Tag: workers

  • ಕಾರ್ಮಿಕರು ಸರ್ಕಾರದ ಯೋಜನೆಗಳನ್ನ ಸದುಪಯೋಗ ಪಡೆದುಕೊಳ್ಳಬೇಕು: ಶ್ರೀಮಂತ ಪಾಟೀಲ್

    ಕಾರ್ಮಿಕರು ಸರ್ಕಾರದ ಯೋಜನೆಗಳನ್ನ ಸದುಪಯೋಗ ಪಡೆದುಕೊಳ್ಳಬೇಕು: ಶ್ರೀಮಂತ ಪಾಟೀಲ್

    ಚಿಕ್ಕೋಡಿ(ಬೆಳಗಾವಿ): ಕಟ್ಟಡ ಕಾರ್ಮಿಕರಿಗೆ ಸರ್ಕಾರ ಅನೇಕ ಯೋಜನೆಗಳನ್ನ ನೀಡಿದ್ದು ಅದರ ಸದುಪಯೋಗವನ್ನ ಕಟ್ಟಡ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.

    ಕಾರ್ಮಿಕ ಇಲಾಖೆಯ ವತಿಯಿಂದ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿಯನ್ನು ಅರಿತು ಸರ್ಕಾರ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ, ಧನ ಸಹಾಯ ಸೇರಿದಂತೆ ಅನೇಕ ಯೋಜನೆಗಳನ್ನ ನೀಡಿದೆ. ಅದರ ಸದುಪಯೋಗವನ್ನ ಕಾರ್ಮಿಕರು ಪಡೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಜ್ಞಾನದೀವಿಗೆ – ದೊಡ್ಡಗದ್ದವಳ್ಳಿ ಸರ್ಕಾರಿ ಪ್ರೌಢಶಾಲೆಯ SSLC ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಈ ಸಂದರ್ಭದಲ್ಲಿ 2500 ಕಿಂತ ಹೆಚ್ಚಿನ ಆಹಾರ ಕಿಟ್ ಅನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ, ತಾಲೂಕ್ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ವೀರಣಗೌಡ ಎಗನಗೌಡರ ಕಾರ್ಮಿಕ ಇಲಾಖೆಯ ಅಧಿಕಾರಿ ಡಿಸೋಜಾ, ಹಿರಿಯ ಮುಖಂಡರಾದ ಸುಭಾಸ ಕಠಾರೆ, ಕಾಗವಾಡ ಮಂಡಲ ಅಧ್ಯಕ್ಷ ತಮ್ಮಣ್ಣಾ ಪಾರಶೆಟ್ಟಿ ಹಾಗೂ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

  • ಮಹಾನಗರಗಳತ್ತ  ನಿರಂತರ ಗುಳೆ ಹೊರಟ ಜನ

    ಮಹಾನಗರಗಳತ್ತ ನಿರಂತರ ಗುಳೆ ಹೊರಟ ಜನ

    ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಜೋರಾಗಿ ನಡೆದಿದ್ದರೂ, ಕೃಷಿ ಕೂಲಿಕಾರ್ಮಿಕರು ಮಾತ್ರ ಮಹಾನಗರಗಳಿಗೆ ನಿರಂತರವಾಗಿ ಗುಳೆ ಹೊರಟಿದ್ದಾರೆ.

    ದೇವದುರ್ಗ ತಾಲೂಕಿನ ಜಾಲಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ನಿತ್ಯ ಬೆಂಗಳೂರು ಸೇರಿದಂತೆ ಹಲವೆಡೆ ಗುಳೆಹೊರಟಿದ್ದಾರೆ. ಲಾಕ್‍ಡೌನ್ ಸಡಿಲಿಕೆಯಾಗಿರುವುದರಿಂದ ಕಾರ್ಮಿಕರು ಉದ್ಯೋಗ ಹರಿಸಿ ಗುಳೆ ಹೋಗುತ್ತಿದ್ದಾರೆ. ಕೃಷಿ ಚಟುವಟಿಕೆಗಳು ನಡೆಯುತ್ತಿದ್ದರೂ ನಿತ್ಯ ಕೂಲಿ ಕೆಲಸ ಸಿಗುವುದಿಲ್ಲ. ವಾರದಲ್ಲಿ ಎರಡು ಮೂರು ದಿನ ಮಾತ್ರ ಕೆಲಸ ಸಿಗುತ್ತಿದೆ. ಉಳಿದ ದಿನಗಳಲ್ಲಿ ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಗಿದೆ.

