Tag: workers

  • ತೋಟದಲ್ಲಿದ್ದ ಕಾರ್ಮಿಕರು ಸರ್ಕಾರಿ ಬಸ್ಸಲ್ಲಿ ಸ್ವಂತ ಊರಿಗೆ ಶಿಫ್ಟ್

    ತೋಟದಲ್ಲಿದ್ದ ಕಾರ್ಮಿಕರು ಸರ್ಕಾರಿ ಬಸ್ಸಲ್ಲಿ ಸ್ವಂತ ಊರಿಗೆ ಶಿಫ್ಟ್

    ಚಿಕ್ಕಮಗಳೂರು: ಕೂಲಿಗಾಗಿ ರಾಜ್ಯದ ಇತರ ಜಿಲ್ಲೆಗಳಿಂದ ಬಂದು ಕೊರೊನಾದಿಂದಾಗಿ ಲಾಕ್‍ಡೌನ್ ಘೋಷಿಸಿದಾಗಿನಿಂದ ಊರಿಗೆ ಹೋಗಲಾಗದೆ ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಕಾರ್ಮಿಕರನ್ನು ಜಿಲ್ಲೆಯ ಮೂಡಿಗೆರೆಯಿಂದ ಸರ್ಕಾರಿ ಬಸ್‍ನಲ್ಲಿ ತಮ್ಮ ಊರುಗಳಿಗೆ ಸ್ಥಳಾಂತರಿಸಲಾಗಿದೆ.

     

    ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಕಾಫಿ ಹಾಗೂ ಮೆಣಸು ಕೊಯ್ಯಲು ಕೂಲಿ ಕಾರ್ಮಿಕರು ಆಗಮಿಸಿದ್ದರು. ಅವರೆಲ್ಲಾ ಊರಿಗೆ ವಾಪಸ್ ಹೋಗಲು ಸಾಧ್ಯವಾಗದೆ ತೋಟದ ಲೈನ್ ಮನೆಗಳಲ್ಲೇ ವಾಸವಿದ್ದರು. ಇಂದು 11 ಬಸ್‍ಗಳ ಮೂಲಕ ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ವಿವಿಧ ಊರುಗಳಿಗೆ 200ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸಲಾಗಿದೆ.

    ಒಂದೊಂದು ಬಸ್‍ನಲ್ಲಿ ಕೇವಲ 21 ಜನ ಮಾತ್ರ ಇದ್ದು. ಎಲ್ಲರಿಗೂ ಮುಖಕ್ಕೆ ಮಾಸ್ಕ್ ಹಾಕಿ ಬಸ್‍ನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲರನ್ನೂ ತಮ್ಮ-ತಮ್ಮ ಊರುಗಳಿಗೆ ಕಳುಹಿಸಲಾಗಿದೆ. ಏಪ್ರಿಲ್ 25ರಂದು 5 ಬಸ್, 26ರಂದು 7 ಬಸ್ ಹಾಗೂ ಇಂದು ಒಟ್ಟು 11 ಬಸ್‍ಗಳಲ್ಲಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಲಾಗಿದೆ.

    ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದ ಮೇಲೆ ಹೊರ ಜಿಲ್ಲೆಗಳಿಂದ ಬಂದ ಕೂಲಿಕಾರ್ಮಿಕರು ಕಾಫಿತೋಟದ ಲೈನ್ ಮನೆಗಳಲ್ಲೇ ವಾಸಿವಿದ್ದರು. ಕೆಲ ಕಾರ್ಮಿಕರು ಕದ್ದು ಮುಚ್ಚಿ ಊರಿಗೆ ಹೋಗಲು ಯತ್ನಿಸಿ ಸಿಕ್ಕಿಬಿದ್ದು, ಸರ್ಕಾರದ ನಿರಾಶ್ರಿತ ಘಟಕದ ಪಾಲಾಗಿದ್ದರು. ಆದರೆ ನಿನ್ನೆಯಿಂದ ಸರ್ಕಾರವೇ ಕಾರ್ಮಿಕರನ್ನು ಸ್ವಂತ ಜಿಲ್ಲೆ ಹಾಗೂ ಊರುಗಳಿಗೆ ಕಳುಹಿಸಲು ಮುಂದಾಗಿದೆ.

