ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಅವರು ವಾರಣಾಸಿಯಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ನಿಮ್ಮ ಅದ್ಭುತ ಸ್ವಾಗತಕ್ಕೆ ನಾನು ಕೃತಜ್ಞನಾಗಿದ್ದೇನೆ. ಗುರುವಾರ ನಡೆದ ರೋಡ್ ಶೋನಲ್ಲಿ ನಾನು ವಾರಣಾಸಿಯ ಪ್ರತಿ ನಿವಾಸಿಗಳನ್ನು ನನ್ನ ಕುಟುಂಬದವರಂತೆ ನೋಡಿದ್ದೇನೆ. ಕಳೆದ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ತಿರುಗುತ್ತಿದ್ದೇನೆ. ನಾನು, ಅಮಿತ್ ಶಾ ಹಾಗೂ ಯೋಗಿ ಅದಿತ್ಯಾನಾಥ್ ಈ ಪಕ್ಷದ ಕಾರ್ಯಕರ್ತರು ಎಂದರು.
ನಾನು ಕಾರ್ಯಕರ್ತರನ್ನು ಭೇಟಿ ಮಾಡಲು ಎಂದಿಗೂ ನಿರಾಕರಿಸಿಲ್ಲ. ಅವರು ನನ್ನನ್ನು ಭೇಟಿ ಮಾಡಬೇಕು ಎಂದಾಗಲೆಲ್ಲಾ ನಾನು ಅವರನ್ನು ಭೇಟಿ ಮಾಡಿದ್ದೇನೆ. ನಾವು ಭಾರತದ ಚಿಕ್ಕ ಯೋಧರು. ದೇಶಕ್ಕಾಗಿ ಕೆಲಸ ಮಾಡಲು ನಾನು ಬಂದಿದ್ದೇನೆ. ಈ ಚುನಾವಣೆ ಮೋದಿ ಬಗ್ಗೆ ಅಲ್ಲ. ಈ ಚುನಾವಣೆ ಕಾರ್ಯಕರ್ತರದ್ದು. ಪ್ರತಿಯೊಂದು ಮತ ಇಲ್ಲಿ ಮುಖ್ಯವಾಗುತ್ತದೆ. ಮೋದಿ ಗೆಲ್ಲುತ್ತಾರೋ ಸೋಲುತ್ತಾರೋ ಎಂಬುದನ್ನು ಮರೆತುಬಿಡಿ. ಏಕೆಂದರೆ ಏನೇ ಆದರೂ ಗಂಗಾಮಾತೆ ಅದನ್ನು ನೋಡುತ್ತಿರುತ್ತಾಳೆ ಅಂದ್ರು.
ಈ ರಾಷ್ಟ್ರೀಯ ಚುನಾವಣೆಯಲ್ಲಿ ಎರಡು ಅಂಶಗಳು ಇದೆ. ಮೊದಲು ವಾರಣಾಸಿಯಲ್ಲಿ ಗೆಲುವು ಸಾಧಿಸಬೇಕು. ನನಗೆ ಅನಿಸುತ್ತೆ ನಾವು ಈಗಾಗಲೇ ಇಲ್ಲಿ ಗೆದ್ದಿದ್ದೇವೆ. ಇದಕ್ಕೆ ರೋಡ್ ಶೋನಲ್ಲಿ ಇದ್ದ ಜನರೇ ಸಾಕ್ಷಿ. ಮತ್ತೊಂದು ಪ್ರಜಾಪ್ರಭುತ್ವದ ಗೆಲುವು ಆಗಬೇಕು. ಇಡೀ ಭಾರತ, ದೇಶಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಬೇಕು ಎಂದು ಹೇಳುತ್ತಿದೆ. ಸರ್ಕಾರ ಆಯ್ಕೆ ಮಾಡಿಕೊಳ್ಳುವುದು ಈ ದೇಶದ ಪ್ರಜೆಯ ಕೈಯಲ್ಲಿದೆ. ಆದರೆ ಸರ್ಕಾರ ನಡೆಸುವುದು ನಮ್ಮ ಜವಾಬ್ದಾರಿ ಎಂದರು.
