Tag: workers

  • ಪೊಲೀಸರು-ಪೌರ ಕಾರ್ಮಿಕರಿಗೆ ಪಾದ ಪೂಜೆ, ಸನ್ಮಾನ

    ಪೊಲೀಸರು-ಪೌರ ಕಾರ್ಮಿಕರಿಗೆ ಪಾದ ಪೂಜೆ, ಸನ್ಮಾನ

    ಶಿವಮೊಗ್ಗ: ಕೊರೊನಾ ಮಹಾಮಾರಿ ಭೀತಿಯ ನಡುವೆಯೂ ಜೀವದ ಹಂಗು ತೊರೆದು ಅನೇಕ ಪೊಲೀಸರು ಮತ್ತು ಪೌರ ಕಾರ್ಮಿಕರು ಜನರ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂತಹವರಿಗೆ ಜಿಲ್ಲೆಯಲ್ಲಿ ಪಾದ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಶಿವಮೊಗ್ಗದ ರಕ್ಷಣೆ ಹಾಗೂ ಸ್ವಚ್ಛತೆ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರು ಹಾಗೂ ಪೌರ ಕಾರ್ಮಿಕರಿಗೆ ಪಾದ ಪೂಜೆ ಸಲ್ಲಿಸಿ ಕೃತಜ್ಞತೆ ಸಲ್ಲಿಸಲಾಗಿದೆ. ನಗರದ ಕಡೇಕಲ್ ಬಳಿ ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪೊಲೀಸರು ಹಾಗೂ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಪಾದಪೂಜೆ ಮಾಡಿ, ಸನ್ಮಾನಿಸಿದರು.

    ಕೊರೋನಾ ಭೀತಿ ನಡುವೆಯೂ ಮನೆಯಲ್ಲಿರದೇ ಲಾಕ್‍ಡೌನ್‍ನಲ್ಲಿ ಪೊಲೀಸರು ಹಾಗೂ ಪೌರ ಕಾರ್ಮಿಕರು ಹಗಲು ರಾತ್ರಿ ಅವಿರತ ಶ್ರಮ ವಹಿಸುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇವರಿಬ್ಬರ ಸೇವೆ ಅನನ್ಯವಾದುದು ಎಂದು ಅವರ ಬಗ್ಗೆ ಮೆಚ್ಚುಗೆ ಮಾತನಾಡಿದರು. ಸಭೆಯಲ್ಲಿ ಮೋಹನ್ ರೆಡ್ಡಿ, ಶಿವಕುಮಾರ್, ಮಲ್ಲಿಕಾರ್ಜುನ್, ಮುಕುಂದ ರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

  • ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

    ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

    ಹುಬ್ಬಳ್ಳಿ: ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಭಾನುವಾರ 220ಕ್ಕೂ ಹೆಚ್ಚು ಕಾರ್ಮಿಕರಿಗೆ ವಿತರಿಸಲಾಯಿತು.

    ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕರ್ನಾಟಕ ರಾಜ್ಯ ಆಹಾರ ನಿಗಮ (ಕೆಎಸ್‍ಸಿಎಫ್‍ಸಿ) 8 ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 220ಕ್ಕೂ ಹೆಚ್ಚು ಕಾರ್ಮಿಕರು, ಲಾರಿ ಚಾಲಕರು, ಕ್ಲೀನರ್‌ಗಳಿಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಇಸ್ಕಾನ್‍ನ ಸಾಯಿನಾಥ್ ವಿತರಿಸಿದರು.

    ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಪ್ರತಿ ಕಿಟ್‍ನಲ್ಲಿ 5 ಕೆ.ಜಿ. ಅಕ್ಕಿ, ಅಡುಗೆ ಎಣ್ಣೆ, ತೊಗರಿಬೇಳೆ ಸೇರಿದಂತೆ ಸುಮಾರು 17 ಆಹಾರ ಪದಾರ್ಥಗಳು ಇವೆ. ಒಂದು ಕಿಟ್‍ನ ಬೆಲೆ ಸುಮಾರು 750 ರೂ. ಮೌಲ್ಯದ್ದಾಗಿದೆ.

    ವೃತ್ತಿ ನಾಟಕ ಕಂಪನಿಯ ಕಲಾವಿದರಿಗೂ ಕಲಘಟಗಿಯ ಜಾತ್ರೆಯಲ್ಲಿ ಬಿಡಾರ ಹೂಡಿ ಈಗ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೂ ಈ ಆಹಾರ ಧಾನ್ಯಗಳ ಕಿಟ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

