ಮೆಲ್ಬರ್ನ್: ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಿಂದ ಇತಿಹಾಸ ಸೃಷ್ಟಿಯಾಗಿದೆ.
ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ವೀಕ್ಷಿಸಲು 86,174 ಮಂದಿ ಆಗಮಿಸಿದ್ದರು. ಈ ಮೂಲಕ ಅತಿ ಹೆಚ್ಚು ಮಂದಿ ವೀಕ್ಷಿಸಿದ ಮಹಿಳಾ ಕ್ರಿಕೆಟ್ ಪಂದ್ಯ ಎಂಬ ದಾಖಲೆಯನ್ನು ಬರೆದಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ ಮಹಿಳಾ ಪಂದ್ಯ ಎಂಬ ಮತ್ತೊಂದು ದಾಖಲೆಯನ್ನು ಬರೆದಿದೆ.
ಮೆಲ್ಬರ್ನ್ ಸ್ಟೇಡಿಯಂ 1,00,024 ಆಸನ ಸಾಮರ್ಥ್ಯ ಹೊಂದಿದ್ದು ಇಲ್ಲಿಯವರೆಗೆ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಈಗ ಗುಜರಾತಿನ ಅಹಮದಾಬಾದಿನ ಮೊಟೆರಾ ಸ್ಟೇಡಿಯಂ ವಿಶ್ವದ ನಂಬರ್ ಒನ್ ಸ್ಟೇಡಿಯಂ ಆಗಿದ್ದು, 1.10 ಲಕ್ಷ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.
185 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರಿನಲ್ಲಿ 99 ರನ್‍ಗಳಿಗೆ ಸರ್ವಪತನ ಕಂಡಿತು. 85 ರನ್ ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಆರಂಭಿಕ ಆಟಗಾರ್ತಿಯಾರದ ಅಲೀಸಾ ಹೀಲಿ ಮತ್ತು ಬೆಥ್ ಮೂನಿ ಶತಕದ ಜೊತೆಯಾಟವಾಡಿದಿಂದ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೀಲಿ 30 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಹೀಲಿ 75 ರನ್ (39 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದು ಔಟಾದರೆ ನಾಯಕಿ ಮೆಗ್ ಲ್ಯಾನಿಂಗ್ 16 ರನ್ ಗಳಿಸಿದಾಗ ದೀಪ್ತಿ ಶರ್ಮಾ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಆಶ್ಲೆ ಗಾರ್ಡ್‍ನರ್ 2 ರನ್, ರೇಚಲ್ ಹೇನ್ಸ್ 4 ರನ್ ಗಳಿಸಿ ಔಟಾದರು. ಒಂದು ಕಡೆ ವಿಕೆಟ್ ಉರುಳಿದರೂ ಗಟ್ಟಿ ನಿಂತು ಆಟವಾಡಿದ ಬೆಥ್ ಮೂನಿ ಔಟಾಗದೇ 78 ರನ್ (54 ಎಸೆತ, 10 ಬೌಂಡರಿ) ಹೊಡೆದು ರನ್ ಏರಿಸಲು ಸಹಾಯ ಮಾಡಿದರು.
ಆಸ್ಟ್ರೇಲಿಯಾ ನೀಡಿದ್ದ 185 ರನ್‍ಗಳ ಬೃಹತ್‍ವನ್ನು ಬೆನ್ನಟ್ಟಿದ ಭಾರತ ಮೊದಲ ಓವರಿನಲ್ಲೇ 2 ರನ್ ಬಾರಿಸಿದ್ದ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡು ಆಘಾತಕ್ಕೆ ತುತ್ತಾಯಿತು. ಈ ಬೆನ್ನಲ್ಲೇ ಮೈದಾನಕ್ಕಿಳಿದ ತಾನಿಯಾ ಭಾಟಿಯಾ ಗಾಯಗೊಂಡು ನಿವೃತ್ತಿ ಆದರು. ಆಗ ಬ್ಯಾಟಿಂಗ್ ಇಳಿದ ಜೆಮಿಮಾ ರೊಡ್ರಿಗಸ್ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಜೊತೆಗೆ ಅನುಭವಿ ಆಟಗಾರ್ತಿ ಸ್ಮೃತಿ ಮಂದಾನ 11 ರನ್ (8 ಎಸೆತ, 2 ಬೌಂಡರಿ) ಗಳಿಸಿ ಔಟಾದರು.
ಕೇವಲ 18 ರನ್‍ಗಳಿಗೆ 3ನೇ ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಭೀತಿಗೆ ಸಿಲುಕಿತು. ಈ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ತೋರಿದ ಭಾರತದ ನಾಯಕಿ ಹರ್ಮನ್‍ಪ್ರೀತ್ ಕೌರ್ ಫೈನಲ್ ಪಂದ್ಯದಲ್ಲೂ ತಂಡಕ್ಕೆ ಆಸರೆಯಾಗುವಲ್ಲಿ ವಿಫಲರಾದರು. ಕೌರ್ 4 ರನ್ (7 ಎಸೆತ, 1 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ತಂಡದ ಸೋಲು ಖಚಿತವಾಯಿತು.
ಕನ್ನಡತಿ ವೇದಾ ಕೃಷ್ಣಮೂರ್ತಿ ಹಾಗೂ ದೀಪ್ತಿ ಶರ್ಮಾ 5ನೇ ವಿಕೆಟ್‍ಗೆ 28 ರನ್‍ಗಳ ಜೊತೆಯಾಟವಾಡಿದರು. ಬಿರುಸಿನ ಹೊಡೆತಕ್ಕೆ ಮುಂದಾದ ವೇದಾ ಕೃಷ್ಣಮೂರ್ತಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 11 ರನ್ ಗಳಿಗೆ ಕೊನೆಯ ನಾಲ್ಕು ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಭಾರತ ಸರ್ವಪತನ ಕಂಡಿತು.
ಅಲೀಸಾ ಹೀಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ ಬೆಥ್ ಮೂನಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.