Tag: Women’s IPL

  • 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

    2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

    ಮುಂಬೈ: ಪುರುಷರ ಐಪಿಎಲ್ ಟೂರ್ನಿ 14 ಆವೃತ್ತಿ ಯಶಸ್ವಿ ಕಂಡು 15ನೇ ಆವೃತ್ತಿ ನಡೆಯುತ್ತಿರುವಂತೆ ಇದೀಗ 2023ರಲ್ಲಿ 6 ತಂಡಗಳೊಂದಿಗೆ ಮಹಿಳಾ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ ಎಂದು ವರದಿಯಾಗಿದೆ.

    ಈ ಹಿಂದೆ 3 ತಂಡಗಳ ನಡುವೆ ಮಹಿಳಾ ಟಿ20 ಚಾಲೆಂಜ್ ಹೆಸರಿನಡಿ ಐಪಿಎಲ್ ವೇಳೆ ಮಹಿಳಾ ತಂಡಗಳನ್ನು ಬಿಸಿಸಿಐ ಆಡಿಸಿತ್ತು. ಆ ಬಳಿಕ 2021ರಲ್ಲಿ ಕೊರೊನಾದಿಂದಾಗಿ ಇದು ರದ್ದುಗೊಂಡಿತ್ತು. ಇದೀಗ ನಡೆಯುತ್ತಿರುವ 15ನೇ ಆವೃತ್ತಿ ಐಪಿಎಲ್‍ನಲ್ಲೂ ಈ ಮಹಿಳಾ ಟಿ20 ಚಾಲೆಂಜ್ ನಡೆಯುತ್ತಿಲ್ಲ. ಆದರೆ 2023ರಲ್ಲಿ ಆರಂಭವಾಗುವ ಐಪಿಎಲ್ ವೇಳೆ 6 ಮಹಿಳಾ ತಂಡಗಳನ್ನು ರಚಿಸಿ ಮಹಿಳಾ ಐಪಿಎಲ್ ಆರಂಭಿಸಲು ಸಿದ್ಧತೆ ಆರಂಭಗೊಂಡಿದೆ ಎಂದು ಬಿಸಿಸಿಐ ಮೂಲಗಳು ಖಚಿತ ಪಡಿಸಿದೆ. ಇದನ್ನೂ ಓದಿ: 6 ಸಿಕ್ಸ್, 8 ಫೋರ್ ಚಚ್ಚಿ ಮಿಲ್ಲರ್ ಮಿಂಚಿಂಗ್ – ಗುಜರಾತ್‍ಗೆ ರೋಚಕ ಜಯ

    ಈಗಾಗಲೇ ಮಹಿಳಾ ಐಪಿಎಲ್ ಟೂರ್ನಿ ಬಗ್ಗೆ ಮಾತುಕತೆ ನಡೆದಿದ್ದು 6 ತಂಡಗಳ ರಚನೆಗೆ ರೂಪುರೇಷೆ ಸಿದ್ಧಗೊಂಡಿದೆ. ಜೊತೆಗೆ ಇದೀಗ ಪುರುಷರ ಐಪಿಎಲ್‍ನಲ್ಲಿರುವ ಕೆಲ ಫ್ರಾಂಚೈಸ್‍ಗಳು ಮಹಿಳಾ ಐಪಿಎಲ್ ತಂಡ ಕಟ್ಟಲು ತಯಾರಾಗಿದೆ. ಹಾಗಾಗಿ ಮುಂದಿನ ವರ್ಷದಿಂದ ಮಹಿಳಾ ಐಪಿಎಲ್ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಪರ ಟಿ20 ವಿಶ್ವಕಪ್ ಆಡುವರೇ ದಿನೇಶ್ ಕಾರ್ತಿಕ್?

    ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಆಯೋಜಿಸುವ ಬಿಗ್‍ಬಾಶ್ ಲೀಗ್ ವೇಳೆ ಮಹಿಳಾ ಬಿಗ್‍ಬಾಶ್ ಲೀಗ್ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಐಪಿಎಲ್‍ನಲ್ಲೂ ಮಹಿಳಾ ತಂಡಗಳನ್ನು ಆಡಿಸುವ ಲೆಕ್ಕಾಚಾರದಲ್ಲಿ ಬಿಸಿಸಿಸಿ ಇದೆ. ಬಿಗ್‍ಬಾಶ್‍ನಲ್ಲಿ ಭಾರತೀಯ ಮಹಿಳಾ ಆಟಗಾರರು ಕೂಡ ಭಾಗವಹಿಸಿದ್ದಾರೆ. ಅದೇ ರೀತಿ 2023ರಲ್ಲಿ ವಿದೇಶಿ ಆಟಗಾರರನ್ನು ಬರಮಾಡಿಕೊಂಡು ಮಹಿಳಾ ಐಪಿಎಲ್ ನಡೆಸಲು ಸಿದ್ಧತೆ ಆರಂಭಗೊಂಡಿದೆ ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

