಾರಿಕ ಜೀವನಕ್ಕೆ ಕಾಲಿಡುವ ಸಂದರ್ಭ ಗಗನಸಖಿ ಕೆಲಸಕ್ಕೆ ಗುಡ್‌ಬೈ ಹೇಳಿದರು. ಬಳಿಕ ಅನಿತಾ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸದ ಕಡೆ ಮುಖ ಮಾಡಿದ್ದಾರೆ. ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ನಂದಿಗಿರಿಧಾಮಗಳಲ್ಲಿ ಸುಮಾರು 70,000 ಬೀಜದ ಉಂಡೆಗಳನ್ನು ಹಾಕುವ ಮೂಲಕ ಬರದ ನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಡು ಬೆಳೆಸುವ ಕಾಯಕಕ್ಕೆ ಮುಂದಾಗಿದ್ದಾರೆ.

    ಈ ವೇಳೆ ಮಾತನಾಡಿದ ಅನಿತಾ ರಾವ್, ನಾವು ಪರಿಸರ ಬಳಸಿಕೊಳ್ಳುವುದರ ಜೊತೆಗೆ ಪರಿಸರಕ್ಕೆ ಕೊಡುಗೆಯನ್ನೂ ನೀಡಬೇಕು. ಅತಿ ಕಷ್ಟಕರ ಜಾಗಗಳಲ್ಲಿ ಅಂದರೆ, ಬೆಟ್ಟ ಗುಡ್ಡಗಳಲ್ಲಿ ಯಾರೂ ಹೋಗಿ ಗಿಡಗಳನ್ನು ನೆಡಲು ಸಾಧ್ಯವಿಲ್ಲ. ಹೀಗಾಗಿ ಪ್ಯಾರಾಮೋಟರ್, ಹೆಲಿಕಾಪ್ಟರ್, ಮೂಲಕ ಸೀಡ್ ಬಾಲ್‌ಗಳನ್ನು ಹಾಕಿ, ಗಿಡ ನೆಡಲು ಸಾಧ್ಯವಿದೆ. ಇಂದು ಪುಣೆಯಿಂದ ಪ್ಯಾರಾಮೋಟರ್ ತರಿಸಿ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೂಮ್ ಕ್ಲಾಸ್ ಮಿಸ್ ಮಾಡ್ದೆ ಹಾಜರಾಗಿದ್ದ ಬೆಕ್ಕು – ಹ್ಯಾಟ್ ಕೊಟ್ಟ ವಿಶ್ವವಿದ್ಯಾಲಯ

    ಅರಣ್ಯ ಇಲಾಖೆ ಸಹಯೋಗದೊಂದಿಗೆ 7 ಬಗೆಯ ಸುಮಾರು 100 ಕೆಜಿ ಬೀಜಗಳನ್ನು ಇಂದು ಬಿತ್ತನೆ ಮಾಡಲಾಗಿದೆ. 10 ವರ್ಷ ಗಗನಸಖಿಯಾಗಿ ಕೆಲಸ ಮಾಡಿರುವ ನಾನು ಈಗ ಮನೆಯಲ್ಲೇ ಕುಳಿತು ಕಾಲ ಕಳೆಯುವ ಬದಲು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ ಎಂದರು.

  • ವಿಶ್ವ ಪರಿಸರ ದಿನದಂದು ಗಾಂಜಾ ಗಿಡ ನೆಟ್ಟ ಪುಂಡರು

    ವಿಶ್ವ ಪರಿಸರ ದಿನದಂದು ಗಾಂಜಾ ಗಿಡ ನೆಟ್ಟ ಪುಂಡರು

    ತಿರುವನಂತಪುರಂ: ವಿಶ್ವ ಪರಿಸರ ದಿನದಂದು ಎಲ್ಲರೂ ಕೂಡ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಸಿ ನೆಡುವ ಮೂಲಕ ಆಚರಿಸಿರುವುದನ್ನು ನೋಡಿದ್ದೇವೆ. ಆದರೆ ಕೇರಳದಲ್ಲೊಂದು ಪುಂಡರ ಗುಂಪು ಗಾಂಜಾಗಿಡವನ್ನು ನೆಟ್ಟು ಪರಿಸರ ದಿನ ಆಚರಿಸಿ ಸುದ್ದಿಯಾಗಿದೆ.

