Tag: workers

  • ಒಎಲ್‍ಎಕ್ಸ್ ದೋಖಾ – ಓಮ್ನಿ ಆಸೆಗೆ ಬಿದ್ದ ಕಾರ್ಮಿಕರಿಗೆ ಪಂಗನಾಮ

    ಒಎಲ್‍ಎಕ್ಸ್ ದೋಖಾ – ಓಮ್ನಿ ಆಸೆಗೆ ಬಿದ್ದ ಕಾರ್ಮಿಕರಿಗೆ ಪಂಗನಾಮ

    ಚಿಕ್ಕಬಳ್ಳಾಪುರ: ಒಎಲ್‍ಎಕ್ಸ್ ಹಳೆಯ ಹಾಗೂ ಬೇಡವಾದ ಗೃಹಬಳಕೆ ವಸ್ತುಗಳನ್ನ ಮಾರಾಟ ಮಾಡುವುದಕ್ಕೆ ಇರುವ ಆನ್‍ಲೈನ್ ತಾಣವಾಗಿದೆ. ಆದರೆ ಅದೇ ಆನ್‍ಲೈನ್ ತಾಣವನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲ ಸೈಬರ್ ಕಳ್ಳರು, ಸುಲಭವಾಗಿ ಅಮಾಯಕ ಗ್ರಾಹಕರ ಬಳಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿ ವಂಚನೆ ಮಾಡುತ್ತಿದ್ದಾರೆ.

    ಒಎಲ್‌ಎಕ್ಸ್‌ನಲ್ಲಿ ಓಮ್ನಿ ಕಾರು ನೋಡಿದ ಬಳ್ಳಾರಿ ಮೂಲದ ದೊಡ್ಡನಾಯಕ್ ಹಾಗೂ ಕೃಷ್ಣನಾಯಕ್ ಅವರು ಖದೀಮರ ಕೃತ್ಯಕ್ಕೆ ಈಗ ಕಣ್ಣೀರು ಹಾಕುವಂತಾಗಿದೆ. ಹೌದು. ಒಎಲ್‌ಎಕ್ಸ್‌ನಲ್ಲಿ ಕೆಎ 17 ಬಿ 5946 ನಂಬರಿನ ಒಮ್ನಿ ಕಾರು ಕಂಡಿದ್ದೇ ತಡ ಕಾರು ಚೆನ್ನಾಗಿದೆ ಅಂತ ರೇಟ್ ನೋಡಿದ್ದಾರೆ. ಅಲ್ಲಿ ಓಮ್ನಿ ಕಾರಿಗೆ ಕೇವಲ 60 ಸಾವಿರ ರೂಪಾಯಿ ಅಂತ ಹಾಕಲಾಗಿತ್ತು. ಓಮ್ನಿ ಕಾರು ನೋಡೋಕೆ ಚೆನ್ನಾಗಿದೆ ಅಂತ ಅದರಲ್ಲಿದ್ದ ಕಾಂಟಾಕ್ಟ್ ನಂಬರಿಗೆ ದೊಡ್ಡನಾಯಕ್, ಕೃಷ್ಣನಾಯಕ್ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದವನು ನಾನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‍ಎಫ್ ಆಫೀಸರ್ ವಿಜಯ್ ಕುಮಾರ್, ಕಾರಿನ ರೇಟ್ 60 ಸಾವಿರ ಅಂದಿದ್ದಾನೆ. ಈ ಕಡೆಯಿಂದ ಚರ್ಚೆಗಿಳಿದ ದೊಡ್ಡನಾಯಕ್ ಅಷ್ಟೊಂದು ಜಾಸ್ತಿ ಸರ್.. 35 ಸಾವಿರ ಕೊಡ್ತೀನಿ ಅಂದಿದ್ದಾರೆ. ಅಷ್ಟೇ ಮರುಮಾತನಾಡದೆ ವಿಜಯ್ ಕುಮಾರ್ ಒಪ್ಪಿಕೊಂಡಿದ್ದನು.

