ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ನಲ್ಲಿ ಭಾರತದ ತಾರೆ ಪಿ.ವಿ.ಸಿಂಧು ಮೊದಲ ಬಾರಿಗೆ ಸ್ವರ್ಣಕ್ಕೆ ಮುತ್ತಿಟ್ಟಿದ್ದಾರೆ. ಸತತ ಸೋಲುಗಳ್ನು ಅನುಭವಿಸಿದ್ದರೂ, ಕುಗ್ಗದ ಸಿಂಧು ಸ್ವರ್ಣಕ್ಕೆ ಕೊರಳೊಡ್ಡುವ ಮೂಲಕ ಭಾರತದ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಾಡುವಂತೆ ಮಾಡಿದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಆಟಗಾರ್ತಿಯಾದರು.
ಚಿನ್ನದ ಪದಕಕ್ಕೆ ಸಮೀಪ ಹೋಗಿ ಹಲವು ಸೋಲುಗಳನ್ನು ಕಂಡಿದ್ದ ಸಿಂಧು ಎಲ್ಲ ನೋವನ್ನು ನುಂಗಿ, ತಮ್ಮ ವಿರುದ್ಧ ಕೇಳಿ ಬಂದ ಹಲವು ಪ್ರಶ್ನೆಗಳಿಗೆ ರಾಕೆಟ್ ಮೂಲಕವೇ ಉತ್ತರಿಸಿದ್ದಾರೆ. ಸಿಂಧು ಅವರ ಕ್ರೀಡಾಜೀವನದ ವೃತ್ತಿ ಯಾವುದೇ ಸ್ಫೂರ್ತಿದಾಯಕ ಕಥೆಗಿಂತ ಭಿನ್ನವಾಗಿಲ್ಲ. ಜೀವನದಲ್ಲಿ ಒಂದಾದ ನಂತರ ಸೋಲು, ವಿಫಲತೆಯನ್ನು ಕಾಣುತ್ತಿರುವ ಅದೆಷ್ಟೋ ಜನರಿಗೆ ಸಿಂಧು ಮಾದರಿಯಾಗಿ ನಿಂತಿದ್ದಾರೆ. ಕ್ರೀಡಾ ಜೀವನದ ಆರಂಭದಲ್ಲಿ ಒಂದೆರೆಡು ಭಾರೀ ಸೋಲುಗಳನ್ನು ಅನುಭವಿಸಿದ್ರೆ ಬಹುತೇಕರು ತಮ್ಮ ಮಾರ್ಗವನ್ನು ಬದಲಿಸಿಕೊಳ್ಳುವುದುಂಟು. ನಿರಂತರ ಸೋಲುಗಳಿಂದ ವ್ಯಕ್ತಿಯ ಆತ್ಮಸ್ಥೈರ್ಯ ಕುಗ್ಗುತ್ತದೆ. ಸೋಲೇ ಗೆಲುವಿನ ನಾಂದಿ ಎಂಬಂತೆ ಪಿ.ವಿ.ಸಿಂಧು ಹೊಸ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದ ಸಿಂಧು ಹೆಸರು ದೇಶದ ಕ್ರೀಡಾಲೋಕದಲ್ಲಿ ಚಿರಪರಿಚಿತ, ಇತಿಹಾಸದಲ್ಲಿ ದಾಖಲಾಗಿದೆ. ಭಾನುವಾರ ನಡೆದ 37 ನಿಮಿಷದ ಪಂದ್ಯದಲ್ಲಿ ಎದುರಾಳಿ ಜಪಾನಿನ ಒಕುಹರಾ ಅವರಿಗೆ ಅವಕಾಶವನ್ನ ಸಿಂಧು ನೀಡಲಿಲ್ಲ. 21-7, 21-7 ಸೆಟ್ ನಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡ ಪಿ.ವಿ.ಸಿಂಧು ವಿಶ್ವ ಚಾಂಪಿಯನ್ ತಮ್ಮದಾಗಿಸಿಕೊಂಡರು.
2013ಕ್ಕೆ ಪಾದಾರ್ಪಣೆ:
ಇಂದಿಗೆ ಆರು ವರ್ಷಗಳ ಹಿಂದೆ 2013ರಲ್ಲಿ ಪಿ.ವಿ.ಸಿಂಧು ವಿಶ್ವ ಚಾಂಪಿಯನ್‍ಶಿಪ್ ನಲ್ಲಿ ವರ್ಲ್ಡ್ ಬ್ಯಾಡ್ಮಿಂಟನ್ ತಮ್ಮ ಪರಿಚಯ ಮಾಡಿಕೊಂಡಿದ್ದರು. ಸೀನಿಯರ್ ಲೆವಲ್ ನಲ್ಲಿ ಪಿ.ವಿ.ಸಿಂಧು ಮೊದಲ ಬಾರಿಯ ಟೂರ್ನಿಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ತದನಂತರ 2016ರ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಮನೆಮಾತಾದ್ರು. ಅಂದೇ ಸಿಂಧು ಭಾರತ ಶೀಘ್ರದಲ್ಲಿಯೇ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳಲಿದೆ ಎಂಬ ಸಂದೇಶವನ್ನು ಕ್ರೀಡಾಭಿಮಾನಿಗಳಿಗೆ ರವಾನಿಸಿದ್ದರು. 2012 ಓಲಿಂಪಿಕ್ ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. 2016ರ ರಿಯೋ ಒಲಿಂಪಿಕ್ ನ ಫೈನಲ್ ತಲುಪಿದ್ದ ಸಿಂಧು ತಮ್ಮ ಬಿರುಸಿನ ಆಟದ ಮೂಲಕ ಕ್ರೀಡಾಲೋಕದಲ್ಲಿ ಅಚ್ಚರಿಗೆ ಕಾರಣರಾಗಿದ್ದರು.
