Tag: workers

  • ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಟ್ರಕ್ ಹರಿದು 13 ಮಂದಿ ಸಾವು

    ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಟ್ರಕ್ ಹರಿದು 13 ಮಂದಿ ಸಾವು

    – ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ

    ಗಾಂಧಿನಗರ: ಟ್ರಕ್ ವಾಹನವೊಂದು ಹರಿದು 13 ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಗುಜರಾತ್‍ನ ಸೂರತ್ ಕೊಸಂಬಾ ನಗರದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಅಪಘಾತದಲ್ಲಿ ಮೃತಪಟ್ಟವರು ಕಾರ್ಮಿಕರಾಗಿದ್ದು, ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಇನ್ನೂ 6 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತಂತೆ ತನಿಖೆ ನಡೆಸಿದಾಗ ಪಾದಚಾರಿ ರಸ್ತೆಯಲ್ಲಿ ಕಾರ್ಮಿಕರು ಮಲಗಿದ್ದರು. ಅದೇ ಸಮಯಕ್ಕೆ ಕಬ್ಬಿನ ರಾಶಿ ತುಂಬಿದ್ದ ಟ್ರಕ್, ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ರಸ್ತೆಯಲ್ಲಿ ಮಲಗಿದ್ದ ಕಾರ್ಮಿಕರ ಮೈ ಮೇಲೆ ಹರಿದಿದೆ ಎಂದು ಸೂರತ್‍ನ ಕಾಮ್ರೆಜ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಸಿಎಂ ಜಡೇಜಾ ಹೇಳಿದ್ದಾರೆ.

    ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಸೂರತ್‍ನಲ್ಲಿ ನಡೆದ ಟ್ರಕ್ ಅಪಘಾತ ಒಂದು ದುರಂತ. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

    ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ(ಪಿಎಂಎನ್‍ಆರ್‍ಎಫ್) ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮತ್ತು ಸರ್ಕಾರ ಗಾಯಗೊಂಡವರಿಗೆ ತಲಾ 50,000 ರೂ ಪರಿಹಾರ ಘೋಷಿಸಿದೆ.

  • ಕಾರ್ಮಿಕರಿದ್ದ ಟ್ರ್ಯಾಕ್ಟರ್ ಪಲ್ಟಿ – ನಾಲ್ವರಿಗೆ ಗಂಭೀರ ಗಾಯ

    ಕಾರ್ಮಿಕರಿದ್ದ ಟ್ರ್ಯಾಕ್ಟರ್ ಪಲ್ಟಿ – ನಾಲ್ವರಿಗೆ ಗಂಭೀರ ಗಾಯ

    ಧಾರವಾಡ/ಹುಬ್ಬಳ್ಳಿ: ಕಬ್ಬಿಣದ ವಸ್ತುಗಳನ್ನ ಹೊತ್ತುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನವನಗರದ ಬಳಿ ನಡೆದಿದೆ.

    ಮಧ್ಯಪ್ರದೇಶದ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ರ್ಯಾಕ್ಟರ್‍ಲ್ಟಿಯಾಗಿದ್ದರಿಂದ ಮಹಿಳಾ ಕೂಲಿ ಕಾರ್ಮಿಕರಿಗೆ ಕೆಳಗೆ ಬಿದ್ದಿದ್ದರಿಂದ ನಾಲ್ವರಿಗೆ ಗಂಭೀರವಾದ ಗಾಯಗಳಾಗಿದ್ದು, ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ನವನಗರದ ಪ್ರಮುಖ ಸ್ಥಳದಲ್ಲಿಯೇ ಘಟನೆ ನಡೆದಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಉತ್ತರ ಸಂಚಾರ ಠಾಣೆಯ ಪೊಲೀಸರು ಹಾಗೂ ತುರ್ತು ಸೇವೆ ಹಾಗೂ ಅಗ್ನಿಶಾಮಕ ಇಲಾಖೆಯ ಡಿಎಫ್‍ಒ ವಿನಾಯಕ ಕಲ್ಗುಟಕರ್, ಎಂ.ಆರ್.ಕಾತರಕಿ, ಶ್ರೀ ರಾಯಾಭಾಗ ಹಾಗೂ ಪ್ರವೀಣಕುಮಾರ ಅವರು ದೌಡಾಯಿಸಿ ಗಾಯಾಗೊಂಡವರ ರಕ್ಷಣೆಗೆ ಮುಂದಾಗಿದ್ದಾರೆ.

  • ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ- ಕಲ್ಲು ತೂರಿ, ಬೆಂಕಿ ಹಚ್ಚಿ ಕಾರ್ಮಿಕರು ಆಕ್ರೋಶ

    ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ- ಕಲ್ಲು ತೂರಿ, ಬೆಂಕಿ ಹಚ್ಚಿ ಕಾರ್ಮಿಕರು ಆಕ್ರೋಶ

    ಕೋಲಾರ: ಕಳೆದ 4 ತಿಂಗಳಿನಿಂದ ವೇತನ ನೀಡಿಲ್ಲವೆಂದು ಆರೋಪಿಸಿ ಕಾರ್ಮಿಕರು  ಐಫೋನ್‌ ಉತ್ಪಾದನೆ ಮಾಡುವ ವಿಸ್ಟ್ರಾನ್ ಕಂಪನಿಗೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಕೋಲಾರ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ವೇತನ ನೀಡದ ಆರೋಪದಿಂದಾಗಿ ಈ ಕಂಪನಿಯ ಮೇಲೆ ಕಾರ್ಮಿಕರು ಕಲ್ಲು ತೂರಾಟ ಮಾಡಿ ಕಿಡಿಕಾರಿದ್ದಾರೆ.

    ಕಂಪನಿ ಕಳೆದ ನಾಲ್ಕು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ. ಅಲ್ಲದೆ ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಇಂದು ಕಂಪನಿಯ ಗಾಜು ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಕಿಟಕಿ ಗಾಜು, ಪೀಠೋಪಕರಣಗಳು ಸಂಪೂರ್ಣ ಧ್ವಂಸಗೊಂಡಿವೆ. ಅಲ್ಲದೆ ಬೆಂಕಿ ಕೂಡ ಹಚ್ಚಿದ್ದಾರೆ.

    ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಆಗಮಸಿ ಪರಿಸ್ಥಿತಿ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಕಾರ್ಮಿಕರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ.

  • ತುಂಬು ಗರ್ಭಿಣಿ ಪತ್ನಿ ಜೊತೆ ಮಾತನಾಡುತ್ತಲೇ ನೇಣಿಗೆ ಶರಣಾದ ಕಾರ್ಮಿಕ!

    ತುಂಬು ಗರ್ಭಿಣಿ ಪತ್ನಿ ಜೊತೆ ಮಾತನಾಡುತ್ತಲೇ ನೇಣಿಗೆ ಶರಣಾದ ಕಾರ್ಮಿಕ!

    ಹುಬ್ಬಳ್ಳಿ: ಪತ್ನಿಯ ಜೊತೆ ಮೊಬೈಲ್ ನಲ್ಲಿ ಮಾತುನಾಡುತ್ತಲೇ ಕಾರ್ಮಿಕನೊಬ್ಬ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಮೋಹನ್ ಸಿಂಗ್ ಆತ್ಮಹತ್ಯೆಗೆ ಶರಣಾದ ಕಾರ್ಮಿಕನಾಗಿದ್ದು, ಪಶ್ಚಿಮಬಂಗಾಳ ಮೂಲದ ನಿವಾಸಿ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೋಹನ್ ಸಿಂಗ್ ತಂದೆಯ ಸಾವಿನಿಂದ ಮನನೊಂದಿದ್ದರು.

    ಕಳೆದ ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳದಿಂದ ಕೆಲಸಕ್ಕೆಂದು ಬಂದು ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಫೇವರ್ಸ್ ಕಂಪನಿಯಲ್ಲಿ ಮೋಹನಸಿಂಗ್ ಕೆಲಸಕ್ಕೆ ಸೇರಿಕೊಂಡಿದ್ದರು. ತಂದೆಯ ಸಾವಿನ ದುಃಖದಲ್ಲಿಯೇ ತನ್ನ ತುಂಬು ಗರ್ಭಿಣಿ ಹೆಂಡತಿಯ ಜೊತೆ ಮಾತನಾಡುತ್ತಲೇ ನೇಣಿಗೆ ಶರಣಾಗಿದ್ದಾರೆ.

    ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಗಂಡನ ಮಾತುಗಳನ್ನ ಕೇಳಿ ಪತ್ನಿ ಗಾಬರಿಗೊಂಡಿದ್ದಾರೆ. ಕೂಡಲೇ ಗಂಡನ ಜೊತೆ ಕೆಲಸ ಮಾಡುವ ಸಹ ಕಾರ್ಮಿಕ ಶುಭಾಷಿನ ಎಂಬಾತನಿಗೆ ಕರೆ ಮಾಡಿ ನನ್ನ ಗಂಡ ಹೀಗೆ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಅಷ್ಟರಲ್ಲಿಯೇ ಅಲ್ಲಿಗೆ ಹೋದ ಸಹ ಕಾರ್ಮಿಕರು ನೇಣಿನಲ್ಲಿದ್ದವನನ್ನ ಕೆಳಗಿಳಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಮೃತಪಟ್ಟಿದ್ದಾರೆ.