  • ಗೋಣಿಚೀಲದಲ್ಲಿ ಬಚ್ಚಿಟ್ಟುಕೊಂಡು ಗ್ರಾಮಕ್ಕೆ ಹೋಗುತ್ತಿದ್ದವರು ಕ್ವಾರಂಟೈನ್ ಘಟಕಕ್ಕೆ ಶಿಫ್ಟ್

    ಗೋಣಿಚೀಲದಲ್ಲಿ ಬಚ್ಚಿಟ್ಟುಕೊಂಡು ಗ್ರಾಮಕ್ಕೆ ಹೋಗುತ್ತಿದ್ದವರು ಕ್ವಾರಂಟೈನ್ ಘಟಕಕ್ಕೆ ಶಿಫ್ಟ್

    – ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದ ಮಾಲೀಕ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಪಿಕ್‍ಅಪ್ ವಾಹನದಲ್ಲಿ ಗೋಣಿಚೀಲದೊಳಗೆ ಬಚ್ಚಿಟ್ಟುಕೊಂಡು ಊರಿಗೆ ಹೋಗುತ್ತಿದ್ದ 30ಕ್ಕೂ ಹೆಚ್ಚು ಜನರನ್ನ ಕ್ವಾರಂಟೈನ್ ಘಟಕಕ್ಕೆ ಶಿಫ್ಟ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಕೊರೊನಾ ಆತಂಕದಿಂದ ಇಡೀ ದೇಶವೇ ಕಂಗಾಲಾಗಿದೆ. ಊರಿಗೆ ಹೋಗಲಾಗದೆ ಲಕ್ಷಾಂತರ ಜನ ಇದ್ದಲ್ಲೇ ದಿನ ದೂಡುತ್ತಿದ್ದಾರೆ. ಕೆಲವರು ನಡೆದೇ ಊರು ಸೇರಿದ್ದಾರೆ. ಆದರೆ ಕಳೆದ ಹತ್ತು ದಿನಗಳಿಂದ ಮಾಲೀಕನೂ ಕೈ ಬಿಟ್ಟು, ಕೂಲಿಯೂ ಇಲ್ಲದೆ ಆತಂಕದಲ್ಲಿ ಬದುಕುತ್ತಿದ್ದ ಬಳ್ಳಾರಿ ಜಿಲ್ಲೆಯ ಹಗರಿಮೊಮ್ಮನಹಳ್ಳಿ ಮೂಲದ 30ಕ್ಕೂ ಹೆಚ್ಚು ಕಾರ್ಮಿಕರು ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ಬಂದಿದ್ದ ಪಿಕ್‍ಅಪ್ ವಾಹನದಲ್ಲಿ ಹೋಗಲು ಯತ್ನಿಸಿದ್ದರು.

    ಈ ಕೂಲಿ ಕಾರ್ಮಿಕರು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಎಸ್ಟೇಟ್‍ವೊಂದರಲ್ಲಿ ಮೆಣಸು ಕೊಯ್ಯುವುದಕ್ಕೆ ಬಂದಿದ್ದರು. ಮೆಣಸನ್ನು ಕೊಯ್ದ ಬಳಿಕ ತೋಟದ ಮಾಲೀಕ ಕೆಲಸ ಮುಗಿತು ನೀವು ಹೊರಡಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಬೇರೆ ಕೆಲಸದವರು ಬರುತ್ತಾರೆ ಲೈನ್ ಮನೆ ಖಾಲಿ ಮಾಡಿ ಎಂದು ಸೂಚಿಸಿದ್ದರು. ಅದೇ ಆತಂಕದಲ್ಲಿದ್ದ ಕಾರ್ಮಿಕರು ಮಕ್ಕಳು-ಮರಿಗಳ ಜೊತೆ ಲೈನ್ ಮನೆಯಲ್ಲಿ ದಿನ ದೂಡುತ್ತಿದ್ದರು. ತೋಟದ ಮಾಲೀಕ ಹೋಗುತ್ತಿರೋ ಇಲ್ಲೋ ನಾನೇ ಹೊರ ಹಾಕಬೇಕೋ ಎಂದು ಗದರಿದ್ದಕ್ಕೆ ಊರಿಗೆ ಹೋಗಲು ಪಿಕ್‍ಅಪ್ ವಾಹನದಲ್ಲಿ ಕುರಿಯಂತೆ ಕದ್ದು ಕೂತು ಬಳ್ಳಾರಿಗೆ ಹೊರಟಿದ್ದರು.

    ಬೇಲೂರು ಚೆಕ್‍ಪೋಸ್ಟ್ ದಾಟಿ ಚಿಕ್ಕಮಗಳೂರಿಗೆ ಬರ್ತಿದ್ದಂತೆ ನಗರ ಪೊಲೀಸರು ಗಾಡಿಯನ್ನ ಚೆಕ್ ಮಾಡಿದಾಗ ಎಲ್ಲರೂ ಸಿಕ್ಕಿದ್ದಾರೆ. ಇದೀಗ ಎಲ್ಲರನ್ನೂ ನಗರದ ನರಿಗುಡ್ಡನಹಳ್ಳಿಯ ಬಳಿ ಇರುವ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ. ಆದರೆ ಬೆಂಗಳೂರಿನಲ್ಲಿ ವೈದ್ಯನಾಗಿರುವ ತೋಟದ ಮಾಲೀಕ ಕೂಲಿ ಕಾರ್ಮಿಕರಿಗೆ ಹಣವನ್ನೂ ನೀಡಿಲ್ಲ. ಕಳೆದ ಎಂಟತ್ತು ದಿನಗಳಿಂದ ಊಟದ ವ್ಯವಸ್ಥೆಯನ್ನೂ ಮಾಡಿಲ್ಲ. ಇವರೇ ಅಡುಗೆ ಮಾಡಿಕೊಳ್ಳಲು ತೋಟದಲ್ಲಿ ಸ್ವಲ್ಪ ಸೌಧೆಯನ್ನ ಬಳಸಿಕೊಂಡಿದ್ದಕ್ಕೆ ಐದು ಸಾವಿರ ರೂ. ಕೂಲಿ ಹಣದಲ್ಲಿ ಮುರಿದು ಕೊಟ್ಟಿದ್ದಾರೆ ಎಂದು ಕೂಲಿ ಕಾರ್ಮಿಕರು ದೂರಿದ್ದಾರೆ.

