Tag: workers

  • ತಮ್ಮ ಕೆಲಸಗಾರರಿಗೆ ಸಹಾಯ ಹಸ್ತ ಚಾಚಿದ ಪ್ರಕಾಶ್ ರೈ

    ತಮ್ಮ ಕೆಲಸಗಾರರಿಗೆ ಸಹಾಯ ಹಸ್ತ ಚಾಚಿದ ಪ್ರಕಾಶ್ ರೈ

    ಬೆಂಗಳೂರು: ಕೊರೊನಾದಿಂದಾಗಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದ್ದು, ಉಳ್ಳವರು ಬಡವರಿಗೆ ಹಾಗೂ ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ನಟ ನಟಿಯರು ಸಹ ಇದಕ್ಕೆ ಕೈ ಜೋಡಿಸಿದ್ದು, ತಮ್ಮ ಕೆಲಸಗಾರರಿಗೆ ಹಾಗೂ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ನಟ ಪ್ರಕಾಶ್ ರೈ ತಮ್ಮ ವೈಯಕ್ತಿಕ ಕೆಲಸಗಾರರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೆ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

    ಕೊರೊನಾ ಮಹಾಮಾರಿ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದು, ಇಡೀ ದೇಶವೇ ತತ್ತರಿಸಿ ಹೋಗಿದೆ. ಹೀಗಾಗಿ ಸ್ಟಾರ್‍ಗಳು ಸಹಾಯ ಮಾಡಲು ಮುಂದಾಗಿದ್ದಾರೆ. ಸಂಸದೆ ನುಸ್ರತ್ ಜಹಾನ್ ಸಹ ಬಡವರಿಗೆ ಮಾಸ್ಕ್ ವಿತರಿಸುವ ಮೂಲಕ ಸಹಾಯ ಮಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಸಿನಿಮಾ ನಿರ್ಮಾಪಕರ ಸಂಘದಿಂದ ದಿನಗೂಲಿ ನೌಕರರಿಗಾಗಿ ಪರಿಹಾರ ನಿಧಿ ಸ್ಥಾಪಿಸಲಾಗಿದೆ ಎಂದು ಹೇಳಲಾಗಿತ್ತು. ಈ ಮೂಲಕ ಚಲನಚಿತ್ರದ ದಿನಗೂಲಿ ನೌಕರರಿಗೆ ಸಹಾಯ ಹಸ್ತ ಚಾಚಲು ನಿರ್ಮಾಪಕರ ಸಂಘ ಮುಂದಾಗಿತ್ತು. ಪರಿಹಾರ ನಿಧಿ ಸ್ಥಾಪಿಸಿ ಯಾರೂ ಬೇಕಾದರೂ ಈ ನಿಧಿಗೆ ಹಣ ಕಳುಹಿಸಬಹುದು. ಇದರಿಂದ ದಿನಗೂಲಿ ನೌಕರರಿಗೆ ಸಂಬಳ ನೀಡಲಾಗುವುದು ಎಂದು ಹೇಳಿತ್ತು. ಇದಕ್ಕೆ ಹೆಚ್ಚು ಜನ ಸ್ಪಂದಿಸಿದ್ದರು.

    ನಟ ಪ್ರಕಾಶ್ ರೈ ಸಹ ತಮ್ಮ ಕೆಲಸಗಾರರಿಗೆ ಮೇ ತಿಂಗಳವರೆಗಿನ ಸಂಬಳವನ್ನು ಮುಂಗಡವಾಗಿ ಪಾವತಿಸಿರುವುದಾಗಿ ತಿಳಿಸಿದ್ದಾರೆ, ಈ ಕುರಿತು ಟ್ವೀಟ್ ಮಾಡಿರುವ ಅವರು, ಹ್ಯಾಶ್ ಟ್ಯಾಗ್‍ನೊಂದಿಗೆ ಜನತಾ ಕಫ್ರ್ಯೂ ಎಂದು ಬರೆದುಕೊಂಡು, ಇಂದು ನಾನು ಮಾಡಿರುವ ಕೆಲಸ ಜೀವನಕ್ಕೆ ನಾನು ಮರಳಿ ನೀಡುವಂತಹದ್ದಾಗಿದೆ. ಅಲ್ಲದೆ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ ಎಂದು ಬರೆದಿದ್ದಾರೆ. ಇದರೊಂದಿಗೆ ಇಂಗ್ಲಿಷ್‍ನಲ್ಲಿ ಬರೆದಿರುವ ಇಮೇಜ್‍ನ್ನು ಹಾಕಿದ್ದಾರೆ.

