Tag: Women’s World Cup 2022

  • ದಾಖಲೆಯ 7ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸೀಸ್ ಮಹಿಳೆಯರು

    ದಾಖಲೆಯ 7ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸೀಸ್ ಮಹಿಳೆಯರು

    ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್‍ನಲ್ಲಿ ನಡೆಯುತ್ತಿದ್ದ ಮಹಿಳಾ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 71 ರನ್‍ಗಳ ಅಂತರದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಈ ಮೂಲಕ ದಾಖಲೆಯ 7ನೇ ಬಾರಿ ವಿಶ್ವಕಪ್‍ನ್ನು ಎತ್ತಿಹಿಡಿದಿದೆ.

    ಆಸ್ಟ್ರೇಲಿಯಾ ನೀಡಿದ 357 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಮಧ್ಯಮಕ್ರಮಾಂಕದ ಬ್ಯಾಟರ್ ನ್ಯಾಟ್ ಸಿವರ್ ಅಜೇಯ 148 ರನ್ (121 ಎಸೆತ, 15 ಬೌಂಡರಿ, 1 ಸಿಕ್ಸ್) ಹೊರತಾಗಿಯು ಇತರ ಬ್ಯಾಟರ್‌ಗಳ ವೈಫಲ್ಯದಿಂದಾಗಿ 43.4 ಓವರ್‌ಗಳಲ್ಲಿ 285 ರನ್‍ಗಳಿಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ ತಂಡ 71 ರನ್‍ಗಳ ಅಂತರದ ಜಯ ಸಾಧಿಸಿತು. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಧೋನಿ ಸಿಕ್ಸರ್ ಬಾರಿಸಿದ ಬ್ಯಾಟ್

    ಈ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮ್ಯಾನ್‌ಗಳು ಭರ್ಜರಿ ಪ್ರದರ್ಶನ ನೀಡಿ ಫೈನಲ್ ಫೈಟ್ ಹೆಚ್ಚಿಸಿದರು. ರಾಚೆಲ್ ಹೇನ್ಸ್ 68 ರನ್ (93 ಎಸೆತ,7 ಬೌಂಡರಿ) ಮತ್ತು ಬೆತ್ ಮೂನಿ 62 ರನ್ (47 ಎಸೆತ, 8 ಬೌಂಡರಿ) ಸಿಡಿಸಿ ಮಿಂಚಿದರು. ಇವರಿಬ್ಬರಿಗಿಂತಲೂ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದ ಅಲಿಸ್ಸಾ ಹೀಲಿ 170 ರನ್ (138 ಎಸೆತ, 26 ಬೌಂಡರಿ) ಚಚ್ಚಿ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 50 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 356 ರನ್ ಪೇರಿಸಿತು. ಇದನ್ನೂ ಓದಿ: ಕ್ಯಾಮೆರಾಮ್ಯಾನ್‌ಗೆ ಬಡಿದ ತಿಲಕ್ ವರ್ಮಾರ ಬಿಗ್ ಹಿಟ್

    ಈ ಹಿಂದಿನ ಮಹಿಳಾ ವಿಶ್ವಕಪ್ ಇತಿಹಾಸವನ್ನು ಗಮನಿಸಿದಾಗ ಆಸ್ಟ್ರೇಲಿಯಾ ವಿಶ್ವಕಪ್‍ನಲ್ಲಿ 7 ಬಾರಿ ಪ್ರಶಸ್ತಿ ಜಯಿಸಿ ಅತ್ಯಂತ ಯಶಸ್ವಿ ತಂಡವಾಗಿ ಗೋಚರಿಸಿದೆ. ಆ ಬಳಿಕ ಇಂಗ್ಲೆಂಡ್ 4 ಬಾರಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ. ಇನ್ನೂ ಟೀಂ ಇಂಡಿಯಾ 2005 ಮತ್ತು 2017ರಲ್ಲಿ ಫೈನಲ್‍ನಲ್ಲಿ ಸೋತು ರನ್ನರ್ ಅಪ್ ಆಗಿ ತೃಪ್ತಿಪಟ್ಟಿದೆ.