    ಪಿಕ್‍ಅಪ್ ವಾಹನದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಜನರಿದ್ದರು. ಅವರೆಲ್ಲಾರಿಗೂ ಚಿಕ್ಕಮಗಳೂರು ಜಿಲ್ಲಾಡಳಿತ ವಸತಿ-ಊಟದ ಸೌಲಭ್ಯ ಕಲ್ಪಿಸಿದೆ.

  • ಕೊರೊನಾ ಶ್ರೀಮಂತರಿಗೆ ಮಾತ್ರ ಬರೋದು: ಯು.ಟಿ.ಖಾದರ್

    ಕೊರೊನಾ ಶ್ರೀಮಂತರಿಗೆ ಮಾತ್ರ ಬರೋದು: ಯು.ಟಿ.ಖಾದರ್

    ಮಂಗಳೂರು: ಇದುವರೆಗೂ ಶ್ರೀಮಂತರಿಗೆ, ವಿಮಾನದಲ್ಲಿ ಸಂಚರಿಸಿದವರಿಗೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಇರುವವರಿಗೆ ಮಾತ್ರ ಕೊರೊನಾ ಸೋಂಕು ಬಂದಿದೆ. ನಿಮ್ಮಂಥ ಕಷ್ಟದ ಕೆಲಸ ಮಾಡುವವರಿಗೆ ಕೊರೊನಾ ಬರುವುದಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಉಳ್ಳಾಲ ನಗರಸಭೆಯ ಪೌರಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ.

    ಯು.ಟಿ.ಖಾದರ್ ತಮ್ಮ ಸ್ವ-ಕ್ಷೇತ್ರ ಉಳ್ಳಾಲ ವ್ಯಾಪ್ತಿಯ ನಗರಸಭೆ ಕಚೇರಿಗೆ ಭೇಟಿ ನೀಡಿ ಅಲ್ಲಿದ್ದ ಪೌರಕಾರ್ಮಿಕರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕೊರೊನಾ ಭೀತಿ ಜಿಲ್ಲೆಯಲ್ಲಿ ಹೆಚ್ಚಿರುವ ಕಾರಣ, ದಿನ ನಗರವನ್ನು ಶುಚಿಗೊಳಿಸುವ ಕಾರ್ಮಿಕರು ಧೈರ್ಯ ಕಳೆದುಕೊಳ್ಳದಂತೆ ಅವರಿಗೆ ಧೈರ್ಯ ತುಂಬಿದ್ದಾರೆ.

    ನೀವು ಗಾಬರಿ ಪಡಬೇಕಾದ ಅಗತ್ಯವಿಲ್ಲ. ಇದುವರೆಗೆ ಕೊರೊನಾ ಶ್ರೀಮಂತರಿಗೆ, ವಿಮಾನದಲ್ಲಿ ಸಂಚರಿಸಿದವರಿಗೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಇರುವವರಿಗೆ ಬಂದಿದೆ. ಹಾಗೆಂದು ಯಾರೂ ಕೂಡ ನಿರ್ಲಕ್ಷ್ಯ ಮಾಡದೆ ಮಾಸ್ಕ್ ಹಾಕಿಕೊಂಡು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

    ಖಾದರ್ ಅವರ ಮಾತು ವಿರೋಧಕ್ಕೂ ಕಾರಣವಾಗಿದೆ. ಕೇಂದ್ರ ಆರೋಗ್ಯ ಇಲಾಖೆ, ಸಾಮೂಹಿಕವಾಗಿ ಕೊರೊನಾ ಸೋಂಕು ಹರಡುತ್ತೆ, ಹೀಗಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮ ಅನುಸರಿಸಬೇಕು. ಎಲ್ಲಾ ವರ್ಗದ ಜನರಿಗೂ ಈ ಸೋಂಕು ಹರಡುತ್ತದೆ ಎಂದಿದೆ. ಹೀಗಿದ್ದರೂ ಓರ್ವ ಶಾಸಕ ಈ ರೀತಿ ಶ್ರೀಮಂತರಿಗೆ ಮಾತ್ರ ಕೊರೊನಾ ಬರೋದು ಎಂದು ಹೇಳುವ ಮೂಲಕ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೊಲಂಬಿಯಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ – 11 ಮಂದಿ ಸಾವು

    ಕೊಲಂಬಿಯಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ – 11 ಮಂದಿ ಸಾವು

    ಬಗೋಟ: ಕೊಲಂಬಿಯಾದ ಬಗೋಟ ಸಮೀಪದ ಕುಕುನುಬಾ ಗಣಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 11 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

