Tag: workers

  • ಉದ್ಯೋಗ ಕಡಿತವೊಂದೇ ಪರಿಹಾರವಲ್ಲ- ರತನ್ ಟಾಟಾ

    ಉದ್ಯೋಗ ಕಡಿತವೊಂದೇ ಪರಿಹಾರವಲ್ಲ- ರತನ್ ಟಾಟಾ

    – ನಿಮ್ಮ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿ

    ನವದೆಹಲಿ: ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಅವಾಂತರದಿಂದಾಗಿ ಬಹುತೇಕ ಭಾರತೀಯ ಕಂಪನಿಗಳಲ್ಲಿ ಉದ್ಯೋಗ ಕಡಿತ ಸಾಮಾನ್ಯವಾಗಿದ್ದು, ಬೇಕಾಬಿಟ್ಟಿಯಾಗಿ ಕೆಲಸದಿಂದ ವಜಾ ಮಾಡಲಾಗುತ್ತಿದೆ. ಈ ಕುರಿತು ಟಾಟಾ ಸಮೂಹ ಸಂಸ್ಥೆ ಅಧ್ಯಕ್ಷ ರತನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ಪರಿಸ್ಥಿತಿಯಲ್ಲಿ ಉದ್ಯೋಗ ಕಡಿತವೊಂದೇ ಪರಿಹಾರವಲ್ಲ ಎಂದು ತಿಳಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೊರೊನಾ ಪರಿಸ್ಥಿತಿಯಲ್ಲಿ ಕಂಪನಿಗಳಿಂದ ನೌಕರರನ್ನು ಕೆಲಸದಿಂದ ತೆಗೆಯುವುದೇ ಪರಿಹಾರವಲ್ಲ. ಇದು ಮೊಣಕಾಲಿನ ಕೆಳಗಿನ ಪ್ರತಿಕ್ರಿಯೆಯಾಗಿದೆ. ಅಲ್ಲದೆ ಕೊರೊನಾ ನಂತರದ ಜಗತ್ತಿನಲ್ಲಿ ವ್ಯವಹರಿಸುವ ವಿಧಾನವೂ ಬದಲಾಗಬೇಕಿದೆ ಎಂದು ಹೇಳೀದ್ದಾರೆ.

    ಟಾಟಾ ಸಮೂಹ ಸಂಸ್ಥೆ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿಲ್ಲ. ಆದರೆ ದೇಶಾದ್ಯಂತ ಲಾಕ್‍ಡೌನ್ ನಂತರ ಹಣದ ಹರಿವಿನ ಕೊರತೆಯಿಂದಾಗಿ ಹಲವು ಭಾರತೀಯ ಕಂಪನಿಗಳು ಉದ್ಯೋಗಿಗಳನ್ನು ತೆಗೆದು ಹಾಕಿವೆ. ಆದರೆ ಟಾಟಾ ಸಂಸ್ಥೆ ಉನ್ನತ ಹುದ್ದೆಯಲ್ಲಿರುವವರ ಶೇ.20ರಷ್ಟು ಸಂಬಳವನ್ನು ಕಡಿತಗೊಳಿಸಿದೆ. ಕೊರೊನಾದಿಂದಾಗಿ ಟಾಟಾ ಸಂಸ್ಥೆಯ ಹೋಟೆಲ್‍ಗಳು, ವಿಮಾನಯಾನ ಸಂಸ್ಥೆಗಳು, ಆಟೋಮೊಬೈಲ್ ಹಾಗೂ ಹಣಕಾಸು ಸೇವೆ ಸೇರಿದಂತೆ ಎಲ್ಲ ವಿಭಾಗಕ್ಕೂ ನಷ್ಟ ಉಂಟಾಗಿದೆ. ಆದರೆ ಟಾಟಾ ಸಂಸ್ಥೆ ಈ ವರೆಗೆ ಉದ್ಯೋಗ ಕಡಿತಗೊಳಿಸಿಲ್ಲ.