    ಲಾಕ್‍ಡೌನ್ ನಿಂದ ಇಷ್ಟುದಿನ ಕೆಲಸವಿಲ್ಲದೆ ಕಷ್ಟಪಟ್ಟಿದ್ದೇವೆ ಈಗಲೂ ನಿತ್ಯ ಕೆಲಸವಿಲ್ಲದೆ ಬದುಕು ನಡೆಸಲು ಸಾಧ್ಯವಿಲ್ಲ, ಅಂತ ಕೂಲಿಕಾರ್ಮಿಕರು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಸೇರಿ ಮಹಾನಗರಗಳಲ್ಲಿ ಗಾರೆಕೆಲಸ ಮಾಡುತ್ತಿದ್ದ ಕೂಲಿಕಾರರು ಪುನಃ ಗಾರೆಕೆಲಸಕ್ಕೆ ಗುಳೆ ಹೊರಟಿದ್ದಾರೆ.

    ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ದೇವದುರ್ಗದ ಜಾಲಹಳ್ಳಿ ಗ್ರಾಮಪಂಚಾಯತಿಯನ್ನ ಮೇಲ್ದರ್ಜೆಗೆರಿಸಿರುವುದರಿಂದ ಉದ್ಯೋಗ ಖಾತ್ರಿ ಯೋಜನೆ ರದ್ದಾಗಿದೆ. ಇಲ್ಲಿನ ಕರಡಿಗುಡ್ಡ, ಚಿಂಚೋಡಿ ಗ್ರಾಮ ಪಂಚಾಯತಿಗೆ ಚುನಾವಣೆಯಾಗದೆ ಯೋಜನೆ ಸ್ಥಗಿತಗೊಂಡಿದೆ. ಅಧಿಕಾರಿಗಳ ನಿಷ್ಕಾಳಜಿಯಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸಿಗದೆ ಜನ ಗಟ್ಟುಮೂಟೆ ಕಟ್ಟಿಕೊಂಡು ಗುಳೆ ಹೊರಟಿದ್ದಾರೆ.

  • ಗೋಡೆ ಕುಸಿದು ಕಾರ್ಮಿಕ ಸಾವು- ಓರ್ವ ಗಂಭೀರ

    ಗೋಡೆ ಕುಸಿದು ಕಾರ್ಮಿಕ ಸಾವು- ಓರ್ವ ಗಂಭೀರ

    ಕಾರವಾರ: ಮನೆ ದುರಸ್ತಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಘಡದ ವೈಶ್ಯವಾಡದಲ್ಲಿ ನಡೆದಿದೆ.

    ಹುಚ್ಚಪ್ಪ(35) ಸ್ಥಳದಲ್ಲೇ ಸಾವು ಕಂಡ ಕಾರ್ಮಿಕನಾಗಿದ್ದು, ಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಕಾರ್ಮಿಕನನ್ನು ಅಗ್ನಿಶಾಮ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

    ಇಂದು ಸದಾಶಿವಘಡದ ತುಳಸಿ ಬಾಯಿ ಅವರ ಮನೆಯ ದುರಸ್ತಿ ಕಾರ್ಯ ಮಾಡಲು ಕಾರ್ಮಿಕರು ತೆರಳಿದ್ದರು. ಈ ವೇಳೆ ಗೋಡೆ ಕೆಡವುವಾಗ ಘಟನೆ ನಡೆದಿದೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅನ್‍ಲಾಕ್ ಘೋಷಣೆ- ರಾತ್ರೋರಾತ್ರಿ ಕೂಲಿ ಕಾರ್ಮಿಕರ ಮಹಾಗುಳೆ