ಚಿನ್ನ ತಂದ ಸಿಂಧು:
ಈ ಗೆಲುವಿನ ಮುನ್ನ ದೊಡ್ಡ ಪಂದ್ಯಾವಳಿಗಳ ಅಂತಿಮ ಸುತ್ತಿನಲ್ಲಿ ಸಿಂಧು ಹಲವು ಸೋಲುಗಳನ್ನು ಕಂಡಿದ್ದಾರೆ. ಭಾನುವಾರ ಜಪಾನಿನ ಅನುಭವಿ ಆಟಗಾರ್ತಿ ಒಕುಹರಾ ಅವರನ್ನ ಮಣಿಸಿ ಇತಿಹಾಸ ಬರೆದಿದ್ದಾರೆ.
ಒಲಿಂಪಿಕ್, ವರ್ಲ್ಡ್ ಚಾಂಪಿಯನ್‍ಶಿಪ್, ಏಷಿಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತ್ ಗಳಲ್ಲಿ ಬ್ಯಾಡ್ಮಿಂಟನ್ ಆಟವನ್ನು ಭಾರತದಿಂದ ಸಿಂಧು ಪ್ರತಿನಿಧಿಸುತ್ತಿದ್ದರು. ಪ್ರತಿಬಾರಿಯೂ ಅಂತಿಮ ಸುತ್ತಿನಲ್ಲಿ ಹಿನ್ನಡೆ ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ಸಂತೋಷ ಸೀಮಿತವಾಗುತ್ತಿತ್ತು. ರಿಯೋ ಒಲಿಂಪಿಕ್ ಬಳಿಕ ಇದೂವರೆಗೂ 16 ಟೂರ್ನಾಮೆಂಟ್ ಗಳಲ್ಲಿ ಸಿಂಧು ಫೈನಲ್ ತಲುಪಿದ್ದು, ಐದು ಬಾರಿ ಮಾತ್ರ ಗೆಲುವು ಕಂಡಿದ್ದಾರೆ. ಹಾಗಾಗಿ ಫೈನಲ್ ನಲ್ಲಿ ಸಿಂಧು ಮತ್ತೆ ಎಡವಲಿದ್ದಾರೆ ಎಂದು ಹಲವು ವಿಮರ್ಶಕರು ಲೆಕ್ಕ ಹಾಕಿದ್ದರು. ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಸಿಂಧು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
5ನೇ ಬಾರಿಗೆ ಸಿಕ್ತು ವಿಜಯ:
ಪಿ.ವಿ.ಸಿಂಧು ಮೊದಲ ಬಾರಿಗೆ ವಿಶ್ವ ಚಾಂಪಿಯನ್‍ಶಿಪ್ ನಲ್ಲಿ ಸ್ವರ್ಣ ಪದಕದ ಒಡತಿಯಾಗಿದ್ದಾರೆ. ಈ ಪಂದ್ಯ ಸೇರಿದಂತೆ ಒಟ್ಟು 5 ಬಾರಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ನಲ್ಲಿ ಸ್ಪರ್ಧೆ ಮಾಡಿದ್ದಾರೆ. 2013 ಮತ್ತು 2014ರಲ್ಲಿ ಕಂಚು, 2017 ಮತ್ತು 2018ರಲ್ಲಿ ಬೆಳ್ಳಿ, 2019ರಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ್ದ ಪಿ.ವಿ.ಸಿಂಧು, ವಿಶ್ವ ಚಾಂಪಿಯನ್‍ಶಿಪ್ ನ ಐದು ಪದಕಗಳು ನನ್ನ ಬಳಿ ಇವೆ ಎಂದು ಖುಷಿ ಹಂಚಿಕೊಂಡಿದ್ದರು.
2017ರಲ್ಲಿ ಒಕುಹರಾ ವಿರುದ್ಧ ಸೋಲು:
2017ರ ವಿಶ್ವ ಚಾಂಪಿಯನ್‍ಶಿಪ್ ನಲ್ಲಿ ಇದೇ ಓಕುಹರಾ ಫೈನಲ್ ನಲ್ಲಿ ಸಿಂಧು ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. 2017ರಲ್ಲಿ ಕೊನೆಯ ಹಂತದವರೆಗೂ ಸ್ಪರ್ಧೆ ನೀಡಿದ್ದ ಸಿಂಧು ರೋಚಕ ಸೋಲು ಕಂಡಿದ್ದರು. ಒಕುಹರಾ 21-19, 20-22, 22-20ರಲ್ಲಿ ಸೆಣಸಾಟದಲ್ಲಿ ವಿಜೇತರಾಗಿದ್ದರು. ಈ ಬಾರಿ ಸಿಂಧು ಎದುರಾಳಿ ಗೆಲುವಿನ ಸಮೀಪ ಪ್ರವೇಶಿಸುವ ಸಣ್ಣ ಅವಕಾಶವನ್ನು ನೀಡಲಿಲ್ಲ.