    ಹಣ ಗೂಗಲ್ ಪೇ ಮಾಡಿ, ಗಾಡಿ ನಿಮ್ಮ ಜಾಗಕ್ಕೆ ನಾನೇ ಕಳಿಸಿಕೊಡ್ತೀನಿ ಸುಮ್ನೆ ಯಾಕ್ ನೀವು ಇಲ್ಲಿಗೆ ಬರೋದು ಅಂತ ಹೇಳಿದ್ದಾನೆ. ಅಲ್ಲದೆ ಮೊದಲು 5,100 ರೂ. ಹಾಕಿ ಸಾಕು ಅಮೇಲೆ ಉಳಿದ ಹಣ ಗಾಡಿ ಬಂದ ಮೇಲೆ ಹಾಕಿ ಎಂದು ವಿಜಯ್ ಕುಮಾರ್, ದೊಡ್ಡನಾಯಕ್ ಮತ್ತು ಕೃಷ್ಣನಾಯಕ್ ಬಳಿ ಹೇಳಿದ್ದಾನೆ. ಹೀಗೆ ಮೊದಲು 5,100 ರೂಪಾಯಿ ಆನ್‍ಲೈನ್ ಟ್ರಾನ್ಸ್‌ಫರ್ ಮಾಡಿಸಿಕೊಂಡ ಖದೀಮ, ಇನ್ನೇನು ಕಾರು ನಿಮ್ಮ ಊರು ಕಡೆ ಬರ್ತಿದೆ ಅಂತ ಒಂದು ಕೊರಿಯರ್‍ನಲ್ಲಿ ವಾಹನದ ದಾಖಲೆ ಪತ್ರ ಜೊತೆಗೆ ಬರೆದು ಅದನ್ನ ವಾಟ್ಸಾಪ್ ಮಾಡಿದ್ದಾನೆ. ಉಳಿದ ಹಣವನ್ನ ನಮ್ಮ ಸೀನಿಯರ್ ಆಫೀಸರ್ ನವೀನ್ ಸಿಂಗ್ ಅಕೌಂಟ್‍ಗೆ ಹಾಕಿ ಅಂದಿದ್ದಾನೆ.

    ಆದರೆ ಆ ಕಡೆಯಿಂದ ದೊಡ್ಡನಾಯಕ್ ಗಾಡಿ ಬಂದ ಮೇಲೆ ಹಣ ಕಳಿಸ್ತೀವಿ ಅಂದಾಗ, ಇಲ್ಲ..ಇಲ್ಲ.. ಈಗಲೇ ಹಾಕಿ ಇಲ್ಲ ಅಂದರೆ ಗಾಡಿ ವಾಪಾಸ್ ಕರೆಸಿಕೋತೀವಿ ಅಂತ ಹೆದರಿಸಿದ್ದಾರು. ಹೀಗಾಗಿ ದೊಡ್ಡನಾಯಕ್, ಕೃಷ್ಣನಾಯಕ್ ಒಮ್ಮೆ 15 ಸಾವಿರ, ಬಳಿಕ ಐದೈದು ಸಾವಿರ ಎರಡು ಮೂರು ಸಲ ಕಳುಹಿಸಿದ್ದಾರೆ. ಹೀಗೆ ಒಟ್ಟು 35 ಸಾವಿರ ಹಣವನ್ನ ಆನ್‍ಲೈನ್ ಮೂಲಕ ಟ್ರಾನ್ಸ್‌ಫರ್ ಮಾಡಿದ್ದಾರೆ. ಆದರೆ ಕೊನೆಗೆ ಗಾಡಿ ಬರಲಿಲ್ಲ ಯಾಕೆ ಎಂದು ಫೋನ್ ಮಾಡಿದರೆ ಇನ್ನೂ ದುಡ್ಡು ಹಾಕಿ ಅಂತ ಖದೀಮರು ಕೇಳುತ್ತಿದ್ದಾರೆ. ಹೀಗಾಗಿ ತಾವು ವಂಚನೆಗೆ ಒಳಗಾಗಿರೋದು ಗೊತ್ತಾಗಿ ಹಣ ಕಳೆದುಕೊಂಡ ದೊಡ್ಡನಾಯಕ್, ಕೃಷ್ಣನಾಯಕ್ ಸದ್ಯ ಕಣ್ಣೀರು ಸುರಿಸುವಂತಾಗಿದೆ.

    ಈ ಇಬ್ಬರು ಬಳ್ಳಾರಿಯಿಂದ ಬಂದು ಮಂಡ್ಯದ ಬಳಿ ಕಬ್ಬು ಕಟಾವು ಕೆಲಸ ಮಾಡುತ್ತಾ ಒಂದಷ್ಟು ಹಣ ಕೂಡಿಟ್ಟುಕೊಂಡಿದ್ದರು. ಉಳಿದ ಹಣವನ್ನ 10 ರೂಪಾಯಿ ಬಡ್ಡಿಯಂತೆ ಸಾಲ ಪಡೆದು ಈ ಆನ್‍ಲೈನ್ ವಂಚಕರಿಗೆ ಹಾಕಿದ್ದರು. ಹೀಗಾಗಿ ಹಣ ಕಳೆದುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಬಳಿ ಹೋದರೆ ಏನೂ ಉಪಯೋಗವಾಗಲಿಲ್ಲ. ಅಯ್ಯೋ ಹೋಗಿ ದಿನ ಈ ಥರ ಹತ್ತಾರು ಕೇಸು ಬರುತ್ತೆ. ನೀವು ಮೋಸ ಹೋಗಿದ್ದೀರಾ ಆ ಥರ ಸಿಐಎಸ್‍ಎಫ್‍ನವರು ಯಾರೂ ಇಲ್ಲಿಲ್ಲ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಆದರೆ ಪೊಲೀಸರ ನೆರವು ಸಿಗುತ್ತೇನೋ ಅಂತ ಆಸೆಗಣ್ಣಿನಿಂದ ಬಂದಿದ್ದ ಯುವಕರು ಕೊನೆಗೆ ಅಳುತ್ತಲೇ ವಾಪಾಸ್ ಹೋಗಿದ್ದಾರೆ.