    ಬದುಕುಳಿಯಲು ನ್ಯಾಯಯುತ ಮತ್ತು ಅಗತ್ಯವೆಂದು ಪರಿಗಣಿಸುವ ವಿಷಯದಲ್ಲಿ ಬದಲಾಗಬೇಕು ಎಂಬುದನ್ನು ಒಪ್ಪಿಕೊಳ್ಳಿ. ಅಲ್ಲದೆ ಒಬ್ಬರೇ ಹಲವು ವಿಭಾಗಗಳಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲದೆ ನಿಮ್ಮ ಮಧ್ಯಸ್ಥಗಾರರಗೊಂದಿಗೆ ಸೂಕ್ಷ್ಮವಾಗಿ ವರ್ತಿಸದಿದ್ದಲ್ಲಿ ಬುದುಕುಳಿಯುವುದು ಕಷ್ಟ. ಇದಕ್ಕೆ ಮನೆಯಿಂದ ಕೆಲಸ ಮಾಡುವುದೂ ಒಂದು ಪರಿಹಾರ. ಉದ್ಯೋಗಿಗಳ ಜವಾಬ್ದಾರಿಯನ್ನು ನೀವು ಹೊತ್ತಿರುವುದರಿಂದ ಕೆಲಸದಿಂದ ಹೊರಗಳಿದವರು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಸಂಸ್ಥೆಯ ಒಬ್ಬರೂ ತಮ್ಮ ಉದ್ಯೋಗಿಗಳ ಕುರಿತು ಸೂಕ್ಷ್ಮತೆ ಹೊಂದಿರದಿದ್ದಲ್ಲಿ ಸಂಘಟನೆಯಾಗಿ ಬದುಕುವುದ ಕಷ್ಟ. ವ್ಯವಹಾರವೆಂದರೆ ಕೇವಲ ಹಣ ಸಂಪಾದಿಸುವುದು ಮಾತ್ರವಲ್ಲ. ಗ್ರಾಹಕರು ಹಾಗೂ ಮಧ್ಯಸ್ಥಗಾರರಿಗಾಗಿ ಎಲ್ಲವನ್ನೂ ಸರಿಯಾಗಿ ಮತ್ತು ನೈತಿಕವಾಗಿ ಮಾಡಬೇಕು ಎಂದು ಒತ್ತಿ ಹೇಳಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಆರೋಗ್ಯ ಹಾಗೂ ಆರ್ಥಿಕ ವಲಯಗಳಲ್ಲಿ ವಿವಿಧ ಸವಾಲುಗಳು ಎದುರಾಗಿವೆ. ಹೀಗಾಗಿ ಪ್ರತಿಯೊಬ್ಬ ಕೈಗಾರಿಕೋದ್ಯಮಿ ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಹೊಸ ಹೊಸ ಹಾಗೂ ಕ್ರಿಯೇಟಿವ್ ಆವಿಷ್ಕಾರಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ಇಂತಿಹ ಕಷ್ಟದ ಪರಿಸ್ಥಿತಿಯಲ್ಲೇ ಕೆಲವು ಅತ್ಯಂತ ಆಸಕ್ತಿದಾಯಕ ಅಥವಾ ಪ್ರಚಂಡ ಪರಿಹಾರಗಳು ಸಿಕ್ಕಿವೆ. ಇಂತಹ ಸಮಯದಲ್ಲಿ ಪರಿಹಾರ ಕಂಡುಹಿಡಿಯಲು ಹೆಚ್ಚು ನವೀನ ಹಾಘೂ ಸೃಜನಶೀಲರಾಗಿರಬೇಕು ಎಂದು ರತನ್ ಟಾಟಾ ತಿಳಿಸಿದ್ದಾರೆ.

    ಕೊರೊನಾ ಮಹಾಮಾರಿಯನ್ನು ನಾವು ಒಗ್ಗಟ್ಟು, ಸಂಕಲ್ಪ, ಅನುಭೂತಿ ಹಾಗೂ ತಿಳುವಳಿಕೆಯ ಮನೋಭಾವದಿಂದ ಹೋರಾಡಬೇಕು. ಕೋವಿಡ್-19 ಯುದ್ಧವನ್ನು ನಾವು ಗೆಲ್ಲಲು ಒಂದಾಗಬೇಕು. ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಡಿದ ಲಾಕ್‍ಡೌನ್‍ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ನಿರುದ್ಯೋಗಿಗಳಾಗಿ ಉಳಿದರು. ಇದು ಬಿಸಿನೆಸ್ ನೀತಿಯ ಕೊರತೆಯನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಲಸೆ ಕಾರ್ಮಿಕರು ನಿಮಗಾಗಿ ಹಗಲಿರುಳು ಕೆಲಸ ಮಾಡಿದವರು, ಮಳೆಯಲ್ಲಿ ನೆನೆಯುವಂತೆ ಅವರನ್ನು ನೀವು ಹೊರ ದಬ್ಬಿದಿರಿ. ಇದೇ ನಿಮ್ಮ ನೀತಿಯ ಅರ್ಥ? ಇದೇ ನಿಮ್ಮ ಕಾರ್ಮಿಕರನ್ನು ನೀವು ನಡೆಸಿಕೊಳ್ಳುತ್ತಿರುವ ರೀತಿ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

  • ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ: ಶಿವಣ್ಣ

    ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ: ಶಿವಣ್ಣ

    ಬೆಂಗಳೂರು: ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಆಗಲೇ ನಾಯಕ ಆಗಲು ಸಾಧ್ಯ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

    ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಶಿವರಾಜ್ ಕುಮಾರ್ ಮನೆಯಲ್ಲಿ ಸಭೆ ನಡೆಸಲಾಯಿತು. ನಾಗಾವರದ ಶಿವರಾಜ್ ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಅದರ ಸಂಸ್ಥೆಗಳು ಹಾಗೂ ಅದರ ಅಂಗ ಸಂಸ್ಥೆಗಳು ಭಾಗಿಯಾಗಿದ್ದವು.

    ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಚಿತ್ರರಂಗದ ಎಲ್ಲ ವಿಭಾಗಗಳಿಂದ ಒಗ್ಗಟ್ಟಾಗಿ ಬಂದಿರುವುದು ಖುಷಿ ತಂದಿದೆ. ಇಂಡಸ್ಟ್ರಿಯ ಸಾಕಷ್ಟು ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ನನ್ನನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ. ಮಾದರಿ ಇಂಡಸ್ಟ್ರಿಯಾಗಿ ಬಾಳೋಣ ಎಂದರು ಕರೆ ನೀಡಿದರು.

