Tag: workers

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ-12 ಜನರ ಸಾವು

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ-12 ಜನರ ಸಾವು

    ಮುಂಬೈ:  ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 58ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣೆ ಮತ್ತು ಬೆಂಕಿ ನಂದಿಸುವ ಕಾರ್ಯ ಸತತವಾಗಿ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಧುಲೆ ಜಿಲ್ಲೆಯ ಶಿರ್ಪುರ್ ತಾಲೂಕಿನ ವಾಘಡಿ ಎಂಬ ಗ್ರಾಮದಲ್ಲಿ ಈ ರಾಸಾಯಿನಿಕ ಕಾರ್ಖಾನೆ ಇದ್ದು, ಬೆಳಗ್ಗೆ ಸುಮಾರು 9.45 ರ ವೇಳೆಗೆ ಕಾರ್ಖಾನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಕಾರಣ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

    ಸಿಲಿಂಡರ್ ಸ್ಫೋಟಗೊಂಡ ವೇಳೆ ಕಾರ್ಖಾನೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ಈಗಾಗಲೇ 8 ಜನರ ಮೃತ ದೇಹಗಳು ಸಿಕ್ಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣ ದಳ ಬಂದು ಬೆಂಕಿ ನಂದಿಸುವ ಕೆಲಸ ಮಾಡುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಶಿರ್‍ಪುರ್ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು, ಪ್ರೈಮಾ ಫೇಸಿ ಎಂಬ ಕಾರ್ಖಾನೆಯಲ್ಲಿ ಸಿಲಿಂಡರ್‍ ಗಳು ಸ್ಫೋಟಗೊಂಡಿವೆ. ಇದರಿಂದ ಬೆಂಕಿ ಹೊತ್ತಿಗೊಂಡು ಈವರೆಗೆ ಕನಿಷ್ಠ ಎಂಟು ಜನರು ಮೃತ ಪಟ್ಟಿದ್ದು ಮೃತದೇಹಗಳನ್ನು ಪೊಲೀಸ್ ಮತ್ತು ರಕ್ಷಣಾ ತಂಡಗಳು ವಶಪಡಿಸಿಕೊಂಡಿವೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

  • ಮರಳಿನ ದಿಬ್ಬ ಕುಸಿತ ಮೂರು ಮಕ್ಕಳ ದುರ್ಮರಣ

    ಮರಳಿನ ದಿಬ್ಬ ಕುಸಿತ ಮೂರು ಮಕ್ಕಳ ದುರ್ಮರಣ

    ಕೊಪ್ಪಳ: ಮರಳಿನ ದಿಬ್ಬ ಕುಸಿದ ಹಿನ್ನೆಲೆಯಲ್ಲಿ ಮೂರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ ಗ್ರಾಮದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಪುಣೆ ಮೂಲದ ಮೂರು ಮಕ್ಕಳು ಮರಳಿನಲ್ಲಿ ಸಮಾಧಿಯಾಗಿದ್ದಾರೆ. ಒಟ್ಟು ಐದು ಮಕ್ಕಳು ಮರಳಿನ ದಿಬ್ಬದ ಮೇಲೆ ಆಟವಾಡುತ್ತಿರುವಾಗ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿದ್ದ ಮರಳು ಕುಸಿದು ಪರಿಣಾಮ 3 ಮಕ್ಕಳು ಸಾವನ್ನಪ್ಪಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಐದು ಮಕ್ಕಳಲ್ಲಿ ಇಬ್ಬರು ಬಾಲಕಿಯರು ಮತ್ತು ಓರ್ವ ಬಾಲಕ ಮೃತಪಟ್ಟಿದ್ದು, ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದಿಂದ ಕೂಲಿ ಕೆಲಸಕ್ಕೆ ರಾಜ್ಯ ಬಿಟ್ಟು ರಾಜ್ಯಕ್ಕೆ ವಲಸೆ ಬಂದಿದ್ದ ಕಾರ್ಮಿಕರು ಮಕ್ಕಳನ್ನು ಕಳೆದುಕೊಂಡು ದು:ಖಿಸುತ್ತಿದ್ದಾರೆ. ಈ ಸಂಬಂಧ ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಅನರ್ಹಗೊಂಡ ಕೈ ಶಾಸಕರ ತಿಥಿ ಮಾಡಿದ ಕಾರ್ಯಕರ್ತರು