  • ದಯಮಾಡಿ ನಮ್ಮನ್ನ ಊರಿಗೆ ತಲುಪಿಸಿ- ಕೇರಳದಲ್ಲಿ ಸಿಲುಕಿದ ಕಾರ್ಮಿಕರ ಅಳಲು

    ದಯಮಾಡಿ ನಮ್ಮನ್ನ ಊರಿಗೆ ತಲುಪಿಸಿ- ಕೇರಳದಲ್ಲಿ ಸಿಲುಕಿದ ಕಾರ್ಮಿಕರ ಅಳಲು

    – ವ್ಯವಸ್ಥೆ ಕಲ್ಪಿಸುವಂತೆ ಸಿಎಂ, ಗೃಹ ಸಚಿವರಿಗೆ ಮನವಿ

    ಹಾವೇರಿ: ಜಿಲ್ಲೆಯಿಂದ ಕೆಲಸ ಅರಸಿಕೊಂಡು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ದುಡಿಯಲು ಹೋಗಿದ್ದ 40ಕ್ಕೂ ಅಧಿಕ ಕಾರ್ಮಿಕರು ಊರಿಗೆ ಬರಲಾಗದೆ ಪರದಾಡ್ತಿದ್ದಾರೆ.

    ಕಣ್ಣೂರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಾಸವಾಗಿರೋ ಕಾರ್ಮಿಕರು ಲಾಕ್ ಡೌನ್ ನಂತರ ರಾಜ್ಯಗಳ ಗಡಿ ಬಂದ್ ಆಗಿದ್ದರಿಂದ ಊರಿಗೆ ಬರಲು ಪರದಾಡ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ನಂತರ ಕೆಲಸವೂ ಇಲ್ಲದೆ ಇದ್ದ ಹಣವೂ ಖರ್ಚಾಗಿದೆ. ಊಟಕ್ಕೆ ಬೇಕಾದ ಪದಾರ್ಥಗಳು ಖಾಲಿ ಆಗಿವೆ.

    ಹೀಗಾಗಿ ನಮ್ಮನ್ನ ನಮ್ಮ ನಮ್ಮ ಊರಿಗೆ ತಲುಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ಮೊಬೈಲ್ ನಲ್ಲಿ ವಿಡಿಯೋ ಮಾಡಿ ಹರಿಬಿಡೋ ಮೂಲಕ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಊರಿಗೆ ತಲುಪಿಸುವಂತೆ ಕೇಳಿಕೊಳ್ತಿದ್ದಾರೆ.

  • ವಿಜಯಪುರದಲ್ಲಿ ಸಿಲುಕಿದ್ದ 33 ಮಂದಿ ಕಾರ್ಮಿಕರು ತಮ್ಮೂರಿಗೆ ವಾಪಸ್

    ವಿಜಯಪುರದಲ್ಲಿ ಸಿಲುಕಿದ್ದ 33 ಮಂದಿ ಕಾರ್ಮಿಕರು ತಮ್ಮೂರಿಗೆ ವಾಪಸ್

    ವಿಜಯಪುರ: ಕೇಂದ್ರ ಸರ್ಕಾರ ಅಂತರ್ ಜಿಲ್ಲೆಗಳಲ್ಲಿ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಿಲುಕಿದ್ದ 33 ಮಂದಿ ಕಾರ್ಮಿಕರು ತಮ್ಮತಮ್ಮ ಜಿಲ್ಲೆಗಳಿಗೆ ಮರಳಿದ್ದಾರೆ.

    ಭಾರತ ಲಾಕಡೌನ್ ಆದ ಹಿನ್ನೆಲೆಯಲ್ಲಿ 33 ಜನ ವಲಸೆ ಕಾರ್ಮಿಕರು ವಿಜಯಪುರದಲ್ಲಿ ಸಿಲುಕಿದ್ದರು. ವಿಜಯಪುರ ನಗರದ ಕಾಕಾ ಕಾರ್ಖಾನೀಸ್ ಸಮುದಾಯ ಭವನದಲ್ಲಿ ಕಾರ್ಮಿಕರು ಉಳಿದಿಕೊಂಡಿದ್ದರು. ಇವರಿಗೆ ವಿಜಯಪುರ ಜಿಲ್ಲಾಡಳಿತದಿಂದ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿತ್ತು.