    ಅನ್‍ಲಾಕ್ ಘೋಷಣೆ- ರಾತ್ರೋರಾತ್ರಿ ಕೂಲಿ ಕಾರ್ಮಿಕರ ಮಹಾಗುಳೆ

    ರಾಯಚೂರು: ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಜಿಲ್ಲೆಗಳಲ್ಲಿ ಸೋಮವಾರದಿಂದ ಲಾಕ್‍ಡೌನ್ ಸಡಿಲಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಮಸ್ಕಿ ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ನೂರಾರು ವಾಹನಗಳಲ್ಲಿ ಜನ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಕೂಲಿ ಕಾರ್ಮಿಕರು, ಅನ್‍ಲಾಕ್ ಘೋಷಣೆ ಯಾಗುತ್ತಿದ್ದಂತೆ ಗಂಟು ಮೂಟೆ ಸಹಿತ ಮತ್ತೆ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಅಡುಗೆ ಸಾಮಾನುಗಳು, ಬಟ್ಟೆ, ಬೈಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕಟ್ಟಿಕೊಂಡು ಜನ ಗುಳೆ ಹೊರಟಿದ್ದಾರೆ.

     

    ಮಸ್ಕಿ ಪಟ್ಟಣದಲ್ಲೇ ನೂರಾರು ಜನ ಸಾಲು ಸಾಲಾಗಿ ಟೆಂಪೋ ವಾಹನಗಳಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ಬೆಂಗಳೂರಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಹಿನ್ನೆಲೆ ಅನ್‍ಲಾಕ್ ಆಗಿರುವುದರಿಂದ ಕೆಲಸಗಳು ಸಿಗುವ ಭರವಸೆಯಲ್ಲಿ ಜನ ಹೊರಟಿದ್ದಾರೆ. ಅಲ್ಲದೆ ಈಗಾಗಲೇ ಕಟ್ಟಡ ಕೆಲಸಗಳು ಆರಂಭಗೊಂಡಿರುವುದರಿಂದ ಗುತ್ತಿಗೆದಾರರು ಕೂಲಿಕಾರರನ್ನು ಕರೆಸಿಕೊಳ್ಳುತ್ತಿದ್ದಾರೆ.

  • ವಿದ್ಯುತ್ ಕಂಬ ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ- ಓರ್ವ ಸಾವು, ಮೂವರು ಗಂಭೀರ

    ವಿದ್ಯುತ್ ಕಂಬ ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ- ಓರ್ವ ಸಾವು, ಮೂವರು ಗಂಭೀರ

    ರಾಯಚೂರು: ತಾಲೂಕಿನ ಬಿಜನಗೇರಾ ಗ್ರಾಮದ ಹೊರವಲಯದಲ್ಲಿ ವಿದ್ಯುತ್ ಕಂಬ ಹೊತ್ತು ಬರುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದ್ದು, ಕೂಲಿ ಕೆಲಸಗಾರರ ಮೈ ಮೇಲೆ ಕಂಬಗಳು ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಹಾಗೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ವೈಮಲ್ಕಾಪುರ ಗ್ರಾಮದ ಪ್ರಾಣೇಶ್ (30) ಮೃತಪಟ್ಟ ಕೂಲಿ ಕಾರ್ಮಿಕ. ರಾಯಚೂರಿನಿಂದ ಬಿಜನಗೇರಾ ಗ್ರಾಮಕ್ಕೆ ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ರಸ್ತೆಯಲ್ಲಿ ತಗ್ಗು ಗುಂಡಿಗಳು ಇದ್ದರಿಂದ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಮಳೆ, ವಿದ್ಯುತ್ ತಂತಿ ತಗುಲಿ 14 ಕುರಿ ಸಾವು

    ಟ್ರ್ಯಾಕ್ಟರ್ ನಲ್ಲಿ ಒಟ್ಟು ಎಂಟು ಜನ ಹೊರಟಿದ್ದರು. ಆದರೆ ಘಟನೆ ವೇಳೆ ವಿದ್ಯುತ್ ಕಂಬಗಳು ಕೂಲಿಕಾರರ ಮೈ ಮೇಲೆ ಬಿದ್ದಿದ್ದು, ಇನ್ನೂ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

  • 15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    ಚಿಕ್ಕಮಗಳೂರು: ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.