    ಅನರ್ಹಗೊಂಡ ಕೈ ಶಾಸಕರ ತಿಥಿ ಮಾಡಿದ ಕಾರ್ಯಕರ್ತರು

    ಹಾಸನ: ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ಅವರು 14 ಮಂದಿ ಕೈ ಶಾಸಕರನ್ನು ಅನರ್ಹಗೊಳಿಸಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಅವರ ತಿಥಿ ಕಾರ್ಯ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ನಮ್ಮ ಪಕ್ಷಕ್ಕೆ ದ್ರೋಹ ಎಸಗಿ ಹೋದವರು ನಮ್ಮ ಪಾಲಿಗೆ ಸತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ತಿಥಿ ವಡೆ, ಹಾರ ಪ್ರದರ್ಶಿಸಿ ಹಾಸನದ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರು ಅನರ್ಹಗೊಂಡ ಶಾಸಕರ ತಿಥಿ ಕಾರ್ಯ ಮಾಡಿದರು. ಅಲ್ಲದೆ ಅನರ್ಹಗೊಂಡ ಶಾಸಕರನ್ನು ಮುಂದೆ ಪಕ್ಷಕ್ಕೆ ಸೇರಿಸದಂತೆ ಹೈಕಮಾಂಡಿಗೆ ಮನವಿ ಮಾಡಿ, ಸ್ಪೀಕರ್ ರಮೇಶ್ ಕುಮಾರ್ ಅವರ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದರು.

    ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಅವರನ್ನು ಅನರ್ಹಗೊಳಿಸಿ ಸ್ಪೀಕರ್ ತೀರ್ಪು ಪ್ರಕಟಿಸಿದ್ದಾರೆ.

    ಈ ಹಿಂದೆ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.

  • ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ಕೈವಾಡದ ಆರೋಪ

    ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ಕೈವಾಡದ ಆರೋಪ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಕಾಶೀನಾಥ್ ಘೋಷ್ (45) ಕೊಲೆಯಾದ ಬಿಜೆಪಿ ಕಾರ್ಯಕರ್ತ. ಕಾಶೀನಾಥ್ ಟಿಎಂಸಿ ಕಾರ್ಯಕರ್ತ ಲಾಲ್‍ಚಂದ್ ಬಾಗ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಶೀನಾಥ್ ಇಂದು ಹೂಗ್ಲಿ ಜಿಲ್ಲೆಯ ಗೋಘಾಟ್ ಪ್ರದೇಶದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ನಕುಂದಾ ಎಂಬ ಪ್ರದೇಶದಲ್ಲಿ ಜುಲೈ 22ರಂದು ಲಾಲ್‍ಚಂದ್ ಕೊಲೆಯಾಗಿದ್ದ. ಈ ಪ್ರಕರಣದಲ್ಲಿ ಕಾಶೀನಾಥ್ ಭಾಗಿಯಾಗಿದ್ದ ಎಂದು ಟಿಎಂಸಿ ಗಂಭೀರವಾಗಿ ಆರೋಪಿಸಿತ್ತು. ಆದರೆ ಬಿಜೆಪಿ ನಾಯಕರು ಆರೋಪವನ್ನು ತಳ್ಳಿ ಹಾಕಿ, ನಿಜವಾದ ಹಂತಕರನ್ನು ರಕ್ಷಿಸಲು ಟಿಎಂಸಿ ನಾಯಕರು ಹೀಗೆ ಆರೋಪಿಸುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ಕಾಶೀನಾಥ್ ಶವವಾಗಿ ಪತ್ತೆಯಾಗಿದ್ದು, ಅನೇಕ ಅನುಮಾನಗಳಿಗೆ ಕಾರಣವಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಬಂಗಾಳ ಬಿಜೆಪಿಯು, ಅರಂಬಾಗ್‍ನ ಬಿಜೆಪಿ ಬೂತ್ ಅಧ್ಯಕ್ಷ ಕಾಶೀನಾಥ್ ಘೋಷ್ ಅವರನ್ನು ಟಿಎಂಸಿ ಗೂಂಡಾಗಳು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.44ರಷ್ಟು ಮತ ಗಳಿಸಿದೆ. ಬಿಜೆಪಿ ನಾಯಕರ ಪಟ್ಟಿ ಸಿದ್ಧಪಡಿಸಿರುವ ಟಿಎಂಸಿ ಈ ಕೃತ್ಯ ಎಸಗಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪರ ಬರುವ ಫಲಿತಾಂಶ ತಡೆಯಲು ಸಾಧ್ಯವಿಲ್ಲ. ಹುತಾತ್ಮ ಸಂಖ್ಯೆ 74 ಎಂದು ಬರೆದುಕೊಂಡಿದೆ.

