Tag: Women’s Team

  • ಟೀಂ ಇಂಡಿಯಾ ಪರ ಐತಿಹಾಸಿಕ ದಾಖಲೆ ನಿರ್ಮಿಸಿದ  ಸ್ಮೃತಿ ಮಂದಾನ

    ಟೀಂ ಇಂಡಿಯಾ ಪರ ಐತಿಹಾಸಿಕ ದಾಖಲೆ ನಿರ್ಮಿಸಿದ ಸ್ಮೃತಿ ಮಂದಾನ

    ವೆಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮಹಿಳಾ ಟಿ20ಯ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ಕೇವಲ 24 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

    ಟೀಂ ಇಂಡಿಯಾ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ದಾಖಲಾದ ವೇಗದ ಅರ್ಧ ಶತಕ ಇದಾಗಿದ್ದು, ಈ ಮೂಲಕ ಮಂದಾನ ದಾಖಲೆ ಬರೆದಿದ್ದಾರೆ. ಆದರೆ ಮಂದಾನರ ಬಿರುಸಿನ ಆಟದ ಬಳಿವೂ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಪಂದ್ಯದಲ್ಲಿ 34 ಎಸೆತಗಳನ್ನ ಎದುರಿಸಿದ ಮಂದಾನ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ತಂಡದ ಗೆಲುವಿಗೆ 58 ರನ್ ಗಳ ಅಗತ್ಯವಿತ್ತು. 102 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 34 ರನ್ ಕಲೆ ಹಾಕಲು ಮಾತ್ರ ಶಕ್ತವಾಯಿತು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಸಿಡಿಸಿತ್ತು. ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ತಂಡ 19.1 ಓವರ್ ಗಳಲ್ಲಿ 136 ರನ್ ಗಳಿಗೆ ಅಲೌಟ್ ಆಗುವ ಮೂಲಕ 23 ರನ್ ಗಳ ಸೋಲುಂಡಿತು. ಇದರೊಂದಿಗೆ ಏಕದಿನ ಕ್ರಿಕೆಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಸಂಭ್ರಮಿಸಿದ್ದ ಟೀಂ ಇಂಡಿಯಾ ಮಹಿಳಾ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲಿನ ಆರಂಭ ಮಾಡಿದೆ.

    ಉಳಿದಂತೆ ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಮಂದಾನ ನಂ.1 ಸ್ಥಾನ ಪಡೆದಿದ್ದರು. 2018 ಬಳಿಕ 15 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಮಂದಾನ 2 ಶತಕ ಹಾಗೂ 8 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಐಸಿಸಿ ಘೋಷಣೆ ಮಾಡಿದ್ದ 2018ರ ರ ವಾರ್ಷಿಕ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು. 22 ವರ್ಷದ ಮಂದಾನ 47 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 1,798 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 14 ಅರ್ಧ ಶತಕಗಳು ಸೇರಿದೆ. ಉಳಿದಂತೆ 52 ಟಿ20 ಪಂದ್ಯಗಳನ್ನು ಆಡಿದ್ದು, 6 ಅರ್ಧ ಶತಕಗಳೊಂದಿಗೆ 1,046 ರನ್ ಸಿಡಿಸಿದ್ದಾರೆ. 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವಿವಾದ ರಹಿತ ಕೋಚ್ ಸಿಗುವರೆ ಮಹಿಳಾ ಕ್ರಿಕೆಟ್ ತಂಡಕ್ಕೆ?

    ವಿವಾದ ರಹಿತ ಕೋಚ್ ಸಿಗುವರೆ ಮಹಿಳಾ ಕ್ರಿಕೆಟ್ ತಂಡಕ್ಕೆ?

    ಮುಂಬೈ: ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂಗತಿ ಮತ್ತೊಮ್ಮೆ ಮಿಥಾಲಿ ರಾಜ್ ಹಾಗೂ ಪವರ್ ನಡುವಿನ ವಿವಾದಲ್ಲಿ ಮತ್ತೆ ಬಹಿರಂಗವಾಗಿತ್ತು. ಈ ನಡುವೆ ಬಿಸಿಸಿಐ ಪವರ್ ಅವರ ಅವಧಿ ಅಂತ್ಯವಾಗುತ್ತಿದಂತೆ ಹೊಸ ಕೋಚ್ ಗಾಗಿ ಅರ್ಜಿ ಸಲ್ಲಿಸಲು ಅಹ್ವಾನ ನೀಡಿದೆ.