    ಕಳೆದ 3 ತಿಂಗಳಲ್ಲಿ ಇದೇ ತರ ಒಂದಲ್ಲ ಎರಡಲ್ಲ ನೂರಾರು ಕೇಸ್‍ಗಳು ನಡೆದಿದ್ದು, ಹಣ ಕಳೆದುಕೊಳ್ಳುತ್ತಿರುವವರು ಕೆಐಎಎಲ್ ಪೊಲೀಸ್ ಠಾಣೆ ಬಳಿ ಬರುತ್ತಿದ್ದಾರೆ. ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಒಎಲ್‍ಎಕ್ಸ್ ವಂಚನೆ ಪ್ರಕರಣಗಳಿಗಂತಲೇ ದೊಡ್ಡದಾದ ಹೊಸ ಫೈಲ್ ಇಡಲಾಗಿದೆ. ಅದೆಲ್ಲೋ ಕೂತು ಆನ್‍ಲೈನ್ ಮೂಲಕ ನಯವಂಚಕ ಮಾತುಗಳಿಂದ ವಂಚನೆ ಮಾಡೋ ಈ ಖದೀಮರ ಕೃತ್ಯಕ್ಕೆ ಬ್ರೇಕ್ ಹಾಕಬೇಕಾದ ಪೊಲೀಸರು ಮಾತ್ರ ತಮ್ಮ ಕೈಲಾಗಲ್ಲ ಅಂತ ಕೈ ಕಟ್ಟಿ ಕುಳಿತಿದ್ದು, ಖದೀಮರ ಆಟ ಮುಂದುವರಿಯುತ್ತಲೇ ಇದೆ. ಹೀಗಾಗಿ ಆನ್‍ಲೈನ್‍ನಲ್ಲಿ ವ್ಯವಹರಿಸೋ ಮುನ್ನ ಹತ್ತು ಬಾರಿ ಯೋಚಿಸಿಬೇಕಿದೆ.

  • ಕಬ್ಬು ಕಟಾವು ಮಾಡುವಾಗ ಕಾಲು ಹಿಡಿದ ಚಿರತೆ ಮರಿಗಳು – ರೈತನಿಗೆ ಸಂಕಟ

    ಕಬ್ಬು ಕಟಾವು ಮಾಡುವಾಗ ಕಾಲು ಹಿಡಿದ ಚಿರತೆ ಮರಿಗಳು – ರೈತನಿಗೆ ಸಂಕಟ

    ಚಾಮರಾಜನಗರ: ಕಬ್ಬು ಕಟಾವು ಮಾಡುವಾಗ ಎರಡು ಚಿರತೆ ಮರಿಗಳ ಚಿನ್ನಾಟಕ್ಕೆ ರೈತರು ಬೆಸ್ತು ಬಿದ್ದಿರುವ ಘಟನೆ ಗಡಿಭಾಗವಾದ ತಾಳವಾಡಿಯ ದೊಡ್ಡಮುತ್ತಿನಕೆರೆಯಲ್ಲಿ ನಡೆದಿದೆ.

    ಗ್ರಾಮದ ತಂಗರಾಜು ಅವರು ಜಮೀನಿನಲ್ಲಿ ಚಿರತೆಯೊಂದು ಮರಿ ಹಾಕಿರುವುದು ಇಂದು ಕಟಾವು ಮಾಡುತ್ತಿರುವಾಗ ಬೆಳಕಿಗೆ ಬಂದಿದೆ. ಕಬ್ಬು ಕಟಾವು ಮಾಡುವ ವೇಳೆ ಕೆಲಸ ಮಾಡುತ್ತಿದ್ದ ಓರ್ವನ ಕಾಲನ್ನು ಚಿರತೆ ಮರಿಯೊಂದು ಹಿಡಿದು ದಂಗು ಬೀಳಿಸಿದೆ. ಬಳಿಕ ಶಾಕ್‍ನಿಂದ ಎಚ್ಚೆತ್ತ ಕೆಲಸಗಾರರು ತಾಯಿ ಇಲ್ಲದಿದ್ದನ್ನು ಖಚಿತ ಪಡಿಸಿಕೊಂಡು ಸತ್ಯಮಂಗಲಂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಎರಡು ಚಿರತೆ ಮರಿಗಳನ್ನು ಇದ್ದ ಸ್ಥಳದಲ್ಲೇ ಇರಿಸಿದ್ದು, ರಾತ್ರಿ ವೇಳೆ ತಾಯಿ ಚಿರತೆ ಬಂದು ಹೊತ್ತೊಯ್ಯಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ತಿಳಿಸಿದ್ದಾರೆ. ಅವುಗಳ ಚಲನವಲನ ಗಮನಿಸಲು 3 ಕ್ಯಾಮೆರಾಗಳನ್ನು ಕೂಡ ಅರಣ್ಯ ಇಲಾಖೆ, ಸ್ಥಳದಲ್ಲಿ ಅಳವಡಿಸಿದೆ.