    ಶನಿವಾರ ಗಣಿಯಲ್ಲಿ ಮೀಥೇನ್ ಅನಿಲ ಸ್ಫೋಟಿಸಿ ಈ ದುರಂತ ಸಂಭವಿಸಿದೆ. ಸ್ಫೋಟದಿಂದ ಕುಕುನುಬಾ ಗಣಿ ಕುಸಿದ ಪರಿಣಾಮ 11 ಮಂದಿ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗೊಂಡಿದ್ದಾರೆ. ಗಣಿಯಲ್ಲಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ತಾಂತ್ರಿಕ ತನಿಖಾ ತಂಡದ ಸಿಬ್ಬಂದಿ ಹೊರತೆಗೆದಿದ್ದಾರೆ. ಇತ್ತ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೀಥೇನ್ ಅನಿಲ ಮತ್ತು ಕಲ್ಲಿದ್ದಲು ಧೂಳಿನಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಶುಕ್ರವಾರ ಈಶಾನ್ಯ ಕೊಲಂಬಿಯಾದ ಸ್ಯಾನ್ ಕೆಯೆಟಾನೊದಲ್ಲಿರುವ ಕಲ್ಲಿದ್ದಲು ಗಣಿಯಲ್ಲೂ ಹೀಗೆ ಸ್ಫೋಟ ಸಂಭವಿಸಿದ ಪರಿಣಾಮ 6 ಮಂದಿ ಕಾರ್ಮಿಕರು ಬಲಿಯಾಗಿದ್ದರು.

    ಕೊಲಂಬಿಯಾದಲ್ಲೂ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಿದ್ದು, ಇಡೀ ಕೊಲಂಬಿಯಾವನ್ನು ಲಾಕ್‍ಡೌನ್ ಮಾಡಲಾಗಿದೆ. ಆದರೆ ಈ ಲಾಕ್‍ಡೌನ್ ನಡುವೆ ದೇಶದ ಪ್ರಮುಖ ಕ್ಷೇತ್ರಗಳಾದ ಗಣಿಗಾರಿಕೆಯನ್ನು ಹೊರತುಪಡಿಸಿ ಎಲ್ಲಾ ಸೇವೆಗಳು, ವಲಯಗಳನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಕೊಲಂಬಿಯಾದಲ್ಲಿ ಗಣಿ ಕಾರ್ಯ ಮುಂದುವರೆದಿತ್ತು.

    ಈ ಎರಡೂ ಗಣಿಯಲ್ಲಿ ಸ್ಫೋಟಗಳು ವರದಿಯಾದ ಬಳಿಕ ರಾಜ್ಯ ಸರ್ಕಾರ ನಡೆಸುವ ರಾಷ್ಟ್ರೀಯ ಗಣಿ ಸಂಸ್ಥೆ, ಕುಕುನುಬಾದಲ್ಲಿ ಭೂಮಿಯ ಕೆಳಗಿನ ಕಲ್ಲಿದ್ದಲು ಗಣಿಗಾರಿಕಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.

  • ಕೊರೊನಾ ಎಫೆಕ್ಟ್ – ಸ್ವಗ್ರಾಮಕ್ಕೆ ಬಂದ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ

    ಕೊರೊನಾ ಎಫೆಕ್ಟ್ – ಸ್ವಗ್ರಾಮಕ್ಕೆ ಬಂದ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ

    ಲಕ್ನೋ: ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಸ್ವಗ್ರಾಮಗಳಿಗೆ ತೆರಳಿದ್ದ ಕೂಲಿ ಕಾರ್ಮಿಕರ ಮೇಲೆ ಅಗ್ನಿಶಾಮಕದಳ ಸಿಬ್ಬಂದಿ ರಾಸಾಯನಿಕ ಸಿಂಪಡಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ದೆಹಲಿ, ಮುಂಬೈ ಸೇರಿದಂತೆ ಹಲವು ಮಹಾನಗರಗಳಿಂದ ಸ್ವಗ್ರಾಮಗಳಿಗೆ ತೆರಳಿದ್ದ ಕಾರ್ಮಿಕರ ಮೇಲೆ ಅಗ್ನಿ ಶಾಮಕ ದಳದ ಸಿಬ್ಬಂದಿ ರಾಸಾಯನಿಕಯುಕ್ತ ನೀರನ್ನು ಸಿಂಪಡಿಸಿದ್ದಾರೆ ಎಂದು ವರದಿಯಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೊರೊನಾ ವಿರುದ್ಧ ನಾವೆಲ್ಲರೂ ಜೊತೆಯಾಗಿ ಹೋರಾಡುತ್ತಿದ್ದೇವೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಆದರೆ ದಯವಿಟ್ಟು ಇಂತಹ ಅಮಾನವೀಯ ಕೆಲಸಗಳನ್ನು ಮಾಡಬೇಡಿ. ವಲಸೆ ಕಾರ್ಮಿಕರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಮೇಲೆ ರಾಸಾಯನಿಕ ಸಿಂಪಡಿಸುವ ಮೂಲಕ ಅವರನ್ನು ಈ ರೀತಿ ನಡೆಸಿಕೊಳ್ಳಬೇಡಿ. ಇದು ಅವರನ್ನು ರಕ್ಷಿಸುವುದಿಲ್ಲ ಬದಲಿಗೆ ಅವರ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎಂದು ಪ್ರಿಯಾಂಕಾ ಉಲ್ಲೇಖಿಸಿದ್ದಾರೆ.

    ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬರೇಲಿ ಪುರಸಭೆ ತಹಶಿಲ್ದಾರ್ ಪ್ರಕರಣದ ತನಿಖೆಗೆ ಆದೇಶಿಸಿದ್ದು, ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅವರು, ಬಸ್‍ಗಳನ್ನು ಸ್ಯಾಜಿಟೈಜ್ ಮಾಡಲು ಹೇಳಿದ್ದೆವು ಆದರೆ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

  • ಸಿನಿಮಾ ದಿನಗೂಲಿ ನೌಕರರಿಗೆ ನಿಖಿಲ್ ಸಹಾಯ ಹಸ್ತ

    ಸಿನಿಮಾ ದಿನಗೂಲಿ ನೌಕರರಿಗೆ ನಿಖಿಲ್ ಸಹಾಯ ಹಸ್ತ

    ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದ್ದು, ಇದರ ಬಿಸಿ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರಿಗೂ ತಟ್ಟಿದೆ. ಇದನ್ನರಿತ ತೆಲುಗು, ತಮಿಳು ಕಲಾವಿದರು ಸಹಾಯಕ್ಕೆ ಮುಂದಾಗಿದ್ದು, ಸ್ಯಾಂಡಲ್‍ವುಡ್‍ನಲ್ಲಿಯೂ ಹಲವು ನಟ, ನಟಿಯರು ಸಹಾಯಕ್ಕೆ ಮುಂದಾಗಿದ್ದಾರೆ. ಇವರ ಸಾಲಿಗೆ ಇದೀಗ ನಿಖಿಲ್ ಕುಮಾರಸ್ವಾಮಿಯವರೂ ಸೇರಿಕೊಂಡಿದ್ದು, ಕಾರ್ಮಿಕರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.

    ಹೌದು ಸದ್ದಿಲ್ಲದೆ ಸಹಾಯ ಮಾಡಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಸಿನಿಮಾ ಕ್ಷೇತ್ರದಲ್ಲಿ ಸಾವಿರಾರು ದಿನಗೂಲಿ ನೌಕರರಿದ್ದು, ಅವರೆಲ್ಲರೂ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಹೀಗಾಗಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇದನ್ನು ಮನಗಂಡ ಸ್ಯಾಂಡಲ್‍ವುಡ್‍ನ ಹಲವು ನಟರು ಸಹಾಯಕ್ಕೆ ಮುಂದಾಗಿದ್ದು, ಶಿವರಾಜ್‍ಕುಮಾರ್ ನೇತೃತ್ವದಲ್ಲಿ ಸಹಾಯ ಮಾಡಲು ತಂಡವನ್ನೇ ರಚಿಸಲಾಗಿದೆ. ಇತ್ತ ನಿಖಿಲ್ ಕುಮಾರಸ್ವಾಮಿಯವರು ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕಲು ಮುಂದಾಗಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರಂತೆ.

    ಯೂನಿಟ್ ಬಾಯ್ಸ್, ಮೇಕಪ್ ಬಾಯ್ಸ್, ಲೈಟ್ ಬಾಯ್ಸ್, ಫೈಟರ್ಸ್, ಸಹ ನೃತ್ಯಗಾರರು ಹೀಗೆ ಸಾಕಷ್ಟು ವಿಭಾಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಕಷ್ಟದಲ್ಲಿದ್ದಾರೆ. ಈ ಎಲ್ಲ ಕಾರ್ಮಿಕರಿಗೂ ಸಂಘಗಳಿದ್ದು, ಈ ಸಂಘಗಳ ಮೂಲಕ ಸಹಾಯ ಮಾಡಲು ಯೋಚಿಸಿದ್ದಾರೆ. ಮೇಕಪ್ ಮೆನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಲೈಟ್ ಬಾಯ್ಸ್ ಅಸೋಸಿಯೇಷನ್, ಯುನಿಟ್ ಬಾಯ್ಸ್ ಅಸೋಸಿಯೇಷನ್, ಪ್ರೊಡಕ್ಷನ್ ಅಸೋಸಿಯೇಷನ್ ಹೀಗೆ ಸುಮಾರು 18 ಅಸೋಸಿಯೇಷನ್‍ಗಳಿದ್ದು, ಇವುಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಸಿನಿಮಾ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಅವರ ಖಾತೆಗಳಿಗೆ ನೇರವಾಗಿ ಹಣ ಹಾಕಲು ನಿಖಿಲ್ ಕುಮಾರಸ್ವಾಮಿ ನಿರ್ಧರಿಸಿದ್ದಾರಂತೆ.