    ಘಟನೆಯ ಬಗ್ಗೆ ಕಾರ್ಮಿಕನ ಕುಟುಂಬಕ್ಕೆ ಗ್ರಾಮೀಣ ಪೊಲೀಸರು ಮಾಹಿತಿ ನೀಡಿದ್ದು, ಶವವನ್ನ ಕಿಮ್ಸ್ ನ ಶವಾಗಾರದಲ್ಲಿಡಲಾಗಿದೆ. ಪ್ರಕರಣ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

  • ನನ್ನಿಂದ 6 ಅಡಿ ದೂರ ಇರಿ, ಅಕ್ಕ ಪಕ್ಕ ನಿಂತರೂ ನಾನು ಬರಲ್ಲ- ಕಾರ್ಯಕರ್ತರಿಗೆ ಸಿದ್ದು ಕೊರೊನಾ ಪಾಠ

    ನನ್ನಿಂದ 6 ಅಡಿ ದೂರ ಇರಿ, ಅಕ್ಕ ಪಕ್ಕ ನಿಂತರೂ ನಾನು ಬರಲ್ಲ- ಕಾರ್ಯಕರ್ತರಿಗೆ ಸಿದ್ದು ಕೊರೊನಾ ಪಾಠ

    ಮೈಸೂರು: ನಗರಕ್ಕೆ ಆಗಮಿಸಿದ ತಕ್ಷಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕೊರೊನಾ ಪಾಠ ಮಾಡಿದ್ದಾರೆ.

    ಇಂದು ಮೈಸೂರು ಪ್ರವಾಸಕ್ಕೆ ಆಗಮಿಸಿರುವ ಅವರು, ಎಲ್ಲರೂ ನನ್ನಿಂದ ದೂರ ಇರಿ, 6 ಅಡಿ ದೂರ ನಿಂತುಕೊಳ್ಳಿ. ನನ್ನ ಅಕ್ಕ ಪಕ್ಕ ನಿಂತುಕೊಂಡರೂ ನಾನು ಬರುವುದಿಲ್ಲ ಎಂದು ತಮ್ಮ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತರನ್ನು ದೂರ ಸರಿಸಿದ್ದಾರೆ. ಯಾರೂ ಹತ್ತಿರ ಬಾರದಂತೆ ತಡೆದಿದ್ದಾರೆ. ಈ ಮೂಲಕ ತಮ್ಮ ಕಾರ್ಯಕರ್ತರಿಗೆ ಕೊರೊನಾ ಪಾಠ ಮಾಡಿದ್ದಾರೆ.

    ರಾಜಕಾರಣಿಗಳ ಜೊತೆಗೆ ಕಾರ್ಯಕರ್ತರು ನಿಲ್ಲುವುದು ಸಾಮಾನ್ಯ, ಅದೇ ರೀತಿ ಈಗಲೂ ಕಾರ್ಯಕರ್ತರು ಕೊರೊನಾ ಲೆಕ್ಕಿಸದೇ ಹತ್ತಿರ ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ. ಸಾಮಾಜಿಕ ಅಂತರ ಕಾಪಾಡುವಂತೆ ಎಚ್ಚರಿಸಿದ್ದಾರೆ. ನೀವು ನನ್ನ ಹತ್ತಿರ ನಿಂತರೆ ಮಾಧ್ಯಮಗಳ ಜೊತೆಗೂ ಮಾತನಾಡುವುದಿಲ್ಲ ಎಂದು ತಮ್ಮ ಪಕ್ಕ ಗುಂಪಾಗಿ ನಿಂತಿದ್ದ ಕಾರ್ಯಕರ್ತರನ್ನು ದೂರ ಸರಿಸಿದ್ದಾರೆ. ಕೊರೊನಾ ಕುರಿತು ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಿಸುವ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದು ನಿಜ. ದೆಹಲಿಯ ಮಾಹಿತಿ ಆಧರಿಸಿ ಹೇಳುತ್ತಿದ್ದೇನೆ. ಯಡಿಯೂರಪ್ಪ ಬದಲಾಗುತ್ತಾರೆ, ಮತ್ತೆ ಸಿಎಂ ಯಾರಾಗುತ್ತಾರೆ ಎಂಬುದು ತಿಳಿದಿಲ್ಲ. ಸಿಎಂ ಬದಲಾವಣೆ ಕುರಿತು ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ, ಇದೀಗ ಬಲಗೊಂಡಿದೆ. ಸಿಎಂ ಬದಲಾವಣೆಗೆ ಭ್ರಷ್ಟಾಚಾರ ಸಹ ಕಾರಣ ಎಂದು ತಿಳಿಸಿದರು.

