Tag: workers

  • ಯಲ್ಲಾಪುರದಲ್ಲಿ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು

    ಯಲ್ಲಾಪುರದಲ್ಲಿ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು

    ಕಾರವಾರ: ಧರೆಯ ಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

    ಕಿರುವತ್ತಿ ಬಳಿಯ ಹೊಸಳ್ಳಿ ಗ್ರಾಮದ ಭಾಗ್ಯಶ್ರೀ ಯಡಗೆ(21), ಲಕ್ಷ್ಮಿ ಡೋಯಿಪಡೆ(38), ಸಂತೋಷ್ ಡೋಯಿಪಡೆ(18), ಮಾಳು ಡೋಯಿಪಡೆ(21) ಧರೆಯ ಮಣ್ಣು ಕುಸಿದು ಸಾವನ್ನಪ್ಪಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, ಇಡಗುಂದಿಯ ಮಂಜುನಾಥ್ ನಾಗಪ್ಪ ಭಟ್ ಅವರ ತೋಟಕ್ಕೆ ಮಣ್ಣಿನ ಕೆಲಸಕ್ಕೆ ಹೊಸಳ್ಳಿ ಗ್ರಾಮದಿಂದ ಏಳುಜನ ಕೂಲಿ ಕಾರ್ಮಿಕರು ತೆರಳಿದ್ದರು. ಈ ವೇಳೆ ಧರೆಯ ಮಣ್ಣು ಕುಸಿದಿದ್ದು, ನಾಲ್ಕು ಜನ ಮಣ್ಣಿನಲ್ಲಿ ಹೂತು ಸಾವು ಕಂಡಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಹೊಂಡ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಜೀವಂತ ಸಮಾಧಿ

    ಹೊಂಡ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಜೀವಂತ ಸಮಾಧಿ

    ಮಂಗಳೂರು: ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ದುರಸ್ಥಿ ವೇಳೆ ಮಣ್ಣು ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮಣ್ಣಿನಲ್ಲೇ ಸಮಾಧಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರ್ಲಪದವಿನಲ್ಲಿ ಘಟನೆ ನಡೆದಿದ್ದು, ಪಾರ್ಪಳ್ಳದ ಕೂಲಿ ಕಾರ್ಮಿಕರಾದ ಬಾಬು ಮತ್ತು ರವಿ ಎಂದಿನಂತೆ ಇಂದು ಕೂಲಿ ಕೆಲಸಕ್ಕೆ ಬಂದಿದ್ದರು. ಕಡಮ್ಮಾಜೆ ಹಾಜಿ ಅಬ್ದುಲ್ಲಾರಿಗೆ ಸೇರಿದ ಕೋಳಿ ಫಾರ್ಮ್‍ನ ತ್ಯಾಜ್ಯ ವಿಲೇವಾರಿ ಗುಂಡಿಗೆ ಪೈಪ್ ಆಳವಡಿಸುವ ಕಾರ್ಯ ನಡೆಸುತ್ತಿದ್ದರು. ಆದರೆ ಗುಂಡಿಯ ಮೇಲ್ಭಾಗದಲ್ಲಿ ಹಾಕಿದ್ದ ಮಣ್ಣಿನ ಲೋಡ್‍ನಿಂದ ಸ್ಲ್ಯಾಬ್ ಮುರಿದು ಇಬ್ಬರೂ ಗುಂಡಿಯೊಳಗೆ ಬಿದ್ದಿದ್ದಾರೆ. ಬಿದ್ದ ಸಂದರ್ಭ ಪಕ್ಕದಲ್ಲೇ ಹಾಕಿದ್ದ ಮಣ್ಣಿನ ರಾಶಿಯು ಕೆಳಗೆ ಬಿದ್ದು, ಸಮಾಧಿಯಾಗಿದ್ದಾರೆ.

    ಘಟನೆ ನಡೆದ ಸಂದರ್ಭ ಅಗ್ನಿಶಾಮಕ ದಳ, ಸಂಪ್ಯ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಅಧಿಕಾರಿ, ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯಚರಣೆ ನಡೆಸಿದರು. ಸಂಪೂರ್ಣವಾಗಿ ಮಣ್ಣು ಬಿದ್ದಿದ್ದರಿಂದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ಹೊರಗೆ ತೆಗೆಯಲು ಸಾಧ್ಯವಾಗಲಿಲ್ಲ. ಮಣ್ಣಿನಡಿ ಹೂತು ಹೋಗಿದ್ದ ಇಬ್ಬರ ಮೃತದೇಹವನ್ನು ಹೊರತೆಗೆದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಜಾಗದ ಮಾಲೀಕರು ಒಂದಷ್ಟು ಮುಂಜಾಗೃತಾ ಕ್ರಮ ಕೈಗೊಂಡಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಕೆಲಸಕ್ಕೆ ತೆರಳಿದ್ದಾರೆ ಮರಳಿ ಬರುತ್ತಾರೆ ಎಂದು ದಾರಿ ಕಾಯುತ್ತಿದ್ದ ಮೃತರ ಕುಟುಂಬಸ್ಥರು ಘಟನೆಯಿಂದ ದಿಗ್ಭ್ರಮೆಗೊಳಗಾಗಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಸದಸ್ಯರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರವಾದರೂ ಸಿಗಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

  • ಡಿಸಿಎಂ ಸಂಧಾನ- ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಬಿಕ್ಕಟ್ಟು ಸುಖಾಂತ್ಯ

    ಡಿಸಿಎಂ ಸಂಧಾನ- ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಬಿಕ್ಕಟ್ಟು ಸುಖಾಂತ್ಯ

    ಬೆಂಗಳೂರು: ಕಳೆದ 115 ದಿನಗಳಿಂದ ಕಗ್ಗಂಟಾಗಿದ್ದ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಬಗೆಹರಿಸುವಲ್ಲಿ ಸಫಲರಾಗಿದ್ದಾರೆ.