    ಅತ್ತಿಗೆರೆ ಗ್ರಾಮದ ಮಂಜುನಾಥ್ ಗೌಡ ಎಂಬವರ ತೋಟದಲ್ಲಿ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕಾಫಿ ತೋಟದಲ್ಲಿ ಕಾಳಿಂಗ ಸರ್ಪಗಳಿರುವುದು ಮಾಮೂಲಿ. ಅವು ಇದ್ದಲ್ಲೇ ಇರುವುದಿಲ್ಲ. ಬರುತ್ತದೆ, ಹೋಗುತ್ತೆ ಎಂದು ಜನ ಕೂಡ ಸುಮ್ಮನಾಗುತ್ತಿದ್ದರು. ಇದನ್ನು ಓದಿ: ಮನವಿ ಸ್ವೀಕರಿಸಲು ಬಾರದ ಸಚಿವರು – ಮನವಿ ಪತ್ರ, ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಿ ಮೀನುಗಾರರಿಂದ ವಿನೂತನ ಪ್ರತಿಭಟನೆ

    ಆದರೆ ಲಾಕ್‍ಡೌನ್ ಇರುವುದರಿಂದ ತೋಟದಲ್ಲಿ ಹೆಚ್ಚಿನ ಕೆಲಸಗಾರರು ಇರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕಳೆದ ಎರಡು ದಿನಗಳಿಂದ ಕಾಳಿಂಗ ಸರ್ಪ ದಿನ ಕಾಣಿಸಿಕೊಳ್ಳುತ್ತಿರುವುದರಿಂದ ಕೆಲಸಗಾರರು ಭಯಗೊಂಡಿದ್ದಾರೆ. ಕೊನೆಗೆ ಆ ಬೃಹತ್ ಕಾಳಿಂಗ ಸರ್ಪವನ್ನ ಕಂಡ ಕೆಲಸಗಾರನೊಬ್ಬ ತೋಟದ ಮಾಲೀಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ತೋಟದ ಮಾಲೀಕ ಮಂಜುನಾಥ್ ಗೌಡ ವಿಷಯವನ್ನ ಸ್ನೇಕ್ ಆರೀಫ್ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದಾರೆ. ಕಾಫಿ ತೋಟ ಆಗಿರುವುದರಿಂದ ಕಾಳಿಂಗ ಸರ್ಪ ತೋಟದೊಳಗೆ ವೇಗವಾಗಿ ಸಂಚರಿಸುತ್ತೆ. ಗಿಡಗಳ ಮಧ್ಯೆ ಹಾವುಗಳು ಹೋದಷ್ಟು ವೇಗವಾಗಿ ಜನಸಾಮಾನ್ಯರು ಹೋಗಿ ಹಾವನ್ನ ಹಿಡಿಯುವುದು ಕಷ್ಟ. ಆದರೂ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ.

    ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪರಿಸರವಾದಿಗಳು ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಾವಾಡಿಗರು ಹಾವನ್ನ ಸೆರೆ ಹಿಡಿಯುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ:ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು

  • ಚಿತ್ರೋದ್ಯಮದ ಕಲಾವಿದರು, ಕಾರ್ಮಿಕರಿಗೆ ಲಸಿಕೆ ಕಾರ್ಯಕ್ರಮಕ್ಕೆ ಸುಧಾಕರ್ ಚಾಲನೆ

    ಚಿತ್ರೋದ್ಯಮದ ಕಲಾವಿದರು, ಕಾರ್ಮಿಕರಿಗೆ ಲಸಿಕೆ ಕಾರ್ಯಕ್ರಮಕ್ಕೆ ಸುಧಾಕರ್ ಚಾಲನೆ

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಛೇರಿಯಲ್ಲಿ ಇಂದು ಚಿತ್ರೋದ್ಯಮದ ಕಲಾವಿದರು, ಕಾರ್ಮಿಕರಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಸಚಿವ ಸಿಸಿ ಪಾಟೀಲ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಮಂಡಳಿಯ ಅಧ್ಯಕ್ಷ ಜೈರಾಜ್, ಹಿರಿಯ ನಿರ್ಮಾಪಕ ಸಾರಾ ಗೋವಿಂದು, ಹಿರಿಯ ನಟಿ ತಾರಾ ಅನೂರಾಧ ಉಪಸ್ಥಿತರಿದ್ದರು.