    ಕೇರಳದ ಕೊಲ್ಲಂ ಜಿಲ್ಲೆಯ ಕಂಡಚಿರಾ ಎಂಬ ಗ್ರಾಮದಲ್ಲಿ ಜೂನ್ 5 ಪರಿಸರದಿನದಂದು ಪುಂಡರ ಗುಂಪು ತಮ್ಮ ಬೀದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟು, ನಾವು ಇಷ್ಟಪಡುವ ಗಿಡ ಇದಾಗಿರುವ ಕಾರಣ ಅದನ್ನೇ ನೆಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಅದರ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೀನು ಸಾಗಾಟದ ಲಾರಿಯಲ್ಲಿ 200 ಕೆಜಿ ಗಾಂಜಾ ಸಾಗಾಟ

    ಈ ಕುರಿತು ತಿಳಿಯುತ್ತಿದ್ದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಸುಮಾರು 60 ಸೆಂ.ಮೀನಷ್ಟು ಉದ್ದದ ಹಲವು ಗಾಂಜಾ ಗಿಡಗಳನ್ನು ಬೆಳೆಸಿರುವುದು ಕಂಡುಬಂದಿದೆ. ಕೂಡಲೇ ಎಲ್ಲಾ ಗಿಡಗಳನ್ನು ಅಧಿಕಾರಿಗಳು ಕಿತ್ತಿದ್ದಾರೆ. ಯುವಕರ ಗುಂಪೊಂದು ಗಾಂಜಾ ವ್ಯಸನದ ಗೀಳಿನಿಂದ ಈ ರೀತಿ ಕೃತ್ಯವೆಸಗಿದ್ದು, ಪರಿಸರದಿನದ ಅಂಗವಾಗಿ ರಸ್ತೆ ಬದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟು ಫೋಟೋ ತೆಗೆದುಕೊಂಡಿದ್ದಾರೆ. ಇದುವರೆಗೂ ಆ ಯುವಕರು ಪತ್ತೆಯಾಗಿಲ್ಲ. ಎಂದು ಕೊಲ್ಲಂ ಅಬಕಾರಿ ಸ್ಪೇಷಲ್ ಸ್ವ್ಯಾಡ್ ನ ಸರ್ಕಲ್ ಇನ್ಸ್‍ಪೆಕ್ಟರ್ ನೌಷಾದ್ ಅವರು ಮಾಹಿತಿ ನೀಡಿದ್ದಾರೆ.

    ಇಲ್ಲಿನ ಮಂಗಾದ್ ಬೈಪಸ್ ಪ್ರದೇಶದಲ್ಲೂ ಗಾಂಜಾ ಗಿಡ ನೆಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯಾವುದೇ ಗಿಡ ಪತ್ತೆಯಾಗಿಲ್ಲ. ಆ ಸಂಬಂಧ ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ತಿಳಿಸಿದರು. ಈ ಹಿಂದೆ ಮನ್ನರ್ಕಡ್ ಅಬಕಾರಿ ವಲಯದ ಅಧಿಕಾರಿಗಳು ದಾಳಿ ನಡೆಸಿ ಕಾಡಿನಲ್ಲಿ ಬೆಳೆದಿದ್ದ 120 ಗಾಂಜಾ ಗಿಡಗಳನ್ನು ನಾಶಪಡಿಸಿದ್ದರು.

  • ಕಟ್ಟಡ ನಿರ್ಮಾಣ ಅನುಮತಿಗೆ ಸಸಿ ನೆಡುವುದು ಕಡ್ಡಾಯ – ಮಧ್ಯಪ್ರದೇಶ ಸಿಎಂ

    ಕಟ್ಟಡ ನಿರ್ಮಾಣ ಅನುಮತಿಗೆ ಸಸಿ ನೆಡುವುದು ಕಡ್ಡಾಯ – ಮಧ್ಯಪ್ರದೇಶ ಸಿಎಂ

    ಭೋಪಾಲ್: ರಾಜ್ಯದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಬೇಕಾದರೆ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಒಂದು ಸಸಿ ನೆಡುವುದು ಕಡ್ಡಾಯ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