    ಈ 2 ಚಿರತೆ ಮರಿಗಳು ಜನಿಸಿ 20 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಕಬ್ಬು ಕಟಾವು ಮಾಡುತ್ತಿದ್ದ ಸದ್ದಿಗೆ ಎಚ್ಚೆತ್ತು ಹೊರಬಂದಿವೆ ಎನ್ನಲಾಗಿದೆ.

  • ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೊರಕೆ ಪ್ರತಿಭಟನೆ

    ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೊರಕೆ ಪ್ರತಿಭಟನೆ

    ಹುಬ್ಬಳ್ಳಿ: ಎದೆ ಸೀಳಿದ್ರೆ ಎರಡು ಅಕ್ಷರಗಳು ಇಲ್ಲದವರು ಪಂಚರ್ ಹಾಕುವವರು ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹುಬ್ಬಳ್ಳಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

    ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರು ಹಾಗೂ ನೌಕರ ಸಂಘದ ವತಿಯಿಂದ ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೊರಕೆ ಹಿಡಿದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಟಯರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

    ಸಂಸದ ತೇಜಸ್ವಿ ಸೂರ್ಯ ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ಗ್ಯಾರೇಜ್ ಕೆಲಸಗಾರರ ವಿರುದ್ಧ ಕೀಳಾಗಿ ಮಾತನಾಡಿರುವುದು ಖಂಡನೀಯವೆಂದು ಪ್ರತಿಭಟನಾಕಾರರು ತೇಜಸ್ವಿ ಸೂರ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಬಾಬಾಜಾನ ಮುಧೋಳ, ನರಸಿಂಹ ಪಾಲವಾಯಿ, ಶೋಭಾ ಕಮತರ, ಕಾಂಗ್ರೆಸ್ ಮುಖಂಡ ಮೋಹನ್ ಹಿರೇಮನಿ, ವಿಜಯ ಗುಂಟ್ರಾಳ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

  • ಟಾಟಾ ಏಸ್ ಪಲ್ಟಿ- 12 ಮಂದಿ ಕೂಲಿ ಕಾರ್ಮಿಕರಿಗೆ ಗಾಯ

    ಟಾಟಾ ಏಸ್ ಪಲ್ಟಿ- 12 ಮಂದಿ ಕೂಲಿ ಕಾರ್ಮಿಕರಿಗೆ ಗಾಯ

    – 6 ಮಂದಿಯ ಸ್ಥಿತಿ ಗಂಭೀರ

    ಚಾಮರಾಜನಗರ: ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಟಾಟಾ ಏಸ್ ಪಲ್ಟಿಯಾಗಿ 12 ಮಂದಿ ಗಾಯಗೊಂಡಿದ್ದು, 6 ಮಂದಿಯ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಕೊಳ್ಳೇಗಾಲ ತಾಲೂಕಿನ ಮತ್ತಿಪುರ ಕ್ರಾಸ್ ನಲ್ಲಿ ನಡೆದಿದೆ.

    ನರೀಪುರದಿಂದ 14 ಮಂದಿ ಕೂಲಿ ಕಾರ್ಮಿಕರನ್ನು ಕಬ್ಬು ಕಟಾವಿಗಾಗಿ ಟಾಟಾ ಏಸ್ ವಾಹನದಲ್ಲಿ ಕರೆತರಲಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿದೆ. ಪರಿಣಾಮ 12 ಮಂದಿ ಗಾಯಗೊಂಡಿದ್ದು, ಅದರಲ್ಲಿ 6 ಕಾರ್ಮಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದ ಗಾಯಾಳುಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಶಾಸಕ ಆರ್. ನರೇಂದ್ರ ಭೇಟಿ ನೀಡಿದ್ದಾರೆ. ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

    ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟ – ಇಬ್ಬರ ಸಾವು

    ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟ – ಇಬ್ಬರ ಸಾವು

    ವಿಜಯಪುರ: ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಎಥಿನಾಲ್ ತುಂಬಿದ ಟ್ಯಾಂಕರ್ ನ್ನು ಖಾಲಿ ಮಾಡಿ ಟ್ಯಾಂಕರ್ ಅನ ಕೆಲ ಭಾಗಕ್ಕೆ ವೆಲ್ಡಿಂಗ್‍ಗಾಗಿ ಗ್ಯಾರೇಜ್‍ಗೆ ತರಲಾಗಿತ್ತು. ವೆಲ್ಡಿಂಗ್ ಮಾಡುವಾಗ ಟ್ಯಾಂಕರ್ ಬ್ಲಾಸ್ಟ್ ಆಗಿ ಗ್ಯಾರೇಜ್‍ನ ಕೆಲಸಗಾರರಾದ ರಾಜು ಹಾಗೂ ಪ್ರಕಾಶ್ ಟೋನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ವಿಜಯಪುರ ನಗರದ ರೈಲ್ವೆ ನಿಲ್ದಾಣದ ಬಳಿ ನಾಡಗೌಡ ರೋಡಲೈನ್ಸ್ ಎಂಬ ಗ್ಯಾರೇಜ್ ನಲ್ಲಿ, ಈ ಘಟನೆ ನಡೆದಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ವಿಶ್ವಾನಾಥ್ ಬಡಿಗೇರ, ಪ್ರಕಾಶ್ ಶಿರೋಳ, ಬಸವರಾಜ್ ಡೊಣೂರ್ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಸ್ಫೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