    ಚಿತ್ರೋದ್ಯಮದ ಕಲಾವಿದರು ಮತ್ತು ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಡಾ.ಸುಧಾಕರ್ ಮಾತನಾಡಿ, ಕೊವಿಡ್ ನಷ್ಟ ಎಲ್ಲಾ ಉದ್ಯಮಕ್ಕೂ ಆಗಿದೆ. ಚಲನಚಿತ್ರಕ್ಕೆ ಬಹಳಷ್ಟು ನಷ್ಟ ಆಗಿದೆ ಅಂತಾ ಅಭಿಪ್ರಾಯ ಪಡೆದಿದ್ದೇನೆ. ಕೊರೊನಾ ಯೋಧರು ಅಂತಾ ನಮ್ಮನ್ನು ಆ ಸಾಲಿನಲ್ಲಿ ಸೇರಿಸಬೇಕು ಅಂತಾ ಹೇಳಿದ್ರು. ಹಾಗಾಗಿ ಚಲನಚಿತ್ರದ ಕಾರ್ಮಿರನ್ನ ಕೊರೊನಾ ಯೋಧರು ಅಂತಾ ಈಗಾಗಲೇ ಆದೇಶ ಮಾಡಿದ್ದೇವೆ ಎಂದರು.

    ನನಗೆ ಪೂರ್ಣ ವಿಶ್ವಾಸ ಇದೆ. ಈ ವರ್ಷದ ಕೊನೆಯಲ್ಲಿ ಎಲ್ಲರಿಗೂ ಲಸಿಕೆ ಕೊಡ್ತೆವೆ ಅಂತಾ ಸುಮಾರು 10 ಕೋಟಿ ಲಸಿಕೆ ಕೊಡಬೇಕಾಗುತ್ತೆ. ಜುಲೈನಲ್ಲಿ ಬರುತ್ತೆ ಆಕ್ಟೋಬರ್ ನಿಂದ ಡಿಸೆಂಬರ್ ಒಳಗಡೆ ಲಸಿಕೆ ಕೊಡುವ ಗುರಿ ಇಟ್ಟಿಕೊಂಡಿದೆ. ಪ್ರಧಾನಿಗಳು ಲಸಿಕೆ ಕೊಡೋದಾಗಿ ಹೇಳಿದ್ದಾರೆ. ಅದರ ಪ್ರಯೋಜನ ಪಡೆದುಕೊಳ್ಳೋಣ ಅಂದರು.

    ಇನ್ನೂ ಲಸಿಕೆ ಬಗ್ಗೆ ತಪ್ಪು ಗ್ರಹಿಕೆ ಜನರಲ್ಲಿ ಇದ್ದರೆ ಜನರಿಗೆ ತಿಳಿ ಹೇಳುವುದುರ ಮೂಲಕ ತಪ್ಪು ಗ್ರಹಿಕೆಯನ್ನ ದೂರ ಮಾಡುವುದರಲ್ಲಿ ಚಲನಚಿತ್ರ ನಟರು ಭಾಗಿಯಾಗಬೇಕು ಅಂತಾ ಮನವಿ ಮಾಡಿಕೊಂಡರು.

  • ಉಸಿರುಗಟ್ಟಿ ಕಾರ್ಮಿಕರು ಸಾವು- ಹೆಚ್‍ಡಿಕೆ, ನಿಖಿಲ್ ಸಂತಾಪ

    ಉಸಿರುಗಟ್ಟಿ ಕಾರ್ಮಿಕರು ಸಾವು- ಹೆಚ್‍ಡಿಕೆ, ನಿಖಿಲ್ ಸಂತಾಪ

    ಬೆಂಗಳೂರು: ಕೆಲಸ ಮಾಡುತ್ತಿದ್ದ ಹೊರ ಗುತ್ತಿಗೆಯ ಮೂವರು ಕಾರ್ಮಿಕರು ಮ್ಯಾನ್ ಹೋಲ್‍ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಇದಕ್ಕೆ ಎಚ್ ಡಿ ಕುಮಾರಸ್ವಾಮಿ ತೀವ್ರ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ.