ಸ್ವರ್ಣ ಅಮ್ಮನಿಗೆ ಅರ್ಪಣೆ:
ಕಳೆದ ವರ್ಷ ಸೋತಾಗ ನನ್ನ ಮೇಲೆ ನನಗೆ ಅಗಾಧವಾದ ಕೋಪ ಬಂದಿತ್ತು. ನನ್ನ ಎಲ್ಲ ಭಾವನೆಗಳೊಂದಿಗೆ ಈ ಪಂದ್ಯ ಸೋತಿದ್ದು ಯಾಕೆ ಎಂಬುದನ್ನು ಪ್ರಶ್ನಿಸಿಕೊಂಡಿದ್ದೆ. ಇಂದು ನನ್ನ ಆಟವನ್ನು ಯಾವುದೇ ಭಯವಿಲ್ಲದೇ ಚೆನ್ನಾಗಿ ಆಡಬೇಕೆಂದು ಬಂದೆ. ನನ್ನ ಯೋಚನೆ ಇಂದು ವರ್ಕೌಟ್ ಆಯ್ತು. ಇಂದು ನನ್ನ ತಾಯಿಯ ಹುಟ್ಟು ಹಬ್ಬವಾಗಿದ್ದರಿಂದ ಚಿನ್ನದ ಪದಕವನ್ನ ಅಮ್ಮನಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.
ಪ್ರತಿಯೊಬ್ಬರು ನಾನು ಗೆಲ್ಲಬೇಕೆಂದು ಆಶಿಸಿ ಪ್ರಾರ್ಥಿಸುತ್ತಾರೆ. ರಿಯೋ ಒಲಿಂಪಿಕ್ ಬಳಿಕ ನನ್ನ ಮೇಲಿನ ಭರವಸೆ ದೇಶದ ಜನತೆಗೆ ಹೆಚ್ಚಾಯ್ತು. ಪ್ರತಿ ಪಂದ್ಯಗಳಿಗೆ ಹೋದಾಗ ನಾನು ಚಿನ್ನದ ಪದಕವನ್ನ ಗೆಲ್ಲಬೇಕೆಂದು ಇಚ್ಛಿಸುತ್ತಿದ್ದರು. ರಿಯೋ ಒಲಿಂಪಿಕ್ ಬಳಿಕ ನನಗಾಗಿ ಪ್ರಾರ್ಥನೆ ಮಾಡುತ್ತಿರುವ ಅಭಿಮಾನಿಗಳ ಬಗ್ಗೆ ಚಿಂತಿಸತೊಡಗಿದೆ. ಯಾವುದೇ ಸ್ವಾರ್ಥವಿಲ್ಲದೇ ನನ್ನನ್ನು ಗೆಲುವನ್ನು ನಿರೀಕ್ಷಿಸುತ್ತಿರುವರಿಗಾಗಿ ಆಡಬೇಕೆಂಬ ಛಲ ನನ್ನಲ್ಲಿ ಬಂತು. ನನಗಾಗಿ ಮತ್ತು ನನ್ನವರಿಗಾಗಿ ಪ್ರತಿ ಪಂದ್ಯಗಳಲ್ಲಿ ಶೇ.100ರಷ್ಟು ಪರಿಶ್ರಮ ಹಾಕಿ ಆಡಲಾರಂಭಿಸಲಿದೆ. ಸಹಜವಾಗಿ ಅದು ನನ್ನನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿತು ಎಂದು ತಿಳಿಸಿದರು.
ಟೋಕಿಯೋ ಒಲಿಂಪಿಕ್: 2020ರಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ ಬಗ್ಗೆ ನಾನು ಸಿದ್ಧಗೊಳ್ಳುತ್ತಿದ್ದೇನೆ. ಅರ್ಹತಾ ಸುತ್ತಿನಲ್ಲಿ ಗೆಲುವು ಕಂಡು ಪ್ರವೇಶ ಪಡೆಯುತ್ತೇನೆ ಎಂಬ ನಂಬಿಕೆ ಇದೆ. ಸದ್ಯ ಯಾವುದರ ಬಗ್ಗೆ ಚಿಂತೆ ಮಾಡದೇ ಗೆಲುವನ್ನು ಸಂಭ್ರಮಿಸುತ್ತೇನೆ. ಬ್ಯಾಡ್ಮಿಂಟನ್ ನನ್ನ ಉತ್ಸಾಹವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಟೈಟಲ್ ನನ್ನದಾಗಿಸಿಕೊಳ್ಳಲು ಅಭ್ಯಾಸ ನಡೆಸುತ್ತೇನೆ ಎಂದು ಸಿಂಧು ಹೇಳಿದರು.