Tag: workers

  • ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

    ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

    ಯಾದಗಿರಿ: ಸ್ಥಳೀಯ ಚುನವಾಣೆಗೂ ಮುನ್ನ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ಬಳಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ.

    ಗುರುವಾರ ಸಂಜೆ ಸುರಪುರ ಪಟ್ಟಣದ ವಡ್ಡರ ಓಣಿಯ ವಾರ್ಡ್ ನಂಬರ್ 28 ಬಳಿ ಪ್ರಚಾರಕ್ಕೆ ಬಿಜೆಪಿಯವರು ತೆರಳಿದ್ದರು. ಆಗ ಕೆಲವರು ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.

    ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ಯಡಾ ಮಾರ್ಟಿನ್, ಗುಂಪನ್ನು ಚದುರಿದ್ದಾರೆ. ಸುರಪುರ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

    ವಿಧಾನಸಭಾ ಚುನಾವಣೆ ಮುನ್ನವೂ ಸುರಪುರ ಪಟ್ಟಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳವಾಗಿತ್ತು. ಈಗ ಇದು ಮರುಕಳಿಸಿದ್ದು, ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾರಾಮಾರಿ!

    ಮಂಗ್ಳೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾರಾಮಾರಿ!

    ಮಂಗಳೂರು: ನಗರದಲ್ಲಿ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ಸ್ವ-ಪಕ್ಷೀಯ ಕಾರ್ಯಕರ್ತರೇ ಹೊಡೆದಾಡಿಕೊಂಡಿದ್ದಾರೆ.

    ನಗರದ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆಯ ಕಾರ್ಯಕ್ರಮಕ್ಕೆ ಮಾಜಿ ಸಚಿವ ರಮಾನಾಥ ರೈ ಮತ್ತು ಐವನ್ ಡಿಸೋಜ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. ಈ ವೇಳೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮತ್ತು ಐವನ್ ಡಿಸೋಜ ಬೆಂಬಲಿಗರ ನಡುವೆ ರಾಜಕೀಯ ವೈಷಮ್ಯದಿಂದಾಗಿ ಸಭೆಯಲ್ಲೇ ಮಾತಿನ ಚಕಮಕಿ ಏರ್ಪಟ್ಟಿದೆ.

    ಸಭೆಯ ಮಧ್ಯೆಯೇ ಎರಡು ಬಣಗಳ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು, ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಐವನ್ ಡಿಸೋಜ ಜೊತೆಗೆ ಗುರುತಿಸಿಕೊಂಡಿದ್ದ ಪುನೀತ್ ಶೆಟ್ಟಿ ಮೇಲೆ ಮಿಥುನ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಯುತ್ತಿದ್ದಂತೆ ಸ್ವತಃ ಐವನ್ ಡಿಸೋಜ ಹೋಗಿ ತನ್ನ ಆಪ್ತನನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪಂದಿರ ಹೆಸರಲ್ಲಿ ಶಾಸಕ ಮೊಯ್ದಿನ್ ಬಾವಾ, ಅಭಯ್‍ಚಂದ್ರ ಜೈನ್ ನಡುಬೀದಿಯಲ್ಲಿ ಕಿತ್ತಾಟ- ವಿಡಿಯೋ ನೋಡಿ

    ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೆ ಸ್ಥಳದಲ್ಲಿ ಪೊಲೀಸರು ಹಾಗೂ ಮಾಜಿ ಸಚಿವ ರಮಾನಾಥ ರೈ ಮತ್ತು ಐವನ್ ಡಿಸೋಜರ ಸಮ್ಮುಖದಲ್ಲೇ ಹೊಡೆದಾಡಿಕೊಂಡಿದ್ದು, ಮುಖಂಡರುಗಳ ಮುಜುಗರಕ್ಕೆ ಕಾರಣವಾಯಿತು.

    https://www.youtube.com/watch?v=Ik3cWGc4si8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗೇಟ್‍ಪಾಸ್ ಶಿಕ್ಷೆ!

    ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗೇಟ್‍ಪಾಸ್ ಶಿಕ್ಷೆ!

    ಬೆಂಗಳೂರು: ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿದ್ದಕ್ಕೆ ಬಿಬಿಎಂಪಿ ತನ್ನ ಪೌರಕಾರ್ಮಿಕರಿಗೆ ಗೇಟ್ ಪಾಸ್ ನೀಡಿದೆ.