    ಈ ದುರ್ಘಟನೆ ನಡೆದಿರುವುದು ಅತ್ಯಂತ ದುರ್ದೈವದ ಸಂಗತಿ. ಇದಕ್ಕಾಗಿ ತೀವ್ರ ಕಂಬನಿ ಮಿಡಿಯುತ್ತೇವೆ. ಇದೊಂದು ಮನಕಲಕುವ ಸರಣಿ ಸಾವಾಗಿದೆ. ಬೇಜವಾಬ್ದಾರಿತನದಿಂದ ಗುತ್ತಿಗೆ ಕಾರ್ಮಿಕರ ಸಾವಿಗೆ ಕಾರಣನಾದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ರಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ನೀರಿಲ್ಲ, ನೀರು ತರಲು ಬಿಡ್ತಿಲ್ಲ – ಯುವಕನ ಅಳಲು


    ಜೀವನ ನಿರ್ವಹಣೆಗಾಗಿ ಲಾಕ್‍ಡೌನ್ ಲೆಕ್ಕಿಸದೆ ಕೆಲಸ ಮಾಡುತ್ತಿದ್ದ ಮೂವರು ಕೂಲಿ ಕಾರ್ಮಿಕರ ಸಾವನ್ನಪ್ಪಿದ್ದಾರೆ. ನಿರ್ಮಾಣ ಹಂತದ ಮ್ಯಾನ್ ಹೋಲ್ ಒಳಗೆ ಇಳಿದ ಮೂವರು ಕಾರ್ಮಿಕರು ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ. ರಾಮನಗರದ ಐಜೂರು ಬಳಿಯ ನೇತಾಜಿ ಪಾಪೂಲರ್ ಶಾಲೆ ಮುಂಭಾಗದಲ್ಲಿ ಈ ದುರ್ಘಟನೆ ನಡೆದಿತ್ತು. ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ರಾಮನಗರ ಜಿಲ್ಲಾ ಆಸ್ಪತ್ರೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಪರಿಸ್ಥಿತಿ ಸುಧಾರಣೆಯಾದ್ರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸಿಎಂ ಬಿಎಸ್‍ವೈ

    ಎಸ್‍ಪಿ ಕಚೇರಿಗೆ ಭೇಟಿ ನೀಡಿ ಘಟನೆ ಬಗ್ಗೆ ಎಸ್ಪಿ ಅವರಿಂದ ನಿಖಿಲ್ ಕುಮಾರಸ್ವಾಮಿ ಮಾಹಿತಿ ಪಡೆದಿದ್ದಾರೆ. ಕಾರ್ಮಿಕರ ಸಾವಿನಿಂದ ಅವರ ಕುಟುಂಬ ವರ್ಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸರ್ಕಾರದಿಂದ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

  • ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    – ತಲಾ 5 ಸಾವಿರ ನೀಡುವುದಾಗಿ ಘೋಷಿಸಿದ ರಾಕಿ ಭಾಯ್