    ವಿಜಯಪುರದ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ವಿಜಯಪುರ ಎಸ್ಪಿ ಪ್ರಕಾಶ್ ನಿಕ್ಕಮ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಪ್ರಕಾಶ್ ನಿಕ್ಕಮ್ ತಿಳಿಸಿದ್ದಾರೆ.

  • ಕಾರ್ಮಿಕರನ್ನ ಕರೆದೊಯ್ಯುತ್ತಿದ್ದ ಬಸ್ ಪಲ್ಟಿ – 30 ಮಂದಿ ಆಸ್ಪತ್ರೆಗೆ ದಾಖಲು

    ಕಾರ್ಮಿಕರನ್ನ ಕರೆದೊಯ್ಯುತ್ತಿದ್ದ ಬಸ್ ಪಲ್ಟಿ – 30 ಮಂದಿ ಆಸ್ಪತ್ರೆಗೆ ದಾಖಲು

    ಚಿಕ್ಕಬಳ್ಳಾಪುರ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 30 ಮಂದಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.

    ಗೌರಿಬಿದನೂರು ನಗರ ಹೊರವಲಯದ ನೂತನ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆ ಎದುರು ಘಟನೆ ನಡೆದಿದ್ದು, ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಗೌರಿಬಿದನೂರು ತಾಲೂಕಿನ ಶ್ರಾವಂಡಹಳ್ಳಿ, ಚಂದನದೂರು, ಮಧುಗಿರಿ ತಾಲೂಕಿನ ಯಾಕರ್ಲಹಳ್ಳಿ, ಕೊಡಗೇನಹಳ್ಳಿ ಕಡೆಯವರು ಎಂದು ತಿಳಿದುಬಂದಿದೆ.

    ದೊಡ್ಡಬಳ್ಳಾಪುರದ ಎವರ್ ಬ್ಲೂ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಕೆಲಸ ಮುಗಿಸಿ ಫ್ಯಾಕ್ಟರಿಗೆ ಸೇರಿದ ಖಾಸಗಿ ಬಸ್ಸಿನಲ್ಲೇ ಮನೆಗೆ ವಾಪಾಸ್ಸಾಗುತ್ತಿದ್ದರು. ಆದರೆ ಗೌರಿಬಿದನೂರು ನಗರಕ್ಕೆ ಎಂಟ್ರಿ ಕೊಡುವ ಆರಂಭದಲ್ಲೇ ನೂತನ ರಸ್ತೆ ನಿರ್ಮಾಣ ಮಾಡಿದ್ದು, ರಸ್ತೆ ಮಧ್ಯೆ ಭಾಗ ಹೊಸದಾಗಿ ರಸ್ತೆ ವಿಭಜಕ ಆಳವಡಿಸಲಾಗಿದೆ. ಈ ರಸ್ತೆ ವಿಭಜಕದ ಬಗ್ಗೆ ಅರಿವಿಲ್ಲದ ಚಾಲಕ ರಸ್ತೆ ವಿಭಜಕದ ಮೇಲೆ ಬಸ್ ಹರಿಬಿಟ್ಟಿದ್ದಾನೆ.

    ವಿಭಜಕದ ಮೇಲೆ ಬಸ್ ಹತ್ತಿದ ಪರಿಣಾಮ ಬಸ್ ಉರುಳಿದೆ. ಹೀಗಾಗಿ 30 ಮಂದಿ ಗಾಯಗೊಂಡು ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಟ್ಟಡ ನಿರ್ಮಾಣದ ವೇಳೆ ಕುಸಿದ ಗುಡ್ಡ – ಮೂವರು ಜೀವಂತ ಸಮಾಧಿ