    ಕೇಂದ್ರ ಸರ್ಕಾರ ಅಂತರ್ ಜಿಲ್ಲೆಗಳಲ್ಲಿ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿದೆ. ಹೀಗಾಗಿ ವಿಜಯಪುರ ಜಿಲ್ಲಾಡಳಿತ ಏಳು ನಾನಾ ವಾಹನಗಳಲ್ಲಿ ಕಾರ್ಮಿಕರನ್ನು ಅವರ ಜಿಲ್ಲೆಗಳಿಗೆ ಕಳುಹಿಸಿ ಕೊಟ್ಟಿದೆ. ಅಷ್ಟೇ ಅಲ್ಲದೇ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಉಸ್ತುವಾರಿಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ.

    ವಿಜಯಪುರ ಜಿಲ್ಲಾಡಳಿತ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಪ್ರಮಾಣ ಪತ್ರ, ಸಂಚಾರಕ್ಕೆ ಪಾಸ್, ವಾಹನ ವ್ಯವಸ್ಥೆ ಮಾಡಿದೆ. ಶಿವಮೊಗ್ಗ, ಉಡುಪಿ, ರಾಮನಗರ ಮೂಲದ 33 ಜನ ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಿದ್ದಾರೆ.

  • ವಲಸೆ, ಕೂಲಿ ಕಾರ್ಮಿಕರು ಸ್ಥಳಾಂತರಕ್ಕೆ ಅವಕಾಶ – ಷರತ್ತುಗಳು ಅನ್ವಯ

    ವಲಸೆ, ಕೂಲಿ ಕಾರ್ಮಿಕರು ಸ್ಥಳಾಂತರಕ್ಕೆ ಅವಕಾಶ – ಷರತ್ತುಗಳು ಅನ್ವಯ

    ಬೆಂಗಳೂರು: ವಲಸೆ ಮತ್ತು ಕೂಲಿ ಕಾರ್ಮಿಕರ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

    ಕೆಎಸ್‍ಆರ್‍ ಟಿಸಿ ಬಸ್ ಗಳ ಮೂಲಕ ಕಾರ್ಮಿಕರನ್ನು ಸ್ಥಳಾಂತರ ಮಾಡಬಹುದಾಗಿದೆ. ಸ್ಥಳಾಂತರ ಮಾಡುವಾದ ಶೇ.40ರಷ್ಟು ಜನರನ್ನು ಮಾತ್ರ ಬಸ್ ನಲ್ಲಿ ಕರೆದುಕೊಂಡ ಹೋಗವುದರ ಜೊತೆಗೆ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಕಾರ್ಮಿಕರನ್ನು ಹೊರ ರಾಜ್ಯಗಳಿಗೆ ಸ್ಥಳಾಂತರ ಮಾಡುವಂತಿಲ್ಲ. ರಾಜ್ಯದ ಜಿಲ್ಲೆಗಳಲ್ಲಿ ಮಾತ್ರ ಸ್ಥಳಾಂತರ ಅವಕಾಶ ನೀಡಲಾಗಿದೆ. ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಗ್ರಾಮಗಳಿಗೆ ಮತ್ತು ಕಾಮಗಾರಿ ನಡೆಯುವ ಸ್ಥಳಗಳಿಗೆ ಶಿಫ್ಟ್ ಮಾಡಬಹುದು. ಸರ್ಕಾರ ಈಗಾಗಲೇ ಗುರುತಿಸಿರುವ ಕೊರೊನಾ ಕೆಂಪು ವಲಯಗಳಿಗೆ ಕಳುಹಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಖಡಕ್ ಆಗಿ ಸೂಚಿಸಿದೆ.

  • ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಸೈಕಲ್ ಮೇಲೆ ಹೊರಟ ಕಾರ್ಮಿಕರು

    ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಸೈಕಲ್ ಮೇಲೆ ಹೊರಟ ಕಾರ್ಮಿಕರು

    ವಿಜಯಪುರ: ಲಾಕ್‍ಡೌನ್ ನಿಂದಾಗಿ ಉತ್ತರ ಪ್ರದೇಶ ಮೂಲದ ಕಾರ್ಮಿಕರು ಸೈಕಲ್ ಗಳ ಮೇಲೆಯೇ ತಮ್ಮೂರಿಗೆ ಪ್ರಯಾಣ ಬೆಳೆಸಿದ್ದಾರೆ.

    ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ 41 ಕಾರ್ಮಿಕರು ನಾಲ್ಕು ದಿನಗಳ ಹಿಂದೆಯೇ ಪ್ರಯಾಣ ಬೆಳೆಸಿದ್ದಾರೆ. ಬುಧವಾರ ರಾತ್ರಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ತಲುಪಿದ್ದಾರೆ. ನಾಲ್ಕು ದಿನಗಳಿಂದ ಸೈಕಲ್ ಮೇಲೆ ಬಂದಿದ್ದರಿಂದ ಹೆದ್ದಾರಿಯ ಪಕ್ಕದಲ್ಲಿಯೇ ವಿಶ್ರಾಂತಿ ಪಡೆದುಕೊಂಡಿದ್ದರು.

    ಕಾರ್ಮಿಕರನ್ನು ಗಮನಿಸಿದ ಸ್ಥಳೀಯರು ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಮಾಡಲು ಕೆಲಸವಿಲ್ಲ. ಊರಿಗೆ ತೆರಳಲು ಸಾರಿಗೆ ವ್ಯವಸ್ಥೆಯೂ ಇಲ್ಲ. ಹಾಗಾಗಿ ಸೈಕಲ್ ಮೇಲೆಯೇ ಊರಿಗೆ ತೆರಳಲು ನಿರ್ಧರಿಸಿದೆವು ಎಂದು ಕಾರ್ಮಿಕರು ಹೇಳುತ್ತಿದ್ದಾರೆ. 41 ಕಾರ್ಮಿಕರು ತಾವು ಉತ್ತರ ಪ್ರದೇಶದ ಹರಿದೋಹಿ ಜಿಲ್ಲೆಯದವರು ಎಂದು ಹೇಳಿಕೊಂಡಿದ್ದಾರೆ.

  • ಮಂಗ್ಳೂರಿನ ಬಿಗ್ ಬ್ಯಾಗ್ ಕಂಪನಿಯಿಂದ ಲಾಕ್‍ಡೌನ್ ಉಲ್ಲಂಘನೆ

    ಮಂಗ್ಳೂರಿನ ಬಿಗ್ ಬ್ಯಾಗ್ ಕಂಪನಿಯಿಂದ ಲಾಕ್‍ಡೌನ್ ಉಲ್ಲಂಘನೆ

    – 3 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಂದ ಕೆಲಸ ಆರಂಭ

    ಮಂಗಳೂರು: ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಯಾವುದೇ ಕಾರ್ಖಾನೆ, ಐಟಿ-ಬಿಟಿ ಕಂಪನಿಗಳು ಓಪನ್ ಆಗಿಲ್ಲ. ಆದರೆ ಮಂಗಳೂರು ತಾಲೂಕಿನ ಗಂಜಿಮಠ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬಿಗ್ ಬ್ಯಾಗ್ಸ್ ಪ್ರೈ.ಲಿ ಎಂಬ ಪ್ಲಾಸ್ಟಿಕ್ ಬ್ಯಾಗ್ ಉತ್ಪಾದನಾ ಕಂಪನಿ ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿದೆ.

    ಲಾಕ್‍ಡೌನ್ ನಡುವೆಯೂ ಬಿಗ್ ಬ್ಯಾಗ್ ಕಂಪನಿ ತನ್ನ ಕಾರ್ಮಿಕರನ್ನು ಕರೆಸಿಕೊಂಡು ಕಾರ್ಯಾರಂಭವನ್ನು ಮಾಡಿದೆ. ಹೊರ ರಾಜ್ಯದಿಂದಲೂ ಕಾರ್ಮಿಕರು ಆಗಮಿಸಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಂದ ಕೆಲಸ ಆರಂಭವಾಗಿದೆ.

    ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ನೌಕರರನ್ನು ಒಟ್ಟು ಸೇರಿಸಿರುವುದರಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆ ರೆಡ್ ಝೋನ್ ಪಟ್ಟಿಯಲ್ಲಿದ್ದು, ಕಂಪನಿಯ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ರೆಡಿ ಮಾಡುವ ಈ ಕಂಪನಿ ಏಪ್ರಿಲ್ 4ರಂದೇ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿತ್ತು. ಆದರೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಮಸ್ತಿ – ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಮೂವರು

    ಲಾಕ್‍ಡೌನ್‍ನಲ್ಲಿ ಮಸ್ತಿ – ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಮೂವರು

    ಬಳ್ಳಾರಿ: ಲಾಕ್‍ಡೌನ್ ಹಿನ್ನೆಲೆ ಸರಣಿ ರಜೆ ಇರೋದರಿಂದ ನದಿಯಲ್ಲಿ ಈಜಲು ತೆರೆಳಿದ್ದ ಮೂವರು ಕಾರ್ಮಿಕರು ನೀರುಪಾಲಾದ ಘಟನೆ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸೋವೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಇಂದು ಮಧ್ಯಾಹ್ನ ಈಜಾಡಲು ಹೋಗಿದ್ದ ಮೂವರು ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ಈಜಾಡಲು ಐದು ಮಂದಿ ತೆರಳಿದ್ದು, ಈ ಪೈಕಿ ಮೂವರು ನೀರು ಪಾಲಾದರೆ, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋವೇನಹಳ್ಳಿ ಗ್ರಾಮದ ನಿವಾಸಿ ಕೋಗಳಿ ಮಾರುತಿ(23), ಮಲ್ಲಿನಕೆರೆ ಸುರೇಶ್(25) ಹಾಗೂ ಹಂಪಸಾಗರ ಗ್ರಾಮದ ಪಿ. ಫಕರುದ್ದೀನ್(25) ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ.

    ಮಲ್ಲಿನಕೆರೆ ಸುರೇಶ್ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿದ್ದು, ಉಳಿದ ಇಬ್ಬರು ಕೂಡ ಕೂಲಿಕಾರ್ಮಿಕರಾಗಿದ್ದಾರೆ. ನೀರು ಪಾಲಾದ ಮೃತದೇಹಗಳ ಪತ್ತೆಗೆ ಹಡಗಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾಗರ To ತಮಿಳುನಾಡು – 600 ಕಿ.ಮೀ ನಡೆದೇ ಹೊರಟ ಕಾರ್ಮಿಕರು

    ಸಾಗರ To ತಮಿಳುನಾಡು – 600 ಕಿ.ಮೀ ನಡೆದೇ ಹೊರಟ ಕಾರ್ಮಿಕರು

    ಚಿಕ್ಕಮಗಳೂರು: ಕಳೆದ ಆರು ತಿಂಗಳ ಹಿಂದೆ ಕಟ್ಟಡ ನಿರ್ಮಾಣಕ್ಕೆಂದು ತಮಿಳುನಾಡಿನಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಬಂದಿದ್ದ 5 ಕಾರ್ಮಿಕರು ನಡೆದುಕೊಂಡೇ ತಮಿಳುನಾಡಿನತ್ತ ಹೆಜ್ಜೆ ಹಾಕಿದ್ದಾರೆ.

    ಏಪ್ರಿಲ್ 14ರ ಬಳಿಕವೂ ಕೊರೊನಾ ಲಾಕ್‍ಡೌನ್ ಮುಂದುವರೆದ ಹಿನ್ನೆಲೆ ವಾಹನಗಳು ಸಿಗದ ಕಾರಣ ಐವರು ಕಾರ್ಮಿಕರು ತಮಿಳುನಾಡಿನತ್ತ ನಡೆದುಕೊಂಡೇ ಸಾಗುತ್ತಿದ್ದಾರೆ. ಸಾಗರದಿಂದ ತಮಿಳುನಾಡಿಗೆ ಸರಿಸುಮಾರು 600 ಕಿ.ಮೀ ಅಂತರವಿದೆ. ಇಲ್ಲಿ ಕೆಲಸವಿಲ್ಲ ಎಂದು ಊರು ನೆನಪಾಗಿ ನಡೆದೇ ಊರು ಸೇರಲು ಕಾರ್ಮಿಕರು ಹೊರಟಿದ್ದಾರೆ. ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಕಾರಣ ಕಳೆದೊಂದು ತಿಂಗಳಿನಿಂದ ಸಾಗರದಲ್ಲಿ ರೂಮಿನಲ್ಲೇ ಈ ಕಾರ್ಮಿಕರು ವಾಸವಿದ್ದರು. ಅವರೇ ಅಡುಗೆ ತಯಾರಿಸಿಕೊಂಡು ಊಟ-ತಿಂಡಿ ಮಾಡಿಕೊಂಡು ಕಾಲ ಕಳೆಯುತ್ತಿದ್ದರು.

    ಏಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯುತ್ತೆ ಕೆಲಸ ಆರಂಭವಾಗುತ್ತೆ ಅಥವಾ ಊರಿಗೆ ಹೋಗೋಣವೆಂದು ಭಾವಿಸಿ ಸಾಗರದಲ್ಲೇ ಕಾರ್ಮಿಕರು ಇದ್ದರು. ಆದರೆ ಲಾಕ್‍ಡೌನ್ ಮುಂದುವರೆದ ಕಾರಣ ಮತ್ತೆ ಆತಂಕಕ್ಕೀಡಾಗಿ ತಮಿಳುನಾಡಿನತ್ತ ಕಾರ್ಮಿಕರು ನಡೆದೇ ಹೊರಟಿದ್ದಾರೆ. ಹೀಗೆ ನಡೆದು ಬಂದ ಕಾರ್ಮಿಕರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಠಾಣಾ ವ್ಯಾಪ್ತಿಯ ಲಕ್ಕವಳ್ಳಿ ಕ್ರಾಸ್ ಬಳಿ ಬರ್ತಿದ್ದಂತೆ ದಣಿವಾರಿಸಿಕೊಳ್ಳಲು ಕೂತಿದ್ದರು. ಲಕ್ಕವಳ್ಳಿ ಕ್ರಾಸ್ ಬಳಿಯ ಚೆಕ್‍ಪೋಸ್ಟ್‍ನಲ್ಲಿದ್ದ ಪೊಲೀಸರು ಇವರನ್ನು ವಿಚಾರಿಸಿದಾಗ ಪೊಲೀಸರ ಬಳಿ ಕಾರ್ಮಿಕರು ತಮ್ಮ ಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

    ಕಾರ್ಮಿಕರ ಕಷ್ಟ ಆಲಿಸಿದ ಪೊಲೀಸರು ಅವರಿಗೆ ಅಲ್ಲಿಯೇ ಊಟದ ವ್ಯವಸ್ಥೆ ಮಾಡಿ ಎರಡು ದಿನಕ್ಕೆ ಆಗುವಷ್ಟು ನೀರು, ಬಿಸ್ಕೆಟ್ ಹಾಗೂ ಬ್ರೆಡ್ ಕೊಟ್ಟು ಕಳುಹಿಸಿದ್ದಾರೆ. ನಡೆದುಕೊಂಡು ಹೋಗುತ್ತಿರುವ ಕಾರಣ ತಾವು ತಂದಿದ್ದ ಆಹಾರವನ್ನ ಮುಂದೆ ಹಸಿವಾದಾಗ ತಿನ್ನಲು ಇಟ್ಟುಕೊಂಡು ಪೊಲೀಸರು ಕೊಟ್ಟ ಊಟ ಮಾಡಿ ಮತ್ತೆ ಐವರು ತಮಿಳುನಾಡಿನತ್ತ ಹೆಜ್ಜೆ ಹಾಕಿದ್ದಾರೆ.

  • ರಾತ್ರೋರಾತ್ರಿ ತೆಲಂಗಾಣದಿಂದ ರಾಯಚೂರಿಗೆ ಬಂದ 95 ಜನ

    ರಾತ್ರೋರಾತ್ರಿ ತೆಲಂಗಾಣದಿಂದ ರಾಯಚೂರಿಗೆ ಬಂದ 95 ಜನ

    ರಾಯಚೂರು: ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೋವಿಡ್-19 ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಜಿಲ್ಲಾಡಳಿತದ ಜೊತೆ ಪೊಲೀಸ್ ಇಲಾಖೆಯ ಕಾರ್ಯವನ್ನೂ ಶ್ಲಾಘಿಸಬೇಕು. ಆದರೆ ಜಿಲ್ಲೆಯ ಅಂತರರಾಜ್ಯ ಗಡಿಗಳಲ್ಲಿ ಮಾತ್ರ ಗಂಭೀರ ಪರಿಸ್ಥಿತಿಯಿದ್ದು, ಪೊಲೀಸರು ಸಿಕ್ಕ ಸಿಕ್ಕವರನ್ನ ಜಿಲ್ಲೆಯೊಳಗೆ ಬಿಡುತ್ತಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