    ನಗರದಲ್ಲಿ ಬುಧವಾರ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಹಿರಿಯ ಉಪಾಧ್ಯಕ್ಷ ಸುದೀಪ್ ದಾಲ್ವೆ, ಉಪಾಧ್ಯಕ್ಷ ಶಂಕರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಮಾಗಡಿ ಶಾಸಕ ಮಂಜುನಾಥ ಜೊತೆ ಮಹತ್ವದ ಮಾತುಕತೆ ನಡೆಸಿದ ಡಿಸಿಎಂ, ಈ ತಿಂಗಳ 5ರೊಳಗೆ ಎಲ್ಲ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು ಹಾಗೂ ಇಂಥ ಸಮಸ್ಯೆಗಳು ಭವಿಷ್ಯದಲ್ಲಿ ಮರುಕಳಿಸಬಾರದು ಎಂದು ಆಡಳಿತ ಮಂಡಳಿ ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದರು.

    ಬಿಕ್ಕಟ್ಟು ಸಂಪೂರ್ಣವಾಗಿ ಸುಖಾಂತ್ಯವಾಗಿದೆ. 2,800 ಕಾರ್ಮಿಕರು ಇದೀಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಈ ತಿಂಗಳ 5ರ ವರೆಗೆ ಸಮಯ ಇದೆ. ಅಷ್ಟರೊಳಗೆ ಉಳಿದ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 2,800 ಕಾರ್ಮಿಕರು ಈಗಾಗಲೇ ಆಡಳಿತ ಮಂಡಳಿಗೆ ಮುಚ್ಚಳಿಕೆ ಬರೆದುಕೊಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇದರಲ್ಲಿ 1,000 ಕಾರ್ಮಿಕರಿಗೆ ಯೂನಿಯನ್ ಕಡೆಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಈ ಆಧಾರದ ಮೇಲೆಯೇ ಇವರೆಲ್ಲರೂ ಈಗ ಕೆಲಸಕ್ಕೆ ಬರುತ್ತಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ರಾಜ್ಯದ ಹೆಗ್ಗಳಿಕೆಗೆ ಧಕ್ಕೆ ಬೇಡ:
    ಸುದೀರ್ಘವಾಗಿ ಮುಂದುವರಿದಿದ್ದ ಬಿಕ್ಕಟ್ಟು ಬಗೆಹರಿದಿದ್ದು, ನನಗೆ ಸಂತೋಷವಾಗಿದೆ. ಕಾನೂನು ಪ್ರಕಾರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ ಹಾಗೂ ಕಾರ್ಮಿಕರು ಕೂಡ ಯಾವುದೇ ಸಮಸ್ಯೆಗೆ ಅವಕಾಶ ನೀಡದಂತೆ ಉತ್ತಮವಾಗಿ ಕೆಲಸ ಮಾಡಬೇಕು. ಈ ಮೂಲಕ ಕರ್ನಾಟಕ ಕೈಗಾರಿಕಾ ಸ್ನೇಹಿ ರಾಜ್ಯ ಎಂಬ ಹೆಗ್ಗಳಿಕೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

    ಕಾರ್ಮಿಕರ ಜೊತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ಹಳೆಯದನ್ನು ಕೆದಕುವುದು ಬೇಡ. ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆಯೂ ಮುಖ್ಯ. ಅದೇ ರೀತಿ ಕಾರ್ಮಿಕರ ಹಿತರಕ್ಷಣೆಯೂ ಸರ್ಕಾರಕ್ಕೆ ಆದ್ಯತೆಯ ವಿಷಯ. ಹೀಗಾಗಿ ಯಾವುದೇ ಕಾರಣಕ್ಕೂ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಬೇಡ. ಕಂಪನಿಯೂ ಚೆನ್ನಾಗಿರಬೇಕು ಮತ್ತು ಕಾರ್ಮಿಕರು ಚೆನ್ನಾಗಿರಬೇಕು ಎಂಬುದು ಸರ್ಕಾರದ ನೀತಿ ಎಂದು ಡಿಸಿಎಂ ಹೇಳಿದರು.