    ಕಟ್ಟಡ ನಿರ್ಮಾಣದ ವೇಳೆ ಕುಸಿದ ಗುಡ್ಡ – ಮೂವರು ಜೀವಂತ ಸಮಾಧಿ

    ಮಂಗಳೂರು: ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಪಕ್ಕದ ಗುಡ್ಡವೊಂದು ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡು ಜೀವಂತ ಸಮಾಧಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿರುವ ಪ್ರಸಿದ್ಧ ಕ್ಷೇತ್ರ ಒಡಿಯೂರು ಶ್ರೀ ದತ್ತಾಂಜನೇಯ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಪಿಲ್ಲರ್‍ಗಾಗಿ ಗುಂಡಿ ತೆಗೆಯಲಾಗಿತ್ತು. ಜೆಸಿಬಿ ಮೂಲಕ ಕೆಳಭಾಗದಿಂದ ಗುಡ್ಡದ ಮಣ್ಣು ತೆಗೆಯುತ್ತಿದ್ದಾಗ ಗುಡ್ಡದ ಒಂದು ಭಾಗ ಕುಸಿದು ಕೆಳಗೆ ಬಿದ್ದಿದ್ದು ಕೆಳ ಭಾಗದಲ್ಲಿ ಕೆಲಸ ನಿರತರಾಗಿದ್ದ ಮೂವರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಮಣ್ಣಿನಡಿಯಲ್ಲಿದ್ದ ಓರ್ವ ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸುಳ್ಯದ ಅಲಂಗಾರು ನಿವಾಸಿ ಬಾಳಪ್ಪ ನಾಯ್ಕ(56), ಬಂಟ್ವಾಳದ ಮಾಣಿಲ ಗ್ರಾಮದ ನಿವಾಸಿ ಪ್ರಕಾಶ್(42) ಹಾಗೂ ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ನಿವಾಸಿ ರಮೇಶ್ (50)ಮೃತಪಟ್ಟ ದುರ್ದೈವಿಗಳು. ಮತ್ತೋರ್ವ ಕಾರ್ಮಿಕ ಮಂಗಳೂರಿನ ಉಳ್ಳಾಲ ಕುತ್ತಾರು ನಿವಾಸಿ ಪ್ರಭಾಕರ್ ಗಂಭೀರ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ನಡೆದಾಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವವರನ್ನು ಮೇಲೆತ್ತುವ ಪ್ರಯತ್ನ ಮಾಡಿದ್ರೂ ಮೂವರು ಆ ವೇಳೆಗೆ ಜೀವಂತ ಸಮಾಧಿಯಾಗಿದ್ದರು. ಘಟನೆಯ ಬಗ್ಗೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಆರು ವಲಸೆ ಕಾರ್ಮಿಕರು ಬಲಿ

    ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಆರು ವಲಸೆ ಕಾರ್ಮಿಕರು ಬಲಿ

    ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಪಶ್ಚಿಮ ಬಂಗಾಳದ ಐವರು ವಲಸೆ ಕಾರ್ಮಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಘಟನೆಯಲ್ಲಿ ಕಾರ್ಮಿಕರೊಬ್ಬರು ತೀವ್ರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇದೀಗ ಆ ಕಾರ್ಮಿಕ ಸಹ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಂತ್ರಸ್ತರೆಲ್ಲರೂ ಪಶ್ಚಿಮ ಬಂಗಾಳದ ಮಿರ್ಷಿದಾಬಾದ್ ಜಿಲ್ಲೆಯವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ವಲಸಿಗರ ಮೇಲೆ ದಾಳಿ ನಡೆಸಲು ಈಗ ಉಗ್ರರು ಮುಂದಾಗುತ್ತಿದ್ದು, ಕೆಲ ದಿನದ ಹಿಂದೆ ಲಾರಿ ಚಾಲಕರ ಮೇಲೆ ದಾಳಿ ನಡೆಸಿದ್ದರು.

    ಇಂದು ಬೆಳಗ್ಗೆ ಸಹ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‍ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಪುಲ್ವಾಮಾದ ಡ್ರಾಬ್‍ಗ್ರಮ್ ಪ್ರದೇಶದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದರು. ಪರೀಕ್ಷೆಗೆ ತೊಂದರೆಯಾಗದಂತೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಆರ್‍ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು.

    ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ಲಭಿಸಿದ್ದು, ಯೋಧರು ಪ್ರತಿದಾಳಿ ನಡೆಸಿದ್ದಾರೆ. ಉಗ್ರರು ಸುಮಾರು 6 ರಿಂದ 7 ಸುತ್ತು ಗುಂಡು ಹಾರಿಸಿದ್ದರು ಎಂಬ ಮಾಹಿತಿ ಲಭಿಸಿದೆ. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಹೆಚ್ಚಿನ ಸೇನೆಯನ್ನು ಕರೆಯಿಸಿಕೊಂಡಿರುವ ಪೊಲೀಸರು, ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಆರಂಭಗೊಂಡಿದೆ.

    ಯುರೋಪ್‍ನ ಯೂನಿಯನ್ ಸಂಸದರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಮಯದಲ್ಲೇ ಉಗ್ರರು ದಾಳಿ ನಡೆಸಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು ಬಳಿಕ ಕಣಿವೆಯ ಪ್ರದೇಶದ ಸ್ಥಿತಿಗತಿ ಬಗ್ಗೆ ತಿಳಿಯಲು ಯುರೋಪಿಯನ್ ಯೂನಿಯನ್ ಸಂಸದರು ಭೇಟಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಸೊಪೋರ್ ಬಸ್ ನಿಲ್ದಾಣದಲ್ಲಿ ಸೋಮವಾರ ಗ್ರೇನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