    ಕೊರೊನಾ ಗಂಭೀರತೆಯನ್ನ ಮರೆತ ಕೆಲ ಪೊಲೀಸರು ರಾಯಚೂರಿನ ಶಕ್ತಿನಗರದ ಅಂತರರಾಜ್ಯ ಚೆಕ್‌ ಪೊಸ್ಟ್‌ನಲ್ಲಿ ಶಿಲ್ಪಾ ಮೆಡಿಕೇರ್, ಕೆಪಿಸಿ ಕಂಪನಿ ಸಿಬ್ಬಂದಿಗೆ ವಿನಾಯಿತಿ ಕೊಟ್ಟಿದ್ದಾರೆ. ಜಿಲ್ಲಾಡಳಿತ ನಿರ್ಬಧ ಹೇರಿದ್ದರೂ ತೆಲಂಗಾಣದಿಂದ ಕಂಪನಿಗೆ ಬರುವ ಸುಮಾರು ಕಾರ್ಮಿಕರನ್ನ ಜಿಲ್ಲೆಯ ಒಳಗೆ ಬಿಡುತ್ತಿದ್ದಾರೆ.

    ಈಗಾಗಲೇ ಫಾರ್ಮಾ ಕಂಪನಿಗೆ ಹೊರರಾಜ್ಯದಿಂದ ಬರುವ ಕೆಲಸಗಾರರಿಗೆ ಜಿಲ್ಲೆಯಲ್ಲಿ ಊಟ, ವಸತಿ ಸೌಲಭ್ಯ ನೀಡಲು ಮೊದಲೇ ಸೂಚಿಸಲಾಗಿದೆ. ಆದರೂ ಕಂಪನಿ ತನ್ನ ಕೆಲಸಗಾರರಿಗೆ ಯಾವುದೇ ಸೌಕರ್ಯ ಒದಗಿಸಿಲ್ಲ. ಹೀಗಾಗಿ ತೆಲಂಗಾಣದ ಗಡಿಯಲ್ಲಿನ ಕಾರ್ಮಿಕರು ಪ್ರತಿ ನಿತ್ಯ ಬರುತ್ತಿದ್ದಾರೆ. ಇದನ್ನ ಪ್ರಶ್ನಿಸಿದ್ದಕ್ಕೆ ಮಾಧ್ಯಮದವರು ಹೇಳಿದರೆ ಅಂತರರಾಜ್ಯ ಗಡಿ ಬಂದ್ ಮಾಡುತ್ತೇವೆ ಅಂತ ಚೆಕ್‌ ಪೊಸ್ಟ್‌ನಲ್ಲಿನ ಪೊಲೀಸ್ ಸಿಬ್ಬಂದಿ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ.

    ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದ್ದರೂ ಚೆಕ್ ಪೋಸ್ಟ್‌ಗಳಲ್ಲಿ ನಿರ್ಲಕ್ಷ್ಯವಹಿಸಲಾಗುತ್ತಿದೆ. ಈಗಾಗಲೇ ರಾತ್ರೋರಾತ್ರಿ ಅಂತರರಾಜ್ಯ ಗಡಿಗಳಿಂದ 95 ಜನ ಜಿಲ್ಲೆಗೆ ಬಂದಿದ್ದಾರೆ. ಆದ್ದರಿಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಗಡಿ ಗ್ರಾಮಗಳ ಕಚ್ಚಾ ರಸ್ತೆಗಳ ಮೂಲಕ ಜನ ಎಗ್ಗಿಲ್ಲದೆ ಓಡಾಡುತ್ತಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.

  • ಮುಂಬೈನಲ್ಲಿ ವಲಸೆ ಕಾರ್ಮಿಕರಿಗೆ ಲಾಠಿ ಏಟು

    ಮುಂಬೈನಲ್ಲಿ ವಲಸೆ ಕಾರ್ಮಿಕರಿಗೆ ಲಾಠಿ ಏಟು

    ಮುಂಬೈ: ಮುಂಬೈನಲ್ಲಿ ವಲಸೆ ಕಾರ್ಮಿಕರ ಪರದಾಟ ಹೇಳತೀರದಾಗಿದ್ದು, ಪೊಲೀಸರ ಲಾಠಿ ಚಾರ್ಜ್ ನಿಂದಾಗಿ ದೊಡ್ಡ ಗದ್ದಲ ಉಂಟಾಗಿದೆ. ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದಿದ್ದು, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಾಗ್ವಾದಕ್ಕೆ ಕಾರಣವಾಗಿದೆ.