     

  • 2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ

    2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ

    ನವದೆಹಲಿ: 2023 ರ ವೇಳೆಗೆ ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸಲು ಬಿಸಿಸಿಐ ಯೋಜಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಹೇಳಿದ್ದಾರೆ.

    ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸದಿದ್ದಕ್ಕಾಗಿ ಈ ಹಿಂದೆ ಟೀಕೆಗೊಳಗಾದ ಬಿಸಿಸಿಐ, ಮುಂದಿನ ಋತುವಿನಲ್ಲಿ ಲೀಗ್ ಅನ್ನು ಪ್ರಾರಂಭ ಮಾಡಲು ಎಜಿಎಂ ಅನುಮೋದನೆಯ ಅಗತ್ಯವಿದೆ. 2023ರಲ್ಲಿ ಪ್ರಾರಂಭವಾಗುವ ಲೀಗ್‍ನ ಉದ್ಘಾಟನಾ ಆವೃತ್ತಿಯಲ್ಲಿ ಐದು ಅಥವಾ ಆರು ತಂಡಗಳನ್ನು ಹೊಂದಲು ಮಂಡಳಿಯು ಯೋಜಿಸುತ್ತಿದೆ.

    ಶುಕ್ರವಾರ ಇಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಅನ್ನು ಎಜಿಎಂ ಅನುಮೋದಿಸಬೇಕಾಗಿದೆ. ಮುಂದಿನ ವರ್ಷದ ವೇಳೆಗೆ ಅದನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ

    ಈ ಹಿಂದೆ ಫೆಬ್ರವರಿಯಂದು ಸಂದರ್ಶನವೊಂದರಲ್ಲಿ ಗಂಗೂಲಿ ಮಹಿಳಾ ಐಪಿಎಲ್ ಅನ್ನು 2023 ರಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.

    ಪುರುಷರ ಐಪಿಎಲ್ ಪ್ಲೇ-ಆಫ್ ಸುತ್ತು ಪ್ರಾರಂಭವಾಗುವ ಮೊದಲು ಮೂರು ಮಹಿಳಾ ತಂಡಗಳ ನಡುವೆ ಈ ಋತುವಿನಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಪ್ಲೇ-ಆಫ್‍ನ ಸಮಯದಲ್ಲಿ ಮೂರು ತಂಡಗಳನ್ನು ಒಳಗೊಂಡ ನಾಲ್ಕು ಪಂದ್ಯಗಳು ನಡೆಯಲಿವೆ ಎಂದು ಸಭೆಯ ನಂತರ ಹೇಳಿದರು. ಇದನ್ನೂ ಓದಿ: ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿದ ಟಾಪ್ ಮ್ಯಾಚ್‍ಗಳು

    ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್‍ನ ದ್ವಿತೀಯಾರ್ಧವನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಕಳೆದ ವರ್ಷ ಮಹಿಳಾ ತಂಡಗಳನ್ನು ಆಡಿಸಿರಲಿಲ್ಲ. 2020ರ ಐಪಿಎಲ್‍ನಲ್ಲಿ ಟ್ರೈಲ್‍ಬ್ಲೇಜರ್ಸ್ ತಂಡವು ಪ್ರಶಸ್ತಿಯನ್ನು ಗೆದ್ದಿತ್ತು.

    ಮಹಿಳಾ ತಂಡಗಳ ಆಟಗಳು ಹೆಚ್ಚಾಗಿ ಪುಣೆಯಲ್ಲಿ ನಡೆಯುತ್ತವೆ. ಈ ವರ್ಷದ ಐಪಿಎಲ್ ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ.