    ಕೊರೊನಾ ಏನೂ ದೊಡ್ಡ ವಿಷಯವಲ್ಲ, ಅದನ್ನು ಹೋಗಲಾಡಿಸಬಹುದು. ಮೂರು, ನಾಲ್ಕು ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ, ಅದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವ ರೀತಿ ಮನವಿ ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

    ನನಗೆ ಯಾವ ನಾಯಕತ್ವವೂ ಮುಖ್ಯವಲ್ಲ, ಎಲ್ಲರ ಜೊತೆಯಲ್ಲಿ ಹೋಗುತ್ತೇನೆ. ಸರ್ಕಾರದ ಬಳಿ ಹೋಗಲು ಎಲ್ಲರೂ ತೀರ್ಮಾನ ಮಾಡಿದ್ದಾರೆ. ಸರ್ಕಾರದ ಮುಂದೆ ಹೋಗುವ ಮುನ್ನ ನಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿಯಬೇಕಿದೆ. ಸರ್ಕಾರದ ಮುಂದೆ ಹೋಗೋದು ಮುಖ್ಯವಲ್ಲ, ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ. ಟೀಮ್ ಕೆಲಸ ಆದ ಮೇಲೆ ಮುಂದುವರಿಯುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.

    ಯಾರೂ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಸೂಕ್ತ ಪರಿಹಾರ ಮಾಡಲಾಗುತ್ತದೆ. ತಕ್ಷಣವೇ ಎಲ್ಲವೂ ಸರಿ ಹೋಗುತ್ತೆ ಅಂತ ಹೇಳಲು ಆಗುವುದಿಲ್ಲ. ಅದಕ್ಕೆ ಸಮಯ ಬೇಕು, ನಿಮ್ಮ ಜೊತೆ ನಾನು ಇದ್ದೇನೆ. ಎಲ್ಲರೂ ಧೈರ್ಯವಾಗಿರಿ ಎಂದು ಕಾರ್ಮಿಕರಿಗೆ ಶಿವರಾಜ್ ಕುಮಾರ್ ಧೈರ್ಯ ತುಂಬಿದರು.

    ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ಸಧ್ಯದಲ್ಲೇ ಮುಖ್ಯಮಂತ್ರಿಗಳ ಭೇಟಿಯಾಗುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಚಿತ್ರರಂಗದ ಉಳಿವಿಗಾಗಿ ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇವೆ ಎಂದರು.

    ಕೊರೊನಾ ಸಮಯದಲ್ಲಿ ಚಿತ್ರರಂಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಎಲ್ಲ ರಂಗಕ್ಕೂ ಪ್ಯಾಕೆಜ್ ಘೋಷಿಸಿರೋ ಸರ್ಕಾರ, ಚಿತ್ರರಂಗದ ಬಗ್ಗೆ ನಿರ್ಲಕ್ಷ ವಹಿಸಿದೆ. ಹೀಗಾಗಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಡಲು ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

    ಸಭೆಯಲ್ಲಿ ಸಾಧುಕೋಕಿಲ, ಜಯಣ್ಣ, ಸೂರಪ್ಪ ಬಾಬು, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಸಾರಾ ಗೋವಿಂದು, ಕೆ.ಮಂಜು, ಗುರುಕಿರಣ್, ಭೋಗೇಂದ್ರ, ಸುರೇಶ್ ಕುಮಾರ್, ಭಾಮ ಹರೀಶ್, ಎ.ಗಣೇಶ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೋಟಿ ರಾಮು, ನಿರ್ಮಾಪಕ ವಿತರಕ ಚಿನ್ನೇಗೌಡ, ಕಾರ್ತಿಕ್ ಗೌಡ, ಛಾಯಾಗ್ರಾಹಕ ಸಂಘದ ಅದ್ಯಕ್ಷ ಜೆ.ಜೆ.ಕೃಷ್ಣ, ನಿರ್ಮಾಪಕ ಕೆಪಿ ಹಾಗೂ ಇತರರು ಇದ್ದರು.

  • ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ

    ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ

    ಬೆಂಗಳೂರು: ಒಂದು ವಾರದ ಲಾಕ್‍ಡೌನ್ ಅಂತ್ಯವಾಗಿದ್ದೆ ತಡ ಬೆಂಗಳೂರಿನಲ್ಲಿ ವಾಸವಿದ್ದ ಬೇರೆ ಬೇರೆ ರಾಜ್ಯದವರು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಕಡೆ ಮುಖ ಮಾಡಿದ್ದಾರೆ.

    ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಾತ್ರ ಲಾಕ್‍ಡೌನ್ ಮಾಡಲಾಗಿತ್ತು. ರೈಲು ಮತ್ತು ವಿಮಾನ ಓಡಾಟವನ್ನು ನಿಲ್ಲಿಸಿರಲಿಲ್ಲ. ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಯಾವುದೇ ಬಸ್, ಆಟೋ, ಕ್ಯಾಬ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬೇರೆ ಬೇರೆ ರಾಜ್ಯದ ಕಾರ್ಮಿಕರು ಒಂದು ವಾರ ಬೆಂಗಳೂರಿನಲ್ಲಿ ಲಾಕ್‍ಡೌನ್ ಆಗಿದ್ದರು. ಇದೀಗ ಲಾಕ್‍ಡೌನ್ ಅಂತ್ಯವಾಗುತ್ತಿದ್ದಂತೆ ಕಾರ್ಮಿಕರು ರೈಲ್ವೆ ನಿಲ್ದಾಣದ ಕಡೆ ಬರುತ್ತಿದ್ದಾರೆ.

    ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಮುಂದೆ ಜನ ಕ್ಯೂ ನಿಂತಿದ್ದು, ಸಾವಿರಾರು ಜನ ಲಗೇಜ್ ಸಮೇತ ಬೆಂಗಳೂರನ್ನ ತೊರೆಯುತ್ತಿದ್ದಾರೆ. ಬೆಳ್ಳಂಬೆಳ್ಳಗ್ಗೆ ಹೊರ ರಾಜ್ಯದವರು ಬೆಂಗಳೂರನ್ನ ತೊರೆಯಲು ಮುಂದಾಗಿದ್ದು, ಬಿಹಾರ, ಪಾಟ್ನಾ ಮತ್ತು ಅಸ್ಸಾಂ ಕಡೆ ಹೋಗುವುದಕ್ಕೆ ಕಾರ್ಮಿಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಹಾಕಿಕೊಳ್ಳದೆ ಜನ ಲಗೇಜ್ ಇಟ್ಟಿಕೊಂಡು ಕಾಯುತ್ತಿದ್ದಾರೆ.

    ಈ ಮೂಲಕ ಲಾಕ್‍ಡೌನ್ ಅಂತ್ಯ ಆಗಿದ್ದೆ ತಡ ಬೇರೆ ಬೇರೆ ರಾಜ್ಯಗಳಿಗೆ ಹೋಗಲು ಸಾವಿರಾರು ಜನ ಸಾಲು ಗಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಟೆಂಪ್ರೇಚರ್ ಚೆಕ್ ಮಾಡಿ, ವೈದ್ಯಕೀಯ ತಪಾಸಣೆ ಮಾಡಿ ರೈಲು ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೇ ಹೊಂ ಕ್ವಾರಂಟೈನ್ ಸೀಲ್ ಚೆಕ್ ಮಾಡಿ ಒಳಗಡೆ ಬಿಡಲಾಗುತ್ತಿದೆ.

  • ಜುಬ್ಲಿಯಂಟ್, ಜಿಂದಾಲ್ ಆಯ್ತು ಈಗ ಟಾಟಾ ಮಾರ್ಕೋಪೊಲೊ ಕಂಪನಿಗೂ ಕೊರೊನಾ ಕಂಟಕ

    ಜುಬ್ಲಿಯಂಟ್, ಜಿಂದಾಲ್ ಆಯ್ತು ಈಗ ಟಾಟಾ ಮಾರ್ಕೋಪೊಲೊ ಕಂಪನಿಗೂ ಕೊರೊನಾ ಕಂಟಕ

    ಧಾರವಾಡ: ಮೈಸೂರಿನ ಜುಬ್ಲಿಯಂಟ್, ಬಳ್ಳಾರಿಯ ಜಿಂದಾಲ್ ಆಯ್ತು. ಈಗ ಧಾರವಾಡದ  ಟಾಟಾ ಮಾರ್ಕೋಪೊಲೊ ಕಂಪನಿಗೂ ಕೊರೊನಾ ಕಂಟಕ ಆರಂಭವಾಗಿದೆ.

    ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದ 3500 ಕಾರ್ಮಿಕರು ಕೆಲಸ ಮಾಡುವ ಮಾರ್ಕೋಪೊಲೊ ಕಂಪನಿಯ 8 ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಈಗ ಉಳಿದ ಕಾರ್ಮಿಕರಿಗೂ ಕೊರೊನಾ ಆತಂಕ ಎದುರಾಗಿದೆ.

    ಇಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿದ್ದರಿಂದ ಜಿಲ್ಲಾಡಳಿತ 10 ದಿನಗಳ ಕಾಲ ಜಿಲ್ಲೆಯಲ್ಲಿ ಲಾಕಡೌನ್ ಮಾಡಿ ಆದೇಶ ಮಾಡಿದೆ. ಈ ಹಿನ್ನೆಲೆ ಮಾರ್ಕೋಪೊಲೊ ಕಂಪನಿಯಲ್ಲಿ ಸಹ 3500 ಕಾರ್ಮಿಕರಲ್ಲಿ ಕೇವಲ 1 ಸಾವಿರ ಕಾರ್ಮಿಕರು ಮಾತ್ರ ಕೆಲಸ ಬರುತಿದ್ದರು. ಇದರಲ್ಲಿ 8 ಜನರಿಗೆ ಸೋಂಕು ತಗುಲಿದೆ.