    ನನ್ನ ಬಳಿ ಕಾಯ್ದಿರಿಸಿದ್ದ ಹಣವನ್ನು ನೋಡಿದೆ, ಈ ಹಣದಲ್ಲೇ ನನ್ನ ಫಾರ್ಮ್, ಮನೆ ಹಾಗೂ ಸಿನಿಮಾ ನಿರ್ಮಾಣದ ಕೆಲಸಗಾರರಿಗೆ ಮುಂಗಡವಾಗಿ ಸಂಬಳವನ್ನು ಪಾವತಿಸಿದೆ. ಅಲ್ಲದೆ ಫೌಂಡೇಷನ್ ಹಾಗೂ ವೈಯಕ್ತಿಕ ಕೆಲಸಗಾರರಿಗೆ ಮೇ ತಿಂಗಳವರೆಗೆ ಸಂಬಳ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಸೋಷಿಯಲ್ ಡಿಸ್ಟೆನ್ಸ್ ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿರುವ ನನ್ನ ಮೂರು ಸಿನಿಮಾಗಳ ದಿನಗೂಲಿ ಕೆಲಸಗಾರರಿಗೂ ಅರ್ಧದಷ್ಟಾದರೂ ಸಂಬಳ ನೀಡಬೇಕೆಂದು ನಿರ್ಧರಿಸಿದ್ದೇನೆ. ಇನ್ನೂ ಈ ಕೆಲಸ ಮಾಡಿಲ್ಲ, ಹಣದ ಅಗತ್ಯತೆ ನೋಡಿಕೊಂಡು ಕೊಡುತ್ತೇನೆ. ಈ ಪ್ರಕ್ರಿಯೆ ಮುಂದುವರಿಯಲಿದೆ. ನಿಮ್ಮಲ್ಲರಲ್ಲೂ ನಾನು ಬೇಡಿಕೊಳ್ಳುತ್ತೇನೆ, ಶಕ್ತಿ ಇದ್ದವರು ನಿಮ್ಮ ಹತ್ತಿರದಲ್ಲಿರುವವರಿಗೆ ಅಗತ್ಯವಿದ್ದರೆ ಸಹಾಯ ಮಾಡಿ. ಜೀವನಕ್ಕೆ ನಾವು ಮರಳಿ ಕೊಡುವ ಸಂದರ್ಭ ಇದಾಗಿದೆ. ಅಲ್ಲದೆ ನಾವೆಲ್ಲರೂ ಒಟ್ಟಾಗಿ ನಿಲ್ಲುವ ಸಮಯ ಇದಾಗಿದೆ ಎಂದು ಬರೆದುಕೊಂಡಿರುವ ಇಮೇಜ್‍ನ್ನು ಟ್ವೀಟ್ ಮಾಡಿದ್ದಾರೆ.

  • ಮತ್ತೆ ಓಡಲಿವೆ ಏಷ್ಯಾದ ಮೊದಲ ಸಹಕಾರಿ ಸಂಸ್ಥೆ ಬಸ್‍ಗಳು!

    ಮತ್ತೆ ಓಡಲಿವೆ ಏಷ್ಯಾದ ಮೊದಲ ಸಹಕಾರಿ ಸಂಸ್ಥೆ ಬಸ್‍ಗಳು!

    ಚಿಕ್ಕಮಗಳೂರು: ಕಳೆದ 30 ವರ್ಷದಿಂದ ಸೇವೆ ಸಲ್ಲಿಸಿ, ಆರ್ಥಿಕ ಸಂಕಷ್ಟಕ್ಕೀಡಾಗಿ ಎಂಟು ದಿನಗಳಿಂದ ಬೀಗ ಹಾಕಿದ್ದ ಏಷ್ಯಾದ ಮೊದಲ ಸಹಕಾರಿ ಸಂಸ್ಥೆ ಹಾಗೂ ದೇಶದ ಹೆಮ್ಮೆಯಾಗಿದ್ದ ಜಿಲ್ಲೆಯ ಕೊಪ್ಪ ತಾಲೂಕಿನ ಸಹಕಾರ ಸಾರಿಗೆ ಸಂಸ್ಥೆ ಬಸ್‍ಗಳು ಮತ್ತೆ ಓಡುವ ಸೂಚನೆ ಸಿಕ್ಕಿದ್ದು, ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಮುಷ್ಕರವನ್ನ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.

    ಕಾರ್ಮಿಕರೇ ಮಾಲೀಕರಾಗಿ 30 ವರ್ಷಗಳಿಂದ ಹಳ್ಳಿಗರಿಗೆ ಸೇವೆ ಸಲ್ಲಿಸುತ್ತಿದ್ದ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಸಂಸ್ಥೆಗೆ ಬೀಗ ಹಾಕಿ, 75 ಬಸ್‍ಗಳನ್ನು ಶೆಡ್‍ನಲ್ಲಿ ನಿಲ್ಲಿಸಿ, ಸರ್ಕಾರದ ನೆರವಿಗಾಗಿ ಪ್ರತಿಭಟನೆಗೆ ಮುಂದಾಗಿದ್ದರು. ಕಳೆದ ಎಂಟು ದಿನಗಳಿಂದ ಕೊಪ್ಪ ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಇಂದು ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಡಿ.ಎನ್.ಜೀವರಾಜ್ ಸ್ಥಳದಲ್ಲೇ ಸಹಕಾರ ಸಚಿವರ ಜೊತೆ ಮಾತುಕತೆ ನಡೆಸಿದರು. ಜೀವರಾಜ್ ಸರ್ಕಾರದಿಂದ ಸಹಕಾರ ಕೊಡಿಸುವ ಭರವಸೆ ನೀಡಿದ ಮೇಲೆ ಕಾರ್ಮಿಕರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಆದರೆ, ಬಸ್‍ಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಿದ್ದು, ಸರ್ಕಾರದಿಂದ ಸಹಕಾರ ದೊರೆತ ಮೇಲೆ ಬಸ್‍ಗಳನ್ನ ರಸ್ತೆಗಿಳಿಸಲು ತೀರ್ಮಾನಿಸಿದ್ದಾರೆ.