     

  • Women’s World Cup: ಮಹತ್ವದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ

    Women’s World Cup: ಮಹತ್ವದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ

    ಹ್ಯಾಮಿಲ್ಟನ್: ಗೆಲ್ಲಲೇ ಬೇಕಾದ ಮಹತ್ವದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಇದರ ಫಲಿತಾಂಶವಾಗಿ ಬಾಂಗ್ಲಾದೇಶ ವಿರುದ್ಧ 110 ರನ್‍ಗಳ ಜಯ ಗಳಿಸಿದೆ.

    ಗೆಲ್ಲಲು 230 ರನ್‍ಗಳ ಟಾರ್ಗೆಟ್ ಪಡೆದ ಬಾಂಗ್ಲಾ ತಂಡಕ್ಕೆ ಭಾರತದ ಬೌಲರ್‌ಗಳು ಆರಂಭದಿಂದಲೇ ಶಾಕ್ ನೀಡಲು ಆರಂಭಿಸಿದರು. ಪರಿಣಾಮ ಬಾಂಗ್ಲಾದೇಶ 43.3 ಓವರ್‌ಗಳಲ್ಲಿ 119ಕ್ಕೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿದೆ. ಇದನ್ನೂ ಓದಿ: ಧೋನಿಯ ನಂಬಿಕಸ್ಥ ಬೌಲರ್, 2014ರ ಪರ್ಪಲ್ ಕ್ಯಾಪ್ ವಿನ್ನರ್ – ಇದೀಗ ನೆಟ್ ಬೌಲರ್!

    ಬಾಂಗ್ಲಾದೇಶ ಪರ ಮುರ್ಷಿದಾ ಖಾತುನ್ 19 ರನ್ (54 ಎಸೆತ, 1 ಬೌಂಡರಿ, 1 ಸಿಕ್ಸ್), ಲತಾ ಮೊಂಡಲ್ 24 ರನ್ (46 ಎಸೆತ, 2 ಬೌಂಡರಿ) ಮತ್ತು ಸಲ್ಮಾ ಖಾತುನ್ 32 ರನ್ (35 ಎಸೆತ, 4 ಬೌಂಡರಿ) ಹೊರತು ಪಡಿಸಿ ಬೇರೆ ಯಾವೊಬ್ಬ ಬ್ಯಾಟರ್‌ಗಳಿಂದಲೂ ಉತ್ತಮ ಆಟ ಆಡಲು ಸಾಧ್ಯವಾಗಲಿಲ್ಲ. ಭಾರತದ ಬೌಲರ್‌ಗಳ ಬಿಗಿ ದಾಳಿಯ ಮುಂದೆ ಪೆವಿಲಿಯನ್ ಪರೇಡ್ ನಡೆಸಿದ ಬಾಂಗ್ಲಾ ಬ್ಯಾಟರ್‌ಗಳ ಪೈಕಿ ಕೊನೆಯಲ್ಲಿ ರಿತು ಮೋನಿ 16 ರನ್ ಸಿಡಿಸಿ ಔಟ್ ಆಗುವುದರೊಂದಿಗೆ ಅಂತಿಮವಾಗಿ 43.3 ಓವರ್‌ಗಳಲ್ಲಿ 119 ರನ್‍ಗಳಿಗೆ ಗಂಟುಮೂಟೆ ಕಟ್ಟಿತು.

    ಭಾರತದ ಪರ ಸ್ನೇಹ ರಾಣಾ 4 ವಿಕೆಟ್ ಕಿತ್ತು ಮಿಂಚಿದರೆ, ಪೂಜಾ ವಸ್ತ್ರಕರ್ ಮತ್ತು ಜೂಲನ್ ಗೋಸ್ವಾಮಿ ತಲಾ 2 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ್ ಮತ್ತು ಪೂನಂ ಯಾದವ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಇದನ್ನೂ ಓದಿ: ಚಿನ್ನಸ್ವಾಮಿ ಪಿಚ್‍ಗೆ -1 ರೇಟಿಂಗ್ – ಐಸಿಸಿ ಅಸಮಾಧಾನ