    ವೇತಕ ಹೆಚ್ಚಳಕ್ಕಾಗಿ ಆಗ್ರಹಿಸಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿ ಗೇಟ್‍ಪಾಸ್ ಶಿಕ್ಷೆ ನೀಡಿದೆ. ತನ್ನ ಎಂಟೂ ವಲಯಗಳಲ್ಲೂ ಪೌರ ಕಾರ್ಮಿಕರಿಗೆ ಗೇಟ್‍ಪಾಸ್ ಶಿಕ್ಷೆ ನೀಡಿದ್ದು, ಈಗಾಗಲೇ 1,700 ಮಂದಿಗೆ ಕೆಲಸಕ್ಕೆ ಬರಬೇಡಿ ಎಂದು ಸೂಚಿಸಿದೆ.

    ಕಂಟ್ರಾಕ್ಟರ್ ಪದ್ದತಿ ಇದ್ದಾಗ ಪಿಎಫ್, ಇಎಸ್‍ಐ ಕಟ್ಟದೆ ಇರುವವರನ್ನ ಟಾರ್ಗೆಟ್ ಮಾಡಿರುವ ಪಾಲಿಕೆಯು ಪಿಎಫ್, ಇಎಸ್‍ಐ ಕಟ್ಟದೇ ಇರುವ ಪೌರಕಾರ್ಮಿಕರನ್ನ `ಒಂದು ವರ್ಷದೊಳಗಿನ ಪೌರ ಕಾರ್ಮಿಕರು’ ಅಂತ ಗುರುತಿಸಿ ಗೇಟ್‍ಪಾಸ್ ನೀಡುತ್ತಿದ್ದಾರೆ. ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳ ನಡುವಿನ ಕಮಿಷನ್ ಒಪ್ಪಂದಕ್ಕೆ ಪೌರ ಕಾರ್ಮಿಕರು ಬಲಿಯಾಗಿದ್ದು, ಬಿಬಿಎಂಪಿ ನಿರ್ಧಾರಕ್ಕೆ ಪೌರಕಾರ್ಮಿಕರು ಕಂಗಾಲಾಗಿದ್ದಾರೆ.

    ಸಂಬಳ ಆಗಿಲ್ಲ ಅಂತ ಪೌರಕಾರ್ಮಿಕ ಮಹಿಳೆಯರು ತಮ್ಮ ಚಿನ್ನದ ಕಿವಿಯೋಲೆ, ಆಭರಣಗಳನ್ನ ಅಡವಿಟ್ಟು ಜೀವನ ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಒಮ್ಮೆಲೆ ಕೆಲಸಕ್ಕೆ ಬರಬೇಡಿ ಎಂಬ ತೀರ್ಮಾನದಿಂದ ಪೌರಕಾರ್ಮಿಕರು ಬೇಸತ್ತು ಹೋಗಿದ್ದಾರೆ. ಅಲ್ಲದೇ ವೇತನ ಸಿಕ್ಕಿಲ್ಲ ಅಂತ ಸಾಲ ಮಾಡಿದ್ದೇವೆ ಈಗ ಬದುಕು ನಡೆಸೋದು ಹೇಗೆ ಅಂತ ಕಣ್ಣೀರು ಸುರಿಸುತ್ತಿದ್ದು, ಬಿಬಿಎಂಪಿ ಏಕಾಏಕಿ ನಿರ್ಧಾರದಿಂದ ಮಕ್ಕಳ ಶಾಲಾ ಶಿಕ್ಷಣದ ಶುಲ್ಕ ಕಟ್ಟಲು ದುಡ್ಡಿಲ್ಲ ಹಾಗೂ ಮನೆ ಬಾಡಿಗೆ ಕಟ್ಟುವುದಕ್ಕೆ ಸಹ ದುಡ್ಡಿಲ್ಲ ಎಂದು ಪೌರಕಾರ್ಮಿಕರು ಗೋಳಾಡುತ್ತಿದ್ದಾರೆ.

  • ನಾಯಕ ಜನಾಂಗದ ಸಭೆಯಲ್ಲಿ ಸ್ವಾಮೀಜಿ ಮೇಲೆಯೇ ಮುಗಿಬಿದ್ದ ಕಾರ್ಯಕರ್ತರು!

    ನಾಯಕ ಜನಾಂಗದ ಸಭೆಯಲ್ಲಿ ಸ್ವಾಮೀಜಿ ಮೇಲೆಯೇ ಮುಗಿಬಿದ್ದ ಕಾರ್ಯಕರ್ತರು!