    ಈ ಕುರಿತು ನಿಖಿಲ್ ಆಪ್ತ ಸುನೀಲ್ ಮಾಹಿತಿ ಮಾಹಿತಿ ನೀಡಿದ್ದು, ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಎಲ್ಲರ ಖಾತೆಗೂ ಹಣ ಜಮೆಯಾಗಲಿದೆ. 3 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ತಲಾ ಒಂದು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಈ ಮೂಲಕ ಒಟ್ಟು 30 ಲಕ್ಷ ರೂ. ಹಣವನ್ನು ಕಾರ್ಮಿಕರಿಗಾಗಿ ನಿಖಿಲ್ ನೀಡುತ್ತಿದ್ದಾರೆ. ಇದನ್ನು ಸಂಘಟನೆಗಳ ಖಾತೆಗೆ ಹಾಕದೆ, ಈ ಅಸೋಸಿಯೇಷನ್‍ಗಳ ಮೂಲಕ ಎಲ್ಲ ಕಾರ್ಮಿಕರ ಮಾಹಿತಿ ಪಡೆಯಲಾಗಿದೆ. ಒಟ್ಟು 18 ಅಸೋಸಿಯೇಷನ್‍ಗಳಲ್ಲಿ ನೋಂದಾಯಿಸಿರುವ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್: 36 ಗಂಟೆ, 80 ಕಿ.ಮೀ ನಡೆದುಕೊಂಡು ಗ್ರಾಮಕ್ಕೆ ತೆರಳ್ತಿರುವ ಕಾರ್ಮಿಕರು

    ಲಾಕ್‍ಡೌನ್ ಎಫೆಕ್ಟ್: 36 ಗಂಟೆ, 80 ಕಿ.ಮೀ ನಡೆದುಕೊಂಡು ಗ್ರಾಮಕ್ಕೆ ತೆರಳ್ತಿರುವ ಕಾರ್ಮಿಕರು

    ಲಕ್ನೋ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಂಗಳವಾರ ರಾತ್ರಿ ಪ್ರಧಾನಿ ಮೋದಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಮಾತ್ರ ಜನರಿಗೆ ಅವಕಾಶ ನೀಡಲಾಗಿದೆ. ಹೀಗಿರುವಾಗ 20 ವರ್ಷದ ಯುವಕ ರಸ್ತೆಗೆ ಇಳಿದಿದ್ದಾರೆ.

    20 ವರ್ಷದ ಯುವಕ ಅವದೇಶ್ ಮಂಗಳವಾರ ಸಂಜೆ ಉನ್ನಾವೋನಲ್ಲಿರುವ ತನ್ನ ಫ್ಯಾಕ್ಟರಿಯಿಂದ 80 ಕಿ.ಮೀ ದೂರದಲ್ಲಿರುವ ತನ್ನ ಬಾರಾಬಂಕಿ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾರೆ. ಗುರುವಾರ ಬೆಳಗ್ಗೆ ಅವದೇಶ್ ತನ್ನ ಮನೆಗೆ ತಲುಪಬಹುದು. ಸುಮಾರು 36 ಗಂಟೆಗಳ ಈ ಪ್ರಯಾಣದಲ್ಲಿ, ಅವದೇಶ್ ಒಂದು ಅಥವಾ ಎರಡು ಬಾರಿ ಹೊರತುಪಡಿಸಿ ಎಲ್ಲಿಯೂ ನಿಲ್ಲಲು ಸಾಧ್ಯವಾಗುವುದಿಲ್ಲ. ಅವದೇಶ್‍ಗೆ ಸಾಥ್ ನೀಡಲು ಉನ್ನಾವೋದ ಅದೇ ಫ್ಯಾಕ್ಟರಿಯಲ್ಲಿ ಸುಮಾರು 20 ಮಂದಿ ವೃದ್ಧರು ಹಾಗೂ ಯುವಕರು ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವದೇಶ್, ನನಗೆ ಇದು ಮಾಡಲು ಇಷ್ಟವಿಲ್ಲ. ಆದರೆ ಬೇರೆ ದಾರಿ ಇಲ್ಲ. ಆದರೆ ನಾನು ಏನೂ ಮಾಡಲಿ. ಉನ್ನಾವೋನ ಸ್ಟೀಲ್ ಫ್ಯಾಬ್ರಿಕೇಶನ್ ಕಂಪೆನಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇಷ್ಟು ದಿನ ನಾನು ಅಲ್ಲಿಯೇ ವಾಸವಿದ್ದೆ. ಆದರೆ ರಾತ್ರಿ ಮ್ಯಾನೇಜ್‍ಮೆಂಟ್ ನಮ್ಮನ್ನು ಸ್ಥಳಾಂತರಿಸಲು ಕೇಳಿದೆ. ಆಗ ಅವರು ನಮಗೆ ಇಲ್ಲಿ ಇರಬೇಡಿ ಎಂದರು. ಮನೆಗೆ ಹೋಗುವುದನ್ನು ಬಿಟ್ಟರೆ ನನಗೆ ಬೇರೆ ಯಾವ ದಾರಿ ಇಲ್ಲ. ಸಾರಿಗೆ ವ್ಯವಸ್ಥೆ ಕೂಡ ಇಲ್ಲ. ಹಾಗಾಗಿ ನಾವು ಒಂದೇ ಹಳ್ಳಿಯ ನಿವಾಸಿಗಳು. ನಾವು ಹಳ್ಳಿಗೆ ನಡೆದುಕೊಂಡು ಹೋಗಲು ನಿರ್ಧರಿಸಿದ್ದೇವೆ ಎಂದರು.