    ಕಳೆದೊಂದು ವಾರದಿಂದ ಬಸ್‍ಗಿಳಿಲ್ಲದೆ ಜನ ಹೈರಾಣಾಗಿದ್ದು, ಜೀವರಾಜ್ ಅವರ ಭರವಸೆಯ ಮಾತುಗಳಿಂದ ಮಲೆನಾಡಿಗರು ನಿಟ್ಟುಸಿರು ಬಿಟ್ಟಿದ್ದು, ಕೂಡಲೇ ಸರ್ಕಾರದ ನೆರವು ನೀಡಿಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಸಮಸ್ಯೆ ಬಗೆಹರಿಯುತ್ತೆ ಎಂದಿದ್ದ ವಿನಯ್ ಗುರೂಜಿ: ಕಾರ್ಮಿಕರ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದ್ದ ಅವಧೂತ ವಿನಯ್ ಗುರೂಜಿ ಅವರು ಕಾರ್ಮಿಕರ ಸಮಸ್ಯೆ ಬಗೆಹರಿಯುತ್ತೆ ಎಂದಿದ್ದರು. ನಿಮ್ಮೆಲ್ಲರ ಧ್ವನಿಯಾಗಿ ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಕಾರ್ಮಿಕರಿಗೆ ಭರವಸೆ ನೀಡಿದ್ದರು. ಒಂದು ವೇಳೆ, ಸಮಸ್ಯೆ ಬಗೆಹರಿಯದಿದ್ದರೆ ನಿಮ್ಮ ಜೊತೆ ನಾನು ಹಾಗೂ ಆಶ್ರಮದ ಎಲ್ಲರೂ ಉಪವಾಸ ಕುಳಿತುಕೊಳ್ಳುತ್ತೇವೆ ಎಂದಿದ್ದರು. ಇಂದು ಜೀವರಾಜ್ ಅವರು ಸರ್ಕಾರದಿಂದ ಸಹಕಾರ ಕೊಡಿಸುವ ಭರವಸೆ ನೀಡಿದ್ದು, ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ.

  • ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ

    ನಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದ ದೇಶದ ಮೊದಲ ಸಹಕಾರ ಸಾರಿಗೆ

    ಚಿಕ್ಕಮಗಳೂರು: ಮಲೆನಾಡ ಮನೆ-ಮನಗಳಲ್ಲಿ ಆತ್ಮೀಯತೆಯ ಭಾವನಾತ್ಮಕ ಕೊಂಡಿ ಬೆಸೆದಿದ್ದ ದೇಶದ ಮೊದಲ ಸಹಕಾರ ಸಾರಿಗೆ ಸಂಸ್ಥೆ ಕಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದೆ. ಮಾಲೀಕರೇ ಇಲ್ಲದೆ ಕಾರ್ಮಿಕರೇ ನಡೆಸುತ್ತಿದ್ದ ಈ ಸಹಕಾರ ಸಾರಿಗೆ ಸಂಸ್ಥೆಯ ಬೆನ್ನಿಗೆ ಸರ್ಕಾರ ನಿಲ್ಲದಿದ್ದರೆ ಈ ಸಾರಿಗೆ ಸಂಸ್ಥೆ ಇನ್ನು ನೆನಪಾಗಿ ಮಾತ್ರ ಉಳಿಯುತ್ತೆ.

    ಕೆಲಸಗಾರರೆಲ್ಲರೂ ಮಾಲೀಕರೇ ಆಗಿದ್ದ ಈ ಸಂಸ್ಥೆಯಲ್ಲಿ 65ಕ್ಕೂ ಹೆಚ್ಚು ಬಸ್‍ಗಳು ಮಲೆನಾಡಿಗರ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಪ್ರತಿ ನಿತ್ಯ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 60-70 ಸಾವಿರ ಜನ ನಿತ್ಯ ಪ್ರಯಾಣಿಸುತ್ತಿದ್ದರು. ಆದರೆ, ಬರುತ್ತಿದ್ದ ಹಣ ನಿತ್ಯದ ಡಿಸೇಲ್‍ಗೂ ಆಗಾದ ಕಾರಣ 30 ವರ್ಷಗಳಿಂದ ದಣಿವರಿಯದೆ ಓಡಿದ ಬಸ್ಸಿನ ಚಕ್ರಗಳು ಚಿರನಿದ್ರೆಯತ್ತ ಧಾವಿಸಿವೆ. ಸಹಾಯಕ್ಕಾಗಿ ಸರ್ಕಾರದ ಕದ ಬಡಿದರೂ ಆಶ್ವಾಸನೆ ಸಿಕ್ಕಿತೇ ವಿನಃ, ಸ್ಪಂದನೆ ಸಿಕ್ಕಲಿಲ್ಲ. ಹಾಗಾಗಿ, ನಿಸ್ವಾರ್ಥ ಸಾರಿಗೆ ಸಂಸ್ಥೆ ತನ್ನ ಸಂಚಾರವನ್ನ ಸ್ಥಗಿತಗೊಳಿಸಿದೆ.

