Tag: workers

  • ಪೌರಕಾರ್ಮಿಕರಿಂದ ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛತಾ ಕಾರ್ಯ

    ಪೌರಕಾರ್ಮಿಕರಿಂದ ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛತಾ ಕಾರ್ಯ

    ಮೈಸೂರು: ದೇಶದ ನಂಬರ್ ಓನ್ ಸ್ವಚ್ಛ ನಗರಿ ಎಂಬ ಪಟ್ಟ ಕಳೆದುಕೊಂಡ ಚಿಂತೆಯಲ್ಲಿ ಮೈಸೂರು ಮಹಾನಗರಪಾಲಿಕೆ ಇದೆ. ಆದರೆ ನಂಬರ್ 1 ಪಟ್ಟಕ್ಕಿಂತಾ ಮೈಸೂರನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರನ್ನು ಮೊದಲು ಮನುಷ್ಯರಂತೆ ನೋಡುವ ಮನಃಸ್ಥಿತಿ ಬೆಳೆಸಿಕೊಳ್ಳುವ ಅಗತ್ಯ ಇದೆ.

    ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರೊಬ್ಬರು ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛಗೊಳಿಸಿದ್ದಾರೆ. ಪಾಲಿಕೆಯ ಇನ್ಸ್ ಪೆಕ್ಟರ್ ಅಣತಿಯಂತೆ ಶ್ರೀನಿವಾಸ್ ಎಂಬ ಪೌರಕಾರ್ಮಿಕರು ಮೈಸೂರಿನ ಜೆ.ಪಿ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿನ ಮ್ಯಾನ್ ಹೋಲ್ ಬರಿಗೈಯಲ್ಲಿ ಸ್ವಚ್ಛ ಮಾಡಿದ್ದಾರೆ.

    ಶ್ರೀನಿವಾಸ್ ಯಾವುದೇ ಸುರಕ್ಷತಾ ಕವಚಗಳನ್ನು ಧರಿಸದೇ ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛ ಮಾಡುತ್ತಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದ್ದಾರೆ. ಮೈಸೂರು ಮಹಾನಗರಪಾಲಿಕೆ ಇನ್ಸ್ ಪೆಕ್ಟರ್ ಶಿವಕುಮಾರ್ ಸೂಚನೆ ಮೇರೆಗೆ ಬರಿಗೈಯಲ್ಲಿ ಕೆಲಸ ಮಾಡಿಸಲಾಗಿದೆ ಎನ್ನುವ ಆರೋಪವಿದೆ.

    ಇತ್ತೀಚೆಗೆ ಮೈಸೂರಿನ ಚಾಮುಂಡಿಬೆಟ್ಟ ಗ್ರಾಮಪಂಚಾಯ್ತಿ ವ್ಯಾಪ್ತಿಯ ತಾವರೆಕಟ್ಟೆ ಗ್ರಾಮದಲ್ಲೂ ಪೌರಕಾರ್ಮಿಕರೋರ್ವರನ್ನು ಮ್ಯಾನ್ ಹೋಲ್‍ಗೆ ಇಳಿಸಿದ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ತಪ್ಪು ಮಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನು ಆ ಸ್ಥಾನದಿಂದ ಸರ್ಕಾರ ವಜಾ ಕೂಡ ಮಾಡಿತ್ತು.

    https://www.youtube.com/watch?v=NaK6Vp8nuwo

  • ಬೆಳೆ ನಷ್ಟ ಪರಿಹಾರ ಆಯ್ತು, ಇದೀಗ ನರೇಗಾ ಸರದಿ- ಕೂಲಿ ಕಾರ್ಮಿಕರ ಖಾತೆಗೆ ಬರೀ 1 ರೂ. ಜಮೆ

    ಬೆಳೆ ನಷ್ಟ ಪರಿಹಾರ ಆಯ್ತು, ಇದೀಗ ನರೇಗಾ ಸರದಿ- ಕೂಲಿ ಕಾರ್ಮಿಕರ ಖಾತೆಗೆ ಬರೀ 1 ರೂ. ಜಮೆ

    ಚಿತ್ರದುರ್ಗ: ಏಟು ತಿಂದ ರೈತರಿಗೆ ನೂರು ರೂಪಾಯಿಯ ಚೆಕ್ ನೀಡಿದ್ದಾಯ್ತು. ಬೆಳೆ ಪರಿಹಾರ ರೂಪದಲ್ಲಿ 1 ರೂ. ಕೊಟ್ಟು ಅವಮಾನ ಮಾಡಿದ್ದಾಯ್ತು. ಇದೀಗ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದವರ ಸರದಿ. ಬಿರುಬಿಸಿಲಲ್ಲಿ ದುಡಿದವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದು ಬರೀ 1 ರೂಪಾಯಿ.