    ಬೆಂಗಳೂರು: ಕೊರೊನಾ 2ನೇ ಅಲೆ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿದೆ. ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಭಾರೀ ನಷ್ಟವಾಗಿದ್ದು, ಬಡ ಕಲಾವಿದರು, ಕಾರ್ಮಿಕರು ತುತ್ತು ಅನ್ನಕ್ಕೂ ಗತಿ ಪರಿತಪಿಸುತ್ತಿದ್ದಾರೆ. ಅದೇ ರೀತಿ ಹಲವು ಕಲಾವಿದರು ಸಹಾಯವನ್ನು ಸಹ ಮಾಡುತ್ತಿದ್ದಾರೆ. ಇದೀಗ ನಟ ಯಶ್ ಸಹ ಇನ್ನೂ ಒಂದು ಹೆಜ್ಜೆ ಮುಂದೆ ಬಂದು ಬಡ ಕಲಾವಿದರು ಹಾಗೂ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    ಈ ಕುರಿತು ಟ್ವಿಟ್ಟರ್ ಮೂಲಕ ಪತ್ರವನ್ನು ಬಿಡುಗಡೆಗೊಳಿಸಿರುವ ಯಶ್, ಸುಮಾರು 3 ಸಾವಿರಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ. ಗಳನ್ನು ತಮ್ಮ ಸಂಪಾದನೆಯಿಂದ ನೀಡುವುದಾಗಿ ಘೋಷಿಸಿದ್ದಾರೆ.

    ಈ ಕುರಿತು ಪತ್ರ ಬಿಡುಗಡೆ ಮಾಡಿರುವ ಅವರು, ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಡಿಮೆ ಬುಡಮೇಲು ಮಾಡಿದೆ. ಅದರಲ್ಲೂ ಕಳೆದ ಒಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ ಎಂದಿದ್ದಾರೆ.

    ಸುಮಾರು 3 ಸಾವಿರಕ್ಕೂ ಹೆಚ್ಚಿನ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ.ಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

    ನಮ್ಮ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನ ಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

  • ಕಾರ್ಮಿಕರನ್ನು ತುಂಬಿದ್ದ ತೂಫಾನ್ ಪಲ್ಟಿ – 14 ಮಂದಿ ಮಹಿಳೆಯರಿಗೆ ಗಾಯ

    ಕಾರ್ಮಿಕರನ್ನು ತುಂಬಿದ್ದ ತೂಫಾನ್ ಪಲ್ಟಿ – 14 ಮಂದಿ ಮಹಿಳೆಯರಿಗೆ ಗಾಯ

    ಕಾರವಾರ: ಲಾಕ್‍ಡೌನ್ ನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಮಂಗಳೂರಿಗೆ ತೆರಳುತಿದ್ದ ಕಾರ್ಮಿಕರನ್ನು ತುಂಬಿದ್ದ ತೂಫಾನ್ ವಾಹನವೊಂದು ಪಲ್ಟಿಯಾಗಿ ಚಾಲಕ ಸೇರಿ 14 ಮಂದಿ ಮಹಿಳಾ ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಕುಮಟಾದ ರಾಷ್ಟ್ರೀಯ ಹೆದ್ದಾರಿ 66 ರ ಕೈರೆ ಬಳಿ ನಡೆದಿದೆ.

    ಕುಷ್ಟಗಿಯಿಂದ ಮಂಗಳೂರಿಗೆ 14 ಜನ ಕಟ್ಟಡ ಕಾರ್ಮಿಕರ ಕರೆದೊಯ್ಯುತ್ತಿದ್ದ ತೂಫಾನ್ ವಾಹನವನ್ನು ಚಾಲಕ ಅತೀ ವೇಗವಾಗಿ ಚಲಾಯಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರ ಕೈರೆ ಬಳಿ ಪಲ್ಟಿ ಹೊಡೆದಿದೆ. ಕೊರೊನಾ ನಿಯಮ ಮೀರಿ ಹೆಚ್ಚು ಜನರನ್ನು ತುಂಬಿ ಕರೆದೊಯ್ಯುತಿದ್ದ ಸಂದರ್ಭ ಪೊಲೀಸರು ಹಿಡಿಯುವ ಭಯದಲ್ಲಿ ತೂಫಾನ್ ವಾಹನ ಚಾಲಕ ಅತೀ ವೇಗದಿಂದ ವಾಹನ ಚಲಾಯಿಸಿರುವುದು ಘಟನೆಗೆ ಕಾರಣವಾಗಿದೆ.

    ಘಟನೆಯಲ್ಲಿ ವಾಹನದ ಚಾಲಕ ಸೇರಿ 14 ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಗಾಗಿ ಮಣಿಪಾಲ್ ಗೆ ರವಾನೆ ಮಾಡಲಾಗಿದೆ. ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.