    ಬೆಂಗಳೂರು: ನಗರದ ಕಾನಿಷ್ಕ ಹೋಟೆಲ್ ನಲ್ಲಿ ನಡೆದ ನಾಯಕ ಜನಾಂಗದ ಸಭೆಯಲ್ಲಿ ಕಾರ್ಯಕರ್ತರು ಸ್ವಾಮೀಜಿಯ ವಿರುದ್ಧವೇ ಗಲಾಟೆ ನಡೆಸಿದ್ದಾರೆ.

    ಸಮ್ಮಿಶ್ರ ಸರ್ಕಾರದಲ್ಲಿ ನಾಯಕ ಜನಾಂಗದವರಿಗೆ ಕೇವಲ ಒಂದೇ ಒಂದು ಸಚಿವ ಸ್ಥಾನ ನೀಡಿದ್ದರ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಗುರುಕುಲ ಪೀಠದ ಬ್ರಹ್ಮಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಇಂದು ನಗರದ ಕಾನಿಷ್ಕ ಹೋಟೆಲ್ ನಲ್ಲಿ ಸಭೆ ನಡೆದಿತ್ತು. ಈ ವೇಳೆ ಚಿಕ್ಕಬಳ್ಳಾಪುರದ ನಾಯಕ ಜನಾಂಗದ ಕಾರ್ಯಕರ್ತರ ಗುಪೊಂದು ಸಭೆಯ ನಡುವೆಯೇ ಸ್ವಾಮೀಜಿಯ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿದೆ. ಸಭೆಯಲ್ಲಿ ಸ್ವಾಮೀಜಿಗಳು ಹಾಗೂ ಇನ್ನೊಂದು ಗುಂಪುಗಳ ನಡುವೆ ತೀವ್ರ ಜಟಾಪಟಿ ನಡೆದಿದೆ.

    ಈ ವೇಳೆ ಕೆಲ ನಾಯಕ ಜನಾಂಗದ ಕಾರ್ಯಕರ್ತರು ಬ್ರಹ್ಮಾನಂದ ಸ್ವಾಮಿ ನಾಯಕ ಜನಾಂಗದ ಸ್ವಾಮೀಜಿಯೇ ಅಲ್ಲ ಎಂದು ಗಲಾಟೆ ಮಾಡಿದರು. ಬ್ರಹ್ಮಾನಂದ ಸ್ವಾಮೀಜಿಯ ಜಾತಿ ಸರ್ಟಿಫಿಕೇಟ್ ನೀಡುವಂತೆ ಆಗ್ರಹಿಸಿದ್ದಾರೆ. ಬ್ರಹ್ಮಾನಂದ ಸ್ವಾಮೀಜಿಯು ಈ ಹಿಂದೆ ರೈತರಿಗೆ ಸಾಲಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಸಭೆಯಲ್ಲಿ ಸ್ವಾಮೀಜಿ ವಿರುದ್ಧ ಗಲಾಟೆ ನಡೆಯುತ್ತಿದೆ ಎನ್ನುವ ವಿಚಾರ ತಿಳಿದು ಸ್ಥಳಕ್ಕೆ ಉಪ್ಪಾರಪೇಟೆ ಠಾಣೆಯ ಪೊಲೀಸರು ಆಗಮಿಸಿದ್ದಾರೆ. ವಿಕೋಪಕ್ಕೆ ಹೋಗುತ್ತಿದ್ದ ಗಲಾಟೆಯನ್ನು ಪೊಲೀಸರು ತಡೆದು ಕಾರ್ಯಕರ್ತರನ್ನು ಚದುರಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

    https://www.youtube.com/watch?v=wzRuSyP53KU

  • ವಿಷಕಾರಿ ಅನಿಲ ಸೋರಿಕೆಯಿಂದಾಗಿ 6 ಜನ ಕಾರ್ಮಿಕರು ದುರ್ಮರಣ

    ವಿಷಕಾರಿ ಅನಿಲ ಸೋರಿಕೆಯಿಂದಾಗಿ 6 ಜನ ಕಾರ್ಮಿಕರು ದುರ್ಮರಣ

    ಹೈದರಾಬಾದ್: ಖಾಸಗಿ ಸ್ಟೀಲ್ ಮಿಲ್ ರೋಲಿಂಗ್ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಆರು ಜನ ಕಾರ್ಮಿಕರು ಮೃತಪಟ್ಟಿರುವ ಘಟನೆ ತೆಲಂಗಾಣದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