    ಇದು ಚಿತ್ರದುರ್ಗದ ದಂಡಿನಕುರುಬರಹಟ್ಟಿಯ ನೂರಾರು ಕೂಲಿ ಕಾರ್ಮಿಕರಿಗೆ ಆದ ಮಹಾ ದೋಖಾ. ನಿಗದಿ ಮಾಡಿದ ಕೂಲಿ 224 ರೂಪಾಯಿ ಕೊಡದೇ ಕೇವಲ 1 ರೂಪಾಯಿ ಕೊಟ್ಟು ಕಾರ್ಮಿಕರಿಗೆ ಭಾರೀ ವಂಚನೆ ಮಾಡಲಾಗಿದೆ. ಇದ್ಯಾವುದು ಸ್ವಾಮಿ ಅಂತಾ ಕೇಳಿದ್ರೆ ಬಡ್ಡಿ ಹಣ ಅಂತಾರೆ ಬ್ಯಾಂಕ್‍ನವ್ರು. ಅಲ್ಲಾ ಸ್ವಾಮಿ ಅಸಲೇ ಇಲ್ಲ, ಬಡ್ಡಿ ಹೆಂಗೆ? ಅನ್ನೋದು ಕೂಲಿ ಕಾರ್ಮಿಕರ ಪ್ರಶ್ನೆ.

    ಇನ್ನು, ಈ ಬಗ್ಗೆ ಸರಿಯಾದ ಮಾಹಿತಿ ನೀಡದೇ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಪಿಡಿಓ ಕದ್ದು ಮುಚ್ಚಿ ಓಡಾಡ್ತಿದ್ದಾರೆ.

  • ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಹಟ್ಟಿ ಚಿನ್ನದ ಗಣಿ ಕಾರ್ಮಿಕರು

    ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಗಣಿ ಸಂಸ್ಥೆಯಾದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

    ಕಂಪೆನಿಯು ವಿಭಾಗೀಯ ಸ್ಟೋರ್ ಪ್ರಾರಂಭಿಸಲು ಸಹಕಾರ ಸಂಘದ ವ್ಯವಹಾರಗಳನ್ನ ನಿಲ್ಲಿಸಿದ್ದು ಸುಮಾರು ವರ್ಷಗಳಿಂದ ದುಡಿದ ಕಾರ್ಮಿಕರನ್ನ ಕೈಬಿಟ್ಟಿದೆ. ಹೀಗಾಗಿ ಹಟ್ಟಿ ಚಿನ್ನದ ಗಣಿ ಸಹಕಾರ ಸಂಘದ 37 ಜನ ಕಾರ್ಮಿಕರಿಗೆ 22 ತಿಂಗಳಿನಿಂದ ಕೆಲಸವೂ ಇಲ್ಲ ಸಂಬಳವೂ ಇಲ್ಲ. 750 ದಿನಗಳಿಂದ ಶಾಂತಿಯುತ ಹೋರಾಟ ನಡೆಸಿದರೂ ಕಾರ್ಮಿಕರ ಸಮಸ್ಯೆಗೆ ಗಣಿ ಆಡಳಿತ ಮಂಡಳಿ ಸ್ಪಂದನೆ ನೀಡಿಲ್ಲ. ಹೀಗಾಗಿ ಕಾರ್ಮಿಕರು ಗಣಿಯ ಪ್ರಧಾನ ವ್ಯವಸ್ಥಾಪಕರ ಮೂಲಕ ಉದ್ಯೋಗ ಕೊಡಿ ಇಲ್ಲವೇ 37 ಜನ ಕಾರ್ಮಿಕರ ಕುಟುಂಬಳಿಗೆ ದಯಾಮರಣಕ್ಕೆ ಅವಕಾಶ ಕೊಡಿ ಅಂತ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

    ಫೆಬ್ರವರಿ 14 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ. ಹೋರಾಟದಲ್ಲಿ ಯಾರಿಗೆ ಏನೇ ಆದ್ರೂ ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿಯೇ ಕಾರಣ ಅಂತ ಕಾರ್ಮಿಕರು ಎಚ್ಚರಿಸಿದ್ದಾರೆ.

    ಈಗಾಗಲೇ ಸಹಕಾರ ಸಂಘವನ್ನ ಸಮಾಪನಗೊಳಿಸಿ ಕಂಪೆನಿಯೇ ಸ್ಟೋರ್ ಪ್ರಾರಂಭಿಸಿದೆ. ಆದ್ರೆ ಕೆಲಸಗಾರರನ್ನ ಕಂಪೆನಿಯಲ್ಲಿ ಸೇರಿಸಿಕೊಳ್ಳದೇ ಸಂಬಳವನ್ನೂ ನೀಡದೆ ವೇತನ ಒಡಂಬಡಿಕೆಯ ನಿಯಮವನ್ನ ಉಲ್ಲಂಘನೆ ಮಾಡಿದೆ. ಕಾರ್ಮಿಕ ನೀತಿಯನ್ನ ಬದಿಗೊತ್ತಿ ತೆಗೆದುಕೊಂಡಿರುವ ನಿರ್ಧಾರದಿಂದ 37 ಜನ ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿವೆ ಎಂದು ದಿ ಕೋ-ಆಪರೇಟಿವ್ ಸ್ಟೋರ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಇಮಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.