    ನಿನ್ನೆ ಪರಿಸರ ದಿನದ ಅಂಗವಾಗಿ ಆನ್‍ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದಲ್ಲಿ ಇನ್ನುಮುಂದೆ, ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಬೇಕಾದಲ್ಲಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸಸಿ ನೆಡುವುದು ಕಡ್ಡಾಯ. ಇದು ರಾಜ್ಯದ ನಗರ ಪ್ರದೇಶ, ಮುನ್ಸಿಪಾಲಿಟಿ, ನಗರ ಪಂಚಾಯತ್ ಸೇರಿ, ಗ್ರಾಮ ಪಂಚಾಯತ್ ವರೆಗೆ ಅನ್ವಯಿಸುತ್ತದೆ. ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಜಾಗ ಇಲ್ಲದೆ ಇದ್ದರೆ ಸಮೀಪದ ಶಾಲೆ, ಸಾರ್ವಜನಿಕ ಉದ್ಯಾನವನ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಟ್ಟು ಅದನ್ನು ಬೆಳೆಸಬೇಕು ಎಂದರು. ಇದನ್ನೂ ಓದಿ:ರೈತರ ಬ್ಯಾಂಕ್ ಖಾತೆಗೆ 4 ಸಾವಿರ ರೂ. ವರ್ಗಾವಣೆ: ಶಿವರಾಜ್ ಸಿಂಗ್ ಚೌಹಾಣ್

    ಈ ನಿಯಮ ಕೇವಲ ಕಟ್ಟಡ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ ಬದಲಾಗಿ ರಾಜ್ಯದಲ್ಲಿ ಹೊಸದಾಗಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸುವ ಮನೆಗಳಿಗೂ ಅನ್ವಯಿಸುತ್ತದೆ. ಗ್ರಾಮಗಳಲ್ಲಿ ಈ ನಿಯಮವನ್ನು ಸರಿಯಾಗಿ ಪಾಲನೆ ಮಾಡಲು ಗ್ರಾಮ ಪಂಚಾಯತ್ ಸಹಕಾರಿಯಾಗಬೇಕು ಎಂದು ಮಾಹಿತಿ ನೀಡಿದರು.

    ಈ ನಿಯಮ ಎಲ್ಲಾ ಕಟ್ಟಡ ನಿರ್ಮಾಣಕ್ಕೂ ಅನ್ವಯಿಸಿದ್ದು ಸ್ವತಃ ಸರ್ಕಾರ ಹೊಸ ಕಟ್ಟಡ ಕಟ್ಟಲು ತಯಾರಿ ನಡೆಸಿದರು ಕೂಡ ಸಸಿ ನೆಟ್ಟು ಬೆಳೆಸಬೇಕು. ವಿಶ್ವಪರಿಸರ ದಿನ ಕೇವಲ ಆ ದಿನಕ್ಕೆ ಸೀಮಿತವಾಗದೇ ಪ್ರತಿದಿನ ಪರಿಸರ ದಿನ ಆಚರಣೆ ಆಗುವಂತೆ ಆಗಬೇಕು. ಪರಿಸರ ಸಂರಕ್ಷಣೆ ಧ್ಯೇಯ ವಾಕ್ಯವಾಗಿರದೆ ನಮಗೆ ಒಂದು ಮಂತ್ರವಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಸ್ವತಃ ನಾವು ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

  • ವಿಶ್ವ ಪರಿಸರ ದಿನದಂದೇ ಉಡುಪಿಯಲ್ಲಿ ಮರಗಳಿಗೆ ಗರಗಸ ಎಳೆದ ಕ್ರೂರಿಗಳು

    ವಿಶ್ವ ಪರಿಸರ ದಿನದಂದೇ ಉಡುಪಿಯಲ್ಲಿ ಮರಗಳಿಗೆ ಗರಗಸ ಎಳೆದ ಕ್ರೂರಿಗಳು

    ಉಡುಪಿ: ವಿಶ್ವ ಪರಿಸರ ದಿನದಂದು ಉಡುಪಿಯಲ್ಲಿ ಮರಗಳ ಮಾರಣಹೋಮ ನಡೆದಿದೆ. ಈ ದಿನ ಗಿಡ ನೆಡದಿದ್ರೂ ಪರವಾಗಿಲ್ಲ ಯಾವುದೇ ಮಾನವೀಯತೆ ಇಲ್ಲದೆ 50- 60 ವರ್ಷ ಬೆಳೆದಿದ್ದ ಮರಗಳನ್ನು ಕತ್ತರಿಸಿ ಬಿಸಾಕಿದ್ದಾರೆ.

    ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಬನ್ನಂಜೆಯಲ್ಲಿ ನೂತನ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ನಿರ್ಮಾಣ ಆಗ್ತಾಯಿದೆ. ಜೊತೆ ಜೊತೆಗೆ ಕಾಂಪೌಡ್ ಸುತ್ತ ಇರುವ ಹತ್ತಾರು ಮರಗಳ ನಿರ್ನಾಮ ಆಗ್ತಾಯಿದೆ. ಅದೂ ವಿಶ್ವ ಪರಿಸರ ದಿನ ಎಂಬ ಸಾಮಾನ್ಯ ಜ್ಞಾನ ಇಲ್ಲದೆ ಟೆಂಡರ್ ಆದವರು ಮರ ಕಡಿದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ.

    ಇದೇ ಹೊತ್ತಲ್ಲಿ ಇಂದು ಬೆಳಗ್ಗಿನ ಜಾವ ಅರಣ್ಯ ರಕ್ಷಕರು ನಾಲ್ಕಾರು ಗಿಡ ನೆಟ್ಟು ಕೈ ತೊಳೆದುಕೊಂಡಿದ್ದಾರೆ. ಈ ಮೂಲಕ ‘ಅರ್ಥಗರ್ಭಿತ’ ವಿಶ್ವ ಪರಿಸರ ದಿನ ಆಚರಿಸಿದ್ದಾರೆ. ಮರಗಳನ್ನು ಬೇರೆಡೆ ಶಿಫ್ಟ್ ಮಾಡುತ್ತೇವೆ ಎಂದು ಅಂದು ಭರವಸೆ ಕೊಟ್ಟಿದ್ದು ಪೊಳ್ಳು ಎಂಬುದು ಇಂದು ಸಾಬೀತಾಗಿದೆ. ಕತ್ತರಿಸಿದ ಮರಗಳ ಸಂಖ್ಯೆಯ ಮೂರರಷ್ಟು ಗಿಡ ನೆಡುತ್ತೇವೆ ಎಂದು ಅಂದು ಅಧಿಕಾರಿಗಳು ಹೇಳಿದ್ದರು. ಗಿಡ ನೆಡೋದ್ಯಾವಾಗ, ಅದು ಮರವಾಗಿ ಬೆಳೆಯೋದ್ಯಾವಾಗ ಎಂದು ಪರಿಸರ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪರಿಸರ ಪ್ರೇಮಿ ಪ್ರೇಮಾನಂದ ಕಲ್ಮಾಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕಾಂಕ್ರೀಟ್ ಕಾಡಿಗೆ ಅಡ್ಡ ಆಗುವಾಗ ನೈಸರ್ಗಿಕ ಕಾಡಿಗೆ ಕೊಡಲಿ ಏಟು ಬೀಳುವುದು ಸಾಮಾನ್ಯ. ವಿಶ್ವ ಪರಿಸರ ದಿನವೆಂಬ ಸಾಮಾನ್ಯ ಪರಿಜ್ಞಾನ ಇಲ್ಲದೆ ಮರ ಕತ್ತರಿಸಿದ್ದಾರೆ. ಎರಡು ವರ್ಷದ ಹಿಂದೆ ನಾವು ಹೋರಾಟ ಮಾಡಿದ್ದೆವು. ಪರಿಸರದ ಬಗ್ಗೆ ಕಾಳಜಿಯೇ ಇಲ್ಲದವರ ಬಗ್ಗೆ ಮಾತನಾಡಿ ಏನು ಪ್ರಯೋಜನ ಎಂದರು.

  • ಪರಿಸರ ದಿನಾಚರಣೆಯೇ ಹಾಸ್ಯಾಸ್ಪದ ವಿಷಯ: ಅನಂತ್‍ಕುಮಾರ್ ಹೆಗಡೆ

    ಪರಿಸರ ದಿನಾಚರಣೆಯೇ ಹಾಸ್ಯಾಸ್ಪದ ವಿಷಯ: ಅನಂತ್‍ಕುಮಾರ್ ಹೆಗಡೆ

    – ಒಂದು ದಿನದ ಪರಿಸರ ನಾಟಕ ಅಗತ್ಯವಿಲ್ಲ

    ಕಾರವಾರ: ಪರಿಸರ ದಿನ ಆಚರಣೆಯೇ ಒಂದು ಹಾಸ್ಯಾಸ್ಪದ ವಿಷಯವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಅನಂತ್‍ಕುಮಾರ್ ಹೆಗಡೆ ಹೇಳಿದ್ದಾರೆ.