    ಭಾರತದಲ್ಲಿ ಪುರುಷರ ಕ್ರಿಕೆಟಿಗೆ ಹೆಚ್ಚಿನ ಬೆಂಬಲ ಲಭಿಸುತ್ತದೆ. ಮಹಿಳಾ ಕ್ರಿಕೆಟ್‍ಗೆ ಬೆಂಬಲ ಕಡಿಮೆ ಎಂಬ ಅಭಿಪ್ರಾಯವಿತ್ತು. ಆದರೆ ಇತ್ತೀಚೆಗೆ ಮಹಿಳಾ ಕ್ರಿಕೆಟ್ ತಂಡದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಆದರೆ ಆಟಗಾರ್ತಿಯರು ಕೋಚ್ ನಡುವಿನ ಗುದ್ದಾಟ ಮಾತ್ರ ತಂಡದ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದು ಹೇಳಬಹುದು. ವಿಶ್ವಕಪ್ ಲೀಗ್ ಹಂತದಲ್ಲಿ ಸೋಲಿಲ್ಲದ ತಂಡವಾಗಿ ಸೆಮಿಫೈನಲ್ ಪ್ರವೇಶ ಮಾಡಿದ್ದ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದಕ್ಕೆ ಆಡುವ 11 ಬಳಗದಿಂದ ಮಿಥಾಲಿ ರಾಜ್ ರನ್ನು ಕೈಬಿಟ್ಟಿದೆ ಕಾರಣ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

    ಇದರ ಬೆನ್ನಲ್ಲೇ ಬಿಸಿಸಿಐಗೆ ಪತ್ರ ಬರೆದಿದ್ದ ಮಿಥಾಲಿರಾಜ್ ಕೋಚ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಗೆ ರಮೇಶ್ ಪವರ್ ಕೂಡ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡಿದ್ದರು. ಅಲ್ಲದೇ ಮಿಥಾಲಿ ರಾಜ್ ಇದು ನನ್ನ ಜೀವನದ ಕರಾಳ ದಿನ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಹಿಂದೆ ತಂಡದ ಕೋಚ್ ಆಗಿದ್ದ ತುಷಾರ ಆರೋತೆ ಕೂಡ ಇಂತಹದ್ದೇ ವಿವಾದಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದರು.

    ಈ ಘಟನೆಗಳ ಬಳಿಕ ಬಿಸಿಸಿಐ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರದಲ್ಲಿ ಜಾಗೃತಿ ವಹಿಸಬೇಕಿದೆ. ಪವರ್ ಅವರ ಮೂರು ತಿಂಗಳ ಕೋಚ್ ಅವಧಿ ಅಂತ್ಯವಾಗಿದ್ದು, ಬಿಸಿಸಿಐ ಆಹ್ವಾನ ನೀಡಿರುವ ಹುದ್ದೆಗೆ ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಟಾಮ್ ಮೂಡಿ, ಡೇವ್ ವಾಟ್ಮೋರ್ ಅರ್ಜಿ ಸಲ್ಲಿಸಲು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

    ಇದೇ ವೇಳೆ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ವಿದೇಶಿ ಕೋಚ್ ನೇಮಕ ಮಾಡುವ ಬಗ್ಗೆ ಹಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಮೂಡಿ ಅವರು ಈ ಪಟ್ಟಿಯಲ್ಲಿ ಇದ್ದು, ಹಲವು ತಂಡಗಳಿಗೆ ಕೋಚಿಂಗ್ ನೀಡಿದ ಅನುಭವ ಹೊಂದಿದ್ದಾರೆ. ಉಳಿದಂತೆ ವಾಟ್ಮೋರ್ ಕೂಡ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಅನುಭವ ಹೊಂದಿದ್ದಾರೆ. ಟೀಂ ಇಂಡಿಯಾ ಮಹಿಳಾ ತಂಡ ಜನವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಮುನ್ನವೇ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 2021 ಮಹಿಳಾ ವಿಶ್ವಕಪ್ ಆಡಲಿದ್ದಾರಾ ಮಿಥಾಲಿ ರಾಜ್?

    2021 ಮಹಿಳಾ ವಿಶ್ವಕಪ್ ಆಡಲಿದ್ದಾರಾ ಮಿಥಾಲಿ ರಾಜ್?

    ನವದೆಹಲಿ: 2021 ಮಹಿಳಾ ವಿಶ್ವಕಪ್ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವುದಕ್ಕೆ ಭಾರತದ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

    ಮುಂದಿನ ವಿಶ್ವಕಪ್ ಆಡುವುದರ ಬಗ್ಗೆ ಸದ್ಯ ನಾನು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ, ಆದರೆ ಮುಂದಿನ ಮೂರು ವರ್ಷಗಳು ನಿರಂತವಾಗಿ ಕ್ರಿಕೆಟ್ ಆಡಿದರೆ ಮಾತ್ರ ನನ್ನ ವೃತ್ತಿ ಜೀವನದಲ್ಲಿ ನಾಲ್ಕನೇ ವಿಶ್ವಕಪ್ ಸರಣಿಯನ್ನು ಆಡಲು ಸಾಧ್ಯ ಎಂದು ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ 34 ವರ್ಷದ ಮಿಥಾಲಿ ರಾಜ್ ಹೇಳಿದ್ದಾರೆ.

    ಕಳೆದ ಜೂನ್-ಜುಲೈನಲ್ಲಿ ನಡೆದ ವಿಶ್ವಕಪ್ ಸರಣಿಯಲ್ಲಿ ಭಾಗವಹಿಸುವ ಮುನ್ನ ತಮ್ಮ ನಿವೃತ್ತಿಯ ಕುರಿತು ಹೇಳಿಕೆ ನೀಡಿದ್ದ ಮಿಥಾಲಿ ರಾಜ್, ಇದೇ ನನ್ನ ಕೊನೆಯ ವಿಶ್ವಕಪ್ ಸರಣಿ ಎಂದು ತಿಳಿಸಿದ್ದರು.