    ಟಾಸ್ ಗೆದ್ದ ಭಾರತ ತಂಡ ನಾಯಕಿ ಮಿಥಾಲಿ ರಾಜ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಉತ್ತಮವಾಗಿ ಆಡಿದರು. ಆರಂಭಿಕರಾದ ಸ್ಮೃತಿ ಮಂಧಾನ 30 ರನ್ (51 ಎಸೆತ, 3 ಬೌಂಡರಿ), ಶಫಾಲಿ ವರ್ಮಾ 42 ರನ್ (42 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಮೊದಲ ವಿಕೆಟ್‍ಗೆ 74 ರನ್(90 ಎಸೆತ) ಜೊತೆಯಾಟವಾಡಿದರು.

    ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ 50 ರನ್ (80 ಎಸೆತ, 2 ಬೌಂಡರಿ) ಸಿಡಿಸಿ ಮಿಂಚಿದರು. ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್ 26 ರನ್ (36 ಎಸೆತ, 3 ಬೌಂಡರಿ), ಸ್ನೇಹ ರಾಣಾ 27 ರನ್ (23 ಎಸೆತ, 2 ಬೌಂಡರಿ) ಬಾರಿಸಿ ತಂಡಕ್ಕೆ ಆಧಾರವಾದರು. ಕೊನೆಯಲ್ಲಿ ಪೂಜಾ ವಸ್ತ್ರಕರ್ ಅಜೇಯ 30 ರನ್ (33 ಎಸೆತ, 2 ಬೌಂಡರಿ) ಚಚ್ಚಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 229 ರನ್ ಪೇರಿಸಿತು.

  • ಸ್ಮೃತಿ ಮಂದಾನ, ಕೌರ್ ಶತಕದ ವೈಭವ – ವಿಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಸ್ಮೃತಿ ಮಂದಾನ, ಕೌರ್ ಶತಕದ ವೈಭವ – ವಿಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ವೆಲ್ಲಿಂಗ್ಟನ್: ಮಹಿಳಾ ವಿಶ್ವಕಪ್‍ನ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾದ ಬ್ಯಾಟರ್‌ಗಳಾದ ಸ್ಮೃತಿ ಮಂದಾನ ಮತ್ತು ಹರ್ಮನ್‍ಪ್ರೀತ್ ಕೌರ್ ಭರ್ಜರಿ ಶತಕದ ನೆರವಿನಿಂದ ಭಾರತ 155 ರನ್‍ಗಳ ಜಯ ಸಾಧಿಸಿದೆ.

    ಟೀಂ ಇಂಡಿಯಾ ನೀಡಿದ 317 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿಂಡೀಸ್ ಬ್ಯಾಟರ್‌ಗಳು 162 ರನ್‌ಗಳಿಗೆ ಸರ್ವಪನತ ಕಂಡು ಸೋಲೊಪ್ಪಿಕೊಂಡರು. ಭಾರತ 155 ರನ್‌ಗಳ  ಜಯದೊಂದಿಗೆ ಕೂಟದ ಎರಡನೇ ಬೃಹತ್ ಮೊತ್ತದ ಜಯ ದಾಖಲಿಸಿದೆ. ಇದನ್ನೂ ಓದಿ: ಡೇ – ನೈಟ್ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಸಜ್ಜು – 2 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಾದಾಟ

    ವೆಸ್ಟ್ ಇಂಡೀಸ್ ತಂಡದ ಆರಂಭಿಕ ಜೋಡಿ, ಡಿಯಾಂಡ್ರಾ ಡಾಟಿನ್ 62 ರನ್ (46 ಎಸೆತ, 10 ಬೌಂಡರಿ, 1 ಸಿಕ್ಸ್) ಮತ್ತು ಹೇಲಿ ಮ್ಯಾಥ್ಯೂಸ್ ಜೋಡಿ 43 ರನ್ (36 ಎಸೆತ, 6 ಬೌಂಡರಿ) ಬಾರಿಸಿ ಮೊದಲ ವಿಕೆಟ್‍ಗೆ 100 ರನ್‍ಗಳ ಜೊತೆಯಾಟವಾಡಿತು. ಈ ಇಬ್ಬರು ಬ್ಯಾಟರ್‌ಗಳು ಔಟ್ ಆದ ಬಳಿಕ ಕುಸಿತ ಕಂಡ ವಿಂಡೀಸ್, ಭಾರತಕ್ಕೆ ಸವಾಲು ಅನಿಸಲೇ ಇಲ್ಲ. ಭಾರತದ ಬೌಲರ್‌ಗಳು ವಿಂಡೀಸ್ ಬ್ಯಾಟರ್‌ಗಳ ವಿಕೆಟ್ ಬೇಟೆಯನ್ನು ಸರಾಗವಾಗಿ ಮುಂದುವರಿಸಿ 162 ರನ್‌ಗಳಿಗೆ ಕಟ್ಟಿಹಾಕಿ ಗೆಲ್ಲುವಂತೆ ಮಾಡಿದರು. ಇದನ್ನೂ ಓದಿ: ಐಸಿಸಿ ಮಹಿಳಾ ವಿಶ್ವಕಪ್ 2022: ಬೃಹತ್ ದಾಖಲೆ ಬರೆದ ಮಿಥಾಲಿ ರಾಜ್

    ಭಾರತದ ಪರ ಸ್ನೇಹ ರಾಣಾ 3 ವಿಕೆಟ್‌ ಕಿತ್ತು ಮಿಂಚಿದರೆ, ಮೇಘನಾ ಸಿಂಗ್  2 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್, ಜೂಲನ್ ಗೋಸ್ವಾಮಿ ತಲಾ 1 ವಿಕೆಟ್ ಪಡೆಯಲು ಯಶಸ್ವಿಯಾದರು.

    ಸ್ಮೃತಿ ಮಂದಾನ, ಕೌರ್ ಬ್ಯಾಟಿಂಗ್ ವೈಭವ:
    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟರ್‌ಗಳು ವಿಂಡೀಸ್ ಬೌಲರ್‌ಗಳ ಬೆವರಿಳಿಸಿದರು. ಅದರಲ್ಲೂ ಸ್ಮೃತಿ ಮಂದಾನ ಮತ್ತು ಹರ್ಮನ್‍ಪ್ರೀತ್ ಕೌರ್ ಮನಸೋ ಇಚ್ಛೆ ಬ್ಯಾಟ್ ಬೀಸಿದರು. ಈ ಜೋಡಿ 4 ವಿಕೆಟ್‍ಗೆ 184 ರನ್ (174 ಎಸೆತ) ಜೊತೆಯಾಟವಾಡಿ ಮಿಂಚಿತು. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಲಸಿತ್‌ ಮಾಲಿಂಗ ನೇಮಕ

    ಸ್ಮೃತಿ ಮಂದಾನ 123 ರನ್ (119 ಎಸೆತ, 13 ಬೌಂಡರಿ, 2 ಸಿಕ್ಸ್) ಚಚ್ಚಿದರೆ, ಹರ್ಮನ್‍ಪ್ರೀತ್ ಕೌರ್ 109 ರನ್ (107 ಎಸೆತ, 10 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಂಡೀಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಇವರಿಬ್ಬರನ್ನು ಹೊರತುಪಡಿಸಿ ಯಾಸ್ತಿಕಾ ಭಾಟಿಯಾ 31 ರನ್ (21 ರನ್, 21 ಎಸೆತ, 6 ಬೌಂಡರಿ) ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ 50 ಓವರ್‌ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 317 ರನ್ ಗಳಿಸಿತು.

    ರನ್ ಏರಿದ್ದು ಹೇಗೆ?
    50 ರನ್ 42 ಎಸೆತ
    100 ರನ್ 121 ಎಸೆತ
    150 ರನ್ 169 ಎಸೆತ
    200 ರನ್ 217 ಎಸೆತ
    250 ರನ್ 251 ಎಸೆತ
    300 ರನ್ 287 ಎಸೆತ