    ಈ ಕುರಿತು ಫೇಸ್‍ಬುಕ್‍ನಲ್ಲಿ ಅನಿಸಿಕೆ ಹಂಚಿಕೊಂಡಿರುವ ಅನಂತ್‍ಕುಮಾರ್ ಹೆಗ್ಡೆ ಅವರು, ಹಿಂದೂಗಳಿಗೆ ಪರಿಸರ ದಿನಾಚರಣೆ ವಿಷಯವಲ್ಲ. ಪರಿಸರದ ಜೊತೆಗೆ ಬದುಕುವುದು ಹಿಂದೂಗಳ ಸಂಪ್ರದಾಯ. ಪರಿಸರ ರಕ್ಷಣೆ ನಮ್ಮ ಕರ್ತವ್ಯ. ನಮ್ಮ ಜೀವನ ಪದ್ಧತಿ ಮೂಲ ಸನಾತನ ಆಶಯದಂತೆ ನಡೆದಲ್ಲಿ ಒಂದು ದಿನದ ಪರಿಸರ ದಿನದ ನಾಟಕ ಅಗತ್ಯವಿರುವುದಿಲ್ಲ ಎಂದು ತಿಳಿದ್ದಾರೆ.

    ಹಿಂದೂಗಳು ಪರಿಸರ ರಕ್ಷಣೆ ಬದುಕಿನಲ್ಲಿ ನಡೆಸಿಕೊಂಡು ಬಂದಿರುವುದಾಗಿದೆ ಹಾಗೂ ಬದುಕಿನ ಹಾದಿ ಇದಾಗಿದೆ. ಹಿಂದೂ ಜೀವನದ ಪದ್ಧತಿ ಪ್ರಬುದ್ಧವಾಗಿದೆ. ಮತಿಗೆಟ್ಟ ಮೂಲಭೂತವಾದಿಗಳು ಮಾತ್ರ ಇನ್ನೊಂದು ಕೋಮಿನ ವಿಚಾರಕ್ಕೆ ಹೋಲಿಸುತ್ತಾರೆ. ಅದಕ್ಕೆ ನಾವು ಏನೂ ಮಾಡಲು ಬರುವುದಿಲ್ಲ ಎಂದರು.

    ಪರಿಸರ ರಕ್ಷಣೆ ಹಿಂದೂಗಳಿಗೆ ಟಾಸ್ಕ್ ಅಲ್ಲ. ತಾಯಿಯ ಸೇವೆ ಮಗನ ಜನ್ಮಜಾತ ಕರ್ತವ್ಯ. ಅದು ಕೆಲಸವಲ್ಲ, ಕರ್ತವ್ಯ. ಪರಿಸರನ್ನು ಉಳಿಸಿ, ಬೆಳೆಸಿಕೊಂಡು ಮುಂದಿನ ತಲೆಮಾರಿಗೆ ಹೀಗೆ ಇಡಬೇಕು ಎಂದು ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ವಿಶ್ವಪರಿಸರ ದಿನದಂದೇ ಬೆಸ್ಕಾಂ ಸಿಬ್ಬಂದಿಯಿಂದ ಮರಗಳ ಮಾರಣಹೋಮ

    ವಿಶ್ವಪರಿಸರ ದಿನದಂದೇ ಬೆಸ್ಕಾಂ ಸಿಬ್ಬಂದಿಯಿಂದ ಮರಗಳ ಮಾರಣಹೋಮ

    ಕೋಲಾರ: ಇಂದು ವಿಶ್ವ ಪರಿಸರ ದಿನ. ಎಲ್ಲೆಡೆ ಗಿಡ-ಮರಗಳನ್ನ ನೆಟ್ಟು ಪರಿಸರ ದಿನಾಚರಣೆ ಆಚರಣೆ ಮಾಡುತ್ತಿದ್ದರೆ, ಕೋಲಾರದಲ್ಲಿ ಈ ದಿನದಂತೆ ಬೆಸ್ಕಾಂ ಅಧಿಕಾರಿಗಳು ಮರಗಳ ಮಾರಣ ಹೋಮ ಮಾಡಿರುವ ಘಟನೆ ನಡೆದಿದೆ.