    ಜನವರಿ 3, 2017ರಂದು ಬೆಳ್ಳಿಹಬ್ಬ ಆಚರಿಸಿಕೊಂಡ ಸಾರಿಗೆ ಸಂಸ್ಥೆ ನಷ್ಟವನ್ನ ಸರಿದೂಗಿಸಲಾಗದೆ ವೇತನ ಹೆಚ್ಚಳ, ಬೋನಸ್ ಯಾವೂದನ್ನೂ ನೀಡದೆ ವರ್ಷಗಳೇ ಕಳೆದಿದೆ. ವಿಮೆ ಕಟ್ಟಲೂ ಕೂಡ ಸಂಸ್ಥೆ ಪರದಾಡಿತ್ತು. ಈ ಸಾರಿಗೆ ಸಂಸ್ಥೆಯ ನೆರವಿಗೆ ಸರ್ಕಾರ ಬರದಿದ್ದರೆ ಏಷ್ಯಾ ಖಂಡದಲ್ಲೇ ಮೊದಲ ಹಾಗೂ ಮಾದರಿಯಾದ ಸಂಸ್ಥೆ ಶೀಘ್ರವೇ ಬಾಗಿಲು ಹಾಕಲಿದೆ. 300ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಹಾಗಾಗಿ ಇಂದು ಕಾರ್ಮಿಕರು ಸಂಚಾರವನ್ನ ಸ್ಥಗಿತಗೊಳಿಸಿ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕೂಡ ಭಾಗವಹಿಸುವ ಸಾಧ್ಯತೆ ಇದ್ದು, ಸ್ಥಳೀಯ ನಾಯಕರು ಸಮಾಲೋಚನೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸರ್ಕಾರದ ನೆರವಿಗಾಗಿ ಸಂಸ್ಥೆಯವರು ಸಿಎಂ ಬಿ.ಎಸ್.ವೈ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅಂದು ಯಡಿಯೂರಪ್ಪ ಕೂಡ ಟ್ಯಾಕ್ಸ್ ವಿಚಾರದಲ್ಲಿ ನೆರವಿಗೆ ನಿಲ್ಲೋ ಭರವಸೆ ನೀಡಿದ್ದರು. ಆದ್ರೆ ಯಾವುದೂ ಈಡೇರಲಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗ್ತಿರುವುದರಿಂದ ಕಾರ್ಮಿಕರು ಸಂಚಾರವನ್ನ ಸ್ಥಗಿತಗೊಳಿಸೋ ತೀರ್ಮಾನಕ್ಕೆ ಬಂದಿದ್ದಾರೆ. ಸರ್ಕಾರ ಶೀಘ್ರವೇ 6.50 ಕೋಟಿ ಹಣ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತೆ. ಆ ಕ್ಷಣದಿಂದಲೇ ಮತ್ತೆ ಕಾರ್ಯಾರಂಭ ಮಾಡುತ್ತೇವೆ ಅಂತಿದ್ದಾರೆ ಕಾರ್ಮಿಕರು. ಸರ್ಕಾರದ ನಡೆ ಮೇಲೆ ಒಂದು ಸಂಸ್ಥೆಯ ಭವಿಷ್ಯವಂತೂ ನಿಂತಿದೆ.

    ಸಹಕಾರ ಸಾರಿಗೆ ನಡೆದು ಬಂದ ಹಾದಿ:
    90ರ ದಶಕದಲ್ಲಿ ಲಾಭದಲ್ಲಿದ್ದ ಶಂಕರ್ ಟ್ರಾನ್ಸ್‌ಪೋರ್ಟ್‌ನ ಸಿಬ್ಬಂದಿಗಳು ಮಾಲೀಕರ ಬಳಿ ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟು 2 ತಿಂಗಳಿಗೂ ಹೆಚ್ಚು ಕಾಲ ಮುಷ್ಕರ ಕೈಗೊಂಡಿದ್ರು. ಕಾರ್ಮಿಕರ ಬೇಡಿಕೆ ಈಡೇರಿಸಲು ಒಪ್ಪದ ಮಾಲೀಕರು ಸಂಸ್ಥೆಯನ್ನ ಮುಚ್ಚಿದರು. ಕೆಲಸವಿಲ್ಲದೆ ಅತಂತ್ರರಾದ 123 ಕಾರ್ಮಿಕರು ಶಂಕರ್ ಟ್ರಾನ್ಸ್‌ಪೋರ್ಟ್‌ನವರು ಕೊಟ್ಟ ಪರಿಹಾರ 12 ಲಕ್ಷ ಹಣವನ್ನೇ ಬಂಡವಾಳವನ್ನಾಗಿಸಿಕೊಂಡು, ಅದೇ ಸಂಸ್ಥೆಯ 6 ಹಳೇ ಬಸ್‍ಗಳನ್ನ ಕೊಂಡು 1991 ಮಾರ್ಚ್‍ನಲ್ಲಿ 8 ರಂದು ಸಹಕಾರ ಸಾರಿಗೆ ಆರಂಭಿಸಿದ್ದರು. ಅಂದು ಕಾರ್ಮಿಕ ಮುಖಂಡ ಬಿ.ಕೆ.ಸುಂದರೇಶ್ ಕಾರ್ಮಿಕರ ಬೆನ್ನಿಗೆ ನಿಂತಿದ್ದರು.

    ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಯ ದಟ್ಟಕಾನನದ ಕುಗ್ರಾಮದಲ್ಲೂ ಸಾರಿಗೆ ಬಸ್ ಸಂಚರಿಸಿತ್ತು. 6 ಬಸ್ಸುಗಳಿಂದ ಆರಂಭವಾದ ಸಂಸ್ಥೆಯಲ್ಲೀಗ 75 ಬಸ್‍ಗಳಿವೆ. 1998ರಲ್ಲಿ ಕೊಪ್ಪದಲ್ಲಿ ಕಚೇರಿ ನಿರ್ಮಿಸಿದ್ದಲ್ಲದೆ ಕಂಪ್ಯೂಟರ್ ಬಳಸಿದ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಈ ಸಂಸ್ಥೆಯ ಸಾಹಸಕ್ಕೆ ನಿಬ್ಬೆರಗಾದ ಜಪಾನಿನ ಕ್ಯೊಟೊ ನಗರದ ರಿಟ್ಸುಮೆಕಿನ್ ಯುನಿರ್ವಸಿಟಿಯ ತಂಡ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನ್ನ ದೇಶದ ಸಹಕಾರ ಸಂಸ್ಥೆಯಲ್ಲಿ ಅಳವಡಿಸಿಕೊಂಡಿತು. ಮಂಗಳೂರು ವಿವಿಯ ಪ್ರಾಧ್ಯಾಪಕರು ಇದೇ ಸಾರಿಗೆ ಸಂಸ್ಥೆ ಬಗ್ಗೆ ಅಧ್ಯಯನ ನಡೆಸಿ ಪಿಎಚ್‍ಡಿ ಪಡೆದರು. ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಸಹಕಾರ ಸಾರಿಗೆಯ ಯಶೋಗಾಥೆ ಪಠ್ಯವಾಯ್ತು. ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಂಡಿಸಿದ ಪ್ರಬಂಧಕ್ಕೆ ಕೊಲ್ಲಾಪುರದ ಶಿವಾಜಿ ವಿವಿ ಪಿಎಚ್‍ಡಿಯನ್ನೇ ನೀಡಿ ಗೌರವಿಸಿದೆ.

    ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಅಂತಹಾ ಸಂಸ್ಥೆ ಈಗ, ಸರ್ಕಾರದ ರೀತಿ-ರಿವಾಜುಗಳಿಂದ ಬೀಗ ಹಾಕುವ ಹೊಸ್ತಿಲಲ್ಲಿದೆ. ಸರ್ಕಾರ ಈ ಸಂಸ್ಥೆಗೆ ನೆರವು ನೀಡಿದ್ದೇ ಆದಲ್ಲಿ ಇದರ ಗತವೈಭವದ ದಿನ ಮತ್ತೆ ಆರಂಭಗೊಳ್ಳುತ್ತೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ – ಮೂವರು ಕಾರ್ಮಿಕರಲ್ಲಿ ಸೋಂಕು ಪತ್ತೆ

    ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ – ಮೂವರು ಕಾರ್ಮಿಕರಲ್ಲಿ ಸೋಂಕು ಪತ್ತೆ

    ಚಿಕ್ಕಮಗಳೂರು: ಮಧ್ಯಪ್ರದೇಶ ಹಾಗೂ ಅಸ್ಸಾಂನಿಂದ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರಲ್ಲಿ ಮೂವರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಸುತ್ತಮುತ್ತಲಿನ ಎಸ್ಟೇಟಿನಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.

    ಮೂವರು ಕಾರ್ಮಿಕರ ರಕ್ತದ ಮಾದರಿಯನ್ನ ಶಿವಮೊಗ್ಗದ  ವೈರಸ್ ಪರಿಶೋಧನ ಪ್ರಯೋಗಾಲಯಕ್ಕೆ(ವಿಡಿಎಲ್) ಕಳುಹಿಸಲಾಗಿದೆ. ಮೂವರು ಸೋಂಕಿತರಲ್ಲಿ ಇಬ್ಬರು ಮಧ್ಯಪ್ರದೇಶಕ್ಕೆ ಹಿಂದಿರುಗಿದ್ದು, ಓರ್ವ ಮಹಿಳೆಗೆ ಎನ್.ಆರ್ ಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ತೋಟದ ಉಳಿದ ಕಾರ್ಮಿಕರಿಗೂ ಸೋಂಕು ಹರಡದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಮಂಗನ ಕಾಯಿಲೆ ಪತ್ತೆಯಾಗಿರೋ ಜಾಗವನ್ನ ಹಾಟ್ ಸ್ಪಾಟ್ ಎಂದು ಗುರುತಿಸಿರೋ ಜಿಲ್ಲಾಡಳಿತ, ಆ ಜಾಗದ ಐದು ಕಿ.ಮೀ ಸುತ್ತಳತೆಯಲ್ಲಿ ಕೆಎಫ್‍ಡಿ ರೋಗ ನಿರೋಧಕ ಔಷಧಿಯನ್ನ ಸಿಂಪಡಿಸಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿ ಸುಭಾಷ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಮಹಿಳೆಯಿಂದಲೂ ರೋಗ ಇನ್ನಿತರರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಡಬೂರು ಸುತ್ತಮುತ್ತಲಿನ ಗ್ರಾಮಗಳ 6ರಿಂದ 65 ವರ್ಷದ ಎಲ್ಲಾ ವಯೋಮಾನದವರಿಗೂ ಕೆಎಫ್‍ಡಿ ನಿರೋಧಕ ಲಸಿಕೆ ಹಾಕಲಾಗ್ತಿದೆ.

  • ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರು ಸಾವು

    ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರು ಸಾವು

    ಕೋಲಾರ: ನಿರ್ಮಾಣ ಹಂತದ ಕಲ್ಯಾಣ ಮಂಟಪ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಕೋಲಾರ ತಾಲೂಕಿನ ಚಲುವನಹಳ್ಳಿ ಗೇಟ್ ಬಳಿ ನಡೆದಿದೆ.

    ಬಿಹಾರ ಮೂಲದ ಪ್ರಮೋದ್ (25), ಮಾಮು (45) ಹಾಗೂ ಧರ್ಮೇಂದ್ರ್ (27) ಮೃತ ದುರ್ದೈವಿಗಳು. ಕೋಲಾರ ತಾಲೂಕಿನ ಚಲುವನಹಳ್ಳಿ ಗೇಟ್ ಬಳಿಯ ಬಾಲಾಜಿ ಕಲ್ಯಾಣ ಮಂಟಪದ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಬ್ದುಲ್ ಹಾಗೂ ರಾಕೇಶ್ ಗಾಯಗೊಂಡಿದ್ದು ಅವರನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಟ್ಟಡ ಕೆಲಸ ಮಾಡಲು ಬಿಹಾರದಿಂದ ಬಂದಿದ್ದ 5 ಜನ ಕಾರ್ಮಿಕರು ಶನಿವಾರ ಕಟ್ಟಡ ಕಾಮಗಾರಿಯ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಧರ್ಮೇಂದ್ರ್ ಸಾವನ್ನಪ್ಪಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮೈಸೂರು, ಬೆಂಗ್ಳೂರು ಹೆದ್ದಾರಿ ಅಗಲೀಕರಣ- ಮಣ್ಣು ಕುಸಿದು ಇಬ್ಬರ ಸಾವು

    ಮೈಸೂರು, ಬೆಂಗ್ಳೂರು ಹೆದ್ದಾರಿ ಅಗಲೀಕರಣ- ಮಣ್ಣು ಕುಸಿದು ಇಬ್ಬರ ಸಾವು

    ಮಂಡ್ಯ: ರಸ್ತೆ ಅಗಲೀಕರಣದ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಬಳಿಯ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.

    ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದ ಕೆಲಸ ಸದ್ಯ ನಡೆಯುತ್ತಿದ್ದು, ಈ ವೇಳೆ ಮಣ್ಣು ಕುಸಿದ ಪರಿಣಾಮ ಜಾರ್ಖಂಡ್ ಮೂಲದ ಕಾರ್ಮಿಕರಾದ ಕಾಶಿನಾಥ್ (36) ಮತ್ತು ರಾಜ್‍ಗಂಧ್ (30) ಇಬ್ಬರು ಸಾವನ್ನಪ್ಪಿದ್ದಾರೆ.

    ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣದ ಕೃಷಿ ಕಚೇರಿ ಬಳಿ ಜೆಸಿಬಿಯಲ್ಲಿ ಗುಂಡಿ ತೆಗೆಯಲಾಗುತ್ತಿತ್ತು. ಈ ವೇಳೆ ಈ ಇಬ್ಬರು ನೌಕರರು ಗುಂಡಿಗೆ ಇಳಿದು ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಮಣ್ಣು ಕುಸಿದಿದೆ. ಕುಸಿದ ಮಣ್ಣು ಇಬ್ಬರು ನೌಕರರ ಮೇಲೆ ಬಿದ್ದಿದ್ದು, ಬಳಿಕ ಮಣ್ಣನ್ನು ತೆರವು ಮಾಡಿ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಮದ್ದೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

  • ಬೆಂಗಳೂರಿನ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿಯಿಂದ ಉಚಿತ ಬಸ್ ಪಾಸ್

    ಬೆಂಗಳೂರಿನ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿಯಿಂದ ಉಚಿತ ಬಸ್ ಪಾಸ್

    ಬೆಂಗಳೂರು: ಸಿಲಿಕಾನ್ ಸಿಟಿಯ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲು ಮುಂದಾಗಿದೆ. ಕೂಲಿ ಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆ ಕೆಲಸಕ್ಕೆ ಹೋಗಬೇಕು ಎಂದರೆ ಕೈಯಲ್ಲಿ ಹಣವಿರುವುದಿಲ್ಲ. ಹಾಗಾಗಿ ಬಿಎಂಟಿಸಿ, ಕೂಲಿ ಕಾರ್ಮಿಕರಿಗೆ ಸಂಕ್ರಾಂತಿ ಗಿಫ್ಟ್ ಕೊಟ್ಟಿದೆ.