    ತಡಿಪತ್ರಿ ಪ್ರದೇಶದಲ್ಲಿದ್ದ ಸ್ಟೀಲ್ ಮಿಲ್ ಘಟಕದಲ್ಲಿ ನಿರ್ವಹಣೆ ಕಾರ್ಯ ಮುಗಿದ ನಂತರ ಪರೀಕ್ಷೆ ನಡೆಸುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿದ್ದರಿಂದ ಅವಘಢ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಅಶೋಕ್ ಕುಮಾರ್ ತಿಳಿಸಿದ್ದಾರೆ.

    ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರ್ಬನ್ ಮೊನಾಕ್ಸೈಡ್ ಸೋರಿಕೆಯೇ ಅವಘಡಕ್ಕೆ ಕಾರಣವಾಗಿದೆ. ಸದ್ಯಕ್ಕೆ ರಕ್ಷಣಾಕಾರ್ಯ ಮುಂದುವರೆದಿದ್ದು, ಇನ್ನು ಎಷ್ಟು ಜನ ಗಾಯಗೊಂಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ತಡಿಪತ್ರಿಯ ಸ್ಟೀಲ್ ಘಟಕವು ಬ್ರೆಜಿಲಿಯನ್ ನ ಗೇರ್ಡಾ ಸಂಸ್ಥೆಗೆ ಸೇರಿದ್ದು, ಅತಿ ಹೆಚ್ಚು ಸ್ಟೀಲ್ ಅನ್ನು ಉತ್ಪಾದಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಎನ್. ಚೀನಾ ರಾಜಪ್ಪ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ಜೆಸ್ಕಾಂ ಗುತ್ತಿಗೆದಾರನ ನಿರ್ಲಕ್ಷಕ್ಕೆ ಇಬ್ಬರು ಕಾರ್ಮಿಕರು ಬಲಿ

    ಜೆಸ್ಕಾಂ ಗುತ್ತಿಗೆದಾರನ ನಿರ್ಲಕ್ಷಕ್ಕೆ ಇಬ್ಬರು ಕಾರ್ಮಿಕರು ಬಲಿ

    ಕೊಪ್ಪಳ: ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ನಡೆದಿದೆ.

    ಹನುಮಂತಪ್ಪ(32) ಹಾಗೂ ಮೆಹಬೂಬ್ ಸಾಬ್(45) ಮೃತ ಕಾರ್ಮಿಕರಾಗಿದ್ದಾರೆ. ಇವರು ಗಂಗಾವತಿ ತಾಲೂಕಿನ ವೆಂಕಟಗಿರಿ ನಿವಾಸಿಗಳಾಗಿದ್ದು, ವಿದ್ಯುತ್ ದುರಸ್ಥಿ ವೇಳೆ ಅವಘಡ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ವಿದ್ಯುತ್ ತಂತಿ ಲೈನಿಂಗ್ ಕಾಮಗಾರಿ ನಡೆಯುತ್ತಿದ್ದು, ಜೆಸ್ಕಾಂ ಗುತ್ತಿಗೆದಾರ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಬೇಜವಾಬ್ದಾರಿಯಿಂದ ಕಾಮಗಾರಿ ನಡೆಸುತ್ತಿದ್ದ. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆ. ಕೂಡಲೇ ಮೂವರನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಜೆಸ್ಕಾಂ ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಹಲ್ಲೆ ಮಾಡಿದ್ದಕ್ಕೆ ಮನನೊಂದು ಕಾಂಗ್ರೆಸ್ ಕಾರ್ಯಕರ್ತ ಆತ್ಮಹತ್ಯೆ!

    ಹಲ್ಲೆ ಮಾಡಿದ್ದಕ್ಕೆ ಮನನೊಂದು ಕಾಂಗ್ರೆಸ್ ಕಾರ್ಯಕರ್ತ ಆತ್ಮಹತ್ಯೆ!

    ಕಲಬುರಗಿ: ತನ್ನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಕ್ಕೆ ಮನನೊಂದು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬುರು ಗ್ರಾಮದಲ್ಲಿ ನಡೆದಿದೆ.