    ಬಿಕ್ಕಟ್ಟು ಶಮನಕ್ಕೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಮಾಗಡಿ ಶಾಸಕ ಮಂಜುನಾಥ್ ಸಾಕಷ್ಟು ಶ್ರಮಿಸಿದ್ದಾರೆ ಎಂದ ಉಪ ಮುಖ್ಯಮಂತ್ರಿ, ರಾಜ್ಯವು ಆಟೋಮೊಬೈಲ್ ಕ್ಷೇತ್ರದಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳು ಬರುತ್ತಿವೆ. ಇಂಥ ಹೊತ್ತಿನಲ್ಲಿ ಈ ಪರಿಸ್ಥಿತಿ ಅನಗತ್ಯವಾಗಿತ್ತು. ಈಗ ಎಲ್ಲವೂ ಮುಗಿದ ಅಧ್ಯಾಯವಾಗಿದ್ದು, ರಾಜ್ಯಕ್ಕೆ ಕಪ್ಪುಚುಕ್ಕೆ ತರುವ ಕೆಲಸವನ್ನು ಯಾರೂ ಮಾಡುವುದು ಬೇಡ ಎಂದರು.

    ಕೋವಿಡ್ ಕಾರಣಕ್ಕೆ ಕರ್ನಾಟಕ ಎಲ್ಲ ಕ್ಷೇತ್ರಗಳಲ್ಲೂ ಕಷ್ಟಕ್ಕೆ ಸಿಲುಕಿತ್ತು. ಆದರೂ ರಾಜ್ಯದ ಆರ್ಥಿಕತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಅದರಲ್ಲಿ ಉದ್ಯೋಗ ನಷ್ಟ ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

    ವಿಸ್ತರಣಾ ಯೋಜನೆ ನಿಲ್ಲುವುದು ಬೇಡ:
    ಟೊಯೋಟಾ-ಕಿರ್ಲೋಸ್ಕರ್ ಕಂಪನಿ ಕೈಗೊಂಡಿರುವ ವಿಸ್ತರಣಾ ಯೋಜನೆ ನಿಲ್ಲುವುದು ಬೇಡ. ಎಲೆಕ್ಟ್ರಿಕ್ ಕಾರು ತಯಾರಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಕಂಪನಿ ಹಾಕಿಕೊಂಡಿದೆ. ಇದರಿಂದ 25 ಸಾವಿರ ಕುಟುಂಬಗಳಿಗೆ ಪ್ರತ್ಯಕ್ಷ- ಪರೋಕ್ಷವಾಗಿ ಉದ್ಯೋಗ ಕಲ್ಪಿಸುವ ಈ ವಿಸ್ತರಣಾ ಕಾರ್ಯಕ್ರಮ ನಿಲ್ಲುವುದು ಬೇಡ ಎಂದು ಡಿಸಿಎಂ ಹೇಳಿದರು.

    ಈ ಸಂದರ್ಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಅಧಿಕಾರಿಗಳು ಬಿಕ್ಕಟ್ಟು ಶಮನಕ್ಕೆ ಕಾರಣರಾದ ಉಪ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು. ಕಾರ್ಮಿಕ ಆಯುಕ್ತ ಅಕ್ರಂ ಪಾಷ, ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಮಾಗಡಿ ಶಾಸಕ ಮಂಜುನಾಥ್ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

    ಏನಿದು ಬಿಕ್ಕಟ್ಟು?
    115 ದಿನಗಳ ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಮುಷ್ಕರ 2020ರ ನವೆಂಬರ್ 10ರಿಂದ ಆರಂಭವಾಗಿತ್ತು. ಕೆಲ ಕ್ಷುಲ್ಲಕ ಕಾರಣಕ್ಕೆ ಮುಷ್ಕರದ ಹಾದಿ ಹಿಡಿದಿತ್ತು. ಬಳಿಕ ಕಂಪನಿಯು ಲಾಕೌಟ್ ಘೋಷಣೆ ಮಾಡಿತ್ತು.

    ನಂತರ ರಾಜಿ ಸಂಧಾನ ಹಾಗೂ ಸರ್ಕಾರದ ಪ್ರಯತ್ನದಿಂದಾಗಿ ನವೆಂಬರ್ 19ರಿಂದ ಜಾರಿಗೆ ಬರುವಂತೆ ಲಾಕೌಟ್ ಅನ್ನು ಟೊಯೋಟಾ ವಾಪಸ್ ಪಡೆದುಕೊಂಡಿತ್ತು. ಅದಾದ ಮೇಲೂ ಅನೇಕ ನೌಕಕರು ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಕಂಪನಿ ಮತ್ತೊಮ್ಮೆ ಲಾಕೌಟ್ ಘೋಷಣೆ ಮಾಡಿತ್ತು. ಕೊನೆಗೆ ನವೆಂಬರ್ 23ರಿಂದ ಕೆಲಸಕ್ಕೆ ಹಾಜರಾಗಲು ಕಾರ್ಮಿಕರಿಗೆ ಆಡಳಿತ ಮಂಡಳಿ ಅವಕಾಶ ನೀಡಿತ್ತು. ಇದೀಗ ಒಟ್ಟಾರೆ ಬಿಕ್ಕಟ್ಟು ಬಗೆಹರಿದಿದೆ.

  • ಸರಕಾರಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ- ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

    ಸರಕಾರಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ- ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

    ಕೊಪ್ಪಳ: ಆಸ್ಪತ್ರೆಗೆ ಆಗಮಿಸಿದ ಮಹಿಳೆಯೊಬ್ಬರು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆಯ ಬಾಗಿಲಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಜಿಲ್ಲೆಯ ಗೌರಿಪುರ ಗ್ರಾಮದ ಗರ್ಭಿಣಿ ಬೃಂದಾ ಅವರಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಕುಟುಂಬಸ್ಥರು ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಬೆಳಿಗ್ಗೆ ಆರು ಗಂಟೆಗೆ ಆಸ್ಪತ್ರೆಯ ಮುಂಭಾಗ ಬಂದು ಬಾಗಿಲು ತೆಗೆಯಿರಿ ಎಂದು ಬೇಡಿಕೊಂಡರೂ ಅಲ್ಲಿದ್ದ ಸಿಬ್ಬಂದಿ ಬಂದು ನೋಡದೆ, ಸಮುದಾಯ ಆರೋಗ್ಯ ಕೇಂದ್ರದ ಬಾಗಿಲು ತೆರೆಯದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಬೃಂದಾ ಅವರು ಹೆರಿಗೆ ನೋವಿನಿಂದ ಬಳಲಿ ಕೆಂದ್ರದ ಬಾಗಿಲಲ್ಲೆ ಹೆರಿಗೆಯಾಗಿದ್ದಾರೆ.

    ಬೃಂದಾ ಅವರು ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಮನಕಲಕುವ ದೃಶ್ಯ ನೋಡಿ ಸ್ಥಳೀಯರು ದಂಗಾಗಿದ್ದಾರೆ. ಈ ರೀತಿ ಹೆರಿಗೆಯಾಗಿದ್ದರಿಂದ ಕುಟುಂಬಸ್ಥರು ಆರೋಗ್ಯ ಸಿಬ್ಬಂದಿ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ. ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರು ಮತ್ತು ಕನ್ನಡ ಪರ ಸಂಘಟನೆಗಳು ಆರೋಗ್ಯ ಕೇಂದ್ರದ ಮುಂದೇ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

  • TDP, YSRCP ಕಾರ್ಯಕರ್ತರ ನಡುವೆ ಸಂಘರ್ಷ – 16 ಮಂದಿಗೆ ಗಂಭೀರ ಗಾಯ

    TDP, YSRCP ಕಾರ್ಯಕರ್ತರ ನಡುವೆ ಸಂಘರ್ಷ – 16 ಮಂದಿಗೆ ಗಂಭೀರ ಗಾಯ

    ಹೈದರಾಬಾದ್: ಶ್ರೀಕಾಕುಲಂನ ಮೆಟ್ಟವಲಸ ಗ್ರಾಮದಲ್ಲಿ ತೆಲಗು ದೇಶಂ ಪಕ್ಷ(ಟಿಡಿಪಿ) ಹಾಗೂ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ(ವೈಎಸ್ಆರ್‌ಸಿಪಿ) ನಡುವೆ ಮಂಗಳವಾರ ಸಂಭವಿಸಿದ ಘರ್ಷಣೆಯಲ್ಲಿ 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನೆ ಕುರಿತಂತೆ ಮಾತನಾಡಿದ ಶ್ರೀಕಾಕುಲಂ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಎಂ. ಅಹ್ಮದ್, ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಹೀಗಾಗಿ ತೆಲಗು ದೇಶಂ ಪಕ್ಷ(ಟಿಡಿಪಿ) ಹಾಗೂ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ(ವೈಎಸ್ಆರ್‌ಸಿಪಿ) ನಡುವೆ ಘರ್ಷಣೆ ನಡೆದಿದೆ ಹಾಗೂ ಘಟನೆಯಲ್ಲಿ ಸುಮಾರು 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ರಾಜಮ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇದೀಗ ಶ್ರೀಕಾಕುಲಂನ ಮೆಟ್ಟವಲಸ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸರು ಆಯೋಜಿಸಲಾಗಿದೆ ಎಂದರು.

    ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಟಿಡಿಪಿ ಬೆಂಬಲಿತ ಅಭ್ಯರ್ಥಿ ಜಯ ಸಾಧಿಸಿದರು. ಇದನ್ನು ಸಹಿಸಲಾಗದ ವೈಎಸ್ಆರ್‌ಸಿಪಿ ಪಕ್ಷದ ಕೆಲ ಕಾರ್ಯಕರ್ತರು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಕೆಲವು ಪೋಸ್ಟ್ ಗಳನ್ನು ಮಾಡಿದ್ದಾರೆ. ವೈಎಸ್ಆರ್‌ಸಿಪಿ ಪಕ್ಷ ಅವಹೇಳನಕಾರಿ ಪೋಸ್ಟ್ ಮಾಡಿದೆ ಎಂದು ಟಿಡಿಪಿ ಪಕ್ಷದವರು ಆರೋಪಿಸಿದರು. ಈ ಹಿನ್ನೆಲೆ ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ಕೋಪ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸಿದ್ದಾರೆ.