    ಈ ಗುಂಪಿನಲ್ಲಿದ್ದ 50 ವರ್ಷದ ವ್ಯಕ್ತಿಯೊಬ್ಬರು ಮಾತನಾಡಿ, ನಮ್ಮ ಹಳ್ಳಿಯಲ್ಲಿ ಸ್ವಲ್ಪ ಆಹಾರವಿದೆ. ಆದರೆ ನನ್ನ ಕುಟುಂಬ ನನ್ನ ಆದಾಯವನ್ನು ನಂಬಿಕೊಂಡಿದೆ. ಉತ್ತರ ಪ್ರದೇಶ ಸರ್ಕಾರ ನನ್ನಂತಹವರಿಗೆ ತಿಂಗಳಿಗೆ ಒಂದು ಸಾವಿರ ರೂ. ನೀಡಲು ಯೋಜಿಸಿದೆ ಎಂಬುದನ್ನು ನಾನು ಕೇಳಿದೆ. ಆದರೆ ನಾನು ಎಲ್ಲಿಯೂ ನೋಂದಣಿಯಾಗಿಲ್ಲ. ನನ್ನ ಬಳಿ ಯಾರೂ ಕೂಡ ಬಂದಿಲ್ಲ. ನನ್ನಂತಹ ಜನರು ಕೇವಲ ಕತ್ತಲೆಯನ್ನು ನೋಡುತ್ತಾರೆ ಎಂದು ಭಾವುಕರಾದರು.

    ನಮ್ಮ ಗುಂಪಿನಲ್ಲಿ ಇರುವವರ ಬಳಿ ಕೇವಲ ಬಟ್ಟೆ, ನೀರು ಹಾಗೂ ಕೆಲವು ಬಿಸ್ಕೇಟ್‍ಗಳಿವೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾವು ತಲೆಗೆ ಬಟ್ಟೆಯನ್ನು ಸುತ್ತುಕೊಂಡಿದ್ದೇವೆ. ಕೊರೊನಾ ವೈರಸ್‍ನಿಂದ ತಪ್ಪಿಸಿಕೊಳ್ಳಲು ನಮ್ಮ ಬಳಿ ಏನೂ ಇಲ್ಲ ಎಂದು ತಮ್ಮ ನೋವನ್ನು ಹೊರಹಾಕಿದರು.

  • ಜಾಸ್ತಿ ಜನ ಸಂಚಾರ: ಬೆಂಗ್ಳೂರಿನಿಂದ ಕಾರ್ಮಿಕರನ್ನ ಕರೆ ತಂದ ಟೆಂಪೋ ಕಾಲುವೆಗೆ ಪಲ್ಟಿ

    ಜಾಸ್ತಿ ಜನ ಸಂಚಾರ: ಬೆಂಗ್ಳೂರಿನಿಂದ ಕಾರ್ಮಿಕರನ್ನ ಕರೆ ತಂದ ಟೆಂಪೋ ಕಾಲುವೆಗೆ ಪಲ್ಟಿ

    – ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರ ಓಡಾಟಕ್ಕೆ ಬೀಳುತ್ತಿಲ್ಲ ಕಡಿವಾಣ

    ರಾಯಚೂರು: ಬೆಂಗಳೂರಿನಲ್ಲಿ ಕಟ್ಟಡ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಜಿಲ್ಲೆಯ ಮಸ್ಕಿ ತಾಲೂಕಿಗೆ ಬಿಟ್ಟು ವಾಪಸ್ ಹೋಗುತ್ತಿದ್ದ ಟೆಂಪೋ ಪಲ್ಟಿಯಾಗಿ ತುಂಗಭದ್ರಾ ಉಪ ಕಾಲುವೆಗೆ ಬಿದ್ದಿದೆ.

    ಮಸ್ಕಿ ತಾಲೂಕಿನ ರಂಗಾಪುರ ಬಳಿ ಘಟನೆ ನಡೆದಿದೆ.ಬೆಂಗಳೂರಿಗೆ ಗುಳೆ ಹೋಗಿದ್ದ ಕಾರ್ಮಿಕರನ್ನು ಬಿಟ್ಟು ಹೋಗಲು ಬಂದಿದ್ದ ವಾಹನ, ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೊರೊನಾ ಭೀತಿ ಹಾಗೂ ಲಾಕ್‍ಡೌನ್ ಹಿನ್ನಲೆ ಬೆಂಗಳೂರಿನಿಂದ ಗ್ರಾಮಗಳಿಗೆ ಕೂಲಿ ಕಾರ್ಮಿಕರು ಟೆಂಪೋ ಮಾಡಿಕೊಂಡು ಮರಳಿದ್ದಾರೆ. ಆದರೆ ವಾಪಸ್ ಹೋಗಬೇಕಿದ್ದ ಟೆಂಪೋ ಕಾಲುವೆಗೆ ಬಿದ್ದಿದೆ.