    ಭೀಮರಾಯ್ ಆತ್ಮಹತ್ಯೆ ಮಾಡಿಕೊಂಡ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಇವರು ಮೂಲತಃ ಗೊಬ್ಬುರು ಗ್ರಾಮದ ನಿವಾಸಿ. ಕಳೆದ ವಿಧಾನಸಭಾ ಫಲಿತಾಂಶ ಹೊರಬಿದ್ದ ನಂತರ ಗ್ರಾಮದಲ್ಲಿ ನಡೆದ ವಿಜಯೋತ್ಸವ ಸಮಾರಂಭ ನಡೆದಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತ ಹೂಗಾರ ಗುತ್ತೇದಾರ್ ಎಂಬವರ ಮೇಲೆ ಹಲ್ಲೆ ನಡೆದಿತ್ತು.

    ಈ ಸಂಬಂಧ ಮೂರು ದಿನಗಳ ಹಿಂದೆ ಹೂಗಾರ್ ಮನೆಯವರು ಭೀಮರಾಯ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದರು. ತನ್ನ ಕುಟುಂಬದವರ ಮೇಲೆ ಬಿಜೆಪಿಯವರು ಹಲ್ಲೆ ಮಾಡಿದ್ದರಿಂದ ಮನನೊಂದು ಭೀಮರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನೆ ಸಂಬಂಧವಾಗಿ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಮೇಲೆ ಮರಬಿದ್ದು ಓರ್ವ ಸಾವು, ಮೂವರ ಸ್ಥಿತಿ ಗಂಭೀರ

    ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಮೇಲೆ ಮರಬಿದ್ದು ಓರ್ವ ಸಾವು, ಮೂವರ ಸ್ಥಿತಿ ಗಂಭೀರ

    ಮಡಿಕೇರಿ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಮರ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ದುರ್ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ನಡೆದಿದೆ.

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಗ್ರಾಮದ ಪಂಚವಳ್ಳಿ ನಿವಾಸಿ ರಾಜು (36) ಮೃತ ಕಾರ್ಮಿಕ. ಚಾಲಕ ಸ್ವಾಮಿ ಹಾಗೂ ಜೊತೆಯಲ್ಲಿದ್ದ ಸುನೀಲ್ (28) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಕಾರ್ಮಿಕರು ಪಾಲಿಬೆಟ್ಟ ಹೊಸಳ್ಳಿ ಪ್ರದೇಶದ ತೋಟದ ಕೆಲಸ ಮುಗಿಸಿ, ಪಿರಿಯಾಪಟ್ಟಣ ಸಮೀಪದ ಅನುಗೋಡುವಿನ ತಮ್ಮ ಊರಿಗೆ ಟಾಟ ಏಸ್ ವಾಹನದಲ್ಲಿ ತೆರಳುತ್ತಿದ್ದರು. ವಾಹನದಲ್ಲಿ ಸುಮಾರು 13 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ಬರುತ್ತಿದ್ದ ಟಾಟಾ ಏಸ್ ಮೇಲೆ ಮರ ಬಿದ್ದಿದ್ದು, ಚಾಲಕನ ಸಮೀಪವೇ ಕುಳಿತ್ತಿದ್ದ ರಜು ತಲೆಯ ಭಾಗಕ್ಕೆ ಮರ ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಭಾಗದಲ್ಲಿ ಕುಳಿತ್ತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಇವರು ದುಬಾರೆ ಎಸ್ಟೇಟ್‍ನ ಕಾರ್ಮಿಕರಾಗಿದ್ದು, ಅನುಗೋಡು ನಿವಾಸಿಗಳಾಗಿದ್ದಾರೆ.

    ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸ್ವಾಮಿ, ಸುನೀಲ್ ಹಾಗೂ ಮತ್ತೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದಂತೆ ಸಣ್ಣ ಪುಟ್ಟ ಗಾಯವಾಗಿರುವ ಕಾರ್ಮಿಕರನ್ನು ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣೆ ಎಸ್‍ಐ ಸುಬ್ರಹ್ಮಣಿ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮ್ಯಾನ್ ಹೋಲ್ ಶುಚಿಗೊಳಿಸಲು ಗುಂಡಿಗಿಳಿದ ಮೂವರು ಕಾರ್ಮಿಕರ ಸಾವು

    ಮ್ಯಾನ್ ಹೋಲ್ ಶುಚಿಗೊಳಿಸಲು ಗುಂಡಿಗಿಳಿದ ಮೂವರು ಕಾರ್ಮಿಕರ ಸಾವು

    ಬೆಂಗಳೂರು: ಎಸ್ ಟಿ ಪಿ ಪ್ಲಾಂಟ್ ಶುಚಿಗೊಳಿಸಲು ಹೋಗಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ನಗರದ ಸೋಮಸುಂದರ ಪಾಳ್ಯದ ಸಫಲ್ ಅಪಾರ್ಟ್ ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಮೃತರು ಮಾದೇವಯ್ಯ, ನಾರಾಯಣಸ್ವಾಮಿ ಹಾಗೂ ಶ್ರೀನಿವಾಸ್ ಎಂದು ತಿಳಿದು ಬಂದಿದೆ.