    ಇಂದು ಲಾಕ್‍ಡೌನ್ ತೆರವಾಗಲಿದೆ ಎಂದು ಭಾವಿಸಿದ್ದ ಸ್ಲಂ ನಿವಾಸಿಗಳು, ತಮ್ಮ ಊರುಗಳಿಗೆ ಹಿಂದಿರುಗಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಅದೇ ರೀತಿ ಮುಂಬೈನ ಬಾಂದ್ರಾ ಪಶ್ಚಿಮ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಇಂದು ಬೆಳಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಲಾಕ್‍ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿದರು.

    ತಮ್ಮ ಊರಿಗೆ ತೆರಳಲು ಸಿದ್ಧವಾಗಿರುವ ಎಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಊಟಕ್ಕೆ ಹಣವಿಲ್ಲದೆ ಪರದಾಡುವಂತಾಗಿದೆ. ಅಲ್ಲದೆ ಕೊರೊನಾ ಸೋಂಕು ತಗುಲುವ ಭೀತಿ ಸಹ ಎದುರಾಗಿದೆ. ಹೀಗಾಗಿ ಎಲ್ಲರೂ ತಮ್ಮ ಊರುಗಳಿಗೆ ತೆರಳಲು ಪಟ್ಟು ಹಿಡಿದ್ದಾರೆ. ಇಂದು ರೈಲುಗಳು ಆರಂಭವಾಗುತ್ತವೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದು, ಹೀಗಾಗಿ ರೈಲ್ವೆ ನಿಲ್ದಾಣದ ಬಳಿ ಬಂದಿದ್ದಾರೆ. ಹೇಗಾದರೂ ನಮಗೆ ರೈಲು ವ್ಯವಸ್ಥೆ ಮಾಡಿ, ನಾವು ನಮ್ಮ ಊರುಗಳಿಗೆ ಹೋಗಬೇಕು ಎಂದು ಸ್ಲಂ ನಿವಾಸಿಗಳು ಗೋಗರೆಯುತ್ತಿದ್ದಾರೆ.

    ಸಾವಿರಕ್ಕೂ ಅಧಿಕ ಕಾರ್ಮಿಕರು ರೈಲು ನಿಲ್ದಾಣದ ಬಳಿ ಜಮಾವಣೆಯಾಗಿದ್ದು, ಎಷ್ಟು ಮನವೊಲಿಸಲು ಯತ್ನಿಸಿದರೂ ಕೇಳದಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಚದುರಿಸಲು ಯತ್ನಿಸಿದ್ದಾರೆ. ಈ ವೇಳೆ ದೊಡ್ಡ ಗಲಾಟೆಯೇ ನಡೆದಿದೆ. ಇವೆರೆಲ್ಲರೂ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ. ಯಾರ ಮಾತಿಗೂ ಜಗ್ಗದೆ ನಮ್ಮ ಊರಿಗೆ ಕಳುಹಿಸಿ ಎಂದು ಪಟ್ಟುಹಿಡಿದಿದ್ದಾರೆ.

    ಈ ಕುರಿತು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿ, ಕಾರ್ಮಿಕರಿಗೆ ವ್ಯವಸ್ಥೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಿದೆ. ಅಪಾರ ಸಂಖ್ಯೆಯಲ್ಲಿ ನೆರೆದ ಕಾರ್ಮಿಕರು ನಮಗೆ ಊಟ ಕೊಡಿ, ಇಲ್ಲವೇ ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಕೇಳುತ್ತಿದ್ದಾರೆ. ಸರ್ಕಾರ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಉದ್ಧವ್ ಠಾಕ್ರೆ, ಬಾಂದ್ರಾದಲ್ಲಿ ನಡೆದಿರುವ ಘಟನೆ ದುರದೃಷ್ಟಕರ, ಇಂದಿನಿಂದ ರೈಲುಗಳು ಪ್ರಾರಂಭವಾಗುತ್ತವೆ ಎಂದು ಭಾವಿಸಿ ಅವರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅವರ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.

    ಮಹಾರಾಷ್ಟ್ರದಲ್ಲಿ ಈ ವರೆಗೆ 2334 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 230 ಜನ ಗುಣಮುಖರಾಗಿದ್ದಾರೆ ಎಂದು ಸಿಎಂ ಉದ್ಧವ್ ಠಾಕ್ರೆ ಮಾಹಿತಿ ನೀಡಿದ್ದಾರೆ.