    ಕಾಶೀನಾಥ್ ದೇಹದ ಮೇಲೆ ಗಾಯಗಳು ಕಂಡು ಬಂದಿದ್ದು, ಪ್ರಾಥಮಿಕ ವದಿಯ ಪ್ರಕಾರ ಇದೊಂದು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಗೋಘಾಟ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಸಮೀರ್ ಡೇ ತಿಳಿಸಿದ್ದಾರೆ.

  • ವಿದ್ಯುತ್ ಕಾಮಗಾರಿ ವೇಳೆ ಕರೆಂಟ್ ಶಾಕ್- ಇಬ್ಬರು ಕಾರ್ಮಿಕರು ಸಾವು

    ವಿದ್ಯುತ್ ಕಾಮಗಾರಿ ವೇಳೆ ಕರೆಂಟ್ ಶಾಕ್- ಇಬ್ಬರು ಕಾರ್ಮಿಕರು ಸಾವು

    ಕೋಲಾರ: ವಿದ್ಯುತ್ ಕಾಮಗಾರಿ ವೇಳೆ ಕರೆಂಟ್ ಶಾಕ್ ತಗಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಿರುಪಾಕ್ಷಿ ಗ್ರಾಮದ ಬಳಿ ನಡೆದಿದೆ.

    ಘಟನೆಯಲ್ಲಿ ಗುತ್ತಿಗೆ ಕಾರ್ಮಿಕರಾದ ಆಂಧ್ರ ಮೂಲದ ರಾಜಬಾಬು (35) ಮತ್ತು ಚಿನ್ನಿಬಾಬು (32) ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ವಿದ್ಯುತ್ ಕಾಮಗಾರಿ ವೇಳೆ ಇಬ್ಬರಿಗೆ ಕರೆಂಟ್ ಶಾಕ್ ತಗುಲಿದ್ದು ಅವರು ಸಾವನ್ನಪ್ಪಿದ್ದಾರೆ. ಅವರನ್ನು ರಕ್ಷಿಸಲು ಹೋದ ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಬಂಧ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಹಾಸನದಲ್ಲಿ ದಿಢೀರ್ ಕಾರ್ಮಿಕರ ಪ್ರತಿಭಟನೆ – ಪೊಲೀಸ್ ವಾಹನ ಪಲ್ಟಿ, ಗಾಳಿಯಲ್ಲಿ ಗುಂಡು

    ಹಾಸನದಲ್ಲಿ ದಿಢೀರ್ ಕಾರ್ಮಿಕರ ಪ್ರತಿಭಟನೆ – ಪೊಲೀಸ್ ವಾಹನ ಪಲ್ಟಿ, ಗಾಳಿಯಲ್ಲಿ ಗುಂಡು

    ಹಾಸನ: ಬಟ್ಟೆ ಕಾರ್ಖಾನೆ ವಿರುದ್ಧ ಕಾರ್ಮಿಕರ ಧಿಡೀರ್ ಪ್ರತಿಭಟನೆ ಮಾಡಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನದ ಹೊರವಲಯದಲ್ಲಿ ಹಿಮ್ಮತ್ ಸಿಂಕಾ ಹೆಸರಿನ ಬಟ್ಟೆ ಕಾರ್ಖಾನೆ ಇದ್ದು ಇಲ್ಲಿ ಸುಮಾರು ನಾಲ್ಕು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ಉತ್ತರ ಭಾರತದ ಕಾರ್ಮಿಕರು ಜಾಸ್ತಿ ಇರುವ ಈ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ದೈಹಿಕವಾಗಿ ಹಿಂಸೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮಾಡಲಾಗಿದೆ.

    ಈ ಕಾರ್ಖಾನೆಯಲ್ಲಿ ವಿನಾಕಾರಣ ನಮ್ಮ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ ಎಂದು ಇಂದು ಕೆಲಸಕ್ಕೆ ಹಾಜರಾಗದ ಸಾವಿರಾರು ಮಂದಿ ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ತಡೆಯಲು ಯತ್ನಿಸಿದಾಗ ಕಾರ್ಮಿಕರು ಪೊಲೀಸ್ ಜೀಪ್ ಪಲ್ಟಿ ಮಾಡಿ ಆಕ್ರೋಶ ಹೊರ ಹಾಕಿ ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಕಾರ್ಮಿಕರ ಮೇಲೆ ಲಾಠಿ ಜಾರ್ಜ್ ಮಾಡಿದ್ದಾರೆ. ಪ್ರತಿಭಟನೆ ಜೋರಾದಾಗ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದ್ದಾರೆ.

    ಕಾರ್ಖಾನೆಯಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಯುವಕರನ್ನು ಕೆಲಸಕ್ಕೆ ಕರೆತರಲಾಗಿದೆ. ಆದರೆ ಅವರಿಗೆ ಕನಿಷ್ಠ ಸೌಲಭ್ಯವನ್ನು ನೀಡದೆ, ಕಾರ್ಮಿಕ ಕಾಯ್ದೆ ಉಲ್ಲಂಘಿಸಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ. ಕಾರ್ಮಿಕ ಸಂಘಟನೆಗಳು ಸಹ ಇಲ್ಲದ ಬೃಹತ್ ಕಾರ್ಖಾನೆಯಲ್ಲಿ ಇಬ್ಬರು ಕಾರ್ಮಿಕರ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ಫೋಟೋ ಕೂಡ ಸಿಕ್ಕಿದೆ ಎನ್ನಲಾಗಿದೆ.

    ಈ ವಿಚಾರವಾಗಿ ಬೆಳಗ್ಗೆ ಇಂದು ಕಾರ್ಖಾನೆ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಮಿಕರನ್ನು ಚದುರಿಸುವಲ್ಲಿ ಯಶ್ವಸಿಯಾಗಿದ್ದಾರೆ.

  • ವಾಹನ ಪಲ್ಟಿ – 20ಕ್ಕೂ ಅಧಿಕ ಕೂಲಿ ಕಾರ್ಮಿಕರ ಸ್ಥಿತಿ ಚಿಂತಾಜನಕ

    ವಾಹನ ಪಲ್ಟಿ – 20ಕ್ಕೂ ಅಧಿಕ ಕೂಲಿ ಕಾರ್ಮಿಕರ ಸ್ಥಿತಿ ಚಿಂತಾಜನಕ

    ಕಲಬುರಗಿ: ಎಕ್ಸೆಲ್ ತುಂಡಾಗಿ ಟಾಟಾ ಮ್ಯಾಕ್ಸ್ ಪಲ್ಟಿಯಾದಂತಹ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪಂಚಿಮಪಳ್ಳಿ ಗ್ರಾಮದ ಬಳಿ ನಡೆದಿದೆ.

    ವೇಗವಾಗಿ ಹೋಗುತ್ತಿದ್ದ ವಾಹನದ ಎಕ್ಸೆಲ್ ಕಟ್ ಆಗಿ ರಸ್ತೆ ಬದಿಗೆ ಪಲ್ಟಿಯಾಗಿದ್ದರಿಂದ ಅದರಲ್ಲಿದ್ದ ಇಪ್ಪತ್ತಕ್ಕೂ ಅಧಿಕ ಜನರ ಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಗಾಯಾಳುಗಳ ನರಳಾಟ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.