    ಮ್ಯಾನ್ ಹೋಲ್‍ಗಳನ್ನು ಶುಚಿಗೊಳಿಸಲು ಕಾರ್ಮಿಕರನ್ನು ಬಳಸಬಾರದೆಂದು ಸುಪ್ರೀಂ ಕೋರ್ಟ್ ನಿಷೇಧ ಹೇರಿದ್ದರೂ ಗುತ್ತಿಗೆದಾರರು ಯಂತ್ರವನ್ನು ಬಳಸದೆ ಖಾಸಗಿ ಕೂಲಿ ಕಾರ್ಮಿಕರನ್ನು ಪ್ಲಾಂಟ್ ನಲ್ಲಿ ಇಳಿಸಿದ್ದು, ಈ ವೇಳೆ ವಿಷಯುಕ್ತ ಗಾಳಿ ಸೇವಿಸಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಮೂರು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಸ್ಥಳೀಯ ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ ಹಾಗೂ ಶಾಸಕ ಸತೀಶ್ ರೆಡ್ಡಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಘಟನಾ ಸ್ಥಳದಲ್ಲಿ ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ವೇಳೆ ಅಕ್ರೋಶಗೊಂಡ ಮೃತನ ಸಂಬಂಧಿಕರು ಅಪಾರ್ಟ್ ಮೆಂಟ್ ಅಸೋಸಿಯೇಷನ್ ಸದಸ್ಯನ ಮೇಲೆ ಹಲ್ಲೆ ನಡೆಸಿದ್ದಾರೆ.

  • ವೈಟಿಪಿಎಸ್ ನಲ್ಲಿ ವಿದ್ಯುತ್ ಅವಘಡ- ಕಾರ್ಮಿಕನ ಸ್ಥಿತಿ ಗಂಭೀರ

    ವೈಟಿಪಿಎಸ್ ನಲ್ಲಿ ವಿದ್ಯುತ್ ಅವಘಡ- ಕಾರ್ಮಿಕನ ಸ್ಥಿತಿ ಗಂಭೀರ

    ರಾಯಚೂರು: ವಿದ್ಯುತ್ ಅವಘಡದಿಂದಾಗಿ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್)ನಲ್ಲಿ ನಡೆದಿದೆ.

    ಸ್ವಿಚ್ ಗೇರ್ ನಲ್ಲಿ ಬೋರ್ಡ್ ಬದಲಿಸುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಕೆಎಎಸ್‍ಎಲ್ ಕಂಪನಿ ಗುತ್ತಿಗೆ ಕಾರ್ಮಿಕ ಮಹೇಶ್ ಗಾಯಗೊಂಡಿದ್ದಾರೆ. ಹೊಟ್ಟೆ, ತೊಡೆ, ಕಾಲಿನ ಭಾಗ ಭಾಗಶ: ಸುಟ್ಟಿದ್ದು, ಮಹೇಶ್ ಸ್ಥಿತಿ ಗಂಭೀರವಾಗಿದೆ.

    ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಮಹೇಶ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಸೌಲಭ್ಯ ಹಾಗೂ ವೈದ್ಯರಿಲ್ಲದ ಕಾರಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ವೈಟಿಪಿಎಸ್ ಹಾಗೂ ಉಪ ಗುತ್ತಿಗೆ ಪಡೆದಿರುವ ಕೆಎಎಸ್‍ಎಲ್ ಕಂಪನಿ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕನಿಷ್ಠ ಮಟ್ಟದ ಸುರಕ್ಷತೆಯೂ ಇಲ್ಲದೆ ವಿದ್ಯುತ್ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಗಾಯಗಳಾಗಿವೆ.

    ಘಟನೆಯಿಂದ ಭಯಭೀತರಾಗಿರುವ ವೈಟಿಪಿಎಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.