    ಕೂಲಿ ಕಾರ್ಮಿಕರಿಗೆ ವಾರಕ್ಕೊಮ್ಮೆ ಸಂಬಳ ಕೊಡ್ತಾರೆ ಕೊಡುವ ಹಣವೆಲ್ಲ ಮಾರನೇ ದಿನವೇ ಜೇಬಲ್ಲಿ ಖಾಲಿ ಆಗುತ್ತದೆ. ತಿಂಗಳಪೂರ್ತಿ ಬಸ್ಸಿನಲ್ಲಿ ಓಡಾಡಲು ತೊಂದರೆ ಆಗುತ್ತಿತ್ತು. ಹಾಗಾಗಿ ಕಟ್ಟಡ ಕಾರ್ಮಿಕ ಇಲಾಖೆ, ಬಿಎಂಟಿಸಿ ಸೇರಿ ಕಾರ್ಮಿಕರಿಗೆ ಒಂದು ವರ್ಷಕ್ಕೆ ಫ್ರೀ ಬಸ್ ಪಾಸ್ ನೀಡುತ್ತಿದೆ.

    ಕಾರ್ಮಿಕ ಇಲಾಖೆಯಲ್ಲಿ ರಿಜಿಸ್ಟರ್ ಆಗಿರುವ ಕಾರ್ಮಿಕರಿಗೆ ಈ ಉಚಿತ ಬಿಎಂಟಿಸಿ ಬಸ್ ಪಾಸ್ ದೊರೆಯಲಿದೆ. ಈ ಪಾಸ್ಸಿನ ಹೆಸರು ಸಹಾಯಹಸ್ತ ಪಾಸ್ ಎಲ್ಲ ಟಿಟಿಎಂಟಿಸಿಗಳಲ್ಲಿ ವಿತರಿಸಲಾಗುತ್ತಿದೆ. ಈ ಪಾಸ್ ಪಡೆಯಲು ಎರಡು ಫೋಟೋ ಹಾಗೂ ಕಾರ್ಮಿಕ ಇಲಾಖೆ ನೀಡಿರುವ ಐಡಿ ಕಾರ್ಡ್ ಇದ್ದರೆ ಬಿಎಂಟಿಸಿ ಫ್ರೀ ಪಾಸ್ ಕಾರ್ಮಿಕರ ಕೈ ಸೇರಲಿದೆ.

    ಈ ಪಾಸ್ ಕೈಯಲ್ಲಿದ್ದರೆ ಬೆಂಗಳೂರಿನ ಯಾವುದೇ ಜಾಗಕ್ಕಾದ್ರು, ಯಾವ ಟೈಮಿಗೆ ಬೇಕಾದ್ರೂ ಬಿಎಂಟಿಸಿ ಬಸ್ಸಿನಲ್ಲಿ ಸಂಚಾರ ಮಾಡಬಹುದು. ಪಾಸಿನ ಅವಧಿ ಒಂದು ವರ್ಷವಿದ್ದು, ದಿನದ 24 ಗಂಟೆ ಸಂಚಾರ ಮಾಡಬಹುದು. ಒಟ್ಟು 72 ಸಾವಿರ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ.

  • ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ – 5 ಸಾವು, 6 ಮಂದಿಗೆ ಗಾಯ

    ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ – 5 ಸಾವು, 6 ಮಂದಿಗೆ ಗಾಯ

    ಮುಂಬೈ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಸಂಭವಿಸಿ 5 ಜನ ಕಾರ್ಮಿಕರು ಮೃತಪಟ್ಟು, 6 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಬೋಯಿಸರ್ ಕೈಗಾರಿಕ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಶನಿವಾರ ರಾತ್ರಿ ಸುಮಾರು 7.20ಕ್ಕೆ ನಡೆದಿದ್ದು, ಮಹಾರಾಷ್ಟ್ರದ ಕೊಲ್ವಾಡೆ ಗ್ರಾಮದಲ್ಲಿದಲ್ಲಿರುವ ನೈಟ್ರೇಟ್ ಉತ್ಪಾದನಾ ಘಟಕದಲ್ಲಿ ಬೃಹತ್ ಸ್ಫೋಟ ಸಂಭವಿಸಿ, 5 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ಮಂದಿಗೆ ಗಂಭೀರವಾದ ಗಾಯವಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪಲ್ಘಾರ್ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್, ನಾವು ಕಾರ್ಖಾನೆಯಲ್ಲಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯ ವಿಪತ್ತು ನಿರ್ವಹಣಾ ತಂಡವು ನಮ್ಮ ಕಾರ್ಯಾಚರಣೆಗೆ ಸಾಥ್ ನೀಡಿದೆ. ಕಾರ್ಖಾನೆಯಲ್ಲಿ ರಾಸಾಯನಿಕ ವಸ್ತು ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ. ಈ ಸ್ಫೋಟದ ಸದ್ದು ಸುಮಾರು 15 ಕಿ.ಮೀ ವರೆಗೂ ಕೇಳಿದೆ ಎಂದು ಹೇಳಿದ್ದಾರೆ.