  • ಮೂಲಭೂತ ಸೌಕರ್ಯ ಕೊರತೆ -ಕಾಫಿ ತೋಟದ ಕಾರ್ಮಿಕರಿಂದ ಪ್ರತಿಭಟನೆ

    ಮೂಲಭೂತ ಸೌಕರ್ಯ ಕೊರತೆ -ಕಾಫಿ ತೋಟದ ಕಾರ್ಮಿಕರಿಂದ ಪ್ರತಿಭಟನೆ

    ಮಡಿಕೇರಿ: ಬೋನಸ್, ವೈದ್ಯಕೀಯ ವೆಚ್ಚ ಸೇರಿದಂತೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ, ಕಾಫಿ ತೋಟದ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ತಮ್ಮ ಸಮಸ್ಯೆಗೆ ಪರಿಹಾರ ಕೊಡಿಸುವಂತೆ ಬಿಬಿಟಿಸಿ ಎಲ್ಕ್ ಹಿಲ್ ಕಾಫಿ ಅಧಿಕಾರಿಗಳೊಂದಿಗೆ ಮನವಿ ಮಾಡಿಕೊಂಡಿದ್ದಾರೆ.

    ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಬಿಬಿಟಿಸಿ ಎಲ್ಕ್ ಹಿಲ್ ಕಾಫಿ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಬಿಬಿಟಿಸಿ ಎಲ್ಕ್ ಹಿಲ್ ಕಾಫಿ ಕಚೇರಿ ಎದುರು ಜಮಾಯಿಸಿದ ನೂರಾರು ಕಾರ್ಮಿಕರು ಅಲ್ಲಿಯೇ ಧರಣಿ ಕುಳಿತು ತೋಟದ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಜೊತೆಗೆ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಜೀವದ ಹಂಗು ತೊರೆದು ಕೆಲಸ ಮಾಡಬೇಕಾದ ಸ್ಥಿತಿ ಇದೆ. ನಾವಿರುವ ಲೈನ್ ಮನೆಗಳು ಸಂಪೂರ್ಣ ಹದಗೆಟ್ಟಿವೆ. ಹೀಗಾಗಿ ಮನೆಗಳು ಅಪಾಯಕರ ಸ್ಥಿತಿಯಲ್ಲಿದ್ದು ಅವುಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿದರು.

  • ಹಿಮ ಪ್ರಳಯ- ಒಂದು ಫೋನ್ ಕರೆಯಿಂದ ಉಳಿಯಿತು 12 ಜನರ ಜೀವ

    ಹಿಮ ಪ್ರಳಯ- ಒಂದು ಫೋನ್ ಕರೆಯಿಂದ ಉಳಿಯಿತು 12 ಜನರ ಜೀವ

    ಡೆಹರಾಡೂನ್: ಭಾನುವಾರ ಬೆಳಗ್ಗೆ ಸಂಭವಿಸಿದ ಹಿಮ ಪ್ರಳಯದಿಂದ ಉತ್ತರಾಖಂಡ ಇನ್ನೂ ಚೇತರಿಸಿಕೊಂಡಿಲ್ಲ. ಒಂದು ಫೋನ್ ಕಾಲ್ ನಿಂದ 12 ಜನರ ಜೀವ ಉಳಿದ ವಿಷಯ ಬೆಳಕಿಗೆ ಬಂದಿದೆ. ಸುರಂಗದಲ್ಲಿ ಸಿಲುಕಿದ್ದ 12 ಜನರ ಜೀವವನ್ನ ಒಂದು ಫೋನ್ ಕರೆ ಉಳಿಸಿದೆ.

    ಸುರಂಗದಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕ ತಾವು ಹೊರ ಬಂದ ಅಚ್ಚರಿಯ ವಿಷಯವನ್ನ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ದಿಢೀರ್ ಅಂತ ಸುರಂಗದೊಳಗೆ ನೀರು ಮತ್ತು ಕೆಸರು ಸೇರಿಕೊಳ್ಳಲಾರಂಭಿಸಿತು. ಹೊರ ಬರುವ ಎಲ್ಲ ಮಾರ್ಗಗಳು ಬಂದ್ ಆಗಿದ್ದರಿಂದ ಸುರಂಗದಲ್ಲಿದ್ದ 12 ಜನರು ಜೀವದ ಆಸೆಯನ್ನ ಚೆಲ್ಲಿ ಭಯದ ಸ್ಥಿತಿಯಲ್ಲಿದ್ದೀವಿ. ಈ ವೇಳೆ ನಮ್ಮ ಜೊತೆಯಲ್ಲಿದ್ದ ಓರ್ವ ವ್ಯಕ್ತಿಯ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಕ್ತು. ಕೂಡಲೇ ನಮ್ಮ ಅಧಿಕಾರಿಗಳಿಗೆ ಫೋನ್ ಮಾಡಿ ತಾವು ಸಿಲುಕಿರುವ ವಿಷಯ ಮತ್ತು ಸ್ಥಳವನ್ನ ತಿಳಿಸಿದ್ದೀವಿ. ಕೆಲ ಗಂಟೆಗಳ ಬಳಿಕ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರು ನಮ್ಮೆಲ್ಲರನ್ನ ರಕ್ಷಿಸಿದರು ಎಂದು ಹೇಳಿದ್ದಾರೆ.