    ಆರ್‍ಆರ್ ನಗರ ಹಾಗೂ ಶಿರಾ ಎರಡೂ ಉಪಚುನಾವಣೆಗಳಲ್ಲಿ ಗೆಲ್ಲುತ್ತೇವೆ. ಕಾಂಗ್ರೆಸ್ ಪರ ಮತಗಳೇ ನಮ್ಮನ್ನು ಗೆಲ್ಲಿಸುತ್ತವೆ. ಕಳೆದ ಬಾರಿ ಅಪಪ್ರಚಾರದಿಂದ ನಮ್ಮ ಅಭ್ಯರ್ಥಿ ಸೋತಿದ್ದರು. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಇವಿಎಂ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ, ಸಮಸ್ಯೆ ಇದ್ದೇ ಇದೆ. ಇದೆಲ್ಲದರ ಮಧ್ಯೆಯೂ ನಾವು ಗೆಲ್ಲುತ್ತೇವೆ. ಅವರು ಹಣ ಹೆಚ್ಚು ಖರ್ಚು ಮಾಡಿದ್ದೇವೆ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ. ಆದರೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಸೇತುವೆ ಕುಸಿತ- ಪ್ರಾಣದ ಹಂಗು ತೊರೆದು ಹಳ್ಳ ದಾಟುತ್ತಿರುವ ಜನ

    ಸೇತುವೆ ಕುಸಿತ- ಪ್ರಾಣದ ಹಂಗು ತೊರೆದು ಹಳ್ಳ ದಾಟುತ್ತಿರುವ ಜನ

    ಬಳ್ಳಾರಿ: ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದ್ದು, ಅದೇ ರೀತಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಜನ ಪ್ರಾಣದ ಹಂಗು ತೊರೆದು ರಭಸವಾಗಿ ಹರಿಯುವ ಹಳ್ಳವನ್ನೇ ತಾಟಿ ತಮ್ಮೂರಿಗೆ ತೆರಳುತ್ತಿದ್ದಾರೆ.

    ಪ್ರತಿ ಸಲ ಮಳೆ ಬಂದಾಗ ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಸಂಪರ್ಕಿಸುವ ಈ ಹಳ್ಳ ದಾಟಲು ಜನ ಪ್ರಾಣವನ್ನೇ ಪಣಕ್ಕೆ ಇಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಬಳಿಯಿರುವ ಯಲ್ಲಮ್ಮನಹಳ್ಳ ತುಂಬಿ ಹರಿಯುತಿದ್ದು, ಕಳೆದ ವಾರ ಸುರಿದ ಮಳೆಯಿಂದಾಗಿ ತಾತ್ಕಾಲಿಕ ಸೇತುವೆ ಕುಸಿದ ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದೆ.

    ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆ ಮತ್ತು ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಾರಾವಿಯಿಂದ ಸಿರಗುಪ್ಪಕ್ಕೆ ಕೂಲಿಕಾರ್ಮಿಕರು ದಿನನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ನಿತ್ಯ ಪ್ರಾಣದ ಹಂಗು ತೊರೆದು ಸೇತುವೆ ದಾಟುತ್ತಿದ್ದಾರೆ.

    ಮಳೆಯಿಂದಾಗಿ ನಿರ್ಮಾಣ ಹಂತದ ಸೇತುವೆ ಕೆಲವೆಡೆ ಈಗಾಗಲೇ ಕುಸಿದಿದೆ. ತಾತ್ಕಾಲಿಕ ಸೇತುವೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಪರಿಣಾಮ ನಿತ್ಯ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಬೇಕಿದೆ. ಕೂಲಿ ಕಾರ್ಮಿಕರು ಕೂಲಿಗೆ ಹೋಗಬೇಕಾದರೆ ನಿತ್ಯ ಇದೇ ಗೋಳು ಎನ್ನುವಂತಾಗಿದೆ. ಸ್ವಲ್ಪ ಮಳೆ ಬಂದರೂ ಈ ಹಳ್ಳ ತುಂಬಿ ಹರಿಯುತ್ತದೆ. ನೀರಿನಲ್ಲಿ ಕೊಚ್ಚಿ ಹೋದರೆ ಯಾರೂ ಹೊಣೆ ಎಂದು ಕೂಲಿ ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.