    ಚಿಂಚೋಳಿ ತಾಲೂಕಿನ ಸುಲೇಪೆಟ್ ಮೂಲದವರಾದ ಗಾಯಾಳುಗಳು, ಇಂದು ಬೆಳಗ್ಗೆ ಸೇಡಂ ತಾಲೂಕಿನ ಈರನಪಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದರು. ಇನ್ನು ತೀರಾ ಚಿಂತಾಜನಕ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸುಲೇಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಲ್ಲಿ ಮಧ್ಯರಾತ್ರಿ ಭಾರೀ ದುರಂತ- 2 ಕಟ್ಟಡ ಕುಸಿತ, ಓರ್ವ ದುರ್ಮರಣ

    ಬೆಂಗ್ಳೂರಲ್ಲಿ ಮಧ್ಯರಾತ್ರಿ ಭಾರೀ ದುರಂತ- 2 ಕಟ್ಟಡ ಕುಸಿತ, ಓರ್ವ ದುರ್ಮರಣ

    – ಕಟ್ಟಡದೊಳಗೆ ಸಿಲುಕಿರೋ 7 ಮಂದಿಗೆ ಶೋಧ

    ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಎರಡು ಕಟ್ಟಡಗಳ ನೆಲಮಾಳಿಗೆ ಕುಸಿದು ಭಾರೀ ಅನಾಹುತ ಸಂಭವಿಸಿದೆ. ಪುಲಕೇಶಿನಗರ ಸಮೀಪದ ಕೂಕ್‍ಟೌನ್‍ನಲ್ಲಿ ಮಧ್ಯರಾತ್ರಿ 2.15ಕ್ಕೆ ಅನಾಹುತ ಸಂಭವಿಸಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ.

    4 ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಸಿಲುಕಿದ್ದ ಏಳು ಕಾರ್ಮಿಕರನ್ನ ರಕ್ಷಿಸಲಾಗಿದೆ. ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 3 ಅಂತಸ್ಥಿನ ಕಟ್ಟಡದ ನೆಲಮಾಳಿಗೆಯಲ್ಲಿ ವಾಸವಿದ್ದ ಏಳು ಕಾರ್ಮಿಕರಿದ್ದ ಕುಟುಂಬ ಕಟ್ಟಡ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ.

    ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. 3 ಅಂತಸ್ತಿನ ಕಟ್ಟಡ ಹಾಗೂ 4 ಅಂತಸ್ತಿನ ಕಟ್ಟಡದಲ್ಲಿ ಫರ್ನೀಚರ್ ಕೆಲಸ ನಡೆಯುತ್ತಿತ್ತು. ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಉತ್ತರ ಭಾರತದ ಮೂಲದವರು ಎಂದು ಹೇಳಲಾಗುತ್ತಿದೆ.

    ಸ್ಥಳೀಯರು ಹೇಳುವ ಪ್ರಕಾರ, ಈ ಕಟ್ಟಡ ನಿರ್ಮಾಣ ಆದ ಜಾಗದಲ್ಲಿ ನೀರಿನಾಂಶ ಜಾಸ್ತಿ ಇತ್ತು. ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಫಿಲ್ಟರ್ ಮರಳು ಬಳಸಿರೋದು ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಎರಡೂ ಕಟ್ಟಡಗಳ ಬೇಸ್‍ಮೆಂಟ್ ಕುಸಿದಿರುವ ಕಾರಣ, ಉಳಿದ ಭಾಗ ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಸಾಧ್ಯತೆ ಇದೆ. ಎನ್‍ಡಿಆರ್‍ಎಫ್ ಮತ್ತು 200ಕ್ಕೂ ಹೆಚ್ಚು ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಸಿಎಂ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟಿಸಿದ 50 ಕಾರ್ಮಿಕರ ವಿರುದ್ಧ ಕೇಸ್