    ನಾನು ಚಮೋಲಿಯ ಧಾಕಾ ಗ್ರಾಮದ ನಿವಾಸಿ. ತಪೋವನ ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಸುರಂಗದೊಳಗೆ ನೀರು ಬಂದಾಗ ಜೀವದ ಮೇಲಿನ ಆಸೆಯನ್ನೇ ಬಿಟ್ಟಿದ್ದೆ. ಕೊನೆಗೆ ಸುರಂಗದಿಂದ ಸಣ್ಣದಾದ ಬೆಳಕಿನ ಕಿರಣ ಕಾಣಿಸಿದ್ದರಿಂದ ಉಸಿರಾಡಲ ಸಮಸ್ಯೆಯಾಗಲಿಲ್ಲ. ನಮ್ಮ ಸಹದ್ಯೋಗಿ ಫೋನ್ ಮಾಡಿದ್ದರಿಂದ ನಾವು ಬದುಕುಳಿದಿದ್ದೇವೆ ಎಂದು ಮತ್ತೋರ್ವ ನೌಕರ ತಿಳಿಸಿದ್ದಾರೆ.

    ಹಿಮ ಸುನಾಮಿಯಲ್ಲಿ ಕೊಚ್ಚಿಹೋದ 170 ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇಂದು ನಾಲ್ವರ ಶವ ಪತ್ತೆಯಾಗಿದ್ದು, ಮೃತರ ಸಂಖ್ಯೆ 18ಕ್ಕೆ ಹೆಚ್ಚಿದೆ. ರಕ್ಷಣಾ ಪಡೆಗಳು ಹರಸಾಹಸ ನಡೆಸಿ ತಪೊವನ ಸುರಂಗದಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿದ್ದಾರೆ. ಸುರಂಗದಲ್ಲಿ ತುಂಬಿಹೋಗಿರುವ ಕೆಸರಿನ ರಾಶಿಯನ್ನು ಹೊರಹಾಕಲು ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.

    250 ಮೀಟರ್ ಉದ್ದದ ಸುರಂಗದೊಳಗೆ 150 ಮೀಟರ್‍ವರೆಗೂ ಎಸ್‍ಡಿಆರ್‍ಎಫ್ ಪಡೆಗಳು ಅತೀಕಷ್ಟದಿಂದ ಹೋಗಿ ಕೆಸರಿನಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿವೆ. ಮತ್ತೊಂದೆಡೆ ಧೌಲಿ ಗಂಗಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ದಿಢೀರ್ ಹಿಮ ಪ್ರಳಯದ ಕಾರಣ ತಪೋವನ್-ವಿಷ್ಣುಘಡ ಜಲವಿದ್ಯುತ್ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ 170 ಕಾರ್ಮಿಕರು ಕೊಚ್ಚಿಹೋಗಿದ್ರು. ಈ ಮಧ್ಯೆ, ಜಲವಿಲಯದಿಂದ ಪ್ರಾಣನಷ್ಟದ ಜೊತೆಗೆ ಭಾರೀ ಆಸ್ತಿ ಹಾನಿ ಸಂಭವಿಸಿದೆ.

  • ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸ್ತಿರೋ 7 ಲಕ್ಷ ಕಾರ್ಮಿಕರಿಗೆ ತಲಾ 3,000 ರೂ. ನೆರವು

    ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸ್ತಿರೋ 7 ಲಕ್ಷ ಕಾರ್ಮಿಕರಿಗೆ ತಲಾ 3,000 ರೂ. ನೆರವು

    ಡಿಸ್ಪೂರ್: ಅಸ್ಸಾಂನ ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಲಕ್ಷ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ.ನಂತೆ 224 ಕೋಟಿ ಹಣ ಹಂಚುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಿಳಿಸಿದ್ದಾರೆ.

    ಚಹಾ ತೋಟದಲ್ಲಿ ಕಾರ್ಯನಿರ್ವಹಿಸುತ್ತಿರುವ 7,46,667 ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೆರವು ನೀಡುವಂತೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದನ್ನು ಕುರಿತಂತೆ ಮಾತನಾಡಿದ ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿನ ಚಹಾ ತೋಟ ಕಾರ್ಮಿಕರ ವೇತನವನ್ನು 10 ದಿನಗಳಲ್ಲಿ ಹೆಚ್ಚಿಸಲಾಗುವುದು. ಈ ವಿಚಾರವಾಗಿ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ಅಸ್ಸಾಂ ಚ ಬಗಿಚಾರ್ ಧನ್ ಪುರಸ್ಕರ್ ಮೇಳ ಯೋಜನೆಯಡಿ 7,46,667 ಚಹಾ ಕಾರ್ಮಿಕರ ಬ್ಯಾಂಕ್ ಖಾತೆಗೆ ತಲಾ 3 ಸಾವಿರ ರೂ ಜಮಾಗೊಳಿಸಲಾಗುತ್ತದೆ. ಈ ಹಿಂದೆ ನೇರ ಲಾಭ ವರ್ಗಾವಣೆ ಮೂಲಕ 5000ರೂ. ಗಳನ್ನು ಎರಡು ಕಂತುಗಳ ರೂಪದಲ್ಲಿ ಕಾರ್ಮಿಕರು ಪಡೆದಿದ್ದರು.

