ಬೆಂಗಳೂರು: ಲಾಕ್‍ಡೌನ್ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯ ಕಂಪನಿ ಯಾವುದೇ ಸೂಚನೆ ನೀಡದೆ ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವ ಆರೋಪ ಕೇಳಿಬಂದಿದ್ದು, ಕಾರ್ಮಿಕರು ಕಣ್ಣೀರಿಡುತ್ತಿದ್ದಾರೆ.
ನಗರದ ಟಿ.ದಾಸರಹಳ್ಳಿಯ ಪೀಣ್ಯ ಕೈಗಾರಿಕಾ ಪ್ರದೇಶದ ಎಸ್.ಎ.ಪಿ.ಎಲ್ ಇಂಡಸ್ಟ್ರೀಸ್ ಪ್ರೈ.ಲಿ.ನ 1ನೇ ಯೂನಿಟ್‍ನಿಂದ ಸುಮಾರು 500ರಿಂದ 600 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವ ಆರೋಪ ಕೇಳಿಬಂದಿದೆ. ಎರಡು ತಿಂಗಳು ಸಂಬಳವನ್ನೂ ನೀಡದೆ ಕೆಲಸದಿಂದ ತೆಗೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಸಂಬಳ ನೀಡಬೇಕು ಹಾಗೂ ಮರಳಿ ಕೆಲಸ ನೀಡುವಂತೆ ನೂರಾರು ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ.
ಮನೆಯಲ್ಲಿ ದಿನಸಿ ಇಲ್ಲ, ಜೀವನ ನಡೆಸಲು ಆಗದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸಂಬಳ ನೀಡುವಂತೆ ಮಹಿಳಾ ಕಾರ್ಮಿಕರು ಆಗ್ರಹಿಸಿದ್ದಾರೆ. ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳ ಕಂಪನಿಗಳಿಗೆ ತೊಂದರೆ ಉಂಟಾಗಿದೆ. ಆದರೆ ಕಾರ್ಮಿಕರಿಗೆ ತೊಂದರೆ ನೀಡಬಾರದು, ಕೆಲಸದಿಂದ ವಜಾ ಮಾಡಬಾರದು ಎಂದು ಸರ್ಕಾರ ಹೇಳಿದೆ. ಆದರೂ ಕೆಲ ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿವೆ.
ಚಾಮರಾಜನಗರ: ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತಮಿಳುನಾಡಿನ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೆ ಕೆಲವರು ಕದ್ದು ಮುಚ್ಚಿ ನುಸುಳುತ್ತಿದ್ದು, ಅಂತಹವರನ್ನು ಹಿಡಿದು ಅಧಿಕಾರಿಗಳು ಕ್ವಾರಂಟೈನ್ ಮಾಡುತ್ತಿದ್ದಾರೆ.
ತಮಿಳುನಾಡಿನಿಂದ ಚಾಮರಾಜನಗರಕ್ಕೆ ರಾತ್ರೋ ರಾತ್ರಿ ಕದ್ದು ಬಂದಿದ್ದ 10ಕ್ಕೂ ಹೆಚ್ಚು ತಮಿಳು ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ತಮಿಳುನಾಡಿನಿಂದ ಜಿಲ್ಲೆಯ ಬದನಗುಪ್ಪೆ ಬಳಿ ಇರುವ ಗ್ರಾನೈಟ್ ಕಾರ್ಖಾನೆಗೆ ರಾತ್ರೋ ರಾತ್ರಿ ಗಡಿ ದಾಟಿ ಈ ಕಾರ್ಮಿಕರು ಬಂದಿದ್ದರು. ಇದರಿಂದ ಸ್ಥಳೀಯ ಕಾರ್ಮಿಕರು ಆತಂಕಕ್ಕೊಳಗಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ತಕ್ಷಣ ಎಚ್ಚೆತ್ತ ಆರೋಗ್ಯಾಧಿಕಾರಿಗಳು ಗ್ರಾನೈಟ್ ಕಾರ್ಖಾನೆಗೆ ಧಾವಿಸಿ ತಮಿಳುನಾಡಿನಿಂದ ಬಂದಿದ್ದ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿ, ನಂತರ ಅಂಬುಲೆನ್ಸ್ ಮೂಲಕ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಹಾವೇರಿ: ಕಂಟೈನ್ಮೆಂಟ್ ಪ್ರದೇಶ ತೆರವು ಮಾಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರ ಮತ್ತು ರಾಜೀವಗಾಂಧಿ ನಗರದ ನಿವಾಸಿಗಳಿಂದ ಪ್ರತಿಭಟನೆ ನಡೆಸಿದ್ದಾರೆ.
ಮೇ 4 ರಂದು ಪ್ರದೇಶದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಇಡೀ ಪ್ರದೇಶವನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್ ಡೌನ್ ಮಾಡಿತ್ತು. ಅಲ್ಲದೇ ಸೋಂಕಿತನಿಂದ ಪ್ರದೇಶದಲ್ಲಿ ಮತ್ತೆ ಮೂವರಿಗೆ ಸೋಕು ಕಾಣಿಸಿಕೊಂಡಿತ್ತು. ಸದ್ಯ ಮೂವರು ಸೋಂಕಿತರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೂ ಪ್ರದೇಶಗದಲ್ಲಿ ಸೀಲ್‍ಡೌನ್ ತೆರವು ಮಾಡದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 23, ಮೇ 25 ಮತ್ತು ಜೂನ್ 1 ರಂದು ಆಸ್ಪತ್ರೆಯಿಂದ ಮೂವರು ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಕೂಲಿ ಕೆಲಸವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಕೂಡಲೇ ಕಂಟೈನ್ಮೆಂಟ್ ಝೋನ್ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಸವಣೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಚಿತ್ರದುರ್ಗ: ಗ್ರೀನ್ ಜೋನ್‍ನಲ್ಲಿದ್ದ ಚಿತ್ರದುರ್ಗಕ್ಕೆ ಆರಂಭದಿಂದಲೂ ಹೊರ ರಾಜ್ಯಗಳಿಂದ ಅಕ್ರಮವಾಗಿ ಕಳ್ಳದಾರಿಯಲ್ಲಿ ಬರುವವರಿಂದಲೇ ಕಂಟಕ ಶುರುವಾಗಿತ್ತು. ಆದರೆ ಇತ್ತೀಚೆಗೆ ಚಿತ್ರದುರ್ಗದಲ್ಲಿ ಕೊರೊನಾ ಹತೋಟಿಗೆ ಬಂದಿದ್ದು, ಸೋಂಕಿತರೆಲ್ಲಾ ಗುಣಮುಖರಾಗುತ್ತಿದ್ದರು. ಆದರೆ ಮತ್ತೆ ಕೋಟೆನಾಡಿಗೆ ಕಳ್ಳದಾರಿಯ ಮೂಲಕ ವಲಸಿಗರು ಪ್ರವೇಶ ಮಾಡುತ್ತಿದ್ದಾರೆ.
ಕೊರೊನಾ ಪ್ರಾರಂಭವಾದಗಿನಿಂದಲೂ ಗ್ರೀನ್‍ಜೋನ್‍ನಲ್ಲಿದ್ದ ಚಿತ್ರದುರ್ಗಕ್ಕೆ ಅನುಮತಿ ಇಲ್ಲದೇ ಗುಜರಾತ್‍ನಿಂದ ಬಂದಿದ್ದ 15 ತಬ್ಲಿಘಿಗಳಿಂದ ಕಂಠಕ ಆರಂಭವಾಗಿತ್ತು. ನಂತರ ತಮಿಳುನಾಡಿನಿಂದ ಬಂದಿದ್ದ ಕೋಡಿಹಳ್ಳಿಯ ತಂದೆ, ಮಗಳಿಂದ ಆತಂಕ ಎದುರಾಗಿತ್ತು. ಆದರೆ ಅವರೆಲ್ಲಾ ಅದೃಷ್ಟವಶಾತ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.
ಸರ್ಕಾರವೇ ಹೊರರಾಜ್ಯಗಳಿಂದ ಬರುವವರ ಪ್ರವೇಶಕ್ಕೆ ನಿಷೇಧಾಜ್ಞೆ ಹೇರಿದೆ. ಆದರೂ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ, ನಾಗಪ್ಪನಹಳ್ಳಿ ಗೇಟ್, ಪುಟ್ಲಾರಹಳ್ಳಿ ಹಾಗೂ ಜಾಜೂರಿನ ಬಳಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಗುಜರಾತ್‍ನಿಂದ ಅನುಮತಿ ಇಲ್ಲದೇ ಕಳ್ಳದಾರಿಯಲ್ಲಿ ಬರುವವರ ಅಕ್ರಮ ಪ್ರವೇಶ ಮಾತ್ರ ಇನ್ನೂ ನಿಂತಿಲ್ಲ.
ಹೀಗಾಗಿ ಮತ್ತೆ ತಮಿಳುನಾಡಿನಿಂದ ಬಂದಿರುವ ಉತ್ತರ ಪ್ರದೇಶದ 27 ಜನ ವಲಸೆ ಕಾರ್ಮಿಕರು ಸೇರಿದಂತೆ ದೆಹಲಿಯಿಂದ ಬಂದಿರುವ ಓರ್ವ ಯುವಕನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿರೋದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಅಕ್ರಮ ಪ್ರವೇಶವನ್ನು ತಡೆಯಲು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗಡಿಭಾಗಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಜಮೀನುಗಳ ಮೂಲಕ ಹಾಗೂ ಕಳ್ಳದಾರಿಗಳಲ್ಲಿ ಕಾರ್ಮಿಕರು ಗ್ರಾಮಕ್ಕೆ ಬರುತ್ತಿದ್ದಾರೆ.
ಹೊರರಾಜ್ಯಗಳಾದ ತಮಿಳುನಾಡು, ಉತ್ತರಪ್ರದೇಶ, ಗುಜರಾತ್ ಹಾಗೂ ದೆಹಲಿಯಿಂದ ಆಗಮಿಸಿರುವವರಲ್ಲಿ ಮಾತ್ರ ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರನ್ನು ಜನನಿಬಿಡ ಪ್ರದೇಶಗಳೆನ್ನದೇ ಸಿಕ್ಕ ಸಿಕ್ಕ ಹಾಸ್ಟಲ್‍ಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಬಳಿಕ ಅವರಲ್ಲಿ ಯಾರಿಗಾದರೂ ಪಾಸಿಟಿವ್ ಪತ್ತೆಯಾದರೆ ಅವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡದೇ ಜಿಲ್ಲಾಡಳಿತ ನಿರ್ಲಕ್ಷ ತೋರುತ್ತಿದೆ. ಜನರು ಅಗತ್ಯ ವಸ್ತುಗಳು ಹಾಗೂ ರೈತರು ಉಳುಮೆ ಮಾಡಲು ಬೇಕಿರುವ ಬೀಜ, ಗೊಬ್ಬರ ಖರೀದಿಸಲು ಸಹ ಹೊರಬರಲು ಯೋಚಿಸುವಂತಾಗಿದೆ ಎಂದು ಸ್ಥಳೀಯ ಮೂಡಲಗಿರಿ ಹೇಳಿದ್ದಾರೆ.
ಮೇ 14 ರಿಂದ ಇಲ್ಲಿಯವರೆಗೆ ಹೊರರಾಜ್ಯಗಳಿಂದ ಅಕ್ರಮವಾಗಿ ಬಂದು ಚೆಕ್‍ಪೋಸ್ಟ್ ಗಳಲ್ಲಿ ಸಿಕ್ಕಂತಹ 39 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರಲ್ಲಿ 9 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸರ್ಕಾರ ಹೊರರಾಜ್ಯಗಳಿಂದ ಬರುವವರ ಪ್ರವೇಶಕ್ಕೆ ನಿಷೇಧ ಹೇರಿದ್ದರೂ ಸಹ ಅಕ್ರಮ ಪ್ರವೇಶದಿಂದ ಜನರು ಗ್ರಾಮಗಳಿಗೆ ಪ್ರವೇಶ ಮಾಡುತ್ತಿದ್ದಾರೆ. ಹೀಗಾಗಿ ಮತ್ತೆ ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ರಣಕೇಕೆಯಾಕಲಿದೆ ಎಂಬ ಭೀತಿ ಶುರುವಾಗಿದೆ.
ಹುಬ್ಬಳ್ಳಿ: ಅವಳಿ ನಗರದ ಹೋಟೆಲ್ ಹಾಗೂ ವಿವಿಧ ತಿಂಡಿ ತಿನಿಸು ತಯಾರಿಕಾ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ 69 ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಇಂದು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.
ರಾಜ್ಯ ಸರ್ಕಾರದಿಂದ ವಲಸೆ ಕಾರ್ಮಿಕರಿಗೆ ಉಚಿತವಾಗಿ ಅವರ ರಾಜ್ಯಗಳಿಗೆ ತರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಬೆಂಗಳೂರಿನಿಂದ ವಿಶೇಷ ಶ್ರಮಿಕ್ ಎಕ್ಸ್ ಪ್ರಸ್ ರೈಲಿನ ಮೂಲಕ ಜಾರ್ಖಂಡ್‍ಗೆ ಇವರು ತೆರಳಲಿದ್ದಾರೆ. ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಬೆಳಗಿನ ಉಪಹಾರವನ್ನು ನೀಡಿ, ಮಾಸ್ಕ ಹಾಗೂ ಸ್ಯಾನಿಟೈಜರ್ ವಿತರಿಸಲಾಗಿದೆ. ಜೊತೆಗೆ ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಪ್ರತಿ ಬಸ್ಸಿನಲ್ಲಿ 23 ರಿಂದ 24 ಜನರಂತೆ ಒಟ್ಟು 3 ವಾಯುವ್ಯ ಕರ್ನಾಟಕ ಬಸ್‍ಗಳಲ್ಲಿ ಇವರನ್ನು ಸಾಮಾಜಿಕ ಅಂತರದೊಂದಿಗೆ ಕೂರಿಸಿ ಕಳುಹಿಸಿಕೊಡಲಾಗಿದೆ.
ಮಧ್ಯಹ್ನಾದ ಊಟ ಹಾಗೂ ನೀರಿನ ವವ್ಯಸ್ಥೆ ಕೂಡ ಮಾಡಲಾಗಿದೆ. ಪ್ರತಿ ಬಸ್ಸಿನಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಬೆಂಗಳೂರಿನಿಂದ ಇವರನ್ನು ಜಾರ್ಖಂಡ್‍ಗೆ ಕಳುಹಿಸುವ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರುಗಳಾದ ಅಕ್ರಂ, ಅಶೋಕ್ ಒಡಯರ್, ಸಾರಿಗೆ ಇಲಾಖೆಯ ಐ.ಜಿ.ಮಗಾಮಿ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮಂಗಳೂರು: ಕಡಲಾಚೆಯಲ್ಲಿ ಅತಂತ್ರರಾಗಿದ್ದ ಕಾರ್ಮಿಕರನ್ನ ರಕ್ಷಿಸುವಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಲಕ್ಷ ದ್ವೀಪದಲ್ಲಿ ಸಿಲುಕಿದ್ದ ಮೂರು ಮಹಿಳೆಯರು ಸೇರಿದಂತೆ 19 ಮಂದಿಯನ್ನ ಗುರುವಾರ ಅಮಿನ್ ದೀವಿ ಹೆಸರಿನ ನೌಕೆ ಮುಖಾಂತರ ಮಂಗಳೂರಿಗೆ ಕರೆ ತರಲಾಯಿತು. ಬಳಿಕ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.
ನೌಕರರು ಬಂದಿಳಿಯುತ್ತಿದ್ದಂತೆ ಜನಪ್ರತಿನಿಧಿಗಳು ಕಾರ್ಮಿಕರ ರಕ್ಷಣೆಗೆ ಮುಗಿಬಿದ್ದಿದ್ದರು. ಸಾಮಾಜಿಕ ಅಂತರ ಮರೆತ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಕಾಂಗ್ರೆಸ್ ಎಂ.ಎಲ್.ಸಿ ಐವಾನ್ ಡಿಸೋಜಾ ಸ್ವಾಗತ ಕೋರಲು ನುಗ್ಗಾಟ ನಡೆಸಿದ್ದಾರೆ.
ಕೇವಲ 19 ಮಂದಿ ಕಾರ್ಮಿಕರ ಸ್ವಾಗತಕ್ಕೆ 300 ಮಂದಿ ಜಮಾಯಿಸಿದ್ದು, ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂದಹಾಗೆ ವ್ಯಾಪಾರ, ಗುಜರಿ ಸಂಗ್ರಹ ಸೇರಿದಂತೆ ವಿವಿಧ ಕೆಲಸಕ್ಕಾಗಿ ತೆರಳಿದ್ದ ಈ ಕಾರ್ಮಿಕರೆಲ್ಲ ಲಕ್ಷ ದ್ವೀಪದ ಕಿಲ್ತಾನ್, ಕವರತ್ತಿ, ಅಗಟ್ಟಿ ದ್ವೀಪದಲ್ಲಿ ಸಿಲುಕಿದ್ದರು ಎನ್ನಲಾಗಿದೆ.
ಚಿಕ್ಕಬಳ್ಳಾಪುರ: ಸೋಂಕಿತರನ್ನ ಗುಣಮುಖ ಮಾಡಿ ಜನರ ನೆಮ್ಮದಿ ಕಾಪಾಡುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಮಹಾರಾಷ್ಟ್ರದಿಂದ ಆಗಮಿಸಿದ ಕಾರ್ಮಿಕರು ನಿದ್ದೆಗೆಡಿಸಿದ್ದಾರೆ. ಇದರ ಮಧ್ಯೆ ಗರ್ಭಿಣಿಗೆ ದೃಢವಾದ ಸೋಂಕು ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ.
ಮುಂಬೈನಿಂದಲೇ ಮಹಾಮಾರಿ ಕೊರೊನಾ ಜಿಗಿತ ಮತ್ತಷ್ಟು ಮುಂದುವರಿದಿದೆ. ಜಿಲ್ಲೆಯಲ್ಲಿ ಭಾನುವಾರ ಮತ್ತೆ 27 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇಡೀ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ 126ಕ್ಕೆ ಏರಿದೆ. ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭದಲ್ಲಿ ಕಾಣಿಸಿಕೊಂಡ 26 ಮಂದಿ ಕೊರೊನಾ ಸೋಂಕಿತರ ಪೈಕಿ ಇಬ್ಬರು ಸಾವನ್ನಪ್ಪಿದರೆ, 18 ಮಂದಿ ಗುಣಮುಖರಾಗಿ ಕೇವಲ 6 ಸಕ್ರಿಯ ಪ್ರಕರಣಗಳು ಮಾತ್ರ ಉಳಿದುಕೊಂಡಿದ್ದವು.
ಜಿಲ್ಲೆಗೆ ಬರೀ ಮಹಾರಾಷ್ಟ್ರ ವಲಸಿಗರ ಕಂಟಕ ಅಂತ ನಿರಾಳವಾಗಿದ್ದ ಜಿಲ್ಲಾಡಳಿತಕ್ಕೆ ಬಾಗೇಪಲ್ಲಿಯ 22ನೇ ವಾರ್ಡಿನ 23 ವರ್ಷದ ಗರ್ಭಿಣಿಗೆ ಕೊರೊನಾ ದೃಢವಾಗಿದ್ದು, ಈ ಹೊಸ ಪ್ರಕರಣ ಮತ್ತಷ್ಟು ಆತಂಕ ಮೂಡಿಸಿದೆ. ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈಕೆಯ ತಂದೆ ಮಕ್ಕಳ ನಾಟಿ ವೈದ್ಯನಾಗಿರೋದರಿಂದ ಬಾಗೇಪಲ್ಲಿ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಜನ ಬಂದೋಗಿರುವ ಶಂಕೆ ಇದೆ ಎಂದು ಡಿಸಿ ಲತಾ ತಿಳಿಸಿದ್ದಾರೆ.
ಕೊರೊನಾ ಸೋಂಕಿತರಿಂದ ಮುಕ್ತವಾಗಬೇಕಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಮಹಾರಾಷ್ಟ್ರದಿಂದ ಬಂದ ಮುಂಬೈ ವಲಸಿಗರಿಂದ ಶತಕ ದಾಟುವಂತೆ ಮಾಡಿದೆ. ಮತ್ತೊಂದೆಡೆ ಬಾಗೇಪಲ್ಲಿಯಲ್ಲಿ ಹೊಸದಾಗಿ ಬಂದ ಸೋಂಕು ಸಹ ಜಿಲ್ಲಾಡಳಿತಕ್ಕೆ ತಲೆನೋವು ತಂದಿಟ್ಟಿದೆ.
ನವದೆಹಲಿ: ವಲಸೆ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಮರಳಿ ಕಳುಹಿಸಲು ನೂರು ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿಕೊಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ ಎಂದು ದೆಹಲಿ ಸಿಎಂ ಕಚೇರಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಲಸೆ ಕಾರ್ಮಿಕರ ಸಂರಕ್ಷಣೆ ವಿಚಾರದಲ್ಲಿ ಆಮ್ ಅದ್ಮಿ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ರಾಜಕೀಯ ತಿಕ್ಕಾಟದ ನಡುವೆ ಈ ಮನವಿ ಮಹತ್ವ ಪಡೆದುಕೊಂಡಿದೆ.
ಮುಖ್ಯಮಂತ್ರಿ ಕಚೇರಿ ಸುಮಾರು 4,00,000 ವಲಸೆ ಕಾರ್ಮಿಕರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿದೆ. ಅವರಲ್ಲಿ ಹೆಚ್ಚಿನವರು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು. ಕಳೆದ ಒಂದು ವಾರದಲ್ಲಿ ಇದುವರೆಗೆ 59 ವಿಶೇಷ ರೈಲುಗಳು ಮತ್ತು 200ಕ್ಕೂ ಹೆಚ್ಚು ಬಸ್ಸುಗಳ ಮೂಲಕ ದೆಹಲಿಯಿಂದ ವಲಸೆ ಕಾರ್ಮಿಕರ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಆದರೆ ಮತ್ತಷ್ಟು ರೈಲುಗಳ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಅಧಿಕೃತವಾಗಿ ಮಾತನಾಡಿರುವ ಡಿಸಿಎಂ ಮನೀಶ್ ಸಿಸೊಡಿಯಾ, ಈವರೆಗೂ ದೆಹಲಿಯಿಂದ 65,000 ಕಾರ್ಮಿಕರ ತಮ್ಮ ಊರುಗಳಿಗೆ ತೆರಳಿದ್ದಾರೆ. ಇನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಿಗೆ ತೆರಳಲು ಬಯಸುತ್ತಿದ್ದಾರೆ. ಅವರನ್ನು ಕಳುಹಿಸಲು ಕೇಂದ್ರ ವಿಶೇಷ ರೈಲುಗಳ ವ್ಯವಸ್ಥೆ ಮಾಡಬೇಕು ಎಂದರು.
– ಕೆಲವೇ ದಿನಗಳಲ್ಲಿ ಅನ್‍ಲೈನ್ ಬುಕಿಂಗ್ ಆರಂಭ
– ಯಾವುದೇ ನಿಲ್ದಾಣದಲ್ಲಿ ಟಿಕೆಟ್ ನೀಡಲ್ಲ
ನವದೆಹಲಿ: ಈಗಾಗಲೇ 1,600 ರೈಲುಗಳ ಮೂಲಕ 21 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಲಾಗಿದೆ. ಇದೀಗ ಜೂನ್ 1ರಿಂದ ಹೆಚ್ಚುವರಿಯಾಗಿ 200 ನಾನ್ ಎಸಿ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಕುರಿತು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದ್ದು, ಶ್ರಮಿಕ್ ರೈಲುಗಳನ್ನು ಮುಂದುವರಿಸಲು ಭಾರತೀಯ ರೇಲ್ವೆ ನಿರ್ಧರಿಸಿದೆ. ಈಗಾಗಲೇ 1,600 ರೈಲುಗಳು ಮೂಲಕ 21.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲಾಗಿದೆ. ಇದೀಗ ಹೊಸದಾಗಿ 200 ರೈಲುಗಳ ಸಂಚಾರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ.
इन श्रमिक स्पेशल ट्रेनों के अतिरिक्त भारतीय रेल 1 जून से प्रतिदिन 200 अतिरिक्त टाइम टेबल ट्रेनें चलाने जा रहा है जो कि गैर वातानुकूलित द्वितीय श्रेणी की ट्रेन होंगी एवं इन ट्रेनों की बुकिंग ऑनलाइन ही उपलब्ध होगी। ट्रेनों की सूचना शीघ्र ही उपलब्ध कराई जाएगी।#IndiaFightCorona
— Ministry of Railways (@RailMinIndia) May 19, 2020
ಅಲ್ಲದೆ ಎಲ್ಲ ರಾಜ್ಯ ಸರ್ಕಾರಗಳಿಗೂ ಈ ಕುರಿತು ಸೂಚನೆ ನೀಡಿದ್ದು, ಆಯಾ ರಾಜ್ಯಗಳಲ್ಲಿ ಪ್ರಮುಖ ರೈಲ್ವೆ ನಿಲ್ದಾಣಗಳ ಹತ್ತಿರವಿರುವ ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಕೋರಿದೆ. ಇಂತಹವರ ಪಟ್ಟಿ ನೀಡಿದಲ್ಲಿ ವಿವಿಧ ಸ್ಥಳದ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದೆ.
ಜೂನ್ 1ರಿಂದ ಹೆಚ್ಚುವರಿ 200 ಶ್ರಮಿಕ್ ರೈಲುಗಳು ಸಂಚರಿಸಲಿದ್ದು, ಆನ್‍ಲೈನ್‍ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಸಧ್ಯದಲ್ಲೇ ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.
ಕಾರ್ಮಿಕರು ಆತುರ ಪಡದೆ ಸಾವಧಾನವಾಗಿ ತಾವು ಇರುವ ಸ್ಥಳದಲ್ಲೇ ಕಾಯಬೇಕು. ನಿಮ್ಮ ಊರುಗಳಿಗೆ ತಲುಪಿಸಲು ಈಗಾಗಲೇ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರಗಳ ಸಹಾಯದೊಂದಿಗೆ ನಿಮ್ಮ ಊರುಗಳಿಗೆ ತಲುಪಿಸಲಾಗುವುದು. ಅಲ್ಲದೆ ಈ 200 ಹೊಸ ರೈಲುಗಳ ಸಂಚಾರದ ಮಾರ್ಗ ಹಾಗೂ ವೇಳಾಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಆನ್‍ಲೈನ್ ಬುಕಿಂಗ್ ಸಹ ಆರಂಭವಾಗಲಿದೆ. ಎಲ್ಲ ಬೋಗಿಗಳು ನಾನ್ ಎಸಿ ಆಗಿರಲಿದ್ದು, ಟಿಕೆಟ್‍ಗಳನ್ನು ಯಾವುದೇ ಕಾರಣಕ್ಕೂ ಯಾವುದೇ ರೈಲು ನಿಲ್ದಾಣದಲ್ಲಿ ನೀಡುವುದಿಲ್ಲ. ಟಿಕೆಟ್ ಪಡೆಯಕಲು ಯಾವುದೇ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳಬಾರದು ಎಂದು ರೈಲ್ವೆ ಸಚಿವಾಲಯ ಮನವಿ ಮಾಡಿದೆ.
ಕಳೆದ 19 ದಿನಗಳಲ್ಲಿ 21.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಈಗಾಗಲೇ ಅವರ ಊರುಗಳಿಗೆ ತಲುಪಿಸಲಾಗಿದ್ದು, ಮೇ 19ರ ವರೆಗೆ ಒಟ್ಟು 1,600 ಶ್ರಮಿಕ್ ರೈಲುಗಳನ್ನು ಓಡಿಸಲಾಗಿದೆ.
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುವ ಉತ್ತರ ಪ್ರದೇಶ ಮೂಲದ ಪ್ರವಾಸಿ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಲು ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ಬಸ್ತಿಗೆ ಇಂದು ವಿಶೇಷ ರೈಲು ಪ್ರಯಾಣಿಸಿತು.
ಶ್ರಮಿಕ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಟಿದೆ. ಈ ರೈಲಿನ ಮೂಲಕ 1,443 ಪ್ರಯಾಣಿಕರು ತಮ್ಮ ತಮ್ಮ ತವರಿಗೆ ತೆರಳಿದರು. ಉತ್ತರ ಪ್ರದೇಶಕ್ಕೆ ಹೋಗುತ್ತಿರುವ ಎಲ್ಲ ಪ್ರವಾಸಿ ಪ್ರಯಾಣಿಕರಿಗೆ ಬೆಳಗ್ಗೆ 6 ಗಂಟೆಯಿಂದಲೇ 15 ವಿಶೇಷ ಕೌಂಟರ್‌ಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಆರೋಗ್ಯ ತಪಾಸಣೆ ನಂತರ ಆರೋಗ್ಯ ಪ್ರಮಾಣ ಪತ್ರ ಹಾಗೂ ರೈಲ್ವೇ ಪ್ರಯಾಣದ ಟಿಕೆಟ್ ನೀಡಿದ ನಂತರ ಪ್ರಯಾಣಿಕರನ್ನ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ಕಲ್ಪಿಸಲಾಯಿತು. ಆದರೆ ರೈಲ್ವೇ ನಿಲ್ದಾಣದೊಳಗೆ ಪ್ರಯಾಣಿಕರ ಸಂಬಂಧಿಕರು ಹಾಗೂ ಸ್ಥಳೀಯ ಮುಖಂಡರಿಗೂ ಸಹ ರೈಲ್ವೆ ಇಲಾಖೆ ಅಧಿಕಾರಿಗಳು ಪ್ರವೇಶ ನೀಡಲಿಲ್ಲ.