    ಸಿಎಂ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟಿಸಿದ 50 ಕಾರ್ಮಿಕರ ವಿರುದ್ಧ ಕೇಸ್

    – ಇಬ್ಬರು ಪೊಲೀಸರು ಅಮಾನತು

    ರಾಯಚೂರು: ಸಿಎಂ ಗ್ರಾಮ ವಾಸ್ತವ್ಯ ಆಗಮಿಸುತ್ತಿದ್ದಾಗ ಪ್ರತಿಭಟಿಸಿದ 50 ಮಂದಿ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ವಿರುದ್ಧ ಕೇಸ್ ದಾಖಲಾಗಿದೆ.

    ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಒಂದು ದಿನದ ಶಾಲಾ ವಾಸ್ತವ್ಯಕ್ಕೆ ಹೋಗುತ್ತಿದ್ದ ಸಿಎಂ ಬಸ್ಸನ್ನು ತಡೆದು ರಾಯಚೂರಿನ ಸಕ್ರ್ಯೂಟ್ ಹೌಸ್ ಮುಂದೆ ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಸಿಎಂ ಪ್ರತಿಭಟನಾಕಾರರ ಮೇಲೆ ಗರಂ ಆಗಿದ್ದರು.

    ಈಗ ಸಿಎಂ ವಿರುದ್ಧ ಪ್ರತಿಭಟನೆ ಮಾಡಿದ 50 ಜನ ಕಾರ್ಮಿಕರ ವಿರುದ್ಧ ರಾಯಚೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‍ಪಿ ಡಾ ಸಿ.ಬಿ ವೇದಮೂರ್ತಿ ನಿಯಮ ಉಲ್ಲಂಘಿಸಿ ಪ್ರತಿಭಟಿಸಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಸಿಎಂ ಭದ್ರತೆ ವೈಫಲ್ಯದ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಪಿಎಸ್‍ಐ ಹಾಗೂ ಯರಗೇರಾ ಸಿಪಿಐ ಅವರನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಮಾದಿಗ ಜಾಗೃತಿ ಸೇನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.

    ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕ ಹಾಗೂ ಉತ್ತಮ ಅಧಿಕಾರಿಗಳು ಆಗಿದ್ದಾರೆ. ವಿನಾಕಾರಣ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಆಕ್ರೋಶ ಕೂಗುತ್ತಿದ್ದಾರೆ.

  • ತಲ್ವಾರ್ ಹಿಡಿದು ಗೋಕಳ್ಳತನ ಮಾಡೋರಿಗೆ, ಅದೇ ತಲ್ವಾರ್‌ನಿಂದ ಉತ್ತರ ಕೋಡೋಕೆ ನಮ್ಗೆ ಗೊತ್ತು: ಬಿಜೆಪಿ ಶಾಸಕ

    ತಲ್ವಾರ್ ಹಿಡಿದು ಗೋಕಳ್ಳತನ ಮಾಡೋರಿಗೆ, ಅದೇ ತಲ್ವಾರ್‌ನಿಂದ ಉತ್ತರ ಕೋಡೋಕೆ ನಮ್ಗೆ ಗೊತ್ತು: ಬಿಜೆಪಿ ಶಾಸಕ

    – ಗೋಕಳ್ಳರ ಮಾತು ಕೇಳಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್

    ಮಂಗಳೂರು: ಅಕ್ರಮ ಗೋಸಾಗಾಟ ಪತ್ತೆಹಚ್ಚಿದ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದಕ್ಕೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವಿಚಾರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು ಠಾಣೆಗೆ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕಾರ್ಯಕರ್ತರ ಜೊತೆಯಲ್ಲಿ ರಾತ್ರಿಯಿಡಿ ಕುಳಿತು ಪ್ರತಿಭಟನೆ ಮಾಡಿದ್ದಾರೆ.

    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಿಂದೂ ಸಂಘಟನೆ ಕಾರ್ಯಕರ್ತರು ಕಾನೂನಿನ ಪ್ರಕಾರ ಪೊಲೀಸರಿಗೆ ಗೋಕಳ್ಳರನ್ನು ಒಪ್ಪಿಸಿದ್ದಾರೆ. ಆದರೆ ಪೊಲೀಸರೇ ಹಿಡಿದುಕೊಟ್ಟವರ ಮೇಲೆ ಕೇಸ್ ಹಾಕುತ್ತಿರುವುದು ಸರಿಯಲ್ಲ. ಇತ್ತೀಚಿಗೆ ಅಕ್ರಮ ಗೋವು ಸಾಗಾಟಕ್ಕೆ ಕೆಲವರು ಬೆಂಬಲ ನೀಡುತ್ತಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ ಎಂದರು.

    ನಾನು ಶಾಸಕನಾಗುವ ಮೊದಲು ಒಬ್ಬ ಹಿಂದೂ. ಇಲ್ಲಿರುವ ಕಾರ್ಯಕರ್ತರು ಹಾಗೂ ನಾವು ಹಿಂದೂತ್ವವನ್ನು ಕಾಪಾಡಲು ಹಾಗೂ ಗೋ ರಕ್ಷಣೆಗಾಗಿ ಪ್ರಾಣಾ ಕೊಡಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಗೋಕಳ್ಳರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾವು ಎಲ್ಲದಕ್ಕೂ ಸಿದ್ಧರಿಗಿದ್ದೇವೆ. ತಲ್ವಾರ್ ಹಿಡಿದು ಗೋಕಳ್ಳತನ ಮಾಡುವವರಿಗೆ, ಅದೇ ತಲ್ವಾರ್ ಹಿಡಿದು ಉತ್ತರ ಕೋಡೋಕೆ ನಮಗೆ ಗೊತ್ತಿದೆ. ಈ ರೀತಿ ನಡೆದರೆ ಖಂಡಿತ ಇದು ದಕ್ಷಿಣ ಕನ್ನಡ ಶಾಂತಿ ಕದಡುತ್ತದೆ ಎಂದು ಹೇಳಿದ್ದಾರೆ.

    ಯಾವತ್ತಿನಿಂದ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಯು.ಟಿ.ಖಾದರ್ ಆದರೋ ಅವತ್ತಿನಿಂದ ಈ ಅಕ್ರಮಗಳು ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಹಾಗೂ ಪೊಲೀಸರು ಕ್ರಮ ಕೈಗೊಳ್ಳದೆ ಗಲಾಟೆ ನಡೆದು, ಜಿಲ್ಲೆಯ ಶಾಂತಿ ಕದಡಿದರೆ ಉಸ್ತುವಾರಿ ಸಚಿವ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.

    ಗುರುವಾರ ತಡರಾತ್ರಿ ಬೆಳ್ತಂಗಡಿ ತಾಲೂಕಿನ ಬಂದರು ಬಳಿ ಮೂರು ಹಸುಗಳನ್ನು ಟೆಂಪೋದಲ್ಲಿ ಅಮಾನುಷ ರೀತಿಯಲ್ಲಿ ಕಟ್ಟಿ ಒಯ್ಯಲಾಗುತಿತ್ತು. ಖಚಿತ ಮಾಹಿತಿ ಮೇರೆಗೆ ವಾಹನವನ್ನು ಕೆಲ ಹಿಂದು ಸಂಘಟನೆ ಕಾರ್ಯಕರ್ತರು ನಿಲ್ಲಿಸಿ, ಗೋಕಳ್ಳರನ್ನು ಹಿಡಿದು ಉಪ್ಪಿನಂಗಡಿ ಠಾಣೆಗೆ ಒಪ್ಪಿಸಿದ್ದರು. ಆದರೆ ಪೊಲೀಸರು ಗೋವಿನ ಸಾಗಾಟ ಮಾಡ್ತಿದ್ದವರ ಮೇಲೆ ಪ್ರಕರಣ ದಾಖಲಿಸುವ ಬದಲು ಅವರ ಮಾತನ್ನು ಮಾತು ಕೇಳಿ, ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.