    ಮುಳಬಾಗಿಲು ತಾಲೂಕಿನ ಮೇಲ್‍ತಾಯಲೂರಿನಿಂದ ತಾಯಲೂರಿಗೆ ಇರುವ ರಸ್ತೆ ಬದಿಯಲ್ಲಿರುವ ಮರಗಳನ್ನು ಬೆಸ್ಕಾಂ ಸಿಬ್ಬಂದಿ ನಿರ್ದಾಕ್ಷಣ್ಯವಾಗಿ ಕಡಿದು ಹಾಕಿದ್ದಾರೆ. ಸುಮಾರು ವರ್ಷಗಳಿಂದ ಅರಣ್ಯ ಇಲಾಖೆಯವರು ಬೆಳಸಿದ್ದ ಮರಗಳನ್ನು ವಿದ್ಯುತ್ ತಂತಿಗೆ ತಗುಲುತ್ತವೆ ಎನ್ನುವ ಒಂದೇ ಕಾರಣಕ್ಕೆ ಮರಗಳನ್ನು ಕಡಿದು ಹಾಕಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ಬೆಳೆಸಲಾಗಿದ್ದ ಸುಮಾರು 150ಕ್ಕೂ ಹೆಚ್ಚು ಮರಗಳನ್ನು ಈ ರೀತಿ ಕಡಿದು ಹಾಕಲಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಬೆಸ್ಕಾಂನವರು ಸಾಮಾನ್ಯವಾಗಿ ವಿದ್ಯುತ್ ತಂತಿಗಳಿಗೆ ತಾಗುವ ಮರದ ರೆಂಬೆಗಳನ್ನು ಮಾತ್ರ ಕತ್ತರಿಸುತ್ತಾರೆ. ಆದರೆ ಇಲ್ಲಿ ಮರಗಳನ್ನು ಬುಡ ಸಮೇತ ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಅರಣ್ಯ ಇಲಾಖೆಯವರು ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರವಾದಿಗಳು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

    ಪರಿಸರ ದಿನದ ಆಚರಣೆ:
    ಇತ್ತ ವಿಶ್ವ ಪರಿಸರ ದಿನದ ಅಂಗವಾಗಿ ಕೋಲಾರ ನಗರದ ವಿವಿಧೆಡೆ ಹಲವು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನ ಆಚರಣೆ ಮಾಡಲಾಗಿದೆ. ಮೊದಲಿಗೆ ಎರಡನೇ ಅಪರ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರದ ಕೋರ್ಟ್ ಆವರಣದಲ್ಲಿ ಗಿಡಕ್ಕೆ ಪೂಜೆ ಮಾಡಿ, ಹತ್ತಾರು ಗಿಡಗಳನ್ನ ನೆಡುವ ಮೂಲಕ ಪರಿಸರ ಜಾಗೃತಿ ಹಾಗೂ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು.

    ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ರೈಲ್ವೇ ನಿಲ್ದಾಣದ ಸಮೀಪ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಿಇಓ ಜಗದೀಶ್, ಎಸ್‍ಪಿ ರೋಹಿಣಿ ಕಟೋಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ನೂರಾರು ಗಿಡಗಳನ್ನ ನೆಡುವ ಮೂಲಕ ಪರಿಸರ ದಿನವನ್ನ ಆಚರಣೆ ಮಾಡಲಾಗಿದೆ. ಇದೆ ವೇಳೆ ನಗರದ ಹಲವೆಡೆ ವಿವಿಧ ಸಂಘಟನೆಗಳ ಮುಖಂಡರು ಗಿಡಗಳನ್ನ ನೆಟ್ಟು ನಗರ ವಾಸಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದರು.

  • ಮೊಬೈಲ್‍ನಲ್ಲೇ ಮುಳುಗಿದ ನೂತನ ಸಂಸದ ತೇಜಸ್ವಿ ಸೂರ್ಯ

    ಮೊಬೈಲ್‍ನಲ್ಲೇ ಮುಳುಗಿದ ನೂತನ ಸಂಸದ ತೇಜಸ್ವಿ ಸೂರ್ಯ

    ಬೆಂಗಳೂರು: ರಾಜ್ಯ ಸರ್ಕಾರದ ಅರಣ್ಯ ಇಲಾಖೆ ವತಿಯಿಂದ ಆಯೋಜನೆಗೊಂಡಿದ್ದ ಪರಿಸರ ಕಾರ್ಯಕ್ರಮದಲ್ಲಿ ನೂತನ ಸಂಸದ ತೇಜಸ್ವಿ ಸೂರ್ಯ ಮೊಬೈಲಿನಲ್ಲಿ ಮುಳುಗಿದ್ದು ಚರ್ಚೆಗೆ ಗ್ರಾಸವಾಗಿದೆ.

    ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವೇದಿಕೆ ಮೇಲೆ ಇದ್ದರೂ ಮೊಬೈಲ್ ಚಾಟಿಂಗ್ ನಲ್ಲಿ ಬ್ಯುಸಿಯಾಗಿದ್ದರು.

    ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕಾರದ ಬಳಿಕ ವೇದಿಕೆ ಮೇಲೆ ಕುಳಿತು ಮೊಬೈಲ್‍ನಲ್ಲಿ ಚಾಟ್ ಮಾಡುತ್ತಾ ಕುಳಿತ್ತಿದ್ದರು. ವೇದಿಕೆಯಲ್ಲಿ ಗಣ್ಯರು ಮಾತನಾಡುತ್ತಿದ್ದರೂ ತೇಜಸ್ವಿ ಸೂರ್ಯ ಮೊಬೈಲ್ ನೋಡುತ್ತಾ ಮಗ್ನರಾಗಿದ್ದರು.

    ಈ ಕಾರ್ಯಕ್ರಮಕ್ಕೆ ಉಪ ಸಭಾಪತಿ ಧರ್ಮೇಗೌಡ, ಶಾಸಕ ಅಶ್ವಥ್ ನಾರಾಯಣ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದ್ದರು.

  • ವಿಶ್ವ ಪರಿಸರ ದಿನಾಚರಣೆಯಂದು ಮಹಿಳೆಯರಿಗೆ ಭರ್ಜರಿ ಗಿಫ್ಟ್- ಕಡಿಮೆ ಬೆಲೆಯ ನ್ಯಾಪ್‍ಕಿನ್ ಬಿಡುಗಡೆ

    ವಿಶ್ವ ಪರಿಸರ ದಿನಾಚರಣೆಯಂದು ಮಹಿಳೆಯರಿಗೆ ಭರ್ಜರಿ ಗಿಫ್ಟ್- ಕಡಿಮೆ ಬೆಲೆಯ ನ್ಯಾಪ್‍ಕಿನ್ ಬಿಡುಗಡೆ

    ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯಂದು ಕೇಂದ್ರ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಲೋಕಾರ್ಪಣೆ ಮಾಡಿದೆ.

    ಖಾಸಗಿ ಹೋಟೆಲ್ ನಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಸುವಿಧಾ ಸ್ಯಾನಿಟರಿ ನ್ಯಾಪ್ ಕಿನ್ ಲೋಕಾರ್ಪಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕಡಿಮೆ ವೆಚ್ಚದ ಸ್ಯಾನಿಟರಿ ನ್ಯಾಪ್ ಕಿನ್ ನನ್ನ ಲೋಕಾರ್ಪಣೆ ಮಾಡಿದ್ದು, ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನಾ ಅಡಿಯಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ಸ್ ಯೋಜನೆಯನ್ನು ಲಾಂಚ್ ಮಾಡಿದೆ.

    ಈ ಯೋಜನೆಯಡಿಯಲ್ಲಿ ಕೇವಲ 2.50 ರೂಪಾಯಿಗೆ ಒಂದು ಸ್ಯಾನಿಟರಿ ನ್ಯಾಪ್ ಕಿನ್ ಸಿಗಲಿದೆ. ಹತ್ತು ರೂಪಾಯಿಯ ಪ್ಯಾಕೆಟ್ ನಲ್ಲಿ ನಾಲ್ಕು ಸ್ಯಾನಿಟರಿ ನ್ಯಾಪ್ ಕಿನ್ ಲಭ್ಯವಿರುತ್ತವೆ. ಈ ಬಯೋ ಡೀಗ್ರೇಡಬಲ್ ನ್ಯಾಪ್ ಕಿನ್ ಎಲ್ಲಾ ಜನೌಷಧ ಕೇಂದ್ರಗಳಲ್ಲಿ ಸಿಗಲಿದೆ.