    ಪರ್ಯಾಯ ಮಾರ್ಗದ ಮೂಲಕ ದಡ ಸೇರಬೇಕೆಂದರೆ, 15 ಕಿ.ಮೀ. ಸುತ್ತುವರೆದು ಹೋಗಬೇಕು. ಕೂಲಿ ಕೆಲಸಕ್ಕೆ ಹೋಗುವುದು ಹಾಗೂ ಮನೆಗೆ ಮರಳುವುದು ತಡವಾಗುತ್ತದೆ. ಹೀಗಾಗಿ ಕೂಡಲೇ ತಾತ್ಕಾಲಿಕ ಸೇತುವೆ ಮರು ನಿರ್ಮಾಣ ಮಾಡುವಂತೆ ಜನ ಆಗ್ರಹಿಸಿದ್ದಾರೆ.

  • ದಿನ ಹಿಂಸೆ ನೀಡುತ್ತಿದ್ದಕ್ಕೆ ಡಬಲ್ ಮರ್ಡರ್ – 24 ಗಂಟೆಯಲ್ಲಿ ಕೊಲೆಗಾರನ ಬಂಧನ

    ದಿನ ಹಿಂಸೆ ನೀಡುತ್ತಿದ್ದಕ್ಕೆ ಡಬಲ್ ಮರ್ಡರ್ – 24 ಗಂಟೆಯಲ್ಲಿ ಕೊಲೆಗಾರನ ಬಂಧನ

    – ಕೊಲೆ ಮಾಡಿ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದ

    ಮಂಡ್ಯ: ಇಟ್ಟಿಗೆ ಕಾರ್ಖಾನೆಯಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಮೇಶ್ ಬಂಧಿತ ಆರೋಪಿ. ಈತ ಮಂಡ್ಯದ ಕಾಳೇನಹಳ್ಳಿಯಲ್ಲಿ ಸೆ.4ರಂದು ಬಸವರಾಜು ಮತ್ತು ರಾಮಮೂರ್ತಿ ಇಬ್ಬರನ್ನು ಕೊಲೆ ಮಾಡಿದ್ದನು. ಘಟನೆ ನಡೆದ 24 ಗಂಟೆಯಲ್ಲಿ ಮಂಡ್ಯದ ಗ್ರಾಮಾಂತರ ಪೊಲೀಸರು ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಸೆ.4ರಂದು ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆ ಬಳಿ ಇದ್ದ ಇಟ್ಟಿಗೆ ಕಾರ್ಖಾನೆಯಲ್ಲಿ ಜೋಡಿ ಕೊಲೆ ನಡೆದಿತ್ತು. ಮಲಗಿದ್ದ ಇಬ್ಬರು ಕಾರ್ಮಿಕರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಬಸವರಾಜು ಮತ್ತು ತುಮಕೂರು ಮೂಲದ ರಾಮಮೂರ್ತಿ ಕಾರ್ಮಿಕರ ಬರ್ಬರ ಹತ್ಯೆಯಾಗಿತ್ತು. ಈ ಸಂಬಂಧ ಮಂಡ್ಯದ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಶೀಘ್ರವಾಗಿ ಕೊಲೆ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದರು.

    ಪ್ರಕರಣ ದಾಖಲಿಸಿಕೊಂಡಿದ್ದ ಮಂಡ್ಯದ ಗ್ರಾಮಾಂತರ ಠಾಣಾ ಪೊಲೀಸರು ಒಂದೇ ದಿನದಲ್ಲಿ ಜೋಡಿ ಕೊಲೆ ಆರೋಪಿಯನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಕಾರ್ಮಿಕ ಚಿಕ್ಕಮಗಳೂರು ಜಿಲ್ಲೆಯ ಕೋಡಿಹಳ್ಳಿ ಗ್ರಾಮದ ರಮೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ದಿನ ಈತ ಕೂಡ ಅವರ ಜೊತೆಯಲ್ಲಿ ಮಲಗಿದ್ದ. ಈತನೇ ಬೆಳಗ್ಗೆ ಪೊಲೀಸರಿಗೆ ಕೊಲೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದ.

    ಬದುಕುಳಿದ್ದ ಈತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದನಂತೆ ಸತ್ಯ ಬಾಯ್ಬಿಟ್ಟಿದ್ದಾನೆ. ಆ ದಿನ ಕೊಲೆಯಾದ ಇಬ್ಬರಿಗೂ ಮದ್ಯ ಕುಡಿಸಿ ಮಲಗಿದ್ದಾಗ ಹಾರೆಯಿಂದ ಹಲ್ಲೆ ಮಾಡಿ ಸಾಯಿಸಿರುವುದಾಗಿ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಈ ಹಿಂದೆ ಕೂಡ ಇಬ್ಬರು ಹಲವಾರು ಬಾರಿ ಮದ್ಯ ಸೇವಿಸಿ ಬಂದು ತನಗೆ ಕಿರುಕುಳ ನೀಡಿದ್ದರು. ಇದಕ್ಕಾಗಿ ನಾನು ಇವರನ್ನು ಕೊಲೆ ಮಾಡಿದೆ ಎಂದು ವಿಚಾರಣೆ ಒಪ್ಪಿಕೊಂಡಿದ್ದಾನೆ ಎಂದು ಮಂಡ್ಯ ಎಸ್‍ಪಿ ತಿಳಿಸಿದ್ದಾರೆ.

    ಜೋಡಿ ಕೊಲೆ ಪ್ರಕರಣದಲ್ಲಿ ಮಂಡ್ಯದ ಗ್ರಾಮಾಂತರ ಪೊಲೀಸರು ಕೇವಲ ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ತಮ್ಮ ಸಿಬ್ಬಂದಿ ಕೆಲಸವನ್ನು ಶ್ಲಾಘಿಸಿದ್ದಾರೆ.

  • ಹಾಸನದ ಹಿಮತ್ ಸಿಂಗ್ ಕಾರ್ಖಾನೆಯ 130 ಕಾರ್ಮಿಕರಿಗೆ ಸೋಂಕು

    ಹಾಸನದ ಹಿಮತ್ ಸಿಂಗ್ ಕಾರ್ಖಾನೆಯ 130 ಕಾರ್ಮಿಕರಿಗೆ ಸೋಂಕು

    – ಯಾವುದೇ ಚಿಕಿತ್ಸೆಯಿಲ್ಲದೇ ನೆಲದಲ್ಲಿ ಮಲಗಿರುವ ಕಾರ್ಮಿಕರು

    ಹಾಸನ: ಜಿಲ್ಲೆಯ ಹಿಮತ್ ಸಿಂಗ್ ಕಾರ್ಖಾನೆಯ 130 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹಾಸನ ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿದೆ.

    ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾರ್ಖಾನೆಯ ಕಾರ್ಮಿಕರನ್ನು ಕೊರೊನಾ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈ ವರದಿಯಲ್ಲಿ ಸುಮಾರು 130 ಜನರಿಗೆ ಕೊರೊನಾ ಸೋಂಕು ಇರುವುದು ಕಂಡು ಬಂದಿದೆ. ಸದ್ಯ ಈ ಕಾರ್ಖಾನೆಯಲ್ಲಿ 2,500ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದು, ಮತ್ತಷ್ಟು ಸೋಂಕು ಹೆಚ್ಚಾಗುವ ಲಕ್ಷಣ ಕಂಡು ಬಂದಿದೆ.

    ಈ ಕಾರ್ಖಾನೆಯ ಕೇವಲ 420 ಜನರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಇವರ ಪೈಕಿ ಬರೋಬ್ಬರಿ 130 ಜನಿರಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೂ ಸಾವಿರಾರು ಕಾರ್ಮಿಕರಿಗೆ ಕೊರೊನಾ ಟೆಸ್ಟ್ ಬಾಕಿಯಿದ್ದು, ಸೋಂಕು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಈಗ ಪಾಸಿಟಿವ್ ಬಂದಿರುವ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ.

    ಕೊರೊನಾ ಸೋಂಕು ಕಂಡು ಬಂದ ಕಾರ್ಮಿಕರನ್ನು ಯಾವುದೇ ಚಿಕಿತ್ಸೆ ಇಲ್ಲದೆ ನೆಲದ ಮೇಲೆ ಮಲಗಿಸಲಾಗಿದೆ. ಒಂದೇ ಹಾಲ್‍ನಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಬಂದ ಕಾರ್ಮಿಕರನ್ನು ಕೂಡಿಹಾಕಲಾಗಿದೆ. ಕನಿಷ್ಟ ವ್ಯವಸ್ಥೆಯೂ ಇಲ್ಲದೇ ಕಂಗಾಲದ ಕಾರ್ಮಿಕರು ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಆಸ್ಪತ್ರೆಯ ಗೇಟ್ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಂಡ್ಯದಲ್ಲಿ ಮದ್ಯ ಮಾರಾಟ ಕುಸಿತ

    ಮಂಡ್ಯದಲ್ಲಿ ಮದ್ಯ ಮಾರಾಟ ಕುಸಿತ

    ಮಂಡ್ಯ: ಕೊರೊನಾದಿಂದ ಇಡೀ ದೇಶದಲ್ಲಿ ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಲಾಕ್‍ಡೌನ್ ಆಗಿತ್ತು. ಇದರಿಂದ ವ್ಯಾಪಾರ ವಹಿವಾಟು ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಮದ್ಯ ಮಾರಾಟದಲ್ಲಿ ಇದೀಗ ಸಾಕಷ್ಟು ಇಳಿಮುಖ ಕಂಡಿದೆ. ಸಕ್ಕರೆ ನಾಡು ಮಂಡ್ಯದಲ್ಲೂ ಮದ್ಯ ಮಾರಾಟ ತೀವ್ರವಾದ ಕುಸಿತ ಕಂಡಿದೆ.

    ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟ ಕಡಿಮೆಯಾಗಿದೆ. ಕಳೆದ ಎರಡು ತಿಂಗಳಿನಿಂದ ಸುಮಾರು ಶೇ. 30 ರಿಂದ 40 ರಷ್ಟು ವ್ಯಾಪಾರ ಕುಸಿತ ಕಂಡಿದೆ. ಒಂದು ಕಡೆ ಮಂಡ್ಯ ಜಿಲ್ಲೆಯಲ್ಲಿ ಶೇ.30 ರಿಂದ 40 ರಷ್ಟು ಮದ್ಯ ಮಾರಾಟ ಕಡಿಮೆಯಾಗಿರುವುದರಿಂದ ಬಾರ್ ಮಾಲೀಕರಿಗೆ ನಷ್ಟವಾಗುತ್ತಿದೆ. ಆದರೆ ಇನ್ನೊಂದು ಕಡೆ ಜಿಲ್ಲೆಯಲ್ಲಿ ಕುಡುಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕೆಲ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

    ಬಾರ್ ಮಾಲೀಕರು ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಯಾರು ಕೂಡ ಜಿಲ್ಲೆಯಲ್ಲಿ ಇಲ್ಲ. ಅಲ್ಲದೇ ಮದ್ಯದ ಬೆಲೆ ಹೆಚ್ಚಿದ ಕಾರಣ ಹೆಚ್ಚು ಕುಡಿಯುವವರು ಕಡಿಮೆ ಕುಡಿಯುತ್ತಿದ್ದಾರೆ. ಇದರಿಂದ ಮದ್ಯ ಮಾರಾಟ ಕಡಿಮೆ ಆಗಿದೆ ಎಂದು ಹೇಳಿದ್ದಾರೆ.

    ಲಾಕ್‍ಡೌನ್ ಇದ್ದ ವೇಳೆ ಮದ್ಯ ಪ್ರಿಯರು ನಮಗೆ ಬಾರ್‌ಗಳನ್ನು ಮಾತ್ರ ತೆರೆಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು. ಸತತ ಎರಡು ತಿಂಗಳ ಬಳಿಕ ಅಂದರೆ ಮೇ 4 ರಂದು ರಾಜ್ಯದ ಎಲ್ಲಾ ಬಾರ್‌ಗಳು ಓಪನ್ ಆಗಿದ್ದವು. ಈ ವೇಳೆ ಮದ್ಯ ಪ್ರಿಯರು ಕ್ಯೂ ನಿಂತುಕೊಂಡು ತಮಗೆ ಬೇಕಾದಷ್ಟು ಮದ್ಯವನ್ನು ಖರೀದಿ ಮಾಡಿದ್ದರು. ಈ ವೇಳೆ ಒಂದು ವಾರದ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು. ಆದರೆ ಇದೀಗ ಮದ್ಯ ಮಾರಾಟ ಕುಸಿತ ಕಂಡಿದೆ.

  • ಕಾಫಿನಾಡ ಏಕೈಕ ಕಾರ್ಖಾನೆಗೆ ಬೀಗ- ಕಾರ್ಮಿಕರು ಅತಂತ್ರ

    ಕಾಫಿನಾಡ ಏಕೈಕ ಕಾರ್ಖಾನೆಗೆ ಬೀಗ- ಕಾರ್ಮಿಕರು ಅತಂತ್ರ

    ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದ್ದ ಕಾಫಿನಾಡ ಏಕೈಕ ಕಾರ್ಖಾನೆ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್‍ಗೆ ಬೀಗ ಬೀಳುವ ಕಾಲ ಸನ್ನಿಹಿತವಾಗಿದ್ದು, ಕಾರ್ಖಾನೆಯನ್ನು ನೆಚ್ಚಿಕೊಂಡು ನಾಲ್ಕೈದು ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ.