  • ಹಬ್ಬದ ಸಂದರ್ಭದಲ್ಲಿ ನಮಗಾಗಿ ಸೇವೆ ಸಲ್ಲಿಸ್ತಿರೋರನ್ನು ನೆನೆಯಿರಿ- ಮೋದಿ

    ಹಬ್ಬದ ಸಂದರ್ಭದಲ್ಲಿ ನಮಗಾಗಿ ಸೇವೆ ಸಲ್ಲಿಸ್ತಿರೋರನ್ನು ನೆನೆಯಿರಿ- ಮೋದಿ

    ನವದೆಹಲಿ: ಎಲ್ಲರೂ ನಮ್ಮ ಕುಟುಂಬದವರೊಂದಿಗೆ ದೀಪಾವಳಿ ಆಚರಿಸುತ್ತಿದ್ದೇವೆ. ಈ ಸಂದರ್ಭಲ್ಲಿ ನಮಗಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಶುಭಾಶಯ ಕೋರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

    ವಾರಣಾಸಿಯ ಬಿಜೆಪಿ ಕಾರ್ಯಕರ್ತರೊಂದಿಗಿನ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ಅವರು, ಗಡಿಯಲ್ಲಿ ಹಾಗೂ ದೇಶದೊಳಗಿರುವ ಸೈನಿಕರು, ಭದ್ರತಾ ಸಿಬ್ಬಂದಿ, ಪೊಲೀಸರು ಹಾಗೂ ಎನ್‍ಡಿಆರ್‍ಎಫ್ ಕಾರ್ಯನಿರ್ವಹಿಸುತ್ತಿರುವವರಿಗೆ ಹಬ್ಬದ ಶುಭಾಶಯವನ್ನು ತಿಳಿಸಿದರು.

    ಸದಾ ನಮ್ಮೊಂದಿಗಿರುವ ಕಾರ್ಯಕರ್ತರಿಗೆ ದೀಪಾವಳಿಯ ಸಂದರ್ಭದಲ್ಲಿ ಧನ್ಯವಾದ ಅರ್ಪಿಸುತ್ತೇನೆ. ಪರಿಶ್ರಮ, ತ್ಯಾಗ, ನಿಷ್ಟೆ, ಸೇವಾ ಭಾವಕ್ಕೆ ಆದರಪೂರ್ವಕವಾಗಿ ನಮನ ಸಲ್ಲಿಸುತ್ತೇನೆ ಎಂದು ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.

    ಈ ಬಾರಿ ಮಳೆಯಿಂದ ಜನ ಕಂಗೆಟ್ಟಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಈಗಲು ಕೂಡ ಮಳೆ ಬರುತ್ತಿದೆ. ಕಾಶಿಯಲ್ಲೂ ಇದೆ ಪರಿಸ್ಥಿತಿ ಇದೆ. ಎಲ್ಲರೂ ಸೇರಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ನಾಗರಿಕರು, ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನರೊಂದಿಗೆ ನಾವೂ ಇರಬೇಕಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

    ಜನಸಂಘದಿಂದಲೂ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೀರಿ. ಚುನಾವಣೆಯ ಸಂದರ್ಭದಲ್ಲಿ ಹಗಲು, ರಾತ್ರಿ ಎನ್ನದೆ ದುಡಿದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೀರಿ. ಅಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ವಾರಣಾಸಿಯಲ್ಲಿ ತುಂಬಾ ಕೆಲಸ ಮಾಡಿದ್ದೀರಿ. ಇದು ನನಗೆ ಸಂತೃಪ್ತಿ ತಂದಿದೆ. ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

  • ಬಿಎಸ್‍ವೈ ಬೇರೆ ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ – ಎಚ್‍ಡಿಡಿ

    ಬಿಎಸ್‍ವೈ ಬೇರೆ ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ – ಎಚ್‍ಡಿಡಿ

    ಯಾದಗಿರಿ: ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ತಾವೊಬ್ಬರೆ ಲಿಂಗಾಯತ ನಾಯಕ ಎಂದುಕೊಂಡಿದ್ದಾರೆ. ಬೇರೆ ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಬಿಎಸ್‍ವೈ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಯಾದಗಿರಿ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶರಣಗೌಡ ಕಂದಕೂರ ಲಿಂಗಾಯತ ನಾಯಕರಾಗಿ ಬೆಳೆಯುತ್ತಿದ್ದಾರೆ. ಅವರನ್ನು ತುಳಿಯಲು ಯಡಿಯೂರಪ್ಪ ಮುಂದಾಗಿದ್ದಾರೆ. ದೇವೇಗೌಡ ಬರೀ ಗಲಾಟೆ ಮಾಡಿಸಿ ರಾಜಕೀಯಕ್ಕೆ ಬಂದಿದ್ದಾನೆ ಅಂದುಕೊಂಡಿದ್ದಾರೆ. ಅದಕ್ಕೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ನನ್ನ 60 ವರ್ಷದ ರಾಜಕೀಯದಲ್ಲಿ ಇಂತಹ ಪರಿಸ್ಥಿತಿ ಎಂದೂ ಕಂಡಿಲ್ಲ. ಇದಕ್ಕಾಗಿ ಪೊಲೀಸರ ಮೇಲೆ ಅಸಮಾಧಾನ ಇದೆ ಎಂದರು.