  • ಮಂದಾನ ಸೂಪರ್ ಬ್ಯಾಟಿಂಗ್ – ಮೊದಲ ಬಾರಿ ಮಹಿಳಾ ಐಪಿಎಲ್‍ ಟ್ರೋಫಿಗೆ ಮುತ್ತಿಕ್ಕಿದ ಟ್ರೈಲ್‍ಬ್ಲೇಜರ್ಸ್

    ಮಂದಾನ ಸೂಪರ್ ಬ್ಯಾಟಿಂಗ್ – ಮೊದಲ ಬಾರಿ ಮಹಿಳಾ ಐಪಿಎಲ್‍ ಟ್ರೋಫಿಗೆ ಮುತ್ತಿಕ್ಕಿದ ಟ್ರೈಲ್‍ಬ್ಲೇಜರ್ಸ್

    – ಸೋತರು ದಾಖಲೆ ಬರೆದ ರಾಧಾ ಯಾದವ್

    ಶಾರ್ಜಾ: ಇಂದು ನಡೆದ ಮಹಿಳಾ ಐಪಿಎಲ್‍ನ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಟ್ರೈಲ್‍ಬ್ಲೇಜರ್ಸ್ ತಂಡ 16 ರನ್‍ಗಳ ಅಂತರದಲ್ಲಿ ಗೆದ್ದು ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.

    ಶಾರ್ಜಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟ್ರೈಲ್‍ಬ್ಲೇಜರ್ಸ್ ತಂಡ ನಾಯಕಿ ಸ್ಮೃತಿ ಮಂದಾನ ಅವರ ಭರ್ಜರಿ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 118 ರನ್‍ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸೂಪರ್ನೋವಾಸ್ ತಂಡ ಸಲ್ಮಾ ಖತುನ್ ಮತ್ತು ದೀಪ್ತಿ ಶರ್ಮಾ ಅವರ ಬೌಲಿಂಗ್ ದಾಳಿಗೆ ನಲುಗಿ 20 ಓವರಿನಲ್ಲಿ ಏಳು ವಿಕೆಟ್ ಕಳೆದುಕೊಂಡ 102 ರನ್ ಸಿಡಿಸಿ 16 ರನ್‍ಗಳ ಅಂತರದಲ್ಲಿ ಸೋತಿತು.

    ಟ್ರೈಲ್‍ಬ್ಲೇಜರ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಸೂಪರ್ನೋವಾಸ್ ತಂಡಕ್ಕೆ ಸೋಫಿ ಎಕ್ಲೆಸ್ಟೋನ್ ಆರಂಭಿಕ ಆಘಾತ ನೀಡಿದರು. ಉತ್ತಮ ಫಾರ್ಮ್ ನಲ್ಲಿದ್ದ ಚಮರಿ ಅಥಾಪತ್ತು ಅವರನ್ನು ಎರಡನೇ ಓವರಿನಲ್ಲಿ ಔಟ್ ಮಾಡಿದರು. ನಂತರ ಬಂದ ತಾನಿಯಾ ಭಾಟಿಯಾ 20 ಬಾಲಿಗೆ 14 ರನ್ ಸಿಡಿಸಿ ದೀಪ್ತಿ ಶರ್ಮಾ ಅವರಿಗೆ ಔಟ್ ಆದರು. ಇದಾದ ಬಳಿಕ ಜೆಮಿಮಾ ರೊಡ್ರಿಗಸ್ ಅನ್ನು ಕೂಡ ದೀಪ್ತಿ ಶರ್ಮಾ ಅವರು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.