    ಈ ವೇಳೆ ಮಾತನಾಡಿದ ಅನಂತ್ ಕುಮಾರ್, ಮಾರ್ಚ್ 8 ನೇ ದಿನ ವಿಶ್ವ ಮಹಿಳಾ ದಿನದಂದು ನಾವು ಘೋಷಣೆ ಮಾಡಿದ್ದೇವು. ಅದರಂತೆ ಇಂದು ವಿಶ್ವ ಪರಿಸರ ದಿನ ಅಂಗವಾಗಿ ಬಯೋ ಡೀಗ್ರೇಡಬಲ್ ಸ್ಯಾನಿಟರಿ ನ್ಯಾಪ್ ಕಿನ್ ಬಿಡುಗಡೆ ಮಾಡಿರುವುದು ಖುಷಿ ತಂದಿದೆ. ನಮ್ಮ ದೇಶದಲ್ಲಿ ಬಳಕೆ ಮಾಡುತ್ತಿರುವ ಬ್ರಾಂಡೆಡ್ ನ್ಯಾಪ್ ಕಿನ್ ಒಂದಕ್ಕೆ ಎಂಟು ರೂಪಾಯಿ ದರ ನಿಗದಿಯಿದೆ. ಆದರೆ ಅವು ಬಯೋ ಡೀಗ್ರೇಡಬಲ್ ಅಲ್ಲ. ದೇಶದಲ್ಲಿ ಮೊದಲ ಬಯೋ ಡೀಗ್ರೇಡಬಲ್ ನ್ಯಾಪ್ ಕಿನ್ ಇದ್ದರೆ ಅದು ಕೇಂದ್ರ ಸರ್ಕಾರ ತಂದಿರುವ ಸುವಿಧ ನ್ಯಾಪ್ ಕಿನ್ಸ್ ಎಂದು ಹೇಳಿದ್ದಾರೆ.

    ಇಂದು ವಿಶ್ವ ಪರಿಸರ ದಿನ. ಇಂದಿನ ದಿನ ನಮಗೆ ಇರೋ ಏಕೈಕ ಮನೆ ಪೃಥ್ವಿ. ಈ ಪೃಥ್ವಿಯನ್ನು ಉಳಿಸಲು ಇಂದು ಈ ದಿನಾಚರಣೆ ಮಾಡುತ್ತಿದ್ದೇವೆ. ಕೇಂದ್ರದಿಂದ ವಿಶ್ವ ಪರಿಸರ ದಿನದ ಅಂಗವಾಗಿ ಇಡೀ ಭಾರದಾದ್ಯಂತ ಇರುವ ತಾಯಂದಿರಿಗೆ, ಅಕ್ಕತಂಗಿಯರ ಆರೋಗ್ಯ, ಸ್ವಚ್ಚತೆಗೆ ಯೋಗ್ಯವಾದ ಓಕ್ಸೋ ಬಯೋಡಿಗ್ರೇಬಲ್ ಸ್ಯಾನಿಟರಿ ಪ್ಯಾಡ್ ಬಿಡುಗಡೆ ಮಾಡಿದ್ದೇವೆ. ನಮ್ಮ ದೇಶದಲ್ಲಿ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೆ ಪ್ರಕಾರ ದೇಶದಲ್ಲಿ 58% ಮಹಿಳೆಯರು ಆರೋಗ್ಯಯುತ ಸ್ಯಾನಿಟರಿ ನ್ಯಾಪ್ಕಿನ್ ಉಪಯೋಗಿಸಲ್ಲ. ಕೇವಲ 48% ಮಾತ್ರ ಮಹಿಳೆಯರು ಉಪಯೋಗಿಸುತ್ತಾರೆ. ಕೆಳ ವರ್ಗದ, ಆರ್ಥಿಕ ಹಿಂದುಳಿದವರಿಗೆ ಈ ಸೌಲಭ್ಯವೇ ಇಲ್ಲ. ಹೀಗಾಗಿ ತಾಯಂದಿರಿಗೆ ಅನೇಕ ಸಮಸ್ಯೆಗಳಾಗಿವೆ ಎಂದರು.

    ಈಗ ಮಾರ್ಕೆಟ್ ನಲ್ಲಿ ಸಿಗುತ್ತಿರುವ ಬ್ರಾಂಡೆಡ್ ನ್ಯಾಪ್ ಕಿನ್ 500 ವರ್ಷಗಳಾದರೂ ಕೊಳೆಯುವುದಿಲ್ಲ. ಆದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ಯಾನಿಟರಿ ನ್ಯಾಪ್ ಕಿನ್ ಮೂರರಿಂದ ಆರು ತಿಂಗಳಿನಲ್ಲಿ ಕೊಳೆಯುತ್ತದೆ. ಪರಿಸರಕ್ಕೆ ಸಹಕಾರಿಯಾಗಿರುವ ನ್ಯಾಪ್ ಕಿನ್ ನಲ್ಲಿ ಎಲ್ಲಾ ಸುರಕ್ಷತೆ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಎಲ್ಲಾ ರೀತಿಯಲ್ಲೂ ಪರಿಶೀಲನೆ ಒಳಪಡಿಸಿ ಧೃಡೀಕರಣ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.