    ಫೆಬ್ರವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಎರಡು ಆಸ್ಪತ್ರೆಗಳಿಗೆ ಅಡಿಪಾಯ ಹಾಕಿದರು. ಜೊತೆಗೆ ರಾಜ್ಯದ ಹೆದ್ದಾರಿ ಮತ್ತು ಪ್ರಮುಖ ಜಿಲ್ಲೆಯ ರಸ್ತೆಗಳನ್ನು ಅಸೋಮ್ ಮಾಲಾ ಕಾರ್ಯಕ್ರಮದ ಮೂಲಕ ಸೋನಿತ್ಪುರ ಜಿಲ್ಲೆಯ ಧೇಕಿಯಾಜಿಲಿಯಲ್ಲಿ ಉದ್ಘಾಟಿಸಿದರು.

  • ಕೂಲಿಕಾರ್ಮಿರು ಪ್ರಯಾಣಿಸ್ತಿದ್ದ ವಾಹನ ಅಪಘಾತ – 7 ಮಂದಿ ಸಾವು, 13 ಜನರಿಗೆ ಗಾಯ

    ಕೂಲಿಕಾರ್ಮಿರು ಪ್ರಯಾಣಿಸ್ತಿದ್ದ ವಾಹನ ಅಪಘಾತ – 7 ಮಂದಿ ಸಾವು, 13 ಜನರಿಗೆ ಗಾಯ

    ಹೈದರಾಬಾದ್: ಕೆಲಸ ಮುಗಿಸಿ ಮನಗೆ ಹೋಗುತ್ತಿದ್ದ ಕೂಲಿ ಕಾರ್ಮಿಕರಿದ್ದ ಆಟೋ ಕಂಟೇನರ್ ಗೆ ಡಿಕ್ಕಿಯಾಗಿ 7 ಮಂದಿ ಸಾವನ್ನಪ್ಪಿ, 13 ಜನರಿಗೆ ಗಾಯವಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಂಗಡಿಪೇಟ್ ಬಳಿ ನಡೆದಿದೆ.

    ವಾಹನ ಭೀಕರ ರಸ್ತೆ ಅಪಘಾತಕ್ಕಿಡಾಗಿ ವಾಹನದಲ್ಲಿದ್ದ 7 ಮಹಿಳೆಯರು ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರು ಚಿಂತಾಬಾವಿ ಗ್ರಾಮದ ನಿವಾಸಿಗಳಾಗಿದ್ದಾರೆ. 20 ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಆಟೋ ಕಂಟೇನರ್‍ಗೆ ಡಿಕ್ಕಿಯಾಗಿ ಸಾವು-ನೋವು ಸಂಭವಿಸಿದೆ.

    ಈ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಆಟೋ ಚಾಲಕ ಮಲ್ಲೇಶ್, ಕಲೂಲಿ ಕಾರ್ಮಿಕರಾದ ಪೆದ್ದಮ್ಮ, ನೋಮಲ ಸೈದಮ್ಮ, ಕೊಟ್ಟಂ, ಪೆದ್ದಮ್ಮ ಗೋಡುಗು, ಇದ್ದಮ್ಮ ಮಲ್ಲಮ್ಮ, ಅಂಜನಮ್ಮ ಎಂದು ಗುರುತಿಸಲಾಗಿದೆ. 13 ಜನರು ಗಂಭಿರವಾಗಿ ಗಾಯಗೊಂಡಿದ್ದಾರೆ. ಆಟೋದಲ್ಲಿ ಒಟ್ಟು 20 ಮಂದಿ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

  • ವಿಸ್ಟ್ರಾನ್ ಕಂಪನಿಯಲ್ಲಿ ಮರು ನೇಮಕಾತಿ ಶುರು- ಕೆಲಸ ಪಡೆಯಲು ಏನೆಲ್ಲ ಮಾಡಬೇಕು?

    ವಿಸ್ಟ್ರಾನ್ ಕಂಪನಿಯಲ್ಲಿ ಮರು ನೇಮಕಾತಿ ಶುರು- ಕೆಲಸ ಪಡೆಯಲು ಏನೆಲ್ಲ ಮಾಡಬೇಕು?

    ಕೋಲಾರ: ದಾಂದಲೆ ಬಳಿಕ ಪ್ರತಿಷ್ಠಿತ ಐಫೋನ್ ತಯಾರಿಕಾ ವಿಸ್ಟ್ರಾನ್ ಕಂಪನಿಯಲ್ಲಿ ಹೊಸದೊಂದು ಬೆಳೆವಣಿಗೆ ಆರಂಭವಾಗಿದೆ. ಕಾರ್ಮಿಕರಿಗೆ ಬಾಕಿ ಇದ್ದ ವೇತನ ಪಾವತಿ ಮಾಡಿರುವ ಕಂಪನಿ, ಮರು ನೇಮಕಾತಿ ಪ್ರಕ್ರಿಯೆಯನ್ನು ಸಹ ಶುರುಮಾಡಿದೆ. ಆದರೆ ಇಲ್ಲಿ ಕೆಲಸ ಮಾಡುವವರಿಗೆ ಕೆಲ ಮಾನದಂಡಗಳನ್ನ ವಿಧಿಸಿದೆ.