    ಕೂಲಿ ಕಾರ್ಮಿಕರು ವಾಪಸ್ ಬರುವ ಭರಾಟೆಯಲ್ಲಿ ವಾಹನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಮಕ್ಕಳನ್ನು ಕುರಿಗಳ ಹಾಗೆ ತುಂಬಿಕೊಂಡು ಬರಲಾಗುತ್ತಿದೆ. ಅಲ್ಲದೆ ಗಾಡಿಗಳಿಗೆ ನೇತಾಡಿಕೊಂಡು ಜನ ಬರುತ್ತಿದ್ದಾರೆ. ಪೊಲೀಸರು ಎಷ್ಟೇ ವಾಹನಗಳನ್ನು ತಡೆದರೂ ಜನರ ಹಾಗೂ ಕೂಲಿ ಕಾರ್ಮಿಕರ ಓಡಾಟ ಇನ್ನೂ ನಿಂತಿಲ್ಲ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸಿನಿಮಾ ಕೆಲಸಗಾರರಿಗಾಗಿ 50 ಲಕ್ಷ ರೂ. ದಾನ ನೀಡಿದ ರಜನಿ

    ಸಿನಿಮಾ ಕೆಲಸಗಾರರಿಗಾಗಿ 50 ಲಕ್ಷ ರೂ. ದಾನ ನೀಡಿದ ರಜನಿ

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಕಷ್ಟದಲ್ಲಿರುವವರಿಗೆ ಹಾಗೂ ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಸಹಾಯ ಹಸ್ತ ಚಾಚುವಲ್ಲಿ ಎತ್ತಿದ ಕೈ. ಯಾವುದೇ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿಯೂ ಅವರು ಲಕ್ಷ ಲಕ್ಷ ರೂಗಳನ್ನು ಸಹಾಯದ ರೂಪದಲ್ಲಿ ನೀಡುತ್ತಾರೆ. ಅದೇ ರೀತಿ ಇದೀಗ ಕೊರೊನಾದಿಂದ ತತ್ತರಿಸಿರುವ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರಿಗೂ ಸಹಾಯ ಹಸ್ತ ಚಾಚಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದೆ. ಎಲ್ಲವೂ ಸ್ತಬ್ಧವಾಗಿದೆ, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ಕಾರ್ಖಾನೆ, ಕಂಪನಿಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಪದ್ಧತಿ ಅನುಸರಿಸಿದರೆ, ಇನ್ನೂ ಕೆಲ ಕಂಪನಿಗಳು ತಾತ್ಕಾಲಿಕವಾಗಿ ಕಾರ್ಯವನ್ನು ಸ್ಥಗಿತಗೊಳಿಸಿವೆ. ಮಾರ್ಚ್ 31ರ ವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಎಲ್ಲರೂ ಆತಂಕದಲ್ಲಿದ್ದಾರೆ.

    ಕೊರೊನಾ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದ್ದು, ಸಿನಿಮಾ ಕ್ಷೇತ್ರದ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ನಟ, ನಟಿಯರು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಸಿನಿಮಾ ಕ್ಷೇತ್ರ ಸ್ತಬ್ಧವಾಗಿದೆ. ಇದರ ಎಫೆಕ್ಟ್ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರ ಮೇಲೆ ಬಿದ್ದಿದ್ದು, ಕೆಲಸವಿಲ್ಲದೆ, ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ. ತುತ್ತು ಅನ್ನಕ್ಕೂ ಬೇಡುವ ಪರಿಸ್ಥಿತಿ ಎದುರಾಗಿದೆ ಹೀಗಾಗಿ ಇಂತಹ ಕೆಲಸಗಾರರಿಗೆ ಇದೀಗ ಸಿನಿಮಾ ನಟರು ಸಹಾಯ ಹಸ್ತ ಚಾಚಿದ್ದಾರೆ.

    ನಟರಾದ ಸೂರ್ಯ ಮತ್ತು ವಿಜಯ್ ಸೇತುಪತಿ ಈಗಾಗಲೇ ತಲಾ 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ಇದಾದ ಬಳಿಕ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಸಹ ಕಾರ್ಮಿಕರ ಕಷ್ಟಕ್ಕೆ ಮಿಡಿದಿದ್ದಾರೆ. ಚಲನಚಿತ್ರ ಕಾರ್ಮಿಕರಿಗೆಂದೇ ಇರುವ ಫಿಲ್ಮ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಸೌತ್ ಇಂಡಿಯಾ (ಎಫ್‍ಇಎಫ್‍ಎಸ್‍ಐ) ಸಂಘಟನೆಗೆ ರಜನಿಕಾಂತ್ 50 ಲಕ್ಷ ರೂ. ನೀಡಿದ್ದಾರೆ. ಈ ಸಂಘಟನೆಯಲ್ಲಿ ಸುಮಾರು 25 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕೊರೊನಾ ಎಫೆಕ್ಟ್‍ನಿಂದಾಗಿ ಕೆಲಸವಿಲ್ಲದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನು ಕಂಡ ರಜನಿ, ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ರಜನಿಕಾಂತ್ ಸದ್ಯ ಅಣ್ಣಾತೆ ಚಿತ್ರದಲ್ಲಿ ನಟಿಸುತ್ತಿದ್ದು, ಕೊರೊನಾ ಭೀತಿಯಿಂದಾಗಿ ಸಿನಿಮಾದ ಚಿತ್ರೀಕರಣವನ್ನು ಬಂದ್ ಮಾಡಲಾಗಿದೆ. ಈ ಚಿತ್ರಕ್ಕೆ ಶಿವ ಆ್ಯಕ್ಷನ್ ಕಟ್ ಹೇಳಿದ್ದು, ನಯನತಾರಾ, ಕೀರ್ತಿ ಸುರೇಶ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.