    ಜೆಡಿಎಸ್ ಕಾರ್ಯಕರ್ತರೊಂದಿಗೆ ಯಾದಗಿರಿ ಜಿಲ್ಲಾಡಳಿತ ಭವನದ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು.

    ಯಾದಗಿರಿ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದೇವದುರ್ಗ ಆಡಿಯೋ ಪ್ರಕರಣದ ಹಿನ್ನೆಲೆ ನಮ್ಮ ಪಕ್ಷದ ಯುವ ಮುಖಂಡ ಶರಣಗೌಡ ಕಂದಕೂರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ನಮ್ಮ ಹೋರಾಟ ಇಷ್ಟಕ್ಕೆ ಕೊನೆಯಾಗದು. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರ ವಿರುದ್ಧ ಈ ರೀತಿ ಹಗೆತನ ನಡೆದರೆ ನಾನು ಸಹಿಸಲಾರೆ. ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ರಾಜಕೀಯ ದ್ವೇಷದಿಂದ ಗುರುಮಿಠಕಲ್ ಕ್ಷೇತ್ರದ ಅನುದಾನ ರದ್ದು ಮಾಡಿದ್ದಾರೆ. ಇದಕ್ಕಾಗಿ ಸಿಎಂ ಬಿಎಸ್‍ವೈ ಆಗಮಿಸಿದಾಗ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕಾರು ತಡೆದು ಮಾತನಾಡುವ ಪ್ರಯತ್ನ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಹತ್ತಿರ ಯಾವುದೇ ಮಾರಕಾಸ್ತ್ರ ಇರಲಿಲ್ಲ. ಆದರೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾನು ಕರೆ ಮಾಡಿದಾಗ ಡಿಜಿ ಅವರು ಪಿಎಸ್‍ಐ ಮೇಲೆ ಕ್ರಮಕೈಗೊಳ್ಳುತ್ತೇನೆಂದು ಹೇಳಿದರು. ನಂತರ ಕ್ರಮ ಕೈಗೊಳ್ಳುವುದು ಕಷ್ಟ ಎಂದರು. ಸರ್ಕಾರದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸಹ ಸ್ವಾತಂತ್ರ್ಯ ಇಲ್ಲವಾಗಿದೆ ಎಂದು ಹರಿಹಾಯ್ದರು.

    ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಆದರೆ ಅದನ್ನೇ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಶಾಸಕರುಗಳ ಕ್ಷೇತ್ರಗಳಿಗೆ ಕುಮಾರಸ್ವಾಮಿ ನೀಡಿದ್ದ ಅನುದಾನದಲ್ಲಿ ಕಡಿತ ಮಾಡಿದ್ದಾರೆ. ಇದನ್ನು ಕೇಳಲು ಹೋದ ಜೆಡಿಎಸ್ ಕಾರ್ಯಕರ್ತರ ಮೇಲೆ ಯಾದಗಿರಿಯಲ್ಲಿ ಲಾಠಿಚಾರ್ಜ್ ಮಾಡಲಾಗಿದೆ ಎಂದು ಆರೋಪಿಸಿದರು.

    ಉರಿ ಬಿಸಿಲಿನಲ್ಲೇ ಎಚ್‍ಡಿಡಿ ಧರಣಿ ಕುಳಿತಿದ್ದರು. ಇದೇ ವೇಳೆ ನಗರ ಪೊಲೀಸ್ ಠಾಣೆಯ ಪಿಎಸ್‍ಐ ಬಾಪುಗೌಡ ಅವರನ್ನು ಅಮಾನತು ಮಾಡುವಂತೆ ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸಿದರು. ಮಾಜಿ ಸಚಿವ ಬಂಡೆಪ್ಪ ಕಾಂಶಪೂರ, ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಗೌಡ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    2 ದಿನದಿಂದ ಕಾರ್ಯಕರ್ತರ ಪ್ರತಿಭಟನೆ
    ನಗರ ಪಿಎಸ್‍ಐ ಬಾಪುಗೌಡರನ್ನು ಅಮಾನತು ಮಾಡುವಂತೆ, ಕಳೆದ ಎರಡು ದಿನಗಳಿಂದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾರ್ಯಕರ್ತರ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೈ ಜೋಡಿಸಿದ್ದಾರೆ.

    ಭದ್ರತಾ ದೃಷ್ಟಿಯಿಂದ ದೇವೇಗೌಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ಜಿಲ್ಲಾಡಳಿತ ಹೇಳಿತ್ತು. ಜಿಲ್ಲಾಡಳಿತ ಮನವಿಗೆ ಸೊಪ್ಪು ಹಾಕದ ದೇವೇಗೌಡರು ಇಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಎಚ್‍ಡಿಡಿ ಆಗಮಿಸುತ್ತಿರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಲಾಗಿತ್ತು.