    ಪ್ರಸ್ತುತ ಕಾರ್ಖಾನೆಯಲ್ಲಿ 60 ಜನ ಪರ್ಮೆಂಟ್ ಉದ್ಯೋಗಿಗಳು, 12 ಜನ ಟ್ರೈನಿಸ್, 10 ಆಫೀಸರ್ಸ್ ಸೇರಿದಂತೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ 180 ಕಾರ್ಮಿಕರು ಕಾರ್ಖಾನೆಯಿಂದ ಬದುಕು ಕಟ್ಟಿಕೊಂಡಿದ್ದರು. ಆದರೀಗ ಕಾರ್ಖಾನೆಗೆ ಬೀಗ ಬೀಳುತ್ತೆಂದು ನೌಕರರು ಕಂಗಾಲಾಗಿದ್ದಾರೆ. ಕಂಪನಿಯನ್ನು ಅವಲಂಬಿಸಿ 20ಕ್ಕೂ ಹೆಚ್ಚು ಫೆಲ್ಟಿಂಗ್ ಅಂಗಡಿಗಳೂ ಇವೆ. ಈಗ ಕಂಪನಿಗೆ ಬೀಗ ಬೀಳುತ್ತೆಂದು ಎಲ್ಲರೂ ಅತಂತ್ರರಾಗಿದ್ದಾರೆ.

    1984ನೇ ಇಸವಿಯಿಂದಲೂ ಕೂಡ ನೌಕರರು ಈ ಕಾರ್ಖಾನೆಯನ್ನು ಬೆಮೆಲ್ ಕಂಪನಿ ಜೊತೆ ವೀಲಿನ ಮಾಡಿಕೊಳ್ಳುವಂತೆ ನೌಕರರು ಮನವಿ ಹಾಗೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ದಿ.ಸಂಸದ ಡಿ.ಸಿ.ಶ್ರೀಕಂಠಪ್ಪ ಕೂಡ ಕಾರ್ಖಾನೆಯನ್ನ ಬೆಮೆಲ್‍ಗೆ ಸೇರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. 1992ರಿಂದ ಕಾರ್ಖಾನೆ ಸಾಕಷ್ಟು ಲಾಭ ಕಂಡಿತ್ತು. ಟ್ಯಾಕ್ಸ್ ಪೇ ಮಾಡ್ತಿದ್ದ ಸಂಸ್ಥೆ 2003ರಲ್ಲಿ ಬಿ.ಎಫ್.ಆರ್ ನಿಂದ ಹೊರಕ್ಕೆ ಬಂದಿತ್ತು. 2017-18ನೇ ಇಸವಿಯಲ್ಲೂ ಕಾರ್ಖಾನೆಗೆ ಸಾಕಷ್ಟು ಲಾಭ ಬಂದಿತ್ತು. ಈ ಕಾರ್ಖಾನೆಯನ್ನ ಸಬ್ಸಿಟ್ಯೂಟ್ ಆಗಿ ಇಟ್ಟುಕೊಂಡಿದ್ದ ಬೆಮೆಲ್‍ಗೆ ಕೇಂದ್ರ ಸರ್ಕಾರದ ನೀತಿ ಆಯೋಗ ಬೆಮೆಲ್‍ಗೆ ವಿಜ್ಞಾನ ಇಂಡಸ್ಟ್ರೀಸ್‍ನ ಮರ್ಜ್ ಮಾಡಿಕೊಳ್ಳುವಂತೆ ಸೂಚಿಸಿತ್ತು.

    ಆದರೆ ಬೆಮಲ್ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಈ ಕಾರ್ಖಾನೆಯನ್ನು ಮರ್ಜ್ ಮಾಡಿಕೊಳ್ಳದ ಬೆಮೆಲ್, ಪ್ರೈವೈಟೈಸ್ ಮಾಡಲು ಟೆಂಡರ್ ಕೂಡ ಕರೆದಿತ್ತು. ಆದರೆ ಟೆಂಡರ್ ಪಡೆಯಲು ಯಾರೂ ಮುಂದೆ ಬಾರದ ಹಿನ್ನೆಲೆ ಇದೀಗ ಈ ಕಾರ್ಖಾನೆಗೆ ಬೀಗ ಬೀಳುವ ಕಾಲ ಸನ್ನಿತವಾಗಿದ್ದು ನೌಕರರು ಅತಂತ್ರಕ್ಕೀಡಾಗಿದ್ದಾರೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ, ನೌಕರರ ನೋವನ್ನ ಅರಿತು, ಕಾರ್ಖಾನೆಯನ್ನ ಬೆಮೆಲ್‍ಗೆ ಮರ್ಜ್ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಕಾಫಿನಾಡಿಗರು ಕೂಡ ಜಿಲ್ಲೆಯಲ್ಲಿರೋ ಏಕೈಕ ಕಾರ್ಖಾನೆಯನ್ನ ಉಳಿಸಿಬೇಕೆಂದು ಆಗ್ರಹಿಸಿದ್ದಾರೆ.