    ವಿಶ್ವ ಮಹಿಳಾ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್‍ಗಳನ್ನು ಗಳಿಸಿರುವ ದಾಖಲೆಯನ್ನು ಹೊಂದಿರುವ ಅವರು, ತಮ್ಮ ಮುಂದಿನ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಅದರಲ್ಲಿಯು ಆಟಗಾರರಿಗೆ ತಮ್ಮ ಫಾರ್ಮ್ ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದ್ದು, ಈ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ. ಈ ಮಧ್ಯೆ 2018 ರ ಟಿ-20 ವಿಶ್ವಕಪ್ ಸೇರಿದಂತೆ ಹಲವು ಸರಣಿಗಳಲ್ಲಿ ಭಾಗವಹಿಸಬೇಕಿದೆ ಎಂದು ಹೇಳಿದರು.

    ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡವು ಮುಂದಿನ ಫೆಬ್ರವರಿಯವರೆಗೆ ಯಾವುದೇ ಕ್ರಿಕೆಟ್ ಸರಣಿಗಳನ್ನು ಹೊಂದಿಲ್ಲ. ಕಳೆದ ಬಾರಿಯ ವಿಶ್ವಕಪ್‍ನಲ್ಲಿ ಮಿಥಾಲಿ ರಾಜ್ ಸೇರಿದಂತೆ ಹಲವು ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

    ಅಭಿಮಾನಿಗಳಿಂದ ಬಂದ ಪ್ರಶಂಸೆಯ ಕುರಿತು ಹರ್ಷವನ್ನು ವ್ಯಕ್ತಪಡಿಸಿದ ಅವರು ಪುರುಷ ಕ್ರಿಕೆಟರ್‍ಗಳೊಂದಿಗೆ ಹೊಲಿಕೆ ಮಾಡುತ್ತಿದ್ದಾರೆ. ಆದರೆ ಮಹಿಳಾ ಕ್ರಿಕೆಟರ್‍ಗಳಿಗೆ ಹೆಚ್ಚಿನ ತರಬೇತಿ ನೀಡುವುದು ಮುಖ್ಯವಾಗುತ್ತದೆ. ಜನರು ಹೆಚ್ಚು ಮಹಿಳಾ ಕ್ರಿಕೆಟ್ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

    ಈ ಮಧ್ಯೆ ಡಿಸೆಂಬರ್‍ನಲ್ಲಿ ನಡೆಯುವ ಐಸಿಸಿ ಚಾಂಪಿಯನ್ ಶಿಪ್‍ಗೆ ತಂಡವು ಸಿದ್ಧವಾಗಬೇಕಾಗಿದ್ದು, ಈ ಸರಣಿಯಲ್ಲಿ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದು, ನಂತರ ಫೆಬ್ರವರಿ 5 ರಿಂದ 10 ರವರೆಗೆ ಮೂರು ಪಂದ್ಯಗಳ ಸರಣಿಯನ್ನು ಇದೇ ತಂಡದ ವಿರುದ್ಧ ಆಡಲಿದ್ದಾರೆ.

    ಮಿಥಾಲಿ ರಾಜ್ ಬಿಸಿಸಿಐನ ಮಹಿಳಾ ಕ್ರಿಕೆಟ್ ನ ವಿಶೇಷ ಸಮಿತಿ ಸದಸ್ಯರು ಆಗಿದ್ದು. ಕೆಲ ದಿನಗಳ ಹಿಂದೆ ದೇಶೀಯ ಕ್ರಿಕೆಟ್‍ನಲ್ಲಿ ಹಲವು ಬದಲಾವಣೆಯನ್ನು ಮಾಡಿದ್ದರು. ಯುವ ಆಟಗಾರ್ತಿಯರಿಗೆ ಹೆಚ್ಚಿನ ಬೆಂಬಲ ಹಾಗು ತರಬೇತಿಯನ್ನು ನೀಡುವುದರಿಂದ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶವನ್ನು ಕಲ್ಪಿಸಬಹುದು. ಅಲ್ಲದೇ 20-25 ಮಹಿಳಾ ಕ್ರಿಕೆಟರ್ ಗಳಿಗೆ ಭಾರತದ `ಎ’ ತಂಡದಲ್ಲಿ ಆಡಲು ಅವಕಾಶವನ್ನು ನೀಡಬೇಕು. ಇದರಿಂದಾಗಿ ಆರೋಗ್ಯಕರ ಸ್ಪರ್ಧೆ ಸೃಷ್ಟಿಯಾಗಿ ಮುಂದಿನ ವಿಶ್ವಕಪ್‍ಗೆ ಸಿದ್ಧತೆಯನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

     

    https://www.instagram.com/p/BZb8o6LAW8e/?

    https://www.instagram.com/p/BZT7V5tAGij/?

    https://www.instagram.com/p/BYfVZhjA2G0/?

    https://www.instagram.com/p/BXk5TjUAKIi/?