    ನಂತರ ಜೊತೆಯಾದ ನಾಯಕ ಹರ್ಮನ್‍ಪ್ರೀತ್ ಕೌರ್ ಮತ್ತು ಶಶಿಕಲಾ ಸಿರಿವರ್ಧನೆ 38 ಬಾಲಿಗೆ 37 ರನ್‍ಗಳ ಜೊತೆಯಾಟವಾಡಿದರು. ಈ ವೇಳೆ 18 ಬಾಲಿಗೆ 19 ರನ್ ಹೊಡೆದಿದ್ದ ಶಶಿಕಲಾ ಸಲ್ಮಾ ಖತುನ್ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ಕೊನೆಯ ಎರಡು ಓವರಿಗೆ 28 ರನ್ ಬೇಕಾದಾಗ ಅನುಜಾ ಪಾಟೀಲ್ ರನೌಟ್ ಆದರು. ಇದಾದ ನಂತರದ ಬಾಲಿನಲ್ಲೇ 30 ರನ್‍ಗಳಿಸಿದ್ದ ನಾಯಕಿ ಹರ್ಮನ್‍ಪ್ರೀತ್ ಕೌರ್ ಬೌಲ್ಡ್ ಆದರು. ನಂತರ ಬಂದ ಯಾವುದೇ ಆಟಗಾರ್ತಿ ಬ್ಯಾಟ್ ಬೀಸಲಿಲ್ಲ. ಪರಿಣಾಮ ಎರಡು ಭಾರಿ ಚಾಂಪಿಯನ್ ಆದ ಸೂಪರ್ನೋವಾಸ್ ತಂಡ ಸೋತಿತು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟ್ರೈಲ್‍ಬ್ಲೇಜರ್ಸ್ ಆರಂಭದಲ್ಲೇ ಉತ್ತಮವಾಗಿ ಬ್ಯಾಟ್ ಬೀಸಿತ್ತು. ಓಪನರ್ಸ್ ಆಗಿ ಬಂದ ದಿಯಾಂಡ್ರಾ ಡೊಟಿನ್ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ 49 ಬಾಲಿಗೆ ಐದು ಬೌಂಡರಿ ಮತ್ತು ಮೂರು ಸಿಕ್ಸ್ ಸಮೇತ 68 ರನ್ ಸಿಡಿಸಿದ್ದ ಮಂದಾನ ಔಟ್ ಆದ ನಂತರ ಟ್ರೈಲ್‍ಬ್ಲೇಜರ್ಸ್ ರಾಧಾ ಯಾದವ್ ಬೌಲಿಂಗ್ ದಾಳಿಗೆ ಸಿಲುಕಿ ಉತ್ತಮ ಆರಂಭ ಪಡೆದರೂ 118 ರನ್‍ಗಳ ಸಾಧಾರಣ ಗುರಿ ನೀಡಿತ್ತು.

    ರಾಧಾ ಯಾದವ್ ದಾಖಲೆ
    ಇಂದಿನ ಪಂದ್ಯದಲ್ಲಿ ಸೂಪರ್ನೋವಾಸ್ ತಂಡದ ಸ್ಪಿನ್ನರ್ ರಾಧಾ ಯಾದವ್ ಉತ್ತಮವಾಗಿ ಬೌಲ್ ಮಾಡಿ ದಾಖಲೆ ಬರೆದಿದ್ದಾರೆ. ಇಂದಿನ ಪಂದ್ಯದಲ್ಲಿ ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ರಾಧಾ ಯಾದವ್ ಕೇವಲ 16 ರನ್ ನೀಡಿ ಐದು ವಿಕೆಟ್ ಪಡೆದರು. ಈ ಮೂಲಕ ವುಮೆನ್ಸ್ ಐಪಿಎಲ್‍ನಲ್ಲಿ ಐದು ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು.

  • ಕೊನೆಯ ಬಾಲ್‍ನಲ್ಲಿ ರೋಚಕವಾಗಿ ಗೆದ್ದ ಕೌರ್ ಪಡೆ

    ಕೊನೆಯ ಬಾಲ್‍ನಲ್ಲಿ ರೋಚಕವಾಗಿ ಗೆದ್ದ ಕೌರ್ ಪಡೆ

    – ಗೆಲುವಿನ ಸನಿಹದಲ್ಲಿ ಮುಗ್ಗರಿಸಿದ ಸ್ಮೃತಿ ಮಂಧಾನ ತಂಡ

    ಶಾರ್ಜಾ: ಇಂದು ನಡೆದ ಮಹಿಳಾ ಐಪಿಎಲ್-2020ಯ ಮೂರನೇ ಪಂದ್ಯದಲ್ಲಿ ಹರ್ಮನ್‍ಪ್ರೀತ್ ಕೌರ್ ನೇತೃತ್ವದ ಸೂಪರ್ನೋವಾಸ್ ತಂಡ ಎರಡು ರನ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ. ಗೆಲುವಿನ ಸನಿಹದಲ್ಲಿದ್ದ ಸ್ಮೃತಿ ಮಂಧಾನ ನೇತೃತ್ವದ ತಂಡ ಸೋತಿದೆ.

    ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೂಪರ್ನೋವಾಸ್ ತಂಡ ಆರಂಭಿಕ ಆಟಗಾರ್ತಿ ಚಮರಿ ಅಟಪಟ್ಟು ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ 146 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಟ್ರೈಲ್‍ಬ್ಲೇಜರ್ಸ್ ತಂಡ ತೀವ್ರ ಪೈಪೋಟಿ ನೀಡಿದರೂ ಕೊನೆ ಓವರಿನಲ್ಲಿ ಬೇಕಾದ 10 ರನ್ ಹೊಡೆಯಲಾಗದೇ ಕೇವಲ ಎರಡು ರನ್‍ಗಳಿಂದ ಸೋತಿತು.

    ಸೂಪರ್ನೋವಾಸ್ ನೀಡಿದ 147ರನ್‍ಗಳನ್ನು ಬೆನ್ನಟ್ಟಿದ ಟ್ರೈಲ್‍ಬ್ಲೇಜರ್ಸ್ ತಂಡಕ್ಕೆ ಆರಂಭಿಕ ಆಟಗಾರ್ತಿಯರಾದ ದಿಯಾಂಡ್ರಾ ಡೊಟಿನ್ ಮತ್ತು ಸ್ಮೃತಿ ಮಂಧಾನ ಆರಂಭ ನೀಡಿದರು. ಈ ಮೂಲಕ ಟ್ರೈಲ್‍ಬ್ಲೇಜರ್ಸ್ ಪವರ್ ಪ್ಲೇ ಮುಕ್ತಾಯದ ವೇಳೆಗೆ ಒಂದು ವಿಕೆಟ್ ಕಳೆದುಕೊಳ್ಳದೇ 43 ರನ್ ಪೇರಿಸಿತು. ಆದರೆ ಆರನೇ ಓವರ್ ಮೂರನೇ ಬಾಲಿನಲ್ಲಿ 15 ಬಾಲಿಗೆ 27 ರನ್ ಸಿಡಿಸಿ ಸ್ಫೋಟಕವಾಗಿ ಆಡುತ್ತಿದ್ದ ದಿಯಾಂಡ್ರಾ ಡೊಟಿನ್ ಅವರು ಶಕೇರಾ ಸೆಲ್ಮನ್ ಅವರಿಗೆ ಔಟ್ ಆದರು.

    ನಂತರ ಬಂದ ರಿಚಾ ಘೋಷ್ ಒಂದು ಬೌಂಡರಿ ಬಾರಿಸಿ ಅಬ್ಬರಿಸುವ ಸೂಚನೆ ನೀಡಿದರು. ಆದರೆ ನಂತರದ ಬಾಲಿನಲ್ಲೇ ಶಕೇರಾ ಸೆಲ್ಮನ್‍ಗೆ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ನಂತರ ಜೊತೆಯಾದ ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ 34 ಬಾಲಿಗೆ 35 ರನ್‍ಗಳ ಜೊತೆಯಾಟವಾಡಿದರು. ಆದರೆ 12ನೇ ಓವರ್ ಮೂರನೇ ಬಾಲಿನಲ್ಲಿ 40 ಬಾಲಿಗೆ 33 ರನ್ ಸಿಡಿಸಿದ್ದ ನಾಯಕಿ ಸ್ಮೃತಿ ಮಂಧಾನ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು.

    4 ರನ್ ಗಳಸಿ ದಯಾಲನ್ ಹೇಮಲತಾ ಅವರು ಕೀಪರ್ ಕ್ಯಾಚ್ ಕೊಟ್ಟು ಔಟ್ ಆದರು. ಇದಾದ ನಂತರ ಒಂದಾದ ದೀಪ್ತಿ ಶರ್ಮಾ ಮತ್ತು ಹರ್ಲೀನ್ ಡಿಯೋಲ್ ಸ್ಫೋಟಕ ಬ್ಯಾಟಿಂಗ್ ಮುಂದಾದರು. ಜೊತೆಗೆ 19ನೇ ಓವರಿನಲ್ಲಿ 14 ರನ್ ಸಿಡಿಸಿ ಟ್ರೈಲ್‍ಬ್ಲೇಜರ್ಸ್ ತಂಡಕ್ಕೆ ಗೆಲುವಿನ ಆಸೆ ತಂದಿತ್ತರು. ಆದರೆ 2 ಬಾಲಿಗೆ ನಾಲ್ಕು ರನ್ ಬೇಕಿದ್ದಾಗ 27 ರನ್ ಗಳಿಸಿದ್ದ ಡಿಯೋಲ್ ಅವರು ಔಟ್ ಆದರು. ಈ ಮೂಲಕ ಗೆಲುವಿನ ಸನಿಹಕ್ಕೆ ಬಂದು ಟ್ರೈಲ್‍ಬ್ಲೇಜರ್ಸ್ ತಂಡ ಎರಡು ರನ್‍ಗಳ ಅಂತರದಲ್ಲಿ ಸೋತಿತು.