    ಈಗ ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ. ಐದು ಜನರ ಮೃತದೇಹವು ಸಿಕ್ಕಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ಭಾರತ್ ಬಂದ್‍ಗೆ ರಾಮನಗರ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ

    ಭಾರತ್ ಬಂದ್‍ಗೆ ರಾಮನಗರ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ

    ರಾಮನಗರ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಜಿಲ್ಲೆಯಲ್ಲಿನ ಎರಡೂ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

    ರಾಮನಗರದಲ್ಲಿ ಬೆಳಗ್ಗೆ 5:40ಕ್ಕೆ ಸರ್ಕಾರಿ ಬಸ್ಸುಗಳು ಬಸ್ ನಿಲ್ದಾಣಕ್ಕೆ ಆಗಮಿಸಿದ್ದವು. ಅಲ್ಲದೇ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗಲಿಲ್ಲ. ದಿನನಿತ್ಯದಂತೆ ಬಸ್, ಕ್ಯಾಬ್, ಆಟೋಗಳು ರಸ್ತೆಗಿಳಿದು ಸಂಚಾರ ನಡೆಸುತಿತ್ತು.

    ಬಂದ್ ವಿಚಾರವಾಗಿ ಯಾವುದೇ ಸಂಘಟನೆಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ, ರಸ್ತೆತಡೆ, ಮೆರವಣಿಗೆ, ಧರಣಿ ನಡೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ರಾಮನಗರ ಎಸ್‍ಪಿ ಅನೂಪ್ ಎ ಶೆಟ್ಟಿ ಆದೇಶಿಸಿದ್ದರು. ಆದ್ದರಿಂದ ಪ್ರತಿಭಟನಾಕಾರರು ರಸ್ತೆಗೆ ಇಳಿಯುವ ಕೆಲಸ ಮಾಡಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪ್ರತಿಭಟನೆಗಳೇ ನಡೆಯದೇ ಬಂದ್ ನೀರಸವಾಗಿತ್ತು.

    ಜಿಲ್ಲೆಯ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳನ್ನು ಮುಚ್ಚುವಂತೆ ಸಿಐಟಿಯು ಕೈಗಾರಿಕೆಗಳಿಗೆ ಸಂದೇಶ ರವಾನಿಸಿತ್ತು. ಅಲ್ಲದೇ ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿತ್ತು.

    ಆದರೆ ಎರಡೂ ಕೈಗಾರಿಕಾ ಪ್ರದೇಶಗಳು ಸಹ ಸ್ಥಬ್ಧವಾಗಿರಲಿಲ್ಲ. ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 130ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೆ, ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 100ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಆದರೆ ಇಂದು ಭಾರತ್ ಬಂದ್ ಇದ್ದರೂ ಕೆಲವೇ ಕೆಲವು ಕಾರ್ಖಾನೆಗಳು ಬಂದ್ ಆಗಿವೆ. ಬಹುತೇಕ ಕಾರ್ಖಾನೆಗಳು ದಿನನಿತ್ಯದಂತೆ ಕಾರ್ಯನಿರ್ವಹಿಸುತಿತ್ತು. ಕಾರ್ಖಾನೆಗಳು ಬಂದ್ ಮಾಡದಿದ್ದರೂ ಸಹ ಕಾರ್ಮಿಕರು ಕೆಲಸಕ್ಕೆ ಗೈರಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

  • ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧದ ವಿರುದ್ಧ ಪ್ರತಿಭಟನೆ

    ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧದ ವಿರುದ್ಧ ಪ್ರತಿಭಟನೆ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿರುವ ಬೆನ್ನಲ್ಲೇ ಕಲ್ಲುಕುಟಿಕ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

    ಬೇಬಿ ಬೆಟ್ಟದ ತಪ್ಪಲಿನ ಕಾವೇರಿ ಪುರ ಗ್ರಾಮದ ಬಳಿ ಕಲ್ಲು ಕುಟಿಕ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಗಣಿಗಾರಿಕೆ ನಿಷೇಧದಿಂದ ನಮ್ಮ ಕುಟುಂಬಗಳು ಬೀದಿಗೆ ಬರುತ್ತವೆ. ಜಿಲ್ಲಾಡಳಿತ ಗಣಿಗಾರಿಕೆ ನಿಷೇಧ ಮಾಡಬೇಕು ಎಂದರೆ ಬ್ಲಾಸ್ಟಿಂಗ್ ಹಾಗೂ ಕ್ರಷಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಕೈಯಲ್ಲಿ ಕುಟ್ಟಿ ಗಣಿಗಾರಿಕೆ ಮಾಡುವುದನ್ನು ನಿಲ್ಲಿಸ ಬಾರದು.

    ಇದರಿಂದ ಹಲವಾರು ಕುಟುಂಬಗಳು ಜೀವನ ಮಾಡುತ್ತಿವೆ. ಒಂದು ವೇಳೆ ಇದನ್ನು ನಿಷೇಧ ಮಾಡಿದರೆ ನೂರಾರು ಕುಟಂಬಗಳು ಬೀದಿಗೆ ಬೀಳುತ್ತವೆ. ಆದ್ದರಿಂದ ಬ್ಲಾಸ್ಟಿಂಗ್ ಮತ್ತು ಕ್ರಷಿಂಗ್ ಮಾಡುವುದನ್ನು ತಡೆಗಟ್ಟಿ ಕಲ್ಲು ಕುಟಿಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.