    ಡಿಸೆಂಬರ್ 12 ರಂದು ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಐಫೋನ್ ತಯಾರಿಕಾ ಬಹುರಾಷ್ಟ್ರೀಯ ಕಂಪನಿ ವಿಸ್ಟ್ರಾನ್ ನಲ್ಲಿ ಕಾರ್ಮಿಕರು ದಾಂದಲೆ ನಡೆಸಿ, ಪೀಠೋಪಕರಣಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದರು. ವೇತನ ಸರಿಯಾಗಿ ನೀಡಿಲ್ಲ ಎಂಬ ಕಾರಣಕ್ಕೆ ಕಾರ್ಮಿಕರ ಆಕ್ರೋಶಕ್ಕೆ ಸಿಕ್ಕ ಕಂಪನಿ ಅಸ್ತಿ ಪಂಜರದಂತಾಗಿತ್ತು. ಇದಾದ ನಂತರ ಹಲವು ತನಿಖೆ, ಪರಿಶೀಲನೆ ಬಳಿಕ ಕಂಪನಿ ಕಾರ್ಮಿಕರ ಕ್ಷಮೆ ಕೇಳಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿತ್ತು. ಇದೇ ವೇಳೆ ವಿಸ್ಟ್ರಾನ್ ಕಂಪನಿ ಮತ್ತೆ ಇಲ್ಲಿ ಕಾರ್ಯಾರಂಭ ಮಾಡೋದು ಅನುಮಾನ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಇದೆಲ್ಲದಕ್ಕೂ ತೆರೆ ಎಳೆದಿರುವ ಕಂಪನಿ, ಈಗಾಗಲೇ ಕಾರ್ಮಿಕರ ಬಾಕಿ ಇದ್ದ ವೇತನ ಪಾವತಿ ಮಾಡಿದೆ. ಜೊತೆಗೆ ದಾಂದಲೆಯಲ್ಲಿ ಬಾಗಿಯಾಗದ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದೆ. ಆದರೆ ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಪಡೆಯಬೇಕೆಂದರೆ ಪೊಲೀಸ್ ಇಲಾಖೆಯ ಅನುಮತಿ ಖಡ್ಡಾಯವಾಗಿದೆ.

    ಈ ಬಾರಿ ಕಂಪನಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೂ ಪಶ್ಚಾತ್ತಾಪವಾಗಿದೆ. ಕೆಲಸ ನೀಡಲು ಬಂದ ಕಂಪನಿ ಮೇಲೆ ದಾಂದಲೆ ಮಾಡಿದ್ದು ತಪ್ಪು ಅನ್ನೋದು ಅರಿವಾಗಿದೆ. ಹೀಗಾಗಿ ವಿಸ್ಟ್ರಾನ್ ಕಂಪನಿ ಈಗ ಮತ್ತೆ ದಾಂದಲೆಯಲ್ಲಿ ಬಾಗಿಯಾಗದ ಕಾರ್ಮಿಕರಿಗೆ ಮೊಬೈಲ್ ಮೆಸೇಜ್ ಮಾಡಿ ಕೆಲವು ನಿಗದಿತ ದಾಖಲಾತಿಗಳನ್ನು ನೀಡಿ ಕೆಲಸಕ್ಕೆ ಸೇರಿಕೊಳ್ಳಲು ಸೂಚನೆ ನೀಡಿದೆ.

    ಕಂಪನಿಯಿಂದ ಕಾರ್ಮಿಕರಿಗೆ ಸಂದೇಶ ಕಳುಹಿಸಲಾಗಿದ್ದು, ಗುರುತಿನ ದಾಖಲೆ ಸಹಿತ ಅಭ್ಯರ್ಥಿ ವಾಸಿಸುವ ಗ್ರಾಮದ ಇಬ್ಬರು ಸಾಕ್ಷಿಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ಮೂರು ಫೋಟೋ. ಸೇವಾಸಿಂಧು ಅಥವಾ ಕಂಪನಿಯ ಆಪ್‍ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇಷ್ಟು ದಾಖಲಾತಿಗಳೊಂದಿಗೆ ಪೊಲೀಸ್ ಠಾಣೆಯಲ್ಲಿ ಪಡೆಯುವ ನಿರಪೇಕ್ಷಣಾ ಪತ್ರ ಪಡೆದವರಿಗೆ ಮಾತ್ರ ಕಂಪನಿಯಲ್ಲಿ ಉದ್ಯೋಗ ಸಿಗಲಿದೆ. ಇಂದಿನಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, ದಾಖಲಾತಿ ಪರಿಶೀಲನಾ ಪ್ರಕ್ರಿಯೆ ಶುರುವಾಗಿದೆ. ಮತ್ತೆ ವಿಸ್ಟ್ರಾನ್ ಕಂಪನಿ ಆರಂಭದ ಆಸೆ ಚಿಗುರಿದೆ.

    ಕೆಲಸ ಕಳೆದುಕೊಂಡಿದ್ದ ಸಾವಿರಾರು ಉದ್ಯೋಗಿಗಳು ತಿಂಗಳಿಂದ ಕೆಲಸ ಇಲ್ಲದೆ ತೊಂದರೆಗೆ ಸಿಲುಕಿದ್ದರು. ಈಗ ಮತ್ತೆ ಕಂಪನಿ ಆರಂಭವಾಗುತ್ತಿದ್ದು, ಮತ್ತೆ ಕೆಲಸ ಸಿಗುತ್ತದೆ ಎಂದು ಸಾವಿರಾರು ಕಾರ್ಮಿಕರಲ್ಲಿ ಸಂತೋಷ ಮೂಡಿದೆ.