Tag: workers

  • ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸಚಿವ ಶೆಟ್ಟರ್ ಸನ್ಮಾನ

    ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸಚಿವ ಶೆಟ್ಟರ್ ಸನ್ಮಾನ

    – ಸೋಮವಾರದಿಂದ ಹುಬ್ಬಳ್ಳಿಯಲ್ಲಿ ಲಾಕ್‍ಡೌನ್ ಸಡಿಲಿಕೆ

    ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ನಿರತರಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸಚಿವ ಜಗದೀಶ್ ಶೆಟ್ಟರ್ ಅವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

    ಜಗದೀಶ್ ಶೆಟ್ಟರ್ ಅವರು ವಿದ್ಯಾನಗರದ ಗಣಪತಿ ದೇವಸ್ಥಾನ ಬಳಿ ಪೌರ ಕಾರ್ಮಿಕರಿಗೆ ಗುಲಾಬಿ ಹೂವು ನೀಡಿ, ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸುವ ಮೂಲಕ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸೋಮವಾರದಿಂದ ಹುಬ್ಬಳ್ಳಿಯಲ್ಲಿ ಲಾಕ್‍ಡೌನ್ ಸಡಿಲಿಕೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೀಲ್‍ಡೌನ್ ಪ್ರದೇಶ ಹೊರತುಪಡಿಸಿ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದರು.

    ಹುಬ್ಬಳ್ಳಿ ನಗರ ಹೊರತುಪಡಿಸಿ ಧಾರವಾಡ ಜಿಲ್ಲೆಯಾದ್ಯಂತ ಈಗಾಗಲೇ ಆರ್ಥಿಕ ಚಟುವಟಿಕೆ ಆರಂಭವಾಗಿದೆ. ಹುಬ್ಬಳ್ಳಿಯ ಸೀಲ್‍ಡೌನ್ ಪ್ರದೇಶ ಬಿಟ್ಟು ಉಳಿದೆಡೆ ವಾಣಿಜ್ಯ, ವಹಿವಾಟು ನಡೆಸಲು ಅನುಮತಿ ನೀಡಿದ್ದೇವೆ. ಶನಿವಾರ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

    ಲಾಕ್‍ಡೌನ್ ಸಡಿಲಿಕೆ ಅವಕಾಶವನ್ನು ಜನತೆ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ಹಾಕಲಾಗುತ್ತದೆ. ಶಾಪಿಂಗ್ ಮಾಲ್, ಬಾರ್, ರೆಸ್ಟೊರೆಂಟ್, ಜಿಮ್, ಧಾರ್ಮಿಕ ಚಟುವಟಿಕೆ, ಸಭೆ, ಸಮಾರಂಭ ನಿರ್ಬಂಧಗಳು ಮುಂದುವರಿಯಲಿದೆ ಎಂದು ಸಚಿವ ಶೆಟ್ಟರ್ ತಿಳಿಸಿದರು.

  • ಕಾರ್ಮಿಕರನ್ನು ಕರೆ ತರಲು ರಸ್ತೆ ಬದಿಯಲ್ಲೇ ಮಲಗಿದ ಶಾಸಕ ನಡಹಳ್ಳಿ

    ಕಾರ್ಮಿಕರನ್ನು ಕರೆ ತರಲು ರಸ್ತೆ ಬದಿಯಲ್ಲೇ ಮಲಗಿದ ಶಾಸಕ ನಡಹಳ್ಳಿ

    ವಿಜಯಪುರ: ಕ್ಷೇತ್ರದ ಕಾರ್ಮಿಕರನ್ನು ಕರೆ ತರುವದಕ್ಕಾಗಿ ಹೋಗಿದ್ದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಗೋವಾ ಗಡಿಯ ರಸ್ತೆ ಬದಿಯಲ್ಲೇ ಮಲಗಿದ್ದಾರೆ.

    ಕ್ಷೇತ್ರದ ಕಾರ್ಮಿಕರು ಜೀವನೋಪಾಯಕ್ಕಾಗಿ ಗೋವಾಕ್ಕೆ ಹೋಗಿದ್ದರು. ಲಾಕ್‍ಡೌನ್‍ನಿಂದ ಕೆಲಸವೂ ಇಲ್ಲದೇ ಸಂಕಷ್ಟದಲ್ಲಿದ್ದ ಕಾರ್ಮಿಕರನ್ನು ಕರೆ ತರಲು ಶಾಸಕರು ಮುಂದಾಗಿದ್ದರು. ಹಾಗಾಗಿ ಗೋವಾ ಗಡಿದ ಭಾಗದವರೆಗೂ ತೆರಳಿ 10 ಸಾರಿಗೆ ಬಸ್ ಗಳಲ್ಲಿ ಕಾರ್ಮಿಕರನ್ನು ಕರೆ ತರಲು ಹೋಗಿದ್ದರು.

    ರಾತ್ರಿ ಚೋರ್ಲಾ-ಖಾನಾಪುರ ಚೆಕ್ ಬಳಿಯ ರಸ್ತೆ ಬದಿಯೇ ಮಲಗಿದ್ದಾರೆ. 350ಕ್ಕೂ ಅಧಿಕ ಕಾರ್ಮಿಕರನ್ನು 10 ಸಾರಿಗೆ ಬಸ್ ಗಳಲ್ಲಿ ಕರೆತಂದಿದ್ದಾರೆ.

  • ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಸ್ಥಳಾಂತರಿಸುವುದಕ್ಕೆ ಕೆ.ಜಿ.ಬೋಪಯ್ಯ ವಿರೋಧ

    ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಸ್ಥಳಾಂತರಿಸುವುದಕ್ಕೆ ಕೆ.ಜಿ.ಬೋಪಯ್ಯ ವಿರೋಧ

    ಮಡಿಕೇರಿ: ಕೆಲಸ ಹರಸಿ ಬಂದು ಮೈಸೂರಿನಲ್ಲಿ ಸಿಲುಕಿದ್ದ 60 ಕ್ಕೂ ಹೆಚ್ಚು ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಕೇರಳಕ್ಕೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಕೊಡಗಿನ ಕುಶಾಲನಗರ ಚೆಕ್‍ಪೋಸ್ಟ್ ನಲ್ಲಿ ನಡೆಯಿತು.

    ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಕುಶಾಲನಗರದ ಚೆಕ್ ಪೋಸ್ಟಿಗೆ ಭೇಟಿ ನೀಡಿದ್ದರು. ಇದೇ ವೇಳೆ ಮೈಸೂರಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೈಸೂರು ಜಿಲ್ಲಾಡಳಿತ ಮೂರು ಬಸ್‍ಗಳಲ್ಲಿ ಕೊಡಗಿನ ಮೂಲಕ ಕೇರಳಕ್ಕೆ ಸಾಗಿಸುತಿತ್ತು. ಕುಶಾಲನಗರ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ಬಸ್‍ಗಳು ಪ್ರವೇಶ ಮಾಡಿದಕ್ಕೆ ಶಾಸಕ ಕೆ.ಜಿ. ಬೋಪಯ್ಯ ಕೆಂಡಾಮಂಡಲವಾದರು.

    ಚೆಕ್‍ಪೋಸ್ಟಿನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗರಂ ಆದರು. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಆದರೂ ಮೈಸೂರು ಕಮಿಷನರ್ ಈ ಬಸ್‍ಗಳನ್ನು ಕೊಡಗಿನ ಮೂಲಕ ಕೇರಳಕ್ಕೆ ಕಳುಹಿಸಲು ಮುಂದಾಗಿದ್ದು ಏಕೆ? ಇಷ್ಟು ಕಾರ್ಮಿಕರನ್ನು ಕೇರಳಕ್ಕೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿ ಕಾಫಿ, ಟೀಗೆ ಅಥವಾ ಊಟಕ್ಕೆ ಎಂದು ಇಳಿಯದೇ ಇರುವುದಿಲ್ಲ. ಈ ವೇಳೆ ಯಾರಿಗಾದರೂ ವೈರಸ್ ಇದ್ದು, ಕೊಡಗಿನ ಜನತೆಗೆ ಹರಡಿದರೆ ಅದಕ್ಕೆ ಹೊಣೆ ಯಾರು? ಹೀಗಾಗಿ ಕೊಡಗಿನ ಮೂಲಕ ಕಾರ್ಮಿಕರನ್ನು ಸಾಗಿಸಬಾರದು ಎಂದು ಶಾಸಕರು ಬಸ್‍ಗಳನ್ನು ತಡೆ ಹಿಡಿದರು.

    ಬೇರೆ ಯಾವ ಮಾರ್ಗದಲ್ಲಿ ಕಾರ್ಮಿಕರನ್ನು ಕೇರಳಕ್ಕೆ ಕಳುಹಿಸಲಿ ಎಂದು ಮೈಸೂರು ಜಿಲ್ಲೆಯಿಂದ ಆಗಮಿಸಿದ್ದ ಮೂರು ಬಸ್‍ಗಳನ್ನು ವಾಪಸ್ ಕಳುಹಿಸಿದರು. ಅಲ್ಲದೆ ಚೆಕ್‍ಪೋಸ್ಟ್ ನಲ್ಲಿರುವ ಅಧಿಕಾರಿಗಳು ಇನ್ನಷ್ಟು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿ ಕೆಲಸ ಮಾಡಲಿ ಎಂದರು.

  • ಸುಳ್ಳು ವದಂತಿ ನಂಬಿ ಮಂಗ್ಳೂರು ರೈಲ್ವೇ ನಿಲ್ದಾಣಕ್ಕೆ ಬಂದ ಕಾರ್ಮಿಕರು

    ಸುಳ್ಳು ವದಂತಿ ನಂಬಿ ಮಂಗ್ಳೂರು ರೈಲ್ವೇ ನಿಲ್ದಾಣಕ್ಕೆ ಬಂದ ಕಾರ್ಮಿಕರು

    – ನಾವ್ ಊರಿಗೆ ಹೋಗ್ಬೇಕು: ವಲಸಿಗರಿಂದ ಪ್ರತಿಭಟನೆ

    ಮಂಗಳೂರು: ಮಂಗಳೂರಿನಿಂದ ಉತ್ತರ ಭಾರತ ರಾಜ್ಯಗಳಿಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ ಅಂತ ವದಂತಿ ಹಬ್ಬಿ ಸಾವಿರಾರು ವಲಸೆ ಕಾರ್ಮಿಕರು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿ ಗುಂಪು ಸೇರಿ, ಪ್ರತಿಭಟನೆ ನಡೆಸಿ ಆತಂಕ ಸೃಷ್ಟಿಸಿದ ಘಟನೆ ನಡೆಯಿತು.

    ಉತ್ತರ ಭಾರತದ ವಲಸೆ ಕಾರ್ಮಿಕರು ರೈಲು ಮೂಲಕ ತಮ್ಮನ್ನು ಊರಿಗೆ ಕಳುಹಿಸುತ್ತಾರೆ ಎಂಬ ವದಂತಿ ನಂಬಿ ಬೆಳಗ್ಗೆನಿಂದಲೇ ರೈಲು ನಿಲ್ದಾಣದಲ್ಲಿ ಸೇರಿದ್ದರು. ಆದರೆ ರೈಲೇ ಸಿಬ್ಬಂದಿ ಯಾವುದೇ ರೈಲ್ವೇ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಸೇರಿದ ವಲಸೆ ಕಾರ್ಮಿಕರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದರು. ಆದರೆ ವಲಸೆ ಕಾರ್ಮಿಕರು ಮಾತ್ರ ಪಟ್ಟು ಬಿಡದೇ ರೈಲು ವ್ಯವಸ್ಥೆ ಕಲ್ಪಿಸುವಂತೆ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು.

    ಈ ವೇಳೆ ಸ್ಥಳದಿಂದ ಹೋಗುವಂತೆ ಪೊಲೀಸರು ಮನವೊಲಿಕೆಗೆ ಪ್ರಯತ್ನಪಟ್ಟರೂ ಕಾರ್ಮಿಕರು ಪೊಲೀಸರ ಮಾತನ್ನು ಕೇಳದೆ, ಉಪವಾಸವಿದ್ದರೂ ಪರವಾಗಿಲ್ಲ ನಾವು ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸುವ ಹಂತ ತಲುಪಿ ಕೆಲ ಹೊತ್ತು ಆತಂಕ ಸೃಷ್ಟಿಯಾಯಿತು.

    ನಂತರ ಸ್ಥಳಕ್ಕೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಭೇಟಿ ನೀಡಿ, ಮೂರು ದಿನದೊಳಗೆ ರೈಲಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಉತ್ತರ ಭಾರತದ ವಲಸೆ ಕಾರ್ಮಿಕರು ಪ್ರತಿಭಟನೆ ಹಿಂದಕ್ಕೆ ತೆಗೆದುಕೊಂಡರು. ನಂತರ ಜಿಲ್ಲಾಡಳಿತದ ವತಿಯಿಂದ ಕಾರ್ಮಿಕರು ಬಂದ ಸ್ಥಳಕ್ಕೆ ಮರಳಲು ಸ್ಥಳೀಯ ಬಸ್ಸಿನ ವ್ಯವಸ್ಥೆ ಮಾಡಿಕೊಡಲಾಯಿತು.

  • ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕರ ಡ್ಯಾನ್ಸ್- ಕೇಸ್ ದಾಖಲು

    ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಮಿಕರ ಡ್ಯಾನ್ಸ್- ಕೇಸ್ ದಾಖಲು

    -ತಟ್ಟೆ, ಲೋಟ ಹಿಡಿದು ಟಿಕ್‍ಟಾಕ್

    ಭುವನೇಶ್ವರ: ಕ್ವಾರಂಟೈನ್ ಕೇಂದ್ರದಲ್ಲಿ ಡ್ಯಾನ್ಸ್ ಮಾಡಿದ್ದ ಆರು ಕಾರ್ಮಿಕರ ವಿರುದ್ಧ ಒಡಿಶಾದ ಭದ್ರಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಲಾಕ್‍ಡೌನ್ ನಿಂದಾಗಿ ಬಹುತೇಕರು ಕೆಲವು ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ. ವಲಸೆ ಕಾರ್ಮಿಕರು, ಪ್ರವಾಸಿಗರು ಸೇರಿದಂತೆ ಬಹುತೇಕರನ್ನು ಆಯಾ ರಾಜ್ಯ ಸರ್ಕಾರಗಳು ಕ್ವಾರಂಟೈನ್ ಮಾಡಿವೆ. ಒಡಿಶಾದ ಭದ್ರಕ್ ನಲ್ಲಿ ಸಿಲುಕಿಕೊಂಡಿದ್ದ ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಆರ್‍ಎಎಸ್ ಹೈಸ್ಕೂಲಿನಲ್ಲಿರಿಸಲಾಗಿತ್ತು.

    ಬಹುತೇಕರು ಶಾಲೆಯಲ್ಲಿರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಸೂಚಿಸಿದ್ದರು. ಆದ್ರೆ ಆರು ಜನ ಕಾರ್ಮಿಕರು ಒಂದೆಡೆ ಸೇರಿ ಟಿಕ್‍ಟಾಕ್ ವಿಡಿಯೋ ಮಾಡಿದ್ದಾರೆ. ಕೇಂದ್ರದಲ್ಲಿಯ ತಟ್ಟೆ, ಲೋಟ ಪಾತ್ರೆ ಹಿಡಿದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರು ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದಕ್ಕೆ ಪ್ರಕರಣ ದಾಖಲಾಗಿದೆ.

     

  • ಕಾರ್ಮಿಕರಿಗೆ ಮತ್ತೆ ಗುಡ್‍ನ್ಯೂಸ್ – ಉಚಿತ ಬಸ್ ಪ್ರಯಾಣ 2 ದಿನ ವಿಸ್ತರಣೆ

    ಕಾರ್ಮಿಕರಿಗೆ ಮತ್ತೆ ಗುಡ್‍ನ್ಯೂಸ್ – ಉಚಿತ ಬಸ್ ಪ್ರಯಾಣ 2 ದಿನ ವಿಸ್ತರಣೆ

    ಬೆಂಗಳೂರು: ಕೆಎಸ್‌ಆರ್‌ಟಿಸಿ ಕಾರ್ಮಿಕರಿಂದ ದುಪ್ಪಟ್ಟು ಹಣವನ್ನು ಪಡೆಯುತ್ತಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ, ಕಾರ್ಮಿಕರಿಗೆ ಮೂರು ದಿನಗಳ ಕಾಲ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ಸರ್ಕಾರ ಉಚಿತ ಬಸ್ ಪ್ರಯಾಣವನ್ನು ಎರಡು ದಿನ ವಿಸ್ತರಣೆ ಮಾಡಿದೆ.

    ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಂ ಕಳಸದ್ ಅವರು, ಸಾರಿಗೆ ನಿಗಮದಿಂದ ಕಾರ್ಮಿಕರಿಗೆ ಭಾನುವಾರದಿಂದ ಮಂಗಳವಾರದವರೆಗೆ ಉಚಿತವಾಗಿ ತೆರಳಲು ಮೂರು ದಿನಗಳ ಕಾಲ ಅವಕಾಶ ಕೊಡಲಾಗಿತ್ತು. ಈಗ ಮತ್ತೆ ಎರಡು ದಿನ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಗುರುವಾರದವರೆಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಾರ್ಮಿಕರು ಉಚಿತವಾಗಿ ಸಂಚಾರ ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

    ಪತ್ರಿಕಾ ಪ್ರಕಟಣೆ:
    ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು, ಅದನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ. ಮಂಗಳವಾರ ಈ ಸೌಲಭ್ಯ ಕೊನೆಗೊಳ್ಳುತ್ತಿತ್ತು. ಆದರೆ ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಮತ್ತು ಜನರು ಬಸ್ ನಿಲ್ದಾಣಗಳಲ್ಲಿ ಜಮಾವಣೆಯಾಗದೆ ನೆಮ್ಮದಿಯಿಂದ ತಮ್ಮ ಊರುಗಳಿಗೆ ತೆರಳಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಭಾನುವಾರ 951 ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ 30,000 ಜನ ಪ್ರಯಾಣ ಮಾಡಿದ್ದಾರೆ. ಇಂದು 50 ಬಸ್ಸುಗಳಲ್ಲಿ ಈಗಾಗಲೇ 1,500 ಜನರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ 550 ಬಸ್ಸುಗಳು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ 400 ಬಸ್ಸುಗಳನ್ನು ಈ ಸೌಲಭ್ಯಗೋಸ್ಕರ ಕಾಯ್ದಿರಿಸಲಾಗಿದೆ. ಶನಿವಾರ 550 ಬಸ್ಸುಗಳಲ್ಲಿ 16,500 ಪ್ರಯಾಣಿಕರು ತೆರಳಿದ್ದರು.

    ಭಾನುವಾರ ಎರಡು ರೈಲುಗಳು ಬಿಹಾರದ ಪಾಟ್ನಾ ಮತ್ತು ರಾಂಚಿಗೆ ತೆರಳಿವೆ. ಇದೇ ಸಮಯದಲ್ಲಿ ಒಡಿಸ್ಸಾದ ಭುವನೇಶ್ವರಕ್ಕೆ ಒಂದು ರೈಲು ಕಳುಹಿಸಲಾಗಿದೆ. ಒಟ್ಟು ನಾಲ್ಕು ರೈಲುಗಳಲ್ಲಿ 4,800 ಪ್ರಯಾಣಿಕರು ಆ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಇಂದು ರಾಜಸ್ಥಾನದ ಜೈಪುರ, ಬಿಹಾರದ ಪಾಟ್ನಾಗೆ ಎರಡು ರೈಲುಗಳು ಹೊರಡಲಿವೆ. ಪ್ರಯಾಣಕ್ಕಿಂತ ಮೊದಲು ಎಲ್ಲಾ ಜನರಿಗೂ ಉಚಿತ ಊಟ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

  • ನಾಳೆಯಿಂದ ರಾಯಚೂರಿನಲ್ಲಿ 35 ಬಸ್ಸುಗಳ ಓಡಾಟ – ಪ್ರತೀ ಪ್ರಯಾಣಿಕರ ಮಾಹಿತಿ ಸಂಗ್ರಹ

    ನಾಳೆಯಿಂದ ರಾಯಚೂರಿನಲ್ಲಿ 35 ಬಸ್ಸುಗಳ ಓಡಾಟ – ಪ್ರತೀ ಪ್ರಯಾಣಿಕರ ಮಾಹಿತಿ ಸಂಗ್ರಹ

    ರಾಯಚೂರು: ಗ್ರೀನ್ ಝೋನ್ ಪ್ರದೇಶಗಳಲ್ಲಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಿರುವ ಹಿನ್ನೆಲೆ ರಾಯಚೂರಿನಲ್ಲಿ ನಾಳೆಯಿಂದ 35 ಬಸ್ಸುಗಳು ಓಡಾಡಲಿವೆ.

    ಪ್ರತೀ ತಾಲೂಕು ಪ್ರದೇಶದಿಂದ 5 ಬಸ್ಸುಗಳನ್ನ ಬಿಡಲಾಗುತ್ತಿದ್ದು, ಬಸ್ಸಿನ ಅರ್ಧದಷ್ಟು ಪ್ರಯಾಣಿಕರಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಪ್ರಯಾಣಿಕರ ಸಂಪೂರ್ಣ ಮಾಹಿತಿ ಪಡೆದು ಟಿಕೆಟ್ ನೀಡಲು ಸಾರಿಗೆ ಇಲಾಖೆ ನಿರ್ವಾಹಕರಿಗೆ ಸೂಚಿಸಿದೆ.

    ಪ್ರತಿ ಬಸ್ಸಿನಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಿದ್ದು, ಒಂದು ಬಸ್ಸಿನಲ್ಲಿ 30 ಜನರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ರೈತರು, ಕಾರ್ಮಿಕರು ಸೇರಿದಂತೆ ನಾನಾ ಕೆಲಸಗಳಿಗೆ ಹೋಗುವ ಜನರಿಗೆ ಅನುಕೂಲ ಮಾಡುವ ಹಿನ್ನೆಲೆ ಬಸ್ ಸಂಚಾರ ಆರಂಭವಾಗಿದ್ದು, ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಬಸ್ ನಿಲ್ದಾಣದಲ್ಲೂ ಬಸ್ ಹತ್ತುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಬಸ್ಸುಗಳ ನಡುವೆಯೂ ಸಾಮಾಜಿಕ ಅಂತರದ ವ್ಯವಸ್ಥೆ ಮಾಡಲಾಗಿದೆ. ಆಸನಗಳಿಗನ್ನ ಸೆಲ್ಲೋ ಟೇಪ್ ನಿಂದ ಲಾಕ್ ಮಾಡಿ ಬಸ್ ಗಾಗಿ ಕಾಯುವ ಪ್ರಯಾಣಿಕರಲ್ಲಿ ಅಂತರ ಕಾಪಾಡಲು ಸಿಬ್ಬಂದಿ ಮುಂದಾಗಿದ್ದಾರೆ.

    ಬ್ಯಾರಿಕೇಡ್ ಮೂಲಕ ಬಸ್ ನಿಲ್ದಾಣಕ್ಕೆ ಬರುವ, ಹೋಗುವ ಬಸ್ಸುಗಳ ನಿಯಂತ್ರಣ ಮಾಡಲಾಗಿದ್ದು. ಬಸ್ ನಿಲ್ದಾಣದ ಒಳಗೆ ಬರುವ ಪ್ರಯಾಣಿಕರನ್ನ ಪರೀಕ್ಷಿಸಿ, ಸ್ಯಾನಿಟೈಸರ್ ನೀಡಿ ಒಳಬಿಡಲಾಗುತ್ತದೆ. ಸದ್ಯಕ್ಕೆ ಗ್ರಾಮೀಣ ಭಾಗದಲ್ಲಿ ಬಸ್ಸುಗಳು ಓಡಾಡಲ್ಲ, ತಾಲೂಕು ಪ್ರದೇಶಗಳಿಗೆ ಮಾತ್ರ ಬಸ್ಸುಗಳು ಓಡಾಡಲಿವೆ.

  • ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ- ಬೆಳಗ್ಗೆ 10ರಿಂದ ಮೆಜೆಸ್ಟಿಕ್‍ನಿಂದ ಸಂಚರಿಸಲಿವೆ ಬಸ್

    ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ- ಬೆಳಗ್ಗೆ 10ರಿಂದ ಮೆಜೆಸ್ಟಿಕ್‍ನಿಂದ ಸಂಚರಿಸಲಿವೆ ಬಸ್

    ಬೆಂಗಳೂರು: ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವರಿಗಾಗಿ ಮೆಜೆಸ್ಟಿಕ್‍ನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.

    ಕೆಂಪು ವಲಯದ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಿಗೆ ತೆರಳಬಹುದಾಗಿದೆ. ಭಾನುವಾರದಿಂದ ಬೆಳಗ್ಗೆ 10ರಿಂದ ಬಸ್ ಸಂಚಾರ ಆರಂಭವಾಗಲಿದ್ದು, ಸಂಜೆ 6ರ ವರೆಗೆ ಸಂಚರಿಸಲಿವೆ. ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ವಲಸೆ ಕಾರ್ಮಿಕರು ಹಾಗೂ ಇತರೆ ಪ್ರಯಾಣಿಕರಿಗಾಗಿ ಈ ಬಸ್ ವ್ಯವಸ್ಥೆ ಮಾಡಲಾಗಿದ್ದು, ವೈದ್ಯಕೀಯ ಪರೀಕ್ಷೆಗೊಳಪಟ್ಟು ತಮ್ಮ ಜಿಲ್ಲೆ ಹಾಗೂ ಊರುಗಳಿಗೆ ತೆರಳಬಹುದಾಗಿದೆ.

    ಲಾಕ್‍ಡೌನ್ ನಿಯಮಗಳನ್ನು ಸಡಿಲ ಮಾಡಿದ ಹಿನ್ನೆಲೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ತಮ್ಮ ಊರು ಹಾಗೂ ಜಿಲ್ಲೆಗಳಿಗೆ ತೆರಳುವ ವಲಸೆ ಕಾರ್ಮಿಕರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಇದೆಲ್ಲದರ ಮಧ್ಯೆ ಬಸ್ ಪ್ರಯಾಣದ ದರದ ಕುರಿತು ಗೊಂದಲ ಉಂಟಾಗಿತ್ತು. ದುಪ್ಪಟ್ಟು ದರ ತೆಗೆದುಕೊಳ್ಳಲಾಗುತ್ತದೆ ಎಂಬ ವದಂತಿ ಹಬ್ಬಿತ್ತು. ಇದಕ್ಕೂ ಸಹ ಸಿಎಂ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ದುಪ್ಪಟ್ಟು ಹಣ ಪಡೆಯಬೇಡಿ ಎಂದು ತಿಳಿಸಿದ್ದಾರೆ.

    ಅಲ್ಲದೆ ಈ ಕುರಿತು ಕೆಎಸ್‍ಆರ್ ಟಿಸಿ ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಮಾತನಾಡಿ, ವಲಸೆ ಕಾರ್ಮಿಕರಿಗೆಂದು ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಲಸೆ ಕಾರ್ಮಿಕರನ್ನು ಹೊರತುಪಡಿಸಿ ವಿದ್ಯಾರ್ಥಿಗಳು, ಬೇರೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಸಾಮಾಜಿಕ ಅಂತರ ಇಲ್ಲದಂತಾಗಿದೆ. ಕೇವಲ 40 ಬಸ್ ಎಂದು ಮೊದಲು ಅಂದಾಜಿಸಿದ್ದೆವು. ಆದರೆ ಇದೀಗ 120 ಬಸ್‍ಗಳು ಹೊರಟಿವೆ ಎಂದು ಮಾಹಿತಿ ನೀಡಿದರು.

    ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೂ ಬಸ್ಸುಗಳ ವ್ಯವಸ್ಥೆ ಇದೆ. ಕೇವಲ ವಲಸೆ ಕಾರ್ಮಿಕರಷ್ಟೇ ಬರಬೇಕು, ಎಲ್ಲರೂ ಬಂದರೆ ಬಸ್ಸುಗಳ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ನಾಳೆ 100 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಇಂದಿನಂತೆ ಕಾಂಟ್ರಾಕ್ಟ್ ಬೇಸ್ ಬಸ್ಸುಗಳನ್ನು ಇನ್ನು ಓಡಿಸುವುದಿಲ್ಲ. ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾವಾರು ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬದಲಿಸಲಾಗಿದೆ. 6 ಗಂಟೆಗೆ ಮುಗಿಯಬೇಕಿದ್ದ ಬಸ್ಸುಗಳ ಸಂಚಾರ ಹೆಚ್ಚುಪ್ರಯಾಣಿಕರು ಇರುವುದರಿಂದ 10 ಗಂಟೆಯಾದರೂ ನಿಂತಿಲ್ಲ. ನಾಳೆ ಕಡೆ ದಿನ ವಲಸೆ ಕಾರ್ಮಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಎಂದು ತಿಳಿಸಿದರು.

  • ಅನುಮತಿ, ಪರೀಕ್ಷೆಯಿಲ್ಲದೆ ಬೆಂಗಳೂರಿನಿಂದ ಕೂಲಿ ಕಾರ್ಮಿಕರ ಸಾಗಣೆ

    ಅನುಮತಿ, ಪರೀಕ್ಷೆಯಿಲ್ಲದೆ ಬೆಂಗಳೂರಿನಿಂದ ಕೂಲಿ ಕಾರ್ಮಿಕರ ಸಾಗಣೆ

    ರಾಯಚೂರು: ಲಾಕ್‍ಡೌನ್‍ನಿಂದಾಗಿ ನಗರಪ್ರದೇಶಗಳಿಗೆ ಗುಳೆ ಹೋಗಿದ್ದ ಬಹಳಷ್ಟು ಜನ ಕೂಲಿ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲೇ ಉಳಿದುಕೊಂಡಿದ್ದಾರೆ. ಆದರೆ ಈಗ ಕೆಲಸ ಕೊಟ್ಟ ಮಾಲೀಕರು ಕೂಲಿ ಕಾರ್ಮಿಕರನ್ನು ಯಾವುದೇ ಅನುಮತಿ ಪಡೆಯದೇ, ಪರೀಕ್ಷೆಗೆ ಒಳಪಡಿಸಿದೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ.

    ರಾಯಚೂರು, ಯಾದಗಿರಿ ಕಾರ್ಮಿಕರನ್ನ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ರಾಯಚೂರಿನಲ್ಲಿ ಲಾರಿಯನ್ನು ತಡೆಹಿಡಿದಿದ್ದಾರೆ. ಈ ವೇಳೆ ಚಿಕ್ಕಮಕ್ಕಳು ಸೇರಿ 50 ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

    ಬೆಂಗಳೂರಿನ ರಾಮಮೂರ್ತಿ ನಗರ, ಮಾರುತಿ ನಗರ ಸೇರಿ ವಿವಿಧೆಡೆಯಿದ್ದ ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕರೆದೊಯ್ಯಲಾಗುತ್ತಿತ್ತು. ಕಾರ್ಮಿಕರಿಂದ ಒಂದು ಸಾವಿರ ಪಡೆದು ಊರುಗಳಿಗೆ ಅವರನ್ನು ಲಾರಿಯಲ್ಲಿ ಕಳುಹಿಸುತ್ತಿದ್ದಾರೆ. ಅಕ್ಕಿ ಗಾಡಿ ಎಂದು ಹೇಳಿ ಜನರನ್ನು ಸಾಗಿಸುತ್ತಿರುವ ಲಾರಿ ಚಾಲಕ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜಿಪಿ ನಗರದ ನಿವಾಸಿ ಪಾಷ ಎಂಬತನಿಗೆ ಜವಾಬ್ದಾರಿ ವಹಿಸಿ ಕೂಲಿಕಾರರನ್ನು ಮಾಲೀಕರು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ಅಷ್ಟು ಕಾರ್ಮಿಕರನ್ನು ರಾಯಚೂರು ಪೊಲೀಸರು ತಡೆದು ಪರಿಶೀಲನೆಗೆ ಒಳಪಡಿಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಬಂಗಲೆ ಬಳಿ ವಾಹನಗಳ ತಪಾಸಣೆ ವೇಳೆ ಕಾರ್ಮಿಕರ ಸಾಗಣೆ ಘಟನೆ ಬಯಲಾಗಿದೆ.

  • ಲಾಕ್‍ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಗ್ರೀನ್ ಝೋನ್ ಯಾದಗಿರಿ

    ಲಾಕ್‍ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಗ್ರೀನ್ ಝೋನ್ ಯಾದಗಿರಿ

    – ವಿಶೇಷ ಬಸ್ ಮೂಲಕ ಊರಿನತ್ತ ಕಾರ್ಮಿಕರು

    ಯಾದಗಿರಿ: ಕೊರೊನಾ ಗ್ರೀನ್ ಝೋನ್‍ನಲ್ಲಿರುವ ಯಾದಗಿರಿಗೆ ಲಾಕ್‍ಡೌನ್‍ನಿಂದ ಮತ್ತಷ್ಟು ಸಡಿಲಿಕೆ ಲಭಿಸಿದ್ದು, ನಗರದಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ.

    ಜಿಲ್ಲೆ ಗ್ರೀನ್ ಝೋನ್‍ನಲ್ಲಿರುವ ಕಾರಣ ಲಾಕ್‍ಡೌನ್ ಸಂಪೂರ್ಣ ಸಡಲಿಕೆ ಎಂಬಂತೆ ಯಾದಗಿರಿ ನಗರದಲ್ಲಿ ಬಾಸವಾಗುತ್ತಿದೆ. ಅಗತ್ಯ ವಸ್ತುಗಳ ಪೂರೈಕೆ ಅಂಗಡಿಗಳ ಜೊತೆಗೆ ಮೊಬೈಲ್ ಶಾಪ್, ಎಲೆಕ್ಟ್ರಿಕ್ ಮತ್ತು ಬುಕ್ ಸ್ಟಾಲ್, ಸಿಮೆಂಟ್, ಕಾರ್ ರಿಪೇರಿ ಗ್ಯಾರೇಜ್ ಸಹ ತೆರೆಯಲಾಗಿದೆ. ನಗರದಲ್ಲಿ ಬೃಹತ್ ವಾಹನಗಳ ಸಂಚಾರ ಸಹ ಆರಂಭವಾಗಿದೆ. ಕಲಬುರಗಿ ಜಿಲ್ಲೆಯ ವಾಡಿಯಲ್ಲಿರುವ ಸಿಮೆಂಟ್ ತಯಾರಿಕಾ ಘಟಕಗಳಿಗೆ ಬೇಕಾಗುವ ಕಚ್ಚಾವಸ್ತುಗಳು ಸಾಗಾಟ ಮತ್ತೆ ಆರಂಭವಾಗಿದೆ.

    ಲಾಕ್‍ಡೌನ್ ಸಡಿಲಿಕೆ ಆಗಿರುವ ಹಿನ್ನೆಲೆಯಲ್ಲಿ ಊರಿಗೆ ತೆರಳಲಾಗದೆ ಆಶ್ರಯ ಕೇಂದ್ರಗಳಲ್ಲಿದ್ದ ದೂರದೂರಿನ ಕಾರ್ಮಿಕರು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಜಿಲ್ಲಾಡಳಿತದ ಕೂಲಿ ಕಾರ್ಮಿಕರು ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಕೆಎಸ್ಆರ್‌ಟಿಸಿ ಸಂಸ್ಥೆಯ ಸಹಾಯದಿಂದ ವಿಶೇಷ ಬಸ್ ಮೂಲಕ ಕಾರ್ಮಿಕರನ್ನು ಅವರ ಊರಿಗೆ ಕರೆದುಕೊಂಡು ಹೋಗಲಾಗುತ್ತಿದೆ.

    ರಾಜ್ಯದ ವಿವಿಧ ಜಿಲ್ಲೆಯ ಕಾರ್ಮಿಕರು ಸೇರಿದಂತೆ ಅಂತರ್ ರಾಜ್ಯದ ಒಟ್ಟು 500 ಕಾರ್ಮಿಕರಿಗೆ ಜಿಲ್ಲಾಡಳಿತ ಜಿಲ್ಲೆಯ ಯಾದಗಿರಿ, ಸುರಪುರ, ಶಹಪುರದ ಸರ್ಕಾರದ ವಿವಿಧ ಹಾಸ್ಟೆಲ್‍ಗಳಲ್ಲಿ, ತಾತ್ಕಾಲಿಕ ವಸತಿ ಮತ್ತು ಊಟಸ ವ್ಯವಸ್ಥೆ ಕಲ್ಪಿಸಿತ್ತು. ಲಾಕ್ ಡೌನ್ ಘೋಷಣೆ ಮಾಡಿದ ದಿನದಿಂದಲ್ಲೂ ಕಾರ್ಮಿಕರು ಇಲ್ಲೇ ಕಾಲ ಕಳೆಯುತ್ತಿದ್ದರು. ಸರ್ಕಾರ ಲಾಕ್‍ಡೌನ್ ಸಡಿಲ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅವರ ಊರಿಗಳಿಗೆ ತೆರಳು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ.