Tag: Women’s Candidates

  • 2014ರ ಲೋ.ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದ ಮಹಿಳಾ ಅಭ್ಯರ್ಥಿಗಳು

    2014ರ ಲೋ.ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದ ಮಹಿಳಾ ಅಭ್ಯರ್ಥಿಗಳು

    – 20 ಮಹಿಳೆಯರಿಂದ ಸ್ಪರ್ಧೆ, ಜಯಮಾಲೆ ಮಾತ್ರ ಒಬ್ಬರಿಗೆ

    2019ರ ಲೋಕಸಭಾ ಚುನಾವಣೆ ತಯಾರಿ ಎಲ್ಲಡೆ ಭರದಿಂದ ಸಾಗುತ್ತಿದೆ. ಈ ಹಿಂದೆ ಅಂದರೆ 2014ರ ಲೋಕಸಭಾ ಚುನಾವಣೆ ನಡೆದಾಗ ಕರ್ನಾಟಕದಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಒಟ್ಟು 20 ಮಹಿಳಾ ಅಭ್ಯರ್ಥಿಗಳು ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಬೆಂಗಳೂರು ದಕ್ಷಿಣ, ಬೆಳಗಾವಿ, ಬೀದರ್, ದಾವಣಗೆರೆ, ಕಲಬುರಗಿ, ಚಾಮರಾಜನಗರ ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೆ ಕರ್ನಾಟಕದಿಂದ ಸಂಸದೆ ಶೋಭಾಕರಂದ್ಲಾಜೆ ಬಿಟ್ಟು ಉಳಿದ ಯಾರು ಕೂಡ ಆಯ್ಕೆಯಾಗಿಲ್ಲ. ಅವರ ಸಂಪೂರ್ಣ ಮಾಹಿತಿ ಇಲ್ಲಿದೆ.

    ಬೆಂಗಳೂರು ಸೆಂಟ್ರಲ್:
    ಬೆಂಗಳೂರು ಕೇಂದ್ರದಿಂದ ಜೆಡಿಎಸ್‍ನಿಂದ ನಂದಿನಿ ಆಳ್ವಾ, ಸ್ವತಂತ್ರ ಅಭ್ಯರ್ಥಿಯಾಗಿ ಇ. ಸೀತಾ ರಾಮನ್, ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದಿಂದ ಜಾಹೀದಾ ಶೆರೀನ್ ಹಾಗೂ ಸ್ವತಂತ್ರವಾಗಿ ಸುರಯ್ಯ ಜೈಥೂನ್ ಸ್ಪರ್ಧೆ ಮಾಡಿದ್ದರು. ಚುನಾವಣೆಯ ಫಲಿತಾಂಶದಲ್ಲಿ ನಂದಿನಿ ಆಳ್ವಾ ಅವರು 20,387 (1.9%) ಮತಗಳನ್ನು ಪಡೆದುಕೊಂಡಿದ್ದು, ಇ. ಸೀತಾ ರಾಮನ್ 2,543 (0.2%) ಮತ ಗಳಿಸಿದ್ದರು. ಇನ್ನೂ ಜಾಹೀದಾ ಶೆರೀನ್ 1,198 (0.1%) ಮತ್ತು ಸುರಯ್ಯ ಜೈಥೂನ್ 519 (00%) ಮತ ಪಡೆದುಕೊಂಡಿದ್ದರು.

    ಬೆಂಗಳೂರು ಸೆಂಟ್ರಲ್‍ನಿಂದ 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿರುದ್ಧ ಬಿಜೆಪಿಯ ಪಿ.ಸಿ.ಮೋಹನ್ ಗೆಲವು ಸಾಧಿಸಿದ್ದರು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪಿ.ಸಿ.ಮೋಹನ್ ಮತ್ತು ಕಾಂಗ್ರೆಸ್ಸಿನಿಂದ ರಿಜ್ವಾನ್ ಅರ್ಷದ್ ಸ್ಪರ್ಧಿಸಿದ್ದಾರೆ.

    ಬೆಂಗಳೂರು ದಕ್ಷಿಣ:
    ಬೆಂಗಳೂರು ದಕ್ಷಿಣದಲ್ಲಿ 2014ರಲ್ಲಿ ಜೆಡಿಎಸ್‍ನಿಂದ ರುಥ್ ಮನೋರಮಾ, ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದಿಂದ ಎಂ ಉಮಾದೇವಿ ಹಾಗೂ ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಗಾಯಿತ್ರಿ ಸ್ಪರ್ಧಿಸಿದ್ದರು. ಆಗ ರುಥ್ ಮನೋರಮಾ 25,677 (2.3%), ಎಂ ಉಮಾದೇವಿ 918 (0.1%) ಮತ್ತು ಗಾಯಿತ್ರಿ 484 (00%) ಮತ ಗಳಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಬಿಜೆಪಿ ಅಭ್ಯರ್ಥಿ ಅನಂತ್‍ಕುಮಾರ್ ಗೆಲವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ಸಿನಿಂದ ಬಿ.ಕೆ. ಹರಿಪ್ರಸಾದ್, ಬಿಜೆಪಿಯಿಂದ ತೇಜಸ್ವಿ ಸೂರ್ಯ ಕಣದಲ್ಲಿದ್ದಾರೆ.

    ಬೆಳಗಾವಿ:
    ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪರ್ಧೆ ಮಾಡಿ, 4,78,557 (44.4%) ಮತಗಳನ್ನು ಪಡೆದುಕೊಂಡಿದ್ದರು. 2014ರ ಫಲಿತಾಂಶದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರು ಗೆಲವು ಪಡೆದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯಿಂದ ಸುರೇಶ್ ಅಂಗಡಿ ಅವರು ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್ಸಿನಿಂದ ವಿ.ಎಸ್ ಸಾಧುವವರ್ ಸ್ಪರ್ಧೆ ಮಾಡಿದ್ದಾರೆ.

    ಬೀದರ್:
    2014ರ ಲೋಕಸಭಾ ಚುನಾವಣೆಯಲ್ಲಿ ಶ್ಯಾಮಲಾ ಉದನೂರ ಅವರು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, 1,259 (0.1%) ಮತಗಳನ್ನು ಪಡೆದುಕೊಂಡಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಕಾಂಗ್ರೆಸ್ಸಿನ ಧರಂಸಿಂಗ್ ವಿರುದ್ಧ 92,222 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಕಣಕ್ಕಿಳಿದಿದ್ದಾರೆ.

    ಚಾಮರಾಜನಗರ:
    ನಿರ್ಮಲಾ ಕುಮಾರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, 6,604 (0.6%) ಮತಗಳನ್ನು ಪಡೆದುಕೊಂಡಿದ್ದರು. ಆಗ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಕಾಂಗ್ರೆಸ್ಸಿನ ಧ್ರುವನಾರಾಯಣ್ 1,41,182 ಮತಗಳ ಅಂತರದಲ್ಲಿ ಕೆಲವು ಪಡೆದುಕೊಂಡಿದ್ದರು. ಈ ಬಾರಿಯೂ ಕಾಂಗ್ರೆಸ್ಸಿನಿಂದ ಧ್ರುವನಾರಾಯಣ್ ಸ್ಪರ್ಧೆ ಮಾಡಿದ್ದು, ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಸ್ಪರ್ಧೆ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ:
    2014ರ ಲೋಕಸಭಾ ಚುನಾವಣೆಯಲ್ಲಿ ಚಿತ್ರ ಪ್ರಸಾದ್ ಬಿಎಸ್ ಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 6,279 (0.5%) ರಷ್ಟು ಮತಗಳನ್ನು ಪಡೆದುಕೊಂಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶದಲ್ಲಿ ಕಾಂಗ್ರೆಸ್ ಆಭ್ಯರ್ಥಿ ವೀರಪ್ಪ ಮೊಯ್ಲಿ 4,24,800 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‍ನಿಂದ ವೀರಪ್ಪ ಮೊಯ್ಲಿ ಮತ್ತು ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಚಿಕ್ಕಬಳ್ಳಾಪುರ ಕಣದಲ್ಲಿದ್ದಾರೆ.

    ಚಿತ್ರದುರ್ಗ:
    ಚಿತ್ರದುರ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಟಿ. ಭಾವನಾ ಅವರು ಸ್ಪರ್ಧೆ ಮಾಡಿ 3,601 (0.3%) ಮತಗಳನ್ನು ಪಡೆದುಕೊಂಡಿದ್ದರು. ಆಗ ಅಂದರೆ 2014ರ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಜನಾರ್ದನ ಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 1,01,291 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಚಂದ್ರಪ್ಪ ಅವರು ಸ್ಪರ್ಧೆ ಮಾಡಿದ್ದರೆ, ಬಿಜೆಪಿಯಿಂದ ಎ.ನಾರಾಯಣಸ್ವಾಮಿ ಸ್ಪರ್ಧಿಸಿದ್ದಾರೆ.

    ದಾವಣಗೆರೆ:
    2014ರ ಲೋಕಸಭಾ ಚುನಾವಣೆಯಲ್ಲಿ ಮಹಿಮಾ ಜೆ ಪಟೇಲ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, 46911 (4.2%) ಮತಗಳನ್ನು ಗಳಿಸಿದ್ದರು. ಆಗ ಕಾಂಗ್ರೆಸ್ ಆಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಗೆಲುವು ಸಾಧಿಸಿದ್ದರು. ಈ ಬಾರಿಯೂ ಮತ್ತೊಮ್ಮೆ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಜಿ.ಎಂ.ಸಿದ್ದೇಶ್ವರ್ ಮುಖಾಮುಖಿಯಾಗಲಿದ್ದಾರೆ.

    ಕಲಬುರಗಿ:
    ಕಲಬುರಗಿ ಆಪ್ ಅಭ್ಯರ್ಥಿಯಾಗಿ ಬಿ.ಟಿ.ಲಲಿತಾ ನಾಯ್ಕ್ ಅವರು ಸ್ಪರ್ಧೆ ಮಾಡಿದ್ದು, 9,074 (0.9%) ಮತಗಳನ್ನು ಗಳಿಸಿದ್ದರು. ಆಗ 2014ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಗೆಲವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ರೆ, ಬಿಜೆಪಿಯಿಂದ ಉಮೇಶ್ ಜಾಧವ್ ಕಣದಲ್ಲಿದ್ದಾರೆ.

    ಮಂಡ್ಯ:
    ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಸ್ಪರ್ಧೆ ಮಾಡಿ 5,18,852 (43.5%) ಮತಗಳನ್ನು ಗಳಿಸಿದ್ದರು. 2014ರ ಫಲಿತಾಂಶದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರಿಶ್ ಸ್ಪರ್ಧೆ ಮಾಡಿದ್ದಾರೆ.

    ಮೈಸೂರು-ಕೊಡಗು:
    ಮೈಸೂರಿನಿಂದ ಪದ್ಮಮ್ಮ ಎಂ.ವಿ ಅವರು ಆಪ್ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 5,650 (0.5%) ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಕೊಡಗಿನಿಂದ ಕರುನಾಡು ಪಾರ್ಟಿ ಅಭ್ಯರ್ಥಿಯಾಗಿ ರತಿ ಪೂವಯ್ಯ ಸ್ಪರ್ಧೆ ಮಾಡಿ 3,726 (0.3%) ಮತಗಳಿಸಿದ್ದರು. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಚ್.ವಿಶ್ವನಾಥ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 31,608 ಅಂತರದಲ್ಲಿ ಗೆಲವು ಪಡೆದುಕೊಂಡಿದ್ದರು. ಈ ಬಾರಿ ಕಾಂಗ್ರೆಸ್ಸಿನಿಂದ ವಿಜಯ್ ಶಂಕರ್ ಸ್ಪರ್ಧೆ ಮಾಡಿದ್ದಾರೆ.

    ಶಿವಮೊಗ್ಗ:
    2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಶ್ರೀಲತಾ ಶೆಟ್ಟಿ ಸ್ಪರ್ಧೆ ಮಾಡಿದ್ದರು. ಅಂದಿನ ಫಲಿತಾಂಶದಲ್ಲಿ ಗೀತಾ ಶಿವರಾಜ್‍ಕುಮಾರ್ 2,40,636 (21.3%) ಮತ್ತು ಶ್ರೀಲತಾ ಶೆಟ್ಟಿ 2,073 ( 0.2%) ಮತಗಳನ್ನು ಗಳಿಸಿದ್ದರು. ಆಗ ಕಾಂಗ್ರೆಸ್ ಆಭ್ಯರ್ಥಿ ಮಂಜುನಾಥ್ ಭಂಡಾರಿ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿಯಿಂದ ರಾಘವೇಂದ್ರ ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣದಲ್ಲಿದ್ದಾರೆ.

    ಉಡುಪಿ-ಚಿಕ್ಕಮಗಳೂರು:
    ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ ಅವರು ಬಿಜೆಪಿ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, 5,81,168(56.2%) ಮತಗಳನ್ನು ಪಡೆದುಕೊಂಡಿದ್ದರು. ಅಂದಿನ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ 1,81,643 ಅಂತರದಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಸ್ಪರ್ಧೆ ಮಾಡಿದ್ದಾರೆ.

  • ಸಿಎಂ ಆಪ್ತನ ಸೊಸೆಗೆ ತಪ್ಪಿದ ಟಿಕೆಟ್ – ಪಕ್ಷೇತರವಾಗಿ ನಿಂತ ರೆಬೆಲ್ ಮಹಿಳಾ ಅಭ್ಯರ್ಥಿಗಳು

    ಸಿಎಂ ಆಪ್ತನ ಸೊಸೆಗೆ ತಪ್ಪಿದ ಟಿಕೆಟ್ – ಪಕ್ಷೇತರವಾಗಿ ನಿಂತ ರೆಬೆಲ್ ಮಹಿಳಾ ಅಭ್ಯರ್ಥಿಗಳು

    ರಾಯಚೂರು: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ಜನ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಟಿಕೆಟ್ ವಂಚಿತರಿದ್ದಾರೆ. ಆದರೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಿದ್ದಿಗೆ ಬಿದ್ದಿರುವ ಮಹಿಳಾ ಟಿಕೆಟ್ ಆಕಾಂಕ್ಷಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ತಮ್ಮದೇ ಆದ ಓಟ್ ಬ್ಯಾಂಕ್ ಹೊಂದಿರುವ ಈ ಮಹಿಳೆಯರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ.

    ನಾರಿ ಮುನಿದರೆ ಮಾರಿ ಅನ್ನೋ ಹಾಗೇ ರಾಯಚೂರು ಜಿಲ್ಲೆಯ ದೇವದುರ್ಗ ಹಾಗೂ ಮಾನ್ವಿ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತ ಮಹಿಳಾ ಅಭ್ಯರ್ಥಿಗಳೇ ಇಲ್ಲಿ ನಿರ್ಣಾಯಕರಾಗಿದ್ದಾರೆ. ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ.ಪ್ರೀತಿ ಮೇತ್ರಿ, ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಎಂ.ಈರಣ್ಣ ಸೊಸೆ. ತಮ್ಮ ಸೊಸೆಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಎಂ.ಈರಣ್ಣ ಎಷ್ಟೇ ಪ್ರಯತ್ನ ಮಾಡಿದರೂ ಟಿಕೆಟ್ ಸಿಗಲಿಲ್ಲ.

    ಸತತ 2 ಬಾರಿ ಶಾಸಕರಾಗಿರುವ ಹಂಪಯ್ಯ ನಾಯಕ್‍ ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ ನಾನು ಪಕ್ಷೇತರರಾಗಿ ಕಣಕ್ಕಿಳಿದಿದ್ದೇನೆ. ಕುರುಬ ಸಮಾಜದ ಬೆಂಬಲ ಜೊತೆಗೆ 2,38,598 ಮತದಾರರಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿರುವುದು ನನಗೆ ವರದಾನವಾಗಿದೆ. ಅಲ್ಲದೆ ಕಾಂಗ್ರೆಸ್ ಮತಗಳು ಹೊಡೆಯುವುದರಿಂದ ಕಾಂಗ್ರೆಸ್‍ಗೂ ಹೊಡೆತ ಬೀಳಲಿದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಡಾ.ಪ್ರೀತಿ ಮೇತ್ರಿ ಹೇಳಿದ್ದಾರೆ.

    ಕಳೆದ ಎರಡು ವರ್ಷಗಳಿಂದ ದೇವದುರ್ಗ ಕ್ಷೇತ್ರದಲ್ಲಿ ನಿರಂತರ ಓಡಾಟದಲ್ಲಿರುವ ಕರೆಮ್ಮ ನಾಯಕ್ ಜೆಡಿಎಸ್ ಟಿಕೆಟ್ ವಂಚಿತರು. ಇವರು ಕಳೆದ ದೇವದುರ್ಗ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ 9156 ಮತಗಳನ್ನ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಆದರೆ ಈಗ ತಮ್ಮದೇ ಆದ ಓಟ್ ಬ್ಯಾಂಕ್ ಹೊಂದಿರುವ ಕರೆಮ್ಮ ನಾಯಕ್‍ಗೆ ಜೆಡಿಎಸ್ ವರಿಷ್ಠರು ಕೊನೆ ಗಳಿಗೆಯಲ್ಲಿ ಟಿಕೆಟ್ ನೀಡದೆ ಬಿಜೆಪಿಯಿಂದ ಬಂದ ವೆಂಕಟೇಶ್ ಪೂಜಾರಿಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ಕರೆಮ್ಮ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

    ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಕರೆಮ್ಮ ನಾಯಕ್‍ ಗೆ ಪ್ಲಸ್ ಪಾಯಿಂಟ್ ಆಗಬಹುದು. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೆಗೌಡ ಅವರು ಕರೆಮ್ಮ ನಾಯಕ್ ತಮ್ಮ ಉಮೇದುವಾರಿಕೆ ಹಿಂಪಡೆಯಲು ಮನವೊಲಿಸಲು ಜಿಲ್ಲಾ ಮುಖಂಡರಿಗೆ ಸೂಚಿಸಿದ್ದರು. ಆದರೆ ಕರೆಮ್ಮ ಪಕ್ಷ ಸಂಘಟನೆಗೆ ಬೆಲೆ ಸಿಕ್ಕಲ್ಲ ಅಂತ ಪಕ್ಷೇತರರಾಗಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ ತಿಳಿಸಿದ್ದಾರೆ.

    ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯ ಶಿವನಗೌಡ ನಾಯಕ್, ಕಾಂಗ್ರೆಸ್‍ ನ ರಾಜಶೇಕರ್ ನಾಯಕ್‍ ಗೂ ಕರೆಮ್ಮ ನಾಯಕ್ ಸವಾಲಾಗಿದ್ದಾರೆ. ಇನ್ನೂ ಮಾನ್ವಿ ಕ್ಷೇತ್ರದಲ್ಲಿ ಪ್ರೀತಿ ಮೇತ್ರಿ ಪಕ್ಷೇತರರಾದರೂ ಸಾಕಷ್ಟು ಜನ ಬೆಂಬಲ ಹೊಂದಿದ್ದಾರೆ.