ಯಾವುದೇ ಮತಗಟ್ಟೆಯಲ್ಲಿ ನನ್ನ ಕಾರ್ಯಕರ್ತರು ಸೋಲು ಕಂಡರೆ ನಾನು ನನ್ನ ಗೆಲುವನ್ನು ಎಂಜಾಯ್ ಮಾಡುವುದಿಲ್ಲ. ಈಗ ಒಂದು ಮಂತ್ರ ಇರಬೇಕಿತ್ತು. ‘ಮೇರಾ ಬೂತ್, ಸಬ್‍ಸೇ ಮಜ್ಬೂತ್ (ನನ್ನ ಮತ, ನನ್ನ ಶಕ್ತಿ). ಎಲ್ಲ ವೋಟಿಂಗ್ ದಾಖಲೆಗಳನ್ನು ಮುರಿಯಬೇಕು ಎಂದು ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ನೀವು ಮೋದಿ ಅವರ ಸೈನಿಕ ಆಗಿದ್ದರೆ, ಟಿವಿಯಲ್ಲಿ ಕುಳಿತು ಡಿಬೇಟ್ ಮಾಡುವವರ ಮಾತುಗಳನ್ನು ಕೇಳಬೇಡಿ. ಏಕೆಂದರೆ ರಾಜಕೀಯಗಿಂತ ಸ್ನೇಹ, ಪ್ರೀತಿ ಮುಖ್ಯ. ಆದರೆ ಇದು ಈಗ ಕಾಣೆಯಾಗುತ್ತಿದೆ. ಹಾಗಾಗಿ ನಾವು ಅದನ್ನು ಮತ್ತೆ ವಾಪಸ್ ತರಬೇಕು. ಮೋದಿ ಬಗ್ಗೆ ಯಾರೇ ಏನೇ ಮಾತನಾಡಿದರೂ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದರು.
ಖರ್ಚು ಹೇಗೆ ಕಡಿಮೆ ಮಾಡುವುದು ಎಂಬುದನ್ನು ನಾನು ಹೇಳುತ್ತೇನೆ. ಪ್ರತಿಯೊಂದು ಪಕ್ಷದ ಕಾರ್ಯಕರ್ತರು 10 ಕುಟುಂಬದ ಜವಾಬ್ದಾರಿ ತೆಗೆದುಕೊಂಡು ಅವರ ಮನೆಗೆ ಭೇಟಿ ಮಾಡಬೇಕು. ಆಗ ಅವರ ಜೊತೆ ತಿಂಡಿ ತಿನ್ನಬಹುದು, ಟೀ ಕುಡಿಯಬಹುದು. ಇದರಲ್ಲಿ ಯಾವುದೇ ಖರ್ಚು ಆಗುವುದಿಲ್ಲ ಹೊರತು ಕೇವಲ ಮಾತುಗಳನ್ನು ಹಂಚಿಕೊಳ್ಳುತ್ತೇವೆ. ಎಲ್ಲರೂ ಕೆಟ್ಟದನ್ನು ನಿರ್ಲಕ್ಷಿಸಿ ಎಂದರು. ಇದೇ ವೇಳೆ ಮೊದಲ ಬಾರಿಗೆ ಮತ ಹಾಕುವವರು ನಮೋ ಆ್ಯಪ್ ಓದಿ ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರು ತಮ್ಮ ಮನೆಯಿಂದ ಹೊರ ಹೋಗುವಾಗ ನಾನು ಬಿಜೆಪಿಗೆ ಸೇವೆ ಸಲ್ಲಿಸಲು ಹೊರ ಹೋಗುತ್ತಿದ್ದೇನೆ ಎಂದು ಹೇಳುತ್ತಾರೆ. ಅಲ್ಲದೆ ಒಂದು ವೇಳೆ ನಾನು ಜೀವಂತವಾಗಿ ಹಿಂತಿರುಗಲಿಲ್ಲ ಎಂದರೆ ನನ್ನ ತಮ್ಮನನ್ನು ನಾಳೆಯಿಂದ ಪಕ್ಷದ ಪರವಾಗಿ ಕೆಲಸ ಮಾಡಲು ಕಳುಹಿಸು ಎಂದು ಹೇಳುತ್ತಾರೆ. ಇದು ನಿಜವಾಗಿಯೂ ನಡೆದಿದೆ ಎಂದು ಮೋದಿ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.