    ಈ 8 ಜನರು ಕಂಪನಿಯ ಅಕ್ಕಪಕ್ಕದ ಹಳ್ಳಿಗಳಿಂದ ಕೆಲಸಕ್ಕೆ ಬರುತಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಕಂಪನಿಯಲ್ಲಿ ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

  • ಕೊರೊನಾ ಸೋಂಕಿತೆಯ ಪತಿಯೊಂದಿಗೆ ಸಂಪರ್ಕ: ಹೊಲದಲ್ಲೆ ಕೂಲಿ ಕಾರ್ಮಿಕರಿಬ್ಬರು ಕ್ವಾರಂಟೈನ್

    ಕೊರೊನಾ ಸೋಂಕಿತೆಯ ಪತಿಯೊಂದಿಗೆ ಸಂಪರ್ಕ: ಹೊಲದಲ್ಲೆ ಕೂಲಿ ಕಾರ್ಮಿಕರಿಬ್ಬರು ಕ್ವಾರಂಟೈನ್

    ಚಾಮರಾಜನಗರ: ಕೊರೊನಾ ಸೋಂಕಿತೆಯ ಸಂಪರ್ಕದಲ್ಲಿದ್ದ ಇಬ್ಬರು ಕೂಲಿ ಕಾರ್ಮಿಕರು ಜಮೀನಿನ ಗುಡಿಸಲಿನಲ್ಲೇ ಕ್ವಾರಂಟೈನ್ ಆಗಿರುವ ಸಂಗತಿ ಚಾಮರಾಜನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರ ಹುಂಡಿಯ ಮಹಿಳೆಯೊಬ್ಬರಿಗೆ ಮೂರು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಇವರ ತೋಟದ ಮನೆಗೆ ಗಾರೆ ಕೆಲಸಕ್ಕೆಂದು ಗ್ರಾಮದ ಇಬ್ಬರು ಕೂಲಿ ಕಾರ್ಮಿಕರು ಹೋಗಿದ್ದರು. ಇದೇ ವೇಳೆ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಕುಟುಂಬದಿಂದ ದೂರವಿರಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಇಬ್ಬರು ಗಾರೆ ಕೆಲಸಗಾರರು ಹೊಲದ ಕಾವಲಿಗೆ ಹಾಕಲಾಗಿರುವ ಗುಡಿಸಲಿನಲ್ಲೇ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಇವರಿಬ್ಬರು ಗಾರೆ ಕಾರ್ಮಿಕರು ಸೋಂಕಿತ ಮಹಿಳೆಯ ನೇರ ಸಂಪರ್ಕಕ್ಕೆ ಬಂದಿಲ್ಲ. ಆದರೆ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತಿಯ ಜೊತೆ ಇವರು ಬೆರೆತಿದ್ದರು. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಕಾರ್ಮಿಕರು ತಮ್ಮ ಶೇಂಗಾ ಹೊಲದಲ್ಲಿ ಕಾವಲು ಕಾಯಲು ಹಾಕಿರುವ ಗುಡಿಸಲಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಇವರ ಸಂಬಂಧಿಕರು ದೂರದಿಂದಲೇ ಇವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.

    ಸೋಂಕಿತ ಮಹಿಳೆಗೆ ಸೇರಿದ ಹೊಲಕ್ಕೆ ಕೃಷಿ ಕೆಲಸಕ್ಕೆಂದು ಹೋಗಿದ್ದ ಇತರ ಮೂವರು ಮಹಿಳೆಯರು ಸಹ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಈ ಮೂವರು ಮಹಿಳೆಯರು ಸಹ ಒಂದೇ ಮನೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ನಮ್ಮ ಗ್ರಾಮದಲ್ಲಿ ಕ್ವಾರಂಟೈನ್‍ಗೆ ಒಳಗಾಗಿರುವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಯಾವ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕ್ವಾರಂಟೈನ್‍ನಲ್ಲಿ ಇರುವವರಿಗೆ ಅವರ ಸಂಬಂಧಿಕರು ಆತಂಕದಿಂದಲೇ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಸೋಂಕಿತ ಮಹಿಳೆಯ ಪತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಕ್ರಿಯರಾಗಿದ್ದು, ಗ್ರಾಮಸ್ಥರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದಾರೆ. ಹೀಗಾಗಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಗ್ರಾಮಸ್ಥರಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. ಇಬ್ಬರು ಗಾರೆ ಕೆಲಸಗಾರರು ಹಾಗೂ ಮೂವರು ಮಹಿಳಾ ಕಾರ್ಮಿಕರು ಕ್ವಾರಂಟೈನ್ ಆಗಿದ್ದರೆ, ಸೋಂಕಿತೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಕೆಯ ಪತಿ ಯಾವುದೇ ಮುಂಜಾಗ್ರತೆ ವಹಿಸಿದೆ ಊರ ತುಂಬೆಲ್ಲ ಓಡಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  • 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    ಮುಂಬೈ: ಬಾಲಿವುಡ್ ನಟ ಸೋನು ಸೂದ್ ಈಗಾಗಲೇ ಲಾಕ್‍ಡೌನ್ ವೇಳೆ ಸಂಕಷ್ಟದಲ್ಲಿದ್ದ ನೂರಾರು ಜನರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ನಟ ಸೋನು ಸೂದ್ ಮತ್ತೊಮ್ಮೆ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬದವರಿಗೆ ಸಹಾಯದ ಹಸ್ತ ಚಾಚಿದ್ದಾರೆ.

    ಕೊರೊನಾ ಪ್ರೇರಿತ ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದಾಗಿ ಮೃತ ಮತ್ತು ಗಾಯಗೊಂಡಿರುವ ವಲಸೆ ಕಾರ್ಮಿಕರ 400ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ನಟ ಸೋನು ಸೂದ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ನಟ ಸೋನು ಸೂದ್ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕೊರೊನಾದಿಂದ ಮೃತ ವಲಸಿಗರ ಸಂಬಂಧಿತ ಮಾಹಿತಿ, ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದಾರೆ.

    “ಮೃತ ಅಥವಾ ಗಾಯಗೊಂಡಿರುವ ವಲಸಿಗರ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ಹೊಂದಲು ನಾನು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ. ಅವರನ್ನು ಬೆಂಬಲಿಸುವುದು ನನ್ನ ವೈಯಕ್ತಿಕ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ” ಎಂದು ಸೋನು ಸೂದ್ ಹೇಳಿದರು.

    177 ಯುವತಿಯರಿಗೆ ಸಹಾಯ:
    ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯರ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು.

    ತಕ್ಷಣ ಯುವತಿಯರಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದರು. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ ಒಡಿಶಾಕ್ಕೆ ಕಳುಹಿಸಿದ್ದರು.

    ಈ ಹಿಂದೆ ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದರು.

  • ಮಲಗಿದ್ದವರ ಮೇಲೆ ಹರಿದ ಟ್ರಕ್- ಐವರು ದುರ್ಮರಣ

    ಮಲಗಿದ್ದವರ ಮೇಲೆ ಹರಿದ ಟ್ರಕ್- ಐವರು ದುರ್ಮರಣ

    – ಆರೋಪಿಗಳನ್ನ ಬೆನ್ನಟ್ಟಿ ಬಂಧಿಸಿದ ಪೊಲೀಸರು

    ಲಕ್ನೋ: ಪಾದಚಾರಿ ರಸ್ತೆ ಮೇಲೆ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ಐವರು ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು 2 ಗಂಟೆಗೆ ಈ ಅಪಘಾತ ಸಂಭವಿಸಿದೆ.

    ಅಪಘಾತದ ನಂತರ ಆರೋಪಿ ಟ್ರಕ್ ಚಾಲಕ ಮತ್ತು ಕ್ಲೀನರ್ ಪರಾರಿಯಾಗಲು ಪ್ರಯತ್ನಿಸಿದ್ದರು. ಆದರೆ ಸ್ಥಳೀಯ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಗಳನ್ನು ಮುನೇಶ್ ಮತ್ತು ಸಿಂಟು ಎಂದು ಗುರುತಿಸಲಾಗಿದೆ.

    ಟ್ರಕ್ ಮೈನ್ಪುರಿ ಮೂಲದ ಆಟೋ-ಶೋ ರೂಂಗೆ ಬೈಕ್‍ಗಳನ್ನು ತೆಗೆದುಕೊಂಡು ಗುರುಗ್ರಾಮ್‍ಗೆ ಹೋಗುತ್ತಿತ್ತು. ಆದರೆ ಸಿಕಂದ್ರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಾದಚಾರಿ ಮಾರ್ಗದಲ್ಲಿ ಹೋಗಿದೆ. ಅಲ್ಲಿ ಏಳು ಮಂದಿ ಕಾರ್ಮಿಕರು ಮಲಗಿದ್ದರು. ಅವರ ಮೇಲೆ ಹರಿದಿದೆ. ಪರಿಣಾಮ ಐವರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್ ತಿಳಿಸಿದರು.

  • ಥರ್ಮಲ್ ಪವರ್ ಪ್ಲಾಂಟ್‍ನಲ್ಲಿ ಬಾಯ್ಲರ್ ಸ್ಫೋಟ – 6 ಸಾವು

    ಥರ್ಮಲ್ ಪವರ್ ಪ್ಲಾಂಟ್‍ನಲ್ಲಿ ಬಾಯ್ಲರ್ ಸ್ಫೋಟ – 6 ಸಾವು

    ಚೆನ್ನೈ: ತಮಿಳುನಾಡಿನ ಕಡ್ಡಲೂರು ಜಿಲ್ಲೆಯ ಥರ್ಮಲ್ ಪವರ್ ಪ್ಲಾಂಟ್‍ನಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಆರು ಜನರು ಸಾವನ್ನಪ್ಪಿದ್ದರು. ಗಾಯಗೊಂಡ 16 ಕಾರ್ಮಿಕರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ರವಾನಿಸಿದ್ದಾರೆ.

    ಘಟನೆ ನಡೆದ ಸ್ಥಳ ಚೆನ್ನೈನಿಂದ 180 ಕಿಲೋ ಮೀಟರ್ ದೂರದಲ್ಲಿರುವ ಕಡ್ಡಲೂರಿನಲ್ಲಿರುವ ಎನ್‍ಎಲ್‍ಸಿ ಇಂಡಿಯಾ ಲಿಮಿಟೆಡ್‍ನ ಪವರ್ ಪ್ಲಾಂಟ್‍ನಲ್ಲಿ ಬಾಯ್ಲರ್ ಸ್ಫೋಟವಾಗಿದೆ. ಗಾಯಾಳುಗಳ ಪೈಕಿ 6 ಖಾಯಂ ಕಾರ್ಮಿಕರು, 10 ಜನರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

    ಈ ಕುರಿತು ಪವರ್ ಪ್ಲಾಂಟ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಬಾಯ್ಲರ್ ಬಂದ್ ಆಗಿತ್ತು. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಎರಡು ತಿಂಗಳ ಹಿಂದೆ ಮೇನಲ್ಲಿಯೂ ಇದೇ ರೀತಿ ಬಾಯ್ಲರ್ ಸ್ಫೋಟಗೊಂಡಿತ್ತು. ಅಂದಿನ ಸ್ಫೋಟದಲ್ಲಿ ಆರು ಕಾರ್ಮಿಕರು ಬೆಂಕಿಗಾಹುತಿಯಾಗಿದ್ದರು. ಕಂಪನಿ 3,940 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇಂದು ಸ್ಫೋಟಗೊಂಡ ಘಟಕದಲ್ಲಿ 1,470 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

  • ವಿಶಾಖಪಟ್ಟಣಂನಲ್ಲಿ ಮತ್ತೆ ವಿಷಾನಿಲ ಸೋರಿಕೆ- ಇಬ್ಬರು ಸಾವು, ನಾಲ್ವರು ಗಂಭೀರ

    ವಿಶಾಖಪಟ್ಟಣಂನಲ್ಲಿ ಮತ್ತೆ ವಿಷಾನಿಲ ಸೋರಿಕೆ- ಇಬ್ಬರು ಸಾವು, ನಾಲ್ವರು ಗಂಭೀರ

    ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕಾರ್ಖಾನೆಯೊಂದರಲ್ಲಿ ಮತ್ತೆ ಗ್ಯಾಸ್ ಲೀಕ್ ಆಗಿದ್ದು, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ನಾಲ್ವರು ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತೀಚೆಗಷ್ಟೇ ವಿಶಾಖಪಟ್ಟಣಂನ ಆರ್.ಆರ್ ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ಸೋರಿಕೆಯಾಗಿತ್ತು. ಈಗ ಮತ್ತೆ ಇದೇ ವಿಶಾಖಪಟ್ಟಣಂನ ಸೈನರ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಿಂದ ಬೆಂಜಿಮಿಡಾಜೋಲ್ ಅನಿಲ ಸೋರಿಕೆಯಾಗಿದೆ ಎಂದು ರಾಷ್ಟೀಯ ಮಾಧ್ಯಮಗಳು ವರದಿ ಮಾಡಿವೆ.

    ಈ ವಿಚಾರವಾಗಿ ಮಾತನಾಡಿರುವ ಪರ್ವಾಡಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಉದಯ್ ಕುಮಾರ್, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕರು ಅನಿಲ ಸೋರಿಕೆಯಾದ ಸಮಯದಲ್ಲಿ ಕಾರ್ಖಾನೆಯಲ್ಲೇ ಇದ್ದರಿಂದ ಅವರು ಸಾವನ್ನಪ್ಪಿದ್ದಾರೆ. ನಾಲ್ವರು ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಕಾರ್ಖಾನೆಯಿಂದ ಸೋರಿಕೆಯಾದ ಅನಿಲ ಬೇರೆಲ್ಲಿಯೂ ಹರಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಕಳೆದ ಮೇ 7ರಂದು ಪಾಲಿಸ್ಟೈರೀನ್ ಉತ್ಪನ್ನಗಳನ್ನು ತಯಾರಿಸುವ ದಕ್ಷಿಣ ಕೊರಿಯಾದ ಒಡೆತನದ ಕಾರ್ಖಾನೆಯ ಎಲ್‍ಜಿ ಪಾಲಿಮರ್ಸ್ ಇಂಡಿಯಾ ಲಿಮಿಟೆಡ್‍ನಲ್ಲಿ ಅನಿಲ ಸೋರಿಕೆಯಿಂದ 13 ಜನರು ಸಾವನ್ನಪ್ಪಿದರು. ಸುಮಾರು 10 ಸಾವಿರ ಟನ್ ಅನಿಲ ಸೋರಿಕೆಯಾದ ಕಾರಣ ಈ ಅನಿಲ ಗಾಲಿಯಲ್ಲಿ ಸೇರಿ ಅಕ್ಕಪಕ್ಕದ ಊರುಗಳಿಗೂ ಹರಡಿತ್ತು. ಈ ಪರಿಣಾಮ ನೂರಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು.

  • ಜಿಂದಾಲ್‍ನಲ್ಲಿ ಕೊರೊನಾ ಸ್ಫೋಟ- 11 ಸಾವಿರ ಕಾರ್ಮಿಕರಿಗೆ 4 ದಿನ ಕ್ವಾರಂಟೈನ್‍ ಚಿಂತನೆ

    ಜಿಂದಾಲ್‍ನಲ್ಲಿ ಕೊರೊನಾ ಸ್ಫೋಟ- 11 ಸಾವಿರ ಕಾರ್ಮಿಕರಿಗೆ 4 ದಿನ ಕ್ವಾರಂಟೈನ್‍ ಚಿಂತನೆ

    – ಕಾಟಾಚಾರಕ್ಕೆ ಕ್ವಾರಂಟೈನ್ ಮಾಡಲು ಮುಂದಾದ ಜಿಂದಾಲ್

    ಬಳ್ಳಾರಿ: ರಾಜ್ಯದ ಅತೀ ದೊಡ್ಡ ಉಕ್ಕಿನ ಕಾರ್ಖಾನೆ ಜಿಂದಾಲ್ ನಲ್ಲಿ ಕೊರೊನಾ ರಣ ಕೇಕೆ ಹಾಕುತ್ತಿದೆ. ಕೇವಲ ಮೂರು ದಿನಗಳಲ್ಲಿ 86 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇನ್ನೂ 526 ಜನರ ವರದಿ ಬರಬೇಕಿದೆ. ಇಷ್ಟಾದರೂ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಜಿಂದಾಲ್ ಸಮೂಹ ಸಂಸ್ಥೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸುತ್ತಿದ್ದು, ಕೇವಲ ನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡುವುದಾಗಿ ತಿಳಿಸಿದೆ.

    ಜಿಂದಾಲ್‍ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕ ಸಮೀಪಿಸಿದ್ದು, ಕೇವಲ ಮೂರು ದಿನಗಳಲ್ಲಿ 86 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಿರುವಾಗ ಜಿಂದಾಲ್ ನೆಪ ಮಾತ್ರಕ್ಕೆ ಕಾರ್ಮಿಕರನ್ನು ಕೇವಲ ನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲು ಮುಂದಾಗಿದೆ. ಸರ್ಕಾರ ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್ 14 ದಿನಗಳಿಗೆ ಮೀಸಲು ಮಾಡಿದೆ. ಆದರೆ ಜಿಂದಾಲ್ ಮಾತ್ರ ಕೇವಲ ನಾಲ್ಕು ದಿನಗಳ ಕಾಲ ಕಾಟಾಚಾರಕ್ಕೆ ಕ್ವಾರಂಟೈನ್ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

    ಬಳ್ಳಾರಿಯ 1,793, ಸಂಡೂರಿನ 503, ಹೊಸಪೇಟೆಯ 989, ತೋರಣಗಲ್ ಸುತ್ತಲಿನ ಹಳ್ಳಿಯ 4,262, ಜಿಂದಾಲ್ ಟೌನ್‍ಶಿಪ್ ನಲ್ಲಿ ವಾಸವಾಗಿರುವ 3,207 ಸೇರಿದಂತೆ ಒಟ್ಟು 10,751 ಕಾರ್ಮಿಕರನ್ನು ಹೋಮ್ ಕ್ವಾರಂಟೈನ್ ಮಾಡಲು ಮುಂದಾಗಿದೆ. ರಾಜ್ಯದ ನಂಬರ್ ಒನ್ ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಜಿಂದಾಲ್ ಸಂಸ್ಥೆ, ಇಂದು ಕೊರೊನಾ ಕಾರ್ಖಾನೆಯಾಗಿ ಮಾರ್ಪಟ್ಟಿದೆ.

    ಲಾಕ್‍ಡೌನ್ ಸಮಯದಲ್ಲಿ ಕಾರ್ಖಾನೆ ಬಂದ್ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಬಂದ್ ಮಾಡಿರಲಿಲ್ಲ. ಅಲ್ಲದೆ ಈ ಹಿಂದೆ ಕಾರ್ಖಾನೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕೇವಲ ಮೂರು ದಿನಗಳಲ್ಲಿ 86 ಪ್ರಕರಣಗಳು ಪತ್ತೆಯಾಗಿವೆ. ಇಷ್ಟಾದರೂ ಕಾರ್ಖಾನೆ ಬಂದ್ ಮಾಡಲಾಗಿಲ್ಲ. ಈಗಲಾದರೂ ಜಿಂದಾಲ್ ಸಂಪೂರ್ಣ ಬಂದ್ ಮಾಡುವಂತೆ ಒತ್ತಡ ಹೆಚ್ಚಾಗಿದೆ.

    ಈ ಸಮೂಹ ಸಂಸ್ಥೆಯಲ್ಲಿ 35 ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದು, ಇವರ ರಕ್ಷಣೆ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಹೀಗಿದ್ದರೂ ಜಿಂದಾಲ್ ಮಾತ್ರ ಕಾಟಾಚಾರಕ್ಕೆ ಕೇವಲ ನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡುತ್ತಿದೆ. ಹೀಗಾಗಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಜಿಂದಾಲ್ ನಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಸಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 147 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 86 ಜಿಂದಾಲ್ ಪ್ರಕರಣಗಳಾಗಿವೆ. ಅಲ್ಲದೆ ಇಂದು ಜಿಲ್ಲೆಯಲ್ಲಿ 53 ಪ್ರಕರಣಗಳು ಪತ್ತೆಯಾಗಿದ್ದು, 46 ಜಿಂದಾಲ್ ಪ್ರಕರಣಗಳಾಗಿವೆ. ಹೀಗಾಗಿ ಜಿಂದಾಲ್‍ನಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ಸ್ಫೋಟವಾಗುವ